Homeಚಳವಳಿವಚನಗಳ ಸಾಹಿತ್ಯ ಮೌಲ್ಯ: ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ

ವಚನಗಳ ಸಾಹಿತ್ಯ ಮೌಲ್ಯ: ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ

ಒಂದು ಭಾವವನ್ನು ಸಮಗ್ರವಾಗಿ ಉಪಮೆಗಳ ಮೂಲಕ ಒಂದೊಂದು ವಚನಗಳಲ್ಲಿ ಇಡಿಯಾಗಿಯೂ ಮಾರ್ಮಿಕವಾಗಿಯೂ ಬಿಂಬಿಸಿದಂತೆ ಬಿಡಿ ಬಿಡಿಯಾಗಿಯೂ ಅವರ ವಚನಗಳಲ್ಲಿ ಅವು ಇಬ್ಬನಿಯ ಕಿಡಿಯಂತೆ ಹರಡಿಕೊಂಡಿವೆ.

- Advertisement -
- Advertisement -

ವಚನ ಸಾಹಿತ್ಯದ ಉಗಮ

11ನೆಯ ಶತಮಾನದ ಹೊತ್ತಿಗಾಗಲೇ ಗದ್ಯದ ಸಾಮಾನ್ಯತೆಯನ್ನು ಮೀರಿದ, ಪದ್ಯದ ಪ್ರತಿಭೆಯನ್ನೊಳಗೊಂಡ ‘ಶರಣರ ಸೂಳ್ನುಡಿ’ಯ ವಚನ ಪ್ರಕಾರ ವಿಶಿಷ್ಟವಾದ ಆಕಾರವನ್ನು ಪಡೆಯತೊಡಗಿತ್ತೆಂದು ಹೇಳಬಹುದು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಜೇಡರ ದಾಸಿಮಯ್ಯ ಮೊದಲಾದ ಶಿವಶರಣರ ವಚನಗಳ ಶೈಲಿ ಈ ಮಾತನ್ನು ದೃಢಗೊಳಿಸುತ್ತದೆ. ಜನಸಾಮಾನ್ಯರ ಭಾಷೆಯ ಸಹಜತೆಯನ್ನು ಧೈರ್ಯವಾಗಿ ಎತ್ತಿಕೊಂಡು ಕಿರಿದಾದ ನುಡಿಗಳಲ್ಲಿ ತನ್ನ ಅನುಭವದ ಸಾರವನ್ನು ಮನಸ್ಸ್ಸಿಗೆ ಮುಟ್ಟುವಂತೆ ಹೇಳುವ ದೇವರ ದಾಸಿಮಯ್ಯನ ವಚನಗಳಲ್ಲಿ ಅವುಗಳ ರಚನೆ ಆಗಲೇ ಒಂದು ಪಾಕಕ್ಕೆ ಬಂದಿರುವುದನ್ನು ಕಾಣುತ್ತೇವೆ. ಉದಾಹರಣೆಗೆ ಈ ವಚನಗಳನ್ನು ನೋಡಬಹುದು:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,
ಸುಳಿದು ಬೀಸುವ ಗಾಳಿ ನಿಮ್ಮ ದಾನ;
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ?
ಕಡೆಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಬುದೇ?
ಕಡೆಗೀಲು ಬಂಡಿಗಾಧಾರ
ಮೃಡಶರಣರ ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ,
‘ಆದ್ಯರ’ ವಚನ ಪರುಷ ಕಂಡಣ್ಣಾ
‘ಆದ್ಯರ’ ವಚನ ಆದ್ಯರಿಗಾಯಿತ್ತು,
ವೇದ್ಯರಿಗಲ್ಲದೆ ಸಾಧ್ಯವಾಗದು”

ಎಂದು ಮುಂತಾಗಿ ತಮ್ಮ ಹಿಂದಿನ ವಚನ ಸಾಹಿತ್ಯವನ್ನೂ ಅದರ ಹಿರಿಮೆಯನ್ನೂ ಬಸವಣ್ಣನವರು ಭಕ್ತಿಪೂರ್ವಕ ನೆನೆದಿರುವರಲ್ಲದೆ ಮುಂದಿನ ವಚನದಲ್ಲಿ ಅದರ ಸವಿಯನ್ನು ಸೂರೆಗೊಂಡಿದ್ದಾರೆ.

“ಹಾಲತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು
ತವರಾಜದ ನೊರೆ ತೆರೆಯಂತೆ
ಆದ್ಯರ ವಚನವಿರಲು,
ಬೇರೆ ಬಾವಿಯ ತೋಡಿ ಉಪ್ಪು ನೀರನುಂಬುವನ ವಿಧಿಯಂತೆ
ಆಯಿತ್ತೆನ್ನ ಮತಿ ಕೂಡಲ ಸಂಗಮದೇವಾ”

ಆದ್ಯರ ವಚನದ ಸವಿಯನ್ನು ಬಣ್ಣಿಸಿದ್ದೇನೋ ಸರಿ; ಆದರೆ ತಮ್ಮ ಮತಿಯ ಬಗ್ಗೆ ಹೇಳಿಕೊಂಡುದು ಅವರ ನಮ್ರತೆಯ ಲಕ್ಷಣವೇ ಹೊರತು ವಾಸ್ತವ ಸಂಗತಿಯಲ್ಲ. ಬಸವಣ್ಣನವರು ತಮ್ಮ ಅಂತರಂಗದ ಬಾವಿಯನ್ನು ತೋಡಿ ಜನತೆಯ ಜೀವನಕ್ಕೆ ಜೀವಜಲವನ್ನೇ ಉಕ್ಕಿಸಿದರೆಂದು ಹೇಳಬಹುದು. ಅವರ ದೆಸೆಯಿಂದ ಅಸಂಖ್ಯಾತ ಶಿವಶರಣರ ಭಕ್ತಿಗೆ ಬಣ್ಣವೇರಿತು, ಉಕ್ತಿಗೆ ಕಣ್ಣು ಮೂಡಿತು. ಸ್ವಂತ ಅನುಭವವಿಲ್ಲದೆ ಬಹುಶಃ ಯಾವ ಶರಣನೂ ಆಗ ವಚನ ರಚನೆಗೆ ಕೈಹಾಕಲಿಲ್ಲ. ಆದುದರಿಂದಲೇ ಅವರವರ ಕಾಯಕದ ಮಾತಿನ ಮೋಡಿ ರೂಪಕವಾಗಿ ಅವರ ವಚನಗಳಲ್ಲಿ ಒಡಮೂಡಿರುವುದು.

ಬಸವನ ಮಾತು, ಭಕ್ತಿಯ ಓಜೆ, ರೀತಿ, ಕಿಂಕರವೃತ್ತಿ; ಬಸವನ ಬಟ್ಟೆ, ಬಿಂಕದ ಭಾಷೆ, ನಿಷ್ಠೆ, ನೇಮ, ಬಸವನ ನೀತಿ, ಬಸವನ ಪೆರ್ಮೆ, ನಚ್ಚಿನ ಕೂರ್ಮೆ – ಇವೇ ಮೊದಲಾದವು ಬಸವಣ್ಣನವರ ವ್ಯಕ್ತಿತ್ವದ ಗುಣಗಳಾಗಿರುವಂತೆಯೇ ಅವರ ವಚನಗಳ ಲಕ್ಷಣಗಳೂ ಆಗಿವೆ. ಭಕ್ತಿಯಿಂದ ಮೃದುಗೊಂಡ ಅವರ ಹೃದಯ ಯಾವ ಮಾತನ್ನೂ ಹದಗೊಳಿಸದೆ ಬಿಡುತ್ತಿರಲಿಲ್ಲ. ಹೀಗಾಗಿ ಅವರ ಆ ವಚನಗಳು ಎಲ್ಲ ದೃಷ್ಟಿಯಿಂದಲೂ ಪರಿಣಾಮಕಾರಿಯಾಗಿವೆ. ಭಕ್ತಿಯ ಸಾಧನೆ, ಅಂತರಂಗದ ಹೋರಾಟ, ನಡೆ-ನುಡಿ ಆಚಾರ-ವಿಚಾರ, ಕೃತಿ ಸ್ವಭಾವಗಳಲ್ಲಿ ಸೂಕ್ಷ್ಮ ದೃಷ್ಟಿ, ಭಾವೋತ್ಕಟತೆ ಇವೆಲ್ಲವನ್ನೂ ಒಳಗೊಂಡ ಸೂಳ್ನುಡಿಗಳು ಅವರ ‘ಭಾವದ ಕಾಣ್ಕೆ’ಯಾಗಿ ಪರಿಣಮಿಸಿದವು. ಮತ್ರ್ಯಲೋಕವನ್ನು ಕರ್ತಾರನ ಕಮ್ಮಟವೆಂದು ಕಾಣುವ ಅವರ ದೃಷ್ಟಿ ನೆಲದ ಬದುಕಿಗೆ ಸಮೀಪವಾಗಿ ಮಾನವೀಯ ಭಾವನೆಗಳ ಕಾವಿನಲ್ಲಿ ಕಂಪೊಡೆಯಿತು. ಅವರು ನೇರವಾಗಿ ಸಾಹಿತ್ಯ ಸೃಷ್ಟಿಗೆ ಕೈ ಹಾಕದಿದ್ದರೂ ಸಾಹಿತ್ಯ ಆವರನ್ನರಸಿಕೊಂಡು ಬಂದು ಅವರ ಕೈಹಿಡಿಯಿತು. ಕನ್ನಡ ಆಡುನುಡಿಯ ಶಕ್ತಿಯನ್ನೂ – ಸೊಗಸನ್ನೂ, ಸಲಿಗೆಯನ್ನೂ – ಸಹಜತೆಯನ್ನೂ ಅವರ ವಚನಗಳು ಹೊರಹೊಮ್ಮಿಸಿದವು.

‘ಕೂಡಲ ಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬ ಮಾತಿನಿಂದ ಬಸವಣ್ಣನವರ ವಚನಗಳು ಹೃದಯದಿಂದ ನಿರಾಯಾಸವಾಗಿ ಹೊಮ್ಮಿದ ಪ್ರಾಮಾಣಿಕ ನುಡಿಗಳೆನ್ನುವದರಲ್ಲಿ ಸಂದೇಹವಿಲ್ಲ,

ಬಸವಣ್ಣನವರ ಉಪಮೆಗಳ ಸ್ವಾರಸ್ಯ

ವಚನಗಳಲ್ಲಿಯ ಉಪಮಾ ಪ್ರಪಂಚದ ವೈವಿಧ್ಯವನ್ನೂ, ಹೊಸತನದ ಸ್ವಾರಸ್ಯವನ್ನೂ ಈಗ ನೋಡೋಣ. ಕೂಡಲ ಸಂಗಮದೇವನ ನಿಲವನ್ನು ಬಸವಣ್ಣನವರು ಕಂಡ ಅನುಭವದ ಅಭಿವ್ಯಕ್ತಿಯಿದು:

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂದ್ದಿತ್ತು;
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು;
ನನೆಯೊಳಗಣ ಪರಿಮಳದಂತಿದ್ದಿತ್ತು;
ಕೂಡಲ ಸಂಗಮದೇವಾ ನಿಮ್ಮ ನಿಲವು ಕನ್ನೆಯ ಸ್ನೇಹದಂತಿದ್ದಿತ್ತು

ನೀರೊಡಲ ಬೆಂಕಿ, ಚಂದ್ರನ ಬೆಳುದಿಂಗಳಿನ ರುಚಿ, ಮೊಗ್ಗೆಯೊಳಗಿನ ಪರಿಮಳ – ಇವು ಕಣ್ಣಿಗೆ ಕಾಣದಿದ್ದರೂ ಅಲ್ಲಿ ಇವೆ. ಈ ಮೂರು ಉಪಮೆಗಳು ಹೊರಗಿನ ವಸ್ತುಗಳನ್ನು ನಿರ್ದೇಶಿದರೆ ಕೊನೆಯದು ‘ಕನ್ನೆಯ ಸ್ನೇಹದಂತೆ’ – ಮಾನವೀಯ ಭಾವನೆಯ ಸೂಕ್ಷ್ಮತಂತಿಯನ್ನು ಮಿಡಿಯುತ್ತದೆ. ದೇವರ ನಿಲವನ್ನರಿಯುವದೂ ಹಾಗೆಯೇ ಅನುಭವೈಕವೇದ್ಯ, ಅನಿರ್ವಾಚ್ಯ ಎಂಬ ಅರ್ಥವಂತಿಕೆಯನ್ನು ಈ ಉಪಮೆಗಳು ಪಡೆದಿವೆ. ಅಲ್ಲದೆ ಉದಕ-ಕಿಚ್ಚು, ಸಸಿ-ರಸದ ರುಚಿ, ನನೆ-ಪರಿಮಳ ಈ ಗುಣಸೂಚನೆ ಕನ್ನೆಯ ಸ್ನೇಹಕ್ಕೆ ಒಂದು ರೀತಿ ಪೋಷಕವಾಗಿ ಅದರ ಅರ್ಥಗೌರವವನ್ನು ಹೆಚ್ಚಿಸಿದೆ. ಭಾವಕ್ಕನುಗುಣವಾದ ಭಾಷೆಯಿಂದ ಈ ವಚನ ಕೂಡಿದೆ.

ಕೆಲವು ವಚನಗಳಲ್ಲಿ ಉಪಮೆಗಳು ಚಿಕ್ಕ ಚಿಕ್ಕ ಪ್ರತಿಮೆಗಳಾಗಿ ಅರ್ಥಗೌರವವನ್ನು ಹೆಚ್ಚಿಸುತ್ತವೆ;

“ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲ ಸಂಗಮದೇವನೆಂತೊಲಿವನಯ್ಯಾ?”

ನಾವು ಆಡುವ ಮಾತು ಹೇಗಿರಬೇಕು ಎಂಬ ಆದರ್ಶ ನಿರೂಪಣೆಯ ಜೊತೆಗೆ ಒಳ್ಳೆಯ ಸಾಹಿತ್ಯದ ಲಕ್ಷಣವನ್ನೂ ಸೂಚಿಸುವ ಅರ್ಥಸ್ಛುರಣೆಯನ್ನು ಈ ವಚನ ಒದಗಿಸುತ್ತದೆ. ನುಡಿದರೆ ಮುತ್ತಿನ ಹಾರದಂತೆ ಸುಂದರವಾಗಿರಬೇಕು, (ಬಿಡಿ ಬಿಡಿಯಾಗಿದ್ದರೂ ಇಡಿಯಲ್ಲಿ ಶೋಭಾಯಮಾನವಾಗಿ) ಮಾಣಿಕ್ಯದ ದೀಪ್ತಿಯಂತೆ ತಂಬೆಳಕನ್ನು ನೀಡಬೇಕು. (ಆಡುವವನ ಅಂತರಂಗವೂ ಅಲ್ಲಿ ಮೂಡಿರಬೇಕು). ಇಷ್ಟೇ ಅಲ್ಲ, ಲಿಂಗ (ಪರಮ ಸತ್ಯ) ಮೆಚ್ಚಿ ಸೈ ಎನ್ನುವಂತಿರಬೇಕು (ಆತ್ಮಸಾಕ್ಷಿಯಾಗಿ ಆಡಬೇಕು). ಬಸವಣ್ಣನವರು ಇಷ್ಟಕ್ಕೇ ನಿಲ್ಲುವದಿಲ್ಲ, ಅಂಥ ನುಡಿಗೆ ತಕ್ಕ ನಡೆಯೂ ಇರಬೇಕೆನ್ನುತ್ತಾರೆ. ಇದು ಅವರ ಬದುಕಿನ ಮುಖ್ಯ ಸೂತ್ರವೇ ಆಗಿದೆ.

ಕೂಡಲಸಂಗನ ಶರಣರು ಸ್ವತಂತ್ರರು, ಧೀರರು. ಅವರೊಡನೆ ವಿನಯದಿಂದ ಅರಿತು ಆಚರಿಸಬೇಕೇ ಹೊರತು ಮರೆದು ಸರಸವಾಡಬಾರದು. ಹಾಗೆ ಮಾಡಿದರೆ ಪರಿಣಾಮ ಭೀಕರವಾದೀತೆಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ :

“ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ
ಉರಿವ ಕೊಳ್ಳಿಯಕೊಂಡು ಮಂಡೆಯ ಸಿಕ್ಕಬಿಡಿಸುವಂತೆ
ಹುಲಿಯ ಮೀಸೆಯ ಹಿಡಿದುಕೊಂಡು
ಒಲಿದುಯ್ಯಾಲೆಯಾಡುವಂತೆ
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣದಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ”

ಇಲ್ಲಿನ ಉಪಮಾ ಮಾಲೆಯಲ್ಲಿಯ ‘ಹಾವಿನ ಹೆಡೆ’ ‘ಉರಿವ ಕೊಳ್ಳಿ’ ‘ಹುಲಿಯ ಮೀಸೆ’ ‘ಸುಣ್ಣದ ಕಲ್ಲು’ ಈ ದೃಷ್ಟಾಂತಗಳು ಶರಣರನ್ನು ಕೆಣಕಿದ ಸ್ವೇಚ್ಛಾಚಾರಿಗಳಿಗೆ ಆಗುವ ಉಗ್ರಪರಿಣಾಮವನ್ನು ಚೆನ್ನಾಗಿ ವ್ಯಕ್ತಪಡಿಸುತ್ತದೆ.

ಒಂದು ಭಾವವನ್ನು ಸಮಗ್ರವಾಗಿ ಉಪಮೆಗಳ ಮೂಲಕ ಒಂದೊಂದು ವಚನಗಳಲ್ಲಿ ಇಡಿಯಾಗಿಯೂ ಮಾರ್ಮಿಕವಾಗಿಯೂ ಬಿಂಬಿಸಿದಂತೆ ಬಿಡಿ ಬಿಡಿಯಾಗಿಯೂ ಅವರ ವಚನಗಳಲ್ಲಿ ಅವು ಇಬ್ಬನಿಯ ಕಿಡಿಯಂತೆ ಹರಡಿಕೊಂಡಿವೆ. ಕಪ್ಪೆ, ಸರ್ಪ, ಮೊಲ, ಕಾಗೆ, ಕೋಳಿ, ನರಿ, ನಾಯಿ, ಕರಿ, ಕುರಿ, ಬೆಕ್ಕು, ಇಲಿ, ಗಿಳಿ -ಇವೇ ಮೊದಲಾದ ಪಶುಪಕ್ಷಿಗಳ ಸ್ವಭಾವ, ಗುಣ, ದೋಷಗಳನ್ನು ಅನೇಕ ವಚನಗಳಲ್ಲಿ ಉಪಮೆ ರೂಪಕ ದೃಷ್ಟಾಂತಗಳಾಗಿ ಬಸವಣ್ಣನವರು ಮೂಡಿಸಿದ್ದಾರೆ. ಸುಲಭವಾಗಿ ಮಾತು ಮನಸ್ಸಿಗೆ ಮುಟ್ಟುವದಲ್ಲದೆ ಇದರಿಂದ ಮೂಲ ಅನುಭವದ ಸತ್ಯ ಇನ್ನಿಷ್ಟು ಪ್ರಕಾಶಗೊಳ್ಳುತ್ತದೆ.

ವಚನಗಳಲ್ಲಿ ಕಂಡುಬರುವ ಉಪಮೆ ರೂಪಕಗಳ ಸೊಗಸನ್ನೀಗ ನೋಡೋಣ. ಬಸವಣ್ಣನವರು ತಮ್ಮ ಮನಸ್ಸನ್ನು ಅರೆದು, ಒರೆದು, ನೋಡಿಕೊಂಡಷ್ಟು ಇನ್ನಾರೂ ನೋಡಿಲಾರರು; ನೋಡಿದ್ದರೂ ಇಷ್ಟೊಂದು ಪ್ರಾಮಾಣಿಕವಾಗಿ ನಿರೂಪಿಸಿರಲಾರರು.

ನಿಂತಲ್ಲಿ ನಿಲ್ಲದೆ ‘ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದು’ ಈ ಮನ. ವಿಷಯಕ್ಕೆ ಹರಿಯುವಲ್ಲಂತೂ ‘ಅಂದಣವನ್ನೇರಿದ ಸೊಣಗನಂತೆ’ ತನ್ನ ಸ್ಥಾನಮಾನವನ್ನು ಲಕ್ಷಿಸದು, ಮುನ್ನಿನ ಸ್ವಭಾವವನ್ನು ಬಿಡದು. ‘ತುಪ್ಪದ ಸವಿಗೆ ಅಲಗನೆಕ್ಕುವ ಸೊಣಗನಂತೆ’ ಸಂಸಾರ ಸಂಗದಲ್ಲಿ ಮೈಮರೆತಿದೆ. “ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ” ಮೃತ್ಯುವಿನ ನೆರಳಿನಲ್ಲಿದ್ದರೂ ಅದನ್ನರಿಯದು. ‘ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆಮಾಡುವಂತೆ’ ಕೆಡುವೊಡಲ ಹೊರೆಯುತ್ತಿದೆ. ‘ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯು’ವ ಕರುಣಾಜನಕ ಸ್ಥಿತಿ: ಇನ್ನಾವಾಗ ಕೊಂದಿಹರೆಂಬ ಅರಿವೇ ಇಲ್ಲದಂತೆ. ‘ಓತಿ ಬೇಲಿ ಏರಿದಂತೆ’, ‘ಹೊತ್ತಿಗೊಂದು ಪರಿಯಪ್ಪ ಗೋಸುಂಬೆಯಂತೆ’ ಇದರ ಬಣ್ಣ ಬದಲಾಗುತ್ತಲೇ ಇರುತ್ತದೆ. ಹಗಲಿಗೆ ಕಣ್ಣು ಮುಚ್ಚಿ, ತಲೆಕೆಳಗಾಗಿ ಜೋತಾಡುವ ‘ಬಾವುಲ ಬಾಳುವೆಯಂತೆ’ ಅದರ ಪರಿ ತಿರುವು ಮುರುವು. ‘ಚಿತ್ತ ಅತ್ತಿಯ ಹಣ್ಣಿ’ನಂತೆ ರೂಪಕ್ಕೆ ಚಂದ; ಅದರ ಒಳಗೆ ಹುಳುಗಳಲ್ಲದೆ ಹುರುಳಿಲ್ಲ, ‘ಕಂಬಳಿಯಲ್ಲಿ ಕಣಕವ ನಾದಿನಂತೆ’ ಅದು ತೊಡಕು ತೊಡಕಾಗಿದೆ. ‘ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ’ ಕಾಯವಿಕಾರ, ಮನೋವಿಕಾರಗಳು ‘ನನ್ನ ಬಿಡು’ ‘ತನ್ನ ಬಿಡು’ ಎಂದು ಜಗ್ಗಾಡುತ್ತವೆ. ‘ನೀವಲ್ಲದೆ ಒಳಕೊಂಬುವರಿಲ್ಲ’ವೆಂದು ಬಸವಣ್ಣನವರ ಜೀವ ಕೂಡಲ ಸಂಗಮದೇವನಲ್ಲಿ ‘ಸಮುದ್ರದೊಳಗಣ ಸಿಂಪಿನಂತೆ’ ಬಾಯಬಿಡುತ್ತದೆ. ‘ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ’ ‘ಅಂಬೇ’ ‘ಅಂಬೇ’ ಎಂದು ಕರೆಯುತ್ತಿದೆ.

ಬಸವಣ್ಣನವರ ಭಕ್ತಿಯ ಸಾಧನೆ, ಅದಕ್ಕಾಗಿ ಅವರು ಪಟ್ಟ ಪಾಡು ‘ಬಚ್ಚ ಬರಿಯ ಬಸವನೆನಿಸಯ್ಯಾ’ ಎಂಬ ವಿನಯದ ಹಂಬಲ-ಇವು ಅವರ ಕಿರು ನುಡಿಗಳಲ್ಲಿ ಹಿರಿದಾಗಿ ಮೂಡಿವೆ. ಎಲ್ಲ ಶರಣರ ನಡುವೆ ತಾವು ‘ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ’ ಎಂದುಕೊಳ್ಳುತ್ತಾರೆ. ಬಡಿಗೆಯನ್ನು ನುಡಿದಂತೆ ಸೆಟೆದುಕೊಂಡಿರದೆ ‘ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದರೆ ಬೇಡಿದ ಪದವಿ’ಯನ್ನು ಕೊಡುತ್ತಾನೆ ಕೂಡಲ ಸಂಗಮದೇವ. (ಸುಮ್ಮನೆ ಸತ್ವವಿಲ್ಲದೆ ಬಾಗುವದಲ್ಲ; ಬೀಗಿ ಬೆಳೆದು ಗೊನೆವಾಳೆಯಂತೆ ಫಲಭರಿತವಾಗಿ ಸಮರ್ಪಣಭಾವದಿಂದ ಬಾಗಬೇಕು.) ಭಕ್ತಿಯೆಂಬುದು ಬಾಯಿಮಾತಿನಷ್ಟು ಹಗುರಲ್ಲ. ‘ಕರಗಸದಂತೆ ಹೋಗುತ್ತ ಕೊಯ್ವುದು’ ಅಷ್ಟು ಕಷ್ಟದಾಯಕ. ‘ಊರಸೀರೆಗೆ ಅಗಸ ತಡಬಡಿ ಹಡೆದಂತೆ’ ಹೊನ್ನು, ಹೆಣ್ಣು, ಮಣ್ಣು ತನ್ನದೆಂದು ಕೆಮ್ಮನೆ ಕೆಟ್ಟವರೆಷ್ಟು: ಒಡೆಯರಿಗೆ ಒಡವೆಯನ್ನೊಪ್ಪಿಸದೆ ಸುಮ್ಮನೆ ಮೊರೆ ಇಡುತ್ತಿದೆ ಈ ಮನಸ್ಸು. ಅದರಿಂದ ಈ ಶುದ್ಧ ಸಾಧಕ ಜೀವಿಗೆ “ನೆತ್ತಿಯಲಿ ಅಲಗತಿರುಹುವಂತಪ್ಪ’ ವೇದನೆ. ಈ ದೇಹ, ಮನಸ್ಸು ದೇವರಿಗೆ ಮೀಸಲಾಗಿರುವಾಗ ‘ಸಂಸಾರವೆಂಬ ಶ್ವಾನನಟ್ಟಿ ಮೀಸಲು ಕೆಡಿಸಬೇಡ’ ಎಂದು ಅವರ ಪ್ರಾರ್ಥನೆ. ‘ಹೊಸತಿಲ ಪೂಜಿಸಿ, ಹೊರವಟ್ಟು ಹೋದ ಒಕ್ಕಲತಿಯಂತೆ’ ಒಡೆಯರ ಬಗ್ಗೆ ಉದಾಸೀನ ಮಾಡಿದರೆ ಆ ಭಕ್ತಿಗೆ ಏನು ಬೆಲೆ? ‘ಹಾಗದ ತೆರಹ ಹೊರಗೆ ಕಳೆದು ದೇಗುಲಕ್ಕೆ ಹೋಗಿ ನಮಸ್ಕಾರ ಮಾಡುವರಂತೆ’ ತೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ.

ಶಿವನ ಸೊಮ್ಮು ಶಿವನಿಗೆ ಅರ್ಪಿತವಾಗಬೇಕು. ಇಲ್ಲವಾದರೆ ‘ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ ಅಧರ್ಮದಲ್ಲಿ ಕೆಡಿಸುವ ಸಂತನಂತೆ ಅದು ಹಾಳಾಗಿ ಹೋಗುತ್ತದೆ. ತತ್ಕಾಲ ಪ್ರೇಮವನರಿಯದೆ ವಿಭವಕ್ಕೆ ಮೂಡಿದವನ ಭಕ್ತಿ ‘ಇರುಳ ಸತ್ತಿಗೆಯ ಹಿಡಿಸಿಕೊಂಡಂತೆ’ ವ್ಯರ್ಥ. ಭಕ್ತಿಯನ್ನು ತನುವುಕ್ಕಿ, ಮನವುಕ್ಕಿ ಮಾಡಬೇಕು. ‘ಓಡಲಾರದ ಮೃಗವು ಸೊಣಗಂಗೆ ಮಾಂಸವ ಕೊಡುವಂತೆ’ ಅನಿವಾರ್ಯವಾಗಿ ಮಾಡುವದಾಗಬಾರದು. ‘ಹಾವ ತೋರಿ ಹವಿಯ ಬೇಡುವಂತೆ’ ಡಂಭಾಚಾರದ್ದೂ ಆಗಬಾರದು.

ಶಿವಪಥವನರಿವೊಡೆ ಶರಣರ ಸಂಗವೆ ಮೊದಲು, ಅವರ ಬರವನ್ನು ‘ಹೊಲಬುಗೆಟ್ಟ ಶಿಶು, ತನ್ನ ತಾಯ ಬಯಸುವಂತೆ, ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ’ ಕಾತರದಿಂದ ಕಾಯುತ್ತದೆ. ಬಸವಣ್ಣನವರ ಹೃದಯ. ‘ಹಾವ ಕಿಚ್ಚ ಮುಟ್ಟಿಹ ಶಿಶುವೆಂದು ಹೆತ್ತತಾಯಿ ಮಗನ ಬೆಂಬತ್ತಿ ಬಪ್ಪಂತೆ ಕೂಡಲ ಸಂಗಮದೇವನೂ ಈ ನಿಜಭಕ್ತನನ್ನು ವಾತ್ಸಲ್ಯದಿಂದ ರಕ್ಷಿಸುತ್ತಾನೆ. ‘ಸೂರ್ಯನುದಯ ತಾವರೆಗೆ ಜೀವಾಳ,’ ‘ಚಂದ್ರನುದಯ ನೈದಿಲೆಗೆ ಜೀವಾಳ’, ಹಾಗೆಯೇ ಶರಣರ ಬರವು ಇವರಿಗೆ ಜೀವಾಳ. ‘ಸಾಸಿವೆಯ ಮೇಲೆ ಸಾಗರವರಿದಂತೆ’ ಆನಂದದಲ್ಲಿ ತಾವೇ ತೇಲಿಹೋಗುತ್ತಾರೆ. ಶರಣರು ‘ಹೆಪ್ಪನೆರೆದ ಹಾಲು ಕೆಟ್ಟು ತುಪ್ಪವಪ್ಪಂತೆ‘ ಇಪ್ಪರು. ತೋರಿಕೆಗೆ ಅಸ್ತವ್ಯಸ್ತವಾಗಿ ಕಂಡರೂ ಹೃದಯ ತುಪ್ಪದಂತೆ ತಿಳಿ. ಅವರ ವಚನ ‘ಬೇವ ಸವಿದಂತೆ ಅಧರಕ್ಕೆ ಕಹಿ, ಉದರಕ್ಕೆ ಸಿಹಿ.’

ಗುರು – ಶಿಷ್ಯ ಸಂಬಂಧವಾದುದಕ್ಕೆ ‘ಕಿಚ್ಚಿನಲ್ಲಿ ಕೋಲ ಬಚ್ಚಿಟ್ಟಂತಿರುವದೇ ಚಿಹ್ನೆ’. ‘ಆಲಿಕಲ್ಲ ಹೆರಳಿನಂತೆ, ಅರಗಿನ ಪುತ್ತಳಿಯಂತೆ’ ಕೂಡಲ ಸಂಗಮದೇವರ ಮುಟ್ಟಿ ತನು ಕರಗಿ ನೆರೆವ ಸುಖವ ಏನೆಂದು ಬಣ್ಣಿಸುವುದು? ‘ಅನುಭಾವ ಎಂಬದು ರಚ್ಚೆಯ ಮಾತೆ? ಸಂತೆಯ ಸುದ್ದಿಯೆ? ಬೀದಿಯ ಪ್ರಸಾರವೆ? ಎಂದು ಕೇಳುತ್ತಾರೆ ಬಸವಣ್ಣನವರು. ‘ಅನುಭಾವವೆಂಬುದು ನೆಲದ ಮರೆಯ ನಿಧಾನ, ಅಂತರಂಗದ ರತ್ನ, ಶಿಶು ಕಂಡ ಕನಸು ಕಾಣಿರೋ’ ಎಂಬುದು ಅವರ ಸೂಕ್ತಿ ಸುಧೆ.

ಹೀಗೆ ಬಸವಣ್ಣನವರ ವಚನಗಳಲ್ಲಿ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ. ಕನ್ನಡದ ಬೇರಾವ ಕವಿಯಲ್ಲಿಯೂ ಉಪಮೆ ಇಷ್ಟೊಂದು ಜೀವನ ವೈವಿಧ್ಯದ ವ್ಯಾಪ್ತಿಯನ್ನ ಪಡೆದಿರುವುದು ವಿರಳ.

ಚನ್ನವೀರ ಕಣವಿ

(ಕನ್ನಡದ ಖ್ಯಾತ ಕವಿ. ಆಕಾಶ ಬುಟ್ಟಿ, ಜೀವಧ್ವನಿ, ಹೊಂಬೆಳಕು, ನೆಲಮುಗಿಲು, ದಾರಿದೀಪ ಸೇರಿದಂತೆ ಕಣವಿಯವರ 15ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟಗೊಂಡಿವೆ. ಜೀವಧ್ವನಿ ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ಸಂದಿದೆ. ಪ್ರಸಕ್ತ ಬರಹವನ್ನು ಮೈಸೂರು ಸರಕಾರ ಶ್ರೀಬಸವೇಶ್ವರ 8ನೇ ಶತಮಾನೋತ್ಸವ ಸಮಿತಿ ಪ್ರಕಟಿಸಿದ ‘ಶ್ರೀ ಬಸವೇಶ್ವರರು’ ಪುಸ್ತಕದಲ್ಲಿ ಕಣವಿ ಅವರು ಬಸವಣ್ಣನವರ ವಚನಗಳ ಸಾಹಿತ್ಯ ಮೌಲ್ಯದ ಬಗ್ಗೆ ಬರೆದಿರುವ ದೀರ್ಘ ಪ್ರಬಂಧದಿಂದ ಆಯ್ದುಕೊಳ್ಳಲಾಗಿದೆ.)


ಇದನ್ನೂ ಓದಿ: ಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು…..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -