ಸಿನಿಮಾರಂಗದಲ್ಲಿ ಸ್ಟಾರ್‍ವಾರ್ ಸದ್ದು ಹೊಸತೇನಲ್ಲ. ಆದರೂ ಇಂತಹ ಸ್ಟಾರ್‍ವಾರ್‍ಗಳಿಂದ ಕೊಂಚ ದೂರವೇ ಉಳಿದಿದ್ದದ್ದು ಟಾಲಿವುಡ್ ಮಾತ್ರ. ತೆಲುಗು ಚಿತ್ರರಂಗದ ಕಲಾವಿದರ ನಡುವಿನ ಸಾಮರಸ್ಯ ಬಹು ದೊಡ್ಡದು, ಏನೇ ಭಿನ್ನಾಭಿಪ್ರಾಯವಿದ್ದರೂ ಕೂಲ್‍ಆಗಿ ತಮ್ಮೊಳಗೇ ಬಗೆಹರಿಸಿಕೊಳ್ಳುತ್ತಾರೆ ಎಂಬ ಮೆಚ್ಚುಗೆ ಹರಿದಾಡುತ್ತಿತ್ತು.
ಆದರೆ ಅದೀಗ ಮೆಘಾಸ್ಟಾರ್ ಚಿರಂಜೀವಿ ಮತ್ತು ರಾಜಶೇಖರ್ ಮಾತಿನ ಚಕಮಕಿಯಿಂದ ವೇದಿಕೆಯ ಮೇಲೆಯೇ ಕಂಪಿಸುತ್ತಿದೆ. ಕಳೆದ ವಾರ ತೆಲುಗು ಇಂಡಸ್ಟ್ರಿಯ ಮೂವಿ ಆರ್ಟಿಸ್ಟ್ ಅಸೋಸಿಯೇಷನ್(ಮಾ)ನಿಂದ ಡೈರಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಚಿರಂಜೀವಿ “ನಾನು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಭವನ ಉದ್ಘಾಟನೆಗೆ ಹೋಗಿದ್ದೆ. ಅಲ್ಲಿಯ ಭವನಕ್ಕೆ ಸರ್ಕಾರ ಭೂಮಿ ನೀಡಿದೆ. ಕಾರ್ಪೊರೇಟ್ ಸ್ಟೈಲ್‍ನಲ್ಲಿ ಥಿಯೇಟರ್, ರೂಮ್, ಕ್ಲಬ್, ಮೀಟಿಂಗ್ ಹಾಲ್‍ನಂತಹ ಹಲವು ಸೌಕರ್ಯಗಳನ್ನು ಹೊಂದಿದೆ” ಎಂದೆಲ್ಲಾ ಸ್ಯಾಂಡಲ್‍ವುಡ್‍ನ್ನು ಹೊಗಳಿದರು. ಅಷ್ಟೇಅಲ್ಲದೆ, ಅಂತದ್ದೇ ಸ್ಟೈಲ್‍ನಲ್ಲಿ ನಮ್ಮ “ಮಾ” ಸಂಘವನ್ನು ಕಟ್ಟೋಣ. ನಮ್ಮಲ್ಲಿ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳಿವೆ, ಅವನ್ನೆಲ್ಲಾ ಸಮಾಧಾನದಿಂದ ಮಾತಾಡಿಕೊಂಡು ಬಗೆಹರಿಸಿಕೊಳ್ಳೋಣ, ಬಹಿರಂಗವಾಗಿ ವಾರ್‌ಗೆ ಇಳಿಯೋದು ಬೇಡ ಎಂದರು.
ಈ ಮಾತು ಕೇಳಿದ ರಾಜಶೇಖರ್ ಸ್ಟೇಜ್ ಮೇಲೆ ದೌಡಾಯಿಸಿ ಹಿರಿಯ ನಟ ಪರಚೂರಿ ಗೋಪಾಲಕೃಷ್ಣರ ಕೈಯಲ್ಲಿದ್ದ ಮೈಕ್ ಕಿತ್ತುಕೊಂಡು “ನೀವೇನೋ ಸಮಾಧಾನ ಮಾಡ್ಕಳಿ ಅಂತ ಹೇಳ್ತೀರಿ, ಹೆಂಗಪ್ಪಾ ಸಮಾಧಾನ ಮಾಡ್ಕಳದು. ‘ಮಾ’ ಉಪಾಧ್ಯಕ್ಷನಾದಾಗಿಂದ ಸಂಘಕ್ಕಾಗಿ ಸಿಕ್ಕಾಪಟ್ಟೆ ದುಡಿತಿದ್ದೀನಿ. ಉಪಾಧ್ಯಕ್ಷ ಆದಮೇಲೆ ಒಂದೇ ಒಂದು ಸಿನಿಮಾ ಮಾಡೋಕಾಗಿಲ್ಲ. ಮನೇಲಿ ಉಗಿತಿದ್ದಾರೆ. ಆದರೂ ಕಷ್ಟಪಟ್ಟು ದುಡಿತಿದ್ದೀನಿ. ‘ಮಾ’ ಒಳಗೆ ಗಲಾಟೆಗಳು ನಡೀತಿವೆ. ಏನನ್ನೂ ಬಹಿರಂಗವಾಗಿ ಮಾತನಾಡಲು ಅವಕಾಶ ಕೊಡಲ್ಲಾ. ರಿಯಲ್ ಲೈಫಲ್ಲೂ ಹೀರೋ ಆಗಿರೋ ನನ್ನ ಎಲ್ಲಾ ಸೇರಿ ನನ್ನ ತುಳಿತಿದ್ದಾರೆ” ಎಂದು ರೊಚ್ಚಿಗೆದ್ದು ಅಬ್ಬರಿಸಿದ್ದರು.
ರಾಜಶೇಖರ್ ಅಬ್ಬರಕ್ಕೆ ಬೆರಗಾದ ಚಿರಂಜೀವಿ “ನಮ್ಮ ಮಾತಿಗೆ ನೆಲೆ ಇಲ್ಲ, ನಮ್ಮ ಹಿರಿತನಕ್ಕೂ ಕಿಂಚಿತ್ತೂ ಕಿಮ್ಮತ್ತಿಲ್ಲದ ಕಡೆ ನಾವ್ಯಾಕೆ ಇರಬೇಕು? ಸಭೆಗೆ ಗೌರವ ಕೊಡದ ರಾಜಶೇಖರ್ ವಿರುದ್ಧ ಮಾ ಕ್ರಮ ಕೈಗೊಳ್ಳಬೇಕು ಎಂದು ರೋಷಾವೇಶ ವ್ಯಕ್ತಪಡಿಸಿದರು. ನೀವೇನಪ್ಪಾ ಕ್ರಮ ತಕೊಳದು ನಾನೇ ರಾಜಿನಾಮೆ ಕೊಡ್ತಿನಿ ಇಟ್ಕೊಳಿ ಅಂತ ರಾಜಶೇಖರ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಹೋಗಿದ್ದಾರೆ. ಏನೇ ಇರಲಿ ಶಾಂತಿದೂತರಂತೆ ಯಾವುದೇ ವಿಚಾರಕ್ಕೂ ಸ್ಟಾರ್‌ವಾರ್‌ಗೆ ಇಳಿಯದ ಟಾಲಿವುಡ್ ಮಂದಿ ಒಂದೇ ಬಾರಿಗೆ ವೇದಿಕೆ ಮೇಲೆ ವಾರ್ ಶುರು ಮಾಡಿದ್ದು ಮಾತ್ರ ಬೇಸರದ ಸಂಗತಿ.


