Homeಅಂಕಣಗಳುಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು.....

ಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು…..

ಪ್ರಭುತ್ವಗಳು ತನ್ನ ವಿರುದ್ಧದ ಸಣ್ಣ ಸಣ್ಣ ಟೀಕೆಗಳನ್ನೂ ಸಹಿಸದೆ ತನ್ನ ನಾಗರಿಕರ ಮೇಲೆಯೇ ಇಂತಹ ಕರಾಳ ಕಾನೂನುಗಳ ಪ್ರಹಾರ ನಡೆಸುತ್ತಾ ಬಂದಿದ್ದರೂ ಇಂತಹ ವಿದ್ಯಮಾನಗಳ ಬಗ್ಗೆ ನಾಗರಿಕರಲ್ಲಿ ಒಟ್ಟಾರೆಯಾಗಿ ಎಚ್ಚರಿಕೆ ಅಥವಾ ವಿವೇಕ ಇನ್ನು ಮೂಡಿಯೇ ಇಲ್ಲ ಎಂದು ಸಂಶಯವಿಲ್ಲದೆ ಹೇಳುವ ದುರಂತ ಸ್ಥಿತಿಯಲ್ಲಿ ನಾವಿದ್ದೇವೆ

- Advertisement -
- Advertisement -

ಬೀದರ್‌ನ ಶಾಹೀನ್ ಶೈಕ್ಷಣಿಕ ಸಂಸ್ಥೆ ಮತ್ತೆ ಸುದ್ದಿಯಲ್ಲಿದೆ. ಶಾಹೀನ್ ಕಾಲೇಜಿಗೆ ಸೇರಿದ ಕಾರ್ತಿಕ್ ರೆಡ್ಡಿ ಎಂಬ ವಿದ್ಯಾರ್ಥಿ ನ್ಯಾಶನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ (NEET)ನ ಅಖಿಲ ಭಾರತೀಯ ರ್ಯಾಂಕಿಂಗ್‍ನಲ್ಲಿ 9 ನೇ ಸ್ಥಾನ ಗಳಿಸಿರುವುದು ಇದಕ್ಕೆ ಕಾರಣ. ಇದೇ ಕೆಲವು ತಿಂಗಳುಗಳ ಹಿಂದೆ ಶಾಹೀನ್ ಶಿಕ್ಷಣ ಸಂಸ್ಥೆಗೆ ಸೇರಿದ ಬೀದರ್‌ನ ಶಾಲೆ ಬೇರೆ ಕಾರಣಕ್ಕೆ ಭಾರಿ ಸುದ್ದಿಯಲ್ಲಿ ಇದ್ದದ್ದನ್ನು ನಾವೆಲ್ಲ ಮರೆತಿರಲಾರೆವು. ಸಿಎಎ ಮತ್ತು ಎನ್‍ಆರ್‌ಸಿ ವಿರೋಧಿ ನಾಟಕ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಸಂಭಾಷಣೆಗಳಿವೆ ಎಂಬ ಆರೋಪ ಹೊರಿಸಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು. ಶಾಲೆಯ ಮುಖ್ಯಶಿಕ್ಷಕಿ ಮತ್ತು ನಾಟಕದಲ್ಲಿ ಅಭಿನಯಿಸಿದ್ದ ವಿದ್ಯಾರ್ಥಿಯ ತಾಯಿಯ ಮೇಲೂ ಆರೋಪ ಹೊರಿಸಲಾಗಿತ್ತು. ಆದರೆ ಶಾಹೀನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ, ನಾಟಕದ ಯಾವ ಸಂಭಾಷಣೆಯೂ ದೇಶದ್ರೋಹದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದ ಸೆಶನ್ಸ್ ಕೋರ್ಟ್ ನ್ಯಾಯಾಧೀಶರು ಪ್ರಕರಣ ದಾಖಲಿಸಿದ ಕ್ರಮವನ್ನು ಟೀಕಿಸಿದ್ದರು. ಇಂತಹ ನ್ಯಾಯಾಧೀಶರ ಎದುರು ಪ್ರಕರಣ ವಿಚಾರಣೆ ಬಂದದ್ದಕ್ಕೆ ಮತ್ತು ಇಂತಹ ತೀರ್ಪು ಸಿಕ್ಕಿದ್ದಕ್ಕೆ ಆ ಮುಗ್ಧ ಆರೋಪಿಗಳೆಲ್ಲಾ ಅದೃಷ್ಟವಂತರೇ ಎಂದು ಹೇಳಬೇಕು! ರಾಜಕೀಯ ದುರುದ್ದೇಶಕ್ಕಾಗಿ ದೇಶದ ಮೂಲೆ ಮೂಲೆಯಲ್ಲಿ ದೇಶದ್ರೋಹ, ಯುಎಪಿಎ ಇತ್ಯಾದಿ ಕರಾಳ ಕಾಯ್ದೆಗಳಡಿಲ್ಲಿ ಪ್ರಭುತ್ವಗಳಿಂದ ಅರೋಪ ಹೊರಿಸಿಕೊಂಡು ಸೆರೆವಾಸಿಗಳಾಗಿರುವ ಎಷ್ಟೋ ಚಿಂತಕರು, ಪತ್ರಕರ್ತರು ಮತ್ತು ಹೋರಾಟಗಾರರಿಗೆ ಈ ಅದೃಷ್ಟದ ಬಲ ಇನ್ನೂ ಒಲಿದಿಲ್ಲ.

ಇಂತಹ ಎಷ್ಟೋ ಶೋಷಣೆಯ ಘಟನೆಗಳು ಇತಿಹಾಸದಲ್ಲಿ ಮತ್ತೆ ಮತ್ತೆ ನಡೆದಿದ್ದರೂ ಮತ್ತು ಪ್ರಭುತ್ವಗಳು ತನ್ನ ವಿರುದ್ಧದ ಸಣ್ಣ ಸಣ್ಣ ಟೀಕೆಗಳನ್ನೂ ಸಹಿಸದೆ ತನ್ನ ನಾಗರಿಕರ ಮೇಲೆಯೇ ಇಂತಹ ಕರಾಳ ಕಾನೂನುಗಳ ಪ್ರಹಾರ ನಡೆಸುತ್ತಾ ಬಂದಿದ್ದರೂ ಇಂತಹ ವಿದ್ಯಮಾನಗಳ ಬಗ್ಗೆ ನಾಗರಿಕರಲ್ಲಿ ಒಟ್ಟಾರೆಯಾಗಿ ಎಚ್ಚರಿಕೆ ಅಥವಾ ವಿವೇಕ ಇನ್ನು ಮೂಡಿಯೇ ಇಲ್ಲ ಎಂದು ಸಂಶಯವಿಲ್ಲದೆ ಹೇಳುವ ದುರಂತ ಸ್ಥಿತಿಯಲ್ಲಿ ನಾವಿದ್ದೇವೆ. ‘ಕರಾಳ ಸಮಯದಲ್ಲಿ ಹಾಡು ಹಸೆ ಉಂಟೇ, ಹೌದು ಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು’ ಎನ್ನುವ ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್‌ನ ಮಾತಿನಂತೆ ಅಮೆರಿಕಾದಲ್ಲಿ 59 ವರ್ಷದ ನಿರ್ದೇಶಕ ಅರೋನ್ ಸಾರ್ಕಿನ್ ತನ್ನ ದೇಶದ ಕರಾಳ ದಿನಗಳ ಬಗ್ಗೆ ನಿರ್ದೇಶಿಸಿರುವ ಚಲನಚಿತ್ರ ‘ದ ಟ್ರಯಲ್ ಆಫ್ ಶಿಕಾಗೋ 7’ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.

ಅಮೆರಿಕಾ, ವಿಯೆಟ್ನಾಂ ದೇಶದ ವಿರುದ್ಧ ನಡೆಸಿದ ಯುದ್ಧವನ್ನು ಪ್ರತಿಭಟಿಸಲು 1968ರಲ್ಲಿ ಅಮೆರಿಕಾದ ನಗರ ಶಿಕಾಗೋದಲ್ಲಿ ನೆರೆದಿದ್ದ ಸಾವಿರಾರು ಜನರ ಮೇಲೆ ಪೊಲೀಸರೇ ಹಿಂಸೆ ಪ್ರಾರಂಭಿಸಿ, ನೂರಾರು ಜನರನ್ನು ಬಂಧಿಸಿದ್ದ ಘಟನೆಗೆ ಸಂಬಂಧಿಸಿದಂತೆ, ತದನಂತರ ಚುನಾಯಿತಗೊಳ್ಳುವ ಸರ್ಕಾರ ಏಳು ಯುವ ಮುಖಂಡರ ಮೇಲೆ ಹಸಿ ಸುಳ್ಳು ಅರೋಪಗಳನ್ನು ಹೊರಿಸಿ, ಪ್ರಕರಣ ದಾಖಲಿಸುವ ಮತ್ತು ಅದರ ಟ್ರಯಲ್‍ಗೆ ಸಂಬಂಧಿಸಿದ ಚಲನಚಿತ್ರ ಇದು. ತನ್ನ ಶೋಷಣೆಗಳನ್ನು, ದೌರ್ಜನ್ಯಗಳನ್ನು ಮುಚ್ಚಿಕೊಳ್ಳಲು, ತನ್ನನ್ನು ಸಮರ್ಥಿಸಿಕೊಳ್ಳಲು ಮತ್ತು ಯಾವುದೇ ಪ್ರತಿರೋಧವನ್ನು ಹತ್ತಿಕ್ಕಲು ಪ್ರಭುತ್ವ ಯಾವ ನೀಚ ಮಟ್ಟಕ್ಕಾದರೂ ಇಳಿಯಬಲ್ಲದು ಮತ್ತು ಇಂತಹ ಕಾರ್ಯಕ್ಕೆ ಪ್ರಭುತ್ವದ ಸಂಸ್ಥೆಗಳು (ಪೊಲೀಸ್, ವಕೀಲರು, ನ್ಯಾಯಾಧೀಶರು ಮತ್ತು ಕೋರ್ಟ್) ಹೇಗೆ ಕೈ ಜೋಡಿಸಬಲ್ಲವು ಎಂಬ 1968ರ ಇತಿಹಾಸದ ನೈಜ ಕಥೆಯನ್ನಾಧರಿಸಿದ ಚಿತ್ರಕಥೆ ದೇಶಕಾಲಗಳನ್ನು ಮೀರಿ ಭಾರತಕ್ಕೂ ಅದರಲ್ಲೂ ಈ ದೇಶದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳಿಗೂ ಅನ್ವಯಿಸುವಂತೆ ಇದೆ. ಈ ಟ್ರಯಲ್‍ಲ್ಲಿ ಎಂಟನೇ ಆರೋಪಿಯಾಗಿದ್ದ ಕಪ್ಪು ಜನಾಂಗದ ಬ್ಲ್ಯಾಕ್ ಪ್ಯಾಂಥರ್ಸ್ ಮುಖಂಡ ಬಾಬಿ ಸೀಲ್ (ವಿಯೆಟ್ನಾಮ್ ವಿರೋಧಿ ಪ್ರತಿಭಟನೆಯ ಆಯೋಜನೆಯಲ್ಲಿ ಅವರ ಯಾವುದೇ ಪಾತ್ರ ಇರುವುದಿಲ್ಲ) ಅವರಿಗೆ ತಮ್ಮ ವಿರುದ್ಧ ಹೊರಿಸಿರುವ ಆರೋಪಗಳನ್ನು ತಿರಸ್ಕರಿಸಿ ಡಿಫೆಂಡ್ ಮಾಡಿಕೊಳ್ಳಲು ಅವಕಾಶವನ್ನೂ ನೀಡದೆ, ಆತನನ್ನು ನ್ಯಾಯಾಂಗ ನಿಂದನೆಗೆ ಒಳಪಡಿಸಿ, ಕೈಕಾಲುಗಳಿಗೆ ಚೈನು ಕಟ್ಟಿ, ಬಾಯಿಗೆ ಬಟ್ಟೆ ತುರಿಕಿ ವಿಚಾರಣೆಯಲ್ಲಿ ಕೂರಿಸುವ ದೃಶ್ಯ ‘ವಾಸ್ತವ, ಕಲ್ಪಿತ ಕಥೆಗಿಂತಲೂ ಕ್ರೂರವಾಗಿರಬಲ್ಲದು’ ಎಂಬುದನ್ನು ನೆನಪಿಸುವುದಲ್ಲದೆ, ನ್ಯಾಯಪ್ರದಾನ ವ್ಯವಸ್ಥೆಯಲ್ಲಿ ಒಬ್ಬ ಕಪ್ಪು ಜನಾಂಗೀಯ ವ್ಯಕ್ತಿಗೆ ಇರುವ ಹೆಚ್ಚಿನ ಶೋಷಣೆ ಮತ್ತು ಅಡೆತಡೆಯನ್ನು ಎತ್ತಿತೋರಿಸುತ್ತದೆ. ಈ ದೇಶದಲ್ಲಿಯೂ ಶೋಷಿತ ಸಮುದಾಯದ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಈ ಕಥಾಭಾಗವನ್ನು ಅನ್ವಯಿಸಿಕೊಳ್ಳುವುದು ಕಷ್ಟವೇನಿಲ್ಲ. ರಾಷ್ಟ್ರಭಕ್ತಿಯ ಅಮಲೇರಿಸಿಕೊಂಡವನಿಗೂ ‘ದ ಟ್ರಯಲ್ ಆಫ್ ಶಿಕಾಗೋ 7’ ಸ್ವಲ್ಪವಾದರೂ ಕಾಡದೆ ಇರದು.

ಸಿನೆಮಾ ಕಥೆಯ ಒಳಗೆ ಅಥವಾ ಇತಿಹಾಸದ ಒಳಗೆ ಹೊಕ್ಕು ವಿಶ್ಲೇಷಿಸುವುದಕ್ಕಿಂತಲೂ, ಒಬ್ಬ ಕಲಾವಿದನಾಗಿ, ನಿರ್ದೇಶಕನಾಗಿ ಪ್ರಸ್ತುತ ಸವಾಲುಗಳಿಗೆ ಸ್ಪಂದಿಸುವ ತುರ್ತನ್ನು ಅರ್ಥ ಮಾಡಿಕೊಳ್ಳುವ ಜರೂರಿನ ಕಾರಣಕ್ಕೆ ಇದನ್ನು ಪ್ರಸ್ತಾಪಿಸುವುದು ಮುಖ್ಯ ಎಂದೆನಿಸಿತು. ಸಿನೆಮಾ ಜನಪ್ರಿಯ ಮಾಧ್ಯಮ. ಈ ಮಾಧ್ಯಮದ ಮೂಲಕ ಜನರನ್ನು ತಲುಪುವುದು, ಜನರ ಸಂವೇದನೆಯನ್ನು ಉದ್ದೀಪಿಸುವುದು, ಚಿಂತನೆಗೆ ಹಚ್ಚುವುದು ಬೇರೆ ಕಲಾಪ್ರಕಾರಗಳಿಗೆ ಹೋಲಿಸಿದರೆ ಸುಲಭ ಮತ್ತು ಪರಿಣಾಮಕಾರಿ. ಭಾರತದಲ್ಲಿ ‘ದ ಟ್ರಯಲ್ ಆಫ್ ಶಿಕಾಗೋ 7’ನಂತಹ ಪ್ರಯತ್ನಗಳು ಬೆರಳೆಣಿಕೆಯಷ್ಟು. ನೆರೆ ರಾಜ್ಯಗಳಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಶೋಷಣೆಯ ವಸ್ತುಗಳನ್ನು ಇಟ್ಟುಕೊಂಡು, ಪ್ರಭುತ್ವಗಳನ್ನು – ಆಡಳಿತ ವ್ಯವಸ್ಥೆಯ ದುರ್ನೀತಿ ಮತ್ತು ದೌರ್ಜನ್ಯದ ನಡೆಗಳನ್ನು ತರಾಟೆಗೆ ತೆಗೆದುಕೊಂಡ ಸಿನೆಮಾಗಳು ಮೂಡಿವೆ. ಆದರೆ ಕರ್ನಾಟಕದ ಮಟ್ಟಿಗೆ – ಕನ್ನಡ ಚಲನಚಿತ್ರಗಳ ಮಟ್ಟಿಗೆ ಇದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ‘ಫಿಲ್ಮ್ ಯುನೈಟೆಡ್ ಕ್ಲಬ್’ (ಎಫ್‍ಯುಸಿ) ಎಂಬ ಸಿನೆಮಾ ನಿರ್ದೇಶಕರ, ವಿಮರ್ಶಕರ ವೇದಿಕೆ ಪ್ರಾರಂಭವಾಯಿತು. ಅದರ ಜಾಲತಾಣದ ಪಟ್ಟಿಯಲ್ಲಿ ಕಾಣುವ ನಿರ್ದೇಶಕರ ಫಿಲ್ಮೋಗ್ರಫಿ ಮೇಲೆ ಕಣ್ಣಾಡಿಸಿದರೆ ಒಂದು ಮಟ್ಟದ ನಿರಾಶೆ ಮೂಡುವುದಂತೂ ನಿಜ. ಇನ್ನು ಕೆಲವು ದಿನಗಳಿಂದ ಈ ತಂಡ ನಡೆಸಿಕೊಂಡು ಬರುತ್ತಿರುವ ಸಿನೆಮಾ ಬಗೆಗಿನ ವೆಬಿನಾರ್‌ಗಳನ್ನು ಗಮನಿಸಿದಾಗಲೂ, ಇಂದು ಪ್ರಸಕ್ತ ದೈತ್ಯವಾಗಿ ಬೆಳೆದಿರುವ ಪ್ರಭುತ್ವ ಪ್ರಣೀತ ಸಮಸ್ಯೆಗಳನ್ನು ಚರ್ಚಿಸುವ ಮತ್ತು ಅವುಗಳನ್ನು ಕಲೆಯ ಮೂಲಕ ಅವಲೋಕಿಸುವ, ಚರ್ಚಿಸುವ, ಉತ್ತರ ಹುಡುಕಲು ಪ್ರಯತ್ನಿಸುವ ಕೆಲಸಗಳೂ ನಡೆದಂತೆ ಕಾಣುವುದಿಲ್ಲ. ಮನರಂಜನೆಗಿಂತಲೂ ಮಿಗಿಲಾದ ಮುಂದಿನ ಹೆಜ್ಜೆ ಇಡಲು ಈ ತಂಡ ಮುಂದಾದಂತೆ ಕಾಣುತ್ತಿಲ್ಲ. ನಿಜ, ಬಂಡವಾಳ, ಪ್ರಭುತ್ವ ವಿರೋಧಿ ಮತ್ತು ಜನರ ಸಮಸ್ಯೆಗೆ ನಿಜವಾಗಿ ಕನ್ನಡಿ ಹಿಡಿಯುವ ಚಿತ್ರಗಳನ್ನು ಬಯಸುವುದಿಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಿಕೊಳ್ಳಬಯಸುವ ಯಾವುದೇ ಕಲಾವಿದ ಅದಕ್ಕೆ ಮಾರ್ಗಗಳನ್ನು ಹುಡುಕುವುದಕ್ಕೆ ಖಂಡಿತಾ ಹಿಂಜರಿಯುವುದಿಲ್ಲ.

ಅಂತಹ ಪ್ರಯತ್ನಗಳು ಕನ್ನಡ ಸಿನಿ ಜಗತ್ತಿನಲ್ಲಿಯೂ ಮುಂದೆ ಕಾಣಬಲ್ಲವೇ?


ಇದನ್ನೂ ಓದಿ: ಭಾರತದಲ್ಲಿ ಮಾನವಹಕ್ಕು ಹೋರಾಟಗಾರರ ಬಂಧನವಾಗುತ್ತಿದೆ: ವಿಶ್ವಸಂಸ್ಥೆ ಕಳವಳ

ವಿವೇಕವೂ ಜನಪ್ರಿಯವಾಗಬಲ್ಲದು ಎಂಬುದಕ್ಕೆ ‘ದ ಟ್ರಯಲ್ ಆಫ್ ಶಿಕಾಗೋ 7’ ಸಿನೆಮಾ ಎಷ್ಟು ಸಾಕ್ಷಿಯೋ, ಹಾಗೆಯೇ ಕೆಲವೇ ದಿನಗಳ ಹಿಂದೆ ನ್ಯೂಜಿಲ್ಯಾಂಡ್ ದೇಶದಲ್ಲಿ ಪ್ರಧಾನಿಯಾಗಿ ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಜನಬೆಂಬಲದೊಂದಿಗೆ ಮರು ಆಯ್ಕೆಯಾದ ಲೇಬರ್ ಪಕ್ಷದ (ಎಡಪಂಥೀಯ ಪಕ್ಷ) ಜಸಿಂಡಾ ಅರ್ಡನ್ ಅವರನ್ನು ಕೂಡ ಸಾಕ್ಷಿ ಎನ್ನಬಹುದು. ಜಗತ್ತಿನಾದ್ಯಂತ (ಅಮೆರಿಕಾ, ಬ್ರೆಜಿಲ್, ಟರ್ಕಿ, ಸ್ವೀಡನ್, ಇಂಗ್ಲೆಂಡ್, ಭಾರತ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ) ಬಲಪಂಥೀಯ ಪಾಪ್ಯುಲಿಸ್ಟ್ ಸರ್ಕಾರಗಳು ಕಲ್ಪಿತ ಶತ್ರುಗಳ ಬಗ್ಗೆ ಮಧ್ಯಮ ವರ್ಗದ ಜನರ ನಡುವೆ ಪ್ರಚಾರ ನಡೆಸಿಕೊಂಡು, ಜನರ ನಿಜವಾದ ಕಾಳಜಿ ಆಶೋತ್ತರಗಳಿಗೆ ಸ್ಪಂದಿಸದೆ ಅಧಿಕಾರಕ್ಕೆ ಬರುತ್ತಿರುವ ಸಂದರ್ಭದಲ್ಲಿ ಜಸಿಂಡಾ ಅರ್ಡನ್ ಅವರ ಧನಾತ್ಮಕ ಜನಪ್ರಿಯತೆ ಜಗತ್ತಿನಾದ್ಯಂತ ಲಿಬರಲ್ ದೋರಣೆಯುಳ್ಳ, ಪ್ರತಿರೋಧದ ಮನಸ್ಸಿನ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗೆ ತುಡಿಯುವ ಜನರಿಗೆ ಭರವಸೆಯಾಗಿ ಕಂಡಿರುವುದು ಸುಳ್ಳಲ್ಲ.

ಹಿಂದಿನ ಅವಧಿಯಲ್ಲಿ ಹೆಚ್ಚು ಜನಪರವಾದ ಸಾಮಾಜಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಇಂಪ್ಲಿಮೆಂಟ್ ಮಾಡಲು ಅವರಿಗೆ ಸಾಧ್ಯವಾಗಿಲ್ಲ ಎಂಬ ಆರೋಪ ಅವರ ಮೇಲಿದ್ದರೂ, ಈಗ ಬಂದಿರುವ ಭಾರಿ ಜನಮತದ ಕಾರಣದಿಂದಾಗಿ ಅವರು ಅವುಗಳ ಬಗ್ಗೆ ಈ ಅವಧಿಯಲ್ಲಿ ಗಮನ ಹರಿಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ಮತ್ತೆ ಬಂಡವಾಳಿಗರು ಮತ್ತು ಜಾಗತಿಕ ಬಂಡವಾಳ ವ್ಯವಸ್ಥೆ ಜನಪರ ಮತ್ತು ಸಾಮಾಜ ಕಲ್ಯಾಣ ಯೋಜನೆಗಳಿಗೆ ಸುಲಭವಾದ ಅವಕಾಶ ಮಾಡಿಕೊಡುವುದಿಲ್ಲ ಎಂಬ ವಿಷಯ ತಿಳಿದಿರುವುದೇ! ಕೆಲವೇ ವರ್ಷಗಳ ಹಿಂದೆ ಗ್ರೀಸ್ ದೇಶ ಸಾಲದ ಸುಳಿಯಲ್ಲಿ ಸಿಲುಕಿದ್ದಾಗ ಇಯು (ಯುರೋಪಿಯನ್ ಯೂನಿಯನ್), ಇಸಿಬಿ (ಯುರೋಪಿಯನ್ ಸೆಂಟ್ರಲ್ ಬ್ಯಾಂಕ್) ಮತ್ತು ಐಎಂಫ್ (ಇಂಟರ್‌ನ್ಯಾಶನಲ್ ಮಾನೆಟರಿ ಫಂಡ್), ಗ್ರೀಸ್ ದೇಶಕ್ಕೆ ಆರ್ಥಿಕ ಸಹಾಯಹಸ್ತ ಚಾಚಲು ಹಾಕಿದ ನಿರ್ಬಂಧಗಳನ್ನು ನೆನಪಿಸಿಕೊಂಡರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ಸಂಸ್ಥೆಗಳು ಹಾಕಿದ ನಿರ್ಬಂಧಗಳು ಗ್ರೀಕ್ ಪಿಂಚಣಿ ಫಂಡ್‍ಗಳು, ಸಾಮಾಜಿಕ ಕಾರ್ಯಕ್ರಮಗಳ ಮೇಲೆ ಬೀರುತ್ತಿದ್ದ ವ್ಯತಿರಿಕ್ತ ಪರಿಣಾಮಗಳನ್ನು ಅಂದಿನ ಗ್ರೀಕ್ ವಿತ್ತ ಸಚಿವರಾದ ಯಾನಿಸ್ ವೆರುಫಕಿಸ್ ‘ಅಡಲ್ಟ್ಸ್ ಇನ್ ದ ರೂಮ್’ ಎಂಬ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದರು. ಅದೇ ಹೆಸರಿನಲ್ಲಿ ಅದು ಸಿನೆಮಾ ಕೂಡ ಆಗಿ ಹೆಚ್ಚಿನ ಜನರನ್ನು ತಲುಪಿತ್ತು. ಈ ವಿತ್ತ ಸಂಸ್ಥೆಗಳು ಗ್ರೀಸ್ ಮೇಲೆ ತಮ್ಮ ಹಿಡಿತ ಸಾಧಿಸಿ, ಯಾನಿಸ್ ವೆರುಫಕಿಸ್ ಅವರು ರಾಜೀನಾಮೆ ನೀಡುವಂತೆ ಒತ್ತಡ ಹಾಕಲು ಸಫಲವಾಗಿದ್ದವು.

ಈಗ ಎರಡನೇ ಬಾರಿಗೆ ಆಯ್ಕೆ ಆಗಿರುವ ಜಸಿಂಡಾ ಅರ್ಡನ್ ತಮ್ಮ ವಿಜಯೋತ್ಸವದ ಭಾಷಣದಲ್ಲಿ, ಹಿಂದೆ ಲೇಬರ್ ಪಕ್ಷವನ್ನು ಬೆಂಬಲಿಸದವರೂ ಕೂಡ ಈಗ ಮತ ನೀಡಿರುವುದಕ್ಕೆ ಧನ್ಯವಾದ ಹೇಳಿ ಪ್ರತಿ ನ್ಯೂಜಿಲ್ಯಾಂಡರ್‌ನ ಹಿತ ಕಾಯುವುದಾಗಿ ನುಡಿದಿದ್ದಾರೆ. ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ, ಬಡತನ ಮತ್ತು ಅಸಮಾನತೆ ಸರಿಪಡಿಸುವ (ಈ ಹಿಂದೆ ಶ್ರೀಮಂತರಿಗೆ ಹೆಚ್ಚು ತೆರಿಗೆ ಹಾಕುವ ಪ್ರಸ್ತಾಪ ಮತ್ತು ಒತ್ತಡ ಅವರ ಮೇಲಿತ್ತು), ಮನೆಯಿಲ್ಲದವರಿಗೆ ಸರ್ಕಾರದಿಂದ ಸೂರು ನೀಡುವ, ಬಡ ವ್ಯವಹಾರಗಳಿಗೆ ಬಡ್ಡಿ ರಹಿತ ಸಾಲ ನೀಡುವ ಇತ್ಯಾದಿ ಜನಪರ ಯೋಜನೆಗಳನ್ನು ಈ ಅವಧಿಯಲ್ಲಿ ಇಂಪ್ಲಿಮೆಂಟ್ ಮಾಡುವ ಬಗ್ಗೆ ಘೋಷಿಸಿದ್ದಾರೆ.

ಅವರು ಆಯ್ಕೆಯಾದ ದಿನ ಪ್ರತಿಕ್ರಿಯಿಸಿದ್ದ ನೂಜಿಲ್ಯಾಂಡ್ ನಾಗರಿಕರೊಬ್ಬರು, ತಾವು ಇಲ್ಲಿಯವರೆಗೂ ಬಲಪಂಥೀಯ ಧೋರಣೆಯ ಪಕ್ಷಕ್ಕೇ ಮತ ಚಲಾಯಿಸುತ್ತಿದ್ದಾಗಿಯೂ, ಆದರೆ ಜಸಿಂಡಾ ಅವರು ಕ್ರೈಸ್ತ್‌ಚರ್ಚ್ ನಗರದ ಮಸೀದಿಗಳ (ಬಿಳಿ ಜನಾಂಗೀಯವಾದಿ ಮತ್ತು ತೀವ್ರ ಬಲಪಂಥೀಯ ವ್ಯಕ್ತಿಯೊಬ್ಬ ನಡೆಸಿದ ಈ ಗುಂಡಿನ ದಾಳಿಯಲ್ಲಿ 51 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಈ ಇಸ್ಲಮಾಫೋಬಿಯಾವನ್ನು ಟೀಕಿಸಿದ್ದ ಜಸಿಂಡಾ ಅವರು ಇದು ತಮ್ಮ ದೇಶದ ಕರಾಳ ದಿನ ಎಂದಿದ್ದಲ್ಲದೆ, ಆರೋಪಿಯ ಶೀಘ್ರ ವಿಚಾರಣೆಗೆ ಸರ್ಕಾರ ಕ್ರಮ ಕೈಗೊಂಡಿತ್ತು) ಮೇಲೆ ನಡೆದ ದಾಳಿಯನ್ನು ನಿರ್ವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಾವು ಪಂಥ ಬದಲಾಯಿಸಿದ ಬಗ್ಗೆ ನಿವೇದಿಸಿಕೊಂಡಿದ್ದಾರೆ.

ಇಸ್ಲಮಾಫೋಬಿಯಾ ಸೇರಿದಂತೆ, ಮಾನವೀಯತೆ ಮರೆತಿರುವ ಸೈದ್ಧಾಂತಿಕ ಧ್ರುವೀಕರಣದಿಂದ ಜನರ ಮಧ್ಯೆ ತೀವ್ರ ಒಡಕು ತರುತ್ತಿರುವ ಇಂದಿನ ದಿನಗಳಲ್ಲಿ ಇದಕ್ಕೆ ಪರಿಹಾರ ಸಾಧ್ಯ ಎಂಬಂತೆ ಅತಿ ಪುಟ್ಟ ರಾಷ್ಟ್ರವಾದರೂ (ಸುಮಾರು 50 ಲಕ್ಷ ಜನಸಂಖ್ಯೆ) ನ್ಯೂಜಿಲ್ಯಾಂಡ್ ಭರವಸೆಯಾಗಿ ಕಾಣಿಸಿಕೊಂಡಿದೆ.

ಇವತ್ತು ನಮ್ಮ ಮುಂದೆ ಇರುವ ಇಂತಹ ಸಮಸ್ಯೆಗಳಿಗೆ ಹಲವು ಶತಮಾನಗಳ ಹಿಂದೆ ಶರಣ ಚಳವಳಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿತ್ತು ಎಂಬ ಅಂಶ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು. ಅಂದು ಪ್ರಧಾನವಾಗಿ ನೆಲೆಸಿದ್ದ ಜಡ್ಡುಗಟ್ಟಿದ ತಾರತಮ್ಯದ ವೈದಿಕ ವ್ಯವಸ್ಥೆಗೆ ಸೆಡ್ಡುಹೊಡೆದು ಸಮಸಮಾಜದ ಅಡಿಪಾಯ ಹಾಕಿಕೊಟ್ಟಿದ್ದ ಮತ್ತು ಅದೇ ಸಮಯದಲ್ಲಿ ತಮ್ಮ ಎಲ್ಲಾ ಹೊಸ ಮಾನವೀಯ ಪ್ರತಿಪಾದನೆಗಳು ಜನಸಾಮಾನ್ಯರಿಗೆ ತಲುಪಬೇಕೆಂದು ಶಾಸ್ತ್ರೀಯ ಭಾಷೆಯನ್ನು ತಿರಸ್ಕರಿಸಿ ಜನರ ಆಡು ಮಾತುಗಳಲ್ಲಿ ವಚನ ಕಟ್ಟಿ ಜನಪ್ರಿಯವಾಗಿ ಬೆಳೆದ, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಶ್ರಮ ಮತ್ತು ಕಾಯಕದ ಆಧಾರದಲ್ಲಿ ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿದ ಶರಣ ಚಳವಳಿ ಬಿಕ್ಕಟ್ಟಿನ ಪ್ರಸಕ್ತ ಸನ್ನಿವೇಶದಲ್ಲಿ ಕನ್ನಡ ಜನರಿಗೆ, ಭಾರತೀಯರಿಗೆ ಮತ್ತು ಜಗತ್ತಿಗೆ ಮಾದರಿಯಾಗಬಲ್ಲದೇ? ಈ ಸಂಚಿಕೆ ಆ ಚರ್ಚೆಯನ್ನು ಮತ್ತೆ ಎತ್ತಿದೆ.


ನ್ಯಾಯಪಥ ಸಂಪಾದಕೀಯ ವಿಡಿಯೋ ನೋಡಿ: ನ್ಯೂಜಿಲ್ಯಾಂಡ್ ನಲ್ಲಿ ಲೇಬರ್ ಪಕ್ಷದ ಮರು ಆಯ್ಕೆ: ಬದಲಾವಣೆ ಶಕೆಯ ಮುನ್ಸೂಚನೆಯೇ?

  • ಗುರುಪ್ರಸಾದ್ ಡಿ ಎನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...