ಸಿಖ್ಖರ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ನಿಹಾಂಗ್ ಸಿಖ್ಖರ ಗುಂಪು ದೆಹಲಿ-ಹರಿಯಾಣದ ಸಿಂಘು ಗಡಿಯ ರೈತರ ಪ್ರತಿಭಟನಾ ಸ್ಥಳದಲ್ಲಿ ದಲಿತ ಯುವಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಘಟನೆ ಇನ್ನು ಮಾಸುವ ಮುನ್ನವೇ ಮತ್ತೊಂದು ಹಲ್ಲೆ ವರದಿಯಾಗಿದೆ.
ಸಿಂಘು ಪ್ರತಿಭಟನಾ ಸ್ಥಳದಲ್ಲಿ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದೆ. ಪ್ರಕರಣದಲ್ಲಿ ನಿಹಾಂಗ್ ಸಮುದಾಯದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಹಲ್ಲೆಗೊಳಗಾಗಿರುವ ಮನೋಜ್ ಪಾಸ್ವಾನ್ ಎಂಬುವವರ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲ್ಲೆಗೊಳಗಾದ ಸ್ಥಳ ಮತ್ತು ಆಸ್ಪತ್ರೆಯ ಹಾಸಿಗೆ ಮೇಲೆ ಇರುವ ಸಂತ್ರಸ್ತ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ರೈಲ್ ರೋಕೋ ಚಳವಳಿ: ನೂರಾರು ರೈತರ ವಿರುದ್ದ FIR ದಾಖಲಿಸಿದ ಹರಿಯಾಣ ಸರ್ಕಾರ
ಕೋಳಿ ಫಾರಂನಿಂದ ಕೋಳಿಯನ್ನು ಸಾಗಿಸುತ್ತಿದ್ದಾಗ ಸಿಂಘು ಗಡಿ ಪ್ರತಿಭಟನಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅವರನ್ನು ತಡೆದು ಉಚಿತವಾಗಿ ಕೋಳಿಯನ್ನು ಕೊಡುವಂತೆ ಒತ್ತಾಯಿಸಿದರು. ಕೋಳಿ ಕೊಡಲು ನಿರಾಕರಿಸಿದ್ದಕ್ಕಾಗಿ ಕೊಡಲಿಯಂತೆ ಕಾಣುವ ಆಯುಧದಿಂದ ಹೊಡೆದರು ಎಂದು ಹಲ್ಲೆಗೊಳಗಾದ ಮನೋಜ್ ಪಾಸ್ವಾನ್ ಹೇಳಿಕೊಂಡಿದ್ದಾರೆ.
“ನಾನು ಅವರಿಗೆ ಕೋಳಿಯನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ. ನಾನು ಅಂಗಡಿಯವರು ಮತ್ತು ತೋಟದ ಮಾಲೀಕರಿಗೆ ಉತ್ತರ ನೀಡಬೇಕಿದೆ. ನಾನೊಬ್ಬ ಕಾರ್ಮಿಕ ಅಷ್ಟೇ. ಒಂದು ಕೋಳಿ ಕಳೆದು ಹೋದರೆ ನನ್ನ ಉದ್ಯೋಗ ಕೂಡ ಹೋಗುತ್ತದೆ” ಎಂದು ಒಂದು ವಿಡಿಯೋದಲ್ಲಿ ಹೇಳಿದ್ದಾರೆ.
Now Manoj Paswan, a SC laborer, was thrashed and his leg was broken by a goon at Singhu border protest site.
His crime was that he'd refused to give him a rooster as the items were finished. pic.twitter.com/sHxX7X87Dn
— Suraj Kumar Bauddh (@SurajKrBauddh) October 21, 2021
“ನಾನು ಕಾರ್ಮಿಕ ಎಂದು ತೋರಿಸಲಿ ಇನ್ವಾಯ್ಸ್ ಸ್ಲಿಪ್ ಅನ್ನು ತೋರಿಸಿದೆ. ಆದರೆ, ಅದನ್ನು ಜೇಬಿನಿಂದ ತೆಗೆದಾಗ ಅವನು ನನ್ನ ಜೇಬಿನಲ್ಲಿ ಬೀಡಿ ಇದ್ದದ್ದು ನೋಡಿದರು. ಬಳಿಕ ನನ್ನ ಮೇಲೆ ಹಲ್ಲೆ ಮಾಡಿದರು” ಎಂದು ಹೇಳಿದ್ದಾರೆ.
ಹಲ್ಲೆಗೊಳಗಾದ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಹಲ್ಲೆ ಮಾಡಿದ ನಿಹಾಂಗ್ ಸಿಖ್ ಸಮುದಾಯದ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರೈತ ಹೋರಾಟದ ನೆಲದಲ್ಲಿ ಹತ್ಯೆ: ಮೃತ ವ್ಯಕ್ತಿಯ ಗ್ರಾಮಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದ ಆರೋಪಿ


