ಮಥುರಾ: ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ ಆದರೆ ರಾಷ್ಟ್ರೀಯವಾದಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಶನಿವಾರ ಹೇಳಿದ್ದಾರೆ.
ಶ್ರೀಕೃಷ್ಣ ಜನನಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ, “ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ, ರಾಷ್ಟ್ರೀಯವಾದಿಗಳ ಪರ ನಾನು ಪ್ರಚಾರ ಮಾಡುತ್ತೇನೆ” ಎಂದು ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶ್ರೀಕೃಷ್ಣನ ನಿಜವಾದ ಜನ್ಮಸ್ಥಳವನ್ನು ಜನರು ವೀಕ್ಷಿಸಲು ಪ್ರಯತ್ನಗಳನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಈದ್ಗಾ ಇದೆ ಎಂದು ಅವರು ತಿಳಿಸಿದ್ದಾರೆ.
‘ನಿಮ್ಮ ಹೇಳಿಕೆಗಳು ಭಾವನೆಗಳಿಗೆ ಧಕ್ಕೆ ತಂದಿವೆ’ ಎಂದು ಜನರು ಆರೋಪಿಸಿದ್ದಾರೆ ಎಂದಾಗ, “ಪ್ರಾಮಾಣಿಕರು, ಧೈರ್ಯಶಾಲಿಗಳು, ರಾಷ್ಟ್ರೀಯವಾದಿಗಳು ಮತ್ತು ದೇಶದ ಬಗ್ಗೆ ಮಾತನಾಡುವವರಿಗೆ ನಾನು ಹೇಳುತ್ತಿರುವುದು ಸರಿ ಎಂದು ಅನಿಸುತ್ತದೆ” ಎಂದು ಕಂಗನಾ ಪ್ರತಿಪಾದಿಸಿದ್ದಾರೆ.
ಚಂಡೀಗಢದಲ್ಲಿ ತಮ್ಮ ಕಾರನ್ನು ರೈತರು ತಡೆದಿದ್ದಾರೆ ಎಂಬ ವರದಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು “ನಾನು ಎಂದಿಗೂ ಕ್ಷಮೆಯಾಚಿಸಲಿಲ್ಲ. ನಾನು ಅದನ್ನು ಪ್ರತಿಭಟಿಸಿದೆ” ಎಂದು ತಿಳಿಸಿದ್ದಾರೆ.
ಪದೇ ಪದೇ ರೈತ ವಿರೋಧಿ ಹೇಳಿಕೆಗಳನ್ನು ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ರೈತರು ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಪಂಜಾಬ್‌ನ ಕಿರಾತ್‌ಪುರ್‌ನಲ್ಲಿ ನಡೆದಿತ್ತು.
ಸದಾ ಬಿಜೆಪಿ ಪರವಾಗಿ ವಾದಿಸುವ ಕಂಗನಾ ರಣಾವತ್‌ರವರು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಇತ್ತೀಚೆಗೆ ಹೇಳಿಕೆ ನೀಡಿದ್ದರು. ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ ನಂತರ ರೈತರನ್ನು ಖಲಿಸ್ತಾನಿಗಳು, ಭಯೋತ್ಪಾದಕರು, ಅವರನ್ನು ಕಾಲಡಿಯಲ್ಲಿ ಹೊಸಕಿ ಹಾಕಬೇಕೆಂಬ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಕುರಿತು ಅವರ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲಾಗಿದೆ.
ಪಂಜಾಬ್‌ಗೆ ಅವರು ತೆರಳಿದ್ದ ವೇಳೆ ಘೇರಾವ್ ಹಾಕಿದ ರೈತರು ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ್ದರು. ಬಾವುಟಗಳನ್ನು ಪ್ರದರ್ಶಿಸಿ ಕಾರು ಮುಂದೆ ಹೋಗದಂತೆ ತಡೆದಿದ್ದರು. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಂಗನಾ ನಾನು ಮಾಬ್‌ನಿಂದ ಸುತ್ತವರಿಯಲ್ಪಟ್ಟಿದ್ದೇನೆ. ಅವರು ನನ್ನನ್ನು ನಿಂದಿಸುತ್ತಿದ್ದಾರೆ, ಬೆದರಿಸುತ್ತಿದ್ದಾರೆ, ನನ್ನನ್ನು ಕೊಲ್ಲುತ್ತಾರೆ, ನನಗೆ ರಕ್ಷಣೆ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಖಲಿಸ್ತಾನಿ ಭಯೋತ್ಪಾದಕರು ಸರ್ಕಾರದ ಕೈ ಹಿಂಡುತ್ತಿದ್ದಾರೆ. ಆದರೆ ನಾವು ಒಬ್ಬ ಮಹಿಳೆಯನ್ನು ಮರೆಯದಿರೋಣ. ಈ ಹಿಂದೆ ಆ ಒಬ್ಬ ಮಹಿಳೆ ಪ್ರಧಾನಿಯಾಗಿದ್ದಾಗ (ಇಂದಿರಾ ಗಾಂಧಿ) ತನ್ನ ಜೀವವನ್ನು ಲೆಕ್ಕಿಸದೆ ಇವರನ್ನು ಸೊಳ್ಳೆಗಳ ರೀತಿ ಹೊಸಕಿ ಹಾಕಿದ್ದರು. ಆ ಮಹಿಳೆ ದೇಶಕ್ಕೆ ಒಳ್ಳೆಯದು ಮಾಡದಿದ್ದರೂ ಸಹ ಇವರನ್ನು ತನ್ನ ಕಾಲಡಿಯಲ್ಲಿ ಹೊಸಕಿ ಹಾಕಿದ್ದರು ಮತ್ತು ದೇಶ ಇಬ್ಭಾಗವಾಗಲು ಬಿಡಲಿಲ್ಲ. ಈಗಲೂ ಆ ಮಹಿಳೆಯನ್ನು ಕಂಡರೆ ಇವರು ನಡುಗುತ್ತಾರೆ. ಇವರಿಗೆ ಅಂಥವರೆ ಬೇಕು” ಎಂದು ಕಂಗನಾ ರೈತರನ್ನು ಅವಮಾನಿಸಿ ನವೆಂಬರ್‌ನಲ್ಲಿ ಪೋಸ್ಟ್ ಹಾಕಿದ್ದರು.
ಕಂಗನಾ ಅವರು ಮೊದಲಿನಿಂದಲೂ ಬಿಜೆಪಿಯ ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಂದರೆ ‘2014ರ ನಂತರ ಭಾರತಕ್ಕೆ ಸ್ವಾತಂತ್ರ್ಯ ಬಂದಿತು’ ಎಂದು ಹೇಳಿಕೆ ನೀಡಿದ್ದರು. ಸ್ವಾತಂತ್ರ್ಯ ಹೋರಾಟದ ತ್ಯಾಗ, ಬಲಿದಾನವನ್ನು ಕಂಗನಾ ಅಣಕಿಸಿದ್ದಾರೆ ಎಂದು ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿದ್ದವು. ಈಗ ಕಂಗನಾ ಅವರು ‘ರಾಷ್ಟ್ರೀಯವಾದಿಗಳ ಪರವಾಗಿ ಪ್ರಚಾರ ಮಾಡುತ್ತೇನೆ, ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ’ ಎಂದಿದ್ದಾರೆ. ಅವರ ಹಿಂದಿನ ಹೇಳಿಕೆಗಳಿಗೂ, ಶನಿವಾರ ನೀಡಿದ ಹೇಳಿಕೆಗಳಿಗೂ ತಾಳೆ ಹಾಕಿ ನೋಡಿದರೆ, ‘ಬಿಜೆಪಿಯವರು ಮಾತ್ರ ನಿಜವಾದ ರಾಷ್ಟ್ರವಾದಿಗಳು’ ಎಂದು ಕಂಗನಾ ಪ್ರತಿಪಾದಿಸಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿರಿ: ಪಾಕಿಸ್ತಾನ: ಶ್ರೀಲಂಕಾದ ವ್ಯಕ್ತಿ ಗುಂಪು ದಾಳಿಗೆ ಬಲಿ; ಸಾರ್ವಜನಿಕವಾಗಿ ಸುಟ್ಟು ವಿಕೃತಿ


