Homeಕರ್ನಾಟಕಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ: ಶಾಸಕ ಮಂಜುನಾಥ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ: ಶಾಸಕ ಮಂಜುನಾಥ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

- Advertisement -
- Advertisement -

ಕೋಲಾರದ ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮುಳಬಾಗಿಲ ಮೀಸಲು ಕ್ಷೇತ್ರದ ಮಾಜಿ ಶಾಸಕ ಜಿ ಮಂಜುನಾಥ್ (ಕೊತ್ತೂರು ಮಂಜುನಾಥ್) ಅವರಿಗೆ ಜಾತಿ ಸಿಂಧುತ್ವ ಪ್ರಕರಣದಲ್ಲಿ ಮತ್ತೆ ಹಿನ್ನಡೆಯಾಗಿದೆ. ಕೋಲಾರ ಜಿಲ್ಲಾಧಿಕಾರಿ ನೇತೃತ್ವದ ಜಾತಿ ಪರಿಶೀಲನಾ ಸಮಿತಿಯ ನಿರ್ಣಯ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿಯ ನಿರ್ಣಯ ಪ್ರಶ್ನಿಸಿ ಜಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಬುಧವಾರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪ್ರಕಟಿಸಿದೆ.

ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಕ್ಷೇತ್ರವನ್ನು ಕಸಿದುಕೊಳ್ಳುವ ಮೂಲಕ ಮಂಜುನಾಥ್‌ ಪರಿಶಿಷ್ಟ ಜಾತಿಗಳ ವರ್ಗಕ್ಕೆ ವಂಚಿಸಿದ್ದಾರೆ. ಇದು ಸಂವಿಧಾನಕ್ಕೆ ಎಸಗಿದ ಮೋಸ. ಹೀಗಾಗಿ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ವರದಿಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ. ಮಂಜುನಾಥ್‌ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕು ಎಂದು ಆದೇಶದಲ್ಲಿ ಹೇಳಿದೆ.

ಹೈಕೋರ್ಟ್‌ನ ಆದೇಶದಿಂದ ಮಂಜುನಾಥ್ ಅವರ ಹಾಲಿ ಶಾಸಕ ಸ್ಥಾನಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಗೆದ್ದಾಗ ಪಡೆದುಕೊಂಡಿದ್ದ ಸೌಲಭ್ಯಗಳನ್ನು ಪೂರ್ವಾಯನ್ವಯವಾಗುವಂತೆ ಅವರಿಂದ ವಾಪಸ್ ಪಡೆದುಕೊಳ್ಳಬಹುದಾಗಿದೆ. ಒಂದೊಮ್ಮೆ ಇದೇ ವಿಚಾರವಾಗಿ ಅವರ ವಿರುದ್ಧ ಹೈಕೋರ್ಟ್‌ನಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟರೆ 6 ವರ್ಷಗಳ ಕಾಲ ಚುನಾವಣಾ ಸ್ಪರ್ಧೆಗೆ ನಿರ್ಬಂಧ ಸೇರಿದಂತೆ ಕೆಲವು ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಬಾರ್ ಅಂಡ್ ಬೆಂಚ್ ವರದಿ ತಿಳಿಸಿದೆ.

ಮಂಜುನಾಥ್ ಅವರು ಬುಡಗ ಜಂಗಮ ಜಾತಿಗೆ ಸೇರಿಲ್ಲ. ಅವರು ಬೈರಾಗಿ ಜಾತಿಗೆ ಸೇರಿದವರು ಎಂದು ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ನಿರ್ಣಯ ಕೈಗೊಂಡಿತ್ತು. ಇದನ್ನು ಮಂಜುನಾಥ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಬುಡಗ ಜಂಗಮ ಪರಿಶಿಷ್ಟ ಜಾತಿಯಾದರೆ, ಬೈರಾಗಿ ಒಬಿಸಿ ಪ್ರವರ್ಗ-1ಕ್ಕೆ ಸೇರಿದೆ.

ಪ್ರಕರಣದ ಹಿನ್ನೆಲೆ : ಜಿ ಮಂಜುನಾಥ್ 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಜೆಡಿಎಸ್ ಪರಾಜಿತ ಅಭ್ಯರ್ಥಿ ಮುನಿನಂಜಪ್ಪ ಜಾತಿ ಪ್ರಮಾಣದ ಸಿಂಧುತ್ವ ಪ್ರಶ್ನಿಸಿದ್ದರು. ಈ ಪ್ರಕರಣ ತಹಶೀಲ್ದಾರ್, ಜಿಲ್ಲಾಧಿಕಾರಿ, ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆಗೊಳಪಟ್ಟಿತ್ತು. ಅಂತಿಮವಾಗಿ ಹೈಕೋರ್ಟ್ ಮಂಜುನಾಥ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಇದರ ವಿರುದ್ಧ ಮಂಜುನಾಥ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿ, ಜಾತಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಜಾತಿ ಪರಿಶೀಲನಾ ಸಮಿತಿಯ ನಿರ್ಣಯದ ಬಗ್ಗೆ ಆಕ್ಷೇಪವಿದ್ದರೆ ಪುನಃ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದರಂತೆ ಜಾತಿ ಪರಿಶೀಲನಾ ಸಮಿತಿಯ ನಿರ್ಣಯವನ್ನು ಮಂಜುನಾಥ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದೀಗ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ : ಆದೇಶ ಪಾಲಿಸದ ರಾಜ್ಯ ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...