ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಅಗತ್ಯವೇ?
ವಿರೋಧ ಪಕ್ಷಗಳ ವಿರೋಧದ ನಡುವೆಯೇ ಉಭಯ ಸದನಗಳಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅಂಗೀಕರಿಸಲಾಯಿತು. ಈ ಮಸೂದೆಯ ಮೂಲಕ ಪ್ರಜಾಪ್ರತಿನಿಧಿ ಕಾಯಿದೆ 1950 ಮತ್ತು 1951ರ ವಿವಿಧ ವಿಭಾಗಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಮತದಾರರ ಗುರುತಿನ ಚೀಟಿಯನ್ನು ಆಧಾರ್ ನಂಬರ್‌ಗೆ ಜೋಡಿಸುವ ಪ್ರಸ್ತಾಪವನ್ನೂ ಇಲ್ಲಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಾನೂನು ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಮಂಡಿಸುತ್ತಾ, “ಚುನಾವಣೆ ವ್ಯವಸ್ಥೆಯ ’ಶುದ್ಧೀಕರಣ’ಕ್ಕೆ ಸರ್ಕಾರ ಮುಂದಾಗಿದೆ” ಎಂದಿದ್ದಾರೆ.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಬ್ಬನೇ ವ್ಯಕ್ತಿಯು ವೋಟರ್ ಐಡಿ ಹೊಂದುವುದನ್ನು ಈ ಮಸೂದೆ ತಡೆಯುತ್ತದೆ ಎಂಬುದು ಸರ್ಕಾರದ ವಾದ. “ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಯಾವುದೇ ಅರ್ಜಿಯನ್ನು ನಿರಾಕರಿಸುವಂತಿಲ್ಲ. ಆಧಾರ್ ನೀಡದ ಕಾರಣಕ್ಕಾಗಿ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದುಗಳನ್ನು ಅಳಿಸಲಾಗುವುದಿಲ್ಲ. ಆಧಾರ್ ನೀಡಲು ವಿಫಲರಾದಂತಹ ಜನರು ಸೂಚಿಸಿರುವ ಇತರ ದಾಖಲೆಗಳನ್ನು ಒದಗಿಸಲು ಅನುಮತಿಸಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.

ಆಧಾರ್ ಜೊತೆಗೆ ವೋಟರ್ ಐಡಿಯನ್ನು ಲಿಂಕ್ ಮಾಡುವುದು ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ. ಈ ಹಿಂದೆಯೂ ಆಧಾರ್ ಜೊತೆಗೆ ಬೇರೆ ದಾಖಲೆಗಳನ್ನು ಜೋಡಣೆ ಮಾಡಿದ್ದರಿಂದ ಹಲವು ಲೋಪಗಳಾಗಿರುವುದನ್ನು ತಜ್ಞರು ಗುರುತಿಸಿದ್ದಾರೆ. ವಿರೋಧ ಪಕ್ಷಗಳೂ ಇದೇ ಅಭಿಪ್ರಾಯ ತಾಳಿವೆ. ಇದು ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ (ಗೌಪ್ಯತೆಯ ಹಕ್ಕು) ಆಧಾರ್ ಬಗ್ಗೆ ಸುಪ್ರೀಂ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ. ಆಧಾರ್ ಬಳಸಿ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಕೆಲಸಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆದಾಗ ಮತದಾರರಿಗೆ ಆಗಿದ್ದ ಅನ್ಯಾಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಈ ಕಾರ್ಯಕ್ರಮವನ್ನು ಕೋರ್ಟ್ ರದ್ದುಗೊಳಿಸಿತ್ತು ಕೂಡ.
’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಬೆಂಗಳೂರಿನ ಅಜೀಂಪ್ರೇಮ್‌ಜೀ ಯೂನಿವರ್ಸಿಟಿಯ ಪ್ರಾಧ್ಯಾಪಕರಾದ ರಾಜೇಂದ್ರನ್ ನಾರಾಯಣ್ ಅವರು ತಮ್ಮ ಕ್ಷೇತ್ರ ಕಾರ್ಯದ ಅನುಭವಗಳನ್ನು ಹಂಚಿಕೊಳ್ಳುತ್ತಾ ಆಧಾರ್ ಜೋಡಣೆಯಿಂದಾಗಿ ಈ ಹಿಂದೆ ಆಗಿರುವ ಅವಾಂತರಗಳನ್ನು ಬಿಚ್ಚಿಟ್ಟರು.
“ನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಜಾಬ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡಲಾಯಿತು. ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಹಾಗೂ ಜಾಬ್ ಕಾರ್ಡ್ ಜೊತೆಗೆ ಜನರು ಜೋಡಣೆ ಮಾಡಬೇಕಾಯಿತು. ಮೊದಲು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರಲಿಲ್ಲ. 2016-2017ಯಿಂದ ಕಡ್ಡಾಯ ಮಾಡಲಾಯಿತು. ಆಧಾರ್ ನೋಂದಣಿಯನ್ನು ಸರ್ಕಾರ ಉತ್ತೇಜಿಸಿತು. ನೀವು ಆಧಾರ್ ಜೊತೆಗೆ ಜಾಬ್‌ಕಾರ್ಡ್ ಲಿಂಕ್ ಮಾಡದಿದ್ದರೆ ನಿಮಗೆ ನರೇಗಾ ಕೆಲಸಗಳನ್ನು ಕೊಡುವುದಿಲ್ಲ ಎನ್ನುವಂತಹ ಬೆಳವಣಿಗೆಗಳು ಆದವು. ನಕಲಿ ಜಾಬ್ ಕಾರ್ಡ್‌ಗಳನ್ನು ತಡೆಯುವುದು ಇದರ ಉದ್ದೇಶ ಎಂದು ಹೇಳಲಾಯಿತು. ಇದರ ಪರಿಣಾಮ ನರೇಗಾದಲ್ಲಿ ತೊಡಗಿಸಿಕೊಂಡಿದ್ದ ಅನೇಕ ಕೂಲಿಕಾರರ ಜಾಬ್‌ಕಾರ್ಡ್ ಡಿಲೀಟ್ ಆಯಿತು” ಎನ್ನುತ್ತಾರೆ ರಾಜೇಂದ್ರನ್.

ಮುಂದುವರಿದು ವಿವರಿಸುವ ಅವರು, “ಗ್ರಾಮೀಣ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಸೃಷ್ಟಿಸಲಾಯಿತು. ಕೆಲವೆಡೆಗಳಲ್ಲಿ, ಒಂದೇ ಮನೆಯ ಐವರಲ್ಲಿ ಇಬ್ಬರ ಜಾಬ್‌ಕಾರ್ಡ್ ಆಧಾರ್ ಲಿಂಕ್ ಆಗಿದ್ದು, ಇನ್ನು ಮೂವರ ಜಾಬ್‌ಕಾರ್ಡ್ ಡಿಲೀಟ್ ಮಾಡುವ ಕೆಲಸ ಆಯಿತು. ಆ ಮೂಲಕ ಶೇ.100 ಆಧಾರ್ ಲಿಂಕ್ ಕಾರ್ಯಾಚರಣೆ ಎಂದು ತೋರಿಸಲಾಯಿತು. ಮತ್ತೊಂದು ಸಮಸ್ಯೆ ತಲೆದೋರಿತು. ಕೇಂದ್ರ ಸರ್ಕಾರದಿಂದ ನೇರವಾಗಿ ಕೂಲಿಕಾರರ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವುದರಲ್ಲಿ ತೊಡಕಾಯಿತು. ಆಧಾರ್ ಆಧಾರಿತ ಪೇಮೆಂಟ್, ಅಕೌಂಟ್ ಆಧಾರಿತ ಪೇಮೆಂಟ್- ಈ ಎರಡು ವಿಧದಲ್ಲಿ ಹಣ ಜಮೆ ಮಾಡಬಹುದು. ಅಕೌಂಟ್ ಆಧಾರಿತ ಜಮೆಯಲ್ಲಿ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್ ಹಾಗೂ ಬ್ಯಾಂಕ್ ಖಾತೆಯ ವಿವರ ಇದ್ದರೆ ಆಗುತ್ತದೆ. ಆಧಾರ್ ಆಧಾರಿತ ಖಾತೆಯಲ್ಲಿ ಆಧಾರ್ ನಂಬರ್‌ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗಿರುತ್ತದೆ. ಕೇಂದ್ರ ಸರ್ಕಾರ ಏನು ಮಾಡಿತ್ತೆಂದರೆ, ಆಧಾರ್ ನಂಬರ್ ಜೊತೆಗೆ ಲಿಂಕ್ ಇರುವ ಫೈನಾನ್ಸಿಯಲ್ ಅಡ್ರಸ್‌ಗೆ ಸರ್ಕಾರ ಹಣವನ್ನು ಜಮೆ ಮಾಡಿತು. ಇದರಿಂದ ಫಲಾನುಭವಿಗಳು ಗೊಂದಲಕ್ಕೊಳಗಾದರು. ನಿಗದಿತ ಖಾತೆಗೆ ಹಣ ಬಾರದೆ ಕಂಗಾಲಾದರು” ಎನ್ನುತ್ತಾರೆ.
“ನೀವು ಮೂರು ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿದ್ದರೆ, ಎಲ್ಲ ಬ್ಯಾಂಕ್ ಅಕೌಂಟ್‌ಗಳಿಗೂ ಆಧಾರ್ ಲಿಂಕ್ ಮಾಡಿರುತ್ತೀರಿ. ಸರ್ಕಾರ ಹಣ ಜಮೆ ಮಾಡಿದಾಗ ಕೊನೆಯದಾಗಿ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತಿತ್ತು. ನರೇಗಾ ಫಲಾನುಭವಿಯೊಬ್ಬ ತಮ್ಮ ಹಣಕ್ಕಾಗಿ ಎಸ್‌ಬಿಐ ಖಾತೆಯನ್ನು ನೀಡಿರುತ್ತಾನೆ ಎಂದುಕೊಳ್ಳೋಣ. ಆತ ಮತ್ತೊಂದು ಖಾತೆಯನ್ನು ಸೆಂಟ್ರಲ್ ಬ್ಯಾಂಕ್‌ನಲ್ಲಿ ಹೊಂದಿದ್ದು ಅದಕ್ಕೂ ಆಧಾರ್ ಲಿಂಕ್ ಮಾಡಿದ್ದರೆ ನರೇಗಾ ಹಣ ಎಸ್‌ಬಿಐ ಖಾತೆಗೆ ಬರುತ್ತಿರಲಿಲ್ಲ. ಸಾಮಾನ್ಯವಾಗಿ ನರೇಗ ಹಣ ಪಡಯಲು ಬಳಸುವ ಅಧಿಕೃತ ಖಾತೆಗೆ ಹಣ ಬಾರದೆ ಎಲ್ಲಿ ಹೋಯಿತು ಎಂದು ಫಲಾನುಭವಿಗಳು ಚಿಂತಿಸುವಂತಾಯಿತು. ಈ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟವಾಯಿತು. ಆಧಾರ್ ಲಿಂಕ್‌ನಿಂದಾಗಿರುವ ಸಮಸ್ಯೆಗಳನ್ನು ನಾವು ಬಹಳ ಹತ್ತಿರದಿಂದ ನೋಡಿದ್ದೇವೆ. ವೋಟರ್ ಐಡಿ ಲಿಂಕ್ ಕಡ್ಡಾಯವೇನೂ ಅಲ್ಲ ಎನ್ನುತ್ತಾರೆ. ಒಮ್ಮೆ ಜಾರಿಗೆ ಬಂದ ಮೇಲೆ ಜನರು ಇದನ್ನು ಕಡ್ಡಾಯವೆಂದೇ ಭಾವಿಸುತ್ತಾರೆ. ಮುಂದೆ ಸರ್ಕಾರವೇ ಅಧಿಕೃತವಾಗಿ ಕಡ್ಡಾಯ ಮಾಡಬಹುದು. ನರೇಗಾ ಕಾರ್ಡ್ ಡಿಲೀಟ್ ಆದಂತೆಯೇ ವೋಟರ್ ಕಾರ್ಡ್ ಕೂಡ ಡಿಲೀಟ್ ಆಗಬಹುದು. ಆಧಾರ್ ಕಾರ್ಡ್‌ನಲ್ಲಿರುವ ಹೆಸರು ವೋಟರ್ ಐಡಿಗೆ ಹೋಲಿಕೆಯಾಗದಿದ್ದರೆ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಯೇ ಹೆಚ್ಚಿದೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಾಜೇಂದ್ರನ್.
ಆಧಾರ್ ಪ್ಯಾನ್ ಲಿಂಕಿಂಗ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರಲ್ಲಿ ಒಬ್ಬರಾದ ಮತ್ತು ಡೇಟಾಮೀಟ್ ಸಂಸ್ಥಾಪಕರಾದ ತೇಜೇಶ್ ಜಿ ಎನ್ ಅವರು ತಮ್ಮ ಆತಂಕಗಳನ್ನು ’ನ್ಯಾಯಪಥ’ದೊಂದಿಗೆ ಹಂಚಿಕೊಂಡರು. “ಎಲ್ಲರನ್ನೂ ಮತದಾನದಲ್ಲಿ ಒಳಗೊಳ್ಳಬೇಕು ಎಂಬುದು ನಮ್ಮ ಗುರಿಯಾಗಿದೆ. ಚುನಾವಣೆ ಬಂದಾಗಲೆಲ್ಲ ಆದಷ್ಟು ವೋಟ್ ಮಾಡಿ ಎಂದು ಜಾಗೃತಿ ಮೂಡಿಸುತ್ತೇವೆ. ಅಮೆರಿಕದಂತಹ
ದೇಶದಲ್ಲಿ ಪರಿಸ್ಥಿತಿ ಬೇರೆ ರೀತಿ ಇದೆ. ಮತದಾರರೆಂದು ಸಾಬೀತು ಮಾಡದೆ ಅಮೆರಿಕದಲ್ಲಿ ಮತ ಚಲಾಯಿಸಲು ಸಾಧ್ಯವಾಗಲ್ಲ. ಅಮೆರಿಕದ್ದು ರಿಜೆಕ್ಷನ್ ಪ್ರೊಸೆಸ್ ಆದರೆ ನಮ್ಮದು ಸೆಲೆಕ್ಷನ್ ಪ್ರೊಸೆಸ್. ಮನೆಯಿಂದ ಹೊರಬಂದು ಮತ ಚಲಾಯಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ವೋಟರ್ ಲಿಸ್ಟ್‌ನಲ್ಲಿ ಹೆಸರು ಇಲ್ಲದಿದ್ದರೆ ಅದನ್ನು ಸಮಸ್ಯೆ ಎಂದು ನಾವು ಭಾವಿಸುತ್ತೇವೆ. ಮತದಾನ ಮಾಡಿದವರಿಗೆ ಶಾಯಿಯನ್ನು ಹಾಕುತ್ತಾರೆ. ಅದು ಸುಲಭಕ್ಕೆ ಅಳಿಸಿ ಹೋಗುವುದಿಲ್ಲ. ಹೀಗಾಗಿ ಡಬಲ್ ವೋಟಿಂಗ್ ಸಂಖ್ಯೆ ತುಂಬಾ ಕಡಿಮೆ ಇದೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ಮತದಾನದಿಂದ ಹೊರಗುಳಿಯುವವರ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ವೋಟರ್ ಲಿಂಕ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಿದ್ದರಿಂದ ರೇಷನ್ ತೆಗೆದುಕೊಳ್ಳಲು ಆಗದೆ ಒದ್ದಾಡಿದವರನ್ನು ನೋಡಿದ್ದೇವೆ” ಎನ್ನುತ್ತಾರೆ ತೇಜೇಶ್.

“ವೋಟರ್ ಐಡಿ ಜೊತೆಗೆ ಆಧಾರ್ ಜೋಡಣೆಯು ಖಾಸಗಿತನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಯಾರುಯಾರಿಗೆ ವೋಟ್ ಹಾಕುತ್ತಿದ್ದರು ಎಂಬುದು ಈವರೆಗೆ ಗೌಪ್ಯವಾಗಿರುತ್ತಿತ್ತು. ಸದ್ಯಕ್ಕೆ ಮತಗಟ್ಟೆ ಆಧಾರದಲ್ಲಿ ಮಾತ್ರ ಯಾರಿಗೆ ಎಷ್ಟು ಮತ ಹೋಗಿದೆ ಎಂದು ಊಹಿಸಬಹುದಿತ್ತು. ಒಂದು ಓಣಿಯಲ್ಲಿರುವ ಜನ ಯಾವ ಪಕ್ಷಕ್ಕೆ ವೋಟು ಹಾಕಿದ್ದಾರೆಂದು ಹೇಳಬಹುದಿತ್ತು. ಈ ಓಣಿಯಲ್ಲಿರುವವರು ನಮಗೆ ವೋಟ್ ಹಾಕಿಲ್ಲ, ನಾನೇಕೆ ಸಹಾಯ ಮಾಡಲಿ ಎಂದು ಕೇಳುವುದನ್ನು ನಾವು ನೋಡಿದ್ದೇವೆ. ಈ ರೀತಿಯ ರಾಜಕಾರಣ ಮತಗಟ್ಟೆ ಮಟ್ಟಕ್ಕೆ, ಗ್ರಾಮ ಪಂಚಾಯಿತಿ ಮಟ್ಟಕ್ಕೆ ಸೀಮಿತವಾಗಿತ್ತು. ಆದರೆ
ಆಧಾರ್ ಲಿಂಕ್ ಮಾಡಿದರೆ ಯಾವ ಆಧಾರ್ ಐಡಿ ಯಾರಿಗೆ ವೋಟ್ ಹಾಕಿದೆ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ತಿಳಿಯಬಹುದಾದ ಸಮಸ್ಯೆ ಇದೆ. ಇದರಿಂದ ಮತದಾನದ ಗೌಪ್ಯತೆ ಹಾಳಾಗುತ್ತದೆ. ಪಕ್ಷಪಾತ ಧೋರಣೆ ಮೊದಲು ಸಣ್ಣ ಘಟಕಗಳ ಮಟ್ಟದಲ್ಲಿತ್ತು. ಈಗ ರಾಷ್ಟ್ರಮಟ್ಟಕ್ಕೆ ಹೋಗುತ್ತದೆ. ವೋಟರ್ ಐಡಿ ಜೊತೆಗೆ ಆಧಾರ್ ಇದ್ದರೆ ಫೋನ್ ನಂಬರ್ ಕೂಡ ಲಭ್ಯವಾಗುತ್ತದೆ. ನಂಬರ್ ಲೀಕ್ ಆಗಿ ಮತದಾರರಿಗೆ ಕಾಲ್ ಮಾಡಿರುವ ಘಟನೆ ಪಾಂಡಿಚೆರಿಯಲ್ಲಿ ನಡೆದಿರುವುದು ಈಗ ಕೋರ್ಟ್ ಮೆಟ್ಟಿಲೇರಿದೆ” ಎಂದು ವಿವರಿಸುತ್ತಾರೆ ತೇಜೇಶ್.
ಐಟಿ ಫಾರ್ ಚೇಂಜ್‌ನ ಕೆ.ಗುರು ಅವರು ನಮ್ಮೊಂದಿಗೆ ಮಾತನಾಡಿ ಆಧಾರ್ ಕಾರ್ಡ್‌ನ ಮಿತಿಯನ್ನು ವಿವರಿಸಿದರು. “ಪೌರತ್ವಕ್ಕೆ ಆಧಾರ್ ಕಾರ್ಡ್ ಆಧಾರವಲ್ಲ. ನೀವು ಇಲ್ಲಿ ವಾಸವಿದ್ದರೆ ಆಧಾರ್ ಕಾರ್ಡ್ ಸಿಗುತ್ತದೆ. ಮತದಾನ ಕೇವಲ ಪೌರತ್ವಕ್ಕೆ ಮಾತ್ರ ಸಿಗಬೇಕು. ಆಧಾರ್ ಮೂಲಕ ಪೌರರಲ್ಲದವರಿಗೂ ಮತದಾನದ ಹಕ್ಕು ಸಿಗುವ ಸಾಧ್ಯತೆ ಇದೆ. ಮತ್ತೊಂದು ಅಪಾಯವೆಂದರೆ ಡಿಜಿಟಲ್ ಜಗತ್ತಿನಲ್ಲಿ ನಾವು ಹೀಗೆ ಲಿಂಕ್ ಮಾಡುತ್ತಾ ಹೋದಷ್ಟು ನಮ್ಮ ಪೌರತ್ವದ ಸೆಕ್ಯುರಿಟಿ ಕಡಿಮೆಯಾಗುತ್ತದೆ. ನಮ್ಮ ವಿವರಗಳು ಗೌಪ್ಯವಾಗಿ ಇರಲು ಸಾಧ್ಯವಾಗದು” ಎನ್ನುತ್ತಾರೆ.
ಆಧಾರ್ ಜೋಡಣೆಯ ವಿಚಾರವಾಗಿ ತಜ್ಞರು ಹೇಳುವ ಮಾತುಗಳನ್ನು ಕೇಳಿದರೆ ಇದರಿಂದ ಉಂಟಾಗಬಹುದಾದ ಅಪಾಯಗಳು, ಸರ್ಕಾರ ಪ್ರತಿಪಾದಿಸುತ್ತಿರುವ ಉಪಯೋಗಗಳನ್ನು
ಮೀರಿಸುವಂತಿವೆ ಎಂಬುದು ಸ್ಪಷ್ಟವಾಗುತ್ತದೆ. ಆದುದರಿಂದ ಇದರ ಬಗ್ಗೆ ವಿಸ್ತೃತ ಸಾರ್ವಜನಿಕ ಚರ್ಚೆಯ ಅಗತ್ಯವಿದೆ.
ಇದನ್ನೂ ಓದಿ: Explainer: ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡುವ ಮಸೂದೆಯ ಸಾಧಕ-ಬಾಧಕಗಳು


