ಸಾರಿಗೆ ನೌಕರರ ಮುಷ್ಕರವನ್ನು ನೆಪವಾಗಿಟ್ಟುಕೊಂಡು ಬಿಎಂಟಿಸಿ ಖಾಸಗೀಕರಣಗೊಳಿಸುವ ಹುನ್ನಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 7ರಂದು ಸಾರಿಗೆ ನೌಕರರು ತಮ್ಮ 9 ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರವನ್ನು ನಡೆಸಲು ಕರೆ ನೀಡಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಆಗುವ ಅನಾನುಕೂಲಗಳನ್ನು ತಡೆಗಟ್ಟುವ ನೆಪವೊಡ್ಡಿ ಸರ್ಕಾರವು ಬಿಎಂಟಿಸಿಯ ಅನೇಕ ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ಹಂಚಲು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದೆ. ಇದು ನಿಜಕ್ಕೂ ಅತ್ಯಂತ ಕಳವಳಕಾರಿಯಾದ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಆರೋಪಿಸಿದ್ದಾರೆ.
ಸಾರಿಗೆ ಕಾರ್ಮಿಕ ಸಂಘಗಳು ಈಗಾಗಲೇ ಸರ್ಕಾರಕ್ಕೆ ಮುಷ್ಕರದ ನೋಟಿಸ್ ನೀಡಿದ್ದರೂ, ಅವರನ್ನು ಕರೆಸಿ ಮಾತನಾಡದೆ ಸರ್ಕಾರವು ಬೆಂಗಳೂರು ಮಹಾನಗರ ಸಾರಿಗೆಯ (ಬಿಎಂಟಿಸಿ) ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ಮಾರಲು ಅರ್ಜಿಗಳನ್ನು ಕರೆದಿರುವುದು ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಬಿಜೆಪಿ ಶಾಸಕನ ಮೇಲೆ ಹಲ್ಲೆ ಪ್ರಕರಣ: ನಮ್ಮ ರೈತರು ಭಾಗಿಯಾಗಿಲ್ಲವೆಂದ ರಾಕೇಶ್ ಟಿಕಾಯತ್
ಸರ್ಕಾರದ ಮುಖ್ಯಮಂತ್ರಿಗಳು ಸೇರಿ ಪ್ರಭಾವಿ ಮಂತ್ರಿಗಳು ಈ ಹುನ್ನಾರಕ್ಕೆ ಕೈ ಹಾಕಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ವ್ಯತಿರಿಕ್ತವಾಗಿ ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಲಾಭವನ್ನು ಮಾಡುವ ಉದ್ದೇಶದಿಂದ ಖಾಸಗಿಯವರಿಗೆ ಒಪ್ಪಿಸುತ್ತಿರುವುದು ನಿಜಕ್ಕೂ ಸಂವಿಧಾನ – ಪ್ರಜಾಪ್ರಭುತ್ವ ವಿರೋಧಿ ನಡೆ. ಸರ್ಕಾರದ ಈ ರೀತಿಯ ನಿಲುವುಗಳಿಂದಾಗಿಪರಿಸರ ಮಾಲಿನ್ಯ, ಸಂಚಾರಿ ನಿರ್ವಹಣೆ ಇನ್ನಿತರ ಯಾವುದೇ ಸಾರ್ಥಕ ಉದ್ದೇಶಗಳು ಈಡೇರುವುದಿಲ್ಲ. ನೂರಾರು ಕೋಟಿ ರೂಪಾಯಿಗಳ ವ್ಯವಸ್ಥಿತ , ಬೃಹತ್ ಭ್ರಷ್ಟಾಚಾರ ಇದಾಗಿದೆ ಎಂದು ಆಪ್ ನಾಯಕರು ಟೀಕಿಸಿದ್ದಾರೆ.
ಸಾರಿಗೆ ಇಲಾಖೆಗೆ ಬಿಎಂಟಿಸಿ ನಿರ್ವಹಣೆಯನ್ನು ಮಾಡಲಾಗದಿದ್ದಲ್ಲಿ ಖಾಸಗೀಕರಣಗೊಳಿಸುವ ಬದಲು ಥಾಣೆ ,ಹೊಸ ಮುಂಬೈ , ಬಾಂಬೆ ಮುನ್ಸಿಪಲ್ ಕಾರ್ಪೊರೇಶನ್‌ಗಳು ಈಗಾಗಲೇ ಆ ನಗರಗಳ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುತ್ತಿವೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಬಿಬಿಎಂಪಿಗೆ ಸಾರಿಗೆ ನಿರ್ವಹಣೆ ಜವಾಬ್ದಾರಿಯನ್ನು ಒಪ್ಪಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಖಾಸಗೀಕರಣಗೊಳಿಸುವ ಬಗ್ಗೆ ಸಹಮತ ವ್ಯಕ್ತಪಡಿಸಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಟ್ರೋಲ್‌ಗಳಿಗೆ ಆಹಾರವಾಗಿದೆ.
ಇದನ್ನೂ ಓದಿ: ‘ಆಕೆ’ ವಿಜಯ್ ಮಲ್ಯನೋ ಇಲ್ಲ ನೀರವ್ ಮೋದಿಯೋ? – ಸಿಡಿ ಪ್ರಕರಣದ ಕುರಿತು ಸಿದ್ದರಾಮಯ್ಯ


