27 ವರ್ಷದ ಶ್ರದ್ಧಾ ವಾಕರ್ ಮೃತ ದುರ್ದೈವಿ. ದೆಹಲಿಯ ಚತ್ತರ್‌ಪುರದಲ್ಲಿ ಗೆಳೆಯ ಅಫ್ತಾಬ್ ಪೂನವಾಲಾ (28) ಜೊತೆ ವಾಸಿಸಲೆಂದು ಮುಂಬೈನ ವಸಾಯ್‌ನಲ್ಲಿರುವ ತನ್ನ ಮನೆಯನ್ನು ತೊರೆದಿದ್ದಳಾಕೆ. ಶ್ರದ್ಧಾ ಆತನಲ್ಲಿ ಮದುವೆಯಾಗುವಂತೆ ಕೇಳುತ್ತಿದ್ದಳು. ಆದರೆ ಆತ ಒಪ್ಪಲಿಲ್ಲ. ಆಕೆ ತನ್ನ ಜೀವವನ್ನೇ ಕಳೆದುಕೊಂಡಳು.- ಸದ್ಯಕ್ಕೆ ದೆಹಲಿ ಪೊಲೀಸರು ಹೇಳುತ್ತಿರುವುದಿಷ್ಟು.
2019ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಬಂಬಲ್ (Bumbl) ಮೂಲಕ, ವಸಾಯ್‌ನಲ್ಲಿ ವಾಸಿಸುತ್ತಿದ್ದ ಅಫ್ತಾಬ್‌ನನ್ನು ಶ್ರದ್ಧಾ ಭೇಟಿಯಾಗಿದ್ದರು. ಶ್ರದ್ಧಾ ಕುಟುಂಬವು ಈ ಸಂಬಂಧವನ್ನು ಒಪ್ಪಿಕೊಳ್ಳಲಿಲ್ಲ. ಆದ್ದರಿಂದ ಆಕೆ ಅಫ್ತಾಬ್‌ನೊಂದಿಗೆ ವಾಸಿಸಲೆಂದು ತನ್ನ ಕುಟುಂಬವನ್ನು ತೊರೆದಳು. ಮೊದಲು ಮುಂಬೈನಲ್ಲಿ ವಾಸವಿದ್ದರು. ನಂತರ ಮೇ 2022ರಿಂದ ದೆಹಲಿಯಲ್ಲಿ ವಾಸವಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“2019ರಲ್ಲಿ ಶ್ರದ್ಧಾ-ಅಫ್ತಾಬ್ ಜೊತೆಯಲ್ಲಿ ವಾಸಿಸಲು ಆರಂಭಿಸಿದ್ದರು” ಎಂದು ಶ್ರದ್ಧಾ ಸಂಪರ್ಕದಲ್ಲಿದ್ದ ಆಕೆಯ ಸ್ನೇಹಿತ ಲಕ್ಷ್ಮಣ್ ನಾಡಾರ್ ಹೇಳುತ್ತಾರೆ. “ಶ್ರದ್ಧಾ ಆತನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಅವಳ ತಾಯಿ ವಿರೋಧಿಸಿದರು. ಆದ್ದರಿಂದ ಆಕೆ ಮನೆ ಬಿಟ್ಟಿದ್ದಳು”.
ಶ್ರದ್ಧಾ ಮನೆಯಿಂದ ಹೊರಬಂದ ನಂತರ ಇಡೀ ಕುಟುಂಬದಲ್ಲಿ ಆಕೆಯ ತಾಯಿ ಮಾತ್ರ ಶ್ರದ್ಧಾ ಜೊತೆಯಲ್ಲಿ ಸಂಪರ್ಕದಲ್ಲಿದ್ದರು ಎನ್ನುತ್ತಾರೆ ಲಕ್ಷ್ಮಣ್. ಶ್ರದ್ಧಾ ಅವರ ತಾಯಿ 2020ರಲ್ಲಿ ನಿಧನರಾದರು. ಶ್ರದ್ಧಾ ಅವರ ಕುಟುಂಬದೊಂದಿಗಿನ ಏಕೈಕ ಸಂಪರ್ಕ ಲಕ್ಷ್ಮಣ್ ಮಾತ್ರ ಆಗಿದ್ದರು. ಆಕೆ ದೆಹಲಿಗೆ ತೆರಳಿ, ಸಂಪರ್ಕ ಕಡಿತವಾಗುವವರೆಗೂ ಲಕ್ಷ್ಮಣ್ ಮಾತನಾಡಿದ್ದಳು. ಶ್ರದ್ಧಾ ಅವರ ತಂದೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮಗಳ ಮೇಲೆ ನಿಗಾ ಇಟ್ಟಿದ್ದರು.
View this post on Instagram
View this post on Instagram
ಶ್ರದ್ಧಾ ಅವರ ತಂದೆ ತಾಯಿ ನಾಲ್ಕು ವರ್ಷಗಳ ಹಿಂದೆ ಬೇರೆಯಾಗಿದ್ದರು. ಆಕೆ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. 2018ರಲ್ಲಿ ಆಕೆ ವಸೈನಲ್ಲಿನ ಕಾಲ್ ಸೆಂಟರ್‌ನಲ್ಲಿ ಉದ್ಯೋಗ ಆರಂಭಿಸಿದ್ದಳು.
ಶ್ರದ್ಧಾಳನ್ನು ಮಾತನಾಡಿಸಲು ಲಕ್ಷ್ಮಣ್ ಪ್ರಯತ್ನಿಸುತ್ತಲೇ ಇದ್ದರು. ಅವರು ಜೂನ್ ಮತ್ತು ಜುಲೈನಲ್ಲಿ ಸಾಕಷ್ಟು ಸಲ ಆಕೆಗೆ ಕರೆ ಮಾಡಿದರು. ಆದರೆ ಆಕೆಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿತ್ತು. ಲಕ್ಷ್ಮಣ್ ಕಳುಹಿಸಿದ ಸಂದೇಶಗಳಿಗೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಶ್ರದ್ಧಾ ಅವರ ಸಹೋದರ ಶ್ರೀಜಯ್ ವಾಕರ್ ಅವರಿಗೆ ಸೆಪ್ಟೆಂಬರ್ 14ರಂದು ಕರೆ ಮಾಡಿದ ಲಕ್ಷ್ಮಣ್, ಎರಡು ತಿಂಗಳಿನಿಂದ ಶ್ರದ್ಧಾ ಅವರ ಫೋನ್ ಆಫ್ ಆಗಿದೆ ಎಂದು ತಿಳಿಸಿದ್ದರು. ಶ್ರೀಜಯ್ ತನ್ನ ತಂದೆ ವಿಕಾಸ್ ವಾಕರ್‌ಗೆ ಮಾಹಿತಿ ನೀಡಿದ್ದು, ಅವರು ಮಹಾರಾಷ್ಟ್ರದ ಮಾಣಿಕ್‌ಪುರದಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು.
ಕೆಲವು ದಿನಗಳ ನಂತರ, ವಿಕಾಸ್ ವಾಕರ್ ಅವರಿಗೆ ಮಾಣಿಕ್‌ಪುರ ಪೊಲೀಸರು ಪ್ರತಿಕ್ರಿಯಿಸಿ, “ದೆಹಲಿಯ ಛತ್ತರ್‌ಪುರದಲ್ಲಿ ನಿಮ್ಮ ಮಗಳು ಆಕೆಯ ಗೆಳೆಯ ಅಫ್ತಾಬ್‌ನೊಂದಿಗೆ ವಾಸಿಸುತ್ತಿದ್ದಳು” ಎಂದು ಮಾಹಿತಿ ನೀಡಿದರು. ವಿಕಾಸ್ ನವೆಂಬರ್ 8ರಂದು ಶ್ರದ್ಧಾ ಅವರ ಫ್ಲಾಟ್‌ಗೆ ಬಂದರು. ಆದರೆ ಅದು ಲಾಕ್ ಆಗಿತ್ತು. ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಮಗಳ ಅಪಹರಣದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.
ಪೊಲೀಸರಿಗೆ ನೀಡಿದ ದೂರಿನಲ್ಲಿ ವಿಕಾಸ್, “ಅಫ್ತಾಬ್ ಶ್ರದ್ಧಾಳನ್ನು ಥಳಿಸುತ್ತಿದ್ದನು. ಆಕೆ ಸಂಬಂಧ ಚೆನ್ನಾಗಿರಲಿಲ್ಲ ಎಂದು ಶ್ರದ್ಧಾಳ ಸ್ನೇಹಿತರಾದ ಶಿವಾನಿ ಮತ್ತು ಲಕ್ಷ್ಮಣ್ ಹೇಳುತ್ತಾರೆ. ಹಾಗಾಗಿ ನನ್ನ ಮಗಳ ನಾಪತ್ತೆಯಲ್ಲಿ ಅಫ್ತಾಬ್ ಪೂನವಾಲಾ ಕೈವಾಡವಿದೆ ಎಂದು ನನಗೆ ಖಚಿತವಾಗಿದೆ” ಎಂದು ತಿಳಿಸಿದ್ದರು.
ತನ್ನ ತಾಯಿಯ ಮರಣದ ಒಂದು ತಿಂಗಳ ನಂತರ ಶ್ರದ್ಧಾ ನನ್ನನ್ನು ಭೇಟಿ ಮಾಡಿದ್ದಳು. ಅಫ್ತಾಬ್ ಆಗಾಗ್ಗೆ ಹೊಡೆಯುತ್ತಿರುತ್ತಾನೆ ಎಂದು ತಿಳಿಸಿದ್ದಳು ಎಂದು ವಿಕಾಸ್ ದೂರಿನಲ್ಲಿ ವಿವರಿಸಿದ್ದಾರೆ. “ಅಫ್ತಾಬ್‌ನನ್ನು ಬಿಟ್ಟು ಮನೆಗೆ ಹಿಂತಿರುಗುವಂತೆ ಆಕೆಗೆ ಸಲಹೆ ನೀಡಿದ್ದೆ. ಆದರೆ ಅಫ್ತಾಬ್ ಮರುದಿನ ಅವಳಲ್ಲಿ ಕ್ಷಮೆಯಾಚಿಸಿದ್ದನು. ಮತ್ತು ಶ್ರದ್ಧಾ ಅವನೊಂದಿಗೆ ಹಿಂತಿರುಗಿದ್ದಳು” ಎಂದಿದ್ದಾರೆ.
ವಿಕಾಸ್ ಅವರ ದೂರಿನ ಮೇರೆಗೆ ಮೆಹ್ರೌಲಿ ಪೊಲೀಸರು ಅಫ್ತಾಬ್‌ನನ್ನು ಪತ್ತೆಹಚ್ಚಿ ಬಂಧಿಸಿದರು. “ಜಗಳವಾಡಿಕೊಂಡು ಶ್ರದ್ಧಾ ದೂರವಾದಳು. ಆಕೆ ಎಲ್ಲಿಗೆ ಹೋಗಿದ್ದಾಳೆಂದು ನನಗೆ ಗೊತ್ತಿಲ್ಲ ಎಂದು ಆತ ಆರಂಭದಲ್ಲಿ ಹೇಳುತ್ತಿದ್ದ” ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಂಕಿತ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ಪೊಲೀಸರು ಆತನನ್ನು ಕಟ್ಟುನಿಟ್ಟಾಗಿ ವಿಚಾರಣೆಗೆ ಒಳಪಡಿಸಿದಾಗ, “ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು, ಆದರೆ ಆತನಿಗೆ ಇದು ಇಷ್ಟವಿರಲಿಲ್ಲ. ಈ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು. ಮೇ 18ರ ಸಂಜೆ, ಅವರು ಮತ್ತೆ ಜಗಳವಾಡಿದರು. ಅಫ್ತಾಬ್ ನಿಯಂತ್ರಣ ಕಳೆದುಕೊಂಡು ಆಕೆಯ ಕತ್ತು ಹಿಸುಕಿದನು” ಎಂದು ತಿಳಿದುಬಂದಿದೆ.
ತಾನು ಸಿಕ್ಕಿಬೀಳಬಹುದೆಂದು ಗಾಬರಿಗೊಂಡ ಅಫ್ತಾಬ್, ಶ್ರದ್ಧಾಳ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದನು, ನಿರ್ದಿಷ್ಟ ಉದ್ದೇಶಕ್ಕಾಗಿ ಖರೀದಿಸಿದ ಫ್ರಿಜ್‌ನಲ್ಲಿ ಸಂಗ್ರಹಿಸಿದನು. ನಂತರ 18 ದಿನಗಳ ಕಾಲ, ಆತ ಪ್ರತಿ ರಾತ್ರಿ ದೇಹದ ಸಣ್ಣ ತುಂಡುಗಳನ್ನು ತೆಗೆದು ಮೆಹ್ರಾಲಿ ಅರಣ್ಯದಲ್ಲಿ ಎಸೆಯುತ್ತಿದ್ದನು. ಫ್ಲಾಟ್‌ಗೆ ಹಿಂತಿರುಗಿ ಅಗರಬತ್ತಿಗಳನ್ನು ಹಚ್ಚಿಡುತ್ತಿದ್ದನು. ಶವದ ದುರ್ನಾತವನ್ನು ಮರೆಮಾಡಲು ಏರ್ ಫ್ರೆಶ್ನರ್ ಮತ್ತು ಸುಗಂಧ ದ್ರವ್ಯಗಳನ್ನು ಸಿಂಪಡಿಸುತ್ತಿದ್ದನು.
ಇದನ್ನೂ ಓದಿರಿ: ಅಫ್ತಾಬ್- ಶ್ರದ್ಧಾ ಪ್ರಕರಣ: ಕತ್ತರಿಸಿ ಕಾಡಿಗೆ ಎಸೆದಿದ್ದ ದೇಹದ ಬಿಡಿಭಾಗಗಳಿಗೆ ಹುಡುಕಾಟ
ಛತ್ತರ್‌ಪುರದಲ್ಲಿ ಶ್ರದ್ಧಾ ಮತ್ತು ಅಫ್ತಾಬ್ ಅವರ ನೆರೆಹೊರೆಯವರು ಮಾಧ್ಯಮಗಳೊಂದಿಗೆ ನೇರವಾಗಿ ಮಾತನಾಡಲು ನಿರಾಕರಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಹೆಸರು ಹೇಳಲಿಚ್ಛಿಸದೆ ಪ್ರತಿಕ್ರಿಯಿಸಿದ್ದಾರೆ. “ನಾವು ಅಫ್ತಾಬ್ ಅನ್ನು ಮಾತ್ರ ನೋಡಿದ್ದೆವು. ಎಂದಿಗೂ ಶ್ರದ್ಧಾಳನ್ನು ನೋಡಿಲ್ಲ” ಎಂದು ಹಲವರು ಹೇಳಿಕೆ ನೀಡಿದ್ದಾರೆ. ಮೇ 15ರಂದು ಈ ಜೋಡಿಯು ತಮ್ಮ ಫ್ಲಾಟ್‌ಗೆ ತೆರಳಿತ್ತು. ಮೂರು ದಿನಗಳ ನಂತರ ಶ್ರದ್ಧಾಳನ್ನು ಕೊಲೆ ಮಾಡಲಾಗಿತ್ತು.
ಅಫ್ತಾಬ್ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡ ನಂತರ, ಪೊಲೀಸರು ಶ್ರದ್ಧಾಳ ಶವದ ತುಂಡುಗಳನ್ನು ಪತ್ತೆ ಮಾಡಲು ಮೆಹ್ರೌಲಿ ಅರಣ್ಯಕ್ಕೆ ಆರೋಪಿಯನ್ನು ಕರೆದೊಯ್ದರು. ಅವರು ಇಲ್ಲಿಯವರೆಗೆ 13 ತುಣುಕುಗಳನ್ನು ವಶಕ್ಕೆ ಪಡೆದಿದ್ದಾರೆ. ಅವು ಹೆಚ್ಚಿನದಾಗಿ ಮೂಳೆಗಳಾಗಿವೆ. ಆದರೆ ಇನ್ನೂ ವಿಧಿವಿಜ್ಞಾನ ತಪಾಸಣೆಗೆ ಒಳಪಡಿಸಿಲ್ಲ.
“ಈ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿದ್ದರಿಂದ ಈ ಕೊಲೆ ಸಂಭವಿಸಿದೆ ಎಂದು ತೋರುತ್ತದೆ, ಈಗಲೇ ಈ ಬಗ್ಗೆ ಹೆಚ್ಚು ಹೇಳುವುದು ಸರಿಯಲ್ಲ” ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವರದಿ ಕೃಪೆ: ನ್ಯೂಸ್ ಲಾಂಡ್ರಿ


