ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯ ಪರಿಹಾರವಾಗಿ ಹೋರಾಟಗಾರರಿಂದ ವಸೂಲಿ ಮಾಡಿದ್ದ ಕೋಟ್ಯಾಂತರ ರೂಪಾಯಿಯನ್ನು ಮರುಪಾವತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿದೆ.
ಇದೇ ವೇಳೆ ಈ ಪ್ರತಿಭಟನೆ ವೇಳೆ ಉಂಟಾದ ಹಾನಿಯ ವಸೂಲಾತಿಗಾಗಿ ನೀಡಲಾಗಿದ್ದ 274 ನೋಟಿಸ್‌ಗಳನ್ನು ಹಿಂಪಡೆದಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧದ ಆಪಾದಿತ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಹೊಸ ಕಾನೂನಿನ ಅಡಿಯಲ್ಲಿ ಮುಂದುವರಿಯಲು ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿದೆ. ಈ ಕಾನೂನಿನ ಅಡಿಯಲ್ಲಿ ರಚಿಸಲಾದ ನ್ಯಾಯಮಂಡಳಿಗಳು ಅಂತಹ ವಿಷಯಗಳನ್ನು ನೋಡಿಕೊಳ್ಳುತ್ತವೆ ಎಂದು ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳ ಪೀಠ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರ ಪೀಠ, 2019 ರಲ್ಲಿ ನಡೆದ ಗಲಭೆಯ ಆಪಾದಿತ ಪ್ರತಿಭಟನಾಕಾರರಿಂದ ವಸೂಲಿಯಾದ ಕೋಟ್ಯಂತರ ರೂಪಾಯಿ ಮೌಲ್ಯದ ಸಂಪೂರ್ಣ ಮೊತ್ತವನ್ನು ರಾಜ್ಯ ಸರ್ಕಾರ ಮರುಪಾವತಿ ಮಾಡಬೇಕು ಎಂದು ಆದೇಶಿಸಿದೆ.
ಇದನ್ನೂ ಓದಿ: ಹಳೆಯ ಪ್ರಕರಣ ಕೆದಕಿದ ಯುಪಿ ಪೊಲೀಸರು: ಸಿಎಎ ವಿರೋಧಿ ನಾಲ್ವರು ಪ್ರತಿಭಟನಾಕಾರರ ಬಂಧನ; ಜಾಮೀನು
ಫೆಬ್ರವರಿ 11 ರಂದು, ಆಪಾದಿತ ಪ್ರತಿಭಟನಾಕಾರರಿಂದ ಆಸ್ತಿ ಜಪ್ತಿ ಮಾಡುವುದಕ್ಕೆ ಉತ್ತರ ಪ್ರದೇಶ ಸರ್ಕಾರ ಯತ್ನಿಸಿರುವುದನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.
“ಈ ಸಂಬಂಧ ಪ್ರಕ್ರಿಯೆಯನ್ನು ಹಿಂಪಡೆಯಲು ರಾಜ್ಯಕ್ಕೆ ಒಂದು ಅಂತಿಮ ಅವಕಾಶವನ್ನು ನೀಡಲಾಗುವುದು. ಅಥವಾ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುವುದು. ನೀವು ಕಾನೂನಿನ ಅಡಿಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ದಯವಿಟ್ಟು ಇದನ್ನು ಪರಿಶೀಲಿಸಿ, ನಾವು ಫೆಬ್ರವರಿ 18 ರವರೆಗೆ ಒಂದು ಅವಕಾಶವನ್ನು ನೀಡುತ್ತೇವೆ” ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
’ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಸುತ್ತಾ ಉತ್ತರ ಪ್ರದೇಶ ಸರ್ಕಾರವು “ದೂರುದಾರ, ತೀರ್ಪುಗಾರ ಮತ್ತು ಪ್ರಾಸಿಕ್ಯೂಟರ್” ಎಲ್ಲವೂ ಆಗಿ ವರ್ತಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠ ಆಕ್ಷೇಪ ವ್ಯಕ್ತಪಡಿಸಿತ್ತು.
ಯುಪಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿ ಆಂದೋಲನದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಿಂದ ಉಂಟಾದ ನಷ್ಟವನ್ನು ವಸೂಲಿ ಮಾಡಲು ಜಿಲ್ಲಾಡಳಿತವು ಆಪಾದಿತ ಪ್ರತಿಭಟನಾಕಾರರಿಗೆ ಕಳುಹಿಸಲಾದ ನೋಟಿಸ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಪರ್ವೇಜ್ ಆರೀಫ್ ಟಿಟು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮನವಿಯಲ್ಲಿ ಆರು ವರ್ಷಗಳ ಹಿಂದೆ 94 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ವ್ಯಕ್ತಿಯ ವಿರುದ್ಧ ಮತ್ತು 90 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಸೇರಿದಂತೆ ಇತರ ಹಲವರಿಗೆ ಇಂತಹ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟಗಾರರಿಗೆ ದಂಡ: ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ


