ಒಕ್ಕೂಟ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ. ಕೇಂದ್ರ ಸರ್ಕಾರ ಕಾನೂನುಬಾಹಿರವಾಗಿ ರಾಜ್ಯ ಸರ್ಕಾರದ ವಿಷಯಗಳಲ್ಲಿ ಪ್ರವೇಶಿಸಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಕೂಡ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ವಿಧಾನ ಸಭೆ ನಿರ್ಣಯ ಅಂಗೀಕರಿಸಿತ್ತು. ಈಗ ಎರಡನೇ ಬಾರಿ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಎರಡು ದಿನಗಳ ವಿಧಾನಸಭೆ ಅಧಿವೇಶನದ ಮುಕ್ತಾಯದ ದಿನದಂದು ರಾಜ್ಯ ಕೃಷಿ ಸಚಿವ ರಣದೀಪ್ ಸಿಂಗ್ ನಾಭಾ ಅವರು ನಿರ್ಣಯ ಮಂಡಿಸಿದರು. ಸದನದಲ್ಲಿ ಚರ್ಚೆಯ ನಂತರ ಇಬ್ಬರು ಬಿಜೆಪಿ ಶಾಸಕರ ಅನುಪಸ್ಥಿತಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಇದನ್ನೂ ಓದಿ: ದೆಹಲಿ ಹೋರಾಟಕ್ಕೆ 1 ವರ್ಷ: ನವೆಂಬರ್ 29 ರಂದು ಸಂಸತ್ತಿನ ಕಡೆಗೆ ರೈತರ ಮೆರವಣಿಗೆ
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಎಎಪಿ ನೇತೃತ್ವದ ದೆಹಲಿ ಸರ್ಕಾರ, ಮತ್ತು ಶಿರೋಮಣಿ ಅಕಾಲಿ ದಳದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಅಕಾಲಿದಳದ ಶಾಸಕರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಜೊತೆಗೆ ಅಕಾಲಿ ದಳವು ಎನ್‌ಡಿಎ ಜೊತೆಗಿನ ತನ್ನ ಸಂಬಂಧವನ್ನು ಮುರಿದುಕೊಂಡಿದೆ. ಕೃಷಿ ಕಾನೂನುಗಳ ಜಾರಿ ವಿರೋಧಿಸಿ ಕೇಂದ್ರ ಸಚಿವ ಸಂಪುಟದಲ್ಲಿದ್ದ ಸಚಿವ ಸ್ಥಾನವನ್ನು ತೊರೆದಿದೆ ಎಂದು ಅಕಾಲಿದಳದ ಶಾಸಕ ಗುರ್‌ಪರ್ತಾಪ್ ಸಿಂಗ್ ವಡಾಲಾ ಹೇಳಿದ್ದಾರೆ.
ಎಎಪಿ ಶಾಸಕ ಹರ್ಪಾಲ್ ಸಿಂಗ್ ಚೀಮಾ ಅವರು ಕೃಷಿ ಕಾನೂನುಗಳ ವಿಚಾರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಪಾತ್ರವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಆಶಿಶ್ ಮಿಶ್ರಾ, ಅಂಕಿತ್ ದಾಸ್ ಗನ್‌ಗಳಿಂದ ಗುಂಡು ಹಾರಿಸಲಾಗಿದೆ- ಪ್ರಯೋಗಾಲಯದ ವರದಿ


