ಅಕ್ಟೋಬರ್ ಅಂತ್ಯದಲ್ಲಿ ತ್ರಿಪುರಾದಲ್ಲಿ ನಡೆದ ಹಿಂಸಾಚಾರದ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಹಲವು ಸ್ಥಳಗಳಲ್ಲಿ ಕಲ್ಲು ತೂರಾಟ ನಡೆದಿರುವ ಹಿನ್ನೆಲೆಯಲ್ಲಿ, ಅಮರಾವತಿ ಬಳಿಕ ಪುಣೆಯಲ್ಲಿಯೂ ಕೂಡ ಜಿಲ್ಲಾಡಳಿತವು ಸೆಕ್ಷನ್ 144 ಅನ್ನು ವಿಧಿಸಿದೆ.
ಜಿಲ್ಲಾಧಿಕಾರಿ ರಾಜೇಶ್ ದೇಶಮುಖ್ ಹೊರಡಿಸಿದ ಅಧಿಸೂಚನೆಯಲ್ಲಿ, ‘ಗುಂಪುಗಳ ನಡುವೆ ಕೋಮು ದ್ವೇಷ ಹರಡುವ ಸಂದೇಶಗಳು ಮತ್ತು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಜನರು ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ’ ಎಂದು ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಈ ಆದೇಶ ನವೆಂಬರ್ 14 ರ ಮಧ್ಯರಾತ್ರಿಯಿಂದ ನವೆಂಬರ್ 20 ರವರೆಗೆ ಜಾರಿಯಲ್ಲಿರುತ್ತದೆ. ಆದೇಶದ ಪ್ರಕಾರ, ಸಾಮಾಜಿಕ ಮಾಧ್ಯಮಗಳಾದ Instagram, Twitter, Facebook ಮತ್ತು Whatsapp ಮೂಲಕ ಸಮಾಜದಲ್ಲಿ ಕೋಮು ದ್ವೇಷ ಉಂಟುಮಾಡುವ ಸಂದೇಶಗಳನ್ನು ಹರಡುವುದನ್ನು ನಿಷೇಧಿಸಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆ ನಡೆಸುವುದು, ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಪೋಸ್ಟರ್‌ಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತ್ರಿಪುರಾ ಹಿಂಸಾಚಾರ ವರದಿ ಮಾಡಿದ ಪತ್ರಕರ್ತೆಯರನ್ನು ಬಂಧಿಸಿದ ಅಸ್ಸಾಂ ಪೊಲೀಸರು
ಸೆಕ್ಷನ್ 144 ಉಲ್ಲಂಘಿಸುವವರ ವಿರುದ್ಧ ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಅಕ್ಟೋಬರ್ 27 ರಂದು ತ್ರಿಪುರಾದ ಪಾಣಿಸಾಗರದಲ್ಲಿ ನಡೆದ ಹಿಂಸಾಚಾರದ ವಿರುದ್ಧ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅಮರಾವತಿ, ನಾಂದೇಡ್ ಮತ್ತು ಮಾಲೆಗಾಂವ್‌ನಲ್ಲಿ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ.
ನಾಂದೇಡ್ ಜಿಲ್ಲೆ ಹಿಂಸಾಚಾರದಲ್ಲಿ ಪೊಲೀಸರು ಇದುವರೆಗೆ 35 ಜನರನ್ನು ಬಂಧಿಸಿದ್ದಾರೆ. ಶುಕ್ರವಾರ ಪೊಲೀಸ್ ವ್ಯಾನ್‌ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾಂದೇಡ್, ಮಾಲೆಗಾಂವ್, ಅಮರಾವತಿ ಮತ್ತು ಇತರ ಸ್ಥಳಗಳಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿರುವ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಇತ್ತ, ತ್ರಿಪುರಾ ರಾಜ್ಯದಲ್ಲಿ ನಡೆದ ಕೋಮು ಹಿಂಸಾಚಾರದ ಕುರಿತು ಗ್ರೌಂಡ್ ರಿಪೋರ್ಟ್ ಮಾಡಲು ತೆರಳಿದ್ದ ಸುದ್ದಿ ವೆಬ್‌ಸೈಟ್ ಎಚ್‌ಡಬ್ಲೂ ನ್ಯೂಸ್‌ನ (@hwnewsnetwork) ಇಬ್ಬರು ಪತ್ರಕರ್ತೆಯರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮ ಮತ್ತು ಹಿಂದುತ್ವ ಒಂದೇ ಅಲ್ಲ: ಹಿಂದುತ್ವ ಎಂದರೆ ರಾಜಕೀಯ – ನಟಿ ರಮ್ಯಾ


