ಶಿವಮೊಗ್ಗದ ಕಡೆಯಿಂದ ಎರಡು ಸುದ್ದಿಗಳು ಬಂದಿವೆ. ಮೊದಲನೆಯದಾಗಿ ನಾಲ್ಕು ನೂರು ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ವೇಗವಾಗಿ ರೆಡಿಯಾಗಿದೆ. ಅದೇ ಟೈಮಿಗೆ ಸರಿಯಾಗಿ ನೂರು ವರ್ಷದ ಇತಿಹಾಸವಿರುವ ವಿಶ್ವೇಶ್ವರಯ್ಯ ಐರನ್ ಸ್ಟೀಲ್ ಕಂಪನಿ ಮುಚ್ಚುತ್ತಿದೆ. ವಿಶ್ವೇಶ್ವರಯ್ಯನವರೂ ಕೂಡ ನೂರು ವರ್ಷ ಬದುಕಿದ್ದರು. ಕಾರ್ಖಾನೆಗೂ ನೂರು ವರ್ಷ ತುಂಬಿದೆ. ಆದ್ರೂ ಯಾರೂ ಉಳಿಸಿಕೊಳ್ಳುವುದಕ್ಕಾಗಲಿಲ್ಲ ಎನ್ನುತ್ತಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿಗೆ ವೇಗದ ರೈಲು ಬಂದಿದೆ. ಕೇವಲ ಐದು ಗಂಟೆಗಳ ಅವಧಿಯಲ್ಲಿ ಶಿವಮೊಗ್ಗದಿಂದ ಬೆಂಗಳೂರು ತಲುಪುವ ರೈಲುಗಳಿವೆ. ಮನಸ್ಸು ಮಾಡಿದ್ದರೆ ಮೂರು ಗಂಟೆಯ ಅವಧಿಯಲ್ಲಿ ತಲುಪುವ ರೈಲು ತರಬಹುದಿತ್ತು. ಆಗ ವಿಮಾನ ನಿಲ್ದಾಣಕ್ಕೆ ಸುರಿಯುವ ನಾಲ್ಕು ನೂರು ಕೋಟಿಯನ್ನು ವಿ.ಐ.ಎಸ್.ಎಲ್‌ಗೆ ವಿನಿಯೋಗಿಸಿ ಸಾವಿರಾರು ಕಾರ್ಮಿಕರನ್ನು ಉಳಿಸಿಕೊಳ್ಳಬಹುದಿತ್ತು. ಆದರೇನು ಈ ರಾಜಕಾರಣಿಗಳಿಗೆ ಬಡವರ ಹೊಟ್ಟೆಗಿಂತ, ಅವರಿಂದ ದೂರವಿದ್ದು ಆಕಾಶದಲ್ಲಿ ಹಾರಾಡುವ ಚಪಲ. ಈಗಾಗಲೇ ಅರಗ ಜ್ಞಾನೇಂದ್ರರ ಮುಂದಾಳತ್ವದಲ್ಲಿ ಎಂ.ಪಿ.ಎಂ (ಮೈಸೂರ್ ಪೇಪರ್ ಮಿಲ್ಸ್) ಬಾಗಿ ಹಾಕಿ ಅದನ್ನು ಸ್ಮಾರಕವನ್ನಾಗಿಸಲಾಗಿದೆ ಈಗ ವಿ.ಐ.ಎಸ್.ಎಲ್ ಸರದಿ. ಅಂತೂ ಎಡೂರಪ್ಪನ ಕಾಲದಲ್ಲಿ ಭದ್ರಾವತಿಯ ಎರಡು ಪ್ರಮುಖ ಕಾರ್ಖಾನೆಗಳು ಗುಜರಿಯ ತಾಣವಾಗಿ ಹೋದವಲ್ಲಾ ಥೂತ್ತೇರಿ.
******
ಎಡೂರಪ್ಪ ಶಿವಮೊಗ್ಗಕ್ಕೆ ಹೋದ ಕೂಡಲೇ ಹೆಲಿಪ್ಯಾಡಿಗೆ ಓಡುವ ಮಾರಿಕೊಂಡ ಮಾಧ್ಯಮದವರು, ಅವರ ಹಿಂದೆಯೇ ಹೋಗಿ ಮನೆಯ ವರಾಂಡದಲ್ಲಿ ಠಳಾಯಿಸಿ ಎಡೂರಪ್ಪನವರ ಆತಿಥ್ಯ ಸ್ವೀಕರಿಸಿ ಅವರು ಊರು ಬಿಡುವವರೆಗೂ ಸುತ್ತುವರೆದಿದ್ದರೂ, ಅಪ್ಪಿತಪ್ಪಿ ವಿ.ಐ.ಎಸ್.ಎಲ್ ಕತೆ ಕೇಳಲಿಲ್ಲವಂತಲ್ಲಾ. ಹಾಳಾಗಿ ಹೋಗಲಿ ಭದ್ರಾವತಿಗಾದರೂ ಹೋಗಿ ಕೊನೆಯುಸಿರಿನ ಕಾರ್ಖಾನೆಯ ಅಂತಿಮ ದರ್ಶನ ಪಡೆಯಬಹುದಿತ್ತಲ್ಲಾ. ಏಕೆಂದರೆ ವಿ.ಐ.ಎಸ್.ಎಲ್‌ನ ಕಾರ್ಮಿಕರು ಬರಿ ಕಾರ್ಮಿಕರಾಗಿರಲಿಲ್ಲ. ನಮ್ಮ ಸಂಸ್ಕೃತಿಯ ವಕ್ತಾರರಾಗಿದ್ದರು. ಅವರು ಸ್ಥಾಪಿಸಿಕೊಂಡ ಸಂಘದಿಂದ ನಾಟಕ ಕಲಿತು ಆಡಿದರು, ಇಡೀ ನಾಡಿನಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತಂದರು. ಅವರಾಡಿದಂತೆ ಜೋಕುಮಾರಸ್ವಾಮಿ ಮತ್ತು ಹಯವದನ ನಾಟಕ ಇನ್ನಾರೂ ಆಡಲಿಲ್ಲ. ಕೆಲವರು ಸಿನಿಮಾಕ್ಕೂ ಹೋದರು. ನೂರು ವರ್ಷದಲ್ಲಿ ಭವ್ಯ ಇತಿಹಾಸ ಹೊಂದಿದ ವಿ.ಐ.ಎಸ್.ಎಲ್‌ಗೆ ಕಬ್ಬಿಣದ ಅದಿರಿನ ಕೊರತೆಯಿರಲಿಲ್ಲ. ನಮ್ಮ ನಾಡಿನ ಗಣಿ ಗುಡ್ಡಗಳು ಚೀನಾದಲ್ಲಿ ಶೇಖರಗೊಂಡಿರುವಾಗ ವಿ.ಐ.ಎಸ್.ಎಲ್‌ಗೆ ಅದಿರಿನ ಕೊರತೆಯಿತ್ತೇ? ಆದರೇನು, ನಮ್ಮ ರಾಜಕಾರಣಿಗಳು ಎಲ್ಲವನ್ನು ಸರ್ವನಾಶ ಮಾಡುತ್ತಿದ್ದಾರೆ. ಜನರ ಮನಸ್ಸನ್ನ ಬೇರೆಡೆಗೆ ತಿರುಗಿಸಲು ಉತ್ಸವ ಮಾಡುತ್ತಿದ್ದಾರೆ. ಇದೇ ಎಡೂರಪ್ಪನವರು ಮಾಡಿರುವ ದಾಖಲೆಗಳಲ್ಲಿ ಎಂ.ಪಿ.ಎಂ, ವಿ.ಐ.ಎಸ್.ಎಲ್ ಮುಳುಗಿ ಹೋದ ಘಟನೆಗಳೂ ಸೇರಿವೆಯಂತಲ್ಲಾ, ಥೂತ್ತೇರಿ.

*****
ಬ್ರಾಹ್ಮಣ್ಯದ ಕೈಗೆ ಸಿಕ್ಕಿ ಸಾವಿರಾರು ವರ್ಷದಿಂದ ಶೂದ್ರ ಸಮೂಹ ನರಳುತ್ತಿರುವಾಗ ಬ್ರಾಹ್ಮಣರು ಎಂದೂ ವಿಶ್ವಾಸದ್ರೋಹಿಗಳಲ್ಲ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥಸ್ವಾಮಿ ಘೋಷಿಸಿದ್ದಾರಲ್ಲಾ. ಈ ಬಗ್ಗೆ ಅವರನ್ನೇ ಕೇಳಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್, “ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ ತಪ್ಪನೊಡದೆ ಬಂದೆಯಾ…..”
“ಹಲೋ ಯಾರು?”
“ಸ್ವಾಮೀಜಿ, ನಾನು ಯಾಹು ಅಂತ ಪತ್ರಕರ್ತ.”
“ಪತ್ರಕರ್ತರು ಅಂದ ಮೇಲೆ ಪ್ರಶ್ನೆ ವುಂಟಲ್ಲಾ ಕೇಳಿ.”
“ಏನಿಲ್ಲ ತಾವು ಈಚೆಗೆ ಬ್ರಾಹ್ಮಣರು ವಿಶ್ವಾಸದ್ರೋಹಿಗಳಲ್ಲ ಅಂತ ಹೇಳೀದ್ದಿರಿ..”
“ಹೌದು ಹೇಳಿದ್ದೇನೆ.”
“ಈ ಮಾತು ಅಪರಾಧವಾಗುತ್ತೆ ಸ್ವಾಮಿ.”
“ಯಂತಕ್ಕೆ?”
“ನಮ್ಮ ಶ್ರೇಣೀಕರಣದ ವ್ಯವಸ್ಥೆಯಲ್ಲಿ ಬ್ರಾಹ್ಮಣ ಹಿಂದೂ ಧರ್ಮದ ಕಳಸ ಪ್ರಾಯವಾಗಿ ತುದೀಲಿದೆ, ಇನ್ನುಳಿದ ಜಾತಿಗಳು ಕೆಳಗಿವೆ. ಬ್ರಾಹ್ಮಣ ವಿಶ್ವಾಸದ್ರೋಹಿಯಲ್ಲ ಅಂದಕೂಡಲೇ ವಿಶ್ವಾಸದ್ರೋಹದ ಜಾತಿ ಹುಟ್ಟಿಕೊಳ್ಳುತ್ತೆ ಅದ್ಯಾವುದು ಅಂತ?”
“ನಾನು ನಮ್ಮ ಬ್ರಾಹ್ಮಣರ ಬಗ್ಗೆ ಹೇಳಿದ್ದು.”
“ಅದೇ ಸ್ವಾಮಿ ನೀವು ವಿಶ್ವಾಸಿಗರು ಅನ್ನದಾದ್ರೆ ವಿಶ್ವಾಸದ್ರೋಹಿಗಳು ಯಾರಾದರೂ ಇರಬೇಕಲ್ಲವ?”
“ಅದು ನಮಗೆ ಗೊತ್ತಿಲ್ಲ.”
“ಮತ್ತೆ ಬ್ರಾಹ್ಮಣ ಬುದ್ಧಿಶಕ್ತಿಯಿಂದ ಕೆಲಸ ಮಾಡ್ತನೆ ಅಂದಿದ್ದಿರಿ.”
“ಅದು ಹೌದು”
“ಹಾಗಾದರೆ ಉಳಿದವರು ಯಾವ ಶಕ್ತಿ ಬಳಸಿ ಕೆಲಸ ಮಾಡ್ತರೆ?”
“ಅದು ನನಗೆ ಗೊತ್ತಿಲ್ಲ.”
“ಅಂಬೇಡ್ಕರ್ ಯಾವ ಶಕ್ತಿ ಬಳಸಿ ಸಂವಿಧಾನ ಬರೆದರು?”
“ನಾನು ಹೇಳಿದ ಅರ್ಥ ಬೇರೆ.”
“ಯಾವ ಅರ್ಥನೂ ಇಲ್ಲ. ಬ್ರಾಹ್ಮಣ ವಿಶ್ವಾಸದ್ರೋಹಿಯಲ್ಲ, ಆತ ಬುದ್ಧಿಶಕ್ತಿಯಿಂದ ಕೆಲಸ ಮಾಡ್ತನೆ ಅನ್ನೊ ನಿಮ್ಮ ಮಾತನ್ನ ವಿಸ್ತರಿಸೋದಾದ್ರೆ ತನ್ನ ಬುದ್ಧಿಶಕ್ತಿಯಿಂದ ವಿಶ್ವಾಸದ್ರೋಹ ಕಾಣದಂಗೆ ಮಾಡ್ತನಲ್ಲವೆ?”
“ಇದು ಅತಿಯಾಯ್ತು.”
“ಇಲ್ಲ ಸ್ವಾಮಿ ಈ ರಾಷ್ಟ್ರದಲ್ಲಿ ವಿಶ್ವಾಸದ್ರೋಹ ಮಾಡಿದ ನೂರಾರು ಬ್ರಾಹ್ಮಣರ ಪಟ್ಟಿಕೊಡಬಲ್ಲೆ. ಆ ಪಟ್ಟಿ ವಳಗಡೆ ನಿಮ್ಮ ಉಡುಪಿ ಮಠದ ಯತಿಗಳೂ ಅವುರೆ. ರಾಮಚಂದ್ರಾಪುರ ಮಠದ ಯತಿಗಳಂತೂ ಮುಂಚೂಣಿಲವುರೆ. ರಾಜಕೀಯವಾಗಿ ನಿಮಗೆ ಉತ್ತರ ಕೊಡದಾದ್ರೆ ರಾಮಕೃಷ್ಣ ಹೆಗಡೆ ಬ್ರಾಹ್ಮಣರಲ್ಲವ?”
“ಅವರು ಹವ್ಯಕರು.”
“ಹವ್ಯಕ ಬ್ರಾಹ್ಮಣರು ಅನ್ನಿ. ಉಪಪಂಗಡದ ವಿಷಯ ತೆಗೆದು ನುಣುಚಿಕೊಬೇಡಿ.”
“ಇಲ್ಲ ಹೇಳಿ.”
“ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.”
“ಹೌದು ಆಗಿದ್ದರು.”
“ಚುನಾವಣೆಲಿ ದೇವೇಗೌಡ್ರು ಬಂಗಾರಪ್ಪ ಇಡೀ ನಾಡನ್ನ ತಿರುಗಿ ಅವರಿಗಾಗಿ ಮತ ಕೇಳಿದ್ರು.”
“ನನಗೆ ಗೊತ್ತಿಲ್ಲ.”
“ಅದಕ್ಕೆ ಐತಿಹಾಸಿಕ ದಾಖಲೆಗಳಿವೆ ಕೇಳಿ. ಆಗ ಜನತಾರಂಗ ಅಧಿಕಾರಕ್ಕೆ ಬಂತು. ಮುಖ್ಯಮಂತ್ರಿ ಆಯ್ಕೆ ಮಾಡುವಾಗ ಹೆಗಡೆ ಮುಂಚೂಣಿಗೆ ಬಂದ್ರು.”
“ಅವರ ಬುದ್ಧಿಶಕ್ತಿ ದೊಡ್ಡದಿತ್ತು. ಅದಕ್ಕೆ ಬಂದರು.”
“ಆಯ್ತು ಅವರ ಬುದ್ಧಿಶಕ್ತಿ ಬಗ್ಗೆ ಎಲ್ಲರಿಗೂ ಗೌರವ ಇತ್ತು. ಆಗ ಭಾರತದ ಪಾದಯಾತ್ರೆ ಮಾಡುತಿದ್ದ ಚಂದ್ರಶೇಖರ್ ಕರ್ನಾಟಕವನ್ನ ಸರಿದಾರಿಗೆ ತಂದು ಕೇಂದ್ರಕ್ಕೆ ಬನ್ನಿ. ದೇವೇಗೌಡರನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳಿದ್ರು.”
“ನನಗೆ ಗೊತ್ತಿಲ್ಲ.”
“ಗೊತ್ತಿಲ್ಲ ಅಂದ್ರೆ ಕೇಳಿ; ಮುಂದೆ ನಿಮ್ಮ ಹೆಗಡೆ ದೇವೇಗೌಡರ ವಿರುದ್ದ ಪಿತೂರಿ ಮಾಡಿ ಅವರ ವಿರುದ್ಧ ತನಿಖಾ ಆಯೋಗ ಮಾಡಿದ್ರು.”
“ಇದೂ ಕೂಡ ನನಗೆ ಗೊತ್ತಿಲ್ಲ.”
“ಗೊತ್ತಿಲ್ಲದ ಮ್ಯಾಲೆ ಸಾರಾಸಗಟು ನಮ್ಮವರು ದ್ರೋಹಿಗಳಲ್ಲ ಅಂತ ಯಾಕೆ ಪ್ರವಚನ ಕೊಡ್ತೀರಿ? ನಿಮ್ಮ ಕೆಲವು ಮಠಗಳಲ್ಲಿರೋ ಕಾಮುಕರು ಗೋಮುಖರು ಏನೇನು ಮಾಡ್ತ ಅವುರೆ ಅಂತ ದಾಖಲೆ ಕೊಡ್ಲಾ?”
“ನಮಗೆ ಯಂತಕ್ಕೆ ಅದು?”
“ಇರಲಿ, ಮುಂದೆ ನೋಡಿಕಂಡು ಮಾತಾಡಿ. ಒಳ್ಳೆಯ ನಡವಳಿಕೆ ಯಾವ ಜನಾಂಗದ ಸೊತ್ತು ಅಲ್ಲ, ಹಾಗೇನೆ ನೀಚತನವೂ ಯಾವ ಜನಾಂಗದ ಸೊತ್ತೂ ಅಲ್ಲ. ಎಲ್ಲ ಜಾತಿಗಳಲ್ಲಿ ಒಳ್ಳೆತನ ಕೆಟ್ಟತನ ಸಮಾನವಾಗಿರತ್ತೆ. ಕಾಲಮಾನದ ಕಾರಣಕ್ಕೆ ಕೆಟ್ಟತನ ಎಲ್ಲರಲ್ಲೂ ಜಾಸ್ತಿಯಾಗ್ತಾ ಇದೆ. ಇದಕ್ಕೆ ಕಾರಣವನ್ನು ನಿಮ್ಮಂತವರು ಕಂಡು ಹಿಡಿಯಬೇಕು, ಅದು ಬಿಟ್ಟು ನಮ್ಮವರು ಸತ್ಯವಂತರು, ನೀತಿವಂತರು, ಧರ್ಮವಂತರು, ಬುದ್ಧಿವಂತರು ಅಂತ ಬೊಬ್ಬೆ ಹೊಡದ್ರೆ ನೀವು ಹಾಸ್ಯಾಸ್ಪದವಾಗ್ತೀರಿ. ರಿಪೇರಿ ಸಾಧ್ಯವಾಗದ ಸ್ಥಿತಿ ತಲುಪ್ತಿರಿ.”
“ಜಗದ್ಗುರುಗಳಿಗೆ ಹೀಗೆ ಹೇಳುವುದು ಬೇಡ.”
“ತಮ್ಮದ್ಯಾವ ಜಗತ್ತೂ!”
ಥೂತ್ತೇರಿ


