Homeಮುಖಪುಟರಾಮಮಂದಿರ ಉದ್ಘಾಟನೆ: ಎಡಪಕ್ಷಗಳ ’ಸೈದ್ಧಾಂತಿಕ ಬದ್ಧತೆ’ ಮತ್ತು ಕಾಂಗ್ರೆಸ್‌ನ ಸಂದಿಗ್ಧತೆ

ರಾಮಮಂದಿರ ಉದ್ಘಾಟನೆ: ಎಡಪಕ್ಷಗಳ ’ಸೈದ್ಧಾಂತಿಕ ಬದ್ಧತೆ’ ಮತ್ತು ಕಾಂಗ್ರೆಸ್‌ನ ಸಂದಿಗ್ಧತೆ

- Advertisement -
- Advertisement -

ಹಿಂದೂ ಬಹುಸಂಖ್ಯಾತ ದೇಶವಾದ ಭಾರತದ ದೇವರುಗಳಲ್ಲಿ ರಾಮನನ್ನು ಹಲವು ರೀತಿಯಲ್ಲಿ ಹಿಂದೂ ಧರ್ಮೀಯರು ಆರಾಧಿಸುತ್ತಾರೆ. ವಿವಿಧ ಭಾಷೆಯ, ವಿವಿಧ ಜನಸಮುದಾಯಗಳು ಹಲವು ರೀತಿನೀತಿಗಳಲ್ಲಿ ರಾಮನನ್ನು ಒಳಗೊಂಡಿವೆ; ಮಂದಿರಗಳನ್ನು ಕಟ್ಟಿ ಪೂಜಿಸುವವರೂ ಇದ್ದಾರೆ. ’ಜೈ ಸೀತಾರಾಮ್’ ಎಂದು ಪರಸ್ಪರ ಹೇಳುವ, ಯಾವ ಧರ್ಮವನ್ನೂ ವಿರೋಧಿಸದ ’ರಾಮಭಕ್ತ’ರ ಸಂಖ್ಯೆ ದೇಶದಲ್ಲಿ ಕಡಿಮೆ ಏನಿಲ್ಲ. ಆದರೆ, ಸಂಘಪರಿವಾರ ಹಾಗೂ ಬಿಜೆಪಿ, ರಾಮನಿಗೆ ಹಿಂದುತ್ವದ ಲೇಪ ಹಚ್ಚುವಲ್ಲಿ, ಅದರ ಮೇಲೆ ರಾಜಕೀಯ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇದೀಗ ಮಸೀದಿಯ ಜಾಗದಲ್ಲಿ ಮಂದಿರವೂ ತಲೆ ಎತ್ತಿ ನಿಂತಿದೆ.

1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಸಂಘರಿವಾರದ ನೇತೃತ್ವದಲ್ಲಿ ಬಾಬ್ರಿ ಮಸೀದಿ ಕೆಡವಲಾಗಿತ್ತು. ಒಂದು ಕಡೆ ವಿವಾದಿತ ಜಾಗದಲ್ಲಿ ಮಸೀದಿ ಇರಬೇಕಾ ಅಥವಾ ಅದನ್ನು ನೆಲಸಮ ಮಾಡಿ ರಾಮ ಮಂದಿರ ನಿರ್ಮಾಣ ಮಾಡಬೇಕಾ ಎಂಬ ಬಗ್ಗೆ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದೆ. ಮತ್ತೊಂದು ಕಡೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು, ಜನರನ್ನು ಪೋಲರೈಸ್ ಮಾಡಿ, ಬಿಜೆಪಿ, ಇಂದು ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ. ಇಂತಹ ಕೋಮು ವಿಭಜನೆಯ ಅಜೆಂಡಾಗಳಿಂದಲೇ ಎರಡೇ ಎರಡು ಲೋಕಸಭಾ ಸ್ಥಾನಗಳಿಂದ, ಕಳೆದ ಚುನಾವಣೆಯಲ್ಲಿ 303 ಗೆಲ್ಲುವ ಹಂತಕ್ಕೆ ಬಂದುನಿಂತಿದೆ. ಆದ್ದರಿಂದ, ಅಯೋಧ್ಯೆಯ ರಾಮಮಂದಿರಕ್ಕೆ ಇರುವ ಧಾರ್ಮಿಕ ಗುರುತಿಗಿಂತಲೂ, ರಾಜಕೀಯ ವಿವಾದ ಹೆಚ್ಚಿದೆ.

ಇದೇ ತಿಂಗಳ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಯಾಗುತ್ತಿರುವ ರಾಮಮಂದಿರದ ಮೇಲೆ ಎಲ್ಲ ರಾಜಕೀಯ ಪಕ್ಷಗಳ ಚಿತ್ತ ನೆಟ್ಟಿದ್ದು, ಲೋಕಸಭೆ ಚುನಾವಣೆಯೂ ಸಮೀಪದಲ್ಲೇ ಇರುವುದರಿಂದ ಈ ಕಾರ್ಯಕ್ರಮ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ’ಕೊಟ್ಟ ಮಾತಿನಂತೆ ಮಂದಿರ ನಿರ್ಮಿಸಿದ್ದೇವೆ’ ಎಂದು ಹೇಳುತ್ತಿರುವ ಬಿಜೆಪಿ, ’ರಾಮನ ಅಲೆ’ಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವ ಆತ್ಮವಿಶ್ವಾಸದಲ್ಲಿದೆ. ಆದರೆ, ಬಿಜೆಪಿ ನೇತೃತ್ವದಲ್ಲಿ ಉದ್ಘಾಟನೆಯಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ವಿಪಕ್ಷಗಳು ಇಕ್ಕಟ್ಟಿಗೆ ಸಿಲುಕಿವೆ.

ರಾಮದೇವರ ಪ್ರಾಣ ಪ್ರತಿಷ್ಠಾಪನೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಅಲ್ಲಿನ ದೇವಾಲಯದ ಟ್ರಸ್ಟ್‌ನ ಪದಾಧಿಕಾರಿಗಳು, ದೇಶದ ಪ್ರಮುಖ ರಾಜಕಾರಣಿಗಳಿಗೆ ಹಾಗೂ ಅತಿ ಗಣ್ಯ ವ್ಯಕ್ತಿಗಳಿಗೆ ಈಗಾಗಲೇ ಆಹ್ವಾನ ನೀಡಿದ್ದಾರೆ. ಬಿಜೆಪಿ ನಾಯಕರನ್ನು ಆಹ್ವಾನಿಸುವ ಜತೆಗೆ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎನ್‌ಸಿಪಿ, ಎಸ್‌ಪಿ, ಬಿಎಸ್‌ಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರಿಗೆ ಆಹ್ವಾನ ಪತ್ರಿಕೆ ಕಳುಹಿಸಿದೆ. ಯಾವುದೋ ಜಾಗದಲ್ಲಿ ಮಂದಿರ ನಿರ್ಮಿಸಿದ್ದಿದ್ದರೆ ವಿಪಕ್ಷಗಳು ಭಾಗವಹಿಸುವ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಮಸೀದಿ ಕೆಡವಿ ಮಂದಿರ ನಿರ್ಮಾಣ ಮಾಡಿರುವುದರಿಂದ, ಜಾತ್ಯತೀತತೆಯ ಬಗ್ಗೆ ಇನ್ನೂ ಸ್ವಲ್ಪ ನಂಬಿಕೆ ಉಳಿಸಿಕೊಂಡಿರುವ ಹಲವು ಪಕ್ಷಗಳು ಈಗ ಗೊಂದಲಕ್ಕೆ ಸಿಲುಕಿವೆ.

ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಿದರೆ ಧಾರ್ಮಿಕ ಅಲ್ಪಸಂಖ್ಯಾತ ಹಾಗೂ ಇತರೆ ಸಮುದಾಯ ವಿರೋಧ ಕಟ್ಟಿಕೊಳ್ಳುವ ಆತಂಕ ಒಂದು ಕಡೆಯಾದರೆ, ಕಾರ್ಯಕ್ರಮದಲ್ಲಿ ಭಾಗವಹಿಸದೇ ಇದ್ದರೆ ಹಿಂದುತ್ವದ ಮೋಡಿಗೆ ಬಲಿಯಾಗಬಹುದಾದ ಬಹುಸಂಖ್ಯಾತ ಹಿಂದೂಗಳ ಮತ ಕಳೆದುಕೊಳ್ಳುವ ಭಯ ಮತ್ತೊಂದು ಕಡೆಯಲ್ಲಿದೆ. ಮುಖ್ಯವಾಗಿ, ಬಿಜೆಪಿ ಮತ್ತು ಸಂಘಪರಿವಾರವು ಚುನಾವಣೆ ಪ್ರಚಾರದಲ್ಲಿ ’ಹಿಂದೂ ವಿರೋಧಿ’ ಪಕ್ಷಗಳು ಎಂದು ’ಅಪಪ್ರಚಾರ’ ಮಾಡುವ ಸಾಧ್ಯತೆಯೂ ಇರುವುದರಿಂದ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು, ಅಳೆದೂತೂಗಿ ‘ಭಾಗವಹಿಸಲ್ಲ’ ಎಂದು ಹೇಳಿದೆವೆ. ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಹಲವು ಬಾರಿ ಯೋಚಿಸಿವೆ. ಆದರೆ, ಎಲ್ಲರಿಗಿಂತಲೂ ಮೊದಲು ಎಡ ಪಕ್ಷಗಳು ಮತ್ತು ಕೇರಳ ಕಾಂಗ್ರೆಸ್ ಘಟಕ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದೆ ಇರುವ ನಿರ್ಧಾರಕ್ಕೆ ಬಂದಿದ್ದವು.

ಕಾಂಗ್ರೆಸ್‌ನ ನಿಲುವೇನು?

ರಾಮ ಮಂದಿರ ಉದ್ಘಾಟನೆಗೆ ಟ್ರಸ್ಟ್ ಪದಾಧಿಕಾರಿಗಳು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಆರಂಭದಲ್ಲಿ ಸ್ಪಷ್ಟನೆ ನೀಡಲಿಲ್ಲ. ’ರಾಮ ಮಂದಿರವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ’ ಎಂದು ಟೀಕೆ ಮಾಡುತ್ತಿರುವ ಕಾಂಗ್ರೆಸ್, ಈ ವಿಚಾರದಲ್ಲಿ ಪಕ್ಷದ ನಿಲುವೇನು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡು, ಅಂತಿಮವಾಗಿ ಕಳೆದವಾರ ‘ಭಾಗವಹಿಸುವುದಿಲ್ಲ’ ಎಂದು ಹೇಳಿದೆ.

ಜನವರಿ 22ರಂದು ನಡೆಯಲಿರುವ ಅಯೋಧ್ಯೆಯಲ್ಲಿ ರಾಮ ಮಂದಿರದ ರಾಮದೇವರ ಪ್ರಾಣ ಪ್ರತಿಷ್ಠಾಪನೆಗೆ ಇಬ್ಬರು ಹಿರಿಯ ನಾಯಕರು ಹಾಜರಾಗುತ್ತಾರೆಯೇ ಎಂದು ’ಸೂಕ್ತ ಸಮಯದಲ್ಲಿ’ ನಿರ್ಧರಿಸುವುದಾಗಿ ಕಾಂಗ್ರೆಸ್ ಪಕ್ಷ ಡಿಸೆಂಬರ್ 29ರಂದು ಹೇಳಿತ್ತು. ಸಮಾರಂಭಕ್ಕೆ ಸೋನಿಯಾ ಗಾಂಧಿ ಮತ್ತು ಖರ್ಗೆ ಅವರನ್ನು ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಖಚಿತಪಡಿಸಿದ್ದರು.

ನಿರ್ಧಾರ ತೆಗೆದುಗೊಳ್ಳಲು ನಮಗೆ ಕಾಲಾವಕಾಶ ನೀಡಿ: ತರೂರ್

ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ತಿರಸ್ಕರಿಸುವ ಸಿಪಿಐ (ಎಂ) ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಡಬ್ಲ್ಯುಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಸದಸ್ಯ ಮತ್ತು ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್, “ಎಡಪಕ್ಷಗಳಿಗೆ ಯಾವುದೇ ಧರ್ಮದಲ್ಲಿ ನಂಬಿಕೆಯಿಲ್ಲದ ಕಾರಣ ಈ ವಿಷಯದ ಬಗ್ಗೆ ಅವರು ಸುಲಭವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಕಾಂಗ್ರೆಸ್ ಪಕ್ಷದಲ್ಲಿ ಸಿಪಿಐ(ಎಂ) ಅಥವಾ ಬಿಜೆಪಿಯ ಯಾವುದೇ ಸಿದ್ಧಾಂತಗಳಿಲ್ಲ, ನಾವು ಹಿಂದುತ್ವವನ್ನು ರಾಜಕೀಯ ಸಿದ್ಧಾಂತವಾಗಿ ನೋಡುತ್ತಿದ್ದೇವೆ. ಅದು ಹಿಂದೂ ಧರ್ಮದೊಂದಿಗೆ ಸಂಪರ್ಕ ಹೊಂದಿಲ್ಲ. ಆದ್ದರಿಂದ ನಾವು ಸಿಪಿಐ(ಎಂ) ಅಥವಾ ಬಿಜೆಪಿಯವರಂತಲ್ಲ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ನಮಗೆ ಕಾಲಾವಕಾಶ ನೀಡಿ” ಎಂದು ಹೇಳಿದ್ದರು.

ಆದರೆ, ಕೇರಳ ಕಾಂಗ್ರೆಸ್ ಘಟಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿತ್ತು. ಈ ಕುರಿತು ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ಸಂಸದ ಕೆ. ಮುರಳೀಧರನ್, “ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸದಂತೆ ಪಕ್ಷದ ರಾಜ್ಯ ಘಟಕವು ರಾಷ್ಟ್ರೀಯ ನಾಯಕತ್ವವನ್ನು ಒತ್ತಾಯಿಸಿದೆ” ಎಂದು ಹೇಳಿದರು.

“ಈ ಬಗ್ಗೆ ರಾಜ್ಯ ಘಟಕವು ರಾಷ್ಟ್ರೀಯ ನಾಯಕತ್ವಕ್ಕೆ ತನ್ನ ನಿಲುವನ್ನು ತಿಳಿಸುವ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ರಾಜ್ಯ ಘಟಕದ ನಿಲುವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ತಿಳಿಸಲಾಗಿದೆ” ಎಂದು ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದರು.

’ಭಾರತ ನ್ಯಾಯ ಯಾತ್ರೆಯಲ್ಲಿ ರಾಹುಲ್

22ಕ್ಕೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವಿದೆ. ಅದಕ್ಕೂ ಮೊದಲೇ ಜನವರಿ 14ರಿಂದ ರಾಹುಲ್ ಗಾಂಧಿ ’ಭಾರತ್ ನ್ಯಾಯ ಯಾತ್ರೆ’ ಕೈಗೊಂಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ’ಭಾರತ್ ಜೋಡೋ ಯಾತ್ರೆ’ ನಡೆದ ಒಂದು ವರ್ಷದ ನಂತರ, ಗಾಂಧಿ ಜನವರಿಯಿಂದ ಮಣಿಪುರ-ಮುಂಬೈಗೆ ’ಭಾರತ್ ಜೋಡೋ ನ್ಯಾಯ ಯಾತ್ರೆ’ ಆರಂಭಿಸಿದ್ದಾರೆ. ಆ ಮೂಲಕ ರಾಹುಲ್ ರಾಮಮಂದಿರ ಉದ್ಘಾಟನೆಯಿಂದ ದೂರ ಉಳಿಯಲು ಮೊದಲೇ ನಿರ್ಧರಿಸಿದ್ದರು ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಹೇಳಿದ್ದೇನು?

“ನಮ್ಮ ಸರ್ಕಾರ ಮತ್ತು ಪಕ್ಷ ರಾಮ ಮಂದಿರದ ಪರವಾಗಿದೆ. ರಾಮ ಮಂದಿರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ನಾವು ರಾಮಮಂದಿರದ ಪರವಾಗಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿ ತಮ್ಮ ಸರ್ಕಾರವಿದ್ದು, ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ, ಆಹ್ವಾನ ಬಂದರೆ ಆಮೇಲೆ ನೋಡೋಣ” ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸ್ಪಷ್ಟ ಕಾರಣ ತಿಳಿಸದ ದೀದಿ

ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದೆ ಇರಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಅವರು ತಮ್ಮ ಅಂತಿಮ ನಿರ್ಧಾರವನ್ನು ತಿಳಿಸುವಲ್ಲಿ ಕಾಂಗ್ರೆಸ್‌ ರೀತಿಯೇ ಇವರೂ ಸಾಕಷ್ಟು ಸಮಯ ತೆಗೆದುಕೊಂಡರು.

ದೀದಿ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಆದರೆ, ಅವರು ಆಡಳಿತಾರೂಢ ಬಿಜೆಪಿಯ ರಾಜಕೀಯ ನಿರೂಪಣೆಯ ಜಾಲದೊಳಗೆ ನಾವು ಸಿಲುಕುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿತ್ತು. 2024ರ ಲೋಕಸಭೆ ಚುನಾವಣೆಗೆ ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ಬಳಸಿಕೊಳ್ಳಲು ನೋಡುತ್ತಿದೆ ಎಂಬುದನ್ನು ಅವರು ಮನಗಂಡಿದ್ದು, ಬಿಜೆಪಿಯ ತಾಳಕ್ಕೆ ತಕ್ಕಂತೆ ತಾವು ಕುಣಿಯಬಾರದು ಎಂದು ಟಿಎಂಸಿ ನಿರ್ಧರಿಸಿದೆ ಎನ್ನಲಾಗಿದೆ. ಅಂತಿಮವಾಗಿ ಅವರು ಸಮಾರಂಭದಲ್ಲಿ ಭಾಗವಹಿಸದೆ ಇರಲು ತೀರ್ಮಾನಿಸಿದ್ದಾರೆ.

ಇಂಡಿಯಾ ಒಕ್ಕೂಟದಲ್ಲಿ ಭಿನ್ನ ನಿಲುವು

ವಿಪಕ್ಷಗಳ ’ಇಂಡಿಯಾ’ ಒಕ್ಕೂಟದ ಭಾಗವಾಗಿರುವ ಸಿಪಿಐ(ಎಂ) ಪಕ್ಷದ ಯಾವುದೇ ಮುಖಂಡರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಈಗಾಗಲೇ ತಮ್ಮ ನಿರ್ಧಾರ ತಿಳಿಸಿದ್ದಾರೆ. ಆದರೆ, ಹಲವು ಪಕ್ಷಗಳು ಭಿನ್ನ ನಿಲುವು ತೆಗೆದುಕೊಂಡಿವೆ. ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರು ಆಹ್ವಾನ ಬಂದರೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮಂದಿರ ಉದ್ಘಾಟನೆಗೆ ಹಾಜರಾಗಲು ಸಿದ್ಧ ಎಂದು ಘೋಷಿಸಿದ ಮೊದಲ ಇಂಡಿಯಾ ಒಕ್ಕೂಟದ ಪ್ರಮುಖರಾಗಿದ್ದಾರೆ. ಆ ನಂತರ ಅವರು, ‘ಉದ್ಘಾಟನೆ ಸಮಾರಂಭ ಮುಗಿದ ನಂತರ ಅಯೋಧ್ಯೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಕೂಡ ಭಾಗವಹಿಸದೆ ಇರಲು ಮೊದಲೇ ನಿರ್ಧರಿಸಿದ್ದರು ಎನ್ನಲಾಗಿದೆ.

ಡಿಸೆಂಬರ್ 19ರಂದು ನಡೆದ ಇಂಡಿಯಾ ಮೈತ್ರಿಕೂಟದ ನಾಲ್ಕನೇ ಸಭೆಯಲ್ಲಿ ರಾಮ ಮಂದಿರದ ವಿಷಯ ಚರ್ಚೆಗೆ ಬಂದಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಿತ್ರಪಕ್ಷಗಳಿಗೆ ಎಚ್ಚರಿಕೆ ನೀಡಿದ್ದು, ಭಾರತೀಯ ಜನತಾ ಪಕ್ಷವು ತನ್ನ ಅನುಕೂಲಕ್ಕಾಗಿ ರಾಜಕೀಯ ನಿರೂಪಣೆಯನ್ನು ಹೊಂದಿಸಲು ಪ್ರಯತ್ನಿಸುತ್ತಿದೆ. ವಿರೋಧ ಪಕ್ಷಗಳು ಅದನ್ನು ಎದುರಿಸಲು ಸಮರ್ಥವಾಗಿರಬೇಕು ಎಂದು ಸೂಚ್ಯವಾಗಿ ಹೇಳಿದ್ದರು.

ಇದನ್ನೂ ಓದಿ: ಶ್ರೀರಾಮಚಂದ್ರ ಯಾರೊಬ್ಬರ ಸ್ವತ್ತಲ್ಲ; ಬಿಜೆಪಿಯವರು ಭ್ರಮೆಯಲ್ಲಿದ್ದಾರೆ: ಕಾಂಗ್ರೆಸ್

“ಇದೆಲ್ಲ ರಾಜಕೀಯ; ಬಿಜೆಪಿಯ ಕಾರ್ಯಕ್ರಮಕ್ಕೆ ಬರಲು ಯಾರು ಬಯಸುತ್ತಾರೆ? ಇದು ರಾಷ್ಟ್ರೀಯ ಕಾರ್ಯಕ್ರಮವಲ್ಲ. ಇದು ಬಿಜೆಪಿಯ ಕಾರ್ಯಕ್ರಮ, ಇದು ಬಿಜೆಪಿಯ ರ್‍ಯಾಲಿ… ಬಿಜೆಪಿ ಕಾರ್ಯಕ್ರಮ ಮುಗಿದನಂತರ ನಾವು ಅಯೋಧ್ಯೆಗೆ ಭೇಟಿ ನೀಡುತ್ತೇವೆ” ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಜನವರಿ 22ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ತನ್ನ ಯಾವುದೇ ಕಾರ್ಯಕರ್ತರು ಭಾಗವಹಿಸುವುದಿಲ್ಲ ಎಂದು ಘೋಷಿಸಿದೆ.

ಆಹ್ವಾನ ತಿರಸ್ಕರಿಸಿದ ಎಡ ಪಕ್ಷಗಳು

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ರಾಮದೇವರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ತಿರಸ್ಕರಿಸಿದ ಮೊದಲ ರಾಜಕಾರಣಿಯಾಗಿದ್ದಾರೆ.

ಡಿಸೆಂಬರ್ 26ರಂದು ಮಾತನಾಡಿದ ಯೆಚೂರಿ, “ಈ ಉದ್ಘಾಟನಾ ಸಮಾರಂಭದಲ್ಲಿ ಏನಾಗುತ್ತಿದೆ ಎಂದರೆ, ಅದನ್ನು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ. ಪ್ರಧಾನ ಮಂತ್ರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಇತರರು ಸಾಂವಿಧಾನಿಕ ಸ್ಥಾನಗಳನ್ನು ಹೊಂದಿದ್ದಾರೆ. ಇದು ಜನರ ಧಾರ್ಮಿಕ ನಂಬಿಕೆಯನ್ನು ನೇರವಾಗಿ ರಾಜಕೀಯಗೊಳಿಸುವುದಾಗಿದೆ. ಇದು ಸಂವಿಧಾನಕ್ಕೆ ಹೊಂದಿಕೆಯಾಗುವುದಿಲ್ಲ ಹೇಳಿದ್ದಾರೆ.

ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ) ಭಾಗವಹಿಸುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕಿ ಬೃಂದಾ ಕಾರಟ್ ಅವರು ಸಹ ಹೇಳಿದ್ದಾರೆ.

“ನಮ್ಮ ಪಕ್ಷವು ಧಾರ್ಮಿಕ ನಂಬಿಕೆಗಳನ್ನು ಗೌರವಿಸಲಿದೆ” ಎಂದಿದ್ದು, “ಧರ್ಮದೊಂದಿಗೆ ರಾಜಕೀಯ ಬೆರೆಸುವುದು ಸರಿಯಲ್ಲ, ಬಿಜೆಪಿ ರಾಮ ಮಂದಿರ ಉದ್ಘಾಟನೆಯನ್ನು ಸಂಪೂರ್ಣವಾಗಿ ರಾಜಕೀಯಗೊಳಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಒಟ್ಟಾರೆ ದೇಶದಲ್ಲಿ ಇಂದು ಶ್ರೀರಾಮ ದೇವರಾಗಿ ಮಾತ್ರ ಉಳಿದಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಸಂಘಪರಿವಾರ ಮತ್ತು ಬಿಜೆಪಿ ರಾಮನ ಹೆಸರನ್ನು ಬಳಸಿಕೊಂಡು ಇಂದು ರಾಜಕೀಯವಾಗಿ ಬಲಾಢ್ಯವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಮಂದಿರ ಉದ್ಘಾಟನೆಯಾಗುತ್ತಿದ್ದು, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದು ಅಧರ್ಮದ ಸ್ಮಾರಕ: ಶಿವಸುಂದರ್

“ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ತಟಸ್ಥವಾಗಿಲ್ಲ, ಮಂದಿರ ವಿಚಾರದಲ್ಲಿ ಬಿಜೆಪಿ ನಡೆಸುತ್ತಿರುವ ರಾಜಕೀಯಕ್ಕೆ ನಮ್ಮ ವಿರೋಧವಿದೆ. ಶ್ರೀರಾಮಮಂದಿರ ಉದ್ಘಾಟನೆಗೆ ನಮ್ಮ ಬೆಂಬಲ ಇದೆ. ನಾವು ರಾಮನ ವಿರೋಧಿಗಳಲ್ಲ, ಸಮಾರಂಭಕ್ಕೆ ಹೋಗುವುದರಲ್ಲಿ ತಪ್ಪಿಲ್ಲ ಎಂದು ಹೇಳಿದೆ” ಎಂದು ಚಿಂತಕ, ಸಾಮಾಜಿಕ ಕಾರ್ಯಕರ್ತ ಶಿವಸುಂದರ್ ಅಸಮಾಧಾನ ವ್ಯಕ್ತಪಡಿಸಿದರು.

’ನ್ಯಾಯಪಥ’ದ ಜತೆಗೆ ಮಾತನಾಡಿದ ಅವರು, “ಧರ್ಮ ಖಾಸಗಿ ವಿಚಾರ, ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಸಿಪಿಐ (ಎಂ) ಹೇಳಿದೆ. ಆದರೆ, ಅಲ್ಲಿ ಮಸೀದಿ ಕೆಡವಿ ಮಂದಿರ ಕಟ್ಟುತ್ತಿದ್ದಾರೆ. ಅದರಲ್ಲಿ ಭಕ್ತಿ ಇಲ್ಲ; ಅದೊಂದು ಅಧರ್ಮ ಸ್ಮಾರಕ, ದೇಶದ ಸಂವಿಧಾನದ ಮೇಲೆ ನಡೆದ ದಾಳಿ ಎಂಬುದನ್ನು ವಿಪಕ್ಷಗಳು ಒತ್ತಿ ಹೇಳಬೇಕು” ಎಂದರು.

“ಕಾಂಗ್ರೆಸ್‌ಗೆ ಹಿಂದೂ ಓಟ್ ಬ್ಯಾಂಕ್ ಕಳೆದುಕೊಳ್ಳುವ ಭಯ ಇದೆ; ಆ ಪಕ್ಷ ಯಾವತ್ತಿಗೂ ಜಾತ್ಯತೀತವಾಗಿ ಇಲ್ಲ. ಮಸೀದಿ ಧ್ವಂಸಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಅಂದು ಬೀಗ ತೆಗೆದು ಪೂಜೆ ಮಾಡಲು ರಾಜೀವ್ ಗಾಂಧಿ ಅವಕಾಶ ನೀಡಿದ್ದರು. ಆಗ ಬಿಜೆಪಿಗೆ ಇದ್ದಿದ್ದ ಎರಡು ಸೀಟು ಮಾತ್ರ; ಮಸೀದಿ ಧ್ವಂಸ ಮಾಡುವಾಗ ಕಾಂಗ್ರೆಸ್‌ಗೆ 460 ಸೀಟ್ ಇದ್ದಾಗಲೂ ಅವರು ಜಾತ್ಯತೀತರಾಗಿ ಇರಲಿಲ್ಲ. 2019ರಲ್ಲಿ ಎಸ್‌ಪಿ ಸೇರಿದಂತೆ ವಿವಿಧ ಪಕ್ಷಗಳು ಅಯೋಧ್ಯೆಯಿಂದಲೇ ಪ್ರಚಾರ ಆರಂಭಿಸಿದ್ದರು. ಬಿಜೆಪಿಗರಿಗಿಂತ ಭವ್ಯವಾದ ರಾಮಮಂದಿರವನ್ನು ನಾವು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದರು. ವಿಪಕ್ಷಗಳೆ ಈ ವಿಚಾರದಲ್ಲಿ ಪೈಪೋಟಿಗೆ ಬಿದ್ದಿವೆ” ಎಂದರು.

“ಮಸೀದಿ ಕೆಡವಿ ಮಂದಿರ ನಿರ್ಮಿಸಿದ್ದಾರೆ ಎಂದು ಹೇಳುವ ಸ್ಪಷ್ಟತೆ ಜಾತ್ಯತೀತ ಎಂದು ಹೇಳಿಕೊಳ್ಳುವ ವಿರೋಧ ಪಕ್ಷಗಳಿಗೆ ಇಲ್ಲ. ಇದೊಂದು ಅಧರ್ಮ ಸ್ಮಾರಕವಾಗಿದ್ದು, ಸಾಮಾನ್ಯ ಜನರು ಹಾಗೂ ಹಿಂದೂಗಳೇ ಇದನ್ನು ತಿರಸ್ಕರಿಸಬೇಕು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂದಿರವನ್ನಾಗಿ ಮಾತ್ರ ನೋಡುತ್ತಿರುವುದೇ ಸಮಸ್ಯೆ: ಶ್ರೀಪಾದ್ ಭಟ್

“ಬಾಬ್ರಿ ಮಸೀದಿಯನ್ನು ಕೆಡವಿ ಈಗ ಅಲ್ಲಿ ಮಂದಿರ ಕಟ್ಟಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಹಾಗೂ ಸಂವಿಧಾನದ ಜಾತ್ಯತೀತ ತತ್ವಕ್ಕೆ ಕೊಟ್ಟ ಪೆಟ್ಟು. ಮಸೀದಿ ಕೆಡವದೆ ಬೇರೆ ಎಲ್ಲಾದರೂ ಮಂದಿರ ಕಟ್ಟಿದ್ದರೆ ಇದಕ್ಕೆ ವಿರೋಧ ಇರುತ್ತಿರಲಿಲ್ಲ. ಅದಕ್ಕಾಗಿಯೇ ಯಾರೂ ಸಮಾರಂಭದಲ್ಲಿ ಭಾಗವಹಿಸಬಾರದು. ಆಹ್ವಾನ ತಿರಸ್ಕರಿಸಿರುವ ಕಮ್ಯುನಿಸ್ಟರು ಕೂಡಾ ಇದನ್ನೇ ಹೇಳಬೇಕಿತ್ತು. ಮಂದಿರವನ್ನು ಬೇರೆ ಜಾಗದಲ್ಲಿ ಕಟ್ಟಿದ್ದರೆ ಆಗ ಇವರ ಹೇಳಿಕೆ ಒಪ್ಪಬಹುದಾಗಿತ್ತು. ಇದು ಆರ್‌ಎಸ್‌ಎಸ್‌ನ ’ನಾಜಿಸಮ್’ ಆಗಿರುವುದರಿಂದ ಯಾವ ಪಕ್ಷಗಳೂ ಹೋಗುವುದಕ್ಕೆ ಆಗುವುದಿಲ್ಲ” ಎಂದು ಚಿಂತಕ, ಶಿಕ್ಷಣ ತಜ್ಞ ಬಿ. ಶ್ರೀಪಾದ್ ಭಟ್ ಹೇಳಿದರು.

ಬಿ.ಶ್ರೀಪಾದ್ ಭಟ್

’ನ್ಯಾಯಪಥ’ದ ಜತೆಗೆ ಮಾತನಾಡಿದ ಅವರು, “ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗುವುದು ಬೇಡ, ಕಾಂಗ್ರೆಸ್ ಮೊದಲಿನಿಂದಲೂ ಮೃದು ಹಿಂದುತ್ವವನ್ನು ಪಾಲಿಸಿಕೊಂಡು ಬಂದಿದೆ. ಕಾಂಗ್ರೆಸ್ ಕಾಲದಲ್ಲೇ ಮಸೀದಿ ಕೆಡವಲಾಗಿದೆ. ಓಟ್ ಬ್ಯಾಂಕ್ ಕಾರಣಕ್ಕಾಗಿ ಭಾಗವಹಿಸುವ ನಿರ್ಧಾರ ಮಾಡಬಾರದು. ಎಲ್ಲರೂ ಇದನ್ನೂ ಮಂದಿರವನ್ನಾಗಿ ಮಾತ್ರ ನೋಡುತ್ತಿರುವುದೇ ಸಮಸ್ಯೆಯಾಗಿದೆ; ಇದು ಅದಕ್ಕೂ ಮೀರಿದ್ದು” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...