ಪತಿ ಅಥವಾ ಪೋಷಕರಿಂದ ಬೇರ್ಪಟ್ಟ ರಾಜ್ಯದ ಒಂಟಿ ಮಹಿಳೆಯರನ್ನು ‘ಕುಟುಂಬ’ ಎಂದು ಗುರುತಿಸಿ, ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಚೀಟಿ ನೀಡಲಾಗುವುದು ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ. ಹೊಸ ನಿಯಮದಂತೆ ಕಾರ್ಡ್ ಪಡೆಯಲು ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸರ್ಕಾರ ಹೇಳಿದ್ದು, ಅದರ ನಂತರ ತಾಜಾ ಕಾರ್ಡ್‌ಗಳನ್ನು ನೀಡಲಾಗುತ್ತದೆ.
ದಂಪತಿಗಳು ಬೇರೆಯಾಗಲು ಬಯಸಿ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದಾಗ ಪಡಿತರ ಕಾರ್ಡ್‌ನಲ್ಲಿ ಹೆಂಡತಿಯ ಹೆಸರು ಹಾಗೆ ಉಳಿದುಕೊಳ್ಳತ್ತದೆ. ಈ ಸಮಯದಲ್ಲಿ ತನ್ನ ಹೆಂಡತಿಯ ಹೆಸರನ್ನು ತೆಗೆದುಹಾಕಲು ಪತಿ ಸಿದ್ಧನಿಲ್ಲದಿದ್ದರೆ, ಮಹಿಳೆಗೆ ಅರ್ಹವಾದ ಮೂಲಭೂತ ಪ್ರಯೋಜನಗಳು ದಕ್ಕುವುದಿಲ್ಲ. ಆದ್ದರಿಂದ, ಈ ಸಂದರ್ಭದಲ್ಲಿ ಮಹಿಳೆ ಹಿಂದಿನ ಕಾರ್ಡ್‌ನಲ್ಲಿರುವ ಹೆಸರನ್ನು ತೆಗೆದು ಹೊಸ ಕಾರ್ಡ್‌ಗಾಗಿ ಅರ್ಜಿ ಹಾಕಬಹುದು.
ಇದನ್ನೂ ಓದಿ: ‘ಇಂತವನ್ನೆಲ್ಲಾ ಯುಪಿಯಲ್ಲಿ ಇಟ್ಟುಕೊಳ್ಳಿ, ಇಲ್ಲಿ ಅಲ್ಲ’ – ಯುಪಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಛೀಮಾರಿ
ಕಂದಾಯ ನಿರೀಕ್ಷಕರ ಪರಿಶೀಲನೆಯ ನಂತರ, ನಾಗರಿಕ ಸರಬರಾಜು ವಲಯದ ಅಧಿಕಾರಿಯು ಈಗಿರುವ ಹೆಸರನ್ನು ತೆಗೆದುಹಾಕಿ, ಮಹಿಳೆಯನ್ನು ‘ಕುಟುಂಬ’ ಎಂದು ನಮೂದಿಸಿ ಹೊಸ ಕಾರ್ಡ್ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ. ಈ ಸಡಿಲಿಕೆಯು ಅವಿವಾಹಿತ ಒಂಟಿ ಮಹಿಳೆಯರು ಕೂಡ ಅರ್ಹರಾಗಿದ್ದು, ಜೊತೆಗೆ ಇದಕ್ಕೆ ವಿಚ್ಛೇದನ ಕೂಡಾ ಕಡ್ಡಾಯವಲ್ಲ ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ಅಸ್ತಿತ್ವದಲ್ಲಿರುವ Vs ಪರಿಷ್ಕೃತ
ಈ ಹಿಂದೆ, ಬೇರ್ಪಟ್ಟ ಮಹಿಳೆ, ತನ್ನ ಮಕ್ಕಳೊಂದಿಗೆ ಅಥವಾ ಇತರ ಅವಲಂಬಿತರೊಂದಿಗೆ ವಾಸಿಸುತ್ತಿದ್ದರೆ, ಅವರು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದ ಹೊರತು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸದ ಹೊರತು ಪಡಿತರ ಚೀಟಿಗೆ ಅರ್ಹರಾಗಿರಲಿಲ್ಲ.
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಅವಿವಾಹಿತ ಮಹಿಳೆಯರು ಪಡಿತರ ಚೀಟಿ ಪಡೆಯಲು ಅರ್ಹರಲ್ಲ, ಮತ್ತು ಅವರು ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದಾಗ ಮಾತ್ರ ಅವರನ್ನು ಕುಟುಂಬವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಯುಪಿ: 2 ನೇ ತರಗತಿ ಬಾಲಕನನ್ನು ಶಾಲಾ ಕಟ್ಟಡದ ಮೇಲಿಂದ ತಲೆ ಕೆಳಗಾಗಿಸಿ ನೇತಾಡಿಸಿದ ಶಿಕ್ಷಕ
ಪ್ರತ್ಯೇಕವಾಗಿ ವಾಸಿಸುವ ಒಂಟಿ ಮಹಿಳೆಯರು ಯಾವುದೇ ತೊಂದರೆಯಿಲ್ಲದೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು ಎಂದು ಪರಿಷ್ಕೃತ ನಿಯಮ ಹೇಳುತ್ತದೆ.
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ (AIDWA) ತಮಿಳುನಾಡು ಸರ್ಕಾರದ ಈ ತೀರ್ಮಾನವನ್ನು ಸ್ವಾಗತಿಸಿದ್ದು, ಈ ನಿರ್ಧಾರವನ್ನು ಪ್ರಗತಿಪರ ಎಂದು ಶ್ಲಾಘಿಸಿದೆ.
AIDWA ರಾಜ್ಯ ಕಾರ್ಯದರ್ಶಿ ಎಸ್‌ಕೆ ಪೊನ್ನುತ್ತಾಯಿ ಮಾತನಾಡಿ, ಪಡಿತರ ಚೀಟಿ ಇಲ್ಲದ ಕಾರಣ ಕೆಳ ಆರ್ಥಿಕ ವರ್ಗದ ಒಂಟಿ ಮಹಿಳೆಯರು ಪೊಂಗಲ್ ಮತ್ತು ಲಾಕ್‌ಡೌನ್ ಸಮಯದಲ್ಲಿ ನೀಡಲಾದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಹಾರ ಭದ್ರತೆಯ ಜೊತೆಗೆ, ಸರ್ಕಾರವು ನೀಡುವ ಎಲ್ಲಾ ಪ್ರಯೋಜನಗಳು ಅಗತ್ಯವಿರುವ ಜನರಿಗೆ ತಲುಪುವುದನ್ನು ಈ ನಿರ್ಧಾರವು ಖಚಿತಪಡಿಸುತ್ತದೆ ಹೇಳಿದ್ದಾರೆ.
ಒಂಟಿ ಮಹಿಳೆಯರಿಗೆ ಪಡಿತರ ಚೀಟಿ ನೀಡುವಂತೆ ಒತ್ತಾಯಿಸಿ ಹಲವಾರು ಹೋರಾಟಗಳನ್ನು ಸಂಘಟನೆಯು ಮಾಡುತ್ತಾ ಬರುತ್ತಿದೆ.
ಇದನ್ನೂ ಓದಿ: ಅಜೀಂ ಪ್ರೇಮ್‌ಜಿ ದೇಶದ ಅತಿ ದೊಡ್ಡ ದಾನಿ: ದಿನಕ್ಕೆ 27 ಕೋಟಿ ರೂ. ದೇಣಿಗೆ


