Homeಮುಖಪುಟತೀಸ್ತಾ ಎಂಬ ಬತ್ತಲಾರದ ನದಿ

ತೀಸ್ತಾ ಎಂಬ ಬತ್ತಲಾರದ ನದಿ

- Advertisement -
- Advertisement -

ಈಚೆಗೆ ಶೆಮೆಜ್ ವಿ.ಎಂ. ಎಂಬ ಕೇರಳ ಮೂಲದ ಫೇಸ್‌ಬುಕ್ ಗೆಳೆಯರೊಬ್ಬರು, ತೀಸ್ತಾ ಅವರ ಬಗ್ಗೆ ಬರೆದ ಟಿಪ್ಪಣಿಯನ್ನು ಓದಿದೆ. ಅದೊಂದು ಕತೆಯ ರೂಪದಲ್ಲಿದೆ. ಅವರಿಗೆ ಈ ಕತೆಯನ್ನು ಅವರ ಗೆಳೆಯರೊಬ್ಬರು ಹೇಳಿದ್ದು. ಈ ಕತೆ ಪ್ರಾಚೀನ ತಮಿಳಿನ ಮಣಿಮೇಖಲೈ ಎಂಬ ಮಹಾಕಾವ್ಯದ ನಾಯಕಿ ಮಣಿಮೇಖಲೈಗೆ ಸಂಬಂಧಿಸಿದ್ದು. ಮಣಿಮೇಖಲೈ, ತಮಿಳುನಾಡಿನ ಪ್ರಸಿದ್ಧ ವಣಿಕ ಕುಲದ ಕೋವಲನ್ ಮತ್ತು ಮಾಧವಿಯವರ ಮಗಳು. ಪ್ರಭುತ್ವದಿಂದ ಬೇಟೆಗೆ ಒಳಗಾದ ಬಲಿಪಶುಗಳ ಪರವಾಗಿ ನಿಲ್ಲುವ ನ್ಯಾಯಪ್ರಜ್ಞೆಯಿದ್ದ ಹುಡುಗಿ. ಇವಳ ಬಗ್ಗೆ ಆ ಸೀಮೆಯ ದೊರೆಯ ಮಗ ಉದಯಕುಮಾರನಿಗೆ ಸುದ್ದಿ ಹೋಗುತ್ತದೆ. ಆತ ದೊಡ್ಡ ವ್ಯಾಪಾರಿಗಳ ಹಿತರಕ್ಷಕ. ಮಣಿಮೇಖಲೈಗೆ ಎಲ್ಲ ಧರ್ಮಗಳ ಬಗ್ಗೆ, ಅವನ್ನು ಅನುಸರಿಸುವ ಜನರ ಬಗ್ಗೆ ಗೌರವ. ಆದರೆ ಅವಳನ್ನು ದ್ವೇಷಿಸುವ ರಾಜಕುಮಾರ ಉದಯಕುಮಾರನಿಗೆ ತನ್ನ ಜತೆ ಬದುಕುತ್ತಿರುವ ಇತರ ಧರ್ಮೀಯರ ಬಗ್ಗೆ ಅಸಹನೆ. ಬಲಿಪಶುಗಳನ್ನು ಸದಾ ರಕ್ಷಿಸುವ ಮಣಿಮೇಖಲೈಗೆ ಶಿಕ್ಷಿಸಲು ಉದಯಕುಮಾರನು ಜನರನ್ನು ಬಿಟ್ಟು ಆಕೆಯನ್ನು ಹುಡುಕಿಸುತ್ತಾನೆ. ಮಣಿಮೇಖಲೈ ತನ್ನನ್ನು ಹುಡುಕುತ್ತಿರುವ ಉದಯಕುಮಾರನಿಂದ ತಪ್ಪಿಸಿಕೊಳ್ಳಲು ತನ್ನ ತಾಯ್ನಾಡಿನ ನ್ಯಾಯದೇವತೆಗಳಲ್ಲಿ ಬೇಡುತ್ತಾಳೆ. ಆ ನ್ಯಾಯದೇವತೆಗಳು ಆಕೆಗೆ ಭಯಮೀರಲು ಕೆಲವು ಮಂತ್ರಗಳನ್ನು ಹೇಳಿಕೊಡುವರು. ಒಬ್ಬ ದೇವತೆ ಆಕೆಗೆ ಶತ್ರುಗಳು ಬಂದಾಗ ತಪ್ಪಿಸಿಕೊಳ್ಳಲು ಕಾಣದಂತೆ ಅದೃಶ್ಯವಾಗುವ ಮಂತ್ರ ಹೇಳಿಕೊಡುವಳು. ಅವಳು ಇನ್ನೊಂದು ವೇಷದಲ್ಲಿ ಮುಖದೋರುವಂತೆ ಮಾಡುವುದು; ಸದಾ ಅನ್ನದಿಂದ ತುಂಬಿರುವ ಒಂದು ಮಾಂತ್ರಿಕ ಬಟ್ಟಲನ್ನು ಕೊಡುವುದು ಹೀಗೆ. ಮಣಿಮೇಖಲೈ ಇರುವ ದ್ವೀಪಕ್ಕೆ ಉದಯಕುಮಾರನೂ ಅವನ ಮಂತ್ರಿ ದೊರೆಗಳು ಆಕೆಯನ್ನು ಬಂಧಿಸಲು ಮುಟ್ಟಿದಾಗ, ಮಣಿಮೇಖಲೈ ಅಂತರ್ಧಾನವಾಗುತ್ತಾಳೆ. ಈ ಕಥೆಯನ್ನು ಹೇಳುವ ಶೆಮೆಜ್ ಅವರ ಗೆಳೆಯ, ’ಇದೊಂದು ಕೃತಜ್ಞತೆಯಿಲ್ಲದ ಜಗತ್ತು. ಯಾರಿಗಾದರೂ ಯಾರು ಯಾಕೆ ನೆರವಾಗಬೇಕು. ಈ ಕೃತಜ್ಞತೆಯಿಲ್ಲದ ಜನರು ಇಂತಹ ನೆರವಿಗೆ ಅರ್ಹರೇ?’ ಎಂದು ಕತೆಯನ್ನು ಮುಗಿಸುತ್ತಾರೆ.

ಈ ಕತೆಯನ್ನು ಓದಿದ ಮೇಲೆ, ಹೌದಲ್ಲ, ಯಾವ ಜನರಿಗಾಗಿ ತೀಸ್ತಾ ನೆರವಾಗುತ್ತಿದ್ದಾರೊ, ಆ ಜನರಿಗೆ ತೀಸ್ತಾ ಬಗ್ಗೆ ಗೊತ್ತಿದೆಯೇ? ಗೊತ್ತಿದ್ದರೆ ಅವರು ಯಾವ ಬಗೆಯಲ್ಲಿ ಆಕೆಗೆ ಸ್ಪಂದಿಸುತ್ತಿದ್ದಾರೆ? ಗುಜರಾತಿನ ದಂಗೆಯ ಬಲಿಪಶುಗಳು ತೀಸ್ತಾ ಅವರಿಗೆ ಹೇಗೆ ಸ್ಪಂದಿಸುತ್ತಿದ್ದಾರೆಯೊ ನಮಗೆ ತಿಳಿದಿಲ್ಲ. ಆದರೆ ಜನರಿಗಾಗಿ ಹೋರಾಟ ಮಾಡುವ ಚಳವಳಿಗಾರರ ಬಗ್ಗೆ ಸಮಾಜದಲ್ಲಿ-ಕೊನೆಯ ಪಕ್ಷ ಅವರ ಹೋರಾಟದ ಫಲಾನುಭವಿಗಳಲ್ಲಿ- ಕೃತಜ್ಞತೆಯಿಲ್ಲದ ನಿರಾಸಕ್ತಿ ನಿರ್ಲಿಪ್ತತೆ ಬಂದಿದೆಯೇ ಎಂಬ ಪ್ರಶ್ನೆ ಕಾಡಿತು. ಇದು ಇತ್ತೀಚಿಗೆ ಅನಾಥರಂತೆ ಸತ್ತುಹೋದ ಪಟ್ಟಾಭಿರಾಮ ಸೋಮಯಾಜಿ ಅವರ ಬಗ್ಗೆ ಕೂಡ ಅನಿಸಿತು. ಪಟ್ಟಾಭಿಯವರು ಕಾಲೇಜಿಗೆ ರಜೆ ಹಾಕಿ, ಸ್ವಂತ ಖರ್ಚು ಇಟ್ಟುಕೊಂಡು ಪ್ರಯಾಣ ಮಾಡಿಬಂದು ಈ ನಾಡಿನ ಎಷ್ಟೊಂದು ಚಳುವಳಿಗಳಲ್ಲಿ ಭಾಗವಹಿಸಿದರು. ಅವರ ಸಾವಿಗೆ ನಾಡಿನ ಜನ, ಇದೂ ಒಂದು ಸಾವು ಎಂಬಂತೆ ನಿರ್ಲಿಪ್ತವಾಗಿ ಮಿಡಿದರೇನು? ನನಗೆ ಅನೇಕ ಸಲ ಮುಸ್ಲಿಮ್ ಸಮುದಾಯವು ತನ್ನ ನಾಯಕರನ್ನು ಶೋಧಿಸಿಕೊಳ್ಳಬೇಕಿದೆ ಎಂದು ಅನಿಸುತ್ತದೆ. ಅದು ಟಿಪ್ಪುಸುಲ್ತಾನ್‌ಗಿಂತ ಮುಖ್ಯವಾಗಿ ಮೊದಲು ಶಿಕ್ಷಕಿ ಫಾತಿಮಾಶೇಖರನ್ನು, ಅಲಿಘರ್ ವಿಶ್ವವಿದ್ಯಾಲಯ ಸ್ಥಾಪಿಸಿದ ಸರ್ ಸೈಯದ್ ಅವರನ್ನು ತನ್ನ ಸಾಂಸ್ಕೃತಿಕ ನಾಯಕರೆಂದು ಪರಿಭಾವಿಸಬೇಕು ಅನಿಸುತ್ತದೆ. ಮುಸ್ಲಿಮರಿಗಾಗಿ ಜೀವನಪೂರಾ ಹೋರಾಡಿದ ಗಾಂಧಿಯವರನ್ನು ಮುಸ್ಲಿಮ್ ಸಮುದಾಯವು ತನ್ನ ಹಿತರಕ್ಷಕ ಎಂದು ಭಾವಿಸಿದಂತಿಲ್ಲ. ಗುಜರಾತಿನ ಹತ್ಯಾಕಾಂಡಗಳ ವಿರುದ್ಧ ಪ್ರಭುತ್ವದ ವಿರುದ್ಧ ಹೋರಾಡಿ, ಜೈಲುಗಳಲ್ಲಿ ಕೊಳೆಯುತ್ತಿರುವ ಸಂಜೀವಭಟ್, ಕುಮಾರ್, ಉಮರ್ ಖಾಲಿದ್; ಕೋರ್ಟುಕಟ್ಟೆ ಸುತ್ತುತ್ತಿರುವ ತೀಸ್ತಾ; ಕೊಲೆಯಾದ ಗೌರಿ, ಪನ್ಸಾರೆ ಮೊದಲಾದವರು ಪ್ರಜ್ಞಾವಂತ ಮುಸ್ಲಿಮರಿಗೆ ಗೊತ್ತಿರುವ ಹೆಸರೇ ಹೊರತು, ಸಮುದಾಯಕ್ಕಲ್ಲ. ಇದು ಅಜ್ಞಾನದ ಫಲವೊ, ಸರಿಯಾದ ನಾಯಕರನ್ನು ಗುರುತಿಸಿಕೊಳ್ಳಲಾಗದ ರಾಜಕೀಯ ಪ್ರಜ್ಞೆಯ ಕೊರತೆಯೊ, ಕೃತಘ್ನತೆಯೊ? ದಲಿತ, ರೈತ, ಮುಸ್ಲಿಂ, ಮಹಿಳೆ, ಬುಡಕಟ್ಟು- ಹೀಗೆ ನಿರ್ದಿಷ್ಟ ಸಮುದಾಯಕ್ಕೆ ಜಾತ್ಯತೀತವಾಗಿ ಧರ್ಮಾತೀತವಾಗಿ ಕೇವಲ ನ್ಯಾಯಪ್ರಜ್ಞೆಯಿಂದ ಹೋರಾಡುವ ಚಳವಳಿಗಾರರಿಗೆ, ಆ ಸಮುದಾಯಗಳು ಮಾತ್ರ ನೈತಿಕ ಬೆಂಬಲ ಕೊಡಬೇಕು ಎಂಬುದು ಇಲ್ಲಿನ ಅರ್ಥವಲ್ಲ. ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ, ಸೋದರತೆಯಲ್ಲಿ ನಂಬಿಕೆಯಿಟ್ಟ ಎಲ್ಲರೂ ಬೆಂಬಲಿಸಬೇಕಾದ ಸಂಗತಿಯಿದು. ಚಂದ್ರಶೇಖರ್ ರಾವಣ್ ಅವರ ಮೇಲಿನ ಹಲ್ಲೆಯು ಕೇವಲ ದಲಿತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ದುಷ್ಟಪ್ರಭುತ್ವದ ವಿರುದ್ಧ ಬಲಿಪಶುವಾಗುವ ಜನರ ಪರವಾಗಿ ಚಿಂತಿಸುವ, ಕೆಲಸ ಮಾಡುವ ನಮಗೆಲ್ಲ ಸಂಬಂಧಿಸಿದ್ದು.

ಸಂಜೀವಭಟ್, ಉಮರ್ ಖಾಲಿದ್

ಈಚೆಗೆ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲವಾಡ್ ಅವರಿಗೆ ಗುಜರಾತ್ ಕೋರ್ಟು ಜಾಮೀನನ್ನು ರದ್ದುಗೊಳಿಸಿ ಕೂಡಲೇ ಶರಣಾಗಬೇಕೆಂದು ವಿಧಿಸಿತು. ಈ ನಡುವೆ ಸುಪ್ರೀಂಕೋರ್ಟು ಇದಕ್ಕೆ ಒಂದು ವಾರಕಾಲ ತಡೆನೀಡಿತು. ವಾರದ ಬಳಿಕ ಮತ್ತೇನಾಗುವುದೊ ತಿಳಿಯದು. ಆದರೆ ತೀಸ್ತಾ ಅವರ ಬಂಧನ-ಜಾಮೀನು-ಬಿಡುಗಡೆಗಳ ಈ ನಾಟಕೀಯ ಆವರ್ತನೆ ಒಂದು ಬಗೆಯಲ್ಲಿ ನಮಗೆ ಮಾಮೂಲಿ ಸುದ್ದಿಯಾಗುತ್ತಿದೆ. ರೈತರ ಆತ್ಮಹತ್ಯೆಯಂತೆ, ಮತೀಯವಾದಿಗಳಿಂದ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಕೊಡುವ ಕರೆಯಂತೆ, ಮಹಿಳಾ ಕ್ರೀಡಾಪಟುವಿಗೆ ಆಗುವ ಲೈಂಗಿಕ ಕಿರುಕುಳದಂತೆ, ಜಾತಿವಾದಿಗಳಿಂದ ದಲಿತರ ಮೇಲೆ ನಡೆವ ಹಲ್ಲೆಯಂತೆ. ಸಮಾಜದ ಹಿಂಸೆ ಮತ್ತು ಅದರ ವಿರುದ್ಧ ಹೋರಾಡುವವರಿಗೆ ಪ್ರಭುತ್ವ ಕೊಡುವ ಶಿಕ್ಷೆಗಳಿಗೆ ಸಮಾಜವು ತನ್ನ ಸಂವೇದನಾಶೀಲತೆ ಕಳೆದುಕೊಳ್ಳುವುದು, ಮಾಮೂಲಿ ಎಂದು ಭಾವಿಸುವುದು ಘೋರವಾದ ಸಂಗತಿ. ಇದು ಪರೋಕ್ಷವಾಗಿ ಪ್ರಭುತ್ವಕ್ಕೆ ತನ್ನ ಕ್ರೌರ್ಯವನ್ನು ಮುಂದುವರಿಸಲು ನಾಗರಿಕ ಸಮಾಜ ಕೊಡುವ ಸಮ್ಮತಿ ಕೂಡ. ಮಾರುಕಟ್ಟೆ ಸಂಸ್ಕೃತಿಯು ಲಾಭವನ್ನು ದೊಡ್ಡ ಮೌಲ್ಯವಾಗಿಸಿದೆ ಮತ್ತು ವ್ಯಕ್ತಿವಾದವನ್ನು ದೊಡ್ಡ ಸಂಗತಿಯಾಗಿಸಿದೆ. ಇದರ ಪರಿಣಾಮವೆಂದರೆ, ಮತ್ತೊಬ್ಬರ ನೋವಿಗೆ ಮಿಡಿವ ಗುಣವೇ ಕಡಿಮೆಯಾಗುತ್ತಿರುವುದು. ಇದು ಕೂಡ ಪ್ರಭುತ್ವದ ಕ್ರೌರ್ಯವನ್ನು ಒಂದು ಬಗೆಯಲ್ಲಿ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸಂಗತಿಯಾಗಿದೆ.

ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ರಕ್ಷಣೆಯನ್ನು ಜುಲೈ 19ರವರೆಗೆ ವಿಸ್ತರಿಸಿದ ಸುಪ್ರೀಂ

ಇದಕ್ಕೆ ಪ್ರತಿಯಾದ ಘಟನೆಗಳೂ ನಡೆಯುತ್ತಿವೆ. ಈಚೆಗೆ ಯಲಬುರ್ಗ ತಾಲೂಕಿನ ಹಿರೇವಂಕಲಕುಂಟಾ ಎಂಬ ಹಳ್ಳಿಯಲ್ಲಿ ಒಬ್ಬ ಶಿಕ್ಷಕನ ನಿವೃತ್ತಿಯಾದಾಗ ನಡೆದ ಕಾರ್ಯಕ್ರಮದಲ್ಲಿ ಐದು ಸಾವಿರ ಜನ ಸೇರಿದ್ದರು. ಅದು ಸಾಹಿತ್ಯ ಸಮ್ಮೇಳನದ ಹಾಗೆ ಜರುಗಿತು. 40 ವರ್ಷಗಳಿಂದ ಸದರಿ ಶಿಕ್ಷಕನಿಂದ ಕಲಿತ ಶಿಷ್ಯರು ಅವರ ಪೋಷಕರು ದೇಶದ ಎಲ್ಲ ಮೂಲೆಗಳಿಂದ ಬಂದಿದ್ದರು. ಅವರು ಶಿಕ್ಷಕನಿಗೆ ಊರಿಗೆ ಮರಳಿಹೋಗದಂತೆ ಅಲ್ಲೇ ಮನೆ ಕಟ್ಟಿಸಿಕೊಡುತ್ತಿದ್ದಾರಂತೆ. ಕೃತಜ್ಞತೆಯು ಒಂದು ಮೌಲ್ಯವಾಗಿ ಈ ಸಮಾಜದಿಂದ ಕಣ್ಮರೆಯಾಗಿಲ್ಲ. ಆದರೆ ಪ್ರಭುತ್ವದ ವಿರುದ್ಧ ಸಿಟ್ಟು, ಜನರ ಪರವಾಗಿ ಕೆಲಸ ಮಾಡುವವರ ಬಗೆಗಿನ ಕೃತಜ್ಞತೆಗಳು, ಹೊರಹೊಮ್ಮುವ ಸೂಕ್ತ ಕಾಲಕ್ಕಾಗಿ ಕಾಯುತ್ತವೆಯೇ? ಕೃತಜ್ಞತೆ ಸಲ್ಲಿಕೆಯು ಪ್ರಭುತ್ವದ ವಿರುದ್ಧದ ಪ್ರತಿರೋಧದ ಭಾಗವಾದಾಗ, ಉತ್ಕಟವಾಗಿ ಪ್ರಕಟವಾಗದೆ ಹೋಗುತ್ತದೆಯೇ? ಹೋರಾಟಗಾರರಿಗೆ ಅನ್ನದ ಬಟ್ಟಲನ್ನು, ಅದೃಶ್ಯ ಶಕ್ತಿಯನ್ನು ಜನರು ಕೊಡದೆ ಅವರು ಕೇವಲ ನಿರಾಶಾದಾಯಕ ಸನ್ನಿವೇಶದಲ್ಲಿ ಹೋರಾಡುತ್ತಿದ್ದಾರೆ ಎಂಬುದು ನಮ್ಮ ತಪ್ಪು ಗ್ರಹಿಕೆಯೇ? ವಿಚಾರ ಮಾಡಬೇಕು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read