Homeಮುಖಪುಟಪ್ರಶ್ನಿಸುವ ಪರಂಪರೆ ಕಟ್ಟಿದ ಪ್ರಖರ ಸುದ್ದಿಗಾರನ ನಿರ್ಗಮನ

ಪ್ರಶ್ನಿಸುವ ಪರಂಪರೆ ಕಟ್ಟಿದ ಪ್ರಖರ ಸುದ್ದಿಗಾರನ ನಿರ್ಗಮನ

- Advertisement -
- Advertisement -

ನಮ್ಮ ಜನತಂತ್ರದ ಆಧಾರ ಸ್ತಂಭಗಳನ್ನು ಅಲುಗಿಸಲಾಗುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ದೇಶ ಒಬ್ಬ ಯೋಗ್ಯ ಪತ್ರಕರ್ತನನ್ನು ಕಳೆದುಕೊಂಡಿದೆ. ಹಿಂದೀ ಟೆಲಿವಿಷನ್ ಪತ್ರಿಕೋದ್ಯಮ ಪ್ರವರ್ತಕ ವಿನೋದ್ ದುವಾ ನಿಧನರಾಗಿದ್ದಾರೆ. ಸರ್ವಾಧಿಕಾರವನ್ನು ಧರ್ಮಾಂಧತೆಯನ್ನು ಕೋಮುವಾದವನ್ನು ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸುತ್ತಿದ್ದ ಧೀರ ಪತ್ರಿಕೋದ್ಯೋಗಿಯನ್ನು ಸಾವು ಸೆಳೆದುಕೊಂಡಿದೆ.

ಪತ್ನಿ ಪದ್ಮಾವತೀ ’ಚಿನ್ನಾ’ ದುವಾ ಅವರೊಂದಿಗೆ ಆರು ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ಗುರಿಯಾಗಿದ್ದ ವಿನೋದ್ ಅವರ ಆರೋಗ್ಯ ಕುಸಿಯುತ್ತಲೇ ಹೋಯಿತು. ಚಿನ್ನಾ ಜೂನ್ ತಿಂಗಳಲ್ಲೇ ಅಗಲಿ ಹೋದರು.

ಹಳೆಯ ದಿಲ್ಲಿಯಲ್ಲಿ ಹುಟ್ಟಿ ಬೆಳೆದ ದುವಾ, ಹನ್ಸರಾಜ್ ಕಾಲೇಜಿನಿಂದ ಇಂಗ್ಲಿಷ್ ಪದವಿ ಪಡೆದು ದೆಹಲಿ ವಿಶ್ವಿವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಪತ್ರಿಕೋದ್ಯಮಕ್ಕೆ ಪ್ರವೇಶಿಸುವ ಮುನ್ನ ದೆಹಲಿಯ ರಂಗಭೂಮಿ ವಲಯಗಳಲ್ಲಿ ಸಕ್ರಿಯರಾಗಿದ್ದರು.

ಆಳುವ ಪಕ್ಷ ಅವರ ಮೇಲೆ ರಾಜದ್ರೋಹದ ಕೇಸು ಹೆಟ್ಟಿ ಕಿರುಕುಳ ನೀಡಿದಾಗ ಅವರು ದೈಹಿಕರಾಗಿ ಜರ್ಝರಿತರು. ಸುಪ್ರೀಮ್ ಕೋರ್ಟು ಅವರ ಪರವಾಗಿ ತೀರ್ಪು ನೀಡಿತು. ರಾಜದ್ರೋಹದ ಕೇಸನ್ನು ವಜಾ ಮಾಡಿತು. ಅಧಿಕಾರಸ್ಥರು ಮತ್ತು ಅಧಿಕಾರವನ್ನು ಕಡೆಗಣ್ಣಿನಿಂದ ಕಂಡ ವಿರಳರು ದುವಾ. ಜನಹಿತಕ್ಕಾಗಿ ಹೇಮಾ ಹೇಮಿಗಳನ್ನು ಎದುರು ಹಾಕಿಕೊಳ್ಳಲು ಹಿಂದೆಮುಂದೆ ನೋಡದ ನಿರ್ಭೀತರು. ಕೇವಲ ಘೋಷಣೆಗೆ ಸೀಮಿತವಾಗದೆ ನಿಜ ಅರ್ಥದಲ್ಲಿ ನೇರ ಮತ್ತು ದಿಟ್ಟರಾಗಿದ್ದವರು ಅವರು. ಜನವಾಣಿ ಕಾರ್ಯಕ್ರಮದ ಸಂದರ್ಶನಗಳ ಸರಣಿಯಲ್ಲಿ ಅವರೆದುರು ಕುಳಿತ ಮಂತ್ರಿಮಾನ್ಯರು ತತ್ತರಿಸುತ್ತಿದ್ದ ಗಳಿಗೆಗಳಿದ್ದವು. ನಿಮ್ಮ ಕೆಲಸ ಕಾರ್ಯಗಳ ಮೌಲ್ಯಮಾಪನದಲ್ಲಿ ನಿಮಗೆ ಹತ್ತರಲ್ಲಿ ಮೂರೇ ಅಂಕ ನೀಡುತ್ತಿರುವುದಾಗಿ ಮಂತ್ರಿಗಳ ಮುಖಕ್ಕೇ ಹೇಳುವ ನೈತಿಕ ಧೈರ್ಯವನ್ನು ದುವಾ ಸಂಪಾದಿಸಿದ್ದರು. ಈ ಅವಹೇಳನವನ್ನು ಮತ್ತೆಮತ್ತೆ ಎದುರಿಸಿದ ಮಂತ್ರಿಗಳು ದೂರದರ್ಶನ ಬಿತ್ತರಿಸುತ್ತಿದ್ದ ಈ ಕಾರ್ಯಕ್ರಮವನ್ನೇ ರದ್ದು ಮಾಡುವಂತೆ ಪ್ರಧಾನಿಯ ಮೇಲೆ ಬಹುವಾದ ಒತ್ತಡ ತಂದದ್ದು ಉಂಟು. ಆದರೆ ಸಫಲರಾಗಲಿಲ್ಲ.

ದುವಾ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ನಿರರ್ಗಳರಾಗಿದ್ದರು. ಯಥಾಸ್ಥಿತಿಯನ್ನೂ, ಆಳುವ ವ್ಯವಸ್ಥೆಯನ್ನು ಅಂಜದೆ ಅಳುಕದೆ ಪ್ರಶ್ನಿಸುತ್ತಲೇ ಬಂದ ಅಪರೂಪದ ಪತ್ರಕರ್ತ. ಸೂಫೀ ಸಂಗೀತ ಮತ್ತು ಕವಿತೆಯೆಡೆಗಿನ ಅಗಾಧ ಪ್ರೇಮ ಅವರ ಸುದ್ದಿಗಾರಿಕೆಗೆ ಸೊಬಗು ಸಿರಿವಂತಿಕೆಗಳ ನೀಡಿತ್ತು.

ಅವರ ಆಕ್ರಮಣಶೀಲತೆಯಲ್ಲಿ ಇಂದಿನ ಬಹುತೇಕ ಆಂಕರುಗಳಂತೆ ಕೇವಲ ಭಾವ ಭಂಗಿಗಳ ಟೊಳ್ಳು ಇರಲಿಲ್ಲ. ಬದಲಾಗಿ ಅಧ್ಯಯನಶೀಲತೆ ಮತ್ತು ಆಳದ ತಿಳಿವಳಿಕೆಯ ಹರಿತ ಧಾರೆಯಿರುತ್ತಿತ್ತು.
ಅವರು ತಮ್ಮ ಕಾರ್ಯಕ್ರಮಗಳ ವೀಕ್ಷಿಸುತ್ತಿದ್ದವರ ಉದ್ಯೋಗಿಯಾಗಿದ್ದರೇ ವಿನಾ ಕಟ್ಟಕಡೆಯ ತನಕ ಯಾವುದೇ ಮಾಲೀಕರ ಉದ್ಯೋಗಿ ಆಗಿರಲಿಲ್ಲ. ಸ್ಥಾವರವಾಗಿ ಉಳಿಯದೆ ಜಂಗಮವಾಗಿ ಕೆಲಸ ಮಾಡಿದವರು. ಹತ್ತು ಹಲವು ಸುದ್ದಿ ಸಂಸ್ಥೆಗಳಿಗೆ ಗುತ್ತಿಗೆ ಕರಾರಿನ ಮೂಲಕ ಕಾರ್ಯಕ್ರಮಗಳನ್ನು ಮಾಡಿಕೊಟ್ಟವರು. ಗುತ್ತಿಗೆ ಮುಗಿದ ಕ್ಷಣವೇ ಮುಂದಿನ ಸಂಸ್ಥೆಗೆ ನಡೆಯುತ್ತಿದ್ದವರು. ಎಲ್ಲಿಯೂ ದೀರ್ಘ ಕಾಲ ನೆಲೆ ನಿಲ್ಲದೆ ಯಾಕೆ ಅಷ್ಟೊಂದು ಸಂಸ್ಥೆಗಳಿಗೆ ಕೆಲಸ ಮಾಡಿದಿರಿ ಎಂಬ ಪ್ರಶ್ನೆಗೆ ಅವರ ಉತ್ತರ- ನಿಷ್ಠುರನಾಗಿದ್ದ ನನ್ನನ್ನು ಯಾರೂ ಬಹುಕಾಲ ಇಷ್ಟಪಡುತ್ತಿರಲಿಲ್ಲ.

ಪತ್ರಿಕೋದ್ಯಮಕ್ಕೆ ಅವರು ಕಾಲಿಟ್ಟದ್ದು ದೂರದರ್ಶನದ ಮೂಲಕ. 80ರ ದಶಕಗಳಲ್ಲಿ ಎನ್‌ಡಿಟಿವಿಯ ಪ್ರಣಯ್ ರಾಯ್ ಜೊತೆ ಆರಂಭಿಸಿದ ವಿರಳ ಒಳನೋಟಗಳ ಚುರುಕಿನ ಚುನಾವಣಾ ವಿಶ್ಲೇಷಣೆಗಳು ದುವಾ ಅವರಿಗೆ ದಿನಬೆಳಗಾಗುವುದರಲ್ಲಿ ಖ್ಯಾತಿ ತಂದುಕೊಟ್ಟವು. ಉರ್ದು ಹಿಂದೀ ಸಾಹಿತ್ಯದ ಆಳದ ಓದು ಅವರ ಸುದ್ದಿ ಪ್ರಸ್ತುತಿಯಲ್ಲಿ ಪ್ರತಿಫಲಿಸುತ್ತಿತ್ತು. ಅವರ ಪದಲಾಲಿತ್ಯ, ಪ್ರಖರ ವಿಶ್ಲೇಷಣೆ, ಸುಡುಕೆಂಡಗಳನ್ನು ಉಡಿಯಲ್ಲಿ ಕಟ್ಟಿಕೊಂಡಿರುತ್ತಿದ್ದಂತಹ ಟೀಕೆ ಟಿಪ್ಪಣಿಗಳ ವಿಶಿಷ್ಟ ಸೂಜಿಗಲ್ಲಿನ ಶೈಲಿ ಆದರ್ಶ ಪತ್ರಕರ್ತನೊಬ್ಬನ ದಾರಿ ದೀವಿಗೆ.

ಪ್ರಣಯ್ ರಾಯ್ ಪ್ರಕಾರ ದುವಾ ತಮ್ಮ ಕಾಲದ ಏಕೈಕ ಮಹಾನ್ ಟಿವಿ ಪತ್ರಕರ್ತರಾಗಿದ್ದರು. ತಾವು ಸದಾ ಮೆಚ್ಚಿ ಗೌರವಿಸಿದ ಈ ಸೋಜಿಗದ ಪ್ರತಿಭೆಯಿಂದ ಸಾಕಷ್ಟು ಕಲಿತದ್ದಾಗಿ ಹೇಳಿದ್ದಾರೆ.
ಇಂದಿರಾ ಗಾಂಧೀ ಹೇರಿದ್ದ ತುರ್ತುಪರಿಸ್ಥಿತಿಯಂತಹುದೇ ಗಂಭೀರ ಕಳವಳಕಾರಿ ದುಸ್ಥಿತಿ ಈಗ ದೇಶವನ್ನು ಅವರಿಸಿದೆ. ಅಂದು ಬಸ್ಸುಗಳು ರೈಲುಗಾಡಿಗಳಲ್ಲಿ ಬಂಗಾರದ ದಿನಗಳು ಬರಲಿವೆ ಎಂಬ ಘೋಷಣೆಗಳನ್ನು ಬರೆಸಲಾಗಿತ್ತು. ಇಂದು ’ಅಚ್ಛೇ ದಿನ’ಗಳ ಆಮಿಷವನ್ನು ತೂಗು ಬಿಡಲಾಗಿದೆ. ಇಂದಿರಾ ಸುತ್ತಮುತ್ತಲ ಪಾಪಾಸುಕಳ್ಳಿ ಹಿಡಿಯಷ್ಟು ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಆಳುತ್ತಿರುವವರ ಹಿಂದೆ ದೇಶವ್ಯಾಪಿ ಬೃಹತ್ ಸಂಘಟನೆಯೇ ಇದೆ. ಅದು ಪ್ರತಿಪಾದಿಸುವ ಭೇದಭಾವದ ಸಿದ್ಧಾಂತವೇ ಆವರಿಸಿದೆ ಎಂಬುದು ದುವಾ ಭಾವನೆಯಾಗಿತ್ತು.

ಆಳುವವರ ಬಾಲ ಬಡಿಯುವ ಭಟ್ಟಂಗಿ ಸುದ್ದಿಗಾರಿಕೆಯನ್ನು ಅವರು ದರಬಾರಿ ಮತ್ತು ಸರಕಾರಿ ಎಂದು ಹೆಸರಿಟ್ಟು ಹಂಗಿಸುತ್ತಿದ್ದರು. ಭಾರತ ರಾಜಕಾರಣದ ಅತಿರಥ ಮಹಾರಥರನ್ನು ಸಂದರ್ಶಿಸಿದ್ದ ಅವರು ಭಟ್ಟಂಗಿ ಪ್ರಶ್ನೆಗಳನ್ನು ಎಂದೂ ಕೇಳಿದವರಲ್ಲ. ದೂರದರ್ಶನಕ್ಕಾಗಿ ಅವರು ನಡೆಸಿಕೊಟ್ಟ ಕೆದಕುವ ಶೋಧ ಎಂಬ ಅಜಮಾಸು ಅರ್ಥದ ’ಪರಖ್’ ಎಂಬ ಶೀರ್ಷಿಕೆಯ ಕಾರ್ಯಕ್ರಮ ಇಂದಿಗೂ ಅನುಕರಣೀಯ.

ಅಧಿಕಾರವನ್ನು ಸದಾ ಪ್ರಶ್ನಿಸಿದ ಪತ್ರಿಕೆಗಳಲ್ಲಿ ಒಂದಾದ ’ಜನಸತ್ತಾ’ದ ಮಾಜಿ ಸಂಪಾದಕ ಓಮ್ ಥನ್ವಿ ಅವರ ಪ್ರಕಾರ ದುವಾ ತಮ್ಮ ಟಿವಿ ಸುದ್ದಿ ಪ್ರಸ್ತುತಿಗಳ ಬರಹರೂಪವನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿರಲಿಲ್ಲ. ಆಂಕರ್‌ಗಳು ಅವಲಂಬಿಸುವ ಟೆಲಿಪ್ರಾಂಪ್ಟರಿನ ಹಂಗೂ ಅವರಿಗೆ ಇರಲಿಲ್ಲ. ಕ್ಯಾಮೆರಾ ಚಾಲೂ ಆಯಿತೆಂದರೆ ಅವರ ಆಲೋಚನೆಗಳು ಅಭಿಜಾತವಾಗಿ ಹರಿಯುತ್ತಿದ್ದವು. ಹರಿತ ವ್ಯಂಗ್ಯ ವಿಡಂಬನೆ ಮತ್ತು ಸೂಕ್ಷ್ಮ ಒಳನೋಟಗಳ ಲೀಲಾಜಾಲ ವಿಶ್ಲೇಷಣೆ ಅವರದಾಗಿತ್ತು. ತಪ್ಪು, ತಡವರಿಕೆ ರೀಟೇಕ್‌ಗಳ ಗೊಡವೆಯೇ ಅವರಿಗಿರಲಿಲ್ಲ. ಟೆಲಿವಿಷನ್ ಸುದ್ದಿ ತಂತ್ರಜ್ಞಾನ ಇನ್ನೂ ನಡೆಯಲು ಕಲಿಯುತ್ತಿದ್ದ ದಿನಗಳಲ್ಲಿ ಮಾಧ್ಯಮದ ಮೇಲೆ ಬಿಗಿ ಹಿಡಿತ ಸಾಧಿಸಿದ್ದರು ದುವಾ.

ಭೋಜನಪ್ರಿಯ ದುವಾ ಗಂಭೀರ ಸುದ್ದಿ ವಿಶ್ಲೇಷಣೆಯ ಜೊತೆಗೆ ’ಜಾಯ್ಕಾ ಇಂಡಿಯಾ ಕಾ’ ಎಂಬ ಅತ್ಯಂತ ಜನಪ್ರಿಯ ತಿಂಡಿ ತಿನಿಸು ಭೋಜನದ ಕಾರ್ಯಕ್ರಮವನ್ನೂ ದೀರ್ಘಕಾಲ ನಡೆಸಿಕೊಟ್ಟರು. ಕರ್ನಾಟಕವೂ ಸೇರಿದಂತೆ ದೇಶದ ಮೂಲೆಮೂಲೆಗಳ ಅಪರೂಪದ ರುಚಿಕರ ವ್ಯಂಜನಗಳು ಮತ್ತು ಹೊಟೆಲುಗಳನ್ನು ಪರಿಚಯಿಸಿದರು. ಮೈಸೂರಿನ ಗುರು ಸ್ವೀಟ್ಸ್‌ನಲ್ಲಿ ಮೈಸೂರು ಪಾಕ್ ಮೆದ್ದು ಹೊರಬಿದ್ದು ಅರಮನೆ ನಗರಿಯ ಸ್ವಚ್ಛತೆ ಮತ್ತು ಅಲ್ಲಿನ ಪೌರರ ನೈರ್ಮಲ್ಯಪ್ರಜ್ಞೆಯನ್ನು ಮೆಚ್ಚಿದ್ದು ಈ ಪತ್ರಕರ್ತನಿಗೆ ಇನ್ನೂ ನೆನಪಿದೆ. ವಿದೇಶಗಳಿಗೂ ಪಯಣಿಸಿದ ಅವರ ಈ ಕಾರ್ಯಕ್ರಮದ ಹೆಸರು ವಿಶೇಷವಾಗಿ ಉತ್ತರಭಾರತದ ಭೋಜನಪ್ರಿಯರ ನಾಲಗೆಗಳ ಮೇಲೆ ನಲಿಯಿತು.

ಟೆಲಿವಿಷನ್ ಪತ್ರಿಕೋದ್ಯಮದ ನಂತರ ಭಾರೀ ಸೆಟ್ಟುಗಳ ಸ್ಟುಡಿಯೋಗಳ ಅಂಧಾದುಂದಿನ ಹಂಗಿಲ್ಲದ ಸಾಮಾಜಿಕ ಅಂತರ್ಜಾಲ ತಾಣಗಳ ನೇರ ಸರಳ ಗುಣಗಳು ದುವಾ ಅವರನ್ನು ಸೆಳೆದಿದ್ದವು.

ಸಿದ್ಧಾರ್ಥ ವರದರಾಜನ್ ಸಂಗಾತಿಗಳು ನಡೆಸುವ ’ದಿ ವೈರ್’ ಹೆಸರಿನ ಡಿಜಿಟಲ್ ಸುದ್ದಿ ವೇದಿಕೆಗೆ ನಡೆಸಿಕೊಟ್ಟ ಸುದ್ದಿ ವಿಶ್ಲೇಷಣೆಗಳ ಪ್ರದರ್ಶನಗಳಿಗೆ ಚಿಕ್ಕಾಸನ್ನೂ ಪಡೆಯಲಿಲ್ಲ ಅವರು. ತಾವು ದುಡಿದ ಸಂಸ್ಥೆಗಳಿಗೆ ಘನತೆ ತಂದುಕೊಟ್ಟವರು. ಮೂರೂವರೆ ದಶಕಗಳ ಕಾಲ ಟೀವಿ ಪತ್ರಿಕೋದ್ಯಮದ ಬೆಳಕಿನ ಸ್ತಂಭವಾಗಿದ್ದವರು.

ಅಪ್ರತಿಮ ಅಭಿಜಾತ ಸಮಾಜಮುಖಿ ಸುದ್ದಿ ಸಂವಹನಕಾರ ಕಟ್ಟಕಡೆಯ ಸುದ್ದಿ ಪ್ರಸ್ತುತಿ ಮುಗಿಸಿ ಮರಳಿ ಬಾರದಂತೆ ಮರೆಯಾಗಿದ್ದಾನೆ. ಹೀಗೆ ನಿರ್ಗಮಿಸುವ ಕಾಲ ಇದಾಗಿರಲಿಲ್ಲ. ಆದರೆ ಕಾಲನನ್ನು ಗೆದ್ದವರು ಯಾರಿದ್ದಾರೆ?


ಇದನ್ನೂ ಓದಿ: ವಿನೋದ್ ದುವಾ ವಿರುದ್ಧ ಎಫ್‌ಐಆರ್ ರದ್ದು; ದೇಶದ್ರೋಹ ಕಾನೂನಿನ ಮೂಲಭೂತ ನಿಯಮಗಳನ್ನು ನೆನಪಿಸಿದ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...