ಕಳೆದ ವರ್ಷದ ಏಪ್ರಿಲ್‌ನಲ್ಲಿ ರಾಜಸ್ಥಾನದ ಅಲ್ವಾರ್‌ನಲ್ಲಿ ಪತಿಯ ಎದುರೇ 19 ವರ್ಷದ ದಲಿತ ಯುವತಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು (ದೌರ್ಜನ್ಯ ತಡೆ) ಕಾಯ್ದೆಯನ್ನು ಉಲ್ಲೇಖಿಸಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
2019ರ ಏಪ್ರಿಲ್ 26 ರಂದು ತನ್ನ ಪತಿ ಜೊತೆಗೆ ತೆರಳುತ್ತಿದ್ದ 19 ವರ್ಷದ ದಲಿತ ಯುವತಿಯ ಮೇಲೆ ಥಾನಗಾಜಿ-ಅಲ್ವಾರ್ ಬೈಪಾಸ್‌ನಲ್ಲಿ 4 ಮಂದಿ ಅತ್ಯಾಚಾರ ಎಸಗಿದ್ದರು. ಅದನ್ನು ವಿಡಿಯೋ ಚಿತ್ರಿಕರಣ ಮಾಡಿ ದೂರು ನೀಡಿದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದರು. ನಂತರ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ್ದ ಆರೋಪಿಗಳು ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರು.
ಘಟನೆ ಕುರಿತು ದೇಶಾದ್ಯಂತ ಆಕ್ರೋಶ ಕಂಡುಬಂದ ಹಿನ್ನೆಲೆ ಮೇ 2 ರಂದು ಅತ್ಯಾಚಾರವೆಸಗಿದ್ದ ನಾಲ್ವರು ಆರೋಪಿಗಳು ಮತ್ತು ವಿಡಿಯೋ ಚಿತ್ರಿಕರಣ ಮಾಡಿದ್ದ ಮತ್ತೊಬ್ಬನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಅಪರಾಧಿಗಳಿಗೆ ಅಲ್ವಾರ್‌ನ ಸ್ಥಳೀಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಘಟನೆಯ ವಿಡಿಯೋ ತುಣುಕನ್ನು ಚಿತ್ರೀಕರಿಸಿದ ಮತ್ತು ಪ್ರಸಾರ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯಡಿ ಒಬ್ಬ ಅಪರಾಧಿಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ನೀಡಿದೆ.
ಇದನ್ನೂ ಓದಿ: ಹತ್ರಾಸ್: ಘಟನೆಯನ್ನು ’ಅಸಾಧಾರಣ ಮತ್ತು ಆಘಾತಕಾರಿ’ ಎಂದು ಕರೆದ ಸುಪ್ರೀಂ
2019 ರ ಮೇ 2 ರಂದು ದಾಖಲಾದ ಎಫ್‌ಐಆರ್ ಪ್ರಕಾರ, ಐವರು ಪುರುಷರು ಸಂತ್ರಸ್ತೆಯ ಗಂಡನನ್ನು ಸುಮಾರು 3 ಗಂಟೆಗಳ ಕಾಲ ಥಳಿಸಿದ್ದಾರೆ. ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿ, ವಿಡಿಯೋ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿ 10,000 ಸಾವಿರ ರೂಪಾಯಿ ಕೇಳಿದ್ದಾರೆ. ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಆ ದಿನವೇ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ದಾಖಲಿಸಿದ 16 ದಿನಗಳ ನಂತರ ಪೊಲೀಸರು ಮೇ 18, 2019 ರಂದು ಆರೋಪಿಗಳಾದ ಚೋಟೇ ಲಾಲ್ (22), ಹನ್ಸ್‌ರಾಜ್ ಗುರ್ಜರ್ (20), ಅಶೋಕ್ ಕುಮಾರ್ ಗುರ್ಜರ್ (20) ಮತ್ತು ಇಂದ್ರಜ್ ಸಿಂಗ್ ಗುರ್ಜರ್ (22) ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ದಾಖಲಿಸಿದ್ದರು. ಐದನೇ ಆರೋಪಿ ಮುಖೇಶ್ ಗುರ್ಜರ್ (28) ವಿರುದ್ಧ ವಿಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಅಂದಿನ ಎಸ್‌ಪಿ ರಾಜೀವ್ ಪಚಾರ್ ಮತ್ತು ಥಾನಗಾಜಿ ಎಸ್‌ಎಚ್‌ಒ ಸರ್ದಾರ್ ಸಿಂಗ್ ಅವರನ್ನ ರಾಜ್ಯ ಸರ್ಕಾರ ಅಮಾನತುಗೊಳಿಸಿತು. ಜೂನ್ 7 ರಂದು, ರಾಜ್ಯ ಸರ್ಕಾರವು ಐಪಿಸಿಯ ಸೆಕ್ಷನ್ 166 ಎ (ಸಿ) ಅಡಿಯಲ್ಲಿ ಎಸ್‌ಎಚ್‌ಒ ಸರ್ದಾರ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಸರ್ಕಲ್ ಅಧಿಕಾರಿ ಜಗಮೋಹನ್ ಶರ್ಮಾ ಅವರನ್ನು ಚಾರ್ಜ್‌ಶೀಟ್ ಮಂಡಿಸಿದ ನಂತರ ಜಿಲ್ಲೆಯಿಂದ ವರ್ಗಾಯಿಸಲಾಯಿತು. ಥಾನಗಾಜಿ ಪೊಲೀಸ್ ಠಾಣೆಯ ಇತರ ಸಿಬ್ಬಂದಿಯನ್ನು ಜೈಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಹೊರಗೆ ಕಳುಹಿಸಲಾಗಿತ್ತು.
ಸದ್ಯ ಹತ್ರಾಸ್‌ನ 19 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕಾವು ದೇಶಾದ್ಯಂತ ಹೆಚ್ಚಾಗಿರುವ ಸಮಯದಲ್ಲಿ ಈ ತೀರ್ಪು ಹೊರಬಿದ್ದಿದೆ. ಒಂದೂವರೆ ವರ್ಷದ ಅವಧಿಯಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ.


