ಹಸಿರು ಪಟಾಕಿ ಸೇರಿದಂತೆ ಎಲ್ಲಾ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಕಡಿಮೆ ಮಾಲಿನ್ಯಕಾರಕ ವಸ್ತುಗಳನ್ನು ಬಳಸಿ ತಯಾರಿಸಿದ ಪಟಾಕಿಗಳನ್ನು ಬಳಸಬಹುದು ಎಂದಿದೆ.
ಪಶ್ಚಿಮ ಬಂಗಾಳದಲ್ಲಿ ಈ ವಾರದಿಂದ ಕಾಳಿ ಪೂಜೆ, ದೀಪಾವಳಿ ಮತ್ತು ಇತರ ಹಬ್ಬಗಳು ಪ್ರಾರಂಭವಾಗಲಿದ್ದು ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಸಾಂಕ್ರಾಮಿಕ ರೋಗದ ಈ ಸಮಯದಲ್ಲಿ ವಾಯು ಮಾಲಿನ್ಯ ಅಧಿಕಗೊಂಡ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಕಲ್ಕತ್ತಾ ಹೈಕೋರ್ಟ್ ಪಟಾಕಿ ನಿಷೇಧಿಸಿತ್ತು.
“ಪಟಾಕಿಯನ್ನು ಸಂಪೂರ್ಣ ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಪಟಾಕಿಯ ದುರುಪಯೋಗವನ್ನು ತಡೆಯಲು ಕಾರ್ಯವಿಧಾನವನ್ನು ಬಲಪಡಿಸಿ” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲಿ ಪಟಾಕಿ ಸಿಡಿಸಬೇಡಿಯೆಂದ ನಟ ಅಮೀರ್ ಖಾನ್ ಮೇಲೆ ಮುಗಿಬಿದ್ದ ಸಂಸದ ಅನಂತ್‌ಕುಮಾರ್ ಹೆಗಡೆ
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ಅವರು ನಿಷೇಧಿತ ಪಟಾಕಿ ಮತ್ತು ಅದಕ್ಕೆ ಸಂಬಂಧಿತ ವಸ್ತುಗಳನ್ನು ರಾಜ್ಯದಲ್ಲಿ ಆಮದು ಮಾಡಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಿಳಿಸಿದ್ದಾರೆ.
ಕಳೆದ ಶುಕ್ರವಾರ ರಾಜ್ಯದಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ, ಬಳಕೆ ಮತ್ತು ಖರೀದಿಯನ್ನು ನಿಷೇಧಿಸಿ ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ. ಇದರ ವಿರುದ್ಧ ತಯಾರಕರು ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದರು.
ಪಟಾಕಿ ತಯಾರಕರ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಭಟ್ನಾಗರ್, “ಹಸಿರು ಪಟಾಕಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಮೂರು ಆದೇಶಗಳು ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಎರಡು ಆದೇಶಗಳ ಹೊರತಾಗಿಯೂ, ಕಲ್ಕತ್ತಾ ಹೈಕೋರ್ಟ್ ಹಸಿರು ಪಟಾಕಿಗಳನ್ನು ನಿಷೇಧಿಸಿದೆ. ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಉತ್ತಮವಾಗಿದ್ದರೆ, ಹಸಿರು ಪಟಾಕಿಗಳನ್ನು ಬಳಸಲು ಅನುಮತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಗಳು ಹೇಳುತ್ತವೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
“ಈ ವರ್ಷ ಕಾಳಿ ಪೂಜೆ, ದೀಪಾವಳಿ ಆಚರಣೆಗಳು, ಛತ್ ಪೂಜೆ, ಜಗಧಾತ್ರಿ ಪೂಜೆ, ಗುರುನಾನಕ್ ಅವರ ಜನ್ಮದಿನ ಮತ್ತು ಕ್ರಿಸ್ಮಸ್ ಮತ್ತು ಹೊಸ ವರ್ಷದ ಮುನ್ನಾದಿನದ ಆಚರಣೆಗಳಲ್ಲಿ ಯಾವುದೇ ರೀತಿಯ ಪಟಾಕಿಗಳ ಬಳಕೆ, ಪ್ರದರ್ಶನ ಅಥವಾ ಪಟಾಕಿಗಳನ್ನು ಸಿಡಿಸದಂತೆ ರಾಜ್ಯವು ಖಚಿತಪಡಿಸಿಕೊಳ್ಳಬೇಕು.” ಎಂದು ಹೈಕೋರ್ಟ್ ಆದೇಶ ನೀಡಿತ್ತು.
ಇದನ್ನೂ ಓದಿ: ಹರಿಯಾಣ: ದೆಹಲಿ ಸಮೀಪದ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ, ಬಳಕೆ ನಿಷೇಧ


