Homeಚಳವಳಿ144 ಸೆಕ್ಷನ್‌ ಯಾವಾಗ ಹಾಕಬಹುದು? ಯಾವಾಗ ಹಾಕಬಾರದು ನಿಮಗೆ ಗೊತ್ತೆ?

144 ಸೆಕ್ಷನ್‌ ಯಾವಾಗ ಹಾಕಬಹುದು? ಯಾವಾಗ ಹಾಕಬಾರದು ನಿಮಗೆ ಗೊತ್ತೆ?

- Advertisement -
- Advertisement -

ನಮ್ಮ ದೇಶದಾಗ ಎಲ್ಲಾರಿಗೂ ಗೊತ್ತಿರುವ ಮೂರು ಕಾಯಿದೆ ಅಂದರ ಐಪಿಸಿ 420 ಮತ್ತು 302 ಹಾಗೂ ಸಿಆರ್‍ಪಿಸಿ 144.

420 ಅಂದರ ಭಾರತೀಯ ಅಪರಾಧ ಸಂಹಿತೆಯ ಪ್ರಕಾರ ಮೋಸದ’ ವ್ಯಾಖ್ಯಾನ. ಯಾವದಾದರೂ ವ್ಯಕ್ತಿ ಇನ್ನೊಬ್ಬನಿಗೆ ನಂಬಿಕೆ ದ್ರೋಹ ಮಾಡಿ, ಆ ಮೂಲಕ ಒಂದು ವಸ್ತುವನ್ನು ಬಿಟ್ಟುಕೊಡುವಂತೆ ಅಥವಾ ಯಾರಿಗಾದರೂ ಕೊಡುವಂತೆ ಮಾಡಿದರೆ ಅಥವಾ ಪ್ರಮುಖ ದಸ್ತಾವೇಜೊಂದನ್ನು ಸೃಷ್ಟಿಸಿ, ಬದಲಿಸಿ ಅಥವಾ ನಾಶ ಮಾಡಲು ಪ್ರಯತ್ನಿಸುವಂತೆ ಮಾಡಿದರೆ ಅಥವಾ ಯಾವುದಾದರೂ ಒಂದು ಸಹಿ ಮಾಡಿ, ಸೀಲು ಹಾಕಲಾದ ದಾಖಲೆಯೊಂದನ್ನು ದಸ್ತಾವೇಜನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದರೆ, ಅವನಿಗೆ ಏಳು ವರ್ಷದವರೆಗೆ ಸಜೆ ಹಾಗೂ ದಂಡ ವಿಧಿಸಲಾಗುವುದು.

ಇಷ್ಟು ಸರಳ ಇರೋ ವಿಚಾರ ತಿಳೀದ ನಮ್ಮ ಸಾಹಿತಿಗಳು, ಚಲನಚಿತ್ರ ಹಾಗೂ ಸೀರಿಯಲ್ಲು ನಿರ್ದೇಶಕರು ತಪ್ಪುತಪ್ಪಾಗಿ ವಜ್ರಮುನಿ, ತೂಗುದೀಪ ಶ್ರೀನಿವಾಸ, ದಿನೇಶ ಮುಂತಾದವರಿಗೆ 420, 420 ಅಂದ ಬಿಟ್ಟರಲ್ಲಾ ಪಾಪ ! ಇನ್ನ ಎಲ್ಲಾ ರಂಗದಾಗೂ ತಮ್ಮ ಮಹಾನ್ ನಾಯಕರಿಗೆ ನಡಕೊಳ್ಳೋ ನಮ್ಮ ಜನ ತಮ್ಮ ತಮ್ಮ ಊರಾಗ ಯಾರ್ಯಾರು ಪ್ರಶ್ನಾರ್ಥಕ ಸ್ವಭಾವದ ಜನ ಇರತಾರೋ ಅವರಿಗೆಲ್ಲಾ 420 ಅಂದು ಕೈತೊಳಕೊಂಡರು.

ಇನ್ನ ಐಪಿಸಿ 302. ಇದರ ಪ್ರಕಾರ ಯಾವ ವ್ಯಕ್ತಿ ಕೊಲೆ ಮಾಡುತ್ತಾನೋ ಅವನಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆ ಆಗುವುದು. ಅದರ ಜೊತೆಗೆ ಆ ವ್ಯಕ್ತಿ ದಂಡವನ್ನು ತೆತ್ತಬೇಕಾಗುವುದು.

ಹಳೇ ಹಿಂದಿ ಸಿನಿಮಾ ಅಥವಾ ಕಪ್ಪು- ಬಿಳಿ ಕನ್ನಡ ಸಿನಿಮಾ ನೋಡಿದ ಎಲ್ಲಾರಿಗೂ 302 ಗೊತ್ತಿರತದ. ಅದರಾಗ ಇಫ್ತಿಕಾರ್ ಅವರು ನ್ಯಾಯಮೂರ್ತಿಯಾಗಿ ಫಾರ್ಸಿ- ಉರ್ದು ಮಾತಾಡೋ ಲಕನೋ ಬ್ರಾಹ್ಮಣನಾಗಿ ತಾಜರಾತೆ ಎ ಹಿಂದ ದಫಾ ತೀನ ಸೌ ದೋ ಅಂತ ಅಂದರ ಇಲ್ಲೆ ನಾಯಕನ ತಾಯಿಯ ರೂಪದಾಗಿನ ನಿರುಪಾ ರಾಯ್ ನಹೀಂ ಅಂತ ಅಳ್ಳಿಕ್ಕೆ ಹತ್ತಿ ಬಿಡತಾಳ. ಕನ್ನಡದಾಗ ಅಪರಾಧಸಂಹಿತೆ 302 ಪ್ರಕಾರ ಗಲ್ಲು ಶಿಕ್ಷೆ ಅಂತ ಅಂದಕೂಡಲೇ ನಾಯಕಿ ತನ್ನ ಕುಂಕುಮ ಅಳಿಸಿಕೊಂಡು ಬಿಡತಾಳ. ಗಲ್ಲಿಗೇರಿಸುವುದು ಇನ್ನೂ ಮುಂದಿನ ಸೀನಿನ್ಯಾಗ ಇರತದ. ತಲಗವಾರ ಸೀತಾರಾಮ ಅವರ ಮಮಕಾರದ ಸೀರಿಯಲ್ಲಿನ್ಯಾಗ ಯಾವ ವಿಲನ್ನುಗಳು 302 ಶಿಕ್ಷೆಗೆ ಒಳಗಾಗುವಷ್ಟು ದೊಡ್ಡ ತಪ್ಪು ಇನ್ನೂ ಮಾಡಿಲ್ಲ. ಅದಕ್ಕ ನಮ್ಮ ಕರುನಾಡಿನ ಮಧ್ಯಮ ವರ್ಗದವರಿಗೆ ಇನ್ನೂ ಅದು ಗೊತ್ತಾಗಿರಲಿಕ್ಕಿಲ್ಲ.

ಈಗ ಸದ್ಯ ಇಡೀ ರಾಜ್ಯದಲ್ಲಿ ಮೂರು ದಿನ 144 ಸೀಆರ್‍ಪಿಸಿ ದ ಕಪಿಮುಷ್ಟಿಯೊಳಗ ಅದ. ಇದೂ ಸಹಿತ ಬಹಳ ಜನರಿಗೆ ಗೊತ್ತಿರೋ ವಿಷಯ. ಬೆಂಗಾವಲೂರಿನ ಬೆಂಗಾವಲು ಅಧಿಕಾರಿಯೊಬ್ಬರು ಇತರರಿಗೆ ಅನಾನುಕೂಲವಾದಾಗ ಇದನ್ನು ಜಾರಿ ಮಾಡಬಹುದು. ಇದರಿಂದ ಯಾರಿಗಾದರೂ ಅನಾನುಕೂಲವಾದರೆ ಅವರು ಉತ್ತರ ಭಾರತಕ್ಕೆ ಹೋಗಲಿ ಅಂತ ಹೇಳಿದ್ದಾರೆ. ಯಾವ ಪ್ರತಿಭಟನೆಗೂ ಹೋಗಬೇಡಿ. ಪಾಲಕರು ಮಕ್ಕಳಿಗೆ ಬುದ್ಧಿವಾದ ಹೇಳಿ ಅಂತ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಸಲಹೆ ಕೊಟ್ಟಾರ. ಬ್ಯಾರೆ ಎಲ್ಲಾ ಕಡೆ ಕಾನೂನು ಸುವ್ಯವಸ್ಥೆ ಪಾಲಿಸೋ ದೃಷ್ಟಿಯಿಂದ ಹಾಕೇವಿ ಅಂತ ಹೇಳತಾರ. ಇಷ್ಟೆಲ್ಲ ಮುಂಜಾಗ್ರತೆ ಇದ್ದರೂ ಕೂಡ ಹಿಂಸಾಚಾರ, ಪೊಲೀಸ್ ದೌರ್ಜನ್ಯ, ಸಾವು, ನೋವು ಕಮ್ಮಿ ಆಗಿಲ್ಲ.  ಇಷ್ಟೆಲ್ಲ  ಗುಂಡು ಹಾರಿಸಿದರೂ ಒಂದೂ ಹೆಣ ಬೀಳಲಿಲ್ಲ ಅಂತ ಕೆಲವರು ಬೇಜಾರು ಮಾಡಿಕೊಳ್ಳೋಹಂಗ ಆತು. ಅದು ಬ್ಯಾರೆ ವಿಷಯ. ಇಷ್ಟೆಲ್ಲ ಕುತಂತ್ರದ ಪ್ರತಿಭಟನೆ ನಡದರೆ ಸುಮ್ಮನೆ ಕೂಡಲು ಕೇಂದ್ರ ಹಾಗೂ ರಾಜ್ಯದಲ್ಲಿ ಇರೋದು ಹೇಡಿ ಸರಕಾರ ಅಲ್ಲ. ಅದನ್ನ ಹೇಗೆ ಎದುರಿಸಬೇಕು ಅನ್ನೊದು ನಮಗ ಗೊತ್ತೈತಿ ಅಂತ ಸಚಿವ ಚಿಕ್ಕಮಾಗರವಳ್ಳಿ ತಿಮ್ಮೇ ಗೌಡ ರವಿ ಅವರು ಹೇಳ್ಯಾರ. ಯಾಕ ಗೋಧ್ರಾ ನೆನಪ ಐತ್ಯೋ ಇಲ್ಲೋ ಅಂತ ಮಾಜಿ ಕಾಂಗ್ರೆಸ್ ಸಚಿವರೊಬ್ಬರಿಗೆ ಎದುರುತ್ತರ ಕೊಟ್ಟಾರ.

ಭವ್ಯ ಭರತಖಂಡದ ಬಹುತೇಕ ರಾಜ್ಯದಾಗ ಜಾರಿಗೆ ಬಂದಿರೋ ಈ 144ರ ಹಕೀಕತ್ತು ಏನು? ಇದರ ಪ್ರಕಾರ ಜಿಲ್ಲಾ ದಂಡಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಇತರ ಯಾವುದೇ ವಿಶೇಷ ಅಧಿಕಾರ ಹೊಂದಿದ ಅಧಿಕಾರಿ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಇದನ್ನು ಮಾಡಿ, ಇದನ್ನು ಮಾಡಬೇಡಿ ಅಂತ ಹೇಳಬಹುದು. ಈ ಆಸ್ತಿಯನ್ನು ಈ ರೀತಿಯಿಂದ ಕಾಳಜಿ ಮಾಡಿ ಅಂತ ಸಲಹೆ ನೀಡಬಹುದು.

ಇದನ್ನು ಮೂರು ಸಂದರ್ಭದೊಳಗ ಮಾಡಬಹುದು.
1. ಶಾಂತಿ ಭಂಗದ ಸಾಧ್ಯತೆ. ಹಿಂಸಾತ್ಮಕ ಘಟನೆ, ದೊಂಬಿಯ ಸಾಧ್ಯತೆ.
2. ಮಾನವ ಮಾನಹಾನಿ, ಆರೋಗ್ಯ, ಸುರಕ್ಷೆಗೆ ಅಪಾಯ ಸಾಧ್ಯತೆ.
3. ಸರಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿಯಾದರೆ, ತೊಂದರೆ, ಗಾಯ ಆಗುವ ಸಾಧ್ಯತೆ ಇದ್ದರೆ.

ಈ ಕಾಯಿದೆ ಸಂವಿಧಾನದಲ್ಲಿ ಕೊಟ್ಟ ಮೂಲ ಸ್ವಾತಂತ್ರ್ಯದ ಹಕ್ಕಾದ 1. ವಾಕ್ ಸ್ವಾತಂತ್ರ್ಯ, ನಡೆದಾಡುವ ಹಾಗೂ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಇವುಗಳ ಮಿತಿಯಿಂದ ಇದನ್ನು ತಪ್ಪಿಸಬೇಕೆಂದರ ಅದಕ್ಕ ವಿಶೇಷ ಸ್ಥಾನ ಇರಬೇಕು.

ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಮೀರಬೇಕಾದ ಯಾವುದೇ ಕಾನೂನು ಸಕಾರಣವಾಗಿರಬೇಕು. ನ್ಯಾಯಯುತವಾಗಿರಬೇಕು, ಪಾರದರ್ಶಕವಾಗಿರಬೇಕು ಅಂತ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದ ಹಂಗ ಇರಬೇಕು.
ಹಂಗಂದರ 144 ಅನ್ನೋದು ಇಷ್ಟೆಲ್ಲ ಪರೀಕ್ಷೆಗಳನ್ನ ಮೀರತದಾ? ಮಾಡರ್ನ ಡೆಂಟಲ್ ಕಾಲೇಜು ಪ್ರಕರಣದಾಗ ನ್ಯಾಯಾಲಯ ಸಿದ್ಧಪಡಿಸಿದ ಸಮಪಾತಳಿಯ ಸಿದ್ಧಾಂತದ ಪ್ರಕಾರ ಇದು ಇರಬೇಕು.

1. ಪ್ರತಿಯೊಂದು ಇಂಥಾ ಪ್ರಕರಣಕ್ಕೂ ಇದು ಅತ್ಯಗತ್ಯವಾಗಿರಬೇಕು.
2. ಇದರಿಂದ ಆ ಕಾರ್ಯಸಾಧನೆ ಆಗುವಂತಿರಬೇಕು.
3. ಇದಕ್ಕೊಂದು ನಿರ್ದಿಷ್ಟ ಗುರಿ ಇರಬೇಕು.
ಇನ್ನು ಪುಟ್ಟಸ್ವಾಮಿ ಪ್ರಕರಣದಾಗ ಹೇಳಿದಂಗ ಅದು ಸರಕಾರದ ಕ್ರಮಕ್ಕೂ ನಡಿತಾ ಇರೋ ಘಟನೆಗೂ 1. ನೇರ ಸಂಬಂಧ 2. ನೈಜವಾದ ಗುರಿ, 3. ಕಾರ್ಯಕಾರಣ ಸಮತೋಲನ ಇರಬೇಕು ಹಾಗೂ ಬಳಸಿದ ಕ್ರಮ 4. ಸಕಾರಣವಾದ ಪ್ರಕ್ರಿಯೆ ಆಗಿರಬೇಕು.

ಬಾಬುಲಾಲ ಪರಾಠೆ ಪ್ರಕರಣದೊಳಗ ಪ್ರತಿಭಟನೆಯಿಂದ ಹಿಂಸೆ ಆಗಬಹುದು ಎನ್ನುವ ಊಹಾಪೋಹಗಳಿಗೆಲ್ಲ 144 ಹಾಕಬಾರದು ಅಂತ ಸುಪ್ರೀಂಕೋರ್ಟು ಹೇಳೇದ. ಮಧು ಲಿಮಯೆ ಪ್ರಕರಣದೊಳಗ ಇದನ್ನು ಅತ್ಯಂತ ಜರೂರಿನ ಪ್ರಕರಣಗಳಲ್ಲಿ, ಗಂಭೀರ ಸಮಸ್ಯೆ ಎದುರಾದಾಗ , ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು ಅಂತ ಅಭಿಪ್ರಾಯ ಪಟ್ಟದ.

ಆದರೆ ಚುನಾಯಿತ ಸರಕಾರಗಳು ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು, ಲೋಕಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಇದನ್ನು ಬಳಸುತ್ತವೆ ಅನ್ನೋದು ತಿಳಿದವರ ಅಂಬೋಣ.

ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ಅವರು ಇದು ಬ್ರಿಟಿಷರು ಮಾಡಿಹೋದ ಕಾನೂನನ್ನು ಸಾರಾಸಾರ ವಿಚಾರ ಮಾಡದೇ ಬಳಸುವ ತರಾತುರಿಯ ಕ್ರಮ. ಇದು ನಮ್ಮನ್ನು ಆಳುವವರ ವಸಾಹತುಶಾಹಿ ಮಾನಸಿಕತೆಯ ಗುರುತು ಅಂತ ಟೀಕೆ ಮಾಡಿದಾರ. ಹಿಂಸೆ ಆಗಲು ಬಲವಾದ ಕಾರಣ ಇರದೇ, ಸಾಕ್ಷ್ಯ ಇರದೇ ಇದನ್ನು ಬಳಸುವುದು ಸರಿ ಅಲ್ಲ, ಅಂತ ಸುಪ್ರೀಂಕೋರ್ಟು ಹೇಳೇದ. ಜಿಲ್ಲಾಧಿಕಾರಿ ಇದನ್ನು ಜಾರಿ ಮಾಡುವಾಗ ಲಿಖಿತ ಆದೇಶ ನೀಡಬೇಕು ಅದರಲ್ಲಿ ಹಿಂಸೆಯ ಪ್ರಚೋದನೆಗೆ ಸಂಬಂಧಿಸಿದಂತೆ ಕಾರಣ ನೀಡಬೇಕು ಅಂತ ನ್ಯಾಯಮೂರ್ತಿಗಳು ಆದೇಶ ಮಾಡ್ಯಾರ.

ರಾಮಲೀಲಾ ಮೈದಾನ ಪ್ರಕರಣದಾಗ ಅನಗತ್ಯವಾಗಿ 144 ಹಾಕಿದ್ದಕ್ಕ ಅಧಿಕಾರಿಗಳಿಗೆ ದಂಡ ಹಾಗೂ ಪೊಲೀಸ್ ದೌರ್ಜನ್ಯಕ್ಕ ಒಳಗಾದವರಿಗೆ ಪರಿಹಾರ ಕೊಡಿಸಿತು. ಅದನ್ನು ನಾವು ಮರೆತುಬಿಟ್ಟಿವಿ.

ರಾಮ ಮನೋಹರ ಲೋಹಿಯಾ ಪ್ರಕರಣದಾಗ ಅಕಾರಣವಾಗಿ ಮೂಲಭೂತ ಹಕ್ಕುಗಳನ್ನು ತಡೆಯೋದು ಪ್ರತಿಭಟನೆ ನಿಲ್ಲಿಸುವ ನೆವ ಅಷ್ಟೆ ಅಂತ ನ್ಯಾಯಾಲಯ ಅಭಿಪ್ರಾಯ ಪಟ್ಟದ. ಆದರ ನಾವು ಭಾರತೀಯರು ಜಾಣ ಕಿವುಡರು. ನಮಗೆ ಬೇಕಿದ್ದಷ್ಟನ್ನ ನಾವು ಕೇಳತೇವಿ.

ಹಂಗಾರ ಕಡೀಕೆ ಏನಾತಪಾ ಅಂದರ 420ಗಳಿಗೆ ಅಧಿಕಾರ ಕೊಟ್ಟರ ಅವರು ಮೊದಲ 144 ಹಾಕತಾರ. ಅದಕ್ಕ ಬಗ್ಗಲಿಲ್ಲ ಅಂದರ ನಾವೆಲ್ಲಾ ಅಣ್ಣ ತಮ್ಮಾ ಹೊಡದಾಡಿಕೊಂಡು 302 ಪ್ರಕರಣಕ್ಕ ಒಳಪಡೋಹಂಗ ಮಾಡತಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...