Homeಮುಖಪುಟತಮಿಳು ನಾಡು: ಕೋಮುವಾದ ಬಿತ್ತಿದರೂ ಫಲ ನೀಡದ ಬಿಜೆಪಿಗರ ಸಂಕಟ

ತಮಿಳು ನಾಡು: ಕೋಮುವಾದ ಬಿತ್ತಿದರೂ ಫಲ ನೀಡದ ಬಿಜೆಪಿಗರ ಸಂಕಟ

- Advertisement -
- Advertisement -

ಕೋಮವಾದವನ್ನು ಬಿತ್ತಿ ಕೋಮು ಧ್ರುವೀಕರಣದ ಬೆಳೆ ತೆಗೆವ ಬಿಜೆಪಿ ಪಕ್ಷ ಆ ಯೋಜನೆಗಳ ಮೂಲಕವೇ ದೇಶದ ಹಲವೆಡೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. 1990 ಸೆಪ್ಟೆಂಬರ್ 25ರಂದು ಲಾಲ್ ಕೃಷ್ಣ ಅಡ್ವಾನಿ ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ ಆರಂಭಿಸಿದ್ದರು. ಆ ರಥಯಾತ್ರೆ ನಡೆದ ದಾರಿಯಲ್ಲೆಲ್ಲ ರಕ್ತದ ಕಲೆಗಳಿವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರಥಯಾತ್ರೆಯ ಬೆನ್ನಿಗೆ 1992ರ ಬಾಬರಿ ಮಸೀದಿ ಧ್ವಂಸ ಹಾಗೂ ನಂತರ ನಡೆದ ಗಲಭೆಗಳ ರಕ್ತಪಾತದಲ್ಲಿ ಮೃತಪಟ್ಟವರ ಸಂಖ್ಯೆ 10,000ಕ್ಕೂ ಹೆಚ್ಚು ಎನ್ನುತ್ತವೆ ಹಲವು ವರದಿಗಳು. ಇನ್ನು ಗಾಯಗೊಂಡವರ ಮತ್ತು ಆಸ್ತಿಪಾಸ್ತಿ ಕಳೆದುಕೊಂಡವರ ಸಂಖ್ಯೆ ಅಸಂಖ್ಯಾತ.

2002ರ ಗುಜರಾತಿನ ಗೋದ್ರಾ ಹತ್ಯಾಕಾಂಡವನ್ನು ಈ ದೇಶ ಅಷ್ಟು ಸುಲಭಕ್ಕೆ ಮರೆಯಲು ಸಾಧ್ಯವೇ? ಈ ಎರಡೂ ಹತ್ಯಾಕಾಂಡಕ್ಕೆ ಕಾರಣವಾದದ್ದು ಬಿಜೆಪಿಯ ಕೋಮುವಾದ ಎಂಬ ಏಕೈಕ ಅಜೆಂಡ ಮತ್ತು ಈ ಅಜೆಂಡ ನೀಡಿದ ಫಲವೇ ಇಂದು ಉತ್ತರಪ್ರದೇಶ ಮತ್ತು ಗುಜರಾತಿನಲ್ಲಿ ದೀರ್ಘಾವಧಿಯ ಅಧಿಕಾರದ ಚುಕ್ಕಾಣಿ. 2017ರ ಉತ್ತರಪ್ರದೇಶ ಚುನಾವಣೆಗೆ ಪೂರ್ವಭಾವಿಯಾಗಿ 2013ರಲ್ಲೇ ಬಿಜೆಪಿಯಿಂದ ಪ್ರಯೋಜಿಸಲ್ಪಟ್ಟಿದ್ದ, 80 ಜನರ ಸಾವಿಗೆ ಕಾರಣವಾಗಿದ್ದ ಮುಜಫರ್ ನಗರದ ಕೋಮುಗಲಭೆಯನ್ನೂ ಇಲ್ಲಿ ಸ್ಮರಿಸಬಹುದು.

ಇನ್ನು ಕರ್ನಾಟಕದಲ್ಲೂ ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಾಟೆ, ಚಿಕ್ಕಮಗಳೂರಿನ ದತ್ತಪೀಠ ವಿವಾದ ಬಿಜೆಪಿ ಪಾಲಿಗೆ ಚಿನ್ನದ ಗಣಿ ಎನ್ನಲು ಅಡ್ಡಿ ಇಲ್ಲ. ಈ ವಿವಾದಗಳು ಹುಟ್ಟಿದ ವರ್ಷಗಳನ್ನೂ ಹಾಗೂ ಕರ್ನಾಟಕದಲ್ಲಿ ಬಿಜೆಪಿಯ ಅಧಿಕಾರದ ಹಿಡಿದು ಗಟ್ಟಿಯಾಗುತ್ತಾ ಸಾಗಿದ್ದನ್ನು ತುಲನೆ ಮಾಡಿ ಗಮನಿಸಿದರೆ ಕೋಮುಗಲಭೆ ಮತ್ತು ಅಧಿಕಾರದ ಜೊತೆಗಿನ ಬಿಜೆಪಿಯ ನಯವಾದ ಆಟ ಸ್ಪಷ್ಟವಾಗಿ ಅರ್ಥವಾಗುತ್ತದೆ. ಬಿಜೆಪಿಯ ಈ ತಂತ್ರಗಾರಿಕೆ ಹಲವು ರಾಜ್ಯಗಳಲ್ಲಿ ಅವರ ಕೈಹಿಡಿದಿದೆ ನಿಜ. ಆದರೆ, ತಮಿಳುನಾಡು ಮಾತ್ರ ಜಪ್ಪಯ್ಯ ಎಂದರೂ ಇವರ ಆಟಕ್ಕೆ ಜಗ್ಗುತ್ತಿಲ್ಲ.

2020ರಲ್ಲಿ ಅಣ್ಣಾಮಲೈ ಎಂಬ ಮಾಜಿ ಐಪಿಎಸ್ ಅಧಿಕಾರಿಯನ್ನು ತಮಿಳುನಾಡಿನ ಬಿಜೆಪಿಗೆ ರಾಜ್ಯಾದ್ಯಕ್ಷನನ್ನಾಗಿ ನೇಮಕ ಮಾಡಲಾಗಿತ್ತು. ಬಿಜೆಪಿಯ ಸಾಂಪ್ರದಾಯಿಕ ಅಸ್ತ್ರವನ್ನೇ ಅಲ್ಲೂ ಪ್ರಯೋಗಿಸಿದ್ದ ಅಣ್ಣಾಮಲೈ 2021ರಲ್ಲಿ ಕ್ರೈಸ್ತರ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನೇ ಮುಂದಿಟ್ಟು, ಇದೊಂದು ಕೊಲೆ ಎಂದು ಜನಾಭಿಪ್ರಾಯ ರೂಪಿಸಿ ಧ್ರುವೀಕರಣ ಮಾಡಲು ಮುಂದಾಗಿ ಕೊನೆಗೆ ಜನರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದರು. ಇದರ ಬೆನ್ನಿಗೆ ಸಾಲುಸಾಲು ಕೋಮುವಾದಿ ಗಲಭೆಗಳಿಗೆ ಅವರು ಬೀಜ ಬಿತ್ತಿದ್ದರೇನೋ ನಿಜ; ಆದರೆ, ಅದ್ಯಾವುದೂ ನಿರೀಕ್ಷಿತ ಫಲ ಕೊಡಲಿಲ್ಲ. ಪರಿಣಾಮ ಅಣ್ಣಾಮಲೈ ಇದೀಗ ಬಿಜೆಪಿಯ ಮತ್ತೊಂದು ಪ್ರಮುಖ ಅಸ್ತ್ರವಾದ ಸುಳ್ಳು ಸುದ್ದಿಯ ಮೊರೆ ಹೋಗಿದ್ದಾರೆ. ತಮಿಳರಿಂದ ಬಿಹಾರಿ ಕಾರ್ಮಿಕರ ಮೇಲೆ ದಾಳಿ ಎಂಬ ಬುರುಡೆ (ಸುಳ್ಸುದ್ದಿ) ಬಿಟ್ಟು ತಮಿಳರ ಸ್ವಾಭಿಮಾನವನ್ನು ಕೆಣಕಿ ಪೇಚಿಗೆ ಸಿಲುಕಿದ್ದಾರೆ. ಪರಿಣಾಮ ಇದೀಗ ಅವರ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗಿದೆ.

ಏನಿದು ಸುಳ್ಳು ಸುದ್ದಿ ಪ್ರಕರಣ?

ಮಾರ್ಚ್ 1 ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಹುಟ್ಟುಹಬ್ಬ. ಸ್ಟಾಲಿನ್ ಹುಟ್ಟುಹಬ್ಬಕ್ಕೆ ಶುಭ ಕೋರಲೆಂದು ಬಿಹಾರದ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ತಮಿಳುನಾಡಿಗೆ ಆಗಮಿಸಿದ್ದರು.

ಆದರೆ, ಇದೇ ದಿನ ಬಿಹಾರದ ಬಿಜೆಪಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ “ತಮಿಳುನಾಡಿನಲ್ಲಿ ಹಿಂದಿ ಮಾತನಾಡಿದ್ದಕ್ಕಾಗಿ 12 ಜನರನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ ನೇಣು ಬಿಗಿದು ಕೊಲ್ಲಲಾಗಿದೆ” ಎಂದು ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಇದರ ಬೆನ್ನಿಗೆ “ಮನೀಶ್ ಕಶ್ಯಪ್” (Manish Kashyap Son of Bihar) ಎಂಬ ವ್ಯಕ್ತಿಯಂತು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಅಕೌಂಟ್‌ನಲ್ಲಿ, ’ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರನ್ನು ಕಂಡಕಂಡಲ್ಲಿ ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗುತ್ತಿದೆ’ ಎಂದು ಬಾಯಿಗೆ ಬಂದಂತೆ ಬಡಬಡಿಸತೊಡಗಿದ. ಆತನ ವಿಡಿಯೋವನ್ನು 6 ಮಿಲಿಯನ್ ಜನ ವೀಕ್ಷಿಸಿದ್ದರು. ನೋಡನೋಡುತ್ತಿದ್ದಂತೆ ಆ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ‘ನಕಲಿ ಪ್ರಚಾರ’ ಆರೋಪ; ಅಣ್ಣಾಮಲೈ ವಿರುದ್ಧ ಎಫ್‌ಐಆರ್‌ ದಾಖಲು

ಬಿಹಾರದ ವಿಧಾನಸಭೆಯಲ್ಲೂ ಈ ವಿಚಾರವಾಗಿ ಭಾರಿ ಚರ್ಚೆಯಾಗಿತ್ತು. ಅಲ್ಲಿನ ವಿರೋಧ ಪಕ್ಷವಾದ ಬಿಜೆಪಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟುಹಿಡಿದಿತ್ತು. ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹ ಈ ಮನೀಶ್ ಕಶ್ಯಪ್ ಎಂಬ ವ್ಯಕ್ತಿಯ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದ ತೇಜಸ್ವಿ ಯಾದವ್ ಬಗ್ಗೆ ಅವಹೇಳನಕಾರಿಯಾದಂತಹ ಮಾತುಗಳನ್ನಾಗಿದ್ದರು. “ಇಂತವರ ಸರ್ಕಾರ ಬಿಹಾರಕ್ಕೆ ಬೇಕೆ? ತೇಜಸ್ವಿ ಯಾದವ್ ಸ್ಟಾಲಿನ್‌ಗೆ ಕೇಕ್ ತಿನ್ನಿಸುವ ದಿನದಲ್ಲೇ ನಮ್ಮ ಬಿಹಾರಿಗಳು ಕೊಲೆಯಾಗುತ್ತಿದ್ದಾರೆ” ಎಂದು ಜನರನ್ನು ಪ್ರಚೋದಿಸಿದ್ದರು.

ಇನ್ನೂ ಟಿಆರ್‌ಪಿ ಗೀಳಿಗೆ ಬಿದ್ದ ದೃಶ್ಯ ಮಾಧ್ಯಮಗಳ ಬಗ್ಗೆ ಕೇಳಬೇಕೆ! ಬಿಜೆಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿದ್ದೆ ತಡ ಇಡೀ ದಿನ ಹಿಂದಿ ಮತ್ತು ಆಂಗ್ಲ ದೃಶ್ಯ ಮಾಧ್ಯಮಗಳು ತಮಿಳುನಾಡಿನ ವಿರುದ್ಧ ಸಾಲುಸಾಲು ವರದಿಗಳನ್ನು ಬಿತ್ತರಿಸಿದವು. ತಮಿಳುನಾಡಿನಲ್ಲಿ ಬಿಹಾರಿ ಮತ್ತು ಉತ್ತರಪ್ರದೇಶ ಸೇರಿದಂತೆ ಹಿಂದಿ ಭಾಷಿಕರಿಗೆ ರಕ್ಷಣೆ ಇಲ್ಲ, ಅಲ್ಲಿನ ಸರ್ಕಾರವೇ ತಮಿಳು ಉಗ್ರಗಾಮಿಗಳ ಬೆನ್ನಿಗೆ ನಿಂತಿದೆ ಎಂದು ವಿಷಕಾರಲು ಆರಂಭಿಸಿದವು. ಪರಿಣಾಮ ಪ್ರಕರಣದ ತನಿಖೆಗೆ ಸಿಎಂ ನಿತೀಶ್ ಕುಮಾರ್ ಒಂದು ತಂಡವನ್ನು ರಚಿಸಿ ತಮಿಳುನಾಡಿಗೂ ಕಳಿಸಿದ್ದರು.

ವಿಡಿಯೋ ಅಸಲಿ ಕಥೆ, ಅಣ್ಣಾಮಲೈ ಎಂಬ ಮತಿಗೇಡಿ

ಈ ಸುಳ್ಳು ಸುದ್ದಿಯ ಬಿಸಿ ಬಿಹಾರದಿಂದ ಅಷ್ಟೇ ಶೀಘ್ರವಾಗಿ ತಮಿಳುನಾಡನ್ನೂ ಮುಟ್ಟಿತ್ತು. ಆದರೆ, ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸದ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಹಾರಿಗಳ ಮೇಲಿನ ದಾಳಿಯ ’ಸುಳ್ಳು’ ವಿಡಿಯೋವನ್ನು ಹಂಚಿಕೊಂಡಿದ್ದರು. ಅಲ್ಲದೆ, “ಹಿಂದಿ ಭಾಷಿಕರ ಮತ್ತು ಉತ್ತರ ಭಾರತೀಯರ ವಿರುದ್ಧ ತಮಿಳರಲ್ಲಿ ಆಕ್ರೋಶ ಮನೆಮಾಡಲು ಡಿಎಂಕೆ ಪಕ್ಷ ಕಾರಣ” ಎಂದು ಆರೋಪಿಸಿದ್ದರು. ಈ ಬಗ್ಗೆ ಸಾಲುಸಾಲು ಟ್ವೀಟ್ ಮಾಡುತ್ತಾ ಡಿಎಂಕೆ ಪಕ್ಷದ ವಿರುದ್ಧ ದ್ವೇಷ ಪ್ರಚಾರದಲ್ಲಿ ತೊಡಗಿದ್ದರು.

ಮನೀಶ್ ಕಶ್ಯಪ್

ಆದರೆ, ಘಟನೆಯ ಮರುದಿನವೇ ಫ್ಯಾಕ್ಟ್‌ಚೆಕ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸುಳ್ಳಿನ ಚರ್ಮ ಸುಲಿದಿದ್ದರು, “ಈ ಹಲ್ಲೆ ತಮಿಳುನಾಡಿನಲ್ಲಿ ನಡೆದದ್ದಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ತಮಿಳುನಾಡಿನಲ್ಲಿ ಯಾವುದೇ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆಯಾಗಿಲ್ಲ ಎಂದು ಸಾಕ್ಷಿ ಸಮೇತ ಸರಣಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಮೂಲಕ ಬಿಜೆಪಿಯ ಅಸಲಿ ತಂತ್ರಗಾರಿಕೆ ಜಗಜ್ಜಾಹೀರಾಗಿತ್ತು. ಒಂದೇ ಸುಳ್ಳು ಸುದ್ದಿಯ ಮೂಲಕ ಬಿಹಾರದಲ್ಲಿ ನಿತೀಶ್ ಕುಮಾರ್ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ಮತ್ತು ಬಿಜೆಪಿಯೇತರ ಸರ್ಕಾರವಿರುವ ತಮಿಳುನಾಡಿನ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡುವುದು ಬಿಜೆಪಿಯ ಗುರಿಯಾಗಿತ್ತು. ಇದಕ್ಕೆ ಅವರು ಸಿಎಂ ಸ್ಟಾಲಿನ್ ಹುಟ್ಟುದಿನ ಮತ್ತು ತೇಜಸ್ವಿ ಯಾದವ್ ಭೇಟಿಯನ್ನೇ ಬಳಸಿಕೊಂಡು ಒಂದು ಅದ್ಭುತವಾದ ಚಿತ್ರಕಥೆಯನ್ನು ಸಿದ್ಧಪಡಿಸಿದ್ದರು ಎಂಬ ಅಂಶ ಬಟಾಬಯಲಾಗಿತ್ತು.

ತಮಿಳುನಾಡಿನ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಿಜೆಪಿಯ ಈ ಸುಳ್ಳು ಸುದ್ದಿಯ ಬಗ್ಗೆ ಬಿಸಿಬಿಸಿ ಚರ್ಚೆ ಶುರು ಮಾಡುತ್ತಿದ್ದಂತೆ ಅಣ್ಣಾಮಲೈ ತನ್ನ ಖಾಸಗಿ ಟ್ವಿಟರ್ ಖಾತೆಯಿಂದ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರೇನೋ ನಿಜ. ಆದರೆ, “ಹಿಂದಿ ಭಾಷಿಕರ ವಿರುದ್ಧ ತಮಿಳರಲ್ಲಿ ಆಕ್ರೋಶ ಇದೆ, ಇದಕ್ಕೆ ಕಾರಣ ಡಿಎಂಕೆ ಪಕ್ಷ” ಎಂಬ ತಮ್ಮ ನಿಲುವನ್ನು ಮತ್ತೆ ಮತ್ತೆ ಸರಣಿ ಟ್ವೀಟ್ ಮೂಲಕ ಸಮರ್ಥಿಸಿಕೊಂಡಿದ್ದರು.

ಬಿಜೆಪಿ ಪ್ರಾಯೋಜಿತ ರಾಷ್ಟ್ರೀಯ ಮಾಧ್ಯಮಗಳು ತಮಿಳುನಾಡಿನ ವಿರುದ್ಧ ಹೀಗೆ ವಿಷಕಾರುವುದು ಹೊಸದೇನಲ್ಲ. ತಮಿಳರಿಗೆ ಅದು ಅಭ್ಯಾಸವಾಗಿಹೋಗಿದೆ. ಆದರೆ, ಈ ಸುಳ್ಳನ್ನೇ ಸತ್ಯ ಎಂದು ಅಲ್ಲಿನ ಜನರನ್ನು ನಂಬಿಸಲು ಸ್ವತಃ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮುಂದಾದದ್ದು ಮತ್ತು ತಮಿಳರ ವಿರುದ್ಧವೇ ಅಪಪ್ರಚಾರ ಮಾಡಿದ್ದು, ಇದೀಗ ತಮಿಳರ ಆಕ್ರೋಶಕ್ಕೆ ಕಾರಣವಾಗಿದೆ.

ಸುಳ್ಳು ಸುದ್ದಿಯ ಪರಿಣಾಮವೇನು?

ತಮಿಳುನಾಡು ಬಿಜೆಪಿಯಲ್ಲೇ ಅಣ್ಣಾಮಲೈ ಓರ್ವ ವಿವಾದಿತ ವ್ಯಕ್ತಿಯಾಗಿ ಛಾಪು ಮೂಡಿಸಿದ್ದಾರೆ. ಪಕ್ಷದಲ್ಲಿ ತನಗೆ ಪೈಪೋಟಿಯಾಗಿದ್ದ ಹಿರಿಯ ನಾಯಕ ಕೆ.ಟಿ ರಾಘವನ್ ಎಂಬುವವರನ್ನು ಅಶ್ಲೀಲ ಸಿಡಿ ಕೇಸ್‌ನಲ್ಲಿ ಸಿಲುಕಿಸಿ ಅವರ ರಾಜಕೀಯ ಜೀವನವನ್ನೇ ಮುಗಿಸಿದ ಆರೋಪ ಅಣ್ಣಾಮಲೈ ಮೇಲಿದೆ. ಇದಲ್ಲದೆ, ಪಕ್ಷದಲ್ಲಿ ತನಗೆ ಪೈಪೋಟಿಯಾಗಿರುವ ಇತರೆ ಹಿರಿಯ ನಾಯಕರದ್ದೂ ಅಶ್ಲೀಲ ವಿಡಿಯೋ ಮತ್ತು ಆಡಿಯೋ ಮಾಡಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

“ಅಣ್ಣಾಮಲೈ ತನ್ನ ವಿಡಿಯೋ ಮಾಡಿಟ್ಟುಕೊಂಡು ಸಾಮಾಜಿಕ ಜಾಲತಾಣ ಪಡೆಯ ಮೂಲಕ ನನ್ನ ಮೇಲೆ ವ್ಯಯಕ್ತಿಕ ದಾಳಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿ ಬಿಜೆಪಿ ಪಕ್ಷದ ಕಲೆ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಮಾಜಿ ನಟಿ ಗಾಯತ್ರಿ ರಘುರಾಮ್ ಕಳೆದ ವರ್ಷ ಪಕ್ಷದಿಂದಲೇ ಹೊರ ನಡೆದಿದ್ದರು. ಇದೇ ಆರೋಪವನ್ನು ಮುಂದಿಟ್ಟು ಸೂರ್ಯ ಶಿವ ಎಂಬ ಮತ್ತೊಬ್ಬ ಬಿಜೆಪಿ ನಾಯಕನೂ ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರೂ ಅಣ್ಣಾಮಲೈ ವಿರುದ್ಧ ಸಾರ್ವಜನಿಕವಾಗಿ ಕಿಡಿಕಾರಿದ್ದರು. ಅಂದಿನಿಂದ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು “ಆಡಿಯೋ ವಿಡಿಯೋ ಪಕ್ಷ” ಎಂದೇ ಕರೆಯಲಾಗುತ್ತಿದೆ.

ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಎನ್ನಲಾದ ನಕಲಿ ವಿಡಿಯೋ

ಈ ನಡುವೆ ಬಿಹಾರಿ ಕಾರ್ಮಿಕರ ಮೇಲಿನ ದಾಳಿ ಸಂಬಂಧಿಸಿದ ಸುದ್ದಿ ಸುಳ್ಳು ಎಂಬುದು ಜಗಜ್ಜಾಹೀರಾಗುತ್ತಿದ್ದಂತೆ ತಮಿಳುನಾಡಿನ ಬಿಜೆಪಿ ಐಟಿ ವಿಂಗ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಸೇರಿದಂತೆ 11 ಜನ ನಿರ್ವಾಹಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ “ಎಡಿಎಂಕೆ” ಪಕ್ಷಕ್ಕೆ ಸೇರಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ನಿರ್ಮಲ್ ಕುಮಾರ್ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಮಿಳುನಾಡು ರಾಜಕೀಯದಲ್ಲಿ ಪ್ರಸ್ತುತ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಬಿಜೆಪಿ ತೊರೆದ ತಮಿಳು ನಟಿ ಹೇಳಿಕೆ

“ಅಣ್ಣಾಮಲೈ ಪಕ್ಷದ ಅನೇಕ ಹಿರಿಯ ನಾಯಕರ ವಿರುದ್ಧ ಗೂಢಚರ್ಯೆ ನಡೆಸುತ್ತಿದ್ದಾರೆ. ಅಶ್ಲೀಲ ಆಡಿಯೋ ವಿಡಿಯೋ ಮೂಲಕ ಹಲವರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ತಾನೊಬ್ಬನೇ ಏಕಮೇವ ಬಿಜೆಪಿ ನಾಯಕನಾಗಲು ಅವರು ಹೊರಟಿದ್ದು, ಸುಳ್ಳು ಹರಡುವುದೊಂದೆ ಅಣ್ಣಾಮಲೈ ಹಾಗೂ ಬಿಜೆಪಿ ಪಕ್ಷದ ಅಜೆಂಡವಾಗಿದೆ. ಇಂತಹ ಪಕ್ಷ ತಮಿಳರಿಗೆ ಮತ್ತು ತಮಿಳುನಾಡಿಗೆ ಅಪಾಯಕಾರಿಯಾದದ್ದು” ಎಂಬ ಅಂಶಗಳು ನಿರ್ಮಲ್ ಕುಮಾರ್ ಹೇಳಿಕೆಯಲ್ಲಿದ್ದು, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಒಂದು ಪಕ್ಷದ ರಾಜ್ಯಾಧ್ಯಕ್ಷನ ವಿರುದ್ಧ ಅದೇ ಪಕ್ಷದವರು ಬಿಡುಗಡೆ ಮಾಡಿರುವ ಅತ್ಯಂತ ಆಘಾತಕಾರಿ ಹೇಳಿಕೆ ಇದಾಗಿದೆ ಎಂದು ತಮಿಳುನಾಡಿನ ಮಾಧ್ಯಮಗಳು ವಿಶ್ಲೇಷಿಸುತ್ತಿವೆ.

ಒಟ್ಟಿನಲ್ಲಿ ದೇಶದ ಹಲವೆಡೆ ಕೆಲಸ ಮಾಡುವ ಬಿಜೆಪಿ ಪಕ್ಷದ ಸುಳ್ಳಿನ ತಂತ್ರಗಾರಿಕೆ ತಮಿಳು ನಾಡಿನಲ್ಲಿ ಕೈಕೊಟ್ಟಿರುವುದು ದೇಶದಲ್ಲಿಂದು ಚರ್ಚೆಗೆ ಗ್ರಾಸವಾಗಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...