Homeಮುಖಪುಟಜರ್ಮನಿಯಲ್ಲಿ ಇತ್ತೀಚೆಗೆ ತೀವ್ರ ಬಲಪಂಥೀಯ ಪಕ್ಷದ ಉತ್ಥಾನ ಮತ್ತು ಪತನದ ಆರಂಭ!

ಜರ್ಮನಿಯಲ್ಲಿ ಇತ್ತೀಚೆಗೆ ತೀವ್ರ ಬಲಪಂಥೀಯ ಪಕ್ಷದ ಉತ್ಥಾನ ಮತ್ತು ಪತನದ ಆರಂಭ!

ನಿರಾಶ್ರಿತರ ಸಮಸ್ಯೆಯನ್ನು ಮುನ್ನೆಲೆಗೆ ತಂದು 2017ರಲ್ಲಿ ಮತಗಳಿಕೆ ಹೆಚ್ಚಿಸಿಕೊಂಡಿದ್ದ ಎಎಫ್‍ಡಿ ಪಕ್ಷವು 2020ರ ವೇಳೆಗೆ ಕುಸಿಯುತ್ತಿದೆ. ಕಾರಣವೇನು?

- Advertisement -
- Advertisement -

ಎರಡನೇ ವಿಶ್ವ ಯುದ್ಧದ ಬಳಿಕ ಜರ್ಮನಿಯಲ್ಲಿ ಯಾವುದೇ ಮುಖ್ಯವಾದ ತೀವ್ರ ಬಲಪಂಥೀಯ ಪಕ್ಷ ಇರಲಿಲ್ಲ. ವಿವಿಧ ಸಣ್ಣ ಬಲಪಂಥೀಯ ಪಕ್ಷಗಳು ಕೆಲವು ವರ್ಷಗಳ ಕಾಲ ಕೆಲವೊಂದು ಸಣ್ಣ ಪ್ರಾಂತ್ಯಗಳ ಶಾಸನಸಭೆಗಳಿಗೆ ಪ್ರವೇಶಿಸಲು ಶಕ್ತವಾಗುತ್ತಿದ್ದರೂ, ಒಕ್ಕೂಟದ ಸಂಸತ್ತಿಗೆ ಅವುಗಳ ಪ್ರವೇಶ ಯಾವತ್ತೂ ಸಾಧ್ಯವಾಗಿರಲಿಲ್ಲ. ಈ ಪರಿಸ್ಥಿತಿ 2017ರಲ್ಲಿ ಬದಲಾಯಿತು. ಸಂಸದೀಯ ಚುನಾವಣೆಯಲ್ಲಿ ಎಎಫ್‍ಡಿ (ಆಲ್ಟರ್ನೇಟಿವ್ ಫಾರ್ ಜರ್ಮನಿ) 12.6 ಶೇಕಡಾ ಮತಗಳನ್ನು ಗಳಿಸಿತು.

ಅಲ್ಲಿ ನಡೆದುದೇನು?

ಶಿಕ್ಷಣ ಕ್ಷೇತ್ರದ ಹಲವರು ಸೇರಿದಂತೆ ಮುಖ್ಯವಾಗಿ ನವ ಉದಾರವಾದಿ-ಸಂಪ್ರದಾಯವಾದಿ ಹಿನ್ನೆಲೆಯ ವ್ಯಕ್ತಿಗಳು ಏಪ್ರಿಲ್ 2013ರಲ್ಲಿ ಎಎಫ್‍ಡಿಯನ್ನು ಸ್ಥಾಪಿಸಿದರು. ಅವರು ಸಮಾನ ಯುರೋಪಿಯನ್ ಕರೆನ್ಸಿಯಾದ ‘ಯೂರೋ’ವನ್ನು ಟೀಕಿಸಿದ್ದಲ್ಲದೆ, ಜರ್ಮನ್ ರಾಷ್ಟ್ರೀಯ ಕರೆನ್ಸಿಯನ್ನು ಮರಳಿ ತರಲು ಮತ್ತು ಐರೋಪ್ಯ ಒಕ್ಕೂಟ (ಇಯು)ದ ವಿರುದ್ಧ ಹೆಚ್ಚಿನ “ರಾಷ್ಟ್ರೀಯ” ಸಾರ್ವಭೌಮತೆಯನ್ನು ಸ್ಥಾಪಿಸಲು ಬಯಸಿದ್ದರು. ಈ ಪಕ್ಷದ ಸ್ಥಾಪಕ ಗುಂಪುಗಳು ಬ್ರಿಟನ್ನಿನ “ಬ್ರೆಕ್ಸಿಟ್” ಸಮರ್ಥಕರ ಜೊತೆ ಕೆಲವು ಸಮಾನ ಅಂಶಗಳನ್ನು ಹೊಂದಿದ್ದರು.

ಈ ಪಕ್ಷವು ಸಣ್ಣ ನವಉದಾರವಾದಿ ಪಕ್ಷವಾದ ಫ್ರೀ ಡೆಮಾಕ್ರಾಟ್ ಪಕ್ಷ (ಎಫ್‍ಡಿಪಿ) ಮತ್ತು ಜರ್ಮನಿಯ ಅತ್ಯಂತ ದೊಡ್ಡ ಸಂಪ್ರದಾಯವಾದಿ ಪಕ್ಷವಾದ ಕ್ರಿಶ್ಚಿಯನ್ ಡೆಮಾಕ್ರಾಟಿಕ್ ಪಾರ್ಟಿ (ಸಿಡಿಯು- ಈ ಪಕ್ಷವು 2005ರ ನಂತರ ಬಹಳಷ್ಟು ಕಡಿಮೆ ಸಂಪ್ರದಾಯವಾದಿಯಾಯಿತು ಮತ್ತು ಇದರ ಅಧ್ಯಕ್ಷೆ ಏಂಜೆಲಾ ಮಾರ್ಕೆಲ್ ಜರ್ಮನಿಯ ಛಾನ್ಸಲರ್ ಕೂಡಾ ಆದರು) ಮತದಾರರ ನಡುವೆ ಸ್ವಲ್ಪಮಟ್ಟಿನ ಬೆಂಬಲ ಗಳಿಸಿತು. ಆದರೆ, ಈ ಬೆಂಬಲವಷ್ಟೇ ಸಾಕಾಗಲಿಲ್ಲ. ಸೆಪ್ಟೆಂಬರ್ 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎಎಫ್‍ಡಿ ಕೇವಲ 4.7 ಶೇಕಡಾ ಮತಗಳನ್ನಷ್ಟೇ ಗಳಿಸಿತು. ಒಕ್ಕೂಟದ (ರಾಷ್ಟ್ರೀಯ) ಸಂಸತ್ತನ್ನು ಪ್ರವೇಶಿಸಲು ಕನಿಷ್ಟ ಐದು ಶೇಕಡಾ ಮತಗಳ ಅಗತ್ಯವಿತ್ತು.

2015ರಲ್ಲಿ ಜರ್ಮನಿಯು ತಥಾಕಥಿತ “ನಿರಾಶ್ರಿತರ ಬಿಕ್ಕಟ್ಟು” ಎದುರಿಸಿತು. ಅಫ್ಘಾನಿಸ್ಥಾನ, ಸಿರಿಯಾ ಮತ್ತು ಕೆಲವು ಆಫ್ರಿಕನ್ ದೇಶಗಳಿಂದ ಹಲವಾರು ನಿರಾಶ್ರಿತರು ಐರೋಪ್ಯ ಒಕ್ಕೂಟ ತಲುಪಿದರು ಮತ್ತು ಅವರಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜರ್ಮನಿ ಪ್ರವೇಶಿಸಲು ಪ್ರಯತ್ನಿಸಿದರು. ಕೆಲವು ತಿಂಗಳುಗಳ ಕಾಲ ಛಾನ್ಸಲರ್ ಏಂಜೆಲಾ ಮಾರ್ಕೆಲ್ ಗಡಿಗಳನ್ನು ತೆರೆದರು. ಈ ನಿರ್ಧಾರವು ಮುಖ್ಯವಾಗಿ ಮಾನವೀಯ ನೆಲೆಯಲ್ಲಿ ಮಾತ್ರ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಅದಕ್ಕಿಂತ ಮುಖ್ಯವಾದ ನಿಜಾಂಶ ಅಂದರೆ, ಆ ಹೊತ್ತಿಗೆ ಗಡಿಯಲ್ಲಿ ನಿರಾಶ್ರಿತರ ಸಂಖ್ಯೆ ಎಷ್ಟು ಹೆಚ್ಚಿತ್ತು ಎಂದರೆ, ಅವರು ಗಡಿಯನ್ನು ದಾಟದಂತೆ ತಡೆಯುವುದು ಸೇನಾ ಬಲಪ್ರಯೋಗದಿಂದ ಮಾತ್ರವೇ ಸಾಧ್ಯವಿತ್ತು ಮತ್ತು ಅಂತಹ ಸೇನಾ ಬಲಪ್ರಯೋಗವು ದೊಡ್ಡ ಪ್ರಮಾಣದ ಆಂತರಿಕ (ಬಹುಶಃ ಅಂತಾರಾಷ್ಟ್ರೀಯ ಕೂಡಾ) ಬಿಕ್ಕಟ್ಟು ಉಂಟುಮಾಡುತ್ತಿತ್ತು.

2015ರಲ್ಲಿ ಹೆಚ್ಚುಕಡಿಮೆ ಹತ್ತು ಲಕ್ಷ ನಿರಾಶ್ರಿತರು ಜರ್ಮನಿ ಪ್ರವೇಶಿಸಿದ್ದರು. ಇದು ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಅತ್ಯಂತ ಹೆಚ್ಚಾಗಿತ್ತು. ಆದರೆ, ಜರ್ಮನಿಯ 8.2 ಕೋಟಿ ಜನಸಂಖ್ಯೆ ಮತ್ತು ಅಪಾರ ಸಂಪತ್ತನ್ನು ಪರಿಗಣಿಸಿದರೆ, ಇದೊಂದು ನಿಜವಾದ ಸಮಸ್ಯೆ ಆಗಿರಲಿಲ್ಲ. ಆದರೆ, ಜರ್ಮನ್ ರಾಷ್ಟ್ರೀಯವಾದಿಗಳು ಮತ್ತು ಫ್ಯಾಸಿಸ್ಟ್‌ಗಳು ತಥಾಕಥಿತ “ನಿರಾಶ್ರಿತರ ಆಕ್ರಮಣ”ದಿಂದ “ಜರ್ಮನ್ ರಾಷ್ಟ್ರ”ಕ್ಕೆ ಅಪಾಯವನ್ನು ಕಂಡರು. ಜರ್ಮನ್ ಸಮಾಜದ ಹಲವು ದೊಡ್ಡ ವಲಯಗಳು ನಿರಾಶ್ರಿತರನ್ನು ಸ್ವೀಕರಿಸಿದರೂ, ಬಲಪಂಥೀಯ ಗುಂಪುಗಳು ನಿರಾಶ್ರಿತರ ವಸತಿಗಳ ಮೇಲೆ ದಾಳಿ ಮಾಡಿದವು. ಸಣ್ಣ ಪ್ರಮಾಣದ ಜರ್ಮನ್ ಜನರು- ಮುಖ್ಯವಾಗಿ ಸಣ್ಣ ಪಟ್ಟಣಗಳಲ್ಲಿನ ನಿವಾಸಿಗಳು- ತಮ್ಮ ನೆರೆಹೊರೆಯಲ್ಲಿನ ನಿರಾಶ್ರಿತರ ವಸತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಇಂತಹ ಪರಿಸ್ಥಿತಿಯಲ್ಲಿ ಎಎಫ್‍ಡಿಗೆ ಬೆಳೆಯಲು ಸಾಧ್ಯವಾಯಿತು. 2015ರಿಂದ 2017ರ ನಡುವೆ ಅದು ಬಹುತೇಕ ಎಲ್ಲಾ ಜರ್ಮನ್ ಪ್ರಾಂತ್ಯಗಳ ಶಾಸನಸಭೆಗಳನ್ನು ಪ್ರವೇಶಿಸಲು ಶಕ್ತವಾಯಿತು. ಮೊದಲೇ ಹೇಳಿದಂತೆ, ಸೆಪ್ಟೆಂಬರ್ 2017ರ ರಾಷ್ಟ್ರೀಯ ಚುನಾವಣೆಗಳಲ್ಲಿ ಅದರ ಮತಗಳಿಕೆ ಪ್ರಮಾಣ 12.6 ಶೇಕಡಾ ತಲುಪಿತು. 2018ರಲ್ಲಿ ಹಿಂದಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ ಸಂಖ್ಯೆಯ ನಿರಾಶ್ರಿತರು ಜರ್ಮನಿಯನ್ನು ಪ್ರವೇಶಿಸಿದರೂ, ನಿರಾಶ್ರಿತರು ಮತ್ತು ವಲಸಿಗರ ಪ್ರಶ್ನೆಯು ಪ್ರಮುಖ ರಾಜಕೀಯ ವಿಷಯವಾಗಿ ಉಳಿದಿತ್ತು. ಅದಲ್ಲದೇ, ನಿರಾಶ್ರಿತರು ಮತ್ತು ಅವರನ್ನು ಬೆಂಬಲಿಸಿದ ಕಾರ್ಯಕರ್ತರ ವಿರುದ್ಧ ಹಿಂಸಾಚಾರ ಮುಂದುವರಿದಿತ್ತು.

2018ರ ಜನ ಅಭಿಪ್ರಾಯದ ಮತಗಣನೆಗಳಲ್ಲಿ ಎಎಫ್‍ಡಿ ಆಗಲೇ 15-16 ಶೇಕಡಾ ಬೆಂಬಲ ಪ್ರಮಾಣ ತಲುಪಿತ್ತು. ಅದೇ ಹೊತ್ತಿಗೆ, ಪಕ್ಷವು ಮೂಲ ಸಂಪ್ರದಾಯವಾದಿ ಮತ್ತು ನವಉದಾರವಾದಿ ಗುಂಪುಗಳನ್ನು ರಾಷ್ಟ್ರೀಯವಾದಿ ಮತ್ತು ಫ್ಯಾಸಿಸ್ಟ್ ಗುಂಪುಗಳ ಜೊತೆಗೆ ವಿಲೀನಗೊಳಿಸಿತು. ಹಿಂದೆ ಸಣ್ಣ ಬಲಪಂಥೀಯ ಗುಂಪುಗಳಿಗೆ ಯಾವತ್ತೂ ಇಂತಹ ಕೂಟವನ್ನು ರಚಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಎಎಫ್‍ಡಿ ಪಕ್ಷವು ದೊಡ್ಡ ಬಂಡವಾಳಶಾಹಿ ಉದ್ದಿಮೆಗಳಿಂದ ಹೆಚ್ಚಿನ ಬೆಂಬಲ ಪಡೆಯಲು ಶಕ್ತವಾಗಲಿಲ್ಲ. ಎಎಫ್‍ಡಿಯ ಬೆಂಬಲಿಗರಲ್ಲಿ ಕೆಲವು ಬಿಡಿಬಿಡಿಯಾದ ಬಲಪಂಥೀಯ ಉದ್ಯಮಿಗಳು ಇದ್ದಾರೆ. ಆದರೆ, ಜರ್ಮನ್ ಬಂಡವಾಳದ ಬಹುದೊಡ್ಡ ಭಾಗವು ಜಾಗತಿಕ ಮಾರುಕಟ್ಟೆಯ ಜೊತೆಗೆ ಬೆಸೆದುಕೊಂಡಿದೆ. ಜರ್ಮನಿಯ ಆರ್ಥಿಕತೆಯಲ್ಲಿ ರಫ್ತು ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಲಿ ರಾಷ್ಟ್ರೀಯವಾದದ ಮೂರ್ಖ ಘೋಷಣೆಗಳು ನೆರವಿಗೆ ಬರುವುದಿಲ್ಲ.

ಹೀಗಿದ್ದರೂ, ಚುನಾವಣೆಯಲ್ಲಿ ಎಎಫ್‍ಡಿಯ ಯಶಸ್ಸು ಜರ್ಮನಿಯ ರಾಜಕೀಯ ಸಂಕಥನದ ಮೇಲೆ ಬಲವಾದ ಪ್ರಭಾವ ಬೀರಿದೆ. ಜರ್ಮನಿಯಲ್ಲಿರುವ ನಿರಾಶ್ರಿತರ ಸಂಖ್ಯೆಯು ನಿಜವಾಗಿಯೂ ಒಂದು ಸಮಸ್ಯೆಯಾಗಿದ್ದು, ಸರಕಾರವು ಜನರ “ದುಃಖಗಳನ್ನು” ಗಂಭೀರವಾಗಿ ಪರಿಗಣಿಸಬೇಕು ಎಂದು ಕ್ರಿಶ್ಚಿಯನ್ ಡೆಮಾಕ್ರಾಟಿಕ್ ಪಕ್ಷದ ಕೆಲವು ಬಣಗಳು ಒತ್ತಿಹೇಳಿವೆ. ಈ ಪಕ್ಷದ ಕೆಲವು ಬಣಗಳು ಎಎಫ್‍ಡಿಯ ಜೊತೆ ಮೈತ್ರಿಯ ಸಾಧ್ಯತೆಗಳನ್ನು ಕೂಡಾ ಚರ್ಚಿಸಿವೆ. ಎಎಫ್‍ಡಿ ವಿರುದ್ಧ ಪ್ರತಿಭಟನೆಗಳು ಮುಂದುವರಿದಿದ್ದರೂ, ಆ ಪಕ್ಷವು ಸ್ಥಿರವಾಗಿ ಬೆಳೆದಿದೆ ಮತ್ತು ಹೆಚ್ಚುಹೆಚ್ಚು ಪ್ರಭಾವಶಾಲಿಯಾಗಿದೆ. (ಹಾಗೆ ನೋಡಿದರೆ, ಎಎಫ್‍ಡಿ ವಿರುದ್ಧ ದೊಡ್ಡ ಪ್ರತಿಭಟನೆಗಳಿಲ್ಲದೇ ಯಾವುದೇ ಸಮಾವೇಶ ನಡೆದಿಲ್ಲ).

2019ರಲ್ಲಿ ಪರಿಸ್ಥಿತಿ ಬದಲಾಗಲು ಆರಂಭವಾಯಿತು. ಐರೋಪ್ಯ ಒಕ್ಕೂಟದ ಸಂಸತ್ತಿಗೆ ನಡೆದ ಚುನಾವಣೆಗಳಲ್ಲಿ ಎಎಫ್‍ಡಿಯು 11 ಶೇಕಡಾ ಮತಗಳನ್ನು ಗಳಿಸಿತು. 2017ರ ರಾಷ್ಟ್ರೀಯ ಚುನಾವಣೆಗಳಿಗೆ ಹೋಲಿಸಿದಾಗ ಇದು ಸ್ವಲ್ಪ ಕಡಿಮೆ ಮತ್ತು 2018ರ ಜನ ಅಭಿಪ್ರಾಯ ಮತಗಣನೆಗಳಿಗೆ ಹೋಲಿಸಿದಾಗ ಗಮನಾರ್ಹವಾಗಿ ಕಡಿಮೆ. ಫೆಬ್ರವರಿ 2020ರ ಆರಂಭದಲ್ಲಿ ನಡೆದ ಪ್ರಾಂತೀಯ ಶಾಸನಸಭೆಗಳ ಚುನಾವಣೆಗಳಲ್ಲಿ ಎಎಫ್‍ಡಿಯು ಪೂರ್ವ ಜರ್ಮನಿಯ ಪ್ರಾಂತ್ಯವಾದ ತುರಿಂಗಿಯಾದಲ್ಲಿ ಯಶಸ್ಸು ಗಳಿಸಿದಂತೆ ಕಾಣುತ್ತದೆ. ಅದು ಅಲ್ಲಿನ ಶಾಸನಸಭೆಯಲ್ಲಿ ಎಫ್‍ಡಿಪಿ ಮತ್ತು ಸಿಡಿಯು ಜೊತೆಯಲ್ಲಿ ತುರಿಂಗಿಯಾದ ಪ್ರಧಾನಿ ಹುದ್ದೆಗೆ ಎಫ್‍ಡಿಪಿ ಸದಸ್ಯರೊಬ್ಬರ ಪರವಾಗಿ ಮತ ಚಲಾಯಿಸಿತು.

ಆದರೆ, ಇಡೀ ಜರ್ಮನ್ ಜನತೆಯ ಪ್ರತಿಭಟನೆ ಮತ್ತು ಸಿಡಿಯು ಹಾಗೂ ಎಫ್‍ಡಿಪಿಯ ರಾಷ್ಟ್ರೀಯ ನಾಯಕರ ಪ್ರತಿರೋಧ ಎಷ್ಟು ದೊಡ್ಡದಾಗಿತ್ತೆಂದರೆ, ಈ ಪ್ರಧಾನಿ ಕೆಲವೇ ವಾರಗಳಲ್ಲಿ ರಾಜೀನಾಮೆ ನೀಡಬೇಕಾಯಿತು. ನಂತರ ಜರ್ಮನಿಯ ಪಶ್ಚಿಮದ ರಾಜ್ಯವೊಂದರ ಸ್ಥಳೀಯ ಚುನಾವಣೆಯಲ್ಲಿ ಎಫ್‍ಡಿಪಿ ಹಲವಾರು ಮತದಾರರನ್ನು ಕಳೆದುಕೊಂಡಿತು. ಬೇರೊಂದು ರಾಜ್ಯದಲ್ಲಿ ಎಎಫ್‍ಡಿ ಜೊತೆ ಕೈಜೋಡಿಸಿದ್ದಕ್ಕಾಗಿ ಜನರು ಎಫ್‍ಡಿಪಿಯನ್ನು ಶಿಕ್ಷಿಸಿದ್ದರು.

2019 ಮತ್ತು 2020ರ ಆರಂಭದಲ್ಲಿ ತೀವ್ರ ಬಲಪಂಥೀಯ ದಾಳಿಗಳು ಜರ್ಮನಿಯನ್ನು ತತ್ತರಿಸುವಂತೆ ಮಾಡಿದ್ದವು. ಜೂನ್ 2019ರಲ್ಲಿ ಅವರು ಕ್ರಿಶ್ಚಿಯನ್ ಡೆಮಾಕ್ರಾಟಿಕ್ ಪಕ್ಷದ ಸ್ಥಳೀಯ ನಾಯಕ ವಾಲ್ಟರ್ ಲ್ಯುಬ್ಖೆ ಅವರ ಹತ್ಯೆ ಮಾಡಿದರು. 2015ರಲ್ಲಿ ಲ್ಯುಬ್ಖೆ ಅವರು ಬಲಪಂಥೀಯ ಪ್ರತಿಭಟನಾಕಾರರಿಂದ ನಿರಾಶ್ರಿತರನ್ನು ರಕ್ಷಿಸಿದ್ದರು. ಎರಡನೇ ವಿಶ್ವ ಯುದ್ಧದ ಬಳಿಕ ಬಲಪಂಥೀಯ ಭಯೋತ್ಪಾದಕನೊಬ್ಬ ರಾಜಕಾರಣಿಯೊಬ್ಬರನ್ನು ಕೊಲೆ ಮಾಡಿದ್ದು ಅದೇ ಮೊದಲ ಬಾರಿಯಾಗಿತ್ತು. ಅಕ್ಟೋಬರ್ 2019ರಲ್ಲಿ ಬಲಪಂಥೀಯ ಭಯೋತ್ಪಾದಕನೊಬ್ಬ ಯಹೂದಿ ಪ್ರಾರ್ಥನಾ ಮಂದಿರ (synagogue) ಒಂದರಲ್ಲಿ ಜನರನ್ನು ಕೊಲ್ಲಲು ಯತ್ನಿಸಿದ್ದ. ಆದರೆ ಅದರಲ್ಲಿ ವಿಫಲನಾಗಿ ಒಬ್ಬ ಪಾದಚಾರಿಯನ್ನು ಕೊಂದಿದ್ದ. ನಂತರ ಟರ್ಕಿಶ್ ರೆಸ್ಟೋರೆಂಟ್ ಒಂದರ ಮೇಲೆ ದಾಳಿ ಮಾಡಿದ್ದ. ಅಲ್ಲಿ ಮತ್ತೊಬ್ಬನನ್ನು ಕೊಂದಿದ್ದ. ಫೆಬ್ರವರಿ 2020ರಲ್ಲಿ ಬಲಪಂಥೀಯ ಭಯೋತ್ಪಾದಕನೊಬ್ಬ ಎರಡು ಶೀಷಾ ಬಾರ್ (ಹುಕ್ಕಾ ಬಾರ್)ಗಳ ಮೇಲೆ ದಾಳಿ ಮಾಡಿ ಒಂಬತ್ತು ಮಂದಿಯನ್ನು ಕೊಂದಿದ್ದ.

ಈ ಎಲ್ಲಾ ಮೂರು ಪ್ರಕರಣಗಳಲ್ಲಿ ಹಂತಕರು ಯಾವುದೇ ಸುಸಂಘಟಿತ ಗುಂಪುಗಳಿಗೆ ಸೇರಿರಲಿಲ್ಲ. ಬದಲಾಗಿ ಇತರ ತೀವ್ರಗಾಮಿ ಬಲಪಂಥೀಯ ವ್ಯಕ್ತಿಗಳ ಜೊತೆಗೆ ಸಡಿಲವಾದ ಸಂಪರ್ಕ ಹೊಂದಿದ್ದು, ಬಲಪಂಥೀಯ ಪ್ರತಿಭಟನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದವರಾಗಿದ್ದರು. ಎಎಫ್‍ಡಿಯಿಂದ ಹಿಂಸಾತ್ಮಕ ಫ್ಯಾಸಿಸ್ಟ್ ಗುಂಪುಗಳವರೆಗೆ ತಲುಪಿದ ತೀವ್ರ ಬಲಪಂಥೀಯರ ಸಡಿಲ ಸಂಪರ್ಕಕೂಟದ ವಾತಾವರಣದ ಹಿನ್ನೆಲೆಯ ಸನ್ನಿವೇಶದಲ್ಲಿ ಇವರು ಹೊರಹೊಮ್ಮಿದ್ದರು.

ಇದರ ಪರಿಣಾಮವಾಗಿ, ಪೊಲೀಸರು ಮತ್ತು ಆಂತರಿಕ ಗುಪ್ತಚರ ಸಂಸ್ಥೆಗಳು ತೀವ್ರ ಬಲಪಂಥೀಯರ ವಿರುದ್ಧ ಸಕ್ರಿಯರಾದರು. ಹಿಂದಿನ ದಿನಗಳಲ್ಲಿ ಈ ಸಂಸ್ಥೆಗಳು ತೀವ್ರ ಬಲಪಂಥೀಯರ ಭಯೋತ್ಪಾದಕ ಬೆದರಿಕೆಗಳನ್ನು ಕನಿಷ್ಟ ಮಟ್ಟಕ್ಕೆ ತಂದಿದ್ದವು. ಸಾಂಪ್ರದಾಯಿಕವಾಗಿ ಅವರು ಎಡ ಪಂಥೀಯರಲ್ಲಿ ಮಾತ್ರ ಶತ್ರುವನ್ನು ಕಾಣುತ್ತಿದ್ದರು. ಆದರೆ, ಅದೀಗ ಬದಲಾಗಿದೆ. ಈ ದಿನಗಳಲ್ಲಿ ಮುಖ್ಯ ಅಪಾಯ ಅತ್ಯಂತ ತೀವ್ರವಾದಿ ಬಲಪಂಥೀಯರಿಂದ ಬರುತ್ತಿದೆ ಎಂಬುದನ್ನು ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಒಪ್ಪಿಕೊಳ್ಳಬೇಕಾಗಿ ಬಂದಿದೆ. ಆಂತರಿಕ ಗುಪ್ತಚರ ಸಂಸ್ಥೆಗಳು ಎಎಫ್‍ಡಿಯ ಅತ್ಯಂತ ತೀವ್ರವಾದಿ ಬಣಗಳ ಮೇಲೆ ಕಣ್ಗಾವಲಿಟ್ಟು ಗಮನಿಸಲು ಆರಂಭಿಸಿದ್ದಾರೆ.

ಆದರೆ, ಪೊಲೀಸ್ ಮತ್ತು ಸೇನೆಯಲ್ಲಿಯೂ ಅತ್ಯಂತ ತೀವ್ರವಾದಿ ಮನೋವೃತ್ತಿಯಿದೆ. ಇತ್ತೀಚೆಗೆ ಜರ್ಮನಿಯ ಅತ್ಯಂತ ಪ್ರತಿಷ್ಠಿತ ಸೇನಾಘಟಕಗಳಾದ ವಿಶೇಷ ಪಡೆಗಳ ನಾಲ್ಕು ಘಟಕಗಳಲ್ಲಿ ಒಂದನ್ನು ರಕ್ಷಣಾ ಮಂತ್ರಿಯವರು ಬರಖಾಸ್ತುಗೊಳಿಸಿದರು. ಅಗತ್ಯ ಬಿದ್ದರೆ ಇನ್ನಷ್ಟು ಘಟಕಗಳನ್ನು ವಿಸರ್ಜಿಸುವುದಾಗಿ ಆಕೆ ಎಚ್ಚರಿಕೆ ನೀಡಿದ್ದಾರೆ. ಬಲಪಂಥೀಯ ಜಾಲಗಳು ಪೊಲೀಸ್ ಪಡೆಯಲ್ಲೂ ಅಸ್ತಿತ್ವದಲ್ಲಿವೆ. ಆದರೆ, ಇಂತಹ ಜಾಲಗಳ ವಿರುದ್ಧ ಹೋರಾಟವು ಹೆಚ್ಚು ಸಂಕೀರ್ಣವಾಗಿದೆ. ಏಕೆಂದರೆ, ಜರ್ಮನ್ ಪೊಲೀಸ್ ಪಡೆಯನ್ನು ಬಹುತೇಕ ಸ್ಥಳೀಯವಾಗಿ ಸಂಘಟಿಸಲಾಗುತ್ತದೆ. ಈತನಕ ಇದು ಅತ್ಯಂತ ಕಡಿಮೆ ಯಶಸ್ಸು ಸಿಕ್ಕ ಕ್ಷೇತ್ರವಾಗಿದೆ.

ಕೆಲವೇ ದಿನಗಳ ಹಿಂದೆ ಅತಿದೊಡ್ಡ ಜರ್ಮನ್ ಪ್ರಾಂತ್ಯದಲ್ಲಿ (ನಾಡ್ರ್ರಹೀನ್-ವೆಸ್ಟ್‍ಫ್ಯಾಲೆನ್) ಪೊಲೀಸರಲ್ಲಿದ್ದ ಅತಿದೊಡ್ಡ ಬಲಪಂಥೀಯ ಸಂಘಟನೆಯೊಂದನ್ನು ಪತ್ತೆಹಚ್ಚಲಾಗಿದ್ದು ಅದರಲ್ಲಿ 30 ಪೊಲೀಸರು ಭಾಗಿಯಾಗಿದ್ದರ ಬಗ್ಗೆ ತಿಳಿದುಬಂದಿದೆ. ಪೊಲೀಸರಲ್ಲಿ ಇರಬಹುದಾದ ಇಂತಹ ಸಂಘಟನೆ ಇದೊಂದೇ ಆಗಿಲ್ಲ ಎಂಬುದು ನಿಜವಾದರೂ ಇದು ಸಾರ್ವಜನಿಕವಾಗಿ ಅತಿಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾಗಿದೆ.

ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಕೋವಿಡ್- 19 ಅತ್ಯಂತ ಹೆಚ್ಚು ಸಾರ್ವಜನಿಕ ಚರ್ಚೆಗೆ ಒಳಗಾದ ವಿಷಯವಾಗಿದೆ. ಆದರೆ, ಈ ಸಮಸ್ಯೆಯ ನಿವಾರಣೆಯಲ್ಲಿ ತನ್ನ ಕೊಡುಗೆ ನೀಡಲು ಎಎಫ್‍ಡಿ ಬಳಿ ಏನೂ ಇಲ್ಲ ಎಂಬುದು ಸ್ಪಷ್ಟವಾಗಿದೆ. ಜನ ಅಭಿಪ್ರಾಯ ಮತಗಣನೆಗಳಲ್ಲಿ ಎಎಫ್‍ಡಿಯ ಬೆಂಬಲ ಈಗ 10 ಶೇಕಡಾ ಸುತ್ತಮುತ್ತ ಇದೆ. ಹೀಗಿದ್ದರೂ, ಅದು ಇನ್ನೂ ದೊಡ್ಡದೇ. ಅಲ್ಲದೆ, ಸೆಪ್ಟೆಂಬರ್ 2021ರಲ್ಲಿ ನಡೆಯುವ ರಾಷ್ಟ್ರೀಯ ಚುನಾವಣೆಗಳಿಗೆ ಎಎಫ್‍ಡಿಗೆ ಹೊಸ ಕಾರ್ಯಕ್ರಮದ ಅಗತ್ಯವಿದೆ. ಅದರ ಭಾಗವಾಗಿ ಸಂಪ್ರದಾಯವಾದಿ ಹಾಗೂ ನವ ಉದಾರವಾದಿ ಬಣಗಳು ಮತ್ತು ರಾಷ್ಟ್ರೀಯವಾದಿ ಫ್ಯಾಸಿಸ್ಟ್ ಬಣಗಳ ನಡುವಿನ ಸಂಘರ್ಷಗಳು ಹೆಚ್ಚಲಿವೆ.

ಇವುಗಳಲ್ಲಿ ಸಂಪ್ರದಾಯವಾದಿ ಹಾಗೂ ನವ ಉದಾರವಾದಿ ಬಣಗಳು ಕಲ್ಯಾಣ ಕಾರ್ಯಕ್ರಮಗಳನ್ನು ಕಡಿಮೆ ಮಾಡಲು ಬಯಸಿದ್ದರೆ, ಫ್ಯಾಸಿಸ್ಟ್ ಗುಂಪು ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು; ಆದರೆ ಅವು ಜರ್ಮನರಿಗೆ ಮಾತ್ರ ಸಿಗಬೇಕು ಎಂದು ಬಯಸಿದೆ. ಈ ಸಂಘರ್ಷವು ಎಎಫ್‍ಡಿಯನ್ನು ಇನ್ನಷ್ಟು ದುರ್ಬಲಗೊಳಿಸುವ ಉತ್ತಮ ಸಾಧ್ಯತೆಯಿದೆ. ಜರ್ಮನಿಯಲ್ಲಿ ಎಎಫ್‍ಡಿ ಮತ್ತು ಅತ್ಯಂತ ತೀವ್ರವಾದಿ ಬಲಪಂಥೀಯ ಧೋರಣೆಗಳ ವಿರುದ್ಧ ಹೋರಾಟವು ಮುಂದುವರಿಯಲಿದೆ. ಅವರು ಅಲ್ಪಾವಧಿಯಲ್ಲಿ ಮಾಯವಾಗುವುದಿಲ್ಲ. ಆದರೆ, ಅವರ ಬೆಳವಣಿಗೆಯ ಮೇಲೆ ಗಮನಾರ್ಹವಾದ ನಿಯಂತ್ರಣವನ್ನು ಸಾಧಿಸುವ ಉತ್ತಮ ಅವಕಾಶವಿದೆ.

* ಮೈಕೆಲ್ ಹೈನ್ರಿಕ್

ಮೈಕೆಲ್ ರಾಜಕೀಯ ಚಿಂತಕ. ಮಾರ್ಕ್ಸ್‌ನ ಮೂರು ಸಂಪುಟಗಳ ಕ್ಯಾಪಿಟಲ್ ಬಗ್ಗೆ ಬರೆದಿರುವ ‘ಆನ್ ಇಂಟ್ರೊಡಕ್ಷನ್ ಟು ಥ್ರೀ ವಾಲ್ಯೂಮ್ಸ್ ಆಫ್ ಮಾರ್ಕ್ಸ್‌ ಕ್ಯಾಪಿಟಲ್’ ಮತ್ತು ‘ಕಾರ್ಲ್ ಮಾಕ್ರ್ಸ್ ಅಂಡ್ ಬರ್ಥ್ ಆರ್ಫ ಮಾಡರ್ನ್ ಸೊಸೈಟಿ’ ಅವರು ರಚಿಸಿರುವ ಪುಸ್ತಕಗಳಲ್ಲಿ ಕೆಲವು.

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಬಿಜೆಪಿಯೆಂದರೆ ಬ್ರಾಹ್ಮಣ-ಬನಿಯಾ ಕ್ಲಬ್: ಅವರಿಂದ `ಒಳ’ಮೀಸಲಾತಿ ಸಾಧ್ಯವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...