Homeಮುಖಪುಟಕಾಶ್ಮೀರದ ಕತ್ತಲೆಗೆ ಒಂದು ವರ್ಷ: ಸಾಧಿಸಿದ್ದಾದರೂ ಏನು?

ಕಾಶ್ಮೀರದ ಕತ್ತಲೆಗೆ ಒಂದು ವರ್ಷ: ಸಾಧಿಸಿದ್ದಾದರೂ ಏನು?

ಕಾಶ್ಮೀರದ ನೆಲ ನಮ್ಮದೆಂದು ಕೊಚ್ಚಿಕೊಳ್ಳುವ ಕೇಂದ್ರ ಸರಕಾರ ಅಲ್ಲಿನ ಜನತೆಯ ಬವಣೆಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಂತಿಲ್ಲ. ಅಲ್ಲಿ ನಡೆಯುವ ಅಪ್ರಿಯ ಘಟನೆಗಳಿಗೆ ನೇರವಾಗಿ ಕಾಶ್ಮೀರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬಿಜೆಪಿಯು ತನ್ನ ಇಬ್ಬಗೆ ನೀತಿಯೇ ಇದಕ್ಕೆ ಕಾರಣ ಎಂಬುದನ್ನು ಅರಿತಂತಿಲ್ಲ.

- Advertisement -
- Advertisement -

ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕು ಲಾಕ್‌ಡೌನ್‌ಗೊಳಗಾಗಿ ನಿನ್ನೆಗೆ ಭರ್ತಿ ಒಂದು ವರ್ಷವಾದವು. ಕೊರೊನಾದ ಕ್ವಾರಂಟೈನ್‌ ಜಾರಿಗೆ ಬರುವ ಏಳು ತಿಂಗಳ ಮೊದಲೇ ಇಡೀ ಕಾಶ್ಮೀರದ ಜನತೆಯನ್ನು ಕೇಂದ್ರ ಸರಕಾರ ಕ್ವಾರಂಟೈನ್‌ಗೆ ತಳ್ಳಿ ಹಾಕಿತ್ತು. ಈ ಒಂದು ವರ್ಷದಲ್ಲಿ ಕಾಶ್ಮೀರಿಗಳ ಬದುಕುವ ಹಕ್ಕನ್ನು, ನೆಮ್ಮದಿಯನ್ನೂ ಕೇಂದ್ರ ಸರಕಾರ ಕಸಿದುಕೊಂಡಿತು.

ಅವರ ಭೂಮಿ ಮತ್ತು ಕೃಷಿಯ ಮೇಲೆ‌ ಹಿಡಿತ ಸ್ಥಾಪಿಸಿಕೊಂಡಿತು. ಅದರಲ್ಲೂ ಹೊರ‌ ಪ್ರಪಂಚದೊಂದಿಗಿನ ಸಂಪೂರ್ಣ ಸಂಪರ್ಕವನ್ನು ಕಡಿದು ಹಾಕಿತು. ಇಂಟರ್ನೆಟ್ ಸಮೇತ ಸರ್ವ ಸಂವಹನ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಿತು. ಮಾಧ್ಯಮಗಳನ್ನು ಕಾಶ್ಮೀರಕ್ಕೆ ಕಾಲಿಡದಂತೆ ನೋಡಿಕೊಂಡಿತು. ಎಲ್ಲಾದರೂ ಧೈರ್ಯ ಮಾಡಿ ಸುದ್ದಿ ವರದಿ ಮಾಡಲು ಹೋದ ಪತ್ರಕರ್ತರನ್ನು ಬಂಧಿಸಿ ಜೈಲಿಗಟ್ಟುವ ದಾರ್ಷ್ಟ್ಯತೆಯನ್ನು ತೋರಿತು. ಈ ಎಲ್ಲಾ ವಿದ್ಯಾಮಾನಗಳ ಪರಿಣಾಮದಿಂದಾಗಿ ಕಣಿವೆಯ ಜನಜೀವನವು ನರಕಸದೃಶ್ಯವಾದವು.

ಕಳೆದ ವರ್ಷ ಇದೇ ಸಮಯಕ್ಕೆ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವಾಗ ಕಾಶ್ಮೀರದ ಚಿತ್ರಣವೇ ಬದಲಾಗಲಿದೆಯೆಂದು ಪ್ರಧಾನಿ ಮೋದಿ ಹುಸಿ ಭರವಸೆ ನೀಡಿದರು. ಆದರೆ ನಂತರದ ವಿದ್ಯಾಮಾನ ವಿಕ್ಷಿಪ್ತವಾದವು. ಶಾಲೆ, ವಾಣಿಜ್ಯ ಚಟುವಟಿಕೆ, ಸಾರಿಗೆ, ಪ್ರವಾಸೋದ್ಯಮ, ವೈದ್ಯಕೀಯ ಹೀಗೆ ಎಲ್ಲವೂ ಮೊಟಕಾದವು. ಸನ್ನಿವೇಶ ಸಂಘರ್ಷಕ್ಕೆ ತಿರುಗಿದವು. ಬಲಪ್ರಯೋಗ, ನಿರ್ಬಂಧ, ನಿಯಂತ್ರಣಗಳಿಂದಲೇ ಕೇಂದ್ರ ಸರಕಾರ ರಾಜ್ಯಭಾರ ಆರಂಭಿಸಿತು. ಈ ನಿರ್ಬಂಧ, ಬಲಪ್ರಯೋಗಗಳು ಖಾಯಂ ಆದವು. ‘ಹೊಸ ಬೆಳಗು’, ‘ಸುಂದರ ನಾಳೆಗಳ ಉದಯ’ ಎಂದೆಲ್ಲಾ ಮೋದಿ‌ ಕೊಟ್ಟ ಬಣ್ಣದ ಆಶ್ವಾಸನೆಗಳಿಗೆ ವಯಸ್ಸು ಒಂದಾದರೂ ಕಾಶ್ಮೀರ ಇನ್ನೂ ಕತ್ತಲೆಯಲ್ಲಿದೆ. ಸೈನ್ಯ ವ್ಯೂಹ ಇನ್ನೂ ಕಾಶ್ಮೀರ ಬಿಟ್ಟು ತೆರಳಿಲ್ಲ. ಅಲ್ಲಿನ ಜನತೆಯ ಪ್ರತೀ ಉಸಿರಾಟ‌ ನಡೆಯುವುದೂ ಬಂದೂಕಿನ ನಳಿಕೆಯಲ್ಲೇ!

ಕತ್ತಲೆಗೆ ತಳ್ಳಿದ ನಿರ್ಧಾರ

ಕೇಂದ್ರ ಸರಕಾರವು ಕಳೆದ ಜುಲೈ 5 ರಂದು ಕಾಶ್ಮೀರಕ್ಕೆ 370 ಪರಿಚ್ಚೇದದ ಪ್ರಕಾರ ಪ್ರತ್ಯೇಕವಾಗಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಬಳಿಕ ಜಮ್ಮು ಕಾಶ್ಮೀರವನ್ನು ವಿಭಜನೆಗೊಳಿಸಿ, ರಾಜ್ಯಕ್ಕಿದ್ದ ಆಡಳಿತ ಸಂಹಿತೆಯನ್ನು ಕಿತ್ತೆಸೆದು ತನ್ನ ಸುಪರ್ಧಿಗೆ ತೆಗೆದುಕೊಂಡಿತ್ತು. ಇದು ಕಾಶ್ಮೀರಿಗಳ ಸಮೇತ ಇಡೀ ಭಾರತೀಯರನ್ನು ಬೆಚ್ಚಿ ಬೀಳಿಸಿದ್ದವು. ಮೋದಿ ಹೊಗಳುಭಟ ಮಾಧ್ಯಮಗಳು ಮತ್ತು ಸಂಘಪರಿವಾರ ಇದನ್ನು ಐತಿಹಾಸಿಕ ನಿರ್ಣಯ, ಮಹತ್ವದ ನಿರ್ಧಾರವೆಂದು ಪುಂಖಾನುಪುಂಖ ಹೇಳಿಕೊಂಡವು.

ಭಾರತೀಯ ಸಂವಿಧಾನದ 370 ನೇ ವಿಧಿಯು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ವಾಯತ್ತ ಸ್ಥಾನಮಾನವನ್ನು ನೀಡುವ ತಾತ್ಕಾಲಿಕ ನಿಬಂಧನೆಯಾಗಿತ್ತು. ಕಾಶ್ಮೀರ ಮತ್ತು ಕಾಶ್ಮೀರಿಗಳು ಭಾರತದೊಂದಿಗೆ ಸೇರಿಕೊಳ್ಳಲಿರುವ ಏಕೈಕ ಉಪಾಧಿಯಾಗಿತ್ತು ಈ ವಿಶೇಷ ಸ್ಥಾನಮಾನ. ಭಾರತ ಮತ್ತು ಕಾಶ್ಮೀರದ ಪ್ರಥಮ ಕಾಲದ ರಾಜಕಾರಣಿಗಳ, ಕಾನೂನು ತಜ್ಞರ ದೂರದೃಷ್ಟಿಯು ಈ ಉಪಾಧಿಯ ಹಿಂದೆ ಕಾರ್ಯಾಚರಿಸಿದ್ದವು. ನೆನಪಿಡಲೇ ಬೇಕಾದ ವಿಚಾರವೆಂದರೆ ಈ ವಿಶೇಷ ಸ್ಥಾನಮಾನ ಇಲ್ಲದಿದ್ದರೆ ಕಾಶ್ಮೀರ ಎಂದೋ ಹರಿದು ಹಂಚಾಗಿ ಇನ್ಯಾರದೋ ಪಾಲಾಗುತ್ತಿದ್ದವು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಘಟನೆಗಳ ಪೈಕಿ ಇದು ಅತ್ಯಂತ ಮಹತ್ವದ್ದೆನಿಸಿಕೊಳ್ಳುತ್ತದೆ.


ಓದಿ: ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ : ಜಮ್ಮು ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲ


ಕಾಶ್ಮೀರವು ತಾತ್ಕಾಲಿಕವಾಗಿ ಭಾರತೀಯ ಒಕ್ಕೂಟದ ಅಧೀನಕ್ಕೆ ಬಂದ ಮೇಲೆ ಈ ತಾತ್ಕಾಲಿಕ ನಿಬಂಧನೆಯನ್ನು ಶಾಶ್ವತಗೊಳಿಸುವ ಕೂಗು ಕೇಳಿಬಂದವು. ಆ ಸಮಯಕ್ಕೆ ಪ್ರಧಾನಿಯಾಗಿದ್ದ ನೆಹರು, 1952ರ ಜೂನ್ 19ಕ್ಕೆ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದ್‌ರಿಗೆ ಒಂದು ಪತ್ರ ಬರೆದರು;

ಈಗಾಗಲೇ ಕಾಶ್ಮೀರ ಭಾರತಕ್ಕೆ ಸೇರಿದೆ. ಈ ಬಗ್ಗೆ ವಿಶ್ವ ಸಂಸ್ಥೆಗೂ ಈ ಸುದ್ದಿ ತಲುಪಿದೆ. ಆದುದರಿಂದ ಆ ಪ್ರದೇಶವು ಅತ್ಯಂತ ಮಹತ್ವದ್ದಾಗಿದೆ. ಕಾಶ್ಮೀರದ ಜನರ ಇಂಗಿತವನ್ನು ಅರಿಯುವುವುದು ಮತ್ತು ಅದರಂತೆ ಮುಂದಿನ ನಿರ್ಣಯಗಳನ್ನು ತೆಗೆಯುವುದು ನಮ್ಮ ಕರ್ತವ್ಯವಾಗಿದೆ. ಅಲ್ಲದೆ ಜನಾಭಿಪ್ರಾಯ ಸಂಗ್ರಹಿಸಲು ನಾವು ಈಗಾಗಲೇ ಸಿದ್ದರಿದ್ದೇವೆ. ಅವರು ಭಾರತದೊಂದಿಗಿನ ನಂಟು ವಿಚ್ಚೇದಿಸಿ ಸ್ವತಂತ್ರರಾಗಿ ಉಳಿಯಲು ಬಯಸುವುದಾದರೆ ಅದನ್ನು ಅಂಗೀಕರಿಸೋಣ‌. ಭಾರತದೊಂದಿಗೆ ಶಾಶ್ವತವಾಗಿ ವಿಲೀನವಾಗಲು ಬಯಸುವುದಾದರೆ ಅದನ್ನು ಸ್ವೀಕರಿಸೋಣ.

ಕಾಶ್ಮೀರಿಗಳ ಆತ್ಮಾಭಿಮಾನಕ್ಕೆ ಗೌರವ ಕಲ್ಪಿಸುವುದು, ಪ್ರಜಾಪ್ರಭುತ್ವದ ನೆಲೆಯಲ್ಲಿ ಅವರನ್ನು ಸ್ವೀಕರಿಸುವುದು ನೆಹರೂರ ನಿಲುವಾಗಿತ್ತು. ಬಳಿಕ ವಿಶೇಷ ತಂಡವನ್ನು ಕಳುಹಿಸಿ ಜನಾಭಿಪ್ರಾಯ ಸಂಗ್ರಹಿಸಲಾಯಿತು. ಕಾಶ್ಮೀರದ ಹೆಚ್ಚಿನ ಜನರ ಇಚ್ಚೆಯೂ ಕಾಶ್ಮೀರವು ಭಾರತದ ಭಾಗವಾಗಬೇಕೆಂಬುದಾಗಿತ್ತು. ವಿಶೇಷ ಸ್ಥಾನಮಾನದ ಅವಕಾಶದೊಂದಿಗೆ ಕಾಶ್ಮೀರ ಭಾರತದೊಂದಿಗೆ ವಿಲೀನಕ್ಕೆ ಒಪ್ಪಿಕೊಂಡಿತು. ಆದರೆ ಅಂದಿನ ಬಲಪಂಥೀಯ ಪಂಗಡಗಳು ಇದನ್ನು ವಿರೋಧಿಸಿದವು. ಕೇವಲ ರಾಜಕೀಯ ವೈರುಧ್ಯತೆಯಷ್ಟೇ ಅಂದಿನ ವಿರೋಧಕ್ಕಿದ್ದ ಕಾರಣ. ಆದರೆ ನಂತರ ಬಿಜೆಪಿ ಇದನ್ನು ತನ್ನ ರಾಜಕೀಯ ಹಿತಕ್ಕಾಗಿ ಬಳಸಿಕೊಂಡಿತು. ಇದನ್ನು ಕಾಂಗ್ರೆಸ್ ಮಾಡಿದ ಚಾರಿತ್ರಿಕ ಪ್ರಮಾದವೆಂದು ಪ್ರತಿಪಾದಿಸುತ್ತಲೇ ಬಂತು. ಅಲ್ಲದೆ‌ ವಿಶೇಷ ಸ್ಥಾನಮಾನದ ರದ್ದತಿಯು ಬಿಜೆಪಿಯ ಧೀರ್ಘ ಕಾಲದ ಕಾರ್ಯಸೂಚಿಗಳಲ್ಲೊಂದಾಯಿತು.

ನೆಹರು ಅವರ ಪ್ರಜಾಪ್ರಭುತ್ವ ಪ್ರಜ್ಞೆಯ ನಿಲುವು ಮೋದಿ-ಶಾರ ಕಾಲಕ್ಕೆ ಪಲ್ಲಟವಾದವು. ಕಾಶ್ಮೀರಿಗಳ ಇಚ್ಚೆ-ಇಂಗಿತಕ್ಕೆ ಬೆಲೆಯೇ ಇಲ್ಲವಾದವು. ಕಾಶ್ಮೀರಿಗಳ ಆಕ್ರೋಶ, ಸಿಟ್ಟು, ನೋವು, ರೋಧನೆಗಳನ್ನು ಸೈನ್ಯದ ಶಕ್ತಿಯಿಂದ ಹತ್ತಿಕ್ಕಲಾಯಿತು. ಜನರಿಂದ ಚುಣಾಯಿತಗೊಂಡ ಸರಕಾರವನ್ನು ಪತನಗೊಳಿಸಿ ಆ ಪ್ರದೇಶವನ್ನು ತಮ್ಮ ಆಡಳಿತದ ಅಧೀನಕ್ಕೆ ತರಲಾಯಿತು. ಇದು ಸಂಘಪರಿವಾರದ ಮುಸ್ಲಿಂ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೆಲಸದ ವೇಗವನ್ನು ಹೆಚ್ಚಿಸಿದವು.

ಕೇಂದ್ರ ಸರಕಾರದ ಈ ದುರಾಡಳಿತ ನೀತಿಯು ಭಾರತದ ಪ್ರಜಾಪ್ರಭುತ್ವ ನೀತಿಯನ್ನೂ, ಸಾಂವಿಧಾನಿಕ ತತ್ವಗಳನ್ನೂ ಅಂಗೀಕರಿಸಿದ್ದ ಕಾಶ್ಮೀರಿನ ರಾಜಕೀಯ ನೇತಾರರನ್ನು ಅಪ್ರಸಕ್ತಗೊಳಿಸಿದವು. ಅವರ ಘನತೆಗೆ ಧಕ್ಕೆ ತಂದವು. ಮಾಜಿ ಮುಖ್ಯಮಂತ್ರಿಗಳನ್ನೂ, ಕೇಂದ್ರ ಸಚಿವರನ್ನೂ ಒಳಗೊಂಡಂತೆ ಮಿಕ್ಕ ರಾಜಕೀಯ ನಾಯಕರನ್ನು ಬಂಧಿಸಲಾಯಿತು. ಕಟ್ಟಕಡೆಗೆ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ, ಕಾಂಗ್ರೆಸ್‌ನ ಹಿರಿಯ ಮುಖಂಡರೂ, ಕೇಂದ್ರ ಸಚಿವರೂ ಆಗಿದ್ದ ಸೈಫುದ್ದೀನ್ ಸೋಸ್‌ ಮುಂತಾದವರೂ ಜೈಲು ಪಾಲಾದರು. ಕಾಶ್ಮೀರಿ ಜನತೆಯೊಂದಿಗೂ, ರಾಜಕೀಯ ನಾಯಕರೊಂದಿಗೂ ಮೋದಿ ಸರಕಾರ ವರ್ತಿಸಿದ ರೀತಿ ಅಮಾನವೀಯವಾದದ್ದಾಗಿತ್ತು.

ವಿಪರ್ಯಾಸವೆಂದರೆ ಸರಕಾರದ ಈ ಅಮಾನುಷ ನೀತಿಯನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು ಸಂಪೂರ್ಣ ಮೌನಕ್ಕೆ ಶರಣಾಗಿದ್ದವು. ಇತ್ತೀಚೆಗಷ್ಟೆ ಬಿಡುಗಡೆಯಾದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾಶ್ಮೀರಿ ಜನತೆಯ ಬವಣೆಯ ಬಗ್ಗೆ ಪ್ರತಿ ಪಕ್ಷಗಳ ತಟಸ್ಥ ನೀತಿಯ ಕುರಿತು ಖೇದ ವ್ಯಕ್ತಪಡಿಸಿದ್ದರು. ನ್ಯಾಯಕ್ಕಾಗಿ, ಸ್ವಸ್ಥ ಬದುಕಿಗಾಗಿ, ಮುಕ್ತ ಜೀವನ ನಿರ್ವಹಣೆಗಾಗಿ ಅಂಗಲಾಚುತ್ತಿದ್ದ ಕಾಶ್ಮೀರಿಗಳ ವ್ಯಥೆಯನ್ನು ಜಾತ್ಯಾತೀತರೆನಿಸಿಕೊಂಡ ಮಂದಿಯೂ ಮರೆತೇ ಹೋದರು.

ವರದಿ ಬಿಚ್ಚಿಟ್ಟ ಸತ್ಯಗಳು

ಕಳೆದ ಹನ್ನೊಂದು ತಿಂಗಳಲ್ಲಿ ಕಾಶ್ಮೀರಿ‌ ಜನತೆ ಅನುಭವಿಸಿದ ಮಾನವ ಹಕ್ಕು ಉಲ್ಲಂಘನೆಯ ಕುರಿತಾದ ಹಲವು ಸುದ್ದಿಗಳು, ತನಿಖಾ ವರದಿಗಳು ಹೊರ ಬಂದವು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು, ಮಾನವ ಹಕ್ಕು ಹೋರಾಟಗಾರರು, ಸೈನ್ಯದ ಮಾಜಿ ಧುರೀಣರು ಹಾಗೂ ಪತ್ರಕರ್ತರನ್ನೊಳಗೊಂಡ ‘ಜಮ್ಮು-ಕಾಶ್ಮೀರದ ಮಾನವ ಹಕ್ಕುಗಳ ಒಕ್ಕೂಟ’ ಎಂಬ ಸಂಘಟನೆಯೊಂದು ಕಾಶ್ಮೀರದಾದ್ಯಂತ ಅಲೆದಾಡಿ ಎಪ್ಪತ್ತು ಪುಟಗಳನ್ನೊಳಗೊಂಡ ತನಿಖಾ ವರದಿಯೊಂದನ್ನು ಸಿದ್ದಪಡಿಸಿತು. ಕೆಲವು ದಿನಗಳ ಹಿಂದೆಯಷ್ಟೇ ಅದನ್ನು ಬಹಿರಂಗಗೊಳಿಸಿ, ಕಾಶ್ಮೀರದ ಒಟ್ಟಾರೆ ಶೋಚನೀಯ ಸ್ಥಿತಿಯನ್ನು ಅದು ಅನಾವರಣ ಮಾಡಿತ್ತು.


ಓದಿ: ಜಮ್ಮುಕಾಶ್ಮೀರದ ಹೈಕೋರ್ಟ್‌ನಲ್ಲಿ 99% ಹೇಬಿಯಸ್ ಕಾರ್ಪಸ್ ಅರ್ಜಿಗಳು ಇನ್ನೂ ಬಾಕಿ


ಕಾನೂನಿನ ದುರುಪಯೋಗ, ಜಾಮೀನು ನಿಷೇಧ, ಅಪ್ರಾಪ್ತ ಮಕ್ಕಳ ಬಂಧನ, ಸೇನೆಯ ಚೆಕ್‌ಪೋಸ್ಟ್ ಮತ್ತು ಪೋಲೀಸ್ ಬ್ಯಾರಿಕೇಡ್‌ಗಳಲ್ಲಿ ನಡೆಯುವ ದೌರ್ಜನ್ಯ, ನೆಟ್ವರ್ಕ್‌ಗೆ ಮತ್ತು ಇಂಟರ್‌ನೆಟ್‌ಗೆ ವಿಧಿಸಲಾದ ನಿರ್ಬಂಧ ಮುಂತಾದವು ಅಲ್ಲಿನ ಜನರಿಗೆ ಉಂಟು ಮಾಡಿದ ಮಾನಸಿಕ ಆಘಾತ, ದೈಹಿಕ ಹಿಂಸೆಯನ್ನು ವರದಿಯು ಬೊಟ್ಟು ಮಾಡಿತ್ತು. ಅಲ್ಲದೆ ಮೋದಿ ಸರಕಾರದ ತಾರತಮ್ಯದ, ಇಬ್ಬಗೆಯ, ಒಡೆದು ಆಳುವ ನೀತಿಯು ಅಲ್ಲಿನ ಪುಟ್ಟ ಕಂದಮ್ಮಗಳಲ್ಲೂ ಯಾವ ತೆರನಾದ ಪರಿಣಾಮ ಬೀರಿದೆಯೆಂಬುದನ್ನು ವರದಿ ಪ್ರತ್ಯೇಕವಾಗಿ ಹೇಳಿತ್ತು.

ಕೊರೊನಾ ಕಾರಣದಿಂದ ದೇಶದಾದ್ಯಂತ ಶಾಲೆಗಳು ಮುಚ್ಚಲ್ಪಟ್ಟವು. ಆದರೆ ಅದು ಹೆಚ್ಚಾಗಿ ವಿಧ್ಯಾಭ್ಯಾಸದ ಮೇಲೆ ಪ್ರಭಾವ ಬೀಳಲಿಲ್ಲ. ಆ ಹೊತ್ತಿಗೆ ಬೇಸಿಗೆ ರಜೆಯ ಸಮಯ ಆರಂಭವಾಗಿತ್ತು. ಆದರೆ ಕಾಶ್ಮೀರದ ಶಾಲೆಗಳ ಕದ ಮುಚ್ಚಿ ಇಂದಿಗೆ ಬರೋಬ್ಬರಿ ಒಂದು ವರ್ಷಗಳೇ ತುಂಬಿ ಹೋಗಿದೆ. ಜೂನ್ ಬಳಿಕ ದೇಶದಾದ್ಯಂತ ವಿದ್ಯಾಸಂಸ್ಥೆಗಳೆಲ್ಲಾ ಆನ್‌ಲೈನ್ ವಿಧ್ಯಾಭ್ಯಾಸದತ್ತ ಮಗ್ಗುಲ ಬದಲಾಯಿಸಿಕೊಂಡರೆ ಕಾಶ್ಮೀರದಲ್ಲಿ ಇಂಟರ್‌ನೆಟ್ ನೆನಗುದಿಗೆ ಬಿದ್ದು ವರ್ಷಾಚರಣೆಯ ಹೊಸ್ತಿಲಲ್ಲಿದೆ. ಅಲ್ಲಿನ ಪುಟ್ಟ ಕಂದಮ್ಮಗಳ ಬಾಳಿಗೆ ಇರುಳು ಕವಿದು ವರ್ಷ ಒಂದು ಸಂದವು.! ಪ್ರಸ್ತುತ ವರದಿ ಅಲ್ಲಿನ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತದೆ.

ಕೇಂದ್ರ ಸರಕಾರ ಕಾಶ್ಮೀರವನ್ನು ಆಳುತ್ತಿದೆಯೆಂಬುದಕ್ಕಿಂತ ಬಂದೂಕುಗಳೇ ರಾಜ್ಯಭಾರ ಮಾಡುತ್ತಿದೆ ಎನ್ನುವುದು ಸೂಕ್ತ. ಬಂಡೆದ್ದ ಜನರನ್ನು ಹತ್ತಿಕ್ಕಲು ಮುತುವರ್ಜಿ ತೋರುವ ಸರಕಾರವು ತನ್ನ ನಿಲುವು ಬದಲಾಯಿಸುವುದು ಅನಿವಾರ್ಯವೆಂದು ಪ್ರಸ್ತುತ ವರದಿ ಸೂಚಿಸುತ್ತದೆ. ಒಂದು ವರ್ಷದಲ್ಲಿ ಕಾಶ್ಮೀರದ ಉದ್ದಿಮೆಗಳು ನೆಲಕಚ್ಚಿ ಹೋಗಿದೆ. ಕೃಷಿ-ಬೇಸಾಯ ನಡೆಯುತ್ತಿಲ್ಲ. ಸಣ್ಣ ಪುಟ್ಟ ವ್ಯಾಪಾರಗಳು ಮುಚ್ಚಿ ಹೋಗಿದೆ. ನಿರುದ್ಯೋಗವು ಕಾಶ್ಮೀರವನ್ನು ದಾರಿಧ್ರ್ಯದ ದವಡೆಗೆ ತಳ್ಳಿದೆ. ಸ್ವಾಭಿಮಾನಿಗಳಾಗಿದ್ದ ಕಾಶ್ಮೀರಿಗಳ ಬದುಕಿನಲ್ಲಿ ಸರಕಾರ ಎಳೆದ ನೋವಿನ ಗೆರೆ ಎಂದಿಗೂ ಮಾಯುವಂಥದ್ದಲ್ಲ.

ಕಾಶ್ಮೀರದ ಬರ್ಬರ ಸನ್ನಿವೇಶದ ಬಗ್ಗೆ ಈ ಮೊದಲು ಹಲವು ತನಿಖಾ ಸಂಸ್ಥೆಗಳು ಅವಲೋಕನ ನಡೆಸಿ ವಸ್ತುನಿಷ್ಠವಾದ ವರದಿಗಳನ್ನು ಹೊರ ಜಗತ್ತಿನ ಮುಂದಿಟ್ಟಿದ್ದವು. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ಕುರಿತಾದ ಅಧಿಕೃತ ಸುದ್ದಿಯು ಬಿತ್ತರವಾಗಿದ್ದವು. ಆದರೆ ಇದನ್ನು ಎತ್ತಿ ಹಿಡಿದು ಸರಕಾರವನ್ನು ಪ್ರಶ್ನಿಸುವ ನೈತಿಕತೆಯನ್ನೂ, ಇಚ್ಚಾಶಕ್ತಿಯನ್ನೂ ಪ್ರತಿ ಪಕ್ಷಗಳು ಕಳೆದುಕೊಂಡಿದ್ದವು.

ಮಾಧ್ಯಮಗಳು ಮತ್ತು ಕಾಶ್ಮೀರ

ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಿಂದ ಮಾಧ್ಯಮ ಗಳನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗುತ್ತಿದೆ. ವರದಿ ಮಾಡಲು ತೆರಳಿದ ಪತ್ರಕರ್ತರ ಮೇಲೆ ಯುಎಪಿಎ ಯಂಥ ಕಠಿಣ ಕೇಸು ಜಡಿದು ಜೈಲಿಗಟ್ಟಲಾಗುತ್ತದೆ. ಕೇಂದ್ರ ಸರಕಾರವು ಮಾಧ್ಯಮ ಸ್ವಾತಂತ್ರ್ಯದ ಕತ್ತು ಹಿಸುಕಿ ಬಿಟ್ಟಿದೆಯೆಂದು ಪ್ರಸ್ತುತ ಒಕ್ಕೂಟದ ವರದಿ ಹೇಳಿತ್ತು.

ಒಂದಷ್ಟು ಮಾಧ್ಯಮಗಳನ್ನು ಹೊರತು ಪಡಿಸಿದರೆ ಇತರ ಯಾವುದೇ ಮಾಧ್ಯಮಗಳೂ ಕಾಶ್ಮೀರದ ಜನತೆಯ ಬಗ್ಗೆ ಚಕಾರ ಎತ್ತಲೇ‌ ಇಲ್ಲ. ದೇಶದಲ್ಲಿರುವ ಹೆಚ್ಚಿನ ಮಾಧ್ಯಮಗಳು ತಮ್ಮನ್ನು ಮಾರಿಕೊಂಡ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದೇ. ಕಾಶ್ಮೀರದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನೂ ಕೇವಲ ರಾಜಕೀಯ ಸಂಘರ್ಷವಾಗಿ ಚಿತ್ರೀಕರಿಸುವುದರಲ್ಲಿ ಅಥವಾ ಪ್ರತ್ಯೇಕತಾವಾದಿಗಳ ತಲೆಗೆ ಕಟ್ಟುವುದರಲ್ಲಿ ನಮ್ಮ ಮಾಧ್ಯಮಗಳು ನಿಸ್ಸೀಮರು.

ಕಾಶ್ಮೀರಿ ಜನತೆಯ ನಿತ್ಯ ಬವಣೆಗಳು, ಅವರ ಆಕ್ರೋಶ, ಆಕ್ರಂಧನಗಳು ಮಾಧ್ಯಮಗಳ ಪರದೆಯಲ್ಲಿ ‘ಉಗ್ರ ಸಂಘರ್ಷ’ವಾಗಿಯಷ್ಟೇ ಬಿತ್ತರವಾಗುತ್ತದೆ. ಕಾಶ್ಮೀರದಲ್ಲಿ ನಡೆಯುವ ಮಾನವ ಹಕ್ಕು ಉಲ್ಲಂಘನೆಯನ್ನು ರಾಷ್ಟ್ರೀಯತೆಯ ಹೆಸರಲ್ಲಿ ಮಾಧ್ಯಮಗಳು ಸಮರ್ಥಿಸುತ್ತಲೇ ಬಂದಿವೆ. ‘ಪಾಕಿಸ್ಥಾನ’, ‘ಉಗ್ರವಾದ’, ‘ಪ್ರತ್ಯೇಕತಾವಾದ’ ಮುಂತಾದ ಪ್ರಯೋಗಗಳು ಕಾಶ್ಮೀರದ ವಾಸ್ತವ ಚಿತ್ರಣಗಳನ್ನು ಹೊರಜಗತ್ತಿಗೆ ಕಾಣದಂತೆ ಮಾಡಿದೆ. ಕಾಶ್ಮೀರದ ಘಟನೆಗಳು ನಮ್ಮ ಮಾಧ್ಯಮಗಳಲ್ಲಿ ’ಗಂಭೀರ್’ ಮತ್ತು ’ಅಫ್ರೀದಿ’ಯ ಟ್ವಿಟರ್ ವಾಗ್ವಾದಗಳಲ್ಲೇ ಕಳೆದು ಹೋಗುತ್ತಿದೆ. ಈ ಪ್ರಕ್ರಿಯೆಗಳೆಲ್ಲಾ ಕಾಶ್ಮೀರದ ಕುರಿತಾದ ಚರ್ಚೆಗಳನ್ನು ಹಾದಿ ತಪ್ಪಿಸುತ್ತಲೇ ಬಂದವು.

ಅಂತಾರಾಷ್ಟ್ರೀಯ ಮಾಧ್ಯಮಗಳು ವಸ್ತುನಿಷ್ಠವಾದ ಸುದ್ದಿಗಳನ್ನು ಬಿತ್ತರಿಸುವುದು, ಅಲ್ಲಿನ ಪ್ರಾದೇಶಿಕ ಪತ್ರಕರ್ತರನ್ನು ಬಳಸುವ ಮೂಲಕ. ಆದರೆ ನಮ್ಮ ದೇಶದ ಮಾಧ್ಯಮಗಳ ವರದಿಗಾರರು ಇನ್ನೂ ಕಾಶ್ಮೀರಕ್ಕೆ ಕಾಲಿಡಲು ಹೇಸುತ್ತಿದ್ದಾರೆ. ಕೇವಲ ಮೇಲಿಂದ ಮೇಲಕ್ಕೆ ಬರುವ ಸುದ್ದಿಗಳನ್ನು ಕಪೋಲ ಕಲ್ಪಿತವಾಗಿ ಚಿತ್ರೀಕರಿಸಿ ವಾಸ್ತವವನ್ನು ಮರೆಮಾಚಲಾಗುತ್ತದೆ. ಇದರಿಂದಾಗಿ ಕಾಶ್ಮೀರದ ಕಣ್ಣೀರು ಹೊರ ಜಗತ್ತು ಅರಿಯದೇ ಹೋಗುತ್ತಿದೆ

ಕಾಶ್ಮೀರದ ಒಟ್ಟಾರೆ ವಿದ್ಯಾಮಾನವನ್ನು ಅವಲೋಕಿಸುವಾಗ ಶಾಶ್ವತವಾದ ಸಾಮಾಜಿಕ ನೆಮ್ಮದಿ ಮತ್ತೆ ಮರುಕಳಿಸುವುದು ಮರೀಚಿಕೆಯ ಮಾತು ಎನ್ನಬಹುದು. ಯಾಕೆಂದರೆ ಕೇಂದ್ರ ಸರಕಾರದ ಆಡಳಿತ ಮಂತ್ರವೇ ಸಂಘಪರಿವಾರ ಪ್ರೇರಿತ ರಾಷ್ಟ್ರೀಯತೆಯಾಗಿದೆ. ಕಾಶ್ಮೀರಿಗಳ ವಿಶ್ವಾಸವನ್ನು ಗಳಿಸುವ ಯಾವ ನಿರ್ಧಾರವನ್ನೂ ಸಂಘಪರಿವಾರ ಪ್ರೇರಿತ ಬಿಜೆಪಿಯಿಂದ ನಿರೀಕ್ಷಿಸುವಂತಿಲ್ಲ. ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರಕಾರದ ನಿರ್ಧಾರಗಳೆಲ್ಲವೂ ಏಕಪಕ್ಷೀಯವಾಗಿತ್ತು. ಜನರ ಇಂಗಿತವನ್ನು ಅರಿಯುವ, ಅವರ ಭಾವನೆಗಳನ್ನು ಅರ್ಥೈಸುವ ಗೋಜಿಗೆ ಸರಕಾರ ಹೋಗಲೇ ಇಲ್ಲ.

ಕಾಶ್ಮೀರದ ನೆಲ ನಮ್ಮದೆಂದು ಕೊಚ್ಚಿಕೊಳ್ಳುವ ಕೇಂದ್ರ ಸರಕಾರ ಅಲ್ಲಿನ ಜನತೆಯ ಬವಣೆಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಂತಿಲ್ಲ. ಅಲ್ಲಿ ನಡೆಯುವ ಅಪ್ರಿಯ ಘಟನೆಗಳಿಗೆ ನೇರವಾಗಿ ಕಾಶ್ಮೀರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬಿಜೆಪಿಯು ತನ್ನ ಇಬ್ಬಗೆ ನೀತಿಯೇ ಇದಕ್ಕೆ ಕಾರಣ ಎಂಬುದನ್ನು ಅರಿತಂತಿಲ್ಲ. ಕಾಶ್ಮೀರಿಗಳತ್ತ ನೇರವಾಗಿ ಬೆರಳು ತೋರುವ ಸರಕಾರ ಭಾರತದ ಜತೆಗೆ ನಿಲ್ಲಲು ಅವರಿಗೆ ಪೂರಕವಾದ ವಾತಾವರಣವನ್ನು ಕಟ್ಟಿಕೊಟ್ಟಿಲ್ಲ.

ಅವರಿಗೆ ದಕ್ಕಬೇಕಾದ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುತ್ತಲೇ ಬಂದಿರುವ ಸರಕಾರ ಅವರ ನಿಲುವಿನ ಬಗ್ಗೆ ಅನುಮಾನ ಪಡುವುದು ಸರಿಯಲ್ಲ. ಅವರ ಆಕ್ರೋಶವನ್ನು ದೇಶದ್ರೋಹವಾಗಿ ಕಾಣುವ ಪರಿಪಾಠ ಬಿಟ್ಟು ಅವರ ಇಂಗಿತಕ್ಕೆ ಸ್ಪಂದಿಸುವ ದೊಡ್ಡತನ ಬೆಳೆಸಬೇಕಾಗಿದೆ. ಚಾರಿತ್ರಿಕ ಪ್ರಮಾದ ನಡೆದವೆಂದು ಪ್ರತಿಪಾದಿಸುತ್ತಲೇ ಬಂದ ಬಿಜೆಪಿ ಸ್ಥಾನಮಾನ ರದ್ದುಗೊಳಿಸಿ ಎಸಗಿದ್ದು ಅದಕ್ಕಿಂತಲೂ ಮಹಾ ಪ್ರಮಾದವನ್ನಾಗಿದೆ. ಬಿಜೆಪಿ ಇದನ್ನು ಅನಿವಾರ್ಯವಾಗಿ ಅರ್ಥೈಸಬೇಕಾದ ಸಮಯ ಬಂದಿದೆ. ಯಾಕೆಂದರೆ ಇದು ಕಾಶ್ಮೀರಿಗಳ ಆತ್ಮಾಭಿಮಾನದ, ಬದುಕಿನ ವಿಚಾರವಾಗಿದೆ.

ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ, ಯುವ ಲೇಖಕರು.


ಓದಿ: 2020ರ ಪ್ರತಿಷ್ಟಿತ ಪುಲಿಟ್ಜೆರ್ ಪ್ರಶಸ್ತಿ ಗೆದ್ದ ಕಾಶ್ಮೀರದ ಪತ್ರಕರ್ತರು ಸೆರೆಹಿಡಿದ ಫೋಟೊಗಳು


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...