ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಅಗ್ರ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ,
ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಹಾಗು ಪ್ರಸಿದ್ಧ ಫಿಟ್ನೆಸ್ ಉತ್ಸಾಹಿ ಕ್ರಿಸ್ಟಿಯಾನೊ ರೊನಾಲ್ಡೊ ಮಾಡಿದ ಒಂದು ಸಣ್ಣ ಕೆಲಸಕ್ಕೆ ಪಾನೀಯ ತಯಾರಿಕ ಕಂಪನಿ ಕೋಕೊ-ಕೋಲಾ ಬಹು ದೊಡ್ಡ ಬೆಲೆ ತೆರಬೇಕಾಗಿ ಬಂದಿದೆ.
ಸಾಮಾನ್ಯವಾಗಿ ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಯರು ಹಣಕ್ಕಾಗಿ ಯಾವ ಕಂಪನಿಯ ಜಾಹೀರಾತಿನಲ್ಲಿ ಬೇಕಾದರೂ ನಟಿಸುತ್ತಾರೆ, ಅವುಗಳನ್ನು ಪ್ರಚಾರ ಮಾಡುತ್ತಾರೆ ಎಂಬ ಆಪಾದನೆಯಿದೆ. ಅದಕ್ಕೆ ವಿರುದ್ಧವಾಗಿ ವರ್ತಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಹಲವರ ಕಣ್ಣಲ್ಲಿ ಒಬ್ಬ ಉತ್ತಮ ವ್ಯಕ್ತಿಯೆನಿಸಿಕೊಂಡರೆ ಆತ ಮಾಡಿದ ಕೆಲಸದಿಂದ ಕೋಕೊ-ಕೋಲಾ ಕಂಪನಿ 4 ಬಿಲಿಯನ್ ಡಾಲರ್ ಕಳೆದುಕೊಂಡು ಶಪಿಸುತ್ತಿದೆ.
ಅಷ್ಟಕ್ಕೂ ಅಷ್ಟೊಂದು ಹಣ ಕಳೆದುಕೊಳ್ಳುವಂತೆ ಆತ ಮಾಡಿದ್ದಾದೂ ಏನು? ಯುರೋ 2020 ರಲ್ಲಿ ಪೋರ್ಚುಗಲ್ ತಂಡವು ಹಂಗೇರಿ ವಿರುದ್ಧ ಕಾದಾಡುವ ಮೊದಲು ಸೋಮವಾರ ಬುಡಾಪೆಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೇಬಲ್ ಮೇಲಿದ್ದ ಎರಡು ಕೋಕೊ-ಕೋಲಾ ಬಾಟಲಿಗಳನ್ನು ತೆಗೆದು ಕಾಣದಂತೆ ಕೆಳಗಿಟ್ಟಿದ್ದು ಮತ್ತು ನೀರಿನ ಬಾಟಲಿಯನ್ನು ತನ್ನ ಮುಂದಿಟ್ಟುಕೊಂಡಿದ್ದು…!
ಕ್ರಿಸ್ಟಿಯಾನೊ ರೊನಾಲ್ಡೊ ಪತ್ರಿಕಾಗೋಷ್ಠಿಗೆ ಆಗಮಿಸುವ ಮೊದಲು ಆತನ ಟೇಬಲ್ ಮೇಲೆ ಎರಡು ಕೋಕೊ-ಕೋಲಾ ಬಾಟಲಿಗಳನ್ನು ಇಡಲಾಗಿತ್ತು. ಆತ ಬಂದವನೆ ಅದನ್ನು ನೋಡಿ ತೆಗೆದು ಕೆಳಗಿಟ್ಟ. ನಂತರ ನೀರಿನ ಬಾಟಲಿಯನ್ನು ಮೇಲೆತ್ತಿ ಇದನ್ನು ಕುಡಿಯಿರಿ ಎಂದು ಸನ್ಹೆ ಮಾಡಿದ ಅಷ್ಟೇ.. ಈ ವಿಡಿಯೋ ಪ್ರಪಂಚಾದ್ಯಂತ ವೈರಲ್ ಆಯಿತು. ಅಷ್ಟಕ್ಕೆ ಪತ್ರಿಕಾಗೋಷ್ಠಿಯ ಅಂತ್ಯದ ವೇಳೆಗೆ ಕೋಕಾ-ಕೋಲಾದ ಷೇರು ಬೆಲೆ $56.10 ರಿಂದ $55.22 ಕ್ಕೆ ಇಳಿದಿತ್ತು. ಅಂದರೆ ಶೇಕಡಾ 1.6 ರಷ್ಟು ಕುಸಿತ. ಇದು ಈಗ ಅದರ ಬೆಲೆ $55.41 ಕ್ಕೆ ಏರಿದೆ.
ಕೋಕಾ-ಕೋಲಾದ ಮಾರುಕಟ್ಟೆ ಮೌಲ್ಯವು $242 ಬಿಲಿಯನ್‌ನಿಂದ $238 ಶತಕೋಟಿಗೆ ಇಳಿದಿದೆ. ಅಂದರೆ 4 ಬಿಲಿಯನ್ ಡಾಲರ್ ಕುಸಿತ ಕಂಡಿದೆ.
Cristiano Ronaldo qui déplace les bouteilles de Coca et qui dit "eau" en montrant aux journalistes ??? pic.twitter.com/LaDNa95EcG
— Gio CR7 (@ArobaseGiovanny) June 14, 2021
ಕೋಕಾ-ಕೋಲಾ ಯುರೋ 2020 ರ ಅಧಿಕೃತ ಪ್ರಾಯೋಜಕರಲ್ಲಿ ಒಬ್ಬರು. ಹಾಗಾಗಿ ಆ ಬಾಟಲಿಗಳನ್ನು ಮೇಜಿನ ಮೇಲೆ ಪ್ರಚಾರ ಮಾಡಲು ಇರಿಸಲಾಗಿತ್ತು ಎಂದು ಹೇಳಿಕೊಂಡಿದೆ. ಪ್ರತಿಯೊಬ್ಬರೂ ತಮ್ಮ ಪಾನೀಯ ಆದ್ಯತೆಗಳಿಗೆ ಅರ್ಹರಾಗಿದ್ದಾರೆ ಎಂದು ಹೇಳುವ ಮೂಲಕ ಕೋಕಾ-ಕೋಲಾ ತನ್ನ ಅಸಮಾಧಾನ ಹೊರ ಹಾಕಿದೆ.
ವಿಶ್ವದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ರೊನಾಲ್ಡೊಗೆ ಇನ್ಸ್ಟಾಗ್ರಾಮ್‌ನಲ್ಲಿ ಸುಮಾರು 300 ಮಿಲಿಯನ್ ಅನುಯಾಯಿಗಳಿದ್ದಾರೆ. ಮಂಗಳವಾರ, ಹಂಗೇರಿ ವಿರುದ್ಧ ಪೋರ್ಚುಗಲ್ 3-0 ಗೋಲುಗಳಿಂದ ಗೆಲುವು ಸಾಧಿಸಿತು. ಎರಡು ಗೋಲು ಗಳಿಸಿ ರೊನಾಲ್ಡೊ ಮಿಂಚಿದರು. ಅಲ್ಲದೇ ಯುರೋಪಿಯನ್ ಚಾಂಪಿಯನ್‌ಶಿಪ್ ನಲ್ಲಿ 11 ಗೋಲುಗಳೊಂದಿಗೆ ದಾಖಲೆ ನಿರ್ಮಿಸಿದರು.
ಇದನ್ನೂ ಓದಿ; ನೇಮಕಾತಿಯಲ್ಲಿ ಹಿನ್ನಡೆ ಕಾರಣ: ಹೊಸ ಸಿಬಿಐ ನಿರ್ದೇಶಕರ ಅಧಿಕಾರವಧಿ ಕಡಿತಕ್ಕೆ ಮುಂದಾದ ಕೇಂದ್ರ?