Homeಪುಸ್ತಕ ವಿಮರ್ಶೆಜೀನ್-ಪಾಲ್ ಸಾರ್ತೃ ಅವರ ’ಬುದ್ಧಿಜೀವಿ ಬಿಕ್ಕಟ್ಟುಗಳು’ವಿನಿಂದ ಆಯ್ದ ಅಧ್ಯಾಯ; ಬುದ್ಧಿಜೀವಿ ಮತ್ತು ಜನಸಾಮಾನ್ಯರು

ಜೀನ್-ಪಾಲ್ ಸಾರ್ತೃ ಅವರ ’ಬುದ್ಧಿಜೀವಿ ಬಿಕ್ಕಟ್ಟುಗಳು’ವಿನಿಂದ ಆಯ್ದ ಅಧ್ಯಾಯ; ಬುದ್ಧಿಜೀವಿ ಮತ್ತು ಜನಸಾಮಾನ್ಯರು

- Advertisement -
- Advertisement -

ಬುದ್ಧಿಜೀವಿಗೆ ಯಾರೂ ಕೂಡಾ ಇಂಥದೇ ಕಾರ್ಯವನ್ನು ಮಾಡು, ಹೀಗೇ ಯೋಚಿಸು ಎಂದು ನಿರ್ದೇಶನವನ್ನು ನೀಡಿರುವುದಿಲ್ಲ. ಅವನ ಅತ್ಯಂತ ಮುಖ್ಯ ವೈರುಧ್ಯವೆಂದರೆ, ತನ್ನನ್ನು ತಾನು ಮುಕ್ತನನ್ನಾಗಿ ಮಾಡಿಕೊಳ್ಳಬೇಕೆಂದರೆ ಇತರರೂ ಕೂಡ ಬಿಡುಗಡೆ ಪಡೆಯಬೇಕು. ಇವೆರಡೂ ಒಂದೇ ಸಮಯದಲ್ಲಿ ಜರುಗಬೇಕು. ಏಕೆಂದರೆ ಪ್ರತಿ ಮಾನವರಿಗೂ ಅವರದ್ದೇ ಆದ ಗುರಿಗಳು ಇರುತ್ತವೆ. ಆ ಗುರಿಗಳನ್ನು ವ್ಯವಸ್ಥೆಯು ಅವರಿಂದ ಕಸಿದುಕೊಂಡಿರುತ್ತದೆ. ಇಲ್ಲವೇ ಆ ಗುರಿಯನ್ನು ಅವರು ತಲುಪಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಿಸಿರುತ್ತದೆ. ಹೀಗೆ ತಮ್ಮ ಗುರಿಯನ್ನು ಸಾಧಿಸಲಾಗದೆ ಕೇವಲ ದುಡಿಮೆಯಲ್ಲೇ ನಿರತರಾಗಿರುವ ಪರಿಸ್ಥಿತಿ ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಆಳುವ ವರ್ಗದ ಜನರಲ್ಲೂ ಮೈದಳೆದಿರುತ್ತದೆ. ಅವರು ತಾವು ತಮ್ಮದಲ್ಲದ ಅಮಾನವೀಯ ಗುರಿಗಳಿಗಾಗಿ ಸದಾ ದುಡಿಯುತ್ತಿರುತ್ತಾರೆ. ಈ ಅಮಾನವೀಯ ಗುರಿಯು ಒಟ್ಟಾರೆಯಾಗಿ ಲಾಭಗಳಿಕೆಯೇ ಆಗಿರುತ್ತದೆ. ಹಾಗಾಗಿ ತನ್ನ ಒಳಗಿರುವ ವೈರುಧ್ಯ ಯಾವುದೆಂಬುದರ ಅರಿವು ಮೂಡಿದ ಬುದ್ಧಿಜೀವಿಯು ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ತನ್ನಂತೆಯೇ ಹೋರಾಟದಲ್ಲಿ ತೊಡಗಿರುವವರ ಜೊತೆಯಲ್ಲಿ ಪ್ರಯತ್ನಶೀಲನಾಗಿರುತ್ತಾನೆ.

ಬುದ್ಧಿಜೀವಿಯು ತನ್ನ ಬಾಲ್ಯದಿಂದ ಯಾವ ತಾತ್ವಿಕತೆಯನ್ನು ಮೈಗೂಡಿಸಿಕೊಂಡಿದ್ದಾನೋ ಅದನ್ನು ’ವಸ್ತುನಿಷ್ಠ’ವಾಗಿ ಅಧ್ಯಯನ ಮಾಡುವ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸಿದರೆ ಸಾಕು ಎಂದು ತಿಳಿಯುವುದು ತಪ್ಪಾಗುತ್ತದೆ. ಹಾಗೆ ನೋಡಿದರೆ ಅವನು ಬದುಕುತ್ತಿರುವ ಬಗೆ ಮತ್ತು ಅವನು ಪಡೆದುಕೊಂಡಿರುವ (ಕಲಿಕೆಯಿಂದ) ಜ್ಞಾನ ಇವೆರಡೂ ಕೂಡಿ ಅವನ ತಾತ್ವಿಕತೆಯೊಂದು, ಅವನ ಸ್ವಂತ ತಾತ್ವಿಕತೆಯಾಗಿ ರೂಪುಗೊಂಡಿರುತ್ತದೆ. ಈ ತಾತ್ವಿಕತೆಯ ಬಣ್ಣದ ಗಾಜಿನ ಮೂಲಕವೇ ಜಗತ್ತನ್ನು ಅವನು ನೋಡುತ್ತಿರುತ್ತಾನೆ. ತಾನು ಹೀಗೆ ಮಾಡುತ್ತಿದ್ದೇನಲ್ಲವೇ ಎಂಬ ಅರಿವು ಅವನಲ್ಲಿ ಮೂಡಿದಾಗ ತನ್ನ ತಪ್ಪು ಅವನಿಗೆ ಗೊತ್ತಾಗುತ್ತದೆ. ಅದರಿಂದ ಅವನು ನೋವುಣ್ಣುತ್ತಾನೆ. ಆದರೆ ಹೀಗೆ ನೋವುಣ್ಣುವುದಷ್ಟೇ ಸಾಲದು; ತಾನು ಬಳಸುತ್ತಿರುವ ಈ ತಾತ್ವಿಕತೆಯಿಂದ ಅವನು ದೂರ ನಿಂತು ನೋಡುವುದನ್ನು ಆತ ಮೊದಲು ಮಾಡಬೇಕು. ಇದು ಸುಲಭದ ಸಂಗತಿಯಲ್ಲ. ಅಲ್ಲದೆ ಅದನ್ನು ಅವನು ಏಕಾಂಗಿಯಾಗಿ ಮಾಡಲಾರ. ಅವನು ಬದುಕುತ್ತಿರುವ ಕಾಲದ ಚಾರಿತ್ರಿಕ ಪ್ರಜ್ಞೆ ಅವನ ನೆರವಿಗೆ ಬರಬೇಕು. ಈ ಚಾರಿತ್ರಿಕ ಪ್ರಜ್ಞೆಯು ಒದಗಿಸುವ ನೋಟ ಮತ್ತು ಅವನ ತಾತ್ವಿಕತೆಗಳು ಒದಗಿಸಿರುವ ನೋಟ ಇವೆರಡೂ ಒಂದಕ್ಕೊಂದು ಸಂಪೂರ್ಣವಾಗಿ ವಿರುದ್ಧವಾಗಿರುತ್ತವೆ. ಈ ವೈರುಧ್ಯವನ್ನು ಪರಿಹರಿಸಲು ಅವನಿಗೆ ದಾರಿಗಳು ದೊರಕಬೇಕು. ಬರಲಿರುವ ದಿನಗಳು ಹೇಗಿರುತ್ತವೆ ಎಂಬುದನ್ನು ಕಲ್ಪಿಸಿಕೊಂಡು ಅದಕ್ಕನುಗುಣವಾಗಿ ಈ ವೈರುಧ್ಯವನ್ನು ಪರಿಹರಿಸಲು, ನಿವಾರಿಸಿಕೊಳ್ಳಲು ಸಾಧ್ಯವಾಗದು.

ಏಕೆಂದರೆ ಅವನಿಗೆ ಬರಲಿರುವ ದಿನಗಳ ಸ್ವರೂಪ ಪರಿಪೂರ್ಣವಾಗಿ ಅರಿವಿಗೆ ಬಂದಿರುವುದಿಲ್ಲ. ಅದನ್ನು ಊಹೆಯ ಮೂಲಕ ಅವನು ಕಟ್ಟಿಕೊಳ್ಳಲಾರ. ಏಕೆಂದರೆ ಹಾಗೆ ಮಾಡಲು ಹೊರಟಾಗ ಅವನ ಪೂರ್ವಗ್ರಹಗಳು ಅವನನ್ನು ತಪ್ಪಿಸುತ್ತವೆ. ಹೀಗಿದ್ದೂ ಮುಂದುವರೆದರೆ ಯಾವ ಹಾದಿಯನ್ನು ತುಳಿಯಬಾರದೆಂದು ಅಂದುಕೊಂಡಿರುತ್ತಾನೋ ಅದನ್ನೇ ಮರಳಿ ಗೊತ್ತಿಲ್ಲದಂತೆ ಕ್ರಮಿಸಲು ಮೊದಲು ಮಾಡಿರುತ್ತಾನೆ. ಇದಲ್ಲದೆ ಅವನಿಗೆ ಇರುವ ಇನ್ನೊಂದು ದಾರಿಯೆಂದರೆ ಆತ ತಾತ್ವಿಕವಾಗಿ ತನ್ನನ್ನು ತಾನು ಹೊರಗಿರಿಸಿಕೊಂಡು ಯಜಮಾನ ವರ್ಗದ ಚಿಂತನೆಗಳನ್ನು ಪರಿಶೀಲಿಸಲು ಹೊರಟರೆ ಆಗಲೂ ಕೂಡ ಅವನಲ್ಲೇ ಈಗ ಇರುವ ವೈರುಧ್ಯಗಳು ಪರಿಹಾರಗೊಳ್ಳದೆ ಹಾಗೇ ಉಳಿದುಕೊಳ್ಳುತ್ತವೆ. ಈತ ಯಾವ ವರ್ಗಕ್ಕೆ ಸೇರಿರುತ್ತಾನೋ ಆ ವರ್ಗಕ್ಕಿಂತ ಮೇಲಿನ ಸ್ತರದಲ್ಲಿರುವ, ಆರ್ಥಿಕವಾಗಿ ಬಲಶಾಲಿಯಾಗಿರುವ ಆಳುವ ವರ್ಗದ ತಾತ್ವಿಕತೆಗೆ ತಾನು ಮತ್ತೆ ಶರಣಾಗಿ ಯಾವ ಗೊಣಗಾಟವೂ ಇಲ್ಲದಂತೆ ಅದರ ಅನುಯಾಯಿಯಾಗಿಬಿಡುವ ಸಾಧ್ಯತೆಯೇ ಹೆಚ್ಚು. ಅಂದರೆ ಅವನಿಗೆ ಈಗ ಉಳಿದಿರುವ ದಾರಿ ಒಂದೇಒಂದು. ತಾನಿರುವ ಸಮಾಜವನ್ನು ಅವನು ಅರಿತುಕೊಳ್ಳಬೇಕಾದರೆ, ತನ್ನ ವೈರುಧ್ಯವನ್ನು ಪರಿಹರಿಸಿಕೊಳ್ಳಬೇಕಾದರೆ ಆತ ಅತ್ಯಂತ ದಮನಿತ ನೆಲೆಯಲ್ಲಿರುವ ವರ್ಗದ ಪರಿಪ್ರೇಕ್ಷ್ಯವನ್ನು ತನ್ನದನ್ನಾಗಿ ಮಾಡಿಕೊಳ್ಳುವುದೇ ಅವನಿಗೆ ಉಳಿದಿರುವ ಆಯ್ಕೆ.

ಹಾಗೆಂದು ದಮನಿತರು ಸಾರ್ವತ್ರಿಕತೆಯನ್ನು, ವಿಶ್ವಾತ್ಮಕತೆಯನ್ನು ಪ್ರತಿನಿಧಿಸುತ್ತಾರೆಂದು ತಿಳಿಯುವಂತಿಲ್ಲ. ಏಕೆಂದರೆ ಸದ್ಯ ವಿಶ್ವಾತ್ಮಕತೆ ಇಲ್ಲವೇ ಸಾರ್ವತ್ರಿಕತೆ ಎನ್ನುವುದು ಈಗಾಗಲೇ ಸಿದ್ಧವಾಗಿ ಇದೆ ಎಂದು ತಿಳಿಯುವುದೇ ಒಂದು ಭ್ರಮೆ. ಅದು ಇನ್ನೂ ಆವಿಷ್ಕಾರಗೊಂಡಿಲ್ಲ. ಆದರೆ ದಮನಿತರು ಬಹುಸಂಖ್ಯಾತರು ಎಂಬುದನ್ನು ಗಮನಿಸಬೇಕು. ಅವರು ಶೋಷಣೆ ಮತ್ತು ದಮನಗಳಿಂದಾಗಿ ಮೂಲೆಗುಂಪಾಗಿದ್ದಾರೆ. ತಮ್ಮ ದುಡಿಮೆಯ ಮೂಲಕ ಸಿದ್ಧಗೊಂಡ ಉತ್ಪನ್ನಗಳಿಂದ ಹೊರಗೆ ಉಳಿದಿದ್ದಾರೆ. ಅವರಿಂದ ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಅವರು ಕೇವಲ ಸಾಧನಗಳಾಗಿ ಮಾತ್ರ ಬಳಕೆಯಾಗುತ್ತಿದ್ದಾರೆ. ಅವರಿಗೆ ದುಡಿಮೆಯೇ ಅವರ ಕರ್ತವ್ಯವೆಂದು ನಿರ್ದೇಶಿಸಲಾಗಿದೆ. ತಮ್ಮನ್ನು ಹೀಗೆ ಮೂಲೆಗುಂಪಾಗಿ ಮಾಡಿರುವುದರ ವಿರುದ್ಧ ಅವರು ಹೋರಾಡುವುದು ಅನಿವಾರ್ಯ. ಈ ಅಸಂಗತ ಸನ್ನಿವೇಶದಿಂದ ಅವರು ಹೊರಗೆ ಬರಲೇಬೇಕು. ಈ ಹೋರಾಟದ ಮೂಲಕ ಅವರು ಸಾರ್ವತ್ರಿಕವಾಗಲು ಯತ್ನಿಸುತ್ತಿರುತ್ತಾರೆ. ಆದರೆ ಈ ಸಾರ್ವತ್ರಿಕತೆಯು ಬೂರ್ಜ್ವಾಸಿಯು ಪ್ರತಿಪಾದಿಸುವ ಬಗೆಯದ್ದಲ್ಲ. ಬೂರ್ಜ್ವಾಸಿಯು ತಾನೇ ಒಂದು ಸಾರ್ವತ್ರಿಕವಾಗಿರುವ ಮತ್ತು ದಿಟದ ತಳಹದಿಯ ಮೇಲೆ ಕಟ್ಟಿರುವ ವರ್ಗ ಎಂಬ ಭ್ರಮೆಯನ್ನು ಹುಟ್ಟಿಹಾಕಿದೆ. ದಮನಿತರು ಹುಡುಕುತ್ತಿರುವ ಸಾರ್ವತ್ರಿಕತೆಯ ಗುರಿ ಒಂದು ವರ್ಗರಹಿತ ಸಮಾಜವಾಗಿರುತ್ತದೆ. ಅಲ್ಲಿ ಯಾರೂ ಮೂಲೆಗುಂಪಾಗಿರುವುದಿಲ್ಲ. ಮೂಲೆಗುಂಪು ಮಾಡುವ ಎಲ್ಲ ಪರಿಕರಗಳನ್ನೂ ಸಂಪೂರ್ಣವಾಗಿ ನಾಶಮಾಡಲಾಗುತ್ತದೆ. ಈಗ ಬುದ್ಧಿಜೀವಿಯ ಎದುರು ಆಯ್ಕೆಗಳಿವೆ. ತನ್ನನ್ನು ಅಧೀನಗೊಳಿಸಿಕೊಂಡಿರುವ ಯಾಜಮಾನ್ಯವನ್ನು ಮೆರೆಯುತ್ತಿರುವ ಬೂರ್ಜ್ವಾಸಿಯ ತಾತ್ವಿಕತೆಗೆ ಶರಣಾಗುವುದು ಒಂದು ಆಯ್ಕೆ. ಇಲ್ಲವೇ ಈ ಬೂರ್ಜ್ವಾಸಿಯು ಯಾರ ಅಸ್ತಿತ್ವವನ್ನೇ ಇಲ್ಲವಾಗಿಸಲು, ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿದೆಯೋ ಆ ದಮನಿತರ ಜೊತೆಯಲ್ಲಿ ನಿಲ್ಲುವುದು ಅವನ ಎದುರು ಇರುವ ಇನ್ನೊಂದು ದಾರಿ. ದುಡಿಯುವವರು, ಹಳ್ಳಿಗಳಲ್ಲಿರಲಿ, ನಗರಗಳಲ್ಲಿರಲಿ ಅವರು ನಮ್ಮ ಸಮಾಜದ ಒಂದು ಬಿಕ್ಕಟ್ಟನ್ನು ಪ್ರತಿನಿಧಿಸುತ್ತಾರೆ.

ಈ ಸಮಾಜವು ಹಲವು ವಲಯಗಳ ಜನರನ್ನು ಮೂಲೆಗುಂಪಾಗಿಸಿ ಇಟ್ಟುಬಿಟ್ಟಿರುತ್ತದೆ ಎಂಬುದನ್ನು ಅವರು
ತೋರಿಸುತ್ತಿರುತ್ತಾರೆ. ಅಲ್ಲದೆ ವರ್ಗಗಳ ನಡುವೆ ಕಂದಕಗಳು ಬೆಳೆದು ನಿಂತಿವೆ ಎನ್ನುವುದನ್ನೂ ಅವರು ನಮಗೆ ತೋರಿಸುತ್ತಿರುತ್ತಾರೆ. ಈಗ ನಮ್ಮ ಜಗತ್ತಿನ ಜನಸಂಖ್ಯೆ ಮೂರು ಬಿಲಿಯನ್. ಅದರಲ್ಲಿ ಎರಡು ಬಿಲಿಯನ್ ಜನರು ಅಪೌಷ್ಟಿಕತೆಗೆ ಗುರಿಯಾಗಿದ್ದಾರೆ ಎಂಬ ಸಂಗತಿಯು ನಮ್ಮ ಸಮಾಜಗಳ ಮತ್ತೊಂದು ಲಕ್ಷಣವನ್ನು ಹೊರಗೆಡಹುತ್ತದೆ. ಈ ಸಮಾಜಗಳು ಸಮೃದ್ಧಿಯಿಂದ ತುಂಬಿ ತುಳುಕಾಡುತ್ತಿವೆ ಎಂಬ ಕಟ್ಟುಕತೆಯನ್ನು ಹುಸಿ ಬುದ್ಧಿಜೀವಿಗಳು ಮುಂದಿಡುತ್ತಿದ್ದಾರೆ. ಆದರೆ ಅದು ಸುಳ್ಳು ಎಂಬುದು ಸ್ಪಷ್ಟವಾಗಿದೆ. ದಮನಿತರೂ ಕೂಡ ಒಂದೇ ಪ್ರಮಾಣದಲ್ಲಿ ಎಚ್ಚರಗೊಂಡಿರುತ್ತಾರೆ ಎಂದು ಹೇಳಲು ಬರುವುದಿಲ್ಲ. ಅದರಲ್ಲೂ ಬೇರೆಬೇರೆ ಹಂತಗಳಿರುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಅವರು ಬೂರ್ಜ್ವಾಸಿಯ ತಾತ್ವಿಕತೆಯನ್ನೇ ನಂಬಿ ಅದರಲ್ಲೇ ಮಗ್ನರಾಗಿರುವುದೂ ಉಂಟು. ಆದರೆ ಅವರಲ್ಲಿ ಒಂದು ಬಗೆಯ ವಸ್ತುನಿಷ್ಠವಾದ ಸಾವಯವ ಬುದ್ಧಿಮತ್ತೆ ಇರುತ್ತದೆ. ಇದು ಅವರು ಪಡೆದುಕೊಂಡು ಬಂದ ವಿಶೇಷ ಸಾಮರ್ಥ್ಯವೇನೂ ಅಲ್ಲ. ಬದಲಿಗೆ ಅವರು ಸಮಾಜವನ್ನು ನೋಡುವ ಬಗೆಯಿಂದ ಹುಟ್ಟಿಕೊಂಡದ್ದು. ಮೂಲಭೂತ ಬದಲಾವಣೆಯ ಪರವಾಗಿ ಈ ಬುದ್ಧಿಮತ್ತೆ ಅವರನ್ನು ಸದಾ ಎಚ್ಚರಿಸುತ್ತಿರುತ್ತದೆ. ಅವರ ರಾಜಕೀಯ ಒಲವುಗಳಿಗೂ ಇದಕ್ಕೂ ಯಾವ ನಂಟೂ ಇರುವುದಿಲ್ಲ. ಕೆಲವೊಮ್ಮೆ ತಮ್ಮ ಸ್ವಾಭಿಮಾನವನ್ನು ಅವರು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಕೆಲವೊಮ್ಮೆ ಆಳುವ ವರ್ಗ ಒದಗಿಸುವ ಸೌಲಭ್ಯಗಳಿಗೆ ಮನಸೋಲಲೂಬಹುದು.

ಇದನ್ನು ಮುಂದಿಟ್ಟುಕೊಂಡು ಆಳುವ ವರ್ಗವು ದಮನಿತರಲ್ಲಿ ಇಂಥ ವಸ್ತುನಿಷ್ಠ ಸಾವಯವ ಬುದ್ಧಿಮತ್ತೆ ಇದೆ ಎಂಬುದನ್ನೇ ಮರೆಮಾಚಲು ಯತ್ನಿಸುವುದುಂಟು; ಅದನ್ನು ನಂಬಲು ಸಾಧ್ಯವಿಲ್ಲವೆಂದು ತೀರ್ಮಾನಿಸಲು ಪ್ರೇರೇಪಿಸುವುದೂ ಉಂಟು. ಹೀಗೆ ವಸ್ತುನಿಷ್ಠವಾಗಿ ತನ್ನನ್ನು ತಾನು ಪರಿಸ್ಥಿತಿಯಿಂದ ಹೊರಗಿರಿಸಿಕೊಂಡು ನೋಡುವ ಕ್ರಮದಿಂದ ಒಂದು ಜನಪ್ರಿಯ ಚಿಂತನಾ ಮಾದರಿ ಮೈದಳೆಯುತ್ತದೆ. ಈ ಚಿಂತನಾಮಾದರಿಯು ಸಮಾಜವನ್ನು ಅದರ ಶ್ರೇಣೀಕೃತ ನೆಲೆಯಲ್ಲಿ ನೋಡುವಾಗ ತನ್ನ ದೃಷ್ಟಿಕೋನವನ್ನು ಅತ್ಯಂತ ದಮನಿತರ ಕಡೆಯಿಂದ ಇರಿಸಿಕೊಳ್ಳುತ್ತದೆ. ಅದರಿಂದಾಗಿ ಸಮಾಜದ ಅತ್ಯಂತ ಮೇಲು ವರ್ಗವು ಓರೆಕೋನದಲ್ಲಿ ಕಾಣತೊಡಗುತ್ತದೆ. ಒಂದು ಚಿತ್ರದ ಮೂಲಕ ಈ ಪರಿಸ್ಥಿತಿಯನ್ನು ಗ್ರಹಿಸುವುದಾದರೆ ಎತ್ತರದ ವಿಗ್ರಹವೊಂದು ತನ್ನ ಪದತಳದಲ್ಲಿ ದಮನಿತರನ್ನು ಇರಿಸಿಕೊಂಡು ನಿಂತಂತೆ ಇರುತ್ತದೆ. ಹೀಗೆ ದಮನಿತರಾಗಿ ಪದತಳದಲ್ಲಿ ಇರುವ ವರ್ಗವೇ ದಿಟವಾಗಿ ಸಮಾಜದಲ್ಲಿ ಉತ್ಪಾದನೆಯ ಚಟುವಟಿಕೆಯಲ್ಲಿ ತೊಡಗಿಕೊಂಡು ಸೃಜನಶೀಲವಾಗಿರುತ್ತದೆ. ಈ ರಚನೆಯಲ್ಲಿ ಮೇಲಿನವರು ಕೆಳಗಿನವರನ್ನು ನೋಡುವುದೇ ಇಲ್ಲ. ತಮ್ಮ ಕಣ್ಣಳತೆಗೆ ಸಿಗುವ ಮೇಲುವರ್ಗದವರು ಮಾತ್ರ ಅವರ ಕಣ್ಣಿಗೆ ಬೀಳುತ್ತಾರೆ. ಕೆಳಗಿನವರು ಮೇಲಿನವರನ್ನು ನೋಡಬಹುದಾದರೂ ಒಬ್ಬರನ್ನೊಬ್ಬರು ಗುರುತಿಸುವುದಾಗಲಿ, ಸಹವರ್ತಿಗಳೆಂದು ಗುರುತಿಸುವುದಾಗಲೀ ಇಲ್ಲಿ ಜರುಗುವುದಿಲ್ಲ. ದಮನಿತರ ಮೇಲೆ ನಡೆಯುತ್ತಿರುವ ಹಿಂಸೆ ಯಥಾಪ್ರಕಾರ ನಡೆಯುತ್ತಲೇ ಇರುತ್ತದೆ. ದುಡಿಯುವವರು ತಮ್ಮ ದುಡಿಮೆಯ ಫಲವಾದ ಉತ್ಪನ್ನಗಳಿಗೂ ಯಾವ ನಂಟೂ ಇಲ್ಲದಿರುವುದರಿಂದ ಉಂಟಾಗುವ ಏಕಾಕಿತನವನ್ನು ಅನುಭವಿಸುತ್ತಲೇ ಇರುತ್ತಾರೆ. ಅವರ ಪ್ರಾಥಮಿಕ ಅಗತ್ಯಗಳು ಕೂಡ ಅವರಿಗೆ ದೊರಕುತ್ತಿರುವುದಿಲ್ಲ.

ಬುದ್ಧಿಜೀವಿಯು ಈ ನೋಟವನ್ನು ತನ್ನದಾಗಿಸಿಕೊಂಡರೆ ತನ್ನ ಪರಿಸ್ಥಿತಿ ಏನಾಗಿದೆ ಎಂಬುದು ಅವನಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವನು ದಮನಿತರಂತೆ ಕೆಳ ಸ್ತರದಲ್ಲೂ ಇಲ್ಲ; ಆಳುವವರಂತೆ ಮೇಲು ಸ್ತರದಲ್ಲೂ ಇಲ್ಲ. ಆದರೆ ಅವನನ್ನು ಸೃಷ್ಟಿಸಿರುವುದೇ ಮೇಲು ಸ್ತರದವರು. ಅವನಿಗೆ ಅಗತ್ಯವಾದ ಶಿಕ್ಷಣವನ್ನು ಒದಗಿಸಿ ಅವನಿಗೆ ತಜ್ಞನ ಸ್ಥಾನಮಾನಗಳನ್ನು ಒದಗಿಸಿರುವುದೇ ಆ ವರ್ಗ. ಅದಕ್ಕಾಗಿ ತನ್ನ ಮಿಗುತಾಯ ಬಂಡವಾಳವನ್ನು ಅವನ ಮೇಲೆ ಆಳುವ ವರ್ಗವು ಹೂಡಿದೆ. ಈ ಮಿಗುತಾಯವು ಅವರಿಗೆ ದೊರಕಿರುವುದೇ ದುಡಿಯುವವರಿಂದಾಗಿ. ಹಾಗಾಗಿ ಬುದ್ಧಿಜೀವಿಯು ತನ್ನ ಪರಿಸ್ಥಿತಿಯಲ್ಲಿರುವ ಇಬ್ಬಂದಿತನವನ್ನು ಈಗ ಗ್ರಹಿಸಬಲ್ಲ. ನಾವೀಗಾಗಲೇ ಹೇಳಿರುವ ಗತಿತಾರ್ಕಿಕ ವಿಧಾನವನ್ನು ಅನ್ವಯಿಸಿ ವಿಶ್ಲೇಷಿಸಿಕೊಂಡರೆ ಬೂರ್ಜ್ವಾಸಿಯ ದಿಟವಾದ ಚಹರೆಗಳು ಅವನಿಗೆ ಗೊತ್ತಾಗುತ್ತದೆ. ಆ ವರ್ಗವು ದಮನಿತರ ಎದುರು ಮಂಡಿಸಿದ ಸುಧಾರಣೆಯ ಜಾಲವು ಅವರಿಗೆ ನಿಜವಾದ ಬಿಡುಗಡೆಯಲ್ಲವೆಂಬುದನ್ನು ಅವನು ಅರಿತುಕೊಳ್ಳಬಲ್ಲ. ಜನಸಾಮಾನ್ಯರು ವಿಗ್ರಹಭಂಜಕರಾಗದೆ ಅವರಿಗೆ ಬೇರೆ ದಾರಿಯಿಲ್ಲ ಎನ್ನುವುದು ಕೂಡಾ ಅವನಿಗೆ ತಿಳಿಯುತ್ತದೆ. ಹೀಗೆ ಅವರಲ್ಲಿ ತಲೆ ಎತ್ತುವ ಕ್ರಾಂತಿಯ ತಾತ್ವಿಕತೆಯು ದಿಟವಾಗಿ ಅವನನ್ನೂ ನಿರಾಕರಿಸುತ್ತದೆ ಎನ್ನುವ ವೈರುಧ್ಯದ ಅರಿವು ಅವನಿಗಾಗುತ್ತದೆ. ಈ ಹಂತದಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ.

(1) ಮೊದಲನೆಯ ಸಮಸ್ಯೆ ಹೀಗಿದೆ. ಕೆಳಸ್ತರದ ಅವಕಾಶವಂಚಿತ ಜನರ ವರ್ಗವು ಬುದ್ಧಿಜೀವಿಗಳನ್ನು ಸೃಷ್ಟಿಸುವುದಿಲ್ಲ. ಏಕೆಂದರೆ ಯಜಮಾನ ವರ್ಗವು ಕೂಡಿಹಾಕಿಕೊಂಡಿರುವ ಸಂಪತ್ತಿನ ಕೊಂಚ ಭಾಗದಿಂದಲೇ ಈ ತಜ್ಞರ ಪಡೆ ಸೃಷ್ಟಿಯಾಗಲು ಸಾಧ್ಯ. ತಮ್ಮ ಲಾಭದ ಒಂದು ಅಂಶದಿಂದ ಅವರು ಈ ತಂತ್ರಜ್ಞರ ಬಂಡವಾಳವನ್ನು ಸೃಷ್ಟಿಸಿರುತ್ತಾರೆ. ಕೆಲವೊಮ್ಮೆ ವ್ಯವಸ್ಥೆಯು ಕೆಳವರ್ಗದಿಂದಲೂ ಕೆಲವು ಜನ ತಜ್ಞರನ್ನು ಹುಟ್ಟಿಹಾಕುವುದುಂಟು. ಅಲ್ಲಿಂದಲೂ ಬಂದ ಕೆಲವರು ಶಿಕ್ಷಣವನ್ನು ಪಡೆದು ತಂತ್ರಜ್ಞರಾಗಿ ಬೆಳೆದಿರುತ್ತಾರೆ. (ಫ್ರಾನ್ಸ್ ದೇಶದಲ್ಲಿ ಹೀಗೆ ಸೇರ್ಪಡೆಯಾಗುವವರ ಪ್ರಮಾಣ ಒಟ್ಟು ತಂತ್ರಜ್ಞರಲ್ಲಿ ಶೇ.10ರಷ್ಟು) ದುಡಿಯುವ ವರ್ಗದಿಂದಲೇ ಬಂದ ಈ ತಂತ್ರಜ್ಞರು ಒಮ್ಮೆ ಆ ಸ್ಥಾನವನ್ನು ಪಡೆದುಕೊಂಡರೆಂದರೆ ಅವರು ಕೂಡಲೇ ಮಧ್ಯಮ ವರ್ಗದ ಚಹರೆಗಳನ್ನು ಮೈಗೂಡಿಸಿಕೊಂಡುಬಿಡುತ್ತಾರೆ. ಅವರ ಕೆಲಸಗಳೂ ಹಾಗೆಯೇ ಇರುತ್ತವೆ. ಅಲ್ಲದೆ ಅವರಿಗೆ ದೊರಕುವ ಸಂಬಳ ಸವಲತ್ತುಗಳು ಅವರನ್ನು ಮಧ್ಯಮ ವರ್ಗದ ಸದಸ್ಯರಾಗುವ ಅರ್ಹತೆಗಳನ್ನು ಒದಗಿಸಿಕೊಡುತ್ತವೆ. ಅಂದರೆ ಕೆಳಸ್ತರದ ಅವಕಾಶವಂಚಿತ ವರ್ಗಗಳು ತಮ್ಮ ಸಾವಯವ ಜಾಣ್ಮೆಯನ್ನು ಹೊಂದಿರುವ ಸಾವಯವ ಬುದ್ಧಿಜೀವಿಗಳನ್ನು ಸೃಷ್ಟಿಸುವುದಿಲ್ಲ. ಕ್ರಾಂತಿಯು ಸಂಭವಿಸುವರೆಗೆ ದುಡಿಯುವ ವರ್ಗವನ್ನು ಪ್ರತಿನಿಧಿಸುವ ಸಾವಯವ ಬುದ್ಧಿಜೀವಿಯು ಎಂದೂ ರೂಪುಗೊಳ್ಳುವುದಿಲ್ಲ. ಅಂತಹ ಬುದ್ಧಿಜೀವಿಯು ಇದ್ದಾನೆ ಎಂದುಕೊಳ್ಳೋಣ. ಆಗ ಅವನು ತನ್ನನ್ನು ರೂಪಿಸಿದ ವರ್ಗವು ಬಯಸುವ ಸಾರ್ವತ್ರಿಕತೆಯನ್ನು ಪ್ರತಿನಿಧಿಸುತ್ತಿರುತ್ತಾನೆ. ಅದರಿಂದಾಗಿ ಆತ ಎಂದಿಗೂ ಹೆಗಲ್ ಹೇಳುವ ’ಅಶಾಂತ ಪ್ರಜ್ಞೆ’ಯುಳ್ಳವನಾಗುವುದೇ ಇಲ್ಲ.

(2). ಇನ್ನೊಂದು ಸಮಸ್ಯೆಯು ಈ ಮೊದಲ ಸಮಸ್ಯೆಯ ಉಪಉತ್ಪನ್ನ. ಬುದ್ಧಿಜೀವಿಯೊಬ್ಬನನ್ನು ಅವಕಾಶವಂಚಿತ ವರ್ಗಗಳು ಸೃಷ್ಟಿಸುವುದಿಲ್ಲ; ಆ ವರ್ಗದಿಂದ ಬುದ್ಧಿಜೀವಿಯು ಹುಟ್ಟಿ ಬರುವುದಿಲ್ಲ. ಆದರೆ ಸಮಾಜದಲ್ಲಿ ಹುಟ್ಟಿಕೊಳ್ಳುವ ಬುದ್ಧಿಜೀವಿಯು ಹೇಗಾದರೂ ಮಾಡಿ ಈ ಅವಕಾಶವಂಚಿತ ವರ್ಗದ ಸಾವಯವ ಜಾಣ್ಮೆಯನ್ನು ತನ್ನದನ್ನಾಗಿಸಿಕೊಳ್ಳಲು ಯತ್ನಿಸುತ್ತಿರುತ್ತಾನೆ. ತಾನು ಬಲ್ಲ ದಾರಿಗಳನ್ನು ಬಳಸಿ ಅವರಿಗೆ ಹತ್ತಿರವಾಗಲು ಯತ್ನಿಸುತ್ತಾನೆ. ಆದರೆ ತಮ್ಮ ವರ್ಗಗಳಿಂದ ಹುಟ್ಟಿಬರದ ಈ ಬುದ್ಧಿಜೀವಿಯನ್ನು ಅವಕಾಶವಂಚಿತ ವರ್ಗವು ಎಂದಿಗೂ ತನ್ನವನೆಂದು ನಂಬುವುದಿಲ್ಲ. ಸದಾ ಅವನನ್ನು ಸಂಶಯದಿಂದ ನೋಡುತ್ತದೆ.

ಅಂದರೆ ಬುದ್ಧಿಜೀವಿಯು ಯಾವ ವರ್ಗದ ಪರವಾಗಿ ತಾನು ಚಿಂತಿಸಬೇಕು ಮತ್ತು ಅದಕ್ಕೆ ತಕ್ಕಂತೆ ಕಾರ್ಯಪ್ರವೃತ್ತನಾಗಬೇಕೆಂದು ತಿಳಿದಿರುತ್ತಾನೋ ಆ ವರ್ಗವು ಅವನನ್ನು ಸದಾ ದೂರದಲ್ಲೇ ಇರಿಸುತ್ತದೆ. ಈ ವರ್ಗವು ಬುದ್ಧಿಜೀವಿಯನ್ನು, ಬಂಡವಾಳಶಾಹಿಯು ರೂಪಿಸಿ ಸಾಕುತ್ತಿರುವ ಬುದ್ಧಿಜೀವಿಯನ್ನು ಮಧ್ಯಮ ವರ್ಗದ ಪ್ರತಿನಿಧಿಯನ್ನಾಗಿ ಮಾತ್ರ ನೋಡುತ್ತದೆ. ಅಂದರೇನಾಯ್ತು? ಬುದ್ಧಿಜೀವಿಯು ಯಾವ ಸಾರ್ವತ್ರಿಕತೆಯನ್ನು ತನ್ನದನ್ನಾಗಿ ಅಳವಡಿಸಿಕೊಳ್ಳಬೇಕೆಂದು ಬಯಸುತ್ತಿದ್ದಾನೋ ಆ ಸಾರ್ವತ್ರಿಕತೆಯನ್ನು ತಮ್ಮ ಜೀವನವಿಧಾನವನ್ನಾಗಿ ಹೊಂದಿರುವ ಅವಕಾಶವಂಚಿತ ವರ್ಗದಿಂದ ಸದಾ ಹೊರಗುಳಿದಿರುತ್ತಾನೆ. ಅವನ ಈ ಸ್ಥಿತಿಯನ್ನು ಗಮನಿಸುವ ಹುಸಿ ಬುದ್ಧಿಜೀವಿಗಳು ಅವನನ್ನು ಯಾವಾಗಲೂ ಗೇಲಿ ಮಾಡುತ್ತಿರುತ್ತಾರೆ. ಏಕೆಂದರೆ ಅವರು ಆಳುವ ವರ್ಗದ ಮತ್ತವರ ಅನುಯಾಯಿಗಳ ಜೀಬಿನಲ್ಲಿದ್ದುಕೊಂಡು ಅವರ ಹಿತವನ್ನು ಕಾಯುವವರಾದ್ದರಿಂದ ಅವರಿಗೆ ಬುದ್ಧಿಜೀವಿಯ ಈ ಇಬ್ಬಂದಿ ಪರಿಸ್ಥಿತಿಯು ಸಹಜವಾಗಿಯೇ ಗೇಲಿಯ ವಿಷಯವಾಗುತ್ತದೆ. “ಅಯ್ಯಾ, ನೀನು ಹುಟ್ಟಿ ಬೆಳೆದಿರುವುದು ಪೆಟಿ ಬೂರ್ಜ್ವಾ ಆಗಿ. ಹುಟ್ಟಿನಿಂದ ಮೊದಲಾಗಿ ನೀನು ಅಳವಡಿಸಿಕೊಳ್ಳಲು ಯತ್ನಿಸಿರುವುದು ಬೂರ್ಜ್ವಾಸಿಯ ಸಂಸ್ಕೃತಿ ಮೌಲ್ಯಗಳನ್ನು. ಹೀಗಿರುವಾಗ ನೀನು ಹೇಗೆ ತಾನೆ ದುಡಿಯುವ ವರ್ಗದ ಸಾವಯವ ಜಾಣ್ಮೆಯನ್ನು ಪ್ರತಿನಿಧಿಸಲು ಸಾಧ್ಯ. ನಿನಗವರ ಪರಿಚಯವೇ ಇಲ್ಲ. ಅಷ್ಟೇ ಅಲ್ಲ. ನಿನ್ನನ್ನು ಅವರು ನಮ್ಮವನೆಂದು ಎಂದೂ ತಿಳಿದಿಲ್ಲ.” ಇದೊಂದು ವಿಷವರ್ತುಲ. ಬುದ್ಧಿಜೀವಿಯು ಯಜಮಾನ ವರ್ಗವು ಪ್ರತಿಪಾದಿಸುವ ವಿಶಿಷ್ಟತೆಯನ್ನು ನಿರಾಕರಿಸಬೇಕೆಂದರೆ ಆ ವರ್ಗವು ಯಾರನ್ನು ಹತ್ತಿಕ್ಕುತ್ತಿದೆಯೋ ಆ ವರ್ಗದ ಜೀವನದೃಷ್ಟಿಯನ್ನು ತಾನು ಅಳವಡಿಸಿಕೊಳ್ಳಬೇಕು. ಹೀಗೆ ಅಳವಡಿಸಿಕೊಳ್ಳಬೇಕಾದರೆ ಬುದ್ಧಿಜೀವಿಯು ಪೆಟಿ ಬೂರ್ಜ್ವಾ ಆಗಿರಬಾರದು. ಆದರೆ ಅವನ ಶಿಕ್ಷಣ ಕ್ರಮವು ಅವನನ್ನು ಬಾಲ್ಯದಿಂದಲೇ ತಿದ್ದಿಬಿಟ್ಟಿದೆ. ಅವನು ಅಳವಡಿಸಿಕೊಂಡಿರುವುದು ಆಳುವ ವರ್ಗದ ವಿಶಿಷ್ಟತೆಯ ಮೌಲ್ಯಗಳನ್ನು. ಆದರೆ ಹಪಾಹಪಿಸಿ ಬಯಸುತ್ತಿರುವುದು ವಿಶ್ವಾತ್ಮಕತೆಯನ್ನು. ಇವೆರಡರ ನಡುವೆ ಒಂದು ವೈರುಧ್ಯವಿದೆಯಷ್ಟೆ. ಈ ವೈರುಧ್ಯದಲ್ಲಿ ಪೆಟಿ ಬೂರ್ಜ್ವಾ ಅಗಿರುವ ಬುದ್ಧಿಜೀವಿ ದುಡಿಯುವ ವರ್ಗದ ಜೀವನದೃಷ್ಟಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಹಾಗೆ ಆಗಬೇಕಾದರೆ ಆತ ಬುದ್ಧಿಜೀವಿಯಾಗಿ ಉಳಿಯುವುದು ಆಗದ ಮಾತು.

ಬುದ್ಧಿಜೀವಿಗಳಿಗೆ ತಮ್ಮ ಈ ಪರಿಸ್ಥಿತಿಯ ಅರಿವಿದೆ. ಕೆಲವರು ತಾವು ಸಿಲುಕಿಕೊಂಡಿರುವ ಈ ಪರಿಸ್ಥಿತಿಗಾಗಿ ಕೊರಗುತ್ತಾರೆ. ಅಲ್ಲಿಂದ ಮುಂದೆ ಸಾಗಲು ದಾರಿ ತೋಚದಂತಿರುತ್ತಾರೆ. ಹೀಗಾದಾಗ ಒಂದೋ ಅತ್ಯಂತ ಶೋಷಿತ ವರ್ಗದ ಜನರ ಬಗೆಗೆ ತೀವ್ರವಾದ ಅನುಕಂಪವನ್ನು ಬೆಳೆಸಿಕೊಳ್ಳುತ್ತಾರೆ. ಅವರಂತೆ ತಾವೂ ಕೂಡ ಆಗಬೇಕೆಂದು ಬಯಸುತ್ತಾರೆ. ತಮ್ಮನ್ನೂ ದುಡಿಯುವ ವರ್ಗದ ಜನರೆಂದು ಕರೆದುಕೊಳ್ಳಲು ಬಯಸುತ್ತಾರೆ. ಇಲ್ಲವೇ ದುಡಿಯುವ ವರ್ಗದ ಜನರ ಸಂಶಯಕ್ಕೆ ಗುರಿಯಾಗುತ್ತಾರೆ. ಒಬ್ಬರನ್ನೊಬ್ಬರು ನಂಬದಿರುವ ಪರಿಸ್ಥಿತಿಯನ್ನು ತಲುಪುತ್ತಾರೆ. ಬುದ್ಧಿಜೀವಿಯು ಬೂರ್ಜ್ವಾಸಿಯ ತಾತ್ವಿಕತೆಯನ್ನು ಮೈಗೂಡಿಸಿಕೊಂಡಿರುವವನು; ಹಾಗಾಗಿ ಆತ ಎಂದೂ ತಮ್ಮವನಾಗಲಾರನೆಂಬ ಭಾವ ದುಡಿಯುವ ವರ್ಗದ ಜನರಿಗೆ ಇದ್ದೇ ಇರುತ್ತದೆ. ಹೀಗೆ ದುಡಿಯುವ ವರ್ಗದ ಸಂಶಯಕ್ಕೆ ತುತ್ತಾದ ಬುದ್ಧಿಜೀವಿಗಳು ಅದರಿಂದ ಹೊರಬರಲಾರದೆ ತಮ್ಮ ಹೊಣೆಯಿಂದ ಕಳಚಿಕೊಂಡು ಎಂದಿನಂತೆ ತಮ್ಮ ತಜ್ಞತೆಯ ಕೆಲಸವನ್ನು ಮಾಡಲು ಮುಂದಾಗುತ್ತಾರೆ. ಸಮಾಜ ತಮಗೆ ವಹಿಸಿದ ಕೆಲಸವನ್ನು ಮಾಡುವುದಷ್ಟೇ ಸಾಧ್ಯ ಎಂದು ತಿಳಿದು ಸುಮ್ಮನಾಗುತ್ತಾರೆ.

ಕೆಲವೊಮ್ಮೆ ಬುದ್ಧಿಜೀವಿಗಳು ಜನಪರವಾದ ಚಳವಳಿಯನ್ನು ನಡೆಸುತ್ತಿರುವ ಪಕ್ಷಗಳಿಗೆ ಸೇರ್ಪಡೆಯಾಗುವ ಹಂಬಲವನ್ನು ತೋರುವುದುಂಟು. ಇದರಿಂದ ಕೂಡ ದುಡಿಯುವ ವರ್ಗವು ಇವರ ಬಗೆಗೆ ಹೊಂದಿರುವ ಸಂಶಯ ಕಡಿಮೆ ಏನೂ ಆಗುವುದಿಲ್ಲ. ಇಂತಹ ಪಕ್ಷದಲ್ಲಿ ಬುದ್ಧಿಜೀವಿಯ ಪಾತ್ರ ಮತ್ತು ಪಕ್ಷದ ತಾತ್ವಿಕತೆಯ ಸಂಬಂಧದಲ್ಲಿ ಅವರ ನೆರವು ಇತ್ಯಾದಿಗಳನ್ನು ಮತ್ತೆಮತ್ತೆ ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ. ಫ್ರಾನ್ಸ್‌ನಲ್ಲಿ ಹೀಗೇ ಆಯಿತು. ಇದೇ ರೀತಿ ಜಪಾನಿನಲ್ಲೂ ನಡೆದದ್ದನ್ನು ಕಾಣುತ್ತೇವೆ. ಫುಕುಮೊಟೊ (ಫುಕುಮೊಟೊ ಕಜುಒ, 1894-1983, ಜಪಾನ್ ನಾಡಿನ ಮಾರ್ಕ್ಸ್‌ವಾದಿ) ಅವಧಿಯಲ್ಲಿ, ಸರಿ ಸುಮಾರು 1930ರಲ್ಲಿ ಕಮ್ಯುನಿಸ್ಟ್ ನಾಯಕ ಮಿಜುನೋ ಅವರು ಪಾರ್ಟಿಯನ್ನು ತೊರೆದರು. ಹಾಗೆ ತೊರೆದದ್ದಕ್ಕೆ ಅವರು ನೀಡಿದ ಕಾರಣವೆಂದರೆ ಪಾರ್ಟಿಯು ಕೇವಲ ಪೆಟಿ ಬೂರ್ಜ್ವಾಸಿಯ ತಾತ್ವಿಕತೆಗೆ ಒಳಗಾಗಿ ಕೇವಲ ಒಣ ಚರ್ಚೆಗಳಲ್ಲಿ ಮುಳುಗಿದೆ ಎಂಬುದಾಗಿತ್ತು. ಅಲ್ಲದೆ ಭ್ರಷ್ಟಗೊಂಡ ಬುದ್ಧಿಜೀವಿಗಳಿಂದ ತುಂಬಿದೆ ಎಂದೂ ಆರೋಪಿಸಿದರು. ಆ ಸಮಯದಲ್ಲಿ ಅವರು ದುಡಿಯುವ ವರ್ಗದ ಸಾವಯವ ಬುದ್ಧಿಮತ್ತೆಯನ್ನು ಕುರಿತು ಮಾತನಾಡುತ್ತಿದ್ದಾರೆಂದಾಗಲೀ ಅದನ್ನು ಪ್ರತಿನಿಧಿಸುತ್ತಿದ್ದಾರೆಂದಾಗಲೀ ಯಾರಾದರೂ ಹೇಳಲು ಸಾಧ್ಯವಿತ್ತೇ? ಮೇಜಿ ಆಳ್ವಿಕೆಯ ಮರು ಸ್ಥಾಪನೆಯು ಒಂದು ಬೂರ್ಜ್ವಾಸಿ ಕ್ರಾಂತಿಯಾಗಿತ್ತು ಎಂದು ಹೇಳಿದವರು ಆ ನಾಯಕನ ನಡೆಯನ್ನು ಗಮನಿಸಿ ಹಾಗೆ ವ್ಯಾಖ್ಯಾನಿಸಿದರೇನು? ಒಂದು ವೇಳೆ ಪಕ್ಷದ ನಾಯಕತ್ವವು ತಮ್ಮ ಕಾರ್ಯ ಯೋಜನೆಯನ್ನು ನಿರ್ವಹಿಸುವಾಗ ಪೆಟಿ ಬೂರ್ಜ್ವಾಸಿಯ ಪ್ರೇರಣೆಗೆ ಅನುಸಾರವಾಗಿ ಮಾಡುತ್ತಿಲ್ಲವೆಂದು ನಿರ್ಣಯಿಸುವುದು ಹೇಗೆ? ಅದಕ್ಕನುಗುಣವಾಗಿ ಪಕ್ಷದ ತಾತ್ವಿಕತೆಯನ್ನು ಬದಲಿಸುವುದಿಲ್ಲವೆಂದು ಹೇಳಲಾಗುತ್ತದೆಯೇ? ಒಂದು ವೇಳೆ ಹೀಗೆ ನಡೆದದ್ದೇ ಆದರೆ ಆಗ ಅದಕ್ಕೆ ಕಾರಣರಾದ ಬುದ್ಧಿಜೀವಿಗಳನ್ನು ಭ್ರಷ್ಟರೆಂದು ಹೇಳದಿರಲು ಕಾರಣಗಳೇ ಇಲ್ಲ. ಇದೆಲ್ಲವೂ ಏನನ್ನು ಸೂಚಿಸುತ್ತದೆ? ಪೆಟಿ ಬೂರ್ಜ್ವಾಸಿಗೆ ಸೇರಿದ ಬುದ್ಧಿಜೀವಿಗಳು ಎಂದೂ ದುಡಿಯುವ ವರ್ಗದ ಹಿತಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಾರರು ಎಂದಲ್ಲವೇ? ಹಾಗೆ ಅವರ ಹಿತವನ್ನು ಕಾಯುತ್ತೇವೆ ಎಂದು ಹೊರಟರೆ ಅವರೇ ತಿರಸ್ಕೃತರಾಗುತ್ತಾರೆ. ಹೆಚ್ಚೆಂದರೆ ಅವರು ಕೇವಲ ತಾತ್ವಿಕ ಚರ್ಚೆಗಳಲ್ಲಿ ಪಾಲುಗೊಳ್ಳಬಲ್ಲರು. ಇದಕ್ಕೆ ಹೊರತಾಗಿ ಅವರು ದುಡಿಯುವ ವರ್ಗದ ಸಾವಯವ ಬುದ್ಧಿಮತ್ತೆಯ ಪ್ರತಿನಿಧಿಗಳಾಗಲಾರರು. ಅದನ್ನವರು ಎಂದೂ ಅರ್ಥ ಮಾಡಿಕೊಳ್ಳಲಾರರು. ಹೀಗಾಗಿ ಬುದ್ಧಿಜೀವಿಗಳು ಏನು ಮಾಡಬೇಕೆಂಬುದನ್ನು ಅವರು ಈಗ ಇರುವ ವರ್ಗವಾಗಲೀ, ಅವರನ್ನು ಹಿಡಿತದಲ್ಲಿ ಇರಿಸಿಕೊಂಡಿರುವ ಆಳುವ ವರ್ಗವಾಗಲೀ, ಕೊನೆಗೆ ದುಡಿಯುವ ವರ್ಗವಾಗಲೀ ಹೀಗೆ ಯಾರೂ ಕೂಡ ನಿರ್ದೇಶಿಸಲಾರರು.

(ಸಾರ್ತೃನ ’ಎ ಪ್ಲೀ ಫಾರ್ ಇಂಟಲೆಕ್ಚುಯಲ್ಸ್’ ಪ್ರಬಂಧವನ್ನು ಕೆ ವಿ ನಾರಾಯಣ ’ಬುದ್ಧಿಜೀವಿ ಬಿಕ್ಕಟ್ಟುಗಳು’ ಹೆಸರಿನಲ್ಲಿ ನಿರೂಪಿಸಿದ್ದಾರೆ. ಈ ಪುಸ್ತಕವನ್ನು ಋತುಮಾನ ಪ್ರಕಟಿಸುತ್ತಿದ್ದು ಜುಲೈ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ)

ಜೀನ್ ಪಾಲ್ ಸಾರ್ತೃ

ಜೀನ್ ಪಾಲ್ ಸಾರ್ತೃ
ಅಸ್ತಿತ್ವವಾದಿ ಚಿಂತಕ, ಫ್ರೆಂಚ್ ಬರಹಗಾರ. ’ನಾಸಿಯಾ’, ’ಬಿಯಿಂಗ್ ಅಂಡ್ ನಥಿಂಗ್‌ನೆಸ್’, ’ವರ್ಡ್ಸ್’ ಅವರ ಪುಸ್ತಕಗಳಲ್ಲಿ ಕೆಲವು.

ಕೆ ವಿ ನಾರಾಯಣ

ಕೆ ವಿ ನಾರಾಯಣ
ಕನ್ನಡದ ಚಿಂತಕರಲ್ಲೊಬ್ಬರು. ಅವರ ಸಮಗ್ರ ಬರಹಗಳು ಹತ್ತು ಸಂಪುಟಗಳಲ್ಲಿ ’ತೊಂಡು ಮೇವು’ ಹೆಸರಿನಲ್ಲಿ ಪ್ರಕಟವಾಗಿದೆ.


ಇದನ್ನೂ ಓದಿ: ಪುರಾಣದ ಯಾವುದೋ ಕಲ್ಪಿತ ಜಗತ್ತನ್ನು ಹಂಬಲಿಸುತ್ತಾ ಹಿಮ್ಮುಖ ಚಲಿಸದ ಕಥಾ ಪಾತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...