Homeಮುಖಪುಟಮಾಸ್ಟರ್ ಹಿರಣ್ಣಯ್ಯನವರ ಬಾಯಿಗೆ ಬೀಗ ಬಿದ್ದಿದ್ದು ಏಕೆ?

ಮಾಸ್ಟರ್ ಹಿರಣ್ಣಯ್ಯನವರ ಬಾಯಿಗೆ ಬೀಗ ಬಿದ್ದಿದ್ದು ಏಕೆ?

- Advertisement -
- Advertisement -

| ಬಿ.ಚಂದ್ರೇಗೌಡ |

ಮಾಸ್ಟರ್ ಹಿರಣ್ಣಯ್ಯನವರು ತೀರಿಕೊಂಡಿದ್ದಾರೆ. ರಂಗಭೂಮಿಯ ಜೊತೆ ಅವರದ್ದು ಮೂರು ತಲೆಮಾರಿನ ನಂಟು. ಅವರದ್ದೇ ವಿಶಿಷ್ಟ ಶೈಲಿಯ ರಂಗಪ್ರಯೋಗವು ‘ನಾಟಕವಲ್ಲ, ಅದು ಮಾತು’ ಎಂದು ವಿಮರ್ಶಿಸಿದವರೂ ಇದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಲಂಚಾವತಾರ ನಾಟಕ ಬಹಳ ಪ್ರಸಿದ್ಧವಾಗಿತ್ತು. ದಶಕಗಳ ಕಾಲ ನಾಟಕಗಳನ್ನು ಮಾಡುತ್ತಾ ಬಂದಿದ್ದ ಈ ಹಿರಿಯ ವ್ಯಕ್ತಿಯ ನಿಧನಕ್ಕೆ ಪತ್ರಿಕಾ ಬಳಗ ಶ್ರದ್ಧಾಂಜಲಿ ಅರ್ಪಿಸಬಯಸುತ್ತದೆ. 
ಹಿರಣ್ಣಯ್ಯನವರು ಒಂದು ಸಾರಿ ಇನ್ನು ಮುಂದೆ ನನ್ನ ಮಾತಿಗೆ ಉಪವಾಸ ಎಂದು ಘೋಷಿಸಿದ್ದರು. ಆ ಸಂದರ್ಭದಲ್ಲಿ ‘ಬಯಲು ಸೀಮೆ ಕಟ್ಟೆ ಪುರಾಣ’ ಖ್ಯಾತಿಯ ಬಿ.ಚಂದ್ರೇಗೌಡರು ಬರೆದಿದ್ದ ಲೇಖನವು ಅವರ ವ್ಯಕ್ತಿತ್ವವನ್ನು ಸೆರೆಹಿಡಿದಿತ್ತು. ಅದನ್ನು ನಮ್ಮ ಓದುಗರಿಗಾಗಿ ಇಲ್ಲಿ ಕೊಟ್ಟಿದ್ದೇವೆ.

ಮಾಸ್ಟರ್ ಹಿರಣ್ಣಯ್ಯನವರು ಅರ್ಧ ಶತಮಾನದಿಂದ ನಾಟಕ ಆಡಿಕೊಂಡು ಬಂದವರು. ಇವರು ವಿಜೃಂಭಿಸಿದ್ದು ಅರಸು ಯುಗದಲ್ಲಿ. ಆಗ ಯಾವ ಭ್ರಷ್ಟತೆಯನ್ನು ಕೆದಕಿ ಬರೆಯುವ ಪತ್ರಿಕೆಗಳಿರಲಿಲ್ಲ. ಹಾಗಾಗಿ ಅಧಿಕಾರಿಗಳು, ರಾಜಕಾರಣಿಗಳನ್ನು ರೋಚಕವಾಗಿ ಸ್ಟೇಜಿನ ಮೇಲೆ ಟೀಕಿಸುತ್ತಿದ್ದ ಹಿರಣ್ಣಯ್ಯನವರ ನಾಟಕ ನೋಡಲು ಜನ ಮುಗಿಬೀಳುತ್ತಿದ್ದರು. `ಬಾಯಿದ್ದವನು ಬರಗಾಲದಲ್ಲೂ ಬದುಕಿದ’ ಎಂಬ ಗಾದೆಯಂತೆ, ಬದುಕು ನಡೆಸುತ್ತ ಬಂದ ಹಿರಣ್ಣಯ್ಯನವರು ಸ್ಟೇಜಿನ ಮೇಲೆ ಒಬ್ಬರೇ ಮಾತನಾಡಿ ಆಡಿ, ಬಾಯನ್ನೇ ಅಗಲ ಮಾಡಿಕೊಂಡಿದ್ದರು. ವಿಪರ್ಯಾಸವೆಂದರೆ, ತಮ್ಮ ಬಾಯಿಗೆ ತಾವೇ ಬೀಗ ಜಡಿದುಕೊಳ್ಳುವಂತಹ ಪ್ರಸಂಗವನ್ನು ಅವರೇ ಸೃಷ್ಟಿ ಮಾಡಿಕೊಂಡರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತನಗೆ ತಾನೇ ಹರಣ ಮಾಡಿಕೊಂಡಿರುವ ಹಿರಣ್ಣಯ್ಯನವರ ಸುದ್ದಿ ಕೇಳಿದ ಕುಲಬಾಂಧವರು, ಆಡಿದ ಮಾತಿನಿಂದ ಆದ ಪ್ರಮಾದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿಗೆ ಹೋಗಿ ಕ್ಷಮೆ ಕೇಳಿದಾಗ, ಮುಖ್ಯಮಂತ್ರಿಗಳು ಹಿರಣ್ಣಯ್ಯರನ್ನ ಸಮಾಧಾನ ಪಡಿಸಬೇಕಿತ್ತು ಎಂದು ಬರೆದುಕೊಂಡಿವೆ. ಇನ್ನೂ ಬರೆಯುತ್ತಲೇ ಇವೆ. ಇವುಗಳ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಬಿಜೆಪಿಯನ್ನ ಹೊಗಳುವುದು ಕಾಂಗ್ರೆಸ್ಸನ್ನು ತೆಗಳುವುದು.

ಈ ಹಿರಣ್ಣಯ್ಯನವರಿಗೆ `ಇನ್ನುಮುಂದೆ ಮಾತನಾಡಬೇಡ’ ಅಂದವರಾರು? ಇಂತಹ ಮಾತನ್ನು ಈವರೆಗೆ ಯಾರೂ ಹೇಳಿಲ್ಲ. ತಮ್ಮ ಬಾಯಿಂದ ಬಂದ ಮಾತಿನ ಪರಿಣಾಮಕ್ಕೆ ಹೆದರಿ ತಾವೇ ವಿಧಿಸಿಕೊಂಡ ಶಿಕ್ಷೆಯಿದು.
ವಾಸ್ತವವಾಗಿ ಹಿರಣ್ಣಯ್ಯನವರು ಅರ್ಧ ಶತಮಾನದಿಂದ ಆಡುತ್ತ ಬಂದ ಮಾತುಗಳನ್ನು ಸಾವಧಾನವಾಗಿ ಆಲೋಚಿಸಿದರೆ, ಖಂಡನೆಗೆ ಯೋಗ್ಯವಾದ ಹಲವು ಮಾತುಗಳನ್ನು ಆಡುತ್ತ ಬಂದಿದ್ದಾರೆ. ಆದರೆ ನಾಟಕದ ನಡುವೆ ಬಂದುಹೋದ ಆ ಮಾತುಗಳು ಮುಗ್ಧ ಪ್ರೇಕ್ಷಕರಿಗೆ ಸರಿಯಾಗಿಯೇ ಕಂಡಿವೆ. ಶ್ರೇಷ್ಠವಾದ ರಂಗಭೂಮಿಯಲ್ಲಿ ನಿಂತು ಮುಗ್ಧ ಪ್ರೇಕ್ಷಕರನ್ನು ವಂಚಿಸಿದ್ದ ಹಿರಣ್ಣಯ್ಯನವರು ಆಡುತ್ತಿದ್ದ ಮಾತುಗಳು ನಾಟಕದ ಮಾತುಗಳೆಂದೇ ಭಾವಿಸಿದ್ದರು. ಆದರೆ ಅವರಾಡುತ್ತಿದ್ದ ಮಾತುಗಳು ನಾಟಕದ ಮಾತುಗಳಾಗಿರಲಿಲ್ಲ. ನಾನೇ ನೋಡಿದ ಹಲವು ನಾಟಕಗಳಲ್ಲಿ ಭ್ರಷ್ಟ ರಾಜಕಾರಣಿಗಳನ್ನು ಟೀಕಿಸುವ ನೆಪದಲ್ಲಿ “ನಿಜವಾಗಲೂ ಧೀಮಂತ ರಾಜಕಾರಣಿ ಅಂದ್ರೆ ವಾಜಪೇಯಿ ಕಂಡ್ರಿ’’ ಎನ್ನುತ್ತಿದ್ದರು. ಆಗ ವಾಜಪೇಯಿ ಏನೂ ಆಗಿರಲಿಲ್ಲ. ನಮ್ಮವರೇ ಆದ ನಿಜಲಿಂಗಪ್ಪ ಆರೇಳು ವರ್ಷ ಮುಖ್ಯಮಂತ್ರಿಯಾಗಿದ್ದರೂ ಬೆಂಗಳೂರಿನಲ್ಲಿ ಒಂದು ಮನೆಯಾಗಲೀ ಒಂದು ಸೈಟಾಗಲೀ ಇರಲಿಲ್ಲ. ಚಿತ್ರದುರ್ಗದ ಸ್ವಂತ ಮನೆಯಲ್ಲಿದ್ದರು. ಕಡಿದಾಳು ಮಂಜಪ್ಪ ಲಾಯರ್‍ಗಿರಿ ಮಾಡಿಕೊಂಡು ಬದುಕುತ್ತಿದ್ದರು. ಗೋಪಾಲಗೌಡರಂತೂ ಈ ದೇಶ ಕಂಡ ಪ್ರಾಮಾಣಿಕ ಮತ್ತು ನಿಷ್ಠುರದ ರಾಜಕಾರಣಿಯಾಗಿದ್ದರು. ಪರಿವರ್ತನೆಯ ಹರಿಕಾರನಾಗಿದ್ದ ಅರಸು ಇನ್ನೂ ಬದುಕಿದ್ದರು. ಅವರನ್ನೆಲ್ಲಾ ಬಿಟ್ಟು ಮಸೀದಿ ಜಾಗದಲ್ಲಿ ಒಂದು ಭವ್ಯವಾದ ಮಂದಿರವಿದ್ದರೆ ಅಯೋಧ್ಯೆಗೆ ಶೋಭೆ ಎಂದು ಧ್ಯಾನಿಸುತ್ತಿದ್ದ ವಾಜಪೇಯಿ, ಹಿರಣ್ಣಯ್ಯನವರ ಕಣ್ಣಿಗೆ ಧೀಮಂತ ರಾಜಕಾರಣಿಯಾಗಿ ಕಂಗೊಳಿಸಿದ್ದರು.

ಇನ್ನೊಂದು ನಾಟಕದಲ್ಲಿ ಗುಂಡೂರಾಯರನ್ನು ಕುರಿತು “ಪಾಪ ಬ್ರಾಹ್ಮಣ ಮುಖ್ಯಮಂತ್ರಿಯಾಗಿದ್ದಾನೆ. ನಾಲ್ಕು ದಿನ ಇರ್ಲಿ ಬಿಡ್ರಿ’’ ಎಂದಿದ್ದರು. ಆಗ ಜನಾಭಿಪ್ರಾಯವಿಲ್ಲದೆ ಸಂಜಯ ಗಾಂಧಿಯಿಂದ ಕರ್ನಾಟಕದ ಮೇಲೆ ಹೇರಲ್ಪಟ್ಟ ಗುಂಡೂರಾಯರ ಆಡಳಿತ ವೈಖರಿಯಿಂದ ಈ ನಾಡು ಕ್ಷೋಭೆಗೆ ತುತ್ತಾಗಿತ್ತು. ಆಗ ತನ್ನ ಜಾತಿಗೆ ಸೇರಿದ ಗುಂಡೂರಾಯರ ಪರ ವಕಾಲತ್ತು ವಹಿಸಲು ರಂಗಭೂಮಿಯನ್ನೇ ಹಿರಣ್ಣಯ್ಯ ಬಳಸಿಕೊಂಡಿದ್ದರು. ನಾಟಕಕ್ಕೆ ಬಂದ ಪ್ರೇಕ್ಷಕರೂ ಕೂಡ, ಹಿರಣ್ಣಯ್ಯನವರ ಮಾತನ್ನು ಅನುಮೋದಿಸುವ ಮನಸ್ಥಿತಿಯಲ್ಲಿದ್ದರು. ಏಕೆಂದರೆ, ಅವರ ವಾಗ್ಝರಿಯಲ್ಲಿ ಅಂತಹ ಶಕ್ತಿಯಿತ್ತು.

ಇದೇ ಹಿರಣ್ಣಯ್ಯನವರು ಚೆಡ್ಡಿಗಳನ್ನು ಟೀಕಿಸಿದ ಉದಾಹರಣೆ ಇಲ್ಲ. ಟೀಕಿಸಿದರೂ, ತನ್ನ ಮನೆಯವರಿಗೆ ಬುದ್ಧಿ ಹೇಳಿದ ವಿವೇಕದ ದನಿ ಹೊರಡುತ್ತಿತ್ತು. ಅವಕಾಶ ಸಿಕ್ಕಾಗಲೆಲ್ಲಾ ಸೋನಿಯಾ ಗಾಂಧಿಯನ್ನು ಹಿಗ್ಗಾಮುಗ್ಗ ಟೀಕಿಸುತ್ತಿದ್ದ ಅವರು, ಬಳ್ಳಾರಿ ಗಣಿ ಕಳ್ಳರಾದ ರೆಡ್ಡಿ-ರಾಮುಲುಗಳ ಮಾತೃಶ್ರೀ ಸುಷ್ಮಾ ಸ್ವರಾಜ್‍ರನ್ನು ಅಪ್ಪಿ ತಪ್ಪಿ ಟೀಕಿಸಲಿಲ್ಲ.

ಬರಬರುತ್ತ ಹಿರಣ್ಣಯ್ಯನವರ ನಾಟಕ ಮತ್ತು ಬಿಜೆಪಿಗಳ ಸಾರ್ವಜನಿಕ ಭಾಷಣ ಒಂದೇ ತರಹ ಆಗಿದ್ದವು. ಆ ಕಾರಣಕ್ಕೆ ಅವರ ಕುಲಬಾಂಧವರು ಟಿ.ವಿ. ಚಾನೆಲ್‍ಗಳಿಗೆ ಕರೆದು ಕೂರಿಸಿಕೊಂಡು “ಬೇಕಾದ್ದು ಮಾತನಾಡಿ’’ ಎಂದು ಅವಕಾಶ ಕೊಡುತ್ತಿದ್ದರು. ಆಗಲೂ ಕೂಡ ಸೋನಿಯಾ ಮತ್ತವರ ಮಕ್ಕಳನ್ನು ಟೀಕಿಸದೆ ಬಿಡುತ್ತಿರಲಿಲ್ಲ.

ಈತ ಹೇಳುತ್ತಿದ್ದ ಒಂದು ಜೋಕ್ ನೋಡಿ ಹೀಗಿದೆ, “ಬಳ್ಳಾರಿ ಚುನಾವಣೆಗೆ ನನ್ನ ತಾಯಿ ತಂದು ನಿಮ್ಮ ಕೈಗೆ ಕೊಟ್ಟಿದ್ದೀನಿ. ನೀವು ಏನಾರ ಮಾಡಿಕಳಿ ಅಂದ್ಲು ಪ್ರಿಯಾಂಕ ಗಾಂಧಿ, ಅಲ್ಲಾ ಒಬ್ಬ ಕೈ ಹಿಡದ್ರೆ ತಡಕಳಕ್ಕಾಗಲ್ಲ, ಇಡೀ ಬಳ್ಳಾರಿ ಜನ ಆಕೆ ಕೈ ಹಿಡದ್ರೆ ಕತಿಯೇನು’’ ಎಂದು ತಮ್ಮ ಹೊಲಸು ಜೋಕಿಗೆ ತಾವೇ ನಕ್ಕರು. ಸೋನಿಯಾ ಎದುರು ನಿಂತ ಸುಷ್ಮಾ ಬಗ್ಗೆ ಚಕಾರವೆತ್ತುತ್ತಿರಲಿಲ್ಲ.

ಒಂದು ನಿಟ್ಟಿನಲ್ಲಿ ಈ ಹಿರಣ್ಣಯ್ಯನವರು ರಂಗಭೂಮಿಯನ್ನು ತನ್ನ ಸ್ವಂತ ಸಮಸ್ಯೆಗೆ ಬಳಸಿಕೊಂಡಿದ್ದೇ ಹೆಚ್ಚು. ನಾಟಕ ಮಾಡುತ್ತಲೇ ತನ್ನ ತಂದೆಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಿದ್ದರು. “ನನ್ನ ಇವತ್ತಿನ ಖ್ಯಾತಿ, ಸುಖ ನೋಡಕ್ಕೆ ನನ್ನಪ್ಪ ಇಲ್ಲ. ಆ ಭಾಗ್ಯ ನನಗಿಲ್ಲ’’ ಎನ್ನುತ್ತಲೇ ನಾಟಕ ನೋಡುವ ಪ್ರೇಕ್ಷಕರನ್ನು ತನ್ನ ಗೋಳಿನ ಕಡೆ ಸೆಳೆಯುತ್ತಿದ್ದರು. `ದೇವದಾಸಿ’ ನಾಟಕದಲ್ಲಂತೂ ಸೂಳೆಯರ ಬದುಕನ್ನು ಜಾಲಾಡುತ್ತ, “ಬಳ್ಳಾರಿ ಲಲಿತ ನನ್ನ ತಂದೆಯ ಬದುಕನ್ನು ಸರ್ವನಾಶ ಮಾಡಿಬಿಟ್ಟಳು’’ ಎಂದು ಹೇಳಿದ ಮಾತು ಇವತ್ತಿಗೂ ನನ್ನ ತಲೆಯಲ್ಲಿದೆ. ಸೂಳೆಯರ ಬದುಕನ್ನು ತುಚ್ಛವಾಗಿ ಕಾಣುತ್ತಿದ್ದ ಮುಗ್ಧ ಪ್ರೇಕ್ಷಕ, “ಪಾಪ ಬಳ್ಳಾರಿ ಲಲಿತ ಹಾಳು ಮಾಡದೇಯಿದ್ರೆ ಹಿರಣ್ಣಯ್ಯ ಇನ್ನೂ ಇರತಿದ್ರು’’ ಅಂದುಕೊಂಡಿರಬಹುದು.

ಸಾಮಾನ್ಯವಾಗಿ ಹಿರಣ್ಣಯ್ಯನವರ ನಾಟಕ ನೋಡಲು ಬರುತ್ತಿದ್ದ ಪ್ರೇಕ್ಷಕರು, ಬೈಗುಳ ಜಗಳ ನೋಡಿ ಖುಷಿಪಡುವಂತವರೇ ಹೆಚ್ಚು. ತನ್ನ ಪ್ರೇಕ್ಷಕರಾರೆಂದು ಹಿರಣ್ಣಯ್ಯನವರಿಗೂ ಗೊತ್ತಿತ್ತು. ಹೆಂಗಸರನ್ನು ಮತ್ತು ಸೂಳೆಯರನ್ನು ವಾಚಾಮಗೋಚರ ಬೈದರೆ ಪರಮಾನಂದ ಪಡುವವರೂ ಇದ್ದರು. ಒಮ್ಮೆ ಕಡೂರಿನಲ್ಲಿ ಇವರ ನಾಟಕ ನೋಡುತ್ತಿರುವಾಗ ಇದ್ದಕ್ಕಿದ್ದಂತೆ “ಹರಿಜನರನ್ನು ಮುಂದೆ ತರಲು ಬರಗಾಲ ಬಂತಲ್ಲೊ’’ ಎಂದಾಗ ಜನ ಚಪ್ಪಾಳೆ ಹೊಡೆದರು. ಆಗ ಸರಕಾರ ಬಡವರಿಗೆಲ್ಲಾ ಕುರಿ, ಕೋಳಿ, ಎಮ್ಮೆ ಸಾಲ ಕೊಡುತ್ತ ಕೆಳವರ್ಗದ ಕೈ ಹಿಡಿದೆತ್ತಲು ಯತ್ನಿಸಿತ್ತು. ಅದರಿಂದ ಸಿಟ್ಟಾಗಿದ್ದ ವರ್ಗದವರಿಗೆ ಹಿರಣ್ಣಯ್ಯನವರ ಮಾತು ಖುಷಿ ಕೊಟ್ಟಿತು. ಕೂಡಲೆ ತನ್ನ ವರಸೆ ಬದಲಿಸಿದ ಹಿರಣ್ಣಯ್ಯನವರು, “ಹರಿಜನ ಅಂದ್ರೆ ಯಾರು? ಹರಕೊಂಡು ತಿನ್ನೋರು, ಅಂದ್ರೆ ರಾಜಕಾರಣಿಗಳು’’ ಎಂದರು. ಆದರೆ ಈ ತಿದ್ದುಪಡಿಯತ್ತ ಜನ ಗಮನ ಕೊಡಲಿಲ್ಲ. ಅದು ಅರಸು ಯುಗ, ಕೆಳಜಾತಿಗಳು ಅಸಹನೆಗೆ ತುತ್ತಾಗಿದ್ದರಿಂದ ಜನ ಚಪ್ಪಾಳೆ ಹೊಡೆದಾಗಿತ್ತು. ಈತ ಜಗಜೀವನರಾಂರನ್ನ ಟೀಕಿಸಿದಾಗಲೂ ಜನ ಚಪ್ಪಾಳೆ ಹೊಡೆದಿದ್ದರು.

ಜನರ ಕ್ಷುದ್ರ ಮನಸ್ಸಿಗೆ ಹಿತವಾಗುವಂತೆ ಮಾತನಾಡುತ್ತ ಹೋಗುತ್ತಿದ್ದ ಹಿರಣ್ಣಯ್ಯನವರ ಮಾತಿಗೆ ಜನ ತಲೆದೂಗಿ ಮೆಚ್ಚುತ್ತ ಬಂದರೇ ಹೊರತು, ಈತ ರಂಜಿಸುತ್ತಲೇ ಲಾಠಿ ಬೀಸುತ್ತಿರುವ ಪೈಕಿ ಎಂದು ಯಾರು ಗುರುತಿಸಲೇ ಇಲ್ಲ.

ನಿಜಕ್ಕೂ ಒಬ್ಬ ಕಲಾವಿದ ಈ ಸಮಾಜದ ಸೊತ್ತು. ಎಲ್ಲರ ಬದುಕು ಹಸನಾಗುವಂತೆ ಚಿಂತಿಸಿ ಅದನ್ನೇ ರಂಗಭೂಮಿಗೆ ಅಳವಡಿಸಿ ಎಲ್ಲರ ಪ್ರೀತಿಗೆ ಪಾತ್ರನಾಗಬೇಕು. ಆದರೆ ಈ ಹಿರಣ್ಣಯ್ಯ ನಾಟಕದ ನಡುವೆ ಬ್ರಾಹ್ಮಣರನ್ನು ಟೀಕಿಸುತ್ತಲೇ ಬುದ್ಧಿ ಹೇಳಿ, ಸಂಘ ಮಾಡಿಕೊಳ್ಳಲು ಸಲಹೆ ಕೊಡುತ್ತಿದ್ದರು. ಕೂಲಿ ಮಾಡಿದ್ದ ಕಾಸು ಕೊಟ್ಟು ನಾಟಕ ನೋಡಲು ಹೋದವನಿಗೆ ಹಿರಣ್ಣಯ್ಯನವರ ಅಸಂಬದ್ಧ ಮಾತು ಅರಿವಿಗೇ ಬರಲಿಲ್ಲ. ಆದರೆ ಹಿರಣ್ಣಯ್ಯನವರೆ ಸಂಘ ಮಾಡಿ ಬ್ರಾಹ್ಮಣರು ಒಟ್ಟಾಗುವಂತೆ ಶ್ರಮಿಸಿದರು. ದುರಂತವೆಂದರೆ ಇವರ ಇಂತಹ ಕಾರ್ಯಕ್ಕೆ ಕಾಸು ಕೊಟ್ಟವರು ಮಾತ್ರ ಶೂದ್ರರು.

ಹಿರಣ್ಣಯ್ಯನವರು ನಿಜಕ್ಕೂ ನಾಟಕಗಳನ್ನೇ ಆಡಿದ್ದರೆ ಅಲ್ಲಿಂದ ಹಲವಾರು ಜನ ಕಲಾವಿದರು ಬರಬೇಕಿತ್ತು. ಆದರೆ ಹಾಗಾಗಲಿಲ್ಲ. ಏಕೆಂದರೆ, ನೆಪಕ್ಕೆ ತಮ್ಮವರನ್ನೇ ನಿಲ್ಲಿಸಿಕೊಂಡು, ಎಲ್ಲ ಮಾತನ್ನು ತಾವೇ ಆಡುತ್ತ ಜನಕ್ಕೆ ಮಾತಿನ ರಂಜನೆ ನೀಡುತ್ತ ಬಂದ ಅವರ ಗರಡಿಯಿಂದ ಯಾರೂ ಹೊರಬರಲಿಲ್ಲ. ಒಮ್ಮೆ ಹಿರಣ್ಣಯ್ಯನವರು ಒಬ್ಬರೇ ಮಾತನಾಡುವುದರಿಂದ ರೇಗಿದ ಉತ್ತರ ಕರ್ನಾಟಕದ ಮಂದಿ “ಮಾತು ಸಾಕು, ನಾಟಕ ಶುರುಹಚ್ಚಲೇ ಮಗನ’’ ಎಂದು ಕೂಗಿದ್ದೂ ಇದೆ.

ಇವರ ಸಮಕ್ಕೇ ಅಭಿನಯಿಸುತ್ತಿದ್ದ ನಾಗಮಂಗಲ ಕಿಟ್ಟಿ ಎಂಬ ಕಲಾವಿದ, ವಂಚನೆಗೆ ತುತ್ತಾಗಿ ಅಲ್ಲಿಂದ ಹೊರಬಿದ್ದವನು, ಕುಡಿದು ಕುಡಿದು ತೀರಿಕೊಂಡ. ಕಿಟ್ಟಿಯ ಜಾಗಕ್ಕೆ ತನ್ನ ಮಗನನ್ನೇ ತಂದು ನಿಲ್ಲಿಸಿಕೊಂಡ ಹಿರಣ್ಣಯ್ಯನವರ ನಾಲಿಗೆ ಮಾತ್ರ ವಂಶಾಡಳಿತದ ವಿರುದ್ಧ ಗಳಪುತ್ತಲೇ ಇದೆ.

ಹಿರಣ್ಣಯ್ಯನವರು ನಿಜಕ್ಕೂ ಪ್ರತಿಭಾವಂತ ಕಲಾವಿದರು, ಬಹಳ ಕಷ್ಟದಿಂದ ಮುಂದೆ ಬಂದವರು. ಅವರಿಗೆ ಬಾಲ್ಯದಲ್ಲಿ ಬಂದ ಕಷ್ಟಗಳು ಇನ್ನಾರಿಗಾದರೂ ಬಂದಿದ್ದರೆ, ಸರ್ವನಾಶವಾಗಿ ಹೋಗುತ್ತಿದ್ದರು. ಬದುಕಿನ ಕುಲುಮೆಯಲ್ಲಿ ಬೆಂದು ಒಂದು ಕಲಾಕೃತಿಯಾಗಿ ಮೂಡಿಬಂದ ಈ ಕಲಾವಿದನನ್ನು ಸರಿಗಟ್ಟಿ ಮಾತನಾಡುವವರು ರಂಗಭೂಮಿಯಲ್ಲಂತೂ ಯಾರೂ ಇಲ್ಲ. ಇವರನ್ನು ಟೀಕಿಸಿದವರೇ ಇಲ್ಲ. ಇವರ ಭಾಷಾ ಪ್ರಯೋಗ, ಶೈಲಿ ಮತ್ತು ಆಂಗಿಕ ಅಭಿನಯ ರಂಗಭೂಮಿಯ ಶ್ರೇಷ್ಠ ಅಭಿವ್ಯಕ್ತಿ. ಆದರೆ ಕ್ರಮೇಣ ಈತ ರಂಗಭೂಮಿಯ ಕರ್ನಾಟಕದ ಕಣ್ಮಣಿಯಾಗುವುದರ ಬದಲು, ಪುರೋಹಿತಶಾಹಿಗಳ ಹಿತೈಷಿಯಾದದ್ದು ಮನ ಕರಗಿಸುವಂತದ್ದು.

ತಮ್ಮವರು ಕರೆದ ಕೂಡಲೇ ಎದ್ದು ಓಡಿಬರುವ ಹಿರಣ್ಣಯ್ಯ, ಆ ದಿನ ಮೈಸೂರಿಗೂ ಹಾಗೆಯೇ ಬಂದರು. ‘ನಾಗವನ ಕಲ ಸಾಹಿತ್ಯ ವೇದಿಕೆ’ಯವರಿಗೆ ಆ ದಿನ ಸಂಭ್ರಮವೋ ಸಂಭ್ರಮ. ಏಕೆಂದರೆ ‘ನಾಗಾಸ್ ನವಸಿರಿ’ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಸ್ವತಃ ಹಿರಣ್ಣಯ್ಯನವರೇ ಬಂದರು. ಅತಿಥಿ ಭಾಷಣ ಮಾಡಲು ಎದ್ದ ಹಿರಣ್ಣಯ್ಯ, ಸಭೆಯ ಉತ್ಸಾಹ ಕಂಡು, ಆ ಸಭೆಗೇ ಅಪ್ರಸ್ತುತವಾಗಿದ್ದ ರಾಜಕಾರಣದ ವಿಷಯ ತೆಗೆದು, “ಆ ಸೋನಿಯಾ ಗಾಂಧಿ ಬೀದಿಲಿ ಕುಣಿತಿದ್ಲು. ಅಂತಹವಳ ಮಕ್ಕಳು ಬಂದು ಈಗ ದೇಶ ಆಳತೀವಿ ಅಂತ ಕುಂತವರೆ, ಎಲ್ಲಿಗೆ ಬಂತು ನೋಡಿ ನಮ್ಮ ದೇಶದ ಕತೆ’’ ಎಂಬರ್ಥ ಬರುವಂತಹ ಮಾತನಾಡಿದರು. ಅಲ್ಲಿದ್ದ ಪ್ರೇಕ್ಷಕರೂ ಕೂಡ ಅವರ ಮನೋಧರ್ಮದವರೇ ಆಗಿದ್ದುದರಿಂದ ಜೋರಾಗಿ ಚಪ್ಪಾಳೆ ತಟ್ಟಿದರು. ಇದರಿಂದ ಸ್ಫೂರ್ತಿಗೊಂಡ ಹಿರಣ್ಣಯ್ಯನವರು “ಈ ಸಿದ್ದರಾಮಯ್ಯ ಚುನಾವಣೆಗಿಂತ ಮೊದ್ಲು ಜನಗಳ ಕಾಲಿಡೀತಿದ್ದ. ಈಗ ಸೋನಿಯಾ ಗಾಂಧಿ ತಲೆ ಹಿಡೀತಾ ಅವುನೆ’’ ಎಂದುಬಿಟ್ಟರು. ಜನರಿಂದ ಜೋರಾದ ಚಪ್ಪಾಳೆಯ ಸುರಿಮಳೆಯಾಯ್ತು. ಆದರೆ ಈ ಮಾತಿನ ಪರಿಣಾಮ ಮೈಸೂರಿನಲ್ಲಿ ಹರಿದಾಡಿತು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ಸಿಗರು ಮತ್ತು ಸಿದ್ದರಾಮಯ್ಯನವರ ಅಭಿಮಾನಿಗಳು, ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬರುವಷ್ಟರಲ್ಲಿ ಹಿರಣ್ಣಯ್ಯ ನಿರ್ಗಮಿಸಿ, ಬಂಧುಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಸಭೆ ನಡೆದ ಜಾಗದಲ್ಲಿ ಕಾರ್ಯಕರ್ತರು ಹಿರಣ್ಣಯ್ಯನ ಮಾತಿನ ಬಗ್ಗೆ ಪ್ರಶ್ನಿಸಿದಾಗ, “ಅದು ಹಿರಣ್ಣಯ್ಯನವರ ಅಭಿಪ್ರಾಯ. ಅಷ್ಟಕ್ಕೂ ಹಿರಣ್ಣಯ್ಯ ಸರಿಯಾಗಿಯೇ ಮಾತನಾಡಿದ್ದಾರೆ. ಅದರಲ್ಲಿ ತಪ್ಪೇನು?’’ ಎಂಬ ಉದ್ಧಟತನದ ಉತ್ತರ ಕೊಟ್ಟರು. ಇದನ್ನು ಕೇಳಿ ಆಕ್ರೋಶಗೊಂಡ ಕಾರ್ಯಕರ್ತರು ವೇದಿಕೆಗೆ ನುಗ್ಗಿ ಕುರ್ಚಿ, ಫಲಕಗಳನ್ನು ಧ್ವಂಸ ಮಾಡಿದರು. ಆ ಶೂದ್ರಶಕ್ತಿಯನ್ನು ತಡೆಯುವ ಶಕ್ತಿ ಅಲ್ಲಿ ಯಾರಿಗೂ ಇರಲಿಲ್ಲ. ಜನರ ಆಕ್ರೋಶವನ್ನರಿತ ವಿಪ್ರೋತ್ತಮರು ಕೂಡಲೇ ಹಿರಣ್ಣಯ್ಯನವರಿಗೆ ಸುದ್ದಿ ಮುಟ್ಟಿಸಿದರು.

ಸುಮಾರು ಅರ್ಧ ಶತಮಾನ ರಂಗಭೂಮಿಯಲ್ಲೇ ನಿಂತು ಬಾಯಿಗೆ ಬಂದಂತೆ ಬೈದುಕೊಂಡೇ ಬಂದಿದ್ದ ಮತ್ತು ದಕ್ಕಿಸಿಕೊಂಡಿದ್ದ ಹಿರಣ್ಣಯ್ಯನವರಿಗೆ ಮೊದಲ ಬಾರಿಗೆ ಅಳುಕಾಯ್ತು. ಈಗ ಮಾಡುವುದೇನೆಂದು ಯೋಚಿಸುತ್ತಿರುವಾಗ ಸಿದ್ದರಾಮಯ್ಯನವರು ಮೈಸೂರಿನಲ್ಲೇ ಇದ್ದಾರೆಂದು ತಿಳಿಯಿತು. ಅವರ ಮೊರೆ ಹೊಕ್ಕರೆ ಮಾತ್ರ ಆಗಲಿರುವ ಅನಾಹುತದಿಂದ ತಪ್ಪಿಸಿಕೊಳ್ಳಬಹುದೆಂದು ಭೂಸುರೋತ್ತಮರೆಲ್ಲ ಸಲಹೆ ಕೊಟ್ಟರು.

ಆ ಕೂಡಲೇ ಹಿರಣ್ಣಯ್ಯನವರು ಸಿದ್ದರಾಮಯ್ಯನವರ ಮನೆಗೆ ಓಡಿದರು. ಅಲ್ಲಿಗೂ ನುಗ್ಗಿ ಬಂದ ಕಾಂಗ್ರೆಸ್ಸಿಗರ ಆಕ್ರೋಶ ನೋಡಿದ ಹಿರಣ್ಣಯ್ಯನವರ ದೇಹ ಕಂಪಿಸತೊಡಗಿತು. ಆದರೂ ನಗುತ್ತಲೇ ದೈನೇಸಿಯಾಗಿ ಸಿದ್ದರಾಮಯ್ಯನವರ ಕ್ಷಮೆ ಕೇಳಿದ ಹಿರಣ್ಣಯ್ಯ “ನನಗೆ ವಯಸ್ಸಾಗಿದೆ, ನಾಲಿಗೆ ಸಮಸ್ಯೆ ಇದೆ. ಏನೋ ಆಗಿಹೋಯ್ತು ಕ್ಷಮಿಸಿ’’ ಎಂದು ಕೇಳಿಕೊಂಡರು.

ಸಿದ್ದರಾಮಯ್ಯ ತನ್ನದೇ ಆದ ಗತ್ತಿನಲ್ಲಿ ಹುಸಿನಗೆ ಬೀರುತ್ತಾ `ಬ್ರಾಹ್ಮಣನನ್ನು ಕ್ಷಮಿಸುವುದು ಶೂದ್ರನ ಅನಾದಿ ಕಾಲದ ಕರ್ತವ್ಯ’ ಎಂಬಂತೆ “ಕ್ಷಮೆಗಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಆದ್ದರಿಂದ ಈ ವಿಷಯ ಮುಂದುವರಿಸದೆ ಇಲ್ಲಿಗೆ ಬಿಡಿ’’ ಎಂದು ತಮ್ಮ ಬೆಂಬಲಿಗರಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದರು.

ಸಿದ್ದರಾಮಯ್ಯ ಅಷ್ಟು ಹೇಳುತ್ತಿದ್ದಂತೆಯೇ ಹಿರಣ್ಣಯ್ಯನವರು “ನಾನಿನ್ನು ಸಭೆ ಸಮಾರಂಭಗಳಲ್ಲಿ ಮಾತನಾಡಲ್ಲ’’ ಎಂದು ಶಪಥ ಮಾಡಿದರು. ಅದಕ್ಕೆ ಸಿದ್ದರಾಮಯ್ಯ “ಹಾಗೆ ಮಾಡಬೇಡಿ’’ ಎಂದರಲ್ಲದೆ ಹಿರಣ್ಣಯ್ಯನ ಕೈಹಿಡಿದು ಕಾರಿನವರೆಗೂ ಕರೆದುಕೊಂಡು ಹೋಗಿ ಕುಳ್ಳಿರಿಸಿ, ಬೆಂಗಳೂರಿನವರೆಗೂ ಹಿರಣ್ಣಯ್ಯನವರಿಗೆ ಎಸ್ಕಾರ್ಟ್ ರಕ್ಷಣೆ ಕೊಡಿ ಎಂದು ಆಜ್ಞೆ ಮಾಡಿದರು.

ಈ ಪ್ರಕರಣದಲ್ಲಿ ಹಿರಣ್ಣಯ್ಯನವರು ತಾವೇ ತಮ್ಮ ಬಾಯಿಗೆ ಬೀಗ ಹಾಕಿಕೊಂಡರೇ ಹೊರತು, ಇದಕ್ಕೆ ಯಾರೂ ಹೊಣೆಗಾರರಲ್ಲ. ಆದರೆ ಟಿವಿ ಮಾಧ್ಯಮದೊಳಕ್ಕೆ ಬಂದು ಕುಳಿತಿರುವಂತಹ ಪುರೋಹಿತರು, ಹಿರಣ್ಣಯ್ಯನವರು ಆಡಿದ ಮಾತುಗಳನ್ನು ಬಿಟ್ಟು ಇನ್ನೆಲ್ಲ ತರ್ಲೆ ಕೆಲಸಗಳನ್ನು ಮಾಡುತ್ತಿವೆ. ಇವರ ಪ್ರಕಾರ ಮೈಸೂರಿನಲ್ಲಿ ಹಿರಣ್ಣಯ್ಯನವರು ಮಾತನಾಡಿದ್ದು ಸರಿ. ಅದನ್ನ ಸಹಿಸಿಕೊಳ್ಳಬೇಕಿತ್ತು. ಆದರೆ ಕಾಲ ಸರಿದಿದೆ. ಹಿರಣ್ಣಯ್ಯನವರು ಮಾತಿನ ಮೇಲೆ ನಿಗಾ ಇಟ್ಟು ಮಾತನಾಡಿದರೆ ಅವರಿಗೂ ಒಳ್ಳೆಯದು ಈ ನಾಡಿಗೂ ಒಳ್ಳೆಯದು.
ಮೇ, 2014

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...