Homeಮುಖಪುಟಆಧಾರ್ ಜೋಡಣೆಯ ಅವಾಂತರಗಳು

ಆಧಾರ್ ಜೋಡಣೆಯ ಅವಾಂತರಗಳು

- Advertisement -
- Advertisement -

ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಅಗತ್ಯವೇ?

ವಿರೋಧ ಪಕ್ಷಗಳ ವಿರೋಧದ ನಡುವೆಯೇ ಉಭಯ ಸದನಗಳಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅಂಗೀಕರಿಸಲಾಯಿತು. ಈ ಮಸೂದೆಯ ಮೂಲಕ ಪ್ರಜಾಪ್ರತಿನಿಧಿ ಕಾಯಿದೆ 1950 ಮತ್ತು 1951ರ ವಿವಿಧ ವಿಭಾಗಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಮತದಾರರ ಗುರುತಿನ ಚೀಟಿಯನ್ನು ಆಧಾರ್ ನಂಬರ್‌ಗೆ ಜೋಡಿಸುವ ಪ್ರಸ್ತಾಪವನ್ನೂ ಇಲ್ಲಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಾನೂನು ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಮಂಡಿಸುತ್ತಾ, “ಚುನಾವಣೆ ವ್ಯವಸ್ಥೆಯ ’ಶುದ್ಧೀಕರಣ’ಕ್ಕೆ ಸರ್ಕಾರ ಮುಂದಾಗಿದೆ” ಎಂದಿದ್ದಾರೆ.

ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಬ್ಬನೇ ವ್ಯಕ್ತಿಯು ವೋಟರ್ ಐಡಿ ಹೊಂದುವುದನ್ನು ಈ ಮಸೂದೆ ತಡೆಯುತ್ತದೆ ಎಂಬುದು ಸರ್ಕಾರದ ವಾದ. “ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಯಾವುದೇ ಅರ್ಜಿಯನ್ನು ನಿರಾಕರಿಸುವಂತಿಲ್ಲ. ಆಧಾರ್ ನೀಡದ ಕಾರಣಕ್ಕಾಗಿ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದುಗಳನ್ನು ಅಳಿಸಲಾಗುವುದಿಲ್ಲ. ಆಧಾರ್ ನೀಡಲು ವಿಫಲರಾದಂತಹ ಜನರು ಸೂಚಿಸಿರುವ ಇತರ ದಾಖಲೆಗಳನ್ನು ಒದಗಿಸಲು ಅನುಮತಿಸಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.

ಕಿರಣ್ ರಿಜಿಜು

ಆಧಾರ್ ಜೊತೆಗೆ ವೋಟರ್ ಐಡಿಯನ್ನು ಲಿಂಕ್ ಮಾಡುವುದು ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ. ಈ ಹಿಂದೆಯೂ ಆಧಾರ್ ಜೊತೆಗೆ ಬೇರೆ ದಾಖಲೆಗಳನ್ನು ಜೋಡಣೆ ಮಾಡಿದ್ದರಿಂದ ಹಲವು ಲೋಪಗಳಾಗಿರುವುದನ್ನು ತಜ್ಞರು ಗುರುತಿಸಿದ್ದಾರೆ. ವಿರೋಧ ಪಕ್ಷಗಳೂ ಇದೇ ಅಭಿಪ್ರಾಯ ತಾಳಿವೆ. ಇದು ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ (ಗೌಪ್ಯತೆಯ ಹಕ್ಕು) ಆಧಾರ್ ಬಗ್ಗೆ ಸುಪ್ರೀಂ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ. ಆಧಾರ್ ಬಳಸಿ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಕೆಲಸಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆದಾಗ ಮತದಾರರಿಗೆ ಆಗಿದ್ದ ಅನ್ಯಾಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಈ ಕಾರ್ಯಕ್ರಮವನ್ನು ಕೋರ್ಟ್ ರದ್ದುಗೊಳಿಸಿತ್ತು ಕೂಡ.

’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಬೆಂಗಳೂರಿನ ಅಜೀಂಪ್ರೇಮ್‌ಜೀ ಯೂನಿವರ್ಸಿಟಿಯ ಪ್ರಾಧ್ಯಾಪಕರಾದ ರಾಜೇಂದ್ರನ್ ನಾರಾಯಣ್ ಅವರು ತಮ್ಮ ಕ್ಷೇತ್ರ ಕಾರ್ಯದ ಅನುಭವಗಳನ್ನು ಹಂಚಿಕೊಳ್ಳುತ್ತಾ ಆಧಾರ್ ಜೋಡಣೆಯಿಂದಾಗಿ ಈ ಹಿಂದೆ ಆಗಿರುವ ಅವಾಂತರಗಳನ್ನು ಬಿಚ್ಚಿಟ್ಟರು.

“ನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಜಾಬ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡಲಾಯಿತು. ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಹಾಗೂ ಜಾಬ್ ಕಾರ್ಡ್ ಜೊತೆಗೆ ಜನರು ಜೋಡಣೆ ಮಾಡಬೇಕಾಯಿತು. ಮೊದಲು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರಲಿಲ್ಲ. 2016-2017ಯಿಂದ ಕಡ್ಡಾಯ ಮಾಡಲಾಯಿತು. ಆಧಾರ್ ನೋಂದಣಿಯನ್ನು ಸರ್ಕಾರ ಉತ್ತೇಜಿಸಿತು. ನೀವು ಆಧಾರ್ ಜೊತೆಗೆ ಜಾಬ್‌ಕಾರ್ಡ್ ಲಿಂಕ್ ಮಾಡದಿದ್ದರೆ ನಿಮಗೆ ನರೇಗಾ ಕೆಲಸಗಳನ್ನು ಕೊಡುವುದಿಲ್ಲ ಎನ್ನುವಂತಹ ಬೆಳವಣಿಗೆಗಳು ಆದವು. ನಕಲಿ ಜಾಬ್ ಕಾರ್ಡ್‌ಗಳನ್ನು ತಡೆಯುವುದು ಇದರ ಉದ್ದೇಶ ಎಂದು ಹೇಳಲಾಯಿತು. ಇದರ ಪರಿಣಾಮ ನರೇಗಾದಲ್ಲಿ ತೊಡಗಿಸಿಕೊಂಡಿದ್ದ ಅನೇಕ ಕೂಲಿಕಾರರ ಜಾಬ್‌ಕಾರ್ಡ್ ಡಿಲೀಟ್ ಆಯಿತು” ಎನ್ನುತ್ತಾರೆ ರಾಜೇಂದ್ರನ್.

ರಾಜೇಂದ್ರನ್ ನಾರಾಯಣ್

ಮುಂದುವರಿದು ವಿವರಿಸುವ ಅವರು, “ಗ್ರಾಮೀಣ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಸೃಷ್ಟಿಸಲಾಯಿತು. ಕೆಲವೆಡೆಗಳಲ್ಲಿ, ಒಂದೇ ಮನೆಯ ಐವರಲ್ಲಿ ಇಬ್ಬರ ಜಾಬ್‌ಕಾರ್ಡ್ ಆಧಾರ್ ಲಿಂಕ್ ಆಗಿದ್ದು, ಇನ್ನು ಮೂವರ ಜಾಬ್‌ಕಾರ್ಡ್ ಡಿಲೀಟ್ ಮಾಡುವ ಕೆಲಸ ಆಯಿತು. ಆ ಮೂಲಕ ಶೇ.100 ಆಧಾರ್ ಲಿಂಕ್ ಕಾರ್ಯಾಚರಣೆ ಎಂದು ತೋರಿಸಲಾಯಿತು. ಮತ್ತೊಂದು ಸಮಸ್ಯೆ ತಲೆದೋರಿತು. ಕೇಂದ್ರ ಸರ್ಕಾರದಿಂದ ನೇರವಾಗಿ ಕೂಲಿಕಾರರ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವುದರಲ್ಲಿ ತೊಡಕಾಯಿತು. ಆಧಾರ್ ಆಧಾರಿತ ಪೇಮೆಂಟ್, ಅಕೌಂಟ್ ಆಧಾರಿತ ಪೇಮೆಂಟ್- ಈ ಎರಡು ವಿಧದಲ್ಲಿ ಹಣ ಜಮೆ ಮಾಡಬಹುದು. ಅಕೌಂಟ್ ಆಧಾರಿತ ಜಮೆಯಲ್ಲಿ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್ ಹಾಗೂ ಬ್ಯಾಂಕ್ ಖಾತೆಯ ವಿವರ ಇದ್ದರೆ ಆಗುತ್ತದೆ. ಆಧಾರ್ ಆಧಾರಿತ ಖಾತೆಯಲ್ಲಿ ಆಧಾರ್ ನಂಬರ್‌ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗಿರುತ್ತದೆ. ಕೇಂದ್ರ ಸರ್ಕಾರ ಏನು ಮಾಡಿತ್ತೆಂದರೆ, ಆಧಾರ್ ನಂಬರ್ ಜೊತೆಗೆ ಲಿಂಕ್ ಇರುವ ಫೈನಾನ್ಸಿಯಲ್ ಅಡ್ರಸ್‌ಗೆ ಸರ್ಕಾರ ಹಣವನ್ನು ಜಮೆ ಮಾಡಿತು. ಇದರಿಂದ ಫಲಾನುಭವಿಗಳು ಗೊಂದಲಕ್ಕೊಳಗಾದರು. ನಿಗದಿತ ಖಾತೆಗೆ ಹಣ ಬಾರದೆ ಕಂಗಾಲಾದರು” ಎನ್ನುತ್ತಾರೆ.

“ನೀವು ಮೂರು ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿದ್ದರೆ, ಎಲ್ಲ ಬ್ಯಾಂಕ್ ಅಕೌಂಟ್‌ಗಳಿಗೂ ಆಧಾರ್ ಲಿಂಕ್ ಮಾಡಿರುತ್ತೀರಿ. ಸರ್ಕಾರ ಹಣ ಜಮೆ ಮಾಡಿದಾಗ ಕೊನೆಯದಾಗಿ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತಿತ್ತು. ನರೇಗಾ ಫಲಾನುಭವಿಯೊಬ್ಬ ತಮ್ಮ ಹಣಕ್ಕಾಗಿ ಎಸ್‌ಬಿಐ ಖಾತೆಯನ್ನು ನೀಡಿರುತ್ತಾನೆ ಎಂದುಕೊಳ್ಳೋಣ. ಆತ ಮತ್ತೊಂದು ಖಾತೆಯನ್ನು ಸೆಂಟ್ರಲ್ ಬ್ಯಾಂಕ್‌ನಲ್ಲಿ ಹೊಂದಿದ್ದು ಅದಕ್ಕೂ ಆಧಾರ್ ಲಿಂಕ್ ಮಾಡಿದ್ದರೆ ನರೇಗಾ ಹಣ ಎಸ್‌ಬಿಐ ಖಾತೆಗೆ ಬರುತ್ತಿರಲಿಲ್ಲ. ಸಾಮಾನ್ಯವಾಗಿ ನರೇಗ ಹಣ ಪಡಯಲು ಬಳಸುವ ಅಧಿಕೃತ ಖಾತೆಗೆ ಹಣ ಬಾರದೆ ಎಲ್ಲಿ ಹೋಯಿತು ಎಂದು ಫಲಾನುಭವಿಗಳು ಚಿಂತಿಸುವಂತಾಯಿತು. ಈ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟವಾಯಿತು. ಆಧಾರ್ ಲಿಂಕ್‌ನಿಂದಾಗಿರುವ ಸಮಸ್ಯೆಗಳನ್ನು ನಾವು ಬಹಳ ಹತ್ತಿರದಿಂದ ನೋಡಿದ್ದೇವೆ. ವೋಟರ್ ಐಡಿ ಲಿಂಕ್ ಕಡ್ಡಾಯವೇನೂ ಅಲ್ಲ ಎನ್ನುತ್ತಾರೆ. ಒಮ್ಮೆ ಜಾರಿಗೆ ಬಂದ ಮೇಲೆ ಜನರು ಇದನ್ನು ಕಡ್ಡಾಯವೆಂದೇ ಭಾವಿಸುತ್ತಾರೆ. ಮುಂದೆ ಸರ್ಕಾರವೇ ಅಧಿಕೃತವಾಗಿ ಕಡ್ಡಾಯ ಮಾಡಬಹುದು. ನರೇಗಾ ಕಾರ್ಡ್ ಡಿಲೀಟ್ ಆದಂತೆಯೇ ವೋಟರ್ ಕಾರ್ಡ್ ಕೂಡ ಡಿಲೀಟ್ ಆಗಬಹುದು. ಆಧಾರ್ ಕಾರ್ಡ್‌ನಲ್ಲಿರುವ ಹೆಸರು ವೋಟರ್ ಐಡಿಗೆ ಹೋಲಿಕೆಯಾಗದಿದ್ದರೆ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಯೇ ಹೆಚ್ಚಿದೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಾಜೇಂದ್ರನ್.

ಆಧಾರ್ ಪ್ಯಾನ್ ಲಿಂಕಿಂಗ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರಲ್ಲಿ ಒಬ್ಬರಾದ ಮತ್ತು ಡೇಟಾಮೀಟ್ ಸಂಸ್ಥಾಪಕರಾದ ತೇಜೇಶ್ ಜಿ ಎನ್ ಅವರು ತಮ್ಮ ಆತಂಕಗಳನ್ನು ’ನ್ಯಾಯಪಥ’ದೊಂದಿಗೆ ಹಂಚಿಕೊಂಡರು. “ಎಲ್ಲರನ್ನೂ ಮತದಾನದಲ್ಲಿ ಒಳಗೊಳ್ಳಬೇಕು ಎಂಬುದು ನಮ್ಮ ಗುರಿಯಾಗಿದೆ. ಚುನಾವಣೆ ಬಂದಾಗಲೆಲ್ಲ ಆದಷ್ಟು ವೋಟ್ ಮಾಡಿ ಎಂದು ಜಾಗೃತಿ ಮೂಡಿಸುತ್ತೇವೆ. ಅಮೆರಿಕದಂತಹ
ದೇಶದಲ್ಲಿ ಪರಿಸ್ಥಿತಿ ಬೇರೆ ರೀತಿ ಇದೆ. ಮತದಾರರೆಂದು ಸಾಬೀತು ಮಾಡದೆ ಅಮೆರಿಕದಲ್ಲಿ ಮತ ಚಲಾಯಿಸಲು ಸಾಧ್ಯವಾಗಲ್ಲ. ಅಮೆರಿಕದ್ದು ರಿಜೆಕ್ಷನ್ ಪ್ರೊಸೆಸ್ ಆದರೆ ನಮ್ಮದು ಸೆಲೆಕ್ಷನ್ ಪ್ರೊಸೆಸ್. ಮನೆಯಿಂದ ಹೊರಬಂದು ಮತ ಚಲಾಯಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ವೋಟರ್ ಲಿಸ್ಟ್‌ನಲ್ಲಿ ಹೆಸರು ಇಲ್ಲದಿದ್ದರೆ ಅದನ್ನು ಸಮಸ್ಯೆ ಎಂದು ನಾವು ಭಾವಿಸುತ್ತೇವೆ. ಮತದಾನ ಮಾಡಿದವರಿಗೆ ಶಾಯಿಯನ್ನು ಹಾಕುತ್ತಾರೆ. ಅದು ಸುಲಭಕ್ಕೆ ಅಳಿಸಿ ಹೋಗುವುದಿಲ್ಲ. ಹೀಗಾಗಿ ಡಬಲ್ ವೋಟಿಂಗ್ ಸಂಖ್ಯೆ ತುಂಬಾ ಕಡಿಮೆ ಇದೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ಮತದಾನದಿಂದ ಹೊರಗುಳಿಯುವವರ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ವೋಟರ್ ಲಿಂಕ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಿದ್ದರಿಂದ ರೇಷನ್ ತೆಗೆದುಕೊಳ್ಳಲು ಆಗದೆ ಒದ್ದಾಡಿದವರನ್ನು ನೋಡಿದ್ದೇವೆ” ಎನ್ನುತ್ತಾರೆ ತೇಜೇಶ್.


“ವೋಟರ್ ಐಡಿ ಜೊತೆಗೆ ಆಧಾರ್ ಜೋಡಣೆಯು ಖಾಸಗಿತನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಯಾರುಯಾರಿಗೆ ವೋಟ್ ಹಾಕುತ್ತಿದ್ದರು ಎಂಬುದು ಈವರೆಗೆ ಗೌಪ್ಯವಾಗಿರುತ್ತಿತ್ತು. ಸದ್ಯಕ್ಕೆ ಮತಗಟ್ಟೆ ಆಧಾರದಲ್ಲಿ ಮಾತ್ರ ಯಾರಿಗೆ ಎಷ್ಟು ಮತ ಹೋಗಿದೆ ಎಂದು ಊಹಿಸಬಹುದಿತ್ತು. ಒಂದು ಓಣಿಯಲ್ಲಿರುವ ಜನ ಯಾವ ಪಕ್ಷಕ್ಕೆ ವೋಟು ಹಾಕಿದ್ದಾರೆಂದು ಹೇಳಬಹುದಿತ್ತು. ಈ ಓಣಿಯಲ್ಲಿರುವವರು ನಮಗೆ ವೋಟ್ ಹಾಕಿಲ್ಲ, ನಾನೇಕೆ ಸಹಾಯ ಮಾಡಲಿ ಎಂದು ಕೇಳುವುದನ್ನು ನಾವು ನೋಡಿದ್ದೇವೆ. ಈ ರೀತಿಯ ರಾಜಕಾರಣ ಮತಗಟ್ಟೆ ಮಟ್ಟಕ್ಕೆ, ಗ್ರಾಮ ಪಂಚಾಯಿತಿ ಮಟ್ಟಕ್ಕೆ ಸೀಮಿತವಾಗಿತ್ತು. ಆದರೆ
ಆಧಾರ್ ಲಿಂಕ್ ಮಾಡಿದರೆ ಯಾವ ಆಧಾರ್ ಐಡಿ ಯಾರಿಗೆ ವೋಟ್ ಹಾಕಿದೆ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ತಿಳಿಯಬಹುದಾದ ಸಮಸ್ಯೆ ಇದೆ. ಇದರಿಂದ ಮತದಾನದ ಗೌಪ್ಯತೆ ಹಾಳಾಗುತ್ತದೆ. ಪಕ್ಷಪಾತ ಧೋರಣೆ ಮೊದಲು ಸಣ್ಣ ಘಟಕಗಳ ಮಟ್ಟದಲ್ಲಿತ್ತು. ಈಗ ರಾಷ್ಟ್ರಮಟ್ಟಕ್ಕೆ ಹೋಗುತ್ತದೆ. ವೋಟರ್ ಐಡಿ ಜೊತೆಗೆ ಆಧಾರ್ ಇದ್ದರೆ ಫೋನ್ ನಂಬರ್ ಕೂಡ ಲಭ್ಯವಾಗುತ್ತದೆ. ನಂಬರ್ ಲೀಕ್ ಆಗಿ ಮತದಾರರಿಗೆ ಕಾಲ್ ಮಾಡಿರುವ ಘಟನೆ ಪಾಂಡಿಚೆರಿಯಲ್ಲಿ ನಡೆದಿರುವುದು ಈಗ ಕೋರ್ಟ್ ಮೆಟ್ಟಿಲೇರಿದೆ” ಎಂದು ವಿವರಿಸುತ್ತಾರೆ ತೇಜೇಶ್.

ಐಟಿ ಫಾರ್ ಚೇಂಜ್‌ನ ಕೆ.ಗುರು ಅವರು ನಮ್ಮೊಂದಿಗೆ ಮಾತನಾಡಿ ಆಧಾರ್ ಕಾರ್ಡ್‌ನ ಮಿತಿಯನ್ನು ವಿವರಿಸಿದರು. “ಪೌರತ್ವಕ್ಕೆ ಆಧಾರ್ ಕಾರ್ಡ್ ಆಧಾರವಲ್ಲ. ನೀವು ಇಲ್ಲಿ ವಾಸವಿದ್ದರೆ ಆಧಾರ್ ಕಾರ್ಡ್ ಸಿಗುತ್ತದೆ. ಮತದಾನ ಕೇವಲ ಪೌರತ್ವಕ್ಕೆ ಮಾತ್ರ ಸಿಗಬೇಕು. ಆಧಾರ್ ಮೂಲಕ ಪೌರರಲ್ಲದವರಿಗೂ ಮತದಾನದ ಹಕ್ಕು ಸಿಗುವ ಸಾಧ್ಯತೆ ಇದೆ. ಮತ್ತೊಂದು ಅಪಾಯವೆಂದರೆ ಡಿಜಿಟಲ್ ಜಗತ್ತಿನಲ್ಲಿ ನಾವು ಹೀಗೆ ಲಿಂಕ್ ಮಾಡುತ್ತಾ ಹೋದಷ್ಟು ನಮ್ಮ ಪೌರತ್ವದ ಸೆಕ್ಯುರಿಟಿ ಕಡಿಮೆಯಾಗುತ್ತದೆ. ನಮ್ಮ ವಿವರಗಳು ಗೌಪ್ಯವಾಗಿ ಇರಲು ಸಾಧ್ಯವಾಗದು” ಎನ್ನುತ್ತಾರೆ.

ಆಧಾರ್ ಜೋಡಣೆಯ ವಿಚಾರವಾಗಿ ತಜ್ಞರು ಹೇಳುವ ಮಾತುಗಳನ್ನು ಕೇಳಿದರೆ ಇದರಿಂದ ಉಂಟಾಗಬಹುದಾದ ಅಪಾಯಗಳು, ಸರ್ಕಾರ ಪ್ರತಿಪಾದಿಸುತ್ತಿರುವ ಉಪಯೋಗಗಳನ್ನು
ಮೀರಿಸುವಂತಿವೆ ಎಂಬುದು ಸ್ಪಷ್ಟವಾಗುತ್ತದೆ. ಆದುದರಿಂದ ಇದರ ಬಗ್ಗೆ ವಿಸ್ತೃತ ಸಾರ್ವಜನಿಕ ಚರ್ಚೆಯ ಅಗತ್ಯವಿದೆ.


ಇದನ್ನೂ ಓದಿ: Explainer: ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡುವ ಮಸೂದೆಯ ಸಾಧಕ-ಬಾಧಕಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...