ಲಂಡನಿನ ವೆಸ್ಟ್‌ಮಿನಿಸ್ಟರ್ ಹೊರಗಿನ ಲಾಕ್ಡೌನ್ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಪ್ರತಿಭಟನಾಕಾರರು ಬಿಬಿಸಿ ಪತ್ರಕರ್ತನನ್ನು ಬೆನ್ನಟ್ಟಿರುವ ಘಟನೆ ಕಳೆದ ಭಾನುವಾರ ನಡೆದಿದೆ. ಘಟನೆಯ ಬಗ್ಗೆ ಇಂಗ್ಲೇಂಡ್ ಪ್ರಧಾನಿ ಬೋರಿಸ್ ಜೋನ್ಸನ್ ಅಘಾತ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿಡಿಯೊವನ್ನು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಬಿಬಿಸಿ ನ್ಯೂಸ್‌ನ ಪೊಲಿಟಿಕಲ್ ಎಡಿಟರ್ ಆಗಿರುವ ನಿಕೋಲಸ್ ವ್ಯಾಟ್ ಅವರನ್ನು ಬೆನ್ನಟ್ಟಿರುವ ಗುಂಪೊಂದು, ಅವರನ್ನು ‘ದೇಶದ್ರೋಹಿ’ ಮತ್ತು ‘ಕಲ್ಮಷ’ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಮುಂಬೈ :ಏಷ್ಯಾದ ಅತಿ ದೊಡ್ಡ ಸ್ಲಂ ಧಾರಾವಿಯಲ್ಲಿ 2ನೇ ದಿನವು ಕೊರೊನಾ ಪ್ರಕರಣಗಳಿಲ್ಲ!
ಇಂಗ್ಲೆಂಡ್ ಸರ್ಕಾರವು ಕೊರೊನಾ ನಿರ್ಬಂಧವನ್ನು ನಾಲ್ಕು ವಾರಗಳವರೆಗೆ ವಿಸ್ತರಿಸುವುದನ್ನು ವಿರೋಧಿಸಿ ಈ ಜನಸಮೂಹವು ವೆಸ್ಟ್‌ಮಿನಿಷ್ಟರ್‌ನಲ್ಲಿ ಜಮಾಯಿಸಿತ್ತು.
ಪತ್ರಕರ್ತನನ್ನು ಬೆನ್ನಟ್ಟಿದ ಪ್ರತಿಭಟನಾಕರನೊಬ್ಬ, “ಲಾಕ್‌ಡೌನ್‌ಗಳು ಕಾನೂನು ಬದ್ಧವೆಂದು ನೀವು ಯಾಕೆ ವರದಿ ಮಾಡಿದ್ದೀರಿ? ಜನರನ್ನು ಅವರ ಮನೆಯಲ್ಲಿ ಲಾಕ್ ಮಾಡುವುದನ್ನು ಹೇಗೆ ಕಾನೂನು ಬದ್ಧವಾವಾಗುತ್ತದೆ?” ಎಂದು ಕೇಳಿದ್ದಾರೆ.
ಆಕ್ರಮಣಕಾರಿ ಗುಂಪು ನಿಕೋಲಸ್ ವ್ಯಾಟ್ ಅವರನ್ನು ಬೆನ್ನಟ್ಟುತ್ತಿರುವುದನ್ನು ಪೊಲೀಸರು ನೋಡುತ್ತಿದ್ದರೂ ಅವರ ರಕ್ಷಣೆಗೆ ಮುಂದಾಗಿಲ್ಲ.
ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆ ಸಮಾಜಕ್ಕೆ ಒಂದು ಕಳಂಕ : ರಾಹುಲ್ ಗಾಂಧಿ
“ತಮ್ಮ ಕೆಲಸ ಮಾಡುತ್ತಿರುವ ನಿಕ್ ವ್ಯಾಟ್ ಅವರನ್ನು ಬೆನ್ನಟ್ಟುತ್ತಿರುವುದು ನಾಚಿಕೆಗೇಡಾಗಿದೆ. ಮಾಧ್ಯಮಗಳು ಭಯವಿಲ್ಲದೆ ವರದಿ ಮಾಡಬೇಕು. ಅವು ನಮ್ಮ ಪ್ರಜಾಪ್ರಭುತ್ವದ ಜೀವನಾಡಿ” ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದಾರೆ.
ಅವರ ಅಧಿಕೃತ ವಕ್ತಾರರು, “ಈ ವಿಡಿಯೊ ತುಣುಕು ತೀವ್ರವಾಗಿ ಗೊಂದಲಕ್ಕೀಡುಮಾಡಿದೆ. ಪತ್ರಕರ್ತರ ಮೇಲೆ ಎಂದಿಗೂ ಇಂತಹದ್ದು ನಡೆಯಬಾರದು. ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದರೂ, ಹಿಂಸೆ ಮತ್ತು ಈ ರೀತಿಯ ಬೆದರಿಕೆ ಎಂದಿಗೂ ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.
ಈ ಘಟನೆಯನ್ನು ದೇಶದ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಮತ್ತು ಬಿಬಿಸಿ ಕೂಡ ಖಂಡಿಸಿದೆ.
“ಈ ನಡವಳಿಕೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಎಲ್ಲಾ ಪತ್ರಕರ್ತರು ಬೆದರಿಕೆ ಅಥವಾ ಅಡೆತಡೆಗಳಿಲ್ಲದೆ ತಮ್ಮ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗಬೇಕು” ಎಂದು ಬಿಬಿಸಿ ನ್ಯೂಸ್‌ನ ವಕ್ತಾರರು ಹೇಳಿದ್ದಾರೆ.
ಪ್ರೀತಿ ಪಟೇಲ್ ಅವರು, “ಈ ನಡವಳಿಕೆ ಎಂದಿಗೂ ಸ್ವೀಕಾರಾರ್ಹವಲ್ಲ. ಪತ್ರಕರ್ತರ ಸುರಕ್ಷತೆ ನಮ್ಮ ಪ್ರಜಾಪ್ರಭುತ್ವದ ಮೂಲಭೂತ ತತ್ವದಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೇಮಕಾತಿಯಲ್ಲಿ ಹಿನ್ನಡೆ ಕಾರಣ: ಹೊಸ ಸಿಬಿಐ ನಿರ್ದೇಶಕರ ಅಧಿಕಾರವಧಿ ಕಡಿತಕ್ಕೆ ಮುಂದಾದ ಕೇಂದ್ರ?


