ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಟೀಕಿಸಿದ ರಾಜಕೀಯ ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಪರಕಾಲ ಪ್ರಭಾಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ನಿಲುವು ಇರುವುದರಿಂದ ಎಲ್ಲಾ ಎಕ್ಸಿಟ್ ಪೋಲ್‌ಗಳು ಸುಳ್ಳು ಎಂದು ಹೇಳಿದ್ದಾರೆ.
ಮಾಜಿ ಸಂಸದ ಮತ್ತು ಅವಿಭಜಿತ ಆಂಧ್ರಪ್ರದೇಶದ ಮಾಜಿ ಕೃಷಿ ಸಚಿವ ಶೋಬನಾದ್ರೀಶ್ವರ ರಾವ್ ಅವರು ಬರೆದಿರುವ ‘ಅವಿನೀತಿ ಚಕ್ರವರ್ತಿ ನರೇಂದ್ರ ಮೋದಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಪರಕಾಲ ಪ್ರಭಾಕರ್, ಮತ ಎಣಿಕೆ ಸಂದರ್ಭದಲ್ಲಿ ಎನ್‌ಡಿಎಗೆ ನೆರವಾಗುವ ಏಕೈಕ ಉದ್ದೇಶದಿಂದ ಸುಳ್ಳು ಭವಿಷ್ಯ ನುಡಿದಿದ್ದಾರೆ ಎಂದು ಹೇಳಿದ್ದಾರೆ.
ಕೇವಲ 10 ಲೋಕಸಭೆ ಕ್ಷೇತ್ರಗಳಿರುವ ರಾಜ್ಯದಲ್ಲಿ ಎನ್‌ಡಿಎಗೆ 13 ಸ್ಥಾನಗಳು ಎಂಬಂತಹ ಫಲಿತಾಂಶಗಳನ್ನು ನೀಡಿದ ಎಕ್ಸಿಟ್ ಪೋಲ್ ಲೋಪವನ್ನು ಎತ್ತಿ ತೋರಿಸಿದ ಪ್ರಭಾಕರ್, ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಟೀಕಿಸಿದ್ದಾರೆ.
ಚುನಾವಣೆ ಮುಗಿದಿರುವುದರಿಂದ ಯಾರೂ ನಿರಾಶರಾಗುವ ಅಗತ್ಯವಿಲ್ಲ. ಹೆಚ್ಚಿನ ನಿರ್ಗಮನ ಸಮೀಕ್ಷೆಗಳು ಬೋಗಸ್. ಎಕ್ಸಿಟ್ ಪೋಲ್‌ಗಳನ್ನು ಎನ್‌ಡಿಎ ನಡೆಸಿದೆ. ಎನ್‌ಡಿಎಯನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ಮತ ಎಣಿಕೆ ವೇಳೆಯಲ್ಲಿ ಅಕ್ರಮ ಮಾಡಲು ಎನ್‌ಡಿಎ ಶಕ್ತಿಮೀರಿ ಪ್ರಯತ್ನಿಸಲಿದೆ. ಅದರ ಭಾಗವಾಗಿಯೇ ಎನ್‌ಡಿಎ ಪರ ಧನಾತ್ಮಕ ಸಮೀಕ್ಷೆಗಳು ಬಂದಿದೆ. ಮತ ಎಣಿಕೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಜಾಗೃತರಾಗಿರಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾವತ್ತೂ ಸತ್ಯ ಹೇಳಿಲ್ಲ, ನಂಬುವ ಅಗತ್ಯವಿಲ್ಲ ಎಂದು ಶೋಬಾನಾದ್ರೀಶ್ವರರಾವ್ ಹೇಳಿದ್ದಾರೆ. ಕೃಷಿ ಕ್ಷೇತ್ರವನ್ನು ನಿರ್ನಾಮ ಮಾಡಲು ಮೋದಿ ಸಂಕಲ್ಪ ಮಾಡಿದ್ದಾರೆ. ಅವರನ್ನು ಸೋಲಿಸಬೇಕಾಗಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಯುಪಿಎ ಸರಕಾರ ಎಡಪಕ್ಷಗಳ ಬೆಂಬಲದೊಂದಿಗೆ ಉದ್ಯೋಗ ಖಾತ್ರಿ, ಆಹಾರ ಭದ್ರತೆ ಕಾಯಿದೆಯಂತಹ ಹಲವು ಜನಸ್ನೇಹಿ ಕ್ರಮಗಳನ್ನು ಕೈಗೊಂಡಿತ್ತು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯ 7ನೇ ಹಂತದ ಮತದಾನದ ಬೆನ್ನಲ್ಲೆ ಮಾಧ್ಯಮಗಳು ಎಕ್ಸಿಟ್ ಪೋಲ್‌ಗಳ ಫಲಿತಾಂಶವನ್ನು ಪ್ರಕಟಿಸಿತ್ತು, ಎಲ್ಲಾ ಎಕ್ಸಿಟ್ ಪೋಲ್‌ಗಳಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿತ್ತು. ಆದರೆ ಈ ಎಕ್ಸಿಟ್ ಪೋಲ್‌ಗಳನ್ನು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರು ತಿರಸ್ಕರಿಸಿದ್ದರು. ಮಾಧ್ಯಮಗಳ ಎಕ್ಸಿಟ್ ಪೋಲ್‌ಗಳನ್ನು ರಾಹುಲ್ ಗಾಂಧಿ ‘ಮೋದಿ ಪೋಲ್’ ಎಂದು ಕರೆದರೆ, ಎಕ್ಸಿಟ್ ಪೋಲ್‌ನ್ನು ಎರಡು ತಿಂಗಳ ಮೊದಲೇ ಮನೆಯಲ್ಲಿ ಕುಳಿತು ತಯಾರಿಸಲಾಗಿದೆ ಎಂದು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನು ಓದಿ: ಇಸ್ರೇಲ್ ಪ್ರಜೆಗಳಿಗೆ ಪ್ರವೇಶ ನಿಷೇಧಿಸಿದ ಮಾಲ್ಡೀವ್ಸ್


