ಶ್ರೀನಗರದ ಹೈದರ್‌ಪೋರಾದ ವಾಣಿಜ್ಯ ಸಂಕೀರ್ಣದಲ್ಲಿ ಇಬ್ಬರು ಉದ್ಯಮಿಗಳನ್ನು ಹತ್ಯೆಗೈದ ವಿವಾದಾತ್ಮಕ ಪೊಲೀಸ್ ಕಾರ್ಯಾಚರಣೆಯ ಕುರಿತು ಜಮ್ಮು ಮತ್ತು ಕಾಶ್ಮೀರ ಆಡಳಿತವು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ.
ಮೃತರ ಕುಟುಂಬಗಳು ಸಾವನ್ನಪ್ಪಿದವರು ಅಮಾಯಕ ನಾಗರಿಕರು ಎಂದು ಹೇಳಿದ್ದಾರೆ. ಆದರೆ ಪೊಲೀಸರು ಇಬ್ಬರೂ “ಭಯೋತ್ಪಾದಕ ಸಹಚರರು” ಎಂದು ಆರೋಪಿಸಿದ್ದಾರೆ. ವಿವಾದಾತ್ಮಕ ಪೊಲೀಸ್ ಕಾರ್ಯಾಚರಣೆಯ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ತನಿಖೆ ನಡೆಸಲಿದ್ದಾರೆ.
“ನಾವು ಮೃತರ ಕುಟುಂಬಗಳ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ. ಏನಾದರೂ ತಪ್ಪಾಗಿದ್ದರೆ ಸರಿಪಡಿಸುತ್ತೇವೆ. ಪೊಲೀಸ್ ತನಿಖೆಯಿಂದ ಏನು ತಪ್ಪಾಗಿದೆ ಎಂದು ತಿಳಿಯುತ್ತದೆ. ಹೈದರ್‌ಪೋರಾ ಎನ್‌ಕೌಂಟರ್‌ನಲ್ಲಿ ಏನಾಯಿತು ಎಂಬುದನ್ನು ನಾವು ಕಂಡುಹಿಡಿಯುತ್ತೇವೆ. ನಾವು ಜನರ ಸುರಕ್ಷತೆಗಾಗಿ ಇದ್ದೇವೆ. ತನಿಖೆಯಿಂದ ಹಿಂದೆ ಸರಿಯುವುದಿಲ್ಲ” ಎಂದಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರನ್ನು NDTV ಉಲ್ಲೇಖಿಸಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಯಾರೊಬ್ಬರು ಉಸಿರಾಡಲೂ ಆಗುತ್ತಿಲ್ಲ: ಮೆಹಬೂಬಾ ಮುಫ್ತಿ
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಕಚೇರಿಯು “ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ” ಎಂದು ಟ್ವೀಟ್ ಮಾಡಿದೆ.
A magisterial inquiry by officer of ADM rank has been ordered in Hyderpora encounter.Govt will take suitable action as soon as report is submitted in a time-bound manner.JK admin reiterates commitment of protecting lives of innocent civilians&it will ensure there is no injustice.
— Office of LG J&K (@OfficeOfLGJandK) November 18, 2021
“ಹೈದರ್‌ಪೋರಾ ಎನ್‌ಕೌಂಟರ್ ವಿಚಾರದಲ್ಲಿ ADM ಶ್ರೇಣಿಯ ಅಧಿಕಾರಿಯಿಂದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ವರದಿಯನ್ನು ಸಲ್ಲಿಸಿದ ತಕ್ಷಣ ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ಅಮಾಯಕ ನಾಗರಿಕರ ಜೀವಗಳನ್ನು ರಕ್ಷಿಸುವ ಖಚಿತತೆ ನೀಡುತ್ತದೆ. ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ” ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಟ್ವೀಟ್ ಮಾಡಿದೆ.
ಸೋಮವಾರ ಹೈದರ್‌ಪೋರಾದಲ್ಲಿ ನಡೆದ ವಿವಾದಾತ್ಮಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಉದ್ಯಮಿ ಅಲ್ತಾಫ್ ಭಟ್ ಮತ್ತು ದಂತ ಶಸ್ತ್ರಚಿಕಿತ್ಸಕ ಮುದಾಸಿರ್ ಗುಲ್ ಕೊಲ್ಲಲ್ಪಟ್ಟರು.
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಅಲ್ತಾಫ್ ಭಟ್ ಮತ್ತು ಮತ್ತೊಬ್ಬ ಉದ್ಯಮಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು ಎಂದು ಪೊಲೀಸರು ಮೊದಲು ಹೇಳಿದ್ದರು. ಆದರೆ ನಂತರ ಮಾತು ಬದಲಿಸಿದ ಪೊಲೀಸರು ಅವರಿಬ್ಬರು ಕ್ರಾಸ್ ಫೈರ್‌ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು. ಅದರ ನಂತರ, ಕಾಂಪ್ಲೆಕ್ಸ್ ಮಾಲೀಕ ಅಲ್ತಾಫ್ ಭಟ್ ತನ್ನ ಬಾಡಿಗೆದಾರರ ಬಗ್ಗೆ ಅಧಿಕಾರಿಗಳಿಗೆ ತಿಳಿಸದ ಕಾರಣ ಅವರನ್ನು “ಭಯೋತ್ಪಾದಕರ ಸಹಚರರು” ಎಂದು ಪರಿಗಣಿಸಲಾಗುವುದು. ಅವರ ಕಾಂಪ್ಲೆಕ್ಸ್‌ನಲ್ಲಿದ್ದ ಬಾಡಿಗೆದಾರರಲ್ಲಿ ಒಬ್ಬ ಭಯೋತ್ಪಾದಕನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ ಎಂದು ಎನ್‌ಡಿಟಿವಿ ತನ್ನ ವರದಿಯಲ್ಲಿ ತಿಳಿಸಿದೆ.
ಇದು ಮೃತರ ಕುಟುಂಬ ಸದಸ್ಯರು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿದಂತೆ ರಾಜಕೀಯ ನಾಯಕರು ಶ್ರೀನಗರದ ಎನ್‌ಕೌಂಟರ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು.
ಇದನ್ನೂ ಓದಿ: ‘ನನ್ನ ತಂದೆಯನ್ನು ಕೊಂದು, ನನ್ನನ್ನು ನೋಡಿ ನಗುತ್ತಿದ್ದರು’ – ಕಾಶ್ಮೀರಿ ಬಾಲಕಿ


