Homeಕರ್ನಾಟಕವಿಶ್ಲೇಷಣೆ: ಜಾತಿಗಣತಿ ಜಾರಿಗೊಳಿಸುವ ಸಿಎಂ ನಿರ್ಧಾರ ಸ್ವಾಗತಾರ್ಹವೇಕೆ?

ವಿಶ್ಲೇಷಣೆ: ಜಾತಿಗಣತಿ ಜಾರಿಗೊಳಿಸುವ ಸಿಎಂ ನಿರ್ಧಾರ ಸ್ವಾಗತಾರ್ಹವೇಕೆ?

- Advertisement -
- Advertisement -

“ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ 2015ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದಿರುವ ಕರ್ನಾಟಕ ರಾಜ್ಯದ ಜಾತಿಗಣತಿ ವರದಿಯನ್ನು ಸ್ವೀಕರಿಸಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

“ಹಲವು ಶತಮಾನಗಳಿಂದ ಅವಕಾಶ ವಂಚಿತರಾದವರಿಗೆ ಈಗ ಅವಕಾಶ ಒದಗಿಸುವ ಮೂಲಕ ಅಸಮಾನತೆಯನ್ನು ನಿವಾರಿಸಿ ಸಮಾನತೆಯನ್ನು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದೆ ನಮ್ಮ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು 162 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿತ್ತು. ಸಮೀಕ್ಷೆಯ ವರದಿಯನ್ನು ಸ್ವೀಕರಿಸಲು ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದವು. ಇದೀಗ ನಮ್ಮ ಸರ್ಕಾರ ಈ ವರದಿಯನ್ನು ಸ್ವೀಕರಿಸಲಿದೆ. ವಸ್ತು ಸ್ಥಿತಿಯನ್ನು ಆಧರಿಸಿ, ಜನರಿಗೆ ಶಿಕ್ಷಣ, ಉದ್ಯೋಗ, ಉದ್ಯಮ ಹೀಗೆ ವಿವಿಧ ವಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಿದೆ” ಎಂದು ತಿಳಿಸಿದ್ದಾರೆ.

2021ರ ಆಗಸ್ಟ್‌ನಲ್ಲಿ ಸಿದ್ದರಾಮಯ್ಯನವರು ‘ಪ್ರಜಾವಾಣಿ’ಯಲ್ಲಿ ಬರೆದ ಲೇಖನದಲ್ಲಿ ಹೀಗೆ ಹೇಳಿದ್ದರು: “ಇದನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಸ್ವೀಕಾರ ಮಾಡಿ ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂಬುದು ನನ್ನ ಆಸೆಯಾಗಿತ್ತು, ಆದರೆ ಆ ಕಾಲದಲ್ಲಿ ಪೂರ್ಣಗೊಂಡಿರಲಿಲ್ಲ. ನನಗಿರುವ ಮಾಹಿತಿ ಪ್ರಕಾರ ಆಯೋಗ ಸಮೀಕ್ಷಾ ವರದಿಯನ್ನು ಪೂರ್ಣಗೊಳಿಸಿದ್ದು 2018ರ ಕೊನೆಯಲ್ಲಿ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಕಾಂತರಾಜ್ ಆಯೋಗ ವರದಿ ಸಲ್ಲಿಸಲು ಸಮಯವಕಾಶ ಕೋರಿ ಆಗಿನ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಪತ್ರ ಬರೆದರೂ ಅದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಾಗಿದ್ದ ಕಾರಣ ಅನಗತ್ಯ ಸಂಘರ್ಷ ಬೇಡವೆಂದು ನಾನು ಒತ್ತಾಯಿಸಲು ಹೋಗಲಿಲ್ಲ. ಕೊನೆಗೆ 2019ರ ಸೆಪ್ಟೆಂಬರ್‌ನಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಸಮಗ್ರ ವರದಿಯನ್ನು ಕಾಂತರಾಜ್ ಆಯೋಗ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಿಸಿದೆ” ಎಂದು ತಿಳಿಸಿದ್ದರು.

“ಇಂತಹ ಸಮೀಕ್ಷೆಗಳು ಕೋಟ್ಯಂತರ ಜನತೆಯ ಸಾಮಾಜಿಕ,ಆರ್ಥಿಕ ಭವಿಷ್ಯವನ್ನು ನಿರ್ಧರಿಸುವ ವಿಷಯವಾಗಿರುವ ಕಾರಣ ಅವಸರದಿಂದ, ನಿರ್ಲಕ್ಷದಿಂದ ಮಾಡಲಾಗದು. ವಿಳಂಬವಾದರೂ ಈಗ ಪೂರ್ಣಗೊಂಡಿದೆ. ಈಗ ಕುಂಟುನೆಪಗಳನ್ನು ಮುಂದೊಡ್ಡಿ ಈ ಸಮೀಕ್ಷೆಯನ್ನು ತಿರಸ್ಕರಿಸಿದರೆ ಅದು ರಾಜ್ಯದ ಜನತೆಗೆ ಬಗೆವ ದ್ರೋಹವಾಗುತ್ತದೆ ಮಾತ್ರವಲ್ಲ ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಾಗುತ್ತದೆ. ಕೆಲವು ಬಿಜೆಪಿ ನಾಯಕರು ಜಾತಿ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ” ಎಂದಿದ್ದರು. ಈಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ದು, ಜಾತಿಗಣತಿ ಜಾರಿಯ ಕುರಿತು ಮಾತನಾಡಿರುವುದು ಸ್ವಾಗತಾರ್ಹ. ಯಾರು ಎಷ್ಟೇ ವಿರೋಧಿಸಿದರೂ ಜಾತಿಜನಗಣತಿ ಇಂದಿನ ತುರ್ತು ಎಂಬುದು ಸದ್ಯದ ರಾಜಕೀಯ ವಿದ್ಯಮಾನಗಳು ಹೇಳುತ್ತಿವೆ. ಈ ನಿಟ್ಟಿನಲ್ಲಿ ಕೆಲವೊಂದು ವಿಚಾರಗಳನ್ನು ನೋಡಲೇಬೇಕಾಗುತ್ತದೆ.

ಜಾತಿಗಣತಿಯ ಹಿನ್ನೆಲೆ

ಸಾವಿರಾರು ಜಾತಿಗಳಿಂದ ಕೂಡಿರುವ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1931ರ ಜನಗಣತಿಯೊಂದಿಗೆ ಜಾತಿಗಣತಿಯೂ ನಡೆದಿತ್ತು. ಅದಾಗಿ 90 ವರ್ಷ ಕಳೆದರೂ ದೇಶಾದ್ಯಂತ ಜಾತಿ ಗಣತಿ ನಡೆದೇ ಇಲ್ಲ. 1991ರ ನಂತರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಬಿಸಿ ಮೀಸಲಾತಿ ಜಾರಿಯಾದ ನಂತರ ಜಾತಿಗಣತಿ ನಡೆಯಬೇಕೆಂದು ದೊಡ್ಡ ಒತ್ತಾಯಗಳು ಕೇಳಿಬಂದಿದ್ದರಿಂದ 2003-04ರಲ್ಲಿ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಜಾತಿಗಣತಿಯ ಪೈಲೆಟ್ ಪ್ರಾಜೆಕ್ಟ್ ನಡೆಸಲು 21.5 ಕೋಟಿ ರೂ ಬಿಡುಗಡೆ ಮಾಡಿತ್ತು. ಆಗ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದರು. ಆಗ ಕರ್ನಾಟಕ ಸರ್ಕಾರ 1.5 ಕೋಟಿ ನೀಡಿತ್ತು. ಆದರೆ ಆಗಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಅದು ನಡೆಯಲಿಲ್ಲ. ನಂತರ ಮನಮೋಹನ್ ಸಿಂಗ್ ನೇತೃತ್ವದಲ್ಲಿ 2011ರ ನಂತರ ಪ್ರತ್ಯೇಕವಾಗಿ ಜಾತಿಗಣತಿ ನಡೆಸಲು ಮುಂದಾದರೂ ಅದು ಕೂಡ ನಡೆಯದೇ ನೆನೆಗುದ್ದಿಗೆ ಬಿದ್ದಿತ್ತು. ಸಿದ್ದರಾಮಯ್ಯನವರ ಅವಧಿಯಲ್ಲಿ ಮತ್ತೆ ಜಾತಿಗಣತಿಯ ಪ್ರಸ್ತಾಪ ಬಂದಿತ್ತು.

ಜಾತಿಗಣತಿ ಏಕೆ ಬೇಕು?

1. “ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೆ ಅನ್ವಯಿಸಲಾಗದು. ಇದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧರಿಸಿದ ಮಾಹಿತಿಯನ್ನು ಮೂರು ಹಂತಗಳ ಪರಿಶೀಲನೆಗೊಡ್ಡಿ ಪ್ರತ್ಯೇಕ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕು” ಎಂದು 2010ರಲ್ಲಿಯೇ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆದೇಶ ನೀಡಿತ್ತು. ಅದೇ ಆದೇಶವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸುತ್ತಾ ಬಂದಿದೆ.

ಹೀಗಾಗಿ ರಾಜ್ಯದಲ್ಲಿ ಸಿದ್ಧವಾಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ರೂಪಿಸಿ ಅದನ್ನು ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸಿ ಅದರ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಪಡೆಯಬಹುದು.

ಸುಪ್ರೀಂ ಕೋರ್ಟ್ ಆದೇಶದ ನಂತರ ಮಹಾರಾಷ್ಟ್ರ ಸರ್ಕಾರ ಅವಸರದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಪಡೆದ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು. ವೈಜ್ಞಾನಿಕವಾಗಿ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಸಂಗ್ರಹಿಸದ ಮಧ್ಯಂತರ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಜಾತಿಜನಗಣತಿ ವರದಿಯು ಅತ್ಯಂತ ಸಮರ್ಪಕವಾಗಿದೆ, ವೈಜ್ಞಾನಿಕವೂ ಆಗಿದೆ ಎಂಬುದು ಸರ್ಕಾರದ ನಿಲುವು.

2. ಭಾರತದಲ್ಲಿ ದನಿಯೇ ಇಲ್ಲದ ಸಾವಿರಾರು ಸಣ್ಣ ಸಣ್ಣ ಸಂಖ್ಯೆಯಲ್ಲಿರುವ ಜಾತಿಗಳಿವೆ. ಸರ್ಕಾರದ ಯೋಜನೆಗಳು ನಿಜವಾಗಿಯೂ ಇವರನ್ನು ತಲುಪುತ್ತಿವೆಯೇ ಎಂಬ ಬಗ್ಗೆ ಗೊಂದಲಗಳಿವೆ. ದೊಡ್ಡ ಸಂಖ್ಯೆಯಲ್ಲಿರುವ ಜನರ ಸಮಸ್ಯೆಗಳು ಅವರ ಜಾತಿ ಕಾರಣಕ್ಕಾದರೂ ಸಮಾಜದಲ್ಲಿ ಚರ್ಚೆಗೆ ಬರುತ್ತಿವೆ. ಆದರೆ ಸಣ್ಣ ಸಂಖ್ಯೆಯ ಜಾತಿಗಳ ಕಥೆಯೇನು? ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳನ್ನು, ಆದಿವಾಸಿಗಳನ್ನು ನಾವು ಗುರುತಿಸಿದ್ದೇವೆಯೇ ಎಂಬ ಪ್ರಶ್ನೆ ಕೂಡ ಇದೆ. ಪ್ರಜಾಪ್ರಭುತ್ವ ರಾಷ್ಟ್ರವೊಂದು ತನ್ನ ನೀತಿ ನಿರೂಪಣೆಯಲ್ಲಿ ಇವರಿಗೆ ಸರಿಯಾದ ಪ್ರಾತಿನಿಧ್ಯ ನೀಡಬೇಕಾದರೆ ಅವರ ಗಣತಿ ಅಗತ್ಯವಿದೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳ ಕೋಟಾದಲ್ಲಿದ್ದ ಮುಸ್ಲಿಮರ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಿ, ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚುವ ನಿರ್ಧಾರ ಮಾಡಿತ್ತು. ಈ ಪ್ರಕರಣವೀಗ ಸುಪ್ರೀಂ ಅಂಗಳದಲ್ಲಿದೆ. ಕೋಮು ಆಧಾರಿತವಾಗಿ ಮಾಡಿದ ಈ ನಿರ್ಧಾರ ಸಂವಿಧಾನ ಬಾಹಿರ. ಆದರೆ ಮೀಸಲಾತಿ ಹೆಚ್ಚಳ ಮಾಡಬಾರದು ಎಂದೇನೂ ಇಲ್ಲ. ಅದಕ್ಕಾಗಿ ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡುವ ಅಗತ್ಯವೂ ಇಲ್ಲ.

ಇದನ್ನೂ ಓದಿರಿ: ಜಾತಿಗಣತಿ ವರದಿ ಸ್ವೀಕರಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಬಹಳಷ್ಟು ರಾಜ್ಯಗಳಲ್ಲಿ ಹಲವಾರು ಜಾತಿಗಳು ತಮಗೂ ಮೀಸಲಾತಿ ಕಲ್ಪಿಸಬೇಕೆಂದು, ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ತೀವ್ರ ರೀತಿಯ ಹೋರಾಟಕ್ಕಿಳಿದಿವೆ. ಆದರೆ ಸುಪ್ರೀಂ ಕೋರ್ಟ್ 1992ರ ಇಂದ್ರಸಹಾನಿ ಪ್ರಕರಣದ ತೀರ್ಪಿನಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂಬ ಷರತ್ತನ್ನು ಹಾಕಿದೆ. ಜೊತೆಗೆ ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎಂದು ಸುಪ್ರೀಂ ಹೇಳಿದೆ. ಈ ವಿಶೇಷ ಸಂದರ್ಭದ ಕಾರಣ ನೀಡಿ ಈಗಾಗಲೇ ದೇಶದ 9 ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವ ಉದಾಹರಣೆಗಳಿವೆ. ಆದರೆ ಕಳೆದ 90 ವರ್ಷಗಳಿಂದ ಜಾತಿಗಣತಿ ನಡೆಯದ, ನಿಖರವಾದ ಜಾತಿವಾರು ಡೇಟಾ ಇಲ್ಲದ ಕಾರಣ, ವಿಶೇಷ ಸಂದರ್ಭವನ್ನು ನಿರೂಪಿಸಿ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಹಲವು ರಾಜ್ಯಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಅಂದರೆ ’ನಮ್ಮ ರಾಜ್ಯಗಳಲ್ಲಿ ಹಲವು ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಮತ್ತು ಸಮಾಜದಲ್ಲಿ ಇವರ ಪ್ರಾತಿನಿಧ್ಯ ಅತಿ ಕಡಿಮೆ ಇದೆ ಎಂದು ತೋರಿಸಲು’ ರಾಜ್ಯಗಳಿಗೆ ಜಾತಿಗಣತಿ ಡೇಟಾ ಅತ್ಯಗತ್ಯವಾಗಿದೆ. ಹಾಗಾಗಿ ಜಾತಿಗಣತಿ ಅಗತ್ಯ. ಜಾತಿ ಜನಗಣತಿ ಬಿಡುಗಡೆಯಾದ್ದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹೆಚ್ಚಿಸಿರುವ ಮೀಸಲಾತಿಯನ್ನು ಉಳಿಸಿಕೊಂಡು, ಮುಸ್ಲಿಮರ ಮೀಸಲಾತಿಯನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ. ಒಳಮೀಸಲಾತಿ ಜಾರಿ ವಿಚಾರದಲ್ಲಿ ಎದ್ದಿರುವ ಗೊಂದಲಗಳಿಗೂ ಈ ವರದಿ ಪರಿಹಾರವನ್ನು ನೀಡಬಹುದು. ಯಾವ ಜಾತಿ ಎಷ್ಟಿದೆ ಎಂಬುದು ತಿಳಿಯುವುದರಿಂದ ಒಳಮೀಸಲಾತಿಯಲ್ಲಿ ಆಗುವ ಲೋಪಗಳನ್ನು ಸರಿಪಡಿಸಬಹುದು.

3. ಈವರೆಗೆ ಆಗಿರುವ ಎಲ್ಲಾ ಮೀಸಲಾತಿಗಳು ಜಾತಿಗಳ ಸ್ಥಿತಿಗಳನ್ನು ಅವಲೋಕಿಸಿವೆ. ಸಮಿತಿಗಳು ನೀಡಿದ ಶಿಫಾರಸ್ಸುಗಳನ್ನು ಆಧರಿಸಿ ಆಗಿವೆ. ಆದರೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ‘ಆರ್ಥಿಕವಾಗಿ ಹಿಂದುಳಿದ ವರ್ಗಗಳಿವೆ ಮೀಸಲಾತಿ’ (ಇಡಬ್ಲ್ಯಎಸ್‌) ಜಾರಿಗೆ ಯಾವುದೇ ಆಯೋಗದ ಶಿಫಾರಸ್ಸು ಇಲ್ಲದಿರುವುದನ್ನು ಗಮನಿಸಹುದು. ಕರ್ನಾಟಕದಲ್ಲಿ ಶೇ. 4ರಷ್ಟೂ ಇಲ್ಲದ ಜಾತಿಗಳಿಗೆ ಇಡಬ್ಲ್ಯುಎಸ್‌ ಕೋಟಾ ನೀಡಲಾಗಿದೆ ಎಂಬ ಆಕ್ಷೇಪಗಳಿವೆ. ಯಾವ ಜಾತಿಯ ಸಂಖ್ಯೆ, ಎಷ್ಟಿದೆ ಎಂಬುದು ತಿಳಿಯಬೇಕಾದರೆ ಜಾತಿ ಜನಗಣತಿ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...