Homeಮುಖಪುಟನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

- Advertisement -
- Advertisement -

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ ಸಂಬಂಧಿಸಿದ ಆರೋಪಗಳ ಕುರಿತು ಸಿಬಿಐ ಸಮಗ್ರ ತನಿಖೆ ನಡೆಸಲಿದೆ ಎಂದು ಎನ್‌ಟಿಎ ತಿಳಿಸಿದೆ. ವೈದ್ಯಕೀಯ ಪದವಿ ಕಲಿಯಬೇಕೆಂಬ ಕಾರಣಕ್ಕೆ ಹಗಲುರಾತ್ರಿ ಕಷ್ಟಪಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಆರಂಭದಿಂದಲೂ ಹಲವು ವಿವಾದಗಳು ಮತ್ತು ಅಕ್ರಮಗಳ ಆರೋಪಗಳಿಗೆ ಗುರಿಯಾಗುತ್ತಲೇ ಇದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾತ್ರವಲ್ಲದೆ, ನೀಟ್‌ ಕುರಿತು ಹಲವು ವಿವಾದಗಳು ಜೀವಂತವಾಗಿವೆ.

ಮೇ 3, 2026 ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವ್ಯಾಪಕ ಅಕ್ರಮಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಸಂಪೂರ್ಣವಾಗಿ ರದ್ದುಗೊಳಿಸಿದೆ. ಸಿಬಿಐ ತನಿಖೆಗೆ ಆದೇಶಿಸಿದೆ. ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿದೆ. ಆದರೆ, ಎನ್‌ಟಿಎ ಕ್ರಮಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದ್ದು, ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

2024ರ ಗ್ರೇಸ್ ಮಾರ್ಕ್ಸ್ ಮತ್ತು ಪತ್ರಿಕೆ ಸೋರಿಕೆ ಹಗರಣ

ಹಿಂದಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಂದ ಎನ್‌ಟಿಎ ಈವರೆಗೆ ಪಾಠ ಕಲಿತಿಲ್ಲ. ಸೋರಿಕೆ ತಡೆಗಟ್ಟಲು ಅಗತ್ಯ ಕ್ರಮಗಳನ್ನೂ ತೆಗೆದುಕೊಂಡಂತೆ ಕಾಣುತ್ತಿಲ್ಲ. 2014ರಲ್ಲಿ, ನೀಟ್ ಇತಿಹಾಸದಲ್ಲೇ ಮೊದಲ ಬಾರಿಗೆ 67 ಅಭ್ಯರ್ಥಿಗಳು 720 ಕ್ಕೆ 720 ಪರಿಪೂರ್ಣ ಅಂಕಗಳನ್ನು ಗಳಿಸಿ ಪ್ರಥಮ ರ್‍ಯಾಂಕ್ ಪಡೆದಿದ್ದರು. ಗಣಿತದ ಪ್ರಕಾರ ಅಸಾಧ್ಯವಾದ 718 ಮತ್ತು 719 ರಂತಹ ಅಂಕಗಳನ್ನು ಹಲವರು ಪಡೆದಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಸಮಯದ ನಷ್ಟದ ಆಧಾರದ ಮೇಲೆ 1,563 ಅಭ್ಯರ್ಥಿಗಳಿಗೆ ನಿಯಮಬಾಹಿರವಾಗಿ ಗ್ರೇಸ್ ಅಂಕಗಳನ್ನು ನೀಡಲಾಗಿತ್ತು. ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಅವರಿಗೆ ಜೂನ್ 23 ರಂದು ಮರುಪರೀಕ್ಷೆ ನಡೆಸಲಾಯಿತು.

ಇದಷ್ಟೇ ಅಲ್ಲ, ಬಿಹಾರದ ಪಾಟ್ನಾ ಮತ್ತು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, ಅಭ್ಯರ್ಥಿಗಳಿಂದ ₹30 ರಿಂದ ₹50 ಲಕ್ಷ ಪಡೆಯಲಾಗಿತ್ತು ಎಂಬುದು ನಂತರದ ತನಿಖೆಯಲ್ಲಿ ಸಾಬೀತಾಗಿತ್ತು.

ನಕಲಿ ಅಭ್ಯರ್ಥಿಗಳ ಜಾಲ

2020–2021 ರಲ್ಲಿ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಸಕ್ರಿಯವಾಗಿದ್ದ ‘ಸಾಲ್ವರ್ ಗ್ಯಾಂಗ್’ (ನಕಲಿ ವಿದ್ಯಾರ್ಥಿಗಳ) ಜಾಲ ಬಯಲಿಗೆ ಬಂದಿತ್ತು. ಮೂಲ ಅಭ್ಯರ್ಥಿಗಳ ಬದಲಿಗೆ ಹಣ ಪಡೆದ ನಕಲಿ ವ್ಯಕ್ತಿಗಳು ಪರೀಕ್ಷೆ ಬರೆಯುವುದು, ಬಯೋಮೆಟ್ರಿಕ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಉತ್ತರಗಳನ್ನು ಒದಗಿಸುವ ಅಕ್ರಮಗಳೂ ನಡೆದಿದ್ದವು.

ಕೇರಳದ ಡ್ರೆಸ್ ಕೋಡ್ ವಿವಾದ

2022 ರಲ್ಲಿ, ಕೇರಳದ ಪರೀಕ್ಷಾ ಕೇಂದ್ರವೊಂದರಲ್ಲಿ ತಪಾಸಣೆಯ ನೆಪದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು (ಲೋಹದ ಕೊಕ್ಕೆಗಳಿವೆ ಎಂಬ ಕಾರಣಕ್ಕೆ) ಬಲವಂತವಾಗಿ ತೆಗೆಸಿದ ಘಟನೆ ನಡೆದಿತ್ತು. ಇದು ರಾಷ್ಟ್ರಮಟ್ಟದಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಕೋವಿಡ್ ಸಮಯದಲ್ಲೂ ಪರೀಕ್ಷೆ

2022 ರಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಾಗಿತ್ತು. ದೇಶದಾದ್ಯಂತ ಸಾರಿಗೆ ಸೇರಿದಂತೆ ಹತ್ತಾರು ನಿರ್ಬಂಧಗಳ ನಡುವೆಯೂ ಕೇಂದ್ರ ಸರ್ಕಾರ ಪರೀಕ್ಷೆ ನಡೆಸಲು ಮುಂದಾಗಿತ್ತು. ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ಪರೀಕ್ಷೆ ಮುಂದೂಡುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ, ಕೋರ್ಟ್ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.

ಆರಂಭಿಕ ವರ್ಷದ ವಿವಾದಗಳು

2015ರಲ್ಲಿ, ನೀಟ್ ಹಿಂದಿನ ಆವೃತ್ತಿಯಾಗಿದ್ದ ಎಐಪಿಎಂಟಿ ಪರೀಕ್ಷೆಯಲ್ಲಿ ಬ್ಲೂಟೂತ್ ವೆಸ್ಟ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ಉತ್ತರ ಬರೆದ ಕಾರಣ ಸುಪ್ರೀಂ ಕೋರ್ಟ್ ಇಡೀ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆಗೆ ಆದೇಶಿಸಿತ್ತು.

2016ರಲ್ಲಿ ಸಹ ಸೋರಿಕೆ ಆರೋಪ ಕೇಳಿಬಂತು! ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆಗಳು ಚಲಾವಣೆಯಾಗಿದ್ದವು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು. ಆದರೆ ಅಥಾರಿಟಿಗಳು ಇದನ್ನು ನಿರಾಕರಿಸಿದ್ದರಿಂದ ಪರೀಕ್ಷೆ ರದ್ದಾಗಲಿಲ್ಲ.

ನೀಟ್‌ನಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ

ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳು ನೀಟ್ ವ್ಯವಸ್ಥೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿವೆ. ಈ ಪರೀಕ್ಷೆಯು ಸಿಬಿಎಸ್‌ಇ (ಸಿಬಿಎಸ್‌ಇ) ಪಠ್ಯಕ್ರಮದ ಮೇಲೆಯೇ ಹೆಚ್ಚು ಆಧಾರಿತವಾಗಿರುವುದರಿಂದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಹಾಗೂ ರಾಜ್ಯಗಳ ವೈದ್ಯಕೀಯ ಸೀಟು ಹಂಚಿಕೆಯ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂಬುದು ರಾಜ್ಯಗಳ ಪ್ರಮುಖ ವಾದವಾಗಿದೆ.

ನೀಟ್ ಜಾರಿಯಾದಾಗಿನಿಂದ, ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಕರ್ನಾಟಕ ಇದನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿವೆ. ಈ ಪರೀಕ್ಷಾ ಪದ್ಧತಿಯು ದಕ್ಷಿಣದ ರಾಜ್ಯಗಳ ವಿದ್ಯಾರ್ಥಿಗಳಿಗೆ, ಶಿಕ್ಷಣ ವ್ಯವಸ್ಥೆಗೆ ಮತ್ತು ಸ್ವಾಯತ್ತತೆಗೆ ದೊಡ್ಡ ಮಟ್ಟದ ಅನ್ಯಾಯ ಎಸಗುತ್ತಿದೆ ಎಂಬುದು ಈ ರಾಜ್ಯಗಳ ಪ್ರಮುಖ ವಾದವಾಗಿದೆ, ಅದು ಸತ್ಯವೂ ಹೌದು.

ಕೋಚಿಂಗ್ ಅನಿವಾರ್ಯತೆ

ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಲಕ್ಷಾಂತರ ರೂಪಾಯಿ ವೆಚ್ಚದ ಖಾಸಗಿ ಕೋಚಿಂಗ್ ಸೆಂಟರ್‌ಗಳ ನೆರವು ಇತ್ತೀಚಿನ ವರ್ಷಗಳಲ್ಲಿ ಅನಿವಾರ್ಯವಾಗಿದೆ. ಕಾಲೇಜು ಫೀಸ್‌ಗಿಂತಲೂ ಹತ್ತು ಪಟ್ಟು ಹೆಚ್ಚಿನ ಕೋಚಿಂಗ್ ಸೆಂಟರ್ ಗಳ ಫೀಸ್‌ ಭರಿಸುವ ಹೊರೆ ಪೋಷಕರ ಮೇಲೆ ಬೀಳುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಸರ್ಕಾರಿ ಶಾಲೆಗಳ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ದುಬಾರಿ ಕೋಚಿಂಗ್ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಪ್ರತಿಭೆ ಇದ್ದರೂ ನೀಟ್‌ನಿಂದ ಅವರಿಗೆ ಸೀಟು ವಂಚನೆಯಾಗುತ್ತಿದೆ. ಬಹುತೇಕ ಸೀಟುಗಳ ಉತ್ತರ ಭಾರತದ ಮಕ್ಕಳ ಪಾಲಾಗುತ್ತಿದೆ.

ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದರೂ, ಕೇವಲ ನೀಟ್ ಪರೀಕ್ಷೆಯ ಒಂದೇ ಒಂದು ಪ್ರವೇಶ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಸೀಟು ನಿರ್ಧಾರವಾಗುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಸಿಬಿಎಸ್‌ಇ ವಿದ್ಯಾರ್ಥಿಗಳ ಮೇಲುಗೈ

ನೀಟ್ ಪ್ರಶ್ನೆಪತ್ರಿಕೆಯನ್ನು ಸಂಪೂರ್ಣವಾಗಿ ಎನ್‌ಸಿಇಆರ್‌ಟಿ / ಸಿಬಿಎಸ್‌ಇ ಪಠ್ಯಕ್ರಮದ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಇದರಿಂದ ಕಷ್ಟವಾಗುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳು ಆಯಾ ರಾಜ್ಯಗಳ ‘ಸ್ಟೇಟ್ ಬೋರ್ಡ್’ ಪಠ್ಯಕ್ರಮದಲ್ಲಿ ಓದಿರುತ್ತಾರೆ. ಈ ಎರಡು ಪಠ್ಯಕ್ರಮಗಳ ನಡುವಿನ ವ್ಯತ್ಯಾಸದಿಂದಾಗಿ ಪ್ರಾದೇಶಿಕ ಭಾಷೆ ಹಾಗೂ ಸ್ಟೇಟ್ ಬೋರ್ಡ್‌ನಲ್ಲಿ ಓದಿದ ವಿದ್ಯಾರ್ಥಿಗಳಿಗೆ ತೀವ್ರ ಅನನುಕೂಲವಾಗುತ್ತಿದೆ. ನಗರದ ಪ್ರದೇಶದ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಸಿಬಿಎಸ್‌ಇ ಸಿಲಬಸ್‌ನಲ್ಲಿ ಓಸುತ್ತಿದ್ದು, ಖಾಸಗಿ ಕೋಚಿಂಗ್‌ ಸೆಂಟರ್‌ಗಳಲ್ಲಿ ತರಬೇತಿ ಪಡೆದ ಹಣವಂತರ ಮಕ್ಕಳು ಮಾತ್ರ ವೈದ್ಯಕೀಯ ಸೀಟು ಪಡೆದುಕೊಳ್ಳುತ್ತಿದ್ದಾರೆ.

ನೀಟ್‌ನಿಂದ ರಾಜ್ಯಗಳ ಸ್ವಾಯತ್ತತೆ ಕುಸಿಯುವ ಜೊತೆಗೆ, ಹಕ್ಕುಗಳ ಹರಣವೂ ಆಗುತ್ತಿದೆ. ಆರೋಗ್ಯ ಕ್ಷೇತ್ರ ಮತ್ತು ಸೀಟುಗಳ ಹಂಚಿಕೆ ಮೇಲಿನ ನಿಯಂತ್ರಣವೂ ರಾಜ್ಯಗಳ ಕೈತಪ್ಪಿದೆ. ಆರೋಗ್ಯ ಮತ್ತು ಶಿಕ್ಷಣ ವಿಷಯಗಳು ಸಂವಿಧಾನದ ಜಂಟಿ ಪಟ್ಟಿಯಲ್ಲಿವೆ. ದಕ್ಷಿಣದ ರಾಜ್ಯಗಳು ತಮ್ಮದೇ ಆದ ಸ್ವಂತ ತೆರಿಗೆ ಹಣ ಹಾಗೂ ಸಂಪನ್ಮೂಲಗಳನ್ನು ಬಳಸಿ ಉತ್ತಮ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿವೆ. ಆದರೆ ನೀಟ್ ಜಾರಿಯಿಂದಾಗಿ, ಈ ಕಾಲೇಜುಗಳ ಸೀಟು ಹಂಚಿಕೆಯ ಮೇಲಿನ ಸಂಪೂರ್ಣ ನಿಯಂತ್ರಣವನ್ನು ರಾಜ್ಯಗಳು ಕಳೆದುಕೊಂಡಿವೆ.

ಮುಂಚೆ ಆಯಾ ರಾಜ್ಯಗಳ ಸಿಇಟಿ ಮೂಲಕ ಸ್ಥಳೀಯ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿದ್ದ ಸೀಟುಗಳು, ಈಗ ಅಖಿಲ ಭಾರತ ಕೋಟಾ ಮತ್ತು ನೀಟ್ ಕಡ್ಡಾಯ ನಿಯಮಗಳಿಂದಾಗಿ ಬೇರೆ ರಾಜ್ಯಗಳ ಪಾಲಾಗುತ್ತಿವೆ. ಈ ಬಗ್ಗೆ ತಮಿಳುನಾಡಿನ ರಾಜಕೀಯ ಪಕ್ಷಗಳು ಗಟ್ಟಿಧ್ವನಿಯಲ್ಲಿ ಕೇಂದ್ರವನ್ನು ಪ್ರಶ್ನೆ ಮಾಡುತ್ತಿವೆ.

ನೀಟ್ ಮೂಲಕ ಹೊರರಾಜ್ಯಗಳ ಅಥವಾ ನಗರ ಪ್ರದೇಶಗಳ ಶ್ರೀಮಂತ ವಿದ್ಯಾರ್ಥಿಗಳು ದಕ್ಷಿಣದ ರಾಜ್ಯಗಳ ಸರ್ಕಾರಿ ಕಾಲೇಜುಗಳಲ್ಲಿ ಸೀಟು ಪಡೆಯುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ಕೋರ್ಸ್ ಮುಗಿದ ನಂತರ ದಕ್ಷಿಣದ ಗ್ರಾಮೀಣ ಭಾಗಗಳಲ್ಲಿ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಸ್‌ಸಿ) ಸೇವೆ ಸಲ್ಲಿಸಲು ಆಸಕ್ತಿ ತೋರುತ್ತಿಲ್ಲ. ಇದರಿಂದ ತಮಿಳುನಾಡು ಹಾಗೂ ಕರ್ನಾಟಕದ ಗ್ರಾಮೀಣ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ದೀರ್ಘಾವಧಿಯಲ್ಲಿ ದೊಡ್ಡ ಹೊಡೆತ ಬೀಳುತ್ತಿದೆ.

ಪರೀಕ್ಷೆಯಲ್ಲಿ ಭಾಷಾ ತಾರತಮ್ಯ; ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ

ಪ್ರಶ್ನೆಪತ್ರಿಕೆಗಳ ಭಾಷಾಂತರದಲ್ಲಿ ಆಗುವ ತಪ್ಪುಗಳು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗೊಂದಲ ಉಂಟುಮಾಡುತ್ತಿವೆ. ಪರಿಣಾಮವಾಗಿ, ಅನುತ್ತೀರ್ಣದ ಭಯದಿಂದ ದಕ್ಷಿಣದ ಕೆಲ ವಿದ್ಯಾರ್ಥಿಗಳ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಯ ಭೀತಿ ಹಾಗೂ ಸೀಟು ಸಿಗದ ಹತಾಶೆಯಿಂದಾಗಿ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ. ಇದು ಇಡೀ ದಕ್ಷಿಣ ಭಾರತದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ನೀಟ್ ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡುವ ಜೊತೆಗೆ 12ನೇ ತರಗತಿ ಅಂಕಗಳ ಆಧಾರದ ಮೇಲೆಯೇ ವೈದ್ಯಕೀಯ ಸೀಟು ನೀಡಬೇಕು ಎಂದು ತಮಿಳುನಾಡು ವಿಧಾನಸಭೆಯಲ್ಲಿ ವಿಶೇಷ ಮಸೂದೆಯನ್ನು ಕಳೆದ ವರ್ಷ ಪಾಸ್ ಮಾಡಲಾಗಿದೆ. ಪೇಪರ್ ಸೋರಿಕೆ ಮತ್ತು ಅಕ್ರಮಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವೂ ಸಹ ನೀಟ್ ಪದ್ಧತಿಯನ್ನು ರದ್ದುಗೊಳಿಸಿ, ಹಳೆಯ ಸಿಇಟಿ ವ್ಯವಸ್ಥೆಯನ್ನೇ ಮರಳಿ ತರಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.

ನೀಟ್ ವಿರುದ್ಧ ಸಮರ ಸಾರಿದ್ದ ಸ್ಟಾಲಿನ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಆರಂಭದಿಂದಲೂ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ನೀಟ್) ಅತ್ಯಂತ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ನೀಟ್ ಪರೀಕ್ಷೆಯು ಬಡ, ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ಹೊಸಕಿ ಹಾಕುವ ಕ್ರೂರ ವ್ಯವಸ್ಥೆ ಎಂದು ಹೇಳುತ್ತಾರೆ.

ನೀಟ್ ಪರೀಕ್ಷೆಯು ಕೇವಲ ದುಬಾರಿ ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ ಹಣ ಪಾವತಿಸಬಲ್ಲ ಶ್ರೀಮಂತ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಮಾತ್ರ ನೆರವಾಗುತ್ತಿದೆ ಎಂದು ಸ್ಟಾಲಿನ್ ವಾದಿಸುತ್ತಾರೆ. ಕೋಚಿಂಗ್ ಪಡೆಯಲು ಸಾಧ್ಯವಿಲ್ಲದ ಸರ್ಕಾರಿ ಶಾಲೆಯ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯು ವೈದ್ಯಕೀಯ ಸೀಟು ಸಿಗದಂತೆ ತಡೆಯುವ “ಮಹಾದ್ವಾರ”ವಾಗಿದೆ ಎಂಬುದು ಅವರ ಮುಖ್ಯ ಆಕ್ಷೇಪವಾಗಿದೆ.

ಶಿಕ್ಷಣವು ಸಂವಿಧಾನದ ಜಂಟಿ ಪಟ್ಟಿಯಲ್ಲಿದೆ. ಆದರೆ ಕೇಂದ್ರ ಸರ್ಕಾರವು ನೀಟ್ ಮೂಲಕ ರಾಜ್ಯ ಸರ್ಕಾರಗಳ ಹಕ್ಕನ್ನು ಕಸಿದುಕೊಂಡಿದೆ. ರಾಜ್ಯ ಸರ್ಕಾರ ತನ್ನ ಸ್ವಂತ ಹಣದಿಂದ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿದೆ. ಆದರೆ ನೀಟ್‌ನಿಂದಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅಲ್ಲಿ ಸೀಟು ಸಿಗುತ್ತಿಲ್ಲ ಎಂದು ಸ್ಟಾಲಿನ್ ಆಕ್ರೋಶ ಹೊರಹಾಕಿದ್ದರು.

ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ವ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ, ಗ್ರೇಸ್ ಮಾರ್ಕ್ಸ್ ಹಗರಣ ಮತ್ತು ಪರೀಕ್ಷಾ ಅಕ್ರಮಗಳನ್ನು ವಿರೊಧಿಸಿರುವ ಸ್ಟಾಲಿನ್, “ನೀಟ್ ಎನ್ನುವುದು ಅರ್ಹತೆಯನ್ನು ಅಳೆಯುವ ಮಾನದಂಡವಲ್ಲ, ಅದು ಕೇವಲ ಹಗರಣಗಳ ಗೂಡು” ಎಂದು ಟೀಕಿಸಿದ್ದಾರೆ.

ಎನ್‌ಟಿಎ ವಿಸರ್ಜನೆಗೆ ಆಗ್ರಹ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಸಂಪೂರ್ಣವಾಗಿ ವಿಫಲವಾಗಿದ್ದು, ನೀಟ್ ಪರೀಕ್ಷೆಯನ್ನು ದೇಶಾದ್ಯಂತ ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಅವರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

ನೀಟ್ ಪರೀಕ್ಷೆಯ ತೀವ್ರ ಒತ್ತಡ ತಡೆಯಲಾರದೆ ತಮಿಳುನಾಡಿನ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ಸ್ಟಾಲಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. “ನೀಟ್ ಕೇವಲ ಪರೀಕ್ಷೆಯಲ್ಲ, ಅದು ನಮ್ಮ ಮಕ್ಕಳ ಜೀವ ತೆಗೆದುಕೊಳ್ಳುವ ಮೃತ್ಯುಕೂಪ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ತಮಿಳುನಾಡಿಗೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರಿ ವಿಧಾನಸಭೆಯಲ್ಲಿ ಐತಿಹಾಸಿಕ ವಿಧೇಯಕವನ್ನು ಅಂಗೀಕರಿಸಿ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿದೆ. 12ನೇ ತರಗತಿ ಅಂಕಗಳ ಆಧಾರದ ಮೇಲೆಯೇ ವೈದ್ಯಕೀಯ ಪ್ರವೇಶಾತಿ ಕಲ್ಪಿಸಬೇಕು ಎನ್ನುವುದು ಸ್ಟಾಲಿನ್ ಅವರ ದೃಢ ನಿಲುವಾಗಿದೆ.

ನೀಟ್ ವಿರೋಧಿಸಿದ್ದ ಸಿಎಂ ವಿಜಯ್

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಮ್ಮ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಸ್ಥಾಪನೆಯ ಆರಂಭಿಕ ದಿನಗಳಿಂದಲೂ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ನೀಟ್) ಅತ್ಯಂತ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅವರು, ನೀಟ್ ವ್ಯವಸ್ಥೆಯು ಸಂಪೂರ್ಣವಾಗಿ ರದ್ದಾಗಬೇಕು ಮತ್ತು ಶಿಕ್ಷಣದ ಮೇಲಿನ ಹಕ್ಕು ರಾಜ್ಯಗಳಿಗೆ ಮರಳಬೇಕು ಎಂಬ ದೃಢ ನಿಲುವು ಹೊಂದಿದ್ದಾರೆ.

1970 ರ ದಶಕದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಶಿಕ್ಷಣವನ್ನು ರಾಜ್ಯ ಪಟ್ಟಿಯಿಂದ ರಾಜ್ಯ ಮತ್ತು ಕೇಂದ್ರ ಜಂಟಿ ಪಟ್ಟಿಗೆ ಬದಲಾಯಿಸಲಾಯಿತು. ಇದುವೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ವಿಜಯ್ ವಾದಿಸುತ್ತಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಸಂಪೂರ್ಣವಾಗಿ ಮರಳಿ ‘ರಾಜ್ಯ ಪಟ್ಟಿ’ಗೆ ತರಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂಬುದು ಇವರ ಪ್ರಮುಖ ರಾಜಕೀಯ ಒತ್ತಾಯವಾಗಿದೆ.

ನೀಟ್‌ಗೆ ಕನ್ನಡಪರ ಸಂಘಟನೆಗಳಿಂದ ವಿರೋಧ

ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರೆ ಪ್ರಾದೇಶಿಕ ಪಕ್ಷಗಳು ಸೇರಿದಂತೆ ಕರ್ನಾಟಕದ ವಿವಿಧ ಕನ್ನಡಪರ ಸಂಘಟನೆಗಳು ಆರಂಭದಿಂದಲೂ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ನೀಟ್) ತೀವ್ರವಾಗಿ ವಿರೋಧಿಸುತ್ತಾ ಬಂದಿವೆ. ನೀಟ್ ವ್ಯವಸ್ಥೆಯು ಕರ್ನಾಟಕದ ಶೈಕ್ಷಣಿಕ ಸ್ವಾಯತ್ತತೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮತ್ತು ರಾಜ್ಯದ ಹಕ್ಕುಗಳಿಗೆ ಧಕ್ಕೆ ತರುತ್ತಿದೆ ಎಂಬುದು ಕನ್ನಡಪರ ಸಂಘಟನೆಗಳ ದೃಢ ನಿಲುವಾಗಿದೆ.

ನೀಟ್ ಪರೀಕ್ಷೆಯು ಪ್ರಮುಖವಾಗಿ ಸಿಬಿಎಸ್‌ಇ ಮತ್ತು ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಆಧರಿಸಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಪಠ್ಯಕ್ರಮವನ್ನು ಎದುರಿಸುವುದು ಮತ್ತು ಭಾಷಾಂತರಿಸಲಾದ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳುವುದು ತೀವ್ರ ಕಷ್ಟಕರವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದ ಕೋಚಿಂಗ್ ಪಡೆಯಲು ಸಾಧ್ಯವಿಲ್ಲದ ಕನ್ನಡದ ಬಡ ವಿದ್ಯಾರ್ಥಿಗಳನ್ನು ಈ ಪರೀಕ್ಷೆಯು ವೈದ್ಯಕೀಯ ಶಿಕ್ಷಣದಿಂದ ದೂರವಿಡುತ್ತಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತವೆ.

ನೀಟ್‌ ಹಿನ್ನೆಲೆ:

ಭಾರತದಲ್ಲಿ ವೈದ್ಯಕೀಯ (ಎಂಬಿಬಿಎಸ್‌/ಬಿಡಿಎಸ್‌) ಸೀಟುಗಳಿಗಾಗಿ ದೇಶಾದ್ಯಂತ ಸುಮಾರು 90 ಕ್ಕೂ ಹೆಚ್ಚು ಪ್ರತ್ಯೇಕ ಪ್ರವೇಶ ಪರೀಕ್ಷೆಗಳು ನಡೆಯುತ್ತಿದ್ದವು. ಕೇಂದ್ರ ಸರ್ಕಾರಿ ಕೋಟಾಗೆ ಎಐಪಿಎಂಟಿ (All India Pre-Medical Test) ನಡೆದರೆ, ಆಯಾ ರಾಜ್ಯಗಳು ತಮ್ಮದೇ ಆದ ಸಿಇಟಿ (ಕರ್ನಾಟಕದಲ್ಲಿ ಕೆಸೆಟ್) ಪರೀಕ್ಷೆಗಳನ್ನು ನಡೆಸುತ್ತಿದ್ದವು. ಇದಲ್ಲದೆ ಖಾಸಗಿ ಕಾಲೇಜು ಒಕ್ಕೂಟಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುತ್ತಿದ್ದವು. ವಿದ್ಯಾರ್ಥಿಗಳು ದೇಶದ ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಭಾರಿ ಪ್ರಮಾಣದ ಹಣ ವ್ಯಯಿಸಬೇಕಿತ್ತು. ಖಾಸಗಿ ಕಾಲೇಜುಗಳಲ್ಲಿ ಡೊನೇಷನ್ ದಂಧೆ ಮತ್ತು ಸೀಟು ಮಾರಾಟದ ಹಗರಣಗಳು ವ್ಯಾಪಕವಾಗಿದ್ದವು.

ನೀಟ್ ಪರಿಕಲ್ಪನೆ ಮತ್ತು ಕಾನೂನು ಹೋರಾಟ

ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ದೇಶಾದ್ಯಂತ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾವನೆಯನ್ನು 2010 ರಲ್ಲಿ ಮೊದಲ ಬಾರಿಗೆ ಸರ್ಕಾರದ ಮುಂದಿಟ್ಟಿತು. 2013 ರಲ್ಲಿ ಮೊದಲ ಬಾರಿಗೆ ನೀಟ್ ಪರೀಕ್ಷೆಯನ್ನು ಜಾರಿಗೊಳಿಸಲಾಯಿತು. ಆದರೆ, ರಾಜ್ಯಗಳ ಸ್ವಾಯತ್ತತೆ ಮತ್ತು ಖಾಸಗಿ ಕಾಲೇಜುಗಳ ಹಕ್ಕನ್ನು ಇದು ಕಸಿದುಕೊಳ್ಳುತ್ತದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ 2013 ರಲ್ಲಿ ನೀಟ್ ಪರೀಕ್ಷೆಯನ್ನು ಕಾನೂನುಬಾಹಿರ ಎಂದು ರದ್ದುಗೊಳಿಸಿತು. 2016 ರಲ್ಲಿ ಸುಪ್ರೀಂ ಕೋರ್ಟ್ ತನ್ನ ಹಳೆಯ ತೀರ್ಪನ್ನು ಮರುಪರಿಶೀಲಿಸಿ, ದೇಶಾದ್ಯಂತ ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರ ತಡೆಯಲು ನೀಟ್ ಪರೀಕ್ಷೆ ಕಡ್ಡಾಯ ಎಂದು ಐತಿಹಾಸಿಕ ತೀರ್ಪು ನೀಡಿತು.

2019 ರಲ್ಲಿ ಕೇಂದ್ರ ಸರ್ಕಾರವು ‘ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ’ (ಎನ್‌ಎಂಸಿ ಆಕ್ಟ್‌, 2019) ಜಾರಿಗೆ ತಂದಿತು. ಇದರ ಅನ್ವಯ 2020 ರಿಂದ ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳು, ಪ್ರತಿಷ್ಠಿತ ಎಐಐಎಂಎಸ್‌ ಮತ್ತು ಜೆಐಪಿಎಂಇಆರ್ ಸಂಸ್ಥೆಗಳೂ ಸೇರಿದಂತೆ ದೇಶದ ಪ್ರತಿಯೊಂದು ವೈದ್ಯಕೀಯ ಸೀಟಿಗೂ ನೀಟ್ ಪರೀಕ್ಷೆಯನ್ನೇ ಕಡ್ಡಾಯಗೊಳಿಸಲಾಯಿತು. ಆಯುಷ್ (ಆಯುಶ್‌ – ಆಯುರ್ವೇದ, ಹೋಮಿಯೋಪತಿ) ಕೋರ್ಸ್‌ಗಳಿಗೂ ಇದನ್ನು ಅನ್ವಯಿಸಲಾಯಿತು.

ವಿದ್ಯಾರ್ಥಿಗಳು ಹತ್ತಾರು ಪರೀಕ್ಷೆಗಳನ್ನು ಬರೆಯುವ ಮತ್ತು ವಿವಿಧ ರಾಜ್ಯಗಳಿಗೆ ಅಲೆಯುವ ಮಾನಸಿಕ ಹಾಗೂ ಆರ್ಥಿಕ ಒತ್ತಡವನ್ನು ತಪ್ಪಿಸುವುದು ನೀಟ್ ಉದ್ದೇಶವಾಗಿತ್ತು. ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಕೋಟ್ಯಂತರ ರೂಪಾಯಿ ಕ್ಯಾಪಿಟೇಶನ್ ಫೀಸ್ (ಡೊನೇಷನ್) ಪಡೆದು ಸೀಟು ಮಾರಾಟ ಮಾಡುವುದಕ್ಕೆ ಬ್ರೇಕ್ ಹಾಕುವುದು. ದೇಶಾದ್ಯಂತ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಅಭ್ಯರ್ಥಿಗಳಲ್ಲಿ ಕನಿಷ್ಠ ಅರ್ಹತಾ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನೀಟ್‌ ಜಾರಿ ಂಆಡಿದ ರ ಹಿಂದಿನ ಉದ್ದೇಶವಾಗಿತ್ತು.

ಎನ್‌ಟಿಎ ಆರಂಭದಲ್ಲಿ ಸಿಬಿಎಸ್‌ಇ ಸಂಸ್ಥೆಯು ಈ ಪರೀಕ್ಷೆಯನ್ನು ನಡೆಸುತ್ತಿತ್ತು. ಆದರೆ, ಪರೀಕ್ಷೆಗಳನ್ನು ವೃತ್ತಿಪರವಾಗಿ ನಡೆಸಲು ಕೇಂದ್ರ ಸರ್ಕಾರವು ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ 2019 ರಿಂದ ನೀಟ್ ನಡೆಸುವ ಜವಾಬ್ದಾರಿಯನ್ನು ವಹಿಸಲಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...