Homeಮುಖಪುಟಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಬಿಜೆಪಿ ತೊರೆದ ತಮಿಳು ನಟಿ ಹೇಳಿಕೆ

ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಬಿಜೆಪಿ ತೊರೆದ ತಮಿಳು ನಟಿ ಹೇಳಿಕೆ

“ಎಲ್ಲಾ ವಿಡಿಯೊಗಳು ಮತ್ತು ಆಡಿಯೊಗಳನ್ನು ಪೊಲೀಸರಿಗೆ ಒಪ್ಪಿಸುತ್ತೇನೆ. ಅಣ್ಣಾಮಲೈ ಮೇಲೆ ಮತ್ತಷ್ಟು ತನಿಖೆಯಾಗಲಿ” ಎಂದಿದ್ದಾರೆ ಗಾಯತ್ರಿ ರಘುರಾಮ್.

- Advertisement -
- Advertisement -

ಬಿಜೆಪಿಯಿಂದ ಅಮಾನತಿಗೆ ಒಳಗಾದ ನಲವತ್ತು ದಿನಗಳ ನಂತರ ತಮಿಳು ನಟಿ ಗಾಯತ್ರಿ ರಘುರಾಮ್, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾದ ಕೆ.ಅಣ್ಣಾಮಲೈ ಅವರನ್ನು ದೂಷಿಸಿದ್ದಾರೆ.

2014ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಗಾಯತ್ರಿ ರಘುರಾಮ್‌, “ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯಲ್ಲಿ ಮಹಿಳೆಯರು ಸುರಕ್ಷಿತವಾಗಿರುವುದಿಲ್ಲ” ಎಂದು ಆರೋಪಿಸಿದ್ದಾರೆ. ಅಣ್ಣಾಮಲೈ ಬೆಂಬಲಿಗರು ತನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿರುವುದಕ್ಕೆ ಗಾಯತ್ರಿಯವರು ಬೇಸರ ವ್ಯಕ್ತಪಡಿಸಿದ್ದಾರೆ.

ಡಿಎಂಕೆ ಸಂಸದ ತಿರುಚಿ ಶಿವ ಅವರ ಪುತ್ರ ಸೂರ್ಯ ಶಿವ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಅಣ್ಣಾಮಲೈ ಅವರ ನಿರ್ಧಾರವನ್ನು ಗಾಯತ್ರಿಯವರು ಸಾರ್ವಜನಿಕವಾಗಿ ಟೀಕಿಸಿದ ನಂತರ ನವೆಂಬರ್ 22ರಂದು ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಯಿತು. ನಂತರ ಸೂರ್ಯ ಶಿವ ಅವರು ಗಾಯತ್ರಿಯವರಿಗೆ ಫೋನ್‌ ಮಾಡಿ ಅವಾಚ್ಯವಾಗಿ ಮಾತನಾಡಿದ್ದು ವರದಿಯಾಗಿತ್ತು.

“ಅಣ್ಣಾಮಲೈ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ‘ಅನಾವಶ್ಯಕವಾಗಿ’ ಟಾರ್ಗೆಟ್ ಮಾಡಿದ್ದಾರೆ. ಹೆಚ್ಚು ಟ್ರೋಲ್ ಮಾಡುತ್ತಿದ್ದಾರೆ” ಎಂದು ನಟಿ ಅಳಲು ತೋಡಿಕೊಂಡಿದ್ದರು. “ಬಿಜೆಪಿಯಲ್ಲಿ ಮಹಿಳೆಯರನ್ನು ನಿಂದಿಸುವವರನ್ನು ರಕ್ಷಿಸಲಾಗುತ್ತಿದೆ” ಎಂದು ಕರ್ನಾಟಕ-ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿಯಾದ ಅಣ್ಣಾಮಲೈ ಅವರನ್ನು ನಟಿ ಟೀಕಿಸಿದ್ದಾರೆ.

“ಮಹಿಳೆಯರ ವಿಚಾರಣೆ, ಸಮಾನ ಹಕ್ಕುಗಳು ಮತ್ತು ಗೌರವಕ್ಕೆ ಅವಕಾಶ ನೀಡದಿದ್ದಕ್ಕಾಗಿ ನಾನು ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಂಡಿದ್ದೇನೆ. ಅಣ್ಣಾಮಲೈ ನೇತೃತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ನಾನು ಹೊರಗಿನ ವ್ಯಕ್ತಿಯಾಗಿ ಟ್ರೋಲ್ ಆಗುವುದು ಉತ್ತಮ” ಎಂದು ಅವರು ತಮ್ಮ ಟ್ವಿಟರ್‌‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಗಾಯತ್ರಿ ಅವರು ತಮ್ಮ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ತಮಿಳುನಾಡು ಬಿಜೆಪಿ ಘಟಕದಲ್ಲಿ ನಿಜವಾದ ಕಾರ್ಯಕರ್ತರ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಅಂಥವರನ್ನು ಹೊರಗೆ ಓಡಿಸುವುದೇ ಏಕೈಕ ಗುರಿಯಾಗಿದೆ ಎಂದಿದ್ದಾರೆ.

“ನಾನು ಬಿಜೆಪಿಗೆ ಶುಭ ಹಾರೈಸುತ್ತೇನೆ. ನಾನು ಈ ಆತುರದ ನಿರ್ಧಾರ ತೆಗೆದುಕೊಂಡಿದ್ದರ ಶ್ರೇಯ ಅಣ್ಣಾಮಲೈ ಅವರಿಗೆ ಸಲ್ಲುತ್ತದೆ. ಮುಂದೆ ನಾನು ಅಣ್ಣಾಮಲೈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಬಯಸುವುದಿಲ್ಲ. ಅವರು ಅಗ್ಗದ ತಂತ್ರಗಾರಿಕೆಯ ಸುಳ್ಳುಗಾರ ಮತ್ತು ಅಧಾರ್ಮಿಕ ನಾಯಕ” ಎಂದು ಕುಟುಕಿದ್ದಾರೆ.

ಅಣ್ಣಾಮಲೈ ಅವರು ಅಧಿಕಾರ ವಹಿಸಿಕೊಂಡು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸ್ಥಾನದಿಂದ ಗಾಯತ್ರಿ ಅವರನ್ನು ತೆಗೆದು ಹಾಕಿದ ಬಳಿಕ ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಭಾವನೆಯನ್ನು ಗಾಯತ್ರಿ ವ್ಯಕ್ತಪಡಿಸಿದ್ದರು. ತದನಂತರ ಗಾಯತ್ರಿಯವರಿಗೆ ಮತ್ತೊಂದು ವಿಭಾಗದ ಉಸ್ತುವಾರಿ ವಹಿಸಲಾಯಿತು. ಆದರೆ ಆ ಹುದ್ದೆಯ ಜವಾಬ್ದಾರಿ ಅವರಿಗೆ ಖುಷಿ ತಂದಿರಲಿಲ್ಲ.

“ಬಿಜೆಪಿಯ ಪುರುಷ ಮಹನೀಯರು, ಮಹಿಳೆಯರ ಮೇಲೆ ಎಸಗಿರುವ ದೌರ್ನಜ್ಯಗಳಿಗೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋ ಟೇಪ್‌ಗಳು ಇವೆ” ಎಂದು ನಟಿ ಮಾಹಿತಿ ನೀಡಿದ್ದಾರೆ.

“ನಾನು ಪೊಲೀಸ್ ದೂರು ನೀಡಲು ಸಿದ್ಧನಿದ್ದೇನೆ. ಎಲ್ಲಾ ವೀಡಿಯೊಗಳು ಮತ್ತು ಆಡಿಯೊಗಳನ್ನು ಒಪ್ಪಿಸುತ್ತೇನೆ. ಅಣ್ಣಾಮಲೈ ಅವರ ಮೇಲೆ ಮತ್ತಷ್ಟು ತನಿಖೆಯಾಗಲಿ” ಎಂದು ಆಗ್ರಹಿಸಿದ್ದಾರೆ. ರಘುರಾಮ್ ಅವರ ಆರೋಪಗಳಿಗೆ ಅಣ್ಣಾಮಲೈ ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಧ್ಯಪ್ರದೇಶ: ದಲಿತ ದಂಪತಿಯನ್ನು ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

0
ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ದಲಿತ ವೃದ್ಧ ದಂಪತಿಯನ್ನು ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ ಎಂಬುದನ್ನು ಪೊಲೀಸರು ಭಾನುವಾರ ಖಚಿತಪಡಿಸಿದ್ದಾರೆ. ದಂಪತಿಯ ಮಗ ಮಹಿಳೆಯೊಬ್ಬರಿಗೆ ಕೀಟಲೆ ಮಾಡಿದ ಘಟನೆಯಲ್ಲಿ...