Homeಕವನಮರೆವಿಗೆ ಎದುರಾಗಿ.. ಯುದ್ಧ ವಿರೋಧಿ ಪದ್ಯಗಳು

ಮರೆವಿಗೆ ಎದುರಾಗಿ.. ಯುದ್ಧ ವಿರೋಧಿ ಪದ್ಯಗಳು

- Advertisement -
- Advertisement -

1.

ನನ್ನ ಮಗಳು,
ಅವಳ ಸೈಕಲ್‌ನ ಹ್ಯಾಂಡಲ್ ನಡುವೆ ಕಟ್ಟಿದ್ದ
ಜೇಡರ ಬಲೆಯನ್ನು ಕತ್ತರಿಸಿ
ಆ ಜೇಡರ ಹುಳುವನ್ನು ಘಾಸಿ ಮಾಡಲು
ಸುತರಾಂ ಸಿದ್ಧಳಾಗಲಿಲ್ಲ.

ಎರಡು ವಾರ ಕಾಯ್ದಳು
ಜೇಡ ತಾನೇತಾನಾಗಿ
ಆ ಜಾಗ ಖಾಲೀ ಮಾಡುವ ತನಕ.

ನಾನು ಅವಳಿಗೆ ಬುದ್ಧಿ ಹೇಳಿದೆ.
ಅಲ್ಲ ಮಗಳೇ,
ನೀನು ಆ ಬಲೆಯನ್ನು ಕತ್ತರಿಸಿಬಿಟ್ಟಿದ್ದರೆ
ಜೇಡಕ್ಕೆ ಗೊತ್ತಾಗುತ್ತಿತ್ತು
ಆ ಜಾಗ ಅದರ ಮನೆಯಲ್ಲವೆಂದು,
ಮತ್ತು ನೀನು ಸೈಕಲ್ ಕೂಡ ಓಡಾಡಿಸಬಹುದಿತ್ತು.
ಮಗಳು ಕಣ್ಣು ಪಿಳುಕಿಸುತ್ತ….

ಅಪ್ಪಾ
ಹೀಗೆ ಮಾಡುವುದರಿಂದಲೇ ಅಲ್ವಾ
ಜನ, ರೆಫ್ಯೂಜಿಗಳಾಗೋದು?

ಫಾಡಿ ಜೂಡ,
ಪ್ಯಾಲೆಸ್ತೇನಿಯನ್-ಅಮೆರಿಕನ್ ಕವಿ

******

2.

“ನಾವು ರಿಯಲಿಸ್ಟಿಕ್ ಆಗಿ ಯೋಚಿಸಬೇಕು”
ಎಂದು ರಾಜಕಾರಣಿಗಳು ಎಚ್ಚರಿಕೆಯಿಂದ
ಗಂಭೀರವಾಗಿ ಮಾತಾಡುವಾಗ,
ಬಹುತೇಕ ಅವರು, ಸೋತು ಸುಣ್ಣವಾಗಿದ್ದಾರೆ
ಆದ್ದರಿಂದಲೇ ಅವರು ’ಸಮಾಧಾನ ಪ್ರಿಯರು’

ಆದರೆ, ಇದೇ ರಾಜಕಾರಣಿಗಳು
ಮೌಲ್ಯ, ಹೆಮ್ಮೆ ಮುಂತಾದವುಗಳ ಬಗ್ಗೆ
ಮಾತನಾಡಲು ಶುರು ಮಾಡಿದರೆಂದರೆ,
ಗಮನಿಸಿ,
ಈಗಾಗಲೇ ಅವರ ಜನರಲ್‌ಗಳು
ನಕ್ಷೆಯ ಮೇಲೆ
ಏನೋ ಗುರುತು ಮಾಡುತ್ತಿದ್ದಾರೆ.

ಡಬ್ಲ್ಯು ಎಚ್ ಆಡೆನ್ (1907-1973),
ಬ್ರಿಟಿಷ್-ಅಮೆರಿಕನ್ ಕವಿ

******

3

ಕ್ರೂರಿಯೊಬ್ಬನ ಗೋರಿಯ ಮೇಲಿನ ಬರಹ

ಕೆಲಸದಲ್ಲಿ ಭಾರೀ ಅಚ್ಚುಕಟ್ಟು
ಒಂದು ಕೆಲಸ ಹಿಡಿದರೆ, ಮುಗಿಸುವವರೆಗೂ
ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
ಪದ್ಯ ಅಂತೂ ಅದ್ಭುತ
ಎಂಥ ಸಾಮಾನ್ಯರೂ ಮೈಮರೆತು ತಲೆದೂಗುತ್ತಾರೆ.
ಮನುಷ್ಯ ಜಾತಿಯ ಅವಿವೇಕದ ಇತಿಹಾಸವನ್ನು
ಅರೆದು ಕುಡಿದವರಂತೆ ಮಾತನಾಡುತ್ತಾನೆ.
ಸೈನ್ಯ, ಯುದ್ಧನೌಕೆಗಳ ಬಗ್ಗೆ ಅಪಾರ ತಿಳಿವಳಿಕೆ.
ಪಾರ್ಲಿಮೆಂಟಲ್ಲಿ ತಮಾಷೆ ಮಾಡಿದಾಗ
ಗೌರವಾನ್ವಿತ ಸದಸ್ಯರು
ಬೆಂಚು ಕುಟ್ಟಿ, ಗಹಗಹಿಸಿ ನಗುತ್ತಾರೆ.
ಹಾಗು
ಇವನು ಕಣ್ಣೀರು ಹಾಕಿದಾಗ
ಪುಟ್ಟ ಮಕ್ಕಳು
ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ.

ಡಬ್ಲ್ಯು ಎಚ್ ಆಡೆನ್ (1907-1973), ಬ್ರಿಟಿಷ್-ಅಮೆರಿಕನ್ ಕವಿ

*********

4

ತಾವೋ ಮಾರ್ಗದಲ್ಲಿ
ಹತೋಟಿಗೆ ಬಲಪ್ರಯೋಗ,
ಗೆಲುವಿಗೆ ಆಯುಧ ನಿಷಿದ್ಧ.
ಸೈನಿಕರು ಓಡಾಡಿದಲ್ಲೆಲ್ಲ

ಬೆಳೆದು ನಿಂತಿವೆ ಮುಳ್ಳಿನ ಪೊದೆಗಳು.
ಹಿಂಸೆ ಅಂಟು ರೋಗ
ಉದ್ದೇಶ ಎಷ್ಟೇ ಒಳ್ಳೆಯದಾದರೂ.

ನಿಜದ ನಾಯಕ
ಯುದ್ಧದ ನಂತರ ನೆಲೆಗೊಳ್ಳುವ
ಶಾಂತಿಯ ಬುಡದಲ್ಲಿ ಜ್ವಾಲಾಮುಖಿ ಕಾಣಬಲ್ಲ.
ಅದಕ್ಕೇ ಅವನಿಗೆ ಯುದ್ಧದ ಬಗ್ಗೆ ಹೆಮ್ಮೆಯಿಲ್ಲ.

ಅವನಿಗೆ ತನ್ನ ಬಗ್ಗೆ ನಂಬಿಕೆ
ಆದ್ದರಿಂದ ಬೇರೆಯವರ ಮನ ಒಲಿಸುವುದಿಲ್ಲ,

ಅವನಿಗೆ ತನ್ನ ಬಗ್ಗೆ ಸಮಾಧಾನ
ಆದ್ದರಿಂದ ಬೇರೆಯವರ ಒಪ್ಪಿಗೆ ಬೇಕಿಲ್ಲ,

ಅವನು ತನ್ನನ್ನು ಒಪ್ಪಿಕೊಂಡಿರುವದರಿಂದ
ಜಗತ್ತು ಅವನನ್ನು ಒಪ್ಪಿಕೊಂಡಿದೆ.

ಲಾವೋತ್ಸೆ (ಚೀನಾದ ಪ್ರಾಚೀನ ಕವಿ)

*******

5

ರೆಫ್ಯೂಜಿ ಕ್ಯಾಂಪಿನ ನಾಲ್ಕು ಕವಿತೆಗಳು
(ಅ)
ಅವಳ ಹೆಸರು ಯಾರಿಗೂ ಗೊತ್ತಿಲ್ಲ,
ಮರದ ದಿಣ್ಣೆಯ ಮೇಲೆ ಕುಳಿತಿರುವ
ಆ ಹೆಂಗಸನ್ನು ಯಾರೂ
ಅವಳ ಹೆಸರಿನಿಂದ ಕೂಗುವುದೇ ಇಲ್ಲ.

ಗರಗಸದಿಂದ ಕತ್ತರಿಸಲ್ಪಟ್ಟ
ಮಗುವಿನ ತಾಯಿ ಎಂದೇ

ಗುರುತಿಸುತ್ತಾರೆ ಅವಳನ್ನು ಇಲ್ಲಿ ಎಲ್ಲ
ಈ ರೆಫ್ಯೂಜಿ ಕ್ಯಾಂಪ್‌ನಲ್ಲಿ.

———

(ಆ)

ಅವರು, ತಮ್ಮ ಹಳ್ಳಿ, ಮನೆ, ಒಲೆ,
ಒಲೆ ಮೇಲಿನ ರೊಟ್ಟಿ ಎಲ್ಲವನ್ನೂ
ಇದ್ದಕ್ಕಿದ್ದ ಹಾಗೆಯೇ ಬಿಟ್ಟು
ಓಡಿ ಬಂದ ರಾತ್ರಿಯ

ಹಿಂದಿನ ರಾತ್ರಿ
ಯಾರು ತಟ್ಟಿದ್ದರು ಅವರ ಮನೆಯ ಬಾಗಿಲನ್ನ?

ಯಾಕೆ ಅವರು ತಮ್ಮ ಮನೆಯ
ಬಾಗಿಲು, ಕಿಟಕಿಗಳನ್ನ
ಆಮೇಲೆ ಯಾರಿಗೂ ತೆರೆಯಲೇ ಇಲ್ಲ?

ಯಾಕೆ ಅವರು ಆಮೇಲೆ
ತಮ್ಮ ಮನೆಯ ಹೆಣ್ಣುಮಕ್ಕಳ ಕಣ್ಣಲ್ಲಿ
ಕಣ್ಣಿಟ್ಟು ನೋಡಲೇ ಇಲ್ಲ
ಎನ್ನುವುದನ್ನ ಹೇಳುವುದಕ್ಕಿಂತ ಮೊದಲೇ….

ಭಾರಿ ಚಿನಾರ್ ಮರ
ಕರ್ಕಶವಾಗಿ ಸದ್ದು ಮಾಡುತ್ತಾ
ನೆಲಕ್ಕುರುಳಿತು.
ಅವರಿಗೆ ಹೇಳಬೇಕಾದ್ದನ್ನು ಹೇಳಲಿಕ್ಕಾಗಲೇ ಇಲ್ಲ.

——-

(ಇ)

ತನ್ನ ಟೆಂಟ್ ಹೊರಗೆ
ಆಟ ಆಡುತ್ತಿದ್ದ
ಆ ಪುಟ್ಟ ಹುಡುಗಿ
ಹತ್ತಾರು ಬಾರಿ ಕರೆದರೂ
ನಮ್ಮತ್ತ ಕಣ್ಣೆತ್ತಿ ನೋಡಲಿಲ್ಲ.

ಆಕೆ ಓಡಿ ಹೋಗಿ
ತನ್ನ ಟೆಂಟ್‌ನ ಬಾಗಿಲಲ್ಲಿ
ಎರಡೂ ಬದಿಯ ಹಗ್ಗ ಜಗ್ಗಿ ಹಿಡಿದು
ಅಡ್ಡ ನಿಂತುಕೊಂಡಳು,
ಇನ್ನು ಮುಂದೆ
ಯಾರನ್ನೂ ಒಳಗೆ ಬಿಡಲಾರೆ ಎಂಬಂತೆ.

ಅವಳು ಗುರುತಿಸದ
ಯಾವ ಮುಖಕ್ಕೂ
ಇನ್ನು ಅವಳ ಹೊಸಮನೆಯಲ್ಲಿ
ಜಾಗವಿಲ್ಲ.

———-

(ಈ)

ಒಂದು ಟೆಂಟ್‌ನಿಂದ
ಇನ್ನೊಂದು ಟೆಂಟ್‌ಗೆ,
ಎರಡೇ ಎರಡು ಹೆಜ್ಜೆ ದಾಟಿ
ನವ ವಧು
ಗಂಡನ ಮನೆಗೆ ಬಂದಿದ್ದಾಳೆ.

ನಿನ್ನೆಯತನಕ
ಗುರುತು ಪರಿಚಯವೇ ಇಲ್ಲದ
ಎರಡು ಪರಿವಾರಗಳು
ಇಂದು
ಮದುವೆಯ ಹಾಡು ಹಾಡುತ್ತಾ
ಜೋರಾಗಿ ಗದ್ದಲ ಮಾಡುತ್ತಿವೆ,
ಗುಂಡಿನ ಸದ್ದಿನ ಸುದ್ದಿ
ಒಂದಿಷ್ಟು ಹೊತ್ತಾದರೂ
ಕಿವಿ ಮೇಲೆ ಬೀಳದಂತೆ.

ಚಹಾದ ಪಾತ್ರೆಯಲ್ಲಿ ವಿಧಿಯಿಲ್ಲದೇ

ಕುದಿಯುತ್ತಿರುವ ಬಣ್ಣ ಬಣ್ಣದ ಮಸಾಲೆ.
ವಧುವಿನ ಮೊದಲರಾತ್ರಿ.

ಕಲ್ಪನಾ ಸಿಂಗ್ ಚಿಟ್ನಿಸ್,
ಭಾರತೀಯ-ಅಮೆರಿಕನ ಕವಿ

***********

6

ಮರಿ,
ತೊಗೋ ಈ ಕಿತ್ತಳೆ ಹಣ್ಣು
ಗಫೂರ್‌ನ ಕೊಲ್ಲಬೇಡ
ಅವ ನನ್ನ ಮೊಮ್ಮಗ.

ಮರಿ,
ತೊಗೋ ಈ ಸೇಬು
ಇಸ್ಮಾಯಿಲ್‌ನ ಬಿಟ್ಟುಬಿಡು

ಆವಾ ನನ್ನ ಸಂಬಂಧಿ.

ಮರಿ,
ಈ ಆಲಿವ್ಸ್ ತೊಗೋ
ನಿಸ್ಸಾರ್‌ಗೆ ಏನು ಮಾಡಬೇಡ
ಅವನು ಒಳ್ಳೆಯ ಹುಡುಗ.

ಕೊಲ್ಲಲೇಬೇಕಾದರೆ
ಈ ಮುದುಕಿಯನ್ನು ಕೊಲ್ಲು
ಮಾತು ಸತ್ತ ಊರಿನಲ್ಲಿ
ಈ ಬಾಯ್ಬಡುಕಿಗೇನು ಕೆಲಸ?

ದೇವರನ್ನೂ ಕೊಲ್ಲು
ಅವನಿಗೂ ಬಂದೂಕಿನ ಹೊಗೆ
ಆಗಿ ಬರುವುದಿಲ್ಲ.

ನನ್ನ ಭಾಷೆ
ಅವಳ ರಕ್ತದೊಂದಿಗೆ ಚಿಮ್ಮಿದೆ,
ಸಿಡಿದ ಗುಂಡಿನ ಚೂರುಗಳು

ನನ್ನ ಅಕ್ಷರಗಳನ್ನು ಘಾಸಿ ಮಾಡಿವೆ.
ನನ್ನ ಕವಿತೆಯಿಂದ ರಕ್ತ ಸೋರುತ್ತಿದೆ.

ಕಟಕಟೆಯಲ್ಲಿ ನಿಂತ ಕವಿತೆ
ವಿಷದ ಗಾಳಿಯನ್ನು
ಸಹಿಸಿಕೊಳ್ಳದೆ ಹೋದರೆ ಹೇಗೆ?

ಕೆ. ಸಚ್ಚಿದಾನಂದನ್, ಕೇರಳ ಮೂಲದ ಕವಿ

7

ವಿಯೆಟ್ನಾಂ
“ಮಗಳೇ, ನಿನ್ನ ಹೆಸರೇನು”
“ನನಗೆ ಗೊತ್ತಿಲ್ಲ”

“ಎಷ್ಟು ವಯಸ್ಸು? ಯಾವೂರು?”
“ನನಗೆ ಗೊತ್ತಿಲ್ಲ”

“ಯಾಕೆ ಆ ಬಿಲವನ್ನ ಮತ್ತೆ ಅಗೆಯುತ್ತಿದ್ದೀಯ?”
“ನನಗೆ ಗೊತ್ತಿಲ್ಲ”

“ಎಷ್ಟು ದಿನಗಳಾಯ್ತು ಹೀಗೆ ಅಡಗಿಕೊಂಡು?”
“ನನಗೆ ಗೊತ್ತಿಲ್ಲ”

“ನನ್ನ ಬೆರಳನ್ನ ಯಾಕೆ ಕಚ್ಚಿದೆ?”
“ನನಗೆ ಗೊತ್ತಿಲ್ಲ”

“ನಮ್ಮಿಂದ ಅಪಾಯ ಇಲ್ಲದಿರುವುದು ನಿನಗೆ ಗೊತ್ತಿಲ್ಲವೆ?”
“ನನಗೆ ಗೊತ್ತಿಲ್ಲ”

“ನೀನು ಯಾರ ಪರವಾಗಿರುವೆ?”
“ನನಗೆ ಗೊತ್ತಿಲ್ಲ”

“ಇದು ಯುದ್ಧ, ನೀನು ಯಾರನ್ನಾದರೂ ಆಯ್ಕೆ ಮಾಡಲೇ ಬೇಕು”
“ನನಗೆ ಗೊತ್ತಿಲ್ಲ”

“ನಿನ್ನ ಹಳ್ಳಿ ಇನ್ನೂ ಇದೆಯಾ?”
“ನನಗೆ ಗೊತ್ತಿಲ್ಲ”

“ಈ ಹುಡುಗ, ಹುಡುಗಿ ನಿನ್ನ ಮಕ್ಕಳಾ?”
“ಹೌದು”

ವಿಸ್ವಾವಾ ಸಿಂಬೋರ್‍ಸ್‌ಕ, ಪೋಲಿಶ್ ಕವಿ

ಸಂಗ್ರಹ ಮತ್ತು ಕನ್ನಡ ಅನುವಾದ: ಚಿದಂಬರ ನರೇಂದ್ರ


ಇದನ್ನೂ ಓದಿ: ಪ್ರತಿರೋಧವೊಡ್ಡದೆ ನನ್ನೊಳಗಿನ ಕವಿತೆ ಪೂರ್ಣವಾಗುವುದೇ ಇಲ್ಲ: ಮಿಸ್ರಿಯಾ. ಐ.ಪಜೀರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...