Homeಮುಖಪುಟಒಳಮೀಸಲು ರಾಜಕೀಯ ಆಡುಂಬೊಲವಾಗದಿರಲಿ - ಎನ್. ರವಿಕುಮಾರ್

ಒಳಮೀಸಲು ರಾಜಕೀಯ ಆಡುಂಬೊಲವಾಗದಿರಲಿ – ಎನ್. ರವಿಕುಮಾರ್

- Advertisement -
- Advertisement -

ಒಳಮೀಸಲಾತಿಯನ್ನು ಕೇವಲ ಒಂದು ಸವಲತ್ತಿನ ಕಾರ್ಯಸೂಚಿಯಾಗಿ ನೋಡದೆ ಸಾಮಾಜಿಕ ಆಯಾಮಗಳಿಂದಲೂ ಅವಲೋಕಿಸಿ ನೋಡಿದಾಗ ಅಸ್ಪೃಶ್ಯ ಬದುಕಿನ ಸತ್ಯ ದರ್ಶನವಾಗುತ್ತದೆ. ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಸ್ಪೃಶ್ಯ-ಅಸ್ಪೃಶ್ಯ ಸ್ತರಗಳನ್ನು ಮೊದಲು ಮನಗಾಣಬೇಕು. ಹೊಲೆ-ಮಾದಿಗರು ಹೊರಗಿಟ್ಟ ಸಮುದಾಯವಾಗಿಯೇ ಬದುಕುತ್ತಿರುವ ಕಾಲ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಬಹುತೇಕ ಬಲಾಢ್ಯ ಸ್ಪೃಶ್ಯಜಾತಿಗಳು ಮಾದಿಗರನ್ನು ಹೊಸ್ತಿಲ ಒಳಗೂ ಬಿಟ್ಟುಕೊಳ್ಳದೆ, ತಮ್ಮ ಹೊಲ, ಗದ್ದೆಗಳ ಜೀತಕ್ಕೂ ಇಟ್ಟುಕೊಂಡ ಪ್ರಕರಣಗಳು ಇವೆ. ಮಾದಿಗ ಸಮುದಾಯ ನಾಗರಿಕ ಸಮಾಜದ ಹೇಲು-ಉಚ್ಚೆ ಬಾಚಿ ಬಳಿಯುವ ದಾರುಣ ಬದುಕಿನಿಂದ ಮತ್ತು ಈ ಕಾಲಕ್ಕೂ ಪುಟ್‍ಬಾತ್‍ನಲ್ಲಿ ಅಂಬೇಡ್ಕರ್, ಬಾಬು ಜಗಜೀವನ ರಾಂ ಹೆಸರಿನಲ್ಲಿ ಪೆಟ್ಟಿಗೆಗಳನ್ನಿಟ್ಟುಕೊಂಡು ಚಪ್ಪಲಿ ಹೊಲಿಯುವ ಕಸುಬಿನಿಂದ ಈಗಿನ ತಲೆಮಾರುಗಳು ಇನ್ನೂ ಮುಕ್ತಿಹೊಂದಿಲ್ಲ. ಪರಿಶಿಷ್ಟ ಜಾತಿಗಳಲ್ಲಿನ ಸ್ಪೃಶ್ಯ-ಅಸ್ಪೃಶ್ಯ ಜಾತಿಗಳಿಗೆ ಒಟ್ಟು ಮೀಸಲಾತಿ ಅನ್ವಯವಾಗಿರುವಾಗ ಈ ಇಬ್ಬರ ನಡುವೆ ಇಂತಹ ಅಮಾನುಷ ಅಂತರ ಏಕಿದೆ ಎಂಬುದನ್ನು ಒಳಮೀಸಲಾತಿ ವಿರೋಧಿಸುವ ಸಹೋದರರು ಯೋಚಿಸಬೇಕಾಗಿದೆ.

ಒಳಮೀಸಲಾತಿಯ ಕೂಗು ಇಂದು – ನೆನ್ನೆಯದಲ್ಲ. 1994-95 ರಲ್ಲಿ ಆಂಧ್ರದಲ್ಲಿ ಆರಂಭಗೊಂಡ ಒಳಮೀಸಲಾತಿಯ ಕೂಗಿನ ಹಿಂದೆ ಜನಸಂಖ್ಯೆ ಆಧರಿಸಿ ಬಹುಸಂಖ್ಯಾತರಾಗಿದ್ದ ಅಸ್ಪೃಶ್ಯ ಜಾತಿಗಳು ಮೀಸಲಾತಿಯ ಫಲವನ್ನು ದಕ್ಕಿಸಿಕೊಳ್ಳಲಾಗದ ನೋವು ಸ್ಫೋಟಗೊಂಡಿತು. ಆಂಧ್ರದಲ್ಲಿ ಭುಗಿಲೆದ್ದ ಹೋರಾಟದ ಪರಿಣಾಮ ಅಂದಿನ ಆಂಧ್ರ ಸರ್ಕಾರ ಜಸ್ಟೀಸ್ ರಾಮಚಂದ್ರ ರಾವ್ ಆಯೋಗವನ್ನು ರಚಿಸಿದ್ದು, ಆಯೋಗವು ಮಾದಿಗ ಮತ್ತು ಸಂಬಂಧಿತ ಅಸ್ಪೃಶ್ಯ ಜಾತಿಗಳಿಗೆ ಒಳಮೀಸಲಾತಿ ನೀಡುವ ಅಗತ್ಯತೆಯನ್ನು ಸ್ಪಷ್ಟವಾಗಿ ವೈಜ್ಞಾನಿಕ ಕೋನದಲ್ಲಿ ಮಂಡಿಸಿತು. ಸರ್ಕಾರ ಕೂಡ ಇದನ್ನು ಅನುಷ್ಠಾನಗೊಳಿಸಲು ಮುಂದಾದಾಗ ಆರ್ಥಿಕವಾಗಿ ಪ್ರಬಲವಾಗಿದ್ದ ಮಾಲ ಸಮುದಾಯವು ನ್ಯಾಯಾಲಯಕ್ಕೆ ಮೊರೆಹೋಗಿದ್ದರಿಂದ ಉದ್ದೇಶಿತ ಒಳಮೀಸಲಾತಿಗೆ ಹಿನ್ನಡೆಯಾಯಿತು.

ಆಂಧ್ರದ ಚಳವಳಿಯಿಂದ ಪ್ರೇರಣೆಗೊಂಡು ಕರ್ನಾಟಕದಲ್ಲೂ ಒಳಮೀಸಲಾತಿ ಹೋರಾಟ ಆರಂಭಗೊಂಡಿತು. ಅದರ ಪರಿಣಾಮದಿಂದ ರಚನೆಯಾದ ಜಸ್ಟಿಸ್ ಸದಾಶಿವ ಆಯೋಗದ ವರದಿಯಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲು ಹಂಚಿಕೆಯ ಮಾನದಂಡವೊಂದು ಪ್ರಸ್ತಾಪಿತವಾಗಿದೆ. ಒಟ್ಟು ಮೀಸಲು ಪ್ರಮಾಣ ಶೇ. 15ರಲ್ಲಿ – ಶೇ. 33.47 ರಷ್ಟಿರುವ ಮಾದಿಗ ಸಮುದಾಯಕ್ಕೆ ಶೇ. 6, ಶೇ. 32 ರಷ್ಟು ಪ್ರಮಾಣದ ಜನಸಂಖ್ಯೆ ಹೊಂದಿರುವ ಬಲಗೈ ಸಮುದಾಯಕ್ಕೆ ಶೇ. 5 ಉಳಿದ ಸ್ಪೃಶ್ಯ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 3 ಮತ್ತು ಇತರೆ ಜಾತಿಗಳಿಗೆ ಶೇ. 1 ರಷ್ಟು ಮೀಸಲಾತಿಯ ಹಂಚಿಕೆಯನ್ನು ಪ್ರತಿಪಾದಿಸಿದೆ. ಜನಸಂಖ್ಯೆ ಆಧರಿಸಿ ಮೀಸಲು ಪ್ರಮಾಣ ಹಂಚಿಕೆಯಾಗುವುದು ನ್ಯಾಯಸಮ್ಮತವೂ ಮತ್ತು ಹಕ್ಕು ಆಗಿರುವಾಗ ಇದನ್ನು ವಿರೋಧಿಸುವುದು ಸಾಮಾಜಿಕ ನ್ಯಾಯದ ಉಲ್ಲಂಘನೆಯೂ ಆಗುತ್ತದೆ. ಮೀಸಲಾತಿಯ ಬಗೆಗಿನ ವೈಜ್ಞಾನಿಕವಾದ ಮತ್ತು ಪ್ರಜಾತಾಂತ್ರಿಕವಾದ ನಿಲುವನ್ನು ಬಿತ್ತುವ ಮತ್ತು ಹೊಂದುವ ಅಗತ್ಯ ಎಲ್ಲಾ ಕಾಲಕ್ಕೂ ಇರತಕ್ಕದ್ದು. ಅದು ಒಳಮೀಸಲಾತಿಗೂ ವಿಸ್ತರಿಸಬೇಕು. ಈ ಮೂಲಕ ಹಂಚುಣ್ಣುವ ಮನೋಧರ್ಮವನ್ನು ಧರಿಸಲು ಸಾಧ್ಯ.

ಇದನ್ನೂ ಓದಿ: ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್

ನೆನಗುದಿಗೆ ಬಿದ್ದಿದ್ದ ಜಸ್ಟಿಸ್ ಸದಾಶಿವ ಆಯೋಗಕ್ಕೆ 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಹಣಕಾಸು ನೀಡಿ ಚಾಲನೆ ನೀಡಿದರು. ಈಗ ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿದ್ದಾರೆ. ವರದಿ ಮಂಡನೆಯಾಗಿ ಎಂಟು ವರ್ಷಗಳು ಕಳೆದಿವೆ. ಆದರೆ ಈ ವರದಿ ಕೇವಲ ರಾಜಕೀಯ ಕಾರಣಕ್ಕಾಗಿ ಬಳಕೆಯಾಗದೆ ಉದ್ದೇಶಿತ ನ್ಯಾಯವನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಬೇಕಿದೆ. ಇಲ್ಲಿ ಮೂಲಭೂತವಾದ ಪ್ರಶ್ನೆಯೆಂದರೆ, ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನು ಒಪ್ಪುವುದು, ತಿರಸ್ಕರಿಸುವ ಹೊಣೆಗಾರಿಕೆ ಯಾರದ್ದು?!

ಈ ವರದಿಯ ಚರ್ಚೆ ಹಾದಿ – ಬೀದಿಯಲ್ಲಿ ನಡೆಯಬೇಕಾ? ಪರಿಶಿಷ್ಟ ಸಹೋದರರು ಪರ-ವಿರೋಧಗಳ ಹಗೆಗೆ ಬಿದ್ದು ಬೀದಿಗೆ ಬರಬೇಕಾ?

ಸುಪ್ರೀಂ ಕೋರ್ಟ್ ರಾಷ್ಟ್ರ ಮಟ್ಟದಲ್ಲೇ ಒಳಮೀಸಲಾತಿ ಕುರಿತಂತೆ ಸಕಾರಾತ್ಮಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಿಪಡಿಸಿದೆ. ವಿಸ್ತೃತ ಪೀಠದ ಪರಿಶೀಲನೆಗೂ ಒಪ್ಪಿಸಿದೆ. ವಿಸ್ತೃತ ಸಂವಿಧಾನಿಕ ನ್ಯಾಯಪೀಠ ತನ್ನ ಅಂತಿಮ ತೀರ್ಪು ನೀಡುವವರೆಗೂ ಒಳಮೀಸಲು ವಂಚಿತ ಸಮುದಾಯಗಳು ರಾಜಕೀಯ ಪಕ್ಷಗಳ ಓಲೈಕೆಯ ಬಾಲಂಗೋಚಿಗಳಾಗಿ ಬದುಕುವಂತಾಗಬಹುದು. ಕೇಂದ್ರ ಸರ್ಕಾರ ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10 ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ತನ್ನ ಪರಮ ಕರ್ತವ್ಯದಂತೆ ದಿನಬೆಳಗಾಗುವುದರೊಳಗೆ ಅನುಷ್ಠಾನಗೊಳಿಸಿರುವಾಗ ಒಳಮೀಸಲಾತಿ ವಿಚಾರದಲ್ಲಿ ಯಾಕೆ ನ್ಯಾಯಾಲಯದ ಕಡೆ ಬೆರಳು ತೋರಿ ಕುಳಿತಿರುವುದು?

ಪರಿಶಿಷ್ಟ ಜಾತಿಗಳಲ್ಲಿನ ಸಮುದಾಯಗಳ ನಡುವೆ ಪರ-ವಿರೋಧದ ಸಂಗತಿ ಎನ್ನುವುದಕ್ಕಿಂತ ಸರ್ಕಾರದ ಇಚ್ಛಾಶಕ್ತಿಯ ಪ್ರಶ್ನೆಯೂ ಅಡಗಿದೆ. ರಾಜ್ಯ ಸರ್ಕಾರವೇ ರಚಿಸಿದ ಸದಾಶಿವ ಆಯೋಗವು ಸ್ಪಷ್ಟವಾಗಿ ವರದಿಯನ್ನು ನೀಡಿರುವಾಗ ಸರ್ಕಾರ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಚರ್ಚೆಗೊಳಪಡಿಸಲಿ. ವಿಧಾನಮಂಡಲ ಸಾಂವಿಧಾನಿಕ ವೇದಿಕೆಯಾಗಿರುವಾಗ ಒಳಮೀಸಲಾತಿ ಫಲಿತಾಂಶವೂ ಅಲ್ಲೆ ಇತ್ಯರ್ಥವಾಗಬಾರದೇಕೆ? ಸಂಬಂಧಿತ ಜಾತಿಗಳ ನಡುವೆ ಕಲಹಕ್ಕೆ ಎಡೆಮಾಡುವಂತೆ ವರದಿಯನ್ನು ತೇಲಿಸಿಬಿಟ್ಟು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕೂರುವುದು ನಾಗರಿಕ ಸರ್ಕಾರದ ಹೊಣೆಗಾರಿಕೆಯಲ್ಲ. ಸದನದಲ್ಲಿ ವರದಿ ಮಂಡನೆಯಾಗಿ ಅದರಲ್ಲಿರಬಹುದಾದ ಭೂತ, ಹಾವು ಚೇಳುಗಳು ಹೊರಬರಲಿ. ಜೊತೆಗೆ ಹಲವರ ಬಣ್ಣಗಳೂ ಬಯಲಾಗಲಿ. ಒಳಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರಕಟಿಸುವ ಮೂಲಕ ಸಮಾಜದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು.

ಒಳಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಹಾಗೂ ಇತ್ತೀಚೆಗಷ್ಟೆ ಜಸ್ಟಿಸ್ ನಾಗಮೋಹನ ದಾಸ್ ಆಯೋಗದ (ಮೀಸಲು ಪ್ರಮಾಣ ಹೆಚ್ಚಳ) ವರದಿಯೂ ಸರ್ಕಾರದ ಮುಂದೆ ಇವೆ. ಈ ಮೂರು ಆಯೋಗದ ವರದಿಗಳಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚುವ ಸಮಾನ ನ್ಯಾಯ ಪ್ರತಿಪಾದನೆಯಾಗಿರುವುದು ಮಹತ್ವದ ಸಂಗತಿ. ಒಳಮೀಸಲಾತಿ ಎಂಬುದು ಅಸ್ಪೃಶ್ಯ ಸಮುದಾಯವನ್ನು ವಂಚಿಸುವ ರಾಜಕೀಯ ಆಡುಂಬೊಲವಾಗದಿರಲಿ.

ಸಾಮಾಜಿಕ ನ್ಯಾಯವೆಂಬುದು ಕಟ್ಟಕಡೆಯ ದುರ್ಬಲ ವ್ಯಕ್ತಿಗೂ ದಕ್ಕಿದಾಗ ಅದು ಸಾರ್ಥಕಗೊಳ್ಳುತ್ತದೆ. ಒಟ್ಟಾರೆ ಮೀಸಲಾತಿಯನ್ನು ಅನುಷ್ಠಾನಗೊಳಿಸುವಾಗ ಇದ್ದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಪ್ರತಿಪಾದನೆ ಒಳಮೀಸಲಾತಿ ವಿಷಯದಲ್ಲೂ ಇರಬೇಕಾಗುತ್ತದೆ. ಒಳಮೀಸಲಾತಿಯನ್ನು ವಿರೋಧಿಸುವವರು ಅಂತಿಮವಾಗಿ ಮೀಸಲಾತಿಯ ವಿರೋಧಿಗಳೂ ಆಗಿರುತ್ತಾರೆ.
ಎನ್. ರವಿಕುಮಾರ್
ಶಿವಮೊಗ್ಗದ ಟೆಲೆಕ್ಸ್ ಪತ್ರಿಕೆಯ ಬರಹಗಳಿಂದ ಎಲ್ಲರಿಗೂ ಪರಿಚಿತರಾಗಿರುವ ರವಿಕುಮಾರ್. ‘ಟೆಲೆಕ್ಸ್ ರವಿ’ ಎಂದೇ ಹೆಚ್ಚಿನವರಿಗೆ ಗೊತ್ತಿದ್ದಾರೆ. ತಮ್ಮ ತೀಕ್ಷ್ಣ ಕವಿತೆಗಳು ಹಾಗೂ ಖಚಿತ ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚುಮೆಚ್ಚು

ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...