ಮುಂಬೈಯ ಜಲ್ಗಾಂವ್ ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ಕೊರೊನಾ ರೋಗಿಯೊಬ್ಬರು ಆಸ್ಪತ್ರೆಯ ಶೌಚಾಲಯದಲ್ಲಿ 8 ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ‘ನಿರ್ಲಕ್ಷ್ಯ’ಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯು ಸರ್ಕಾರಿ ಆಸ್ಪತ್ರೆಗಳಲ್ಲಿರುವ ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದೆ.
ಮೃತಪಟ್ಟ 82 ವರ್ಷದ ಮಹಿಳೆ ಹಾಗೂ ಅವರ ಸೊಸೆಗೆ ಕೊರೊನಾ ಸೋಂಕು ತಗುಲಿದ್ದರಿಂದ ಜಲ್ಗಾಂವ್ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯು ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ಪ್ರಕಟಿಸಿದ ಎಂಟು ದಿನಗಳ ನಂತರ ಶವ ಶೌಚಾಲಯದೊಳಗೆ ಪತ್ತೆಯಾಗಿದೆ.
ಭೂಸಾವಲ್‌ನಲ್ಲಿ ವಾಸಿಸುತ್ತಿದ್ದ ಮಹಿಳೆ, ಅವರ ಮಗ ಹಾಗೂ ಸೊಸೆಗೆ ಮೇ ಕೊನೆಯ ವಾರದಲ್ಲಿ ವೈರಸ್ ಇರುವುದು ಪತ್ತಯಾಗಿತ್ತು. ಮಹಿಳೆ ಮತ್ತು ಸೊಸೆ ಜಲ್ಗಾಂವ್ ಸಿವಿಲ್ ಆಸ್ಪತ್ರೆಗೆ ಹೋಗಿದ್ದರೂ, ಐಸಿಯು ಹಾಸಿಗೆಗೆ ಕಾಯುತ್ತಾ ಮೇ 31 ರಂದು ಉಸಿರಾಟದ ಸಮಸ್ಯೆಯಾಗಿ ಸೊಸೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮಹಿಳೆಯ ಮೊಮ್ಮಗ, ಐಸಿಯು ಹಾಸಿಗೆ ಲಭ್ಯವಿಲ್ಲದ ಕಾರಣ ಅವರು ಆಸ್ಪತ್ರೆಯ ರಿಸೆಪ್ಷನ್ ನಲ್ಲಿ ಆರು ಗಂಟೆಗಳ ಕಾಲ ಕಾಯಬೇಕಾಗಿ ಬಂದಿತ್ತು ಎಂದು ಆರೋಪಿಸಿದ್ದಾರೆ.
ಇದಕ್ಕಿಂತಲೂ ಅಘಾತಕಾರಿಯಾದುದ್ದು ಎಂದರೆ ಮಯಸ್ಸಾದ ಮಹಿಳೆಯೂ ಶೌಚಾಲಯದಲ್ಲಿ ಮೃತಪಟ್ಟಿದ್ದರೂ ಸಹ ಎಂದು ಜೂನ್ 10 ರವರೆಗೆ ಆಸ್ಪತ್ರೆಯ ಸಿಬ್ಬಂದಿ ತಿಳಿದಿರಲೇ ಇಲ್ಲ ಎಂಬುದಾಗಿದೆ.
ಸಿವಿಲ್ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು, ಕೊರೊನಾ ರೋಗಿಗಳೊಂದಿಗೆ ವ್ಯವಹರಿಸಲು ಅರೆವೈದ್ಯಕೀಯ ಸಿಬ್ಬಂದಿ ಹೆದರುತ್ತಾರೆ. “ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸಲು ಹಿಂಜರಿಯುತ್ತಿರುವುದರಿಂದ ವೈದ್ಯಕೀಯ ಸಿಬ್ಬಂದಿಯೊಂದಿಗೆ ವಾಗ್ವಾದಗಳು ನಡೆದಿವೆ” ಎಂದು ಹೇಳಿದ್ದಾರೆ.
ಕೆಳಮಹಡಿಯಲ್ಲಿ ಕೇವಲ ಐದು ಶೌಚಾಲಯಗಳಿವೆ ಎಂದಿರುವ ಜಿಲ್ಲಾಧಿಕಾರಿ ಧಾಕಾನೆ, “ಇದರರ್ಥ ಆಸ್ಪತ್ರೆಯಿಂದ ಯಾರೂ ಎಂಟು ದಿನಗಳವರೆಗೆ ಶೌಚಾಲಯವನ್ನು ಸ್ವಚ್ಛಗೊಳಿಸಲು ಹೋಗಲಿಲ್ಲ. ಒಳಗಿನಿಂದ ಬರುವ ದುರ್ವಾಸನೆ ಬರುತ್ತಿರುವುದರಿಂದ ಇತರ ರೋಗಿಗಳು ಅಧಿಕಾರಿಗಳನ್ನು ಕರೆಸಿದರು” ಎಂದು ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಡೀನ್ ಡಾ ಬಿ ಎಸ್ ಖೈರ್ ಅವರನ್ನು ಬುಧವಾರ ತಡರಾತ್ರಿ ಅಮಾನತುಗೊಳಿಸಲಾಗಿದೆ.
ಗುರುವಾರ, ಐಪಿಸಿಯ ಸೆಕ್ಷನ್ 304 (ಎ) ಮತ್ತು 188 ಅಡಿಯಲ್ಲಿ ಸಂಬಂಧಪಟ್ಟ ವೈದ್ಯರು, ದಾದಿಯರು, ವಾರ್ಡ್ ಬಾಯ್ಸ್, ಸ್ವೀಪರ್ಗಳು ಮತ್ತು ಇತರ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
“ಜೂನ್ 1 ರಿಂದ 10 ರವರೆಗೆ ವಾರ್ಡ್ 7 ರಲ್ಲಿ ನಿಯೋಜಿಸಲ್ಪಟ್ಟ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಯ ಪಾತ್ರವನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, 82 ವರ್ಷದ ಮಹಿಳೆಯ ಸಾವಿಗೆ ಕಾರಣರಾದ ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
“ನಾವು ಈ ಘಟನೆಯ ಬಗ್ಗೆ ಗಂಭೀರವಾದ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕ್ರಿಮಿನಲ್ ಅಪರಾಧಕ್ಕಾಗಿ ಈಗಾಗಲೇ ಕೆಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಸಚಿವರು ಹೇಳಿದ್ದಾರೆ.
ಓದಿ: ಮುಗಿಬಿದ್ದು ಬಸ್ ಹತ್ತುವ ಜನರ ಈ ವಿಡಿಯೋ ಮುಂಬೈದಲ್ಲ, ಪಶ್ಚಿಮ ಬಂಗಾಳದ್ದು: ಫ್ಯಾಕ್ಟ್‌ಚೆಕ್


