ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಆಕೆಯ ಹುಟ್ಟುಹಬ್ಬದ ಮುನ್ನಾದಿನವೇ ಬೆಂಕಿಹಚ್ಚಿ ಸಜೀವ ದಹನ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆಕೆಯನ್ನು ಮದುವೆಯಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ (ಹೆಣ್ಣಿನಿಂದ ಗಂಡಾಗಿದ್ದ) ಒಳಗಾಗಿದ್ದ ಆಕೆಯ ಮಾಜಿ ಸಹಪಾಠಿಯೇ ಕೊಲೆ ಮಾಡಿದ್ದು, ಟೆಕ್ಕಿಯನ್ನು ಸರಪಳಿಯಿಂದ ಬಂಧಿಸಿ, ಬ್ಲೇಡ್‌ನಿಂದ ಹಲ್ಲೆ ನಡೆಸಿದ ನಂತರ ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈನ ದಕ್ಷಿಣ ಉಪನಗರವಾದ ಕೆಲಂಬಾಕ್ಕಂ ಬಳಿಯ ತಲಂಬೂರ್ನಲ್ಲಿ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ವರದಿಗಳ ಪ್ರಕಾರ, 26 ವರ್ಷದ ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ, ಗೆಳತಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡುವ ನೆಪದಲ್ಲಿ, 24 ವರ್ಷದ ಟೆಕ್ಕಿ ಆರ್.ನಂದಿನಿಯ ಕಣ್ಣಿಗೆ ಪಟ್ಟಿ ಕಟ್ಟಿ ಸರಪಳಿಯಿಂದ ಬಿಗಿಯಲಾಗಿದೆ. ನಂತರ, ಆಕೆಯ ಮೇಲೆ ಬ್ಲೇಡ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಧುರೈ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಮೃತೆ ನಂದಿನಿ, ಚೆನ್ನೈನಲ್ಲಿ ತನ್ನ ಸಂಬಂಧಿಕರೊಂದಿಗೆ ನೆಲೆಸಿದ್ದರು. ಆಕೆಯ ಗೆಳತಿ ಪಾಂಡಿ ಮಹೇಶ್ವರಿ ತನ್ನ ಹೆಸರನ್ನು ಈಗ ವೆಟ್ರಿಮಾರನ್ ಎಂದು ಬದಲಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ನಂದಿನಿಯನ್ನು ಕರೆಸಿಕೊಂಡು ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ.
‘ಅವರು ಕಾಲೇಜು ಓದುವಾಗಲೇ ಸ್ನೇಹಿತರಾಗಿದ್ದರು ಎನ್ನಲಾಗಿದ್ದು, ಚೆನ್ನೈಗೆ ಬಂದು ಕೆಲ ದಿನ ಒಟ್ಟಿಗೆ ವಾಸಿಸುತ್ತಿದ್ದರು. ಕೊಲೆ ಸಂದರ್ಭದಲ್ಲಿ ಯಾವುದೇ ಲೈಂಗಿಕ ದೌರ್ಜನ್ಯದ ಸುಳಿವು ಇನ್ನೂ ಕಂಡುಬಂದಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದ್ದು, ವೆಟ್ರಿಮಾರನ್ ಈ ಹಿಂದೆ ಹಿಂಸಾತ್ಮಕ ಪ್ರವೃತ್ತಿಯನ್ನು ಪ್ರದರ್ಶಿಸಿದ್ದರೆ ಎಂಬ ಬಗ್ಗೆ ತಿಳಿದುಬಂದಿಲ್ಲ; ತನಿಖೆ ನಡೆಯುತ್ತಿದೆ ಎಂದು ತಾಂಬರಂ ಪೊಲೀಸ್ ಕಮಿಷನರ್ ಅಮಲ್ರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಬ್ಬರ ನಡುವಿನ ಸಂಬಂಧ ಹಳಸಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಧುರೈನಲ್ಲಿ ಒಟ್ಟಿಗೆ ಓದಿದ ನಂದಿನಿ ಹಾಗೂ ವೆಟ್ರಿಮಾರನ್, ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರವೂ ಸ್ನೇಹವನ್ನು ಮುಂದುವರಿಸಿದರು. ಇವರಿಬ್ಬರೂ ತೊರೈಪಾಕ್ಕಂನಲ್ಲಿರುವ ಖಾಸಗಿ ಐಟಿ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಅವರ ಸಂಬಂಧವನ್ನು ಮತ್ತಷ್ಟು ಹತ್ತಿರವಾಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂದಿನಿ ಬೇರೆ ಯುವಕರೊಂದಿಗೆ ಆಸಕ್ತಿ ಬೆಳೆಸಿಕೊಂಡಿದ್ದಳು ಎಂದು ವೆಟ್ರಿಮಾರನ್ ಅನುಮಾನಕ್ಕೆ ಒಳಗಾಗಿದ್ದು, ಈ ಭೀಕರ ಕೃತ್ಯದ ಹಿಂದಿನ ಉದ್ದೇಶ ಎನ್ನಲಾಗಿದ್ದು, ವೆಟ್ರಿಮಾರನ್ ಅವರು ನಂದಿನಿಯ ಹುಟ್ಟುಹಬ್ಬದ ಆಚರಣೆಗೆ ಆಹ್ವಾನಿಸಿದ್ದಾರೆ. ವೆಟ್ರಿಮಾರನ್ ಬೆಂಕಿ ಹಚ್ಚಿದ ನಂತರ ನಂದಿನಿ ಇನ್ನೂ ಸರಪಳಿಯಲ್ಲಿ ಸುಡುತ್ತಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ.
ಕೊಲೆ ಆರೋಪ ಎದುರಿಸುತ್ತಿರುವ ವೆಟ್ರಿಮಾರನ್ನನ್ನು ಪೊಲೀಸರು ಕೂಡಕೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


