ಮಧ್ಯಪ್ರದೇಶದ ಬಿಜೆಪಿ ನಾಯಕನೊಬ್ಬ ಆದಿವಾಸಿ ಬುಡಕಟ್ಟು ಸಮುದಾಯದ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನುಷ ಘಟನೆ ಕಳೆದ ವಾರ ಸಿಧಿ ಜಿಲ್ಲೆಯಲ್ಲಿ ವರದಿಯಾಗಿತ್ತು. ಈ ವಿಚಾರವಾಗಿ ಭಾನುವಾರ ಸ್ಥಳೀಯ ಶಾಸಕರ ವಿರುದ್ಧ ಬಿಜೆಪಿಯ ಸಿದ್ಧಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿವೇಕ್ ಕೋಲ್ ವಾಗ್ದಾಳಿ ನಡೆಸಿದ್ದರು. ಈ ಘಟನೆಯನ್ನು ಖಂಡಿಸಿ ವಿವೇಕ್ ಕೋಲ್ ಅವರು ಪಕ್ಷವನ್ನು ತೊರೆದಿದ್ದಾರೆ.
ಬುಡಕಟ್ಟು ಯುವಕನೊಬ್ಬನ ಮೇಲೆ ಪ್ರವೇಶ ಶುಕ್ಲಾ ಎಂಬ ಬಿಜೆಪಿ ಮುಖಂಡ ಮೂತ್ರ ವಿಸರ್ಜಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆಯಿಂದ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತ್ರಸ್ತರನ್ನು ಮನೆಗೆ ಕರೆದು ಅವರ ಪಾದಗಳನ್ನು ತೊಳೆಯುವ ನಾಟಕೀಯ ಬೆಳವಣಿಗೆ ನಡೆಸಿದರು.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ವಿವೇಕ್ ಕೋಲ್, ”ನನ್ನ ರಾಜೀನಾಮೆ ಅಂತಿಮವಾಗಿದೆ. ನಾನು ಎರಡು ದಿನಗಳ ಹಿಂದೆ ಸಂಸದ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಅವರಿಗೆ ಇ-ಮೇಲ್ ಮಾಡಿದ್ದೇನೆ. ನಾನು ಅದನ್ನು ಬಿಜೆಪಿಯ ಪದಾಧಿಕಾರಿಗಳ ವಾಟ್ಸಾಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ್ದೇನೆ. ನನ್ನ ರಾಜೀನಾಮೆಯನ್ನು ಹಿಂಪಡೆಯುವಂತೆ ಪಕ್ಷವು ನನ್ನನ್ನು ಕೇಳಿಲ್ಲ” ಎಂದು ಸಿದ್ಧಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್ ಕೋಲ್ ಹೇಳಿದ್ದಾರೆ.
ಕೋಲ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ”ಕಳೆದ ಎರಡು ವರ್ಷಗಳಿಂದ ಸ್ಥಳೀಯ ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಅವರ ಕೃತ್ಯಗಳಿಂದ ತನಗೆ ನೋವುಂಟಾಗಿದೆ. ಇದರಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳ ಭೂಮಿಯನ್ನು ಅತಿಕ್ರಮಣ ಮತ್ತು ಸಿಧಿಯಲ್ಲಿನ ಇತರ ದೌರ್ಜನ್ಯಗಳು ಸೇರಿವೆ” ಎಂದು ಬರೆದಿದ್ದಾರೆ.
”ಈಗ ಅವರ ”ಪ್ರತಿನಿಧಿ” ಒಬ್ಬ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿದ್ದಾನೆ, ಇದು ಇನ್ನಷ್ಟು ನೋವು ತಂದಿದೆ” ಎಂದು ಕೋಲ್ ಹೇಳಿದ್ದಾರೆ.
ಆರೋಪಿಗೂ ಶಾಸಕ ಶುಕ್ಲಾಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ ಕೋಲ್ ಅವರು ಪತ್ರದಲ್ಲಿ ಶುಕ್ಲಾ ಮತ್ತು ಆರೋಪಿಯ ಸಂಬಂಧದ ಬಗ್ಗೆ ವಿವರಿಸಿ, ಹಲವು ಆರೋಪಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಸಿಧಿ ಮೂತ್ರ ವಿಸರ್ಜನೆ ಪ್ರಕರಣ ಟೀಕಿಸಿ ಕಾರ್ಟೂನ್ ಟ್ವೀಟ್: ಗಾಯಕಿ ನೇಹಾ ಸಿಂಗ್ ವಿರುದ್ಧ FIR ದಾಖಲು


