ಕರ್ನಾಟಕ ಮತದಾರರು ಇತರೆ ರಾಜ್ಯಗಳ ಮತದಾರರಂತೆ ಅಲ್ಲ. ಕಾಲಕಾಲಕ್ಕೆ ಆಡಳಿತರೂಢ ಸರ್ಕಾರಕ್ಕೆ ಪಾಠ ಕಲಿಸುತ್ತಾ ಬಂದಿರುವ ಇಲ್ಲಿನ ಜನತೆ, 37 ವರ್ಷಗಳ ಇತಿಹಾಸವನ್ನೇ ಈಗಲೂ ಮುಂದುವರಿಸಿದ್ದಾರೆ.
ಕಳೆದ 37 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ಆಡಳಿತರೂಢ ಪಕ್ಷದ ಸರ್ಕಾರವು ರಾಜ್ಯದಲ್ಲಿ ಮರು ಆಯ್ಕೆಯಾಗಿಲ್ಲ ಎಂಬುದು ಗಮನಾರ್ಹ ಸಂಗತಿ. ಸರ್ಕಾರ ಬದಲಿಸುವ ಪರಂಪರೆಯನ್ನು ಮುಂದುವರಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಬಂದ ಬಿಜೆಪಿ ಸರ್ಕಾರವನ್ನು ಕೆಡವಿ, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವನ್ನು ನೀಡಿದ್ದಾರೆ. 135+ ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿದೆ. ಬಿಜೆಪಿ 66 ಸ್ಥಾನಗಳಿಗೆ ಕುಸಿದಿದೆ.
1985ನೇ ಇಸವಿಯೇ ಕೊನೆ, ನಂತರದ ಚುನಾವಣೆಯಲ್ಲಿ ಯಾವುದೇ ಸರ್ಕಾರ ಮರು ಆಯ್ಕೆಯಾಗಿದ್ದಿಲ್ಲ. ಸತತ ಏಳು ಚುನಾವಣೆಗಳಲ್ಲಿಯೂ ಆಡಳಿತರೂಢ ಸರ್ಕಾರಗಳು ಅಧಿಕಾರ ಕಳೆದುಕೊಂಡಿವೆ. ಪರಿಣಾಮಕಾರಿಯಾಗಿ ಆಡಳಿತ ನಡೆಸಿದವರೂ ತಿರಸ್ಕರಿಸಲ್ಪಟ್ಟಿದ್ದಾರೆ. 1990ರ ದಶಕದಿಂದಲೂ ಮೂರು ಪ್ರಮುಖ ಪಕ್ಷಗಳು ಕಣದಲ್ಲಿದ್ದು, ಯಾವುದೇ ಪಕ್ಷವು ಸತತ ಬಹುಮತವನ್ನು ಪಡೆಯುವಲ್ಲಿ ವಿಫಲವಾಗುತ್ತಲೇ ಇವೆ.
ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಶೇ. 14ರಿಂದ 17, ಒಕ್ಕಲಿಗರ ಸಂಖ್ಯೆ ಶೇ. 11-12, ಬ್ರಾಹ್ಮಣರು ಶೇ.3.5, ಒಬಿಸಿ ಶೇ. 23%, ಪರಿಶಿಷ್ಟ ಜಾತಿ (ದಲಿತರು) ಶೇ. 15ರಿಂದ 17, ಪರಿಶಿಷ್ಟ ಪಂಗಡ ಶೇ. 5- 7, ಮುಸ್ಲಿಮರ ಜನಸಂಖ್ಯೆ ಶೇ. 11- 16ರಷ್ಟಿದೆ ಎಂದು ಅಂಕಿಅಂಶಗಳು ಹೇಳುತ್ತವೆ.

ಬಲಾಢ್ಯ ಜಾತಿಗಳ ಪ್ರಾಬಲ್ಯವನ್ನು ಡಿ.ದೇವರಾಜ ಅರಸು (ಮುಖ್ಯಮಂತ್ರಿ, 1972-1980) ಅವರು ಮುರಿದಿದ್ದರು. ಲಿಂಗಾಯತರು ಮತ್ತು ಒಕ್ಕಲಿಗರನ್ನು ಬಿಟ್ಟು ಹೆಚ್ಚು ಸಂಖ್ಯೆಯಲ್ಲಿರುವ ಹಿಂದುಳಿದ ಜಾತಿಗಳನ್ನು ಸಂಘಟಿಸಿ ಚುನಾವಣಾ ನಿಯಮಗಳನ್ನು ಅರಸು ಬದಲಿಸಿದ್ದರು.
ಆದರೆ ಸಾಂಪ್ರದಾಯಿಕವಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರು ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಪಡೆಯುತ್ತಾರೆ. ಈ ಸಮುದಾಯಗಳ ಸಂಖ್ಯಾ ಬಲಕ್ಕಿಂತ ಹೆಚ್ಚಿನ ರಾಜಕೀಯ ಸ್ಥಾನಮಾನ ಈ ಜಾತಿಗಳಿಗೆ ಇದೆ.
224 ವಿಧಾನಸಭಾ ಕ್ಷೇತ್ರಗಳು ಕರ್ನಾಟಕ ರಾಜ್ಯದಲ್ಲಿವೆ. 1983ರಲ್ಲಿ ಯಾವುದೇ ಪಕ್ಷ ಬಹುಮತ ಪಡೆದಿರಲಿಲ್ಲ. ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಪಕ್ಷವು 92 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಅವರು ಸರ್ಕಾರ ರಚಿಸಿದ್ದರು. ಆದರೆ ಬಿಜೆಪಿ ಪಕ್ಷದ ತೊಂದರೆಗಳಿಂದ ಬೇಸತ್ತು ಅವರು ಎರಡೇ ವರ್ಷಕ್ಕೆ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋದರು.
1985ರ ಅಸೆಂಬ್ಲಿ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಪಕ್ಷ 139 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಅಧಿಕಾರ ಹಿಡಿದಿತ್ತು. ಅದೇ ಕೊನೆ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿದ ಪಕ್ಷವಾಗಿತ್ತು. ಕಾಂಗ್ರೆಸ್ ಆ ಚುನಾವಣೆಯಲ್ಲಿ 65 ಸ್ಥಾನಗಳನ್ನು ಪಡೆದಿತ್ತು. 1989ರಲ್ಲಿ ಮತ್ತೆ ಚುನಾವಣೆ ಎದುರಾಗಿ ವೀರೇಂದ್ರ ಪಾಟೀಲ್ ನಾಯಕತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 178 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಜನತಾ ದಳ 24 ಸ್ಥಾನಗಳಲ್ಲಿ ಗೆದ್ದಿತ್ತು.
ಬದಲಾದ ರಾಜಕೀಯ ಪರಿಸರದಲ್ಲಿ 1994ರಲ್ಲಿ ಎಚ್.ಡಿ.ದೇವೇಗೌಡ ಅವರ ನೇತೃತ್ವದ ಜನತಾ ದಳ 115 ಸ್ಥಾನಗಳನ್ನು ಪಡೆಯಿತು. ಬಿಜೆಪಿ 40 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ ಕೇವಲ 34 ಸ್ಥಾನಗಳಿಗೆ ಕುಸಿಯಿತು. ಜನತಾ ದಳದ ನಾಯಕರಾಗಿದ್ದ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದರು.
1999ರಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದ ಕಾಂಗ್ರೆಸ್ 132 ಸ್ಥಾನಗಳನ್ನು ಪಡೆಯಿತು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದರು. ಬಿಜೆಪಿ 44 ಸ್ಥಾನಗಳನ್ನು ಪಡೆದು, ಕಳೆದ ಚುನಾವಣೆಗಿಂತ 4 ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಜನತಾ ದಳ ಒಡೆದು ಹೋಗಿ ‘ಜನತಾ ದಳ ಸೆಕ್ಯುಲರ್’ (ಜೆಡಿಎಸ್) ರಚನೆಯಾಗಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್ 10 ಸ್ಥಾನಗಳನ್ನು ಪಡೆದಿತ್ತು.
2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿಲ್ಲ. 65 ಸೀಟ್‌ಗಳನ್ನು ಪಡೆದ ಕಾಂಗ್ರೆಸ್ 58 ಸೀಟ್‌ಗಳನ್ನು ಪಡೆದ ಜೆಡಿಎಸ್‌ನೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿತು. ಜೆಡಿಎಸ್ ತನ್ನ ಸ್ಥಾನಗಳನ್ನು ಗಣನೀಯವಾಗಿ ಹೆಚ್ಚಿಸಿಕೊಂಡು ಬಲವಾಯಿತು. ಧರಂಸಿಂಗ್ ಮುಖ್ಯಮಂತ್ರಿಯಾದರು. ಈ ಚುನಾವಣೆಯಲ್ಲಿ ಬಿಜೆಪಿ 79 ಸೀಟ್‌ಗಳನ್ನು ಗೆದ್ದಿತ್ತು.
2006ರಲ್ಲಿ ಎಚ್.ಡಿ ಕುಮಾರಸ್ವಾಮಿಯವರು ಬಿಜೆಪಿಯ ಯಡಿಯೂರಪ್ಪನವರೊಂದಿಗೆ 20-20 ತಿಂಗಳ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್‌ನಿಂದ ಹೊರಬಂದು ಸರ್ಕಾರ ರಚಿಸಿದರು. ಆದರೆ 2008ರಲ್ಲಿ ಅಧಿಕಾರ ಬಿಟ್ಟುಕೊಡದ ಕಾರಣ ಸರ್ಕಾರ ಪತನವಾಯಿತು.
2008 ಚುನಾವಣೆಯಲ್ಲಿ ಮತ್ತೆ ಫಲಿತಾಂಶ ಏರುಪೇರಾಯಿತು. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ 110 ಸೀಟ್‌ಗಳನ್ನು ಗೆದ್ದಿತು. ಆಪರೇಷನ್ ಕಮಲ ಮಾಡಿದ ಯಡಿಯೂರಪ್ಪನವರು ಮುಖ್ಯಯಾದರು. ಆ ವೇಳೆಗೆ ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ್ದರು.
2013ರ ಚುನಾವಣೆ ವೇಳೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ 122 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯಿತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು. ಜೆಡಿಎಸ್ 40 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿ 40 ಸ್ಥಾನಗಳಿಗೆ ಕುಸಿಯಿತು. ಆ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದಿದ್ದ ಬಿ.ಎಸ್.ಯಡಿಯೂರಪ್ಪನವರು ಕೆಜೆಪಿಯನ್ನು ಕಟ್ಟಿದ್ದು, ಬಿಜೆಪಿಗೆ ಭಾರೀ ಹೊಡೆತ ನೀಡಿತು.
2013ರ ಚುನಾವಣಾ ಫಲಿತಾಂಶದಿಂದ ಕಂಗೆಟ್ಟಿದ್ದ ಬಿಜೆಪಿ ನಾಯಕರು ಮತ್ತೆ ಯಡಿಯೂರಪ್ಪನವರನ್ನು ಬಿಜೆಪಿಗೆ ಕರೆತಂದರು. 2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿತು. ಹೆಚ್ಚು ಸ್ಥಾನ ಗಳಿಸಿದ್ದರಿಂದ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಿದರು. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದರು.
80 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್, 37 ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್ ಜೊತೆಯಲ್ಲಿ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿತು. ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾದರು. ಆದರೆ 2019 ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಮೂಡಿತು. ಈ ವೇಳೆಗೆ ನಡೆದ ಆಪರೇಷನ್ ಕಮಲದಲ್ಲಿ 17 ಶಾಸಕರು ಸರ್ಕಾರ ಉರುಳಲು ಕಾರಣವಾದರು. ರಾಜಕೀಯ ಚದುರಂಗದಾಟದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾದರು. ಮತ್ತೆ ಯಡಿಯೂರಪ್ಪನವರನ್ನು ಕೆಳಗಿಳಿಸಿ, ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಲಾಯಿತು.
ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು: ಕೇಸರಿ-ಹಸಿರು ಚಕ್ರವ್ಯೂಹ ಬೇಧಿಸಿ ಬರುವರೆ ಸೆಕ್ಯುಲರ್ ಖಾದರ್?
ಕಳೆದ 37 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯಲು ರಾಜ್ಯದಲ್ಲಿ ಸಾಧ್ಯವಾಗಿಲ್ಲ. ಇದು ಕರ್ನಾಟಕದ ವೈಶಿಷ್ಟ್ಯತೆ.
ರಾಜ್ಯ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆಯನ್ನು ತೀವ್ರವಾಗಿ ಎದುರಿಸುತ್ತಿತ್ತು. ರಾಜ್ಯ ನಾಯಕತ್ವವನ್ನು ಕಡೆಗಣಿಸಿ, ಕೇಂದ್ರಕ್ಕೆ ಜೋತು ಬಿದ್ದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಶೇ. 40 ಕಮಿಷನ್ ಆರೋಪ ಏಟು ನೀಡಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯವು ಒಂದಲ್ಲ ಒಂದು ಕೋಮು ಕೇಂದ್ರಿತ ವಿವಾದಗಳಲ್ಲಿ ಸಿಲುಕಿತ್ತು. ಅಭಿವೃದ್ಧಿಗಿಂತ ಹಿಂದುತ್ವವನ್ನು ಮುಂದು ಮಾಡಿ ಕೋಮು ನೆಲೆಯಲ್ಲಿ ರಾಜಕೀಯ ಧ್ರುವೀಕರಣಕ್ಕೆ ಬಿಜೆಪಿ ಯತ್ನಿಸಿತ್ತು. ಈ ಹಿಂದೆ ಯಾವತ್ತೂ ಆಗದಷ್ಟು ಕೋಮು ಪ್ರಚೋದಿತ ಘಟನೆಗಳು ಇಲ್ಲಿ ಘಟಿಸಿದ್ದವು. ಇದೆಲ್ಲವನ್ನೂ ಅದೃಶ್ಯ ಮತದಾರ ತಿರಸ್ಕರಿಸಿ ಕಾಂಗ್ರೆಸ್ ಜೊತೆ ‘ಕೈ’ ಜೋಡಿಸಿರುವುದು ಸ್ಪಷ್ಟವಾಗಿದೆ. ಸರ್ಕಾರಗಳಿಗೆ ಬುದ್ಧಿ ಕಲಿಸುವ ಪ್ರಬುದ್ಧತೆಯನ್ನು ಕರ್ನಾಟಕ ಮತದಾರರು ಮುಂದುವರಿಸಿದ್ದಾರೆ.


