ಜಮ್ಮು ಮತ್ತು ಕಾಶ್ಮೀರದ ಮಚಿಲ್ ವಲಯದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಉಗ್ರರು ಮತ್ತು ಭಾರತೀಯ ಸೈನಿಕರ ನಡುವಿನ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಓರ್ವ ಅಧಿಕಾರಿ ಸೇರಿದಂತೆ ಮೂವರು ಭಾರತೀಯ ಸೇನಾ ಸೈನಿಕರು ಹುತಾತ್ಮರಾಗಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಗ್ರರ ಚಟುವಟಿಕೆಗಳು ಕಂಡುಬಂದಿದು, ಒಳ ನುಸುಳುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಭದ್ರತಾ ಪಡೆಗಳು ಉಗ್ರರ ಒಳನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದ್ದರಿಂದ ಗುಂಡಿನ ಚಕಮಕಿ ನಡೆದು ನಾಲ್ವರು ಹುತಾತ್ಮರಾಗಿದ್ದಾರೆ. ಜೊತೆಗೆ ಮೂವರು ಉಗ್ರರು ಮೃತಪಟ್ಟಿದ್ದಾರೆ.
“ಮಚಿಲ್ ಸೆಕ್ಟರ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಓರ್ವ ಕ್ಯಾಪ್ಟನ್ ಮತ್ತು ಇಬ್ಬರು ಸೈನಿಕರು, ಒಬ್ಬ ಬಿಎಸ್‌ಎಫ್ ಯೋಧ ಪ್ರಾಣ ಕಳೆದುಕೊಂಡಿದ್ದಾರೆ. ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ನಡೆಯುತ್ತಿದೆ” ಎಂದು ಸೇನೆಯ ಮೂಲಗಳು ತಿಳಿಸಿವೆ ಎಂದು ಎಎನ್‌ಐ ಉಲ್ಲೇಖಿಸಿದೆ.
ಕಾರ್ಯಾಚರಣೆಯ ಸಮಯದಲ್ಲಿ ಕಾನ್‌ಸ್ಟೆಬಲ್ ಸುದೀಪ್ ಸರ್ಕಾರ್ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ ಹಲವು ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಈ ಮೊದಲು ಮತ್ತೊಂದು ಹೇಳಿಕೆಯಲ್ಲಿ, ಭಾರತೀಯ ಸೇನೆ “ನವೆಂಬರ್ 7 ಮತ್ತು 8 ರ ಮಧ್ಯರಾತ್ರಿ ಮಚಿಲ್ ಸೆಕ್ಟರ್ (ಜೆ & ಕೆ) ನಲ್ಲಿ ಗಸ್ತು ತಿರುಗುವ ವೇಳೆ ಗುರುತಿಸಲಾಗದ ವ್ಯಕ್ತಿಗಳ ಅನುಮಾನಾಸ್ಪದ ಚಲನೆಯನ್ನು ಪತ್ತೆ ಮಾಡಿದೆ” ಎಂದು ತಿಳಿಸಿತ್ತು.


