ಫುಟ್ಬಾಲ್ ದಂತಕತೆ ಮರಡೋನಾ, ವಿಶ್ವ ಶ್ರೇಷ್ಠ ಆಟಗಾರ ಮೆಸ್ಸಿ ಹೀಗೆ ಜಗತ್ತಿಗೆ ಶ್ರೇಷ್ಠ ಫುಟ್ಬಾಲರ್‌ಗಳನ್ನು ನೀಡಿದ ಅರ್ಜೆಂಟೆನಾ ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಯ ಹಂತಕ್ಕೆ ಹೋಗಿ ಮುಗ್ಗರಿಸುತ್ತಿತ್ತು. ವಿಶ್ವ ಶ್ರೇಷ್ಠ ತಂಡವಾಗಿದ್ದರೂ ಕಳೆದ 28 ವರ್ಷಗಳಿಂದ ಯಾವುದೇ ಮಹತ್ವದ ಕ್ರೀಡಾಕೂಟದಲ್ಲಿ ಚಾಂಪಿಯನ್ ಪಟ್ಟವನ್ನು ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಸರಿ ಸುಮಾರು ಮೂರು ದಶಕಗಳ ಅರ್ಜೆಂಟಿನಾದ ಪ್ರಶಸ್ತಿ ಬರ ನೀಗಿದೆ. ಇಂದು ಬೆಳಗಿನ ಜಾವ ಬ್ರೆಜಿಲ್‌ನ ರಿಯೋ ಡಿ ಜನೈರೋದ ವಿಶ್ವ ಪ್ರಸಿದ್ಧ ಮೆರಕಾನಾ ಕ್ರೀಡಾಂಗಣದಲ್ಲಿ ನಡೆದ ಕೋಪ ಅಮೆರಿಕಾ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲುವ ಮೂಲಕ ಲಿಯೋನಲ್ ಮೆಸ್ಸಿ ನಾಯಕತ್ವದ ತಂಡ ಲ್ಯಾಟಿನ್ ಅಮೆರಿಕದ ಫುಟ್ಬಾಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
Di maria's brace for Argentina…leads 1-0
????45'
vamos argentina
Vamos messi#ARGBRA pic.twitter.com/QGMvvP5nLJ— Faizan Khan? (@Itsfaizankhan10) July 11, 2021
ಇಂದು ಬೆಳಗಿನ ಜಾವ ನಡೆದ ಬ್ರೆಜಿಲ್ ಮತ್ತು ಅರ್ಜೆಂಟಿನಾ ತಂಡಗಳ ನಡುವಿನ ಫೈನಲ್ ಪಂದ್ಯ ಕೊನೆ ಕ್ಷಣದವರೆಗೂ ಫುಟ್ಬಾಲ್ ಪ್ರೇಮಿಗಳನ್ನು ರೋಚಕತೆಯ ಉತ್ತುಂಗದಲ್ಲಿ ತಂದು ನಿಲ್ಲಿಸಿತ್ತು. ಜಗತ್ತಿನ ಫುಟ್ಬಾಲ್ ಪ್ರೇಮಿಗಳು ಮೆಸ್ಸಿ ಮತ್ತು ನೆಯ್ಮಾರ್ ಗೋಲು ಸಿಡಿಸುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಮೆಸ್ಸಿಯಾಗಲಿ ನೆಯ್ಮಾರ್ ಆಗಲಿ ಅಂತಿಮ ಹಣಾಹಣಿಯಲ್ಲಿ ಗೋಲು ಸಿಡಿಸದೇ ಫುಟ್ಬಾಲ್ ಪ್ರೇಮಿಗಳನ್ನು ನಿರಾಸೆ ಗೊಳಿಸಿದರು. ಅರ್ಜೆಂಟಿನಾದ ಗೆಲುವಿನ ಗೋಲು ಪಂದ್ಯದ 22 ನಿಮಿಷದಲ್ಲಿ ಎಂಜೆಲ್ ಡಿ ಮಾರಿಯಾ ಅವರ ಮೂಲಕ ಬಂತು. ಆಮೂಲಕ ಅರ್ಜೆಂಟಿನಾ 1-0 ಗೋಲುಗಳ ಅಂತರದಲ್ಲಿ ಬ್ರೆಜಿಲ್ ತಂಡವನ್ನು ಮಣಿಸಿ ಲ್ಯಾಟಿನ್ ಅಮೆರಿಕಾದ ಪುಟ್ಬಾಲ್ ಚಾಂಪಿಯನ್ನು ಪಟ್ಟವನ್ನು ಧರಿಸಿತು.

ಮಿಡ್‌ಫೀಲ್ಡರ್ ರೋಡ್ರಿಗೊ ಡಿ ಪಾಲ್ ನೀಡಿದ ಲಾಂಗ್ ಪಾಸನ್ನು ಮಾರಿಯೋ ಯಾವುದೇ ಪ್ರಮಾದವಿಲ್ಲದೇ ಬ್ರೆಜಿಲ್‌ನ ಗೋಲು ಪೆಟ್ಟಿಗೆ ತಲುಪಿಸಿದರು. ಆ ಕ್ಷಣ ಅರ್ಜೆಂಟಿನಾ ಪಾಳಯದಲ್ಲಿ ಸಂತಸದ ಕಲರವ ಮುಗಿಲು ಮುಟ್ಟಿತು. ಪಂದ್ಯದ ಅಂತ್ಯದವರೆಗೂ ದಕ್ಷಿಣದ ಅಮೆರಿಕದ ಎರಡು ಶ್ರೇಷ್ಠ ತಂಡಗಳು ಗೋಲು ಗಳಿಸಲು ತೀವ್ರ ಹಣಾಹಣಿ ನಡೆಸಿದವಾದರೂ ಗೋಲ್‌ಕೀಪರ್ ಮತ್ತು ಬಲಿಷ್ಠ ರಕ್ಷಣೆಯಿಂದ ಮತ್ತೊಂದು ಗೋಲು ಪಂದ್ಯದಲ್ಲಿ ದಾಖಲಾಗಲಿಲ್ಲ.
ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷ ಜೈರ್ ಬೊಲ್ಸೊನಾರೋ ರಾಜೀನಾಮೆಗೆ ಪಟ್ಟು
ಪಂದ್ಯದ 88 ನೇ ನಿಮಿಷದಲ್ಲಿ ಲಿಯೋನಲ್ ಮೆಸ್ಸಿ ಗೋಲು ಪೆಟ್ಟಿಗೆಯ ಹತ್ತಿರಕ್ಕೆ ಚೆಂಡನ್ನು ತಂದು ಅಭಿಮಾನಿಗಳು ಒಂದು ಕ್ಷಣ ಉಸಿರನ್ನು ಬಿಗಿಹಿಡಿದು ನಿಲ್ಲುವಂತೆ ಮಾಡಿದರು. ಆದರೆ ಮೆಸ್ಸಿ ಫೈನಲ್‌ನಲ್ಲಿ ಅಭಿಮಾನಿಗಳನ್ನು ನಿರಾಸೆ ಗೊಳಿಸಿದರು. ಇಡೀ ಪಂದ್ಯದಲ್ಲಿ ಅರ್ಜೆಂಟಿನಾ ಗೋಲು ಪೆಟ್ಟಿಗೆಗೆ ಭದ್ರ ತಡೆಗೋಡೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿನೇಜ್. ಫೈನಲ್ ಪಂದ್ಯದಲ್ಲಿ ಮಾರ್ಟಿನೇಜ್ ತೋರಿದ ಕೆಚ್ಚೆದೆಯ ಪ್ರದರ್ಶನ ಎಂತಹವರನ್ನಾದರೂ ದಂಗುಬಡಿಸದೇ ಇರಲಾರದು. ಬ್ರೆಜಿಲಿಯನ್ ಸ್ಟ್ರೈಕರ್‌ಗಳ ಪ್ರಬಲ ದಾಳಿಯನ್ನು ಮೆಟ್ಟಿನಿಂತ ಮಾರ್ಟಿನೇಜ್ ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಟ್ರೋಫಿ ಬರಲು ಮುಖ್ಯ ಕಾರಣ.

ಬ್ರೆಜಿಲ್‌ನಲ್ಲಿ ಫೈನಲ್ ಪಂದ್ಯ. ಬ್ರೆಜಿಲ್ ಟ್ರೋಫಿಯಿಂದ ಒಂದು ಹೆಜ್ಜೆಯಷ್ಟೆ ದೂರವಿದೆ. ಆಂತಿಮ ಹಣಾಹಣಿ ಸಾಂಪ್ರದಾಯಿಕ ಎದುರಾಳಿ ಅಜೆಂಟಿನಾ ವಿರುದ್ಧ. ಹಾಗಿದ್ದ ಮೇಲೆ ಬ್ರೆಜಿಲಿಯನ್ ಅಭಿಮಾನಿಗಳ ಉತ್ಸಾಹಕ್ಕೆಲ್ಲಿ ತಡೆ ? ಅಂತಿಮ ಕ್ಷಣದ ವರೆಗೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ನೆರೆದಿದ್ದ ಸಾವಿರಾರು ಬ್ರೆಜಿಲಿಯನ್ ಪ್ರೇಕ್ಷಕರ ಕಂಗಳು ಪಂದ್ಯದಂತ್ಯಕ್ಕೆ ಹನಿಗೂಡಿದ್ದವು. ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.
¡LO LINDO DEL FÚTBOL! Emotivo abrazo entre Messi ?? y Neymar ?? ¡ÍDOLOS!
?? Argentina ? Brasil ??#VibraElContinente #VibraOContinente pic.twitter.com/ecknhlv2VI
— Copa América (@CopaAmerica) July 11, 2021
ಕೊರೊನಾ ಸಾಂಕ್ರಾಮಿಕದ ನಡುವೆಯೂ ಜಗತ್ತಿನ ಅತಿ ಹಳೆಯ ಫುಟ್ಬಾಲ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬ್ರೆಜಿಲ್ ಸರ್ಕಾರ ಮತ್ತು ಬ್ರೆಜಿಲಿಯನ್ ಫುಟ್ಬಾಲ್ ಫೆಡರೇಷನ್ ನಿಜಕ್ಕೂ ಅಭಿನಂದನೆಗೆ ಅರ್ಹರು. ಕ್ರೀಡಾಕೂಟದ ಆರಂಭದಲ್ಲಿ ಬ್ರೆಜಿಲ್‌ನಲ್ಲಿ ನಡೆದ ಪ್ರತಿಭಟನೆಯನ್ನೆಲ್ಲ ಫುಟ್ಬಾಲ್ ತನ್ನ ತೆಕ್ಕೆಯಲ್ಲಿ ಕರಗಿಸಿಕೊಂಡಿದ್ದು ವಿಶೇಷ.
ಇದನ್ನೂ ಓದಿ: ಡಿಯಾಗೋ ಮರಡೋನಾ: ಫುಟ್‌ಬಾಲ್ ಲೋಕವನ್ನು ಪ್ರಜ್ವಲಿಸಿದ ಅದ್ಭುತ ಮಾಂತ್ರಿಕ
2014ರಲ್ಲಿ ಇದೇ ಮೆರಕಾನಾ ಕ್ರೀಡಾಂಗಣದಲ್ಲಿ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಜರ್ಮನಿ ವಿರುದ್ಧ ಪಾರಾಭಾವಗೊಂಡು ನಿರಾಸೆಗೊಳಗಾಗಿತ್ತು. ಇಂದು 2014ರ ಅರ್ಜೆಂಟಿನಾದ ನಿರಾಸೆಯನ್ನು ಅದೇ ಮೆರಕಾನಾ ಕ್ರೀಡಾಂಗಣ ಮರೆಸಿದೆ.
ವಿಶ್ವ ಫುಟ್ಬಾಲ್‌ನ ಮುಕುಟಮಣಿಯಾಗಿ ಕಂಗೊಳಿಸುತ್ತಿರವ ಮೆಸ್ಸಿ ಕ್ಲಬ್ ಫುಟ್ಬಾಲ್‌ನಲ್ಲಿ ಇದುವರೆಗೆ ನೂರಾರು ಪ್ರಶಸ್ತಿಗಳನ್ನು ಹತ್ತಾರು ಚಾಂಪಿಯನ್ ಶಿಫ್ ಜಯಿಸಿದ್ದಾರೆ. ಆದರೆ ಅರ್ಜೆಂಟಿನಾದ ಬಿಳಿ ನೀಲಿ ಪಟ್ಟೆಯ ಜೆರ್ಸಿ ತೊಟ್ಟು ದೇಶಕ್ಕೆ ಟ್ರೋಫಿ ಗೆಲ್ಲುವ ಮೆಸ್ಸಿ ಕನಸು ಇದುವರೆಗೆ ಈಡೇರಿರಲಿಲ್ಲ. ಇಂದು ಮೆಸ್ಸಿ ಮತ್ತು ಅರ್ಜೆಂಟಿನಾದ ದೀರ್ಘಕಾಲದ ಟ್ರೊಫಿ ಕನಸು ನನಸಾಗಿದೆ . ಈ ರೋಚಕ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಯಾಗಿ ಸೇರ್ಪಡೆಗೊಂಡಿತು.

2016 ರ ಜುಲೈ ೧೦ ರಂದು ಅಂದರೆ ಇಂದಿಗೆ ೫ ವರ್ಷ ಮೊದಲು ಫುಟ್ಬಾಲ್ ಕ್ರೀಡೆಯ ಮತ್ತೊಬ್ಬ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ನೇತೃತ್ವದ ಪೋರ್ಚುಗಲ್ ಯುರೋಪಿಯನ್ ಚಾಂಪಿಯಾನ್ ಆಗಿ ಹೊರಹೊಮ್ಮಿತ್ತು. ರೊನಾಲ್ಡೋ ಗೆಲುವಿಗೂ ಪೋರ್ಚುಗಲ್ ಅಭಿಮಾನಿಗಳು ಹೀಗೆಯೇ ಸಂಭ್ರಮಿಸಿದ್ದರು.
ನಿವೃತ್ತಿಯ ಅಂಚಿನಲ್ಲಿರುವ ಫುಟ್ಬಾಲ್ ಜಗತ್ತಿನ ಇಬ್ಬರು ಶ್ರೇಷ್ಠ ಆಟಗಾರರಾದ ಮೆಸ್ಸಿ ಮತ್ತು ರೊನಾಲ್ಡೋ ಇನ್ನೆಷ್ಟು ವರ್ಷ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದು ತಿಳಿದಿಲ್ಲ. ವರ್ಷಗಳ ಹಿಂದೆ ನಿವೃತ್ತಿಯ ನಿರ್ಧಾರ ಮಾಡಿದ್ದ ಮೆಸ್ಸಿ ಅಭಿಮಾನಿಗಳ ಒತ್ತಾಯ ಮತ್ತು ದೇಶಕ್ಕಾಗಿ ಟ್ರೋಫಿ ಗೆಲ್ಲುವ ಕನಸಿನಿಂದ ತಮ್ಮ ನಿವೃತ್ತಿಯಿಂದ ಹಿಂದೆ ಸರಿದಿದ್ದರು.
-ರಾಜೇಶ್ ಹೆಬ್ಬಾರ್
ಇದನ್ನೂ ಓದಿ: ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!


