Homeಕರ್ನಾಟಕಲಾಯರ್‌ ಜಗದೀಶ್ ವಿಚಾರದಲ್ಲಿ ವಕೀಲರ ಸಂಘದ ನಡೆ ಸ್ವೀಕಾರಾರ್ಹವೇ?

ಲಾಯರ್‌ ಜಗದೀಶ್ ವಿಚಾರದಲ್ಲಿ ವಕೀಲರ ಸಂಘದ ನಡೆ ಸ್ವೀಕಾರಾರ್ಹವೇ?

- Advertisement -
- Advertisement -

ವಕೀಲರಾದ ಕೆ.ಎನ್.ಜಗದೀಶ್‌ ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿ ಜಗದೀಶ್ ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಕೀಲರನ್ನು ಅವ್ಯಾಚ್ಯ ಪದಗಳಿಂದ ನಿಂದಿಸಿ ವೃತ್ತಿಗೆ ಚ್ಯುತಿ ತಂದಿದ್ದಾರೆ, ನ್ಯಾಯಾಲಯ ಆವರಣದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ, ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದ ಪ್ರತಿನಿಧಿಗಳು ನೀಡಿದ್ದ ದೂರಿನ ಮೇಲೆ ಜಗದೀಶ್ ಅವರನ್ನು ಹಲಸೂರು ಗೇಟ್‌‌ ಪೊಲೀಸರು ಬಂಧಿಸಿದ್ದಾರೆ.

ಜಗದೀಶ್ ಅವರ ಮಗನ ಮೇಲೆ ಹಲ್ಲೆಯಾದರೂ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಆದರೆ ವಕೀಲ ಜಗದೀಶ್ ಅವರ ವಿರುದ್ಧ ದಾಖಲಾದ ದೂರನ್ನು ಮಾತ್ರ ಕ್ಷಣಮಾತ್ರದಲ್ಲೇ ಪೊಲೀಸರು ಕ್ರಮ ಜರುಗಿಸಿದ್ದು ಅನುಮಾನಗಳಿಗೆ ಕಾರಣವಾಗಿವೆ.

ಐಪಿಎಸ್ ಅಧಿಕಾರಿ ರವಿ ಡಿ.ಚೆನ್ನಣ್ಣನವರ್‌ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ವಕೀಲ ಜಗದೀಶ್ ಮಾಡಿದ್ದರು. ರವಿ ಡಿ.ಚನ್ನಣ್ಣನವರ್‌ ಸಾವಿರಾರು ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಜಗದೀಶ್‌ ದೂರಿದ್ದರು. ಈ ಸಂಬಂಧ ರವಿ ಡಿ.ಚನ್ನಣ್ಣ ಮಾನನಷ್ಟ ಮೊಕದ್ದಮೆ ಹೂಡಿದ್ದು, ಪ್ರಕರಣ ವಿಚಾರಣೆಗೆ ನ್ಯಾಯಾಲಯಕ್ಕೆ ಜಗದೀಶ್‌‌ ಹಾಜರಾಗಿದ್ದ ವೇಳೆ ಹಲ್ಲೆ ನಡೆದಿತ್ತು.

ವಕೀಲರ ವೇಷದಲ್ಲಿದ್ದವರು ಜಗದೀಶ್ ಅವರ ಮಗನ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ ಹಲ್ಲೆ ಮಾಡಿದವರ ವಿರುದ್ಧ ಐಪಿಸಿ 307 (ಕೊಲೆಯತ್ನ) ಪ್ರಕರಣ ದಾಖಲಾಗಬೇಕಿತ್ತು. ಆದರೆ ವಕೀಲ ಜಗದೀಶ್ ಮೇಲೆಯೇ 307 ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿರುವ ಯಾವುದೇ ವಿಡಿಯೊದಲ್ಲಿಯೂ ವಕೀಲ ಜಗದೀಶ್ ಕೊಲೆಯತ್ನ ಮಾಡಿರುವುದು ಕಂಡು ಬರುವುದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

16 ವರ್ಷದ ಯುವಕನ ಮೇಲೆ ಹಲ್ಲೆಯಾಗಿದ್ದು, ಪೊಲೀಸರು ಸುಮೊಟೊ ಪ್ರಕರಣ ದಾಖಸಬೇಕಿತ್ತು. ಆದರೆ ಪೊಲೀಸರು ಪಕ್ಷಪಾತಿಗಳಾಗಿ ವರ್ತಿಸಿದ್ದಾರೆಂಬ ಆರೋಪಗಳು ಬಂದಿವೆ. ಜಗದೀಶ್ ಅವರು ಕೊಲೆ ಬೆದರಿಕೆ ಹಾಕಿದ್ದಲ್ಲಿ ಸೆಕ್ಷನ್‌ 506, 504, 506 (ಬಿ) ಅಡಿಯಲ್ಲಿ ಪ್ರಕರಣ ದಾಖಸಬೇಕಿತ್ತು. ಆದರೆ 307 ಅಡಿ ಪ್ರಕರಣ ದಾಖಲಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ನಾರಾಯಣಸ್ವಾಮಿ ನೀಡಿರುವ ದೂರಿನಲ್ಲಿ, “ವಕೀಲರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದವರಲ್ಲಿ ಜಗದೀಶ್‌ ಒಬ್ಬರಾಗಿದ್ದರು. ಅವರಿಗೆ ವಕೀಲರ ಸಂಘ ಬುದ್ಧಿ ಹೇಳಿತ್ತು. ಹೀಗಾಗಿ ನನ್ನ ಮೇಲೆ ಜಗದೀಶ್‌‌ ಫೆ. 10ರಂದು ಗಲಾಟೆ ಮಾಡಿದ್ದರು. ಕೊಲೆ ಮಾಡುವುದಾಗಿ ಬೆದರಿಸಿದ್ದರು. ಫೆ. 11ರಂದು ಸಿಟಿ ಸಿವಿಲ್‌ ಕೋರ್ಟ್ ಆವರಣದಲ್ಲಿ 40-50 ಗೂಂಡಾಗಳೊಂದಿಗೆ ಬಂದು ಅಶಾಂತಿ ಸೃಷ್ಟಿಸಿದರು. ಈ ವೇಳೆ ಕೊಲೆ ಮಾಡಲು ಯತ್ನಿಸಿದರು” ಎಂದು ಆರೋಪಿಸಲಾಗಿದೆ.

ಪೊಲೀಸ್ ಅಧಿಕಾರಿಗಳನ್ನು ಎದುರು ಹಾಕಿಕೊಂಡಿದ್ದೇ ಜಗದೀಶ್ ಅವರ ವಿರುದ್ಧ ಏಕಪಕ್ಷೀಯವಾಗಿ ಪೊಲೀಸರು ನಡೆದುಕೊಳ್ಳಲು ಕಾರಣವೇ ಎಂಬ ಪ್ರಶ್ನೆಯನ್ನು ಜನರು ಕೇಳಿದ್ದಾರೆ. ಆದರೆ ಇದಕ್ಕಿಂತ ಮುಖ್ಯವಾಗಿ ವಕೀಲರ ಸಂಘದ ವರ್ತನೆಯೂ ಟೀಕೆಗೆ ಗುರಿಯಾಗಿದೆ.

ಜಗದೀಶ್‌ ಅವರು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಮಾತನಾಡಿದ್ದಿದೆ. ಏಕವಚನದಲ್ಲಿ ನಿಂದಿಸಿದ್ದನ್ನು ಯಾರೂ ಸಮರ್ಥಿಸಲಾರರು. ಆದರೆ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಗಳೂ ಗಂಭೀರವಾಗಿವೆ ಎಂಬುದನ್ನು ಜನರು ಗುರುತಿಸುತ್ತಿದ್ದಾರೆ.

ಸಾಮಾನ್ಯವಾಗಿ ಪೊಲೀಸರು ಸುಳ್ಳು ಕೇಸ್‌ಗಳನ್ನು ದಾಖಲಿಸಿದಾಗ ವಕೀಲರು ಧ್ವನಿ ಎತ್ತುತ್ತಾರೆ. ಹೀಗಾಗಿ ವಕೀಲರು ವರ್ಸಸ್‌ ಪೊಲೀಸ್‌ ಎಂಬ ಸಾಮಾನ್ಯ ಗ್ರಹಿಕೆ ಇದೆ. ಆದರೆ ಜಗದೀಶ್ ವಿಚಾರದಲ್ಲಿ ಬೆಂಗಳೂರು ವಕೀಲರ ಸಂಘ ಈ ರೀತಿಯ ದೂರು ನೀಡಿದ್ದು ಏತಕ್ಕೆ? ಇಲ್ಲಿ ಯಾವುದಾದರೂ ಮಾಫಿಯಾ ಕೆಲಸ ಮಾಡಿದೆಯೇ? ಈ ಪ್ರಕರಣಕ್ಕೆ ಯಾವುದಾದರೂ ರಾಜಕೀಯ ಆಯಾಮಗಳಿವೆಯೇ? ಇತ್ಯಾದಿ ಪ್ರಶ್ನೆಗಳು ಮೂಡುತ್ತಿವೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿರುವ ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ್‌, “ವಕೀಲ ಜಗದೀಶ್ ಅವರ ವಿರುದ್ಧ 307 ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಅವರು ಎಷ್ಟು ತಪ್ಪು ಮಾಡಿದ್ದಾರೋ ಅಷ್ಟಕ್ಕೆ ಮಾತ್ರ ಪ್ರಕರಣ ದಾಖಲಿಸಬೇಕು. ಆದರೆ ಸುಳ್ಳು ಪ್ರಕರಣ ದಾಖಲಿಸಿರುವುದು ಕಂಡುಬರುತ್ತಿದೆ. ಜಗದೀಶ್ ಅವರು ಲಾಯರ್‌ಗಳನ್ನು ಬೈದಿರುವುದನ್ನು ನಾವು ಒಪ್ಪುವುದಿಲ್ಲ” ಎಂದಿದ್ದಾರೆ.

“ಸುಳ್ಳು ಕೇಸ್‌ಗಳ ವಿರುದ್ಧ ರಾಜ್ಯಾದ್ಯಂತ ವಕೀಲರು ಹೋರಾಡುತ್ತಿದ್ದೇವೆ. ಸಾರ್ವಜನಿಕರನ್ನು ರಕ್ಷಿಸುತ್ತಿದ್ದೇವೆ. ಹೀಗಿರುವ ವಕೀಲರ ಸಂಘ ಹಾಗೂ ಪದಾಧಿಕಾರಿಗಳೇ ನಿಂತು ಸುಳ್ಳು ಕೇಸು ದಾಖಲಾಗಲು ಕಾರಣವಾಗಿರುವುದು ವಕೀಲರ ವಿರುದ್ಧ ತಪ್ಪು ಸಂದೇಶ ಹೋಗಲು ಕಾರಣವಾಗುತ್ತದೆ. ಜಗದೀಶ್ ಅವರನ್ನು ವಕೀಲರ ಪರಿಷತ್‌ ಅಮಾನತು ಮಾಡಿರುವುದೂ ಸರಿಯಲ್ಲ. ಈ ಬೆಳವಣಿಗೆಯನ್ನು ವಕೀಲರ ಒಕ್ಕೂಟ ಖಂಡಿಸುತ್ತದೆ” ಎಂದು ಶ್ರೀನಿವಾಸ್‌ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್‌ ಸುಬ್ಬಾರೆಡ್ಡಿ ಅವರ ಹೇಳಿಕೆಯನ್ನು ಪಡೆಯಲು ನಾನುಗೌರಿ.ಕಾಂ ಪ್ರಯತ್ನಿಸಿದೆ. ಅಧ್ಯಕ್ಷರು ಸಂಪರ್ಕಕ್ಕೆ ಲಭ್ಯವಾಗಿಲ್ಲ.


ಇದನ್ನೂ ಓದಿರಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಆಂಧ್ರದ ಮೂಲದವರು ಕರ್ನಾಟಕದಲ್ಲಿ ರೈತರ ಭೂಮಿಯನ್ನು ನೂರಾರು ಕಬಳಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಂಧ್ರದ ಮೂಲದವರು ಮಾಡಿದ ಕುತಂತ್ರವೇ ಜಗದೀಶ್ ರವರ ಬಂಧನ.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...