Homeಅಂಕಣಗಳುಕೃಷಿ ಕಥನತರಂತರ ಸಾರುಗಳು: ಹತ್ತಾರು ಸಾಂಬಾರ್‌ಗಳ ಬಗ್ಗೆ ತಿಳಿಯೋಣ

ತರಂತರ ಸಾರುಗಳು: ಹತ್ತಾರು ಸಾಂಬಾರ್‌ಗಳ ಬಗ್ಗೆ ತಿಳಿಯೋಣ

ಒಂದೆಲಗ, ಅನ್ನೆಗೊನೆ ಸೊಪ್ಪು ಸೇರಿ ಹತ್ತಾರು ಸಾರುಗಳ ಬಗ್ಗೆ ಕೃಷ್ಣಮೂರ್ತಿ ಬಿಳಿಗೆರೆಯವರು ಬರೆದಿದ್ದಾರೆ

- Advertisement -
- Advertisement -

ಒಂದೆಲಗದ ಬಹುರೂಪ

ಸಾರಿಗೆಹಳ್ಳಿ ಕೆರೆಯ ಮೇಲೆ ಮೋಡವಾಗಿತ್ತು. ಅದು ಮುಂಗಾರು ಮುಗಿದು ಹಿಂಗಾರು ಆರಂಭವಾದ ಕಾಲ. ಈ ಮಳೆಯಲ್ಲಿ ನೆನೆಯಲೇಬೇಕೆಂದು ಅರಸಿ ಆ ಮೋಡಗಳ ನಂಬಿ ಅದರಿಡಿಗೆ ಹೊರಟರೆ ಮನಸ್ಸಿನೊಳಗೆ “ಒಂದೆಲಗ” ಬೆಳೆಬೆಳೆದು ಹಬ್ಬಿ ಹಾಡುಗಟ್ಟುತ್ತಿತ್ತು

ಅವರವರಿಗೆ ಬೇಕಾದಂತೆ ಒತ್ತುವರಿಯಾಗಿ ಇನ್ನೂ ಉಳಿದಿದ್ದ ಈ ಸಾರಿಗೆಹಳ್ಳಿ ಕೆರೆಗೇ ನಮ್ಮೂರ ಕೋಡಿನೀರು ಹರಿದು ಬರುತ್ತಿದ್ದುದು. ಒಮ್ಮೆ ನಮ್ಮೂರ ಕೆರೆಕೋಡಿ ಬಿದ್ದ ಸುಭಿಕ್ಷ ಕಾಲದಲ್ಲಿ ನೀರು ಓಡುವ ಹಳ್ಳದ ಹಾದಿಯಗುಂಟವೇ ಸಾಗಿ ಸಾರಿಗೆ ಹಳ್ಳಿ ಕೆರೆಯವರೆಗೂ ನಾನು ಗೆಳೆಯರ ಜೊತೆ ಸಾಹಸಯಾತ್ರೆ ಕೈಗೊಂಡದ್ದು ನೆನಪಿದೆ. ಅದು ಹಳ್ಳ, ನೀರಿನ ಜೊತೆಗಿನ ಮಾತುಕತೆಯಾಗಿ ಇಂದಿಗೂ ಉಳಿದಿದೆ.

ಈಗ ಸಾರಿಗೆಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದು ಬರುತ್ತಿರಲಾಗಿ ಸದಾ ತುಂಬಿ ತುಳುಕುತ್ತಿದೆ. ಅದರ ಫಲವಾಗಿಯೇ ಕೆರೆಯ ದಡದಲ್ಲಿ ಒಂದೆಲಗ ತನ್ನ ಸಾಮ್ರಾಜ್ಯ ಸ್ಥಾಪಿಸಿ ಮೆರೆಯುತ್ತಿದೆ. ಸದಾ ತೇವಾಂಶ ಇಷ್ಟಪಡುವ ಒಂದೆಲಗದ ಬೇಟಿ ಸಲುವಾಗಿಯೇ ನಾನು ಮಳೆ ಮೋಡಗಳ ಅಡಿಯಲ್ಲಿ ಪ್ರಯಾಣ ಹೊರಟದ್ದು.

ಒಂದೆಲಗ

ಒಂದೆಲಗದ ಸೊಪ್ಪನ್ನು ನೋಡಿರದ ಗೆಳೆಯರೊಬ್ಬರು ಜೊತೆಗಿದ್ದರು. ಆ ಕೆರೆಯ ದಡಗಳಲ್ಲಿ ಮೀನಿಗೆ ಗಾಳಹಾಕಿ ಸಂತರಂತೆ ಕುಂತವರು, ಏಡಿ ಹಿಡಿಯುವವರು, ದನಾ ಕಾಯುವವರು, ಬಲೆ ಬಿಟ್ಟುಕೊಂಡು ಕಾದು ಕೂತವರು, ಬಟ್ಟೆ ಒಗೆಯುವವರು, ಅಲ್ಲಲ್ಲೆ ಚೆಲ್ಲಿಕೊಂಡಿದ್ದರು. ನಾವು ಒಂದೆಲಗದ ಬೇಟೆ ಆರಂಭಿಸಿದೆವು.

ಹೆಸರುಕಾಳು, ಉರಿಗಡ್ಲೆ, ತೆಂಗಿನಕಾಯಿ, ಹುರುಳಿಕಾಳು ಇತ್ಯಾದಿ ಯಾವುದೇ ಕಾಳಿನ ಜೊತೆ ಅರ್ಧಕ್ಕರ್ಧ ಒಂದೆಲಗ ಹಾಕಿ ಚಟ್ನಿ ಮಾಡಬಹುದು. ಉರಿದ ಹೆಸರುಕಾಳಿನ ಜೊತೆ ಒಂದೆಲಗ ಬಳಸಿ ಬಸ್ಸಾರು ತಯಾರಾದರೆ ಅದರ ರುಚಿಯೇ ಬೇರೆ, ಕೊತ್ತಂಬರಿ, ಕರಿಬೇವು ಎಷ್ಟು ಬೇಕೋ ಅಷ್ಟು ಇರಲಿ ಆದರೆ ಕಡಲೆಹಿಟ್ಟು ಮತ್ತು ಒಂದೆಲಗ ಸಮಪ್ರಮಾಣದಲ್ಲಿರಲಿ. ಈ ಬಗೆಯ ಬೋಂಡ ತಿಂದ ಮೇಲೆ ನೀವೂ ನನ್ನಂತೆ ಒಂದೆಲಗದ ಬೇಟೇಗೆ ಹೋರಟೇ ಹೊರಡುತ್ತೀರಿ.

ಒಂದೆಲಗವನ್ನು ಹಸಿಯಾಗಿ ತಿನ್ನುವುದು ಸರ್ವಶೇಷ್ಟಮಾರ್ಗ ಸೊಪ್ಪು ಬಳಸುವಾಗ ಮೃದು ಕಾಂಡವನ್ನು ಬಳಸಬೇಕಾದ್ದು ಕಡ್ಡಾಯ. ರೊಟ್ಟಿ, ದೋಸೆ, ಇಡ್ಲಿ ಮಾಡುವಾಗ ಈ ಸೊಪ್ಪನ್ನು ಬಳಸಬಹುದು.

ಒಂದೆಲಗ ಬುದ್ಧಿ ಹೆಚ್ಚಿಸುವ ಪರಿಕರ. ಹಾಗೆಂದು ಒಂದೇ ಪಟ್ಟಿಗೆ ಹೆಚ್ಚು ಇಂದರೆ ಸ್ವಲ್ಪ ಬೇದಿ ಆಗಬಹುದು. ಅದು ಒಳ್ಳೇಯದೇ ಅಲ್ಲವೆ ಎಂದು ಕೇಳಿದರೆ, ಉತ್ತರ: ನಿಮ್ಮಿಷ್ಟ.

ಒಂದೆಲಗದ ಕೃಷಿ ಕಷ್ಟ. ಕೆರೆ ಅಂಗಳ, ಕಾಲುವೆ ದಡಗಳಲ್ಲಿ ಇದು ತಾನೇ ತಾನಾಗಿ ಬೆಳೆಯುತ್ತದೆ. ಕಾಪಾಡಿಕೊಳ್ಳಬೇಕಷ್ಟೇ.

ಹಲಸಿನಕಾಯಿ ಪದಾತ-ಜಿಡ್ಡಿ ಮುದ್ದೆ

“ಹುಳಿ ಮುಂದುಮಾಡಿ ಹಲಸಿನಕಾಯಿ ಹಸಿಅವರೆಕಾಳು ಹಾಕಿ ಪದಾತ ಮಾಡಿದರೆ ಬೆಕ್ಕು ನೆಗೆಯಲಾರದಂತ ಜಿಡ್ಡಿ ಮುದ್ದೆ ಒಡಿಬಹುದು” ಎಂಬ ಮಾತು ನಮ್ಮ ಕಡೆ, ನಗೆಯೊಂದಿಗೆ ಚಾಲ್ತಿಯಲ್ಲಿದೆ. ಈ ಹಲಸಿನ ಮರದ ಸೊಗಸು ಒಂದು ಬಗೆಯದಲ್ಲ. ನೂರಾರು ವರ್ಚ ಬಾಳಿ ಬದುಕುವ ಈ ಹಲಸು ದಣಿವರಿಯದೆ ಅನ್ನ ಹಂಚುತ್ತದೆ. ಹಣ್ಣಿನ ಕತೆಯನ್ನು ಇಲ್ಲಿ ಹೇಳ ಹೊರಡುವುದು ಅಷ್ಟು ಸರಿಯಲ್ಲ. ಪರೇವಿನಲ್ಲಿ ಸಾರು ಸಂದಿಸಬೇಕಾದರೆ ಹಲಸಿನಕಾಯಿ ಪಚಡಿ ಬೀಳಬೇಕು. ಹಿಡಿಗಾತ್ರದ ಪಚಡಿಗಳು ಸಾರಿನಲ್ಲಿ ಸಿಕ್ಕಿದರೇ ಪರೇವಿನ ಊಟಕ್ಕೆ ಮಜ.

ಹಲಸಿನಕಾಯಿ ಸಾರು

ದಿನನಿತ್ಯದ ತರಕಾರಿಯಾಗಿ ಇದರ ಬಳಕೆ ಕಡಿಮೆ. ರುಚಿ ಕಂಡುಕೊಂಡರಷ್ಟೇ ಖಾಯಶ್‍ನಿಂದ ಹಲಸಿನ ಸೀಜನ್ ಆರಂಭವಾಗುವುದನ್ನು ಕಾಯುತ್ತಾರೆ. ಹಸಿ ಅವರೆಕಾಳು, ಹಲಸಿನ ಸೀಜನ್ ಎರಡೂ ಒಟ್ಟಿಗೆ ಬರುವುದರಿಂದ ಹೊಸದೊಂದು ಯುಗವೇ ಆರಂಭವಾದಂತೆ ಜನ ಖುಷಿಪಡುತ್ತಾರೆ.

ಕೆತ್‍ಗಾಯಿ, ಮುಸುಕಿನ ಸಾರು, ಹಲಸಿನಕಾಯಿಯ ಸಾರು ಹೀಗೆ ಹಲವು ಹೆಸರುಗಳಿಂದ ಇದು ಜನಪ್ರಿಯವಾಗಿದೆ. ತುಂಬಾ ಎಳೆಯದಲ್ಲದೆ ಆದರೆ ತುಂಬಾ ಬಲಿಯದ ಕಾಯಿಗಳನ್ನು ಸಾರಿಗೆ ಬಳಸಬೇಕು. ಆಗ ಮಾತ್ರವೇ ಹಲಸಿನ ಪದಾತದ ನಿಜರುಚಿಯ ದರ್ಶನವಾಗುವುದು.

ಹಲಸಿನ ಕಾಯಿಯನ್ನು ಬಳಸಲು ಬಹುಜನ ಹಿಂದೇಟು ಹಾಕುವುದೇ ಹೆಚ್ಚು. ಇದಕ್ಕೆ ಕಾರಣ ಹಲಸಿನ ಕಾಯಿಯನ್ನು ಕೆತ್ತುವ ತಲೆಬಿಸಿ. ಹಲಸಿನ ಕಾಯಿ ಕೆತ್ತುವುದು ಅಷ್ಟು ಸುಲಭವಲ್ಲ. ಇದರ ಸಂಸ್ಕರಣೆಯಲ್ಲಿನ ಮುಖ್ಯ ತೊಡಕು ಅದರಲ್ಲಿರುವ ಮಾಮೇರಿ ಅಂಟು. ಕಸುಬುದಾರರಿಗೆ ಇದೆಲ್ಲಾ ಏನೂ ಕಷ್ಟವಲ್ಲ. ಹೂವು ಎತ್ತಿದಂತೆ ಸಲೀಸು. ಹಲಸಿನ ಕಾಯಿಯ ತೊಟ್ಟಿನ ಭಾಗಕ್ಕೆ ಒಂದು ಚೂಪಾದ ಗೂಟ ಜಡಿದು ಅಡವು ಮಾಡಿಕೊಂಡು ಮುಳ್ಳುಭಾಗವನ್ನೆಲ್ಲಾ ಕೆತ್ತಿಹಾಕಿ, ನಂತರ ತಮಗೆ ಬೇಕಾದಷ್ಟು ಸೈಜಿಗೆ ಕೊಚ್ಚಿಕೊಂಡರಾಯಿತು. ಮಧ್ಯದ ದಿಂಡುಭಾಗವನ್ನು ಉಪಯೋಗಕ್ಕೆ ಅನರ್ಹ. ಕೆಲವರು ಹಲಸಿನಕಾಯಿ ಕೆತ್ತುವ ಬದಲು ಈಳಿಗೆ ಮಣೆ ಸಹಾಯದಿಂದ ಹೆಚ್ಚುತ್ತಾರೆ.

ನಮ್ಮ ತೊಟದ ದಾರಿಯಲ್ಲಿ ಒಂದು ಹಲಸಿನ ಮರವಿದೆ. ಅದು ಯಾರದು, ಏನು ಎಂಬುದು ಯಾರಿಗೂ ಮುಖ್ಯವೆನಿಸಿಲ್ಲ. ಏಕೆಂದರೆ ಆ ಮರದ ಹಲಸಿನಕಾಯಿ ಹಣ್ಣಾಗಿ ಉದುರಿದರೂ ತಿನ್ನುವವರಿರುವುದಿಲ್ಲ. ಮನುಷ್ಯ, ಹಂದಿ, ನರಿ ಕರಡಿಗಳು ಮುಟ್ಟುವುದಿಲ್ಲ. ರುಚಿ ಇಲ್ಲದ ಲದ್ದಿಗ ಹಣ್ಣುಗಳನ್ನು ಯಾರುತಾನೇ ತಿನ್ನುತ್ತಾರೆ. ವಿಚಿತ್ರವೆಂದರೆ ಈ ಮರದ ಕಾಯಿಗಳು ಪದಾತಕ್ಕೆ ಅತ್ಯಂತ ರುಚಿಕರ. ಸುತ್ತೆಲ್ಲಾ ಜನ ಈ ಮರದ ಕಾಯಿಗಳನ್ನು ಸದುಪಯೋಗಪಡಿಸಿಕೊಳ್ಳುವುದನ್ನು ಕಲಿತಿದ್ದಾರೆ. ಸುತ್ತೆಲ್ಲಾ ಈ ಮರದ ಯಜಮಾನರು ನೋಡಿಯೂ ನೋಡದಂತೆ ಇರುತ್ತಾರೆ.

ಅದು ಯಾರಿಗೆ ಯಾವ ಹೊತ್ತು ಆ ಪ್ಲಾನ್ ಹೊಳೆಯಿತೋ ಕಾಣೆ, ಹೂ ಬಿಡದ ಕಾಯಿಕೊಡದ ಅಕೇಶೀಯಾ, ನೀಲಗಿರಿ ನೆಸುತ್ತಿದ್ದವರು, ಕೇಬಿಕ್ರಾಸ್ ತಗ್ಗಿನ ಒಂದು ಕಿಲೋಮೀಟರ್ ರಸ್ತೆ ಅಕ್ಕಪಕ್ಕಗಳಲ್ಲಿ ಹಲಸಿನಮರ ನೆಟ್ಟರು. ಅವು ನೋಡನೋಡುತ್ತಿದ್ದಂತೆ ಹುಲುಸಾಗಿ ಬೆಳೆಯತೊಡಗಿದವು. ಆಡು ಕಾಯುವವರು ಅಗಾಧ ಪ್ರಮಾಣದಲ್ಲಿ ಸೊಪ್ಪು ಸೆಣೆದರೂ ಛಲ ಬಿಡದೆ ಬೆಳೆದವು. ಈಗ ನೋಡಿದರೆ ಎಲೆಗೊಂದು ಕಾಯಿ ಎನ್ನುವಂತೆ ಜೊಂಪಲು ಜೊಂಪಲು ಕಾಯಿಗಳನ್ನು ಬಿಡುತ್ತಿವೆ. ಹಲಸಿನ ಸೀಜನ್ನಿನಲ್ಲಿ ನೋಡಬೇಕು ಹಲಸಿನ ಕಾಯಿಯ ಸೂರೆ. ಮುಸುಕಾಗುವುದೇ ತಡ ಆಗಲೇ ಜನರ ಕಣ್ಣು ಅವುಗಳ ಮೇಲೆ ಬೀಳತೊಡಗುತ್ತವೆ. ಅವರಿವರೆನ್ನದೆ ಎಲ್ಲರೂ ಅವುಗಳ ಮೇಲೆ ದಾಳಿ ಆರಂಭಿಸುತ್ತಾರೆ. ಬಿ.ಹೆಚ್.ರಸ್ತೆಯ ಕಾರು ಪ್ರಯಾಣಿಕರು ಈ ಕಾಯಿಗಳಿಗೆ ಆಸೆಬಿದ್ದು ಕಿತ್ತುಕೊಂಡು ಪುಗಸಟ್ಟೆ ಪುನುಗನ್ನು ಪಡೆದ ಸಂತೋಷದಲ್ಲಿ ಮುಂದೆ ಸಾಗುತ್ತಾರೆ. ಎಷ್ಟು ದಾಳಿ ನಡೆದರೇನು, ನೂರಾರು ಹಲಸಿನ ಮರಗಳ ಸಾವಿರಾರು ಕಾಯಿಗಳನ್ನು ಖಾಲಿ ಮಾಡುವುದು ಅಷ್ಟು ಸುಲಭವೇ. ಜನರು ಕಿತ್ತುಕೊಂಡಷ್ಟೆ ವೇಗವಾಗಿ ಮರಗಳು ಹೆಚ್ಚುಹೆಚ್ಚು ಕಾಯಿ ಬಿಡತೊಡಗುತ್ತವೆ. ಕೊನೆಗೆ ಜನರು ಸೋತು ಸುಮ್ಮನಾಗುತ್ತಾರೆ. ಕಾಯಿ ಹಣ್ಣಾಗತೊಡಗುತ್ತವೆ. ಮತ್ತೆ ಜನ ಹಣ್ಣಿಗೆ ಮುಗಿಬೀಳುತ್ತಾರೆ. ಹಲಸಿನ ಕಾಯಿ ಪದಾತದ ಘಮಲು ಮತ್ತೆಚ್ಚಿ ಹಬ್ಬಲು ಕಾರಣವಾದ ಈ ಹಲಸಿನ ಸಾಲು ನೆಟ್ಟ ಆ ಪುಣ್ಯಾತ್ಮರಿಗೆ ನಮೋ ನಮಃ.

ಬಾಳೆ ಪುರಾಣ ಮತ್ತು ಬಾಳೇಕಾಯಿ

ನಾನು ಅಲ್ಲಿಗೆ ಹೋದಾಗ ಶಿವನಂಜಯ್ಯ ಬಾಳೆಕಾಯಿಯವರು ತಮ್ಮ ಸಹಜ ಕೃಷಿ ತೋಟದ ಹಸಿರು ಸಾಮ್ರಾಜ್ಯದಲ್ಲಿ ಅಡ್ಡಾಡುತ್ತಾ “ನಿಂಬೆಯ ಹಣ್ಣಿನಂಗೆ” ಹಾಡನ್ನು ಗುನುಗುತ್ತಿದ್ದರು. ನಾನು ಅವರ ತೋಟಕ್ಕೆ ಹೋಗುವಾಗ ನನ್ನ ಹೆಗಲಲ್ಲಿ ಎಂಥಾದರೂ ಒಂದು ಬ್ಯಾಗು ಇದ್ದೆ ಇರುತ್ತದೆ. ಅದನ್ನು ಕಂಡವರೇ ಹುಸಿ ಭಯವನ್ನು ನಟಿಸುತ್ತಾ “ಸ್ವಾಮಿ ನೀವು ತೋಟದಿಂದ ಹೋಗುವಾಗ ಬ್ಯಾಗನ್ನ ತಪಾಸಣೆ ಮಾಡ್ತೀನಿ ಹುಷಾರು” ಎನ್ನುತ್ತಾರೆ. ಆದರೆ ತೋಟದೋಳಗೆ ನಡೆಯುತ್ತಿದ್ದಂತೆ ಅವರೇ ಪಪ್ಪಾಯಿ, ಸೀಬೆ, ನಿಂಬೆ, ಸಪೋಟ ಇತ್ಯಾದಿಗಳ ಲಭ್ಯತೆಯನ್ನು ಬಯಲುಗೊಳಿಸಿ ಕಿತ್ತುಕೊಳ್ಳುವಂತೆ ಪ್ರೇರೇಪಿಸುತ್ತಾರೆ. “ಸ್ವಾಮಿ ಇವೆಲ್ಲಾ ನಿಜವಾದ ಹಣ್ಣುಗಳು, ವಿಷವಿಲ್ಲ. ಇಲಿ, ಅಳಿಲುಗಳು ಈ ಹಣ್ಣು ತಿನ್ನುತ್ತವೆ. ಅವು ವಿಷದ ಹಣ್ಣುಗಳನ್ನು ತಿನ್ನುವುದಿಲ್ಲ. ಕಿತ್ತುಕೊಳ್ಳಿ. ತಿನ್ನಿ..” ಎಂದು  ಆಜ್ಞಾಪಿಸುತ್ತಾರೆ.

ಬಾಳೆದಿಂಡು

ಅಂದು ತೋಟಕ್ಕೆ ಹೋದಾಗ ಅವರು ಪರಿಚಯಿಸಿದ್ದು ಬಾಳೆದಿಂಡಿನ ಬಸ್ಸಾರು, ಬಾಳೆಗೊನೆಯನ್ನು ಕಡಿದುಕೊಂಡ ಮೇಲೆ, ಬಾಳೆಕಾಂಡವನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿಕೊಂಡು ಬಾಳೆದಿಂಡನ್ನು ಬಿಡಿಸಿಕೊಳ್ಳುವುದು ಸುಲಭ ವಿಧಾನ.

ಮೊಳಕೆ ಹುರುಳಿಕಾಳು, ಅಥವಾ ಕಡ್ಲೆಕಾಳಿನ ಜೊತೆ ಬಾಳೆದಿಂಡನ್ನು ಬಳಸಿ ಬಸ್ಸಾರು ಮಾಡುವುದು ರೂಢಿಯಲ್ಲಿರುವ ಪದ್ಧತಿ. ಇತರ ಕಾಳುಗಳ ಜೋತೆಗೂ ಇದನ್ನ ಬಳಸಿ ಸಾರು ಮಾಡಬಹುದೇನೋ ಪ್ರಯತ್ನಿಸಬಹುದು. ಬೇಳೆ ಕೂಡದು ಕಾಳೆ ಆಗಬೇಕು. ಬಾಳೆ ದಿಂಡು ಮಾತ್ರ ಏಕ್‍ದಂ ಪ್ರೆಷ್ ಇರಬೇಕು. ಕಿಡ್ನಿಯಲ್ಲಿನ ಕಲ್ಲು ಕರಗಿಸಬಲ್ಲ ಶಕ್ತಿಯುಳ್ಳದೆದ್ದು ನಂಬಲಾಗಿರುವ ಈ ಬಗೆಯ ಪರಿಕರವನ್ನು ಈಗ ಹಳ್ಳಿಗಳಲ್ಲೂ ಹೆಚ್ಚು ಬಳಸುತ್ತಿಲ್ಲ. ಬಾಳೆದಿಂಡಿನ ಸಾರನ್ನು ಬಳಸುವುದರಿಂದ ಔಷಧೀಯ ಲಾಭವೂ ಇದೆ ಎಂಧಾದರೆ ಯಾಕೆ ಬಳಸಬಾರದು.

ರುಚಿಯಲ್ಲಿ ಇದಕ್ಕಿಂತಲೂ ಮುಂದು ಎನ್ನಬಹುದಾದ ಬಾಳೇಕಾಯಿ ಹುಳಿ ಹೆಚ್ಚು ಬಳಕೆಯಲ್ಲಿದೆ. ಕಡ್ಲೆಕಾಳಿನ ಜೊತೆ ಬಾಳೆಕಾಯಿ ಹಾಕಿ ಮಾಡುವ ಸಾರು ಬಹುರುಚಿ. ಬಾಳೆಯನ್ನು ಕೇವಲ ಹಣ್ಣಾಗಿ ಬಳಸಿದರೆ ಅದರ ಬಹುರುಚಿಯನ್ನು ಅಲ್ಲಗಳೆದಂತೆ. ಆದ್ದರಿಂದ ಇದನ್ನು ಸಾರು, ಪಲ್ಯ, ಬೋಂಡ, ಚಿಪ್ಸ್ ಆಗಿ ಬಳಸಿ ಗೌರವಿಸಬೇಕು.

ಹುರುಳೀ ಕಾಳಿನ ಮಹಾತ್ಮೆ

ನಮ್ಮಪ್ಪ ದನದ ವ್ಯಾಪಾರಕ್ಕೆಂದು ಸುತ್ತೆಂಟು ಜಾತ್ರೆ, ಸಂತೆಗಳಿಗೆ ಎಡತಾಕುತ್ತಿದ್ದ ಕಾಲದಲ್ಲಿ ಹೊಟೆಲ್ಲುಗಳು ಅಷ್ಟಾಗಿ ಇರಲಿಲ್ಲ. ರೊಟ್ಟಿ, ಉರಿದ ಹುರುಳಿ ಕಾಳು, ಉರಿಹಿಟ್ಟು, ಉಪ್ಪಿನಕಾಯಿ ಮುಂತಾದ ಪರಿಕರಗಳ ಪಾತ್ರ ದೊಡ್ಡದಿತ್ತು. ಇವುಗಳೆಗೆಲ್ಲಾ ಕಳಶಪ್ರಾಯವಾಗಿ ಸದಾ ಇರುತ್ತಿದ್ದುದು ಹುರುಳಿ ತೊಕ್ಕು. ಹುರುಳಿ ಸಾರನ್ನು ನೀರು ಹಿಂಗುವವರೆಗೂ ಕಾಯಿಸಿ ಉಳಿಯುವ ಗಸಿಯನ್ನು ಬಿಸಿಲಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ಬೇಕಾದಾಗ ಅದಕ್ಕೆ ನೀರು ಹಾಕಿ ಬಳಸುವ ಪದಾರ್ಥವೇ ತೊಕ್ಕು. ಇದು ಮುದ್ದೆಗೂ ಸೈ ರೊಟ್ಟಿ ಅನ್ನಕ್ಕೂ ಸೈ.

ಒಣ ಹುರುಳಿ ಸಾರು : ಒಣ ಹುರುಳಿಕಾಳಿನ ಜೊತೆ ಯಾವುದಾದರೂ ಸೊಪ್ಪು ಹಾಕಿ ಮಾಡುವ ಬಸ್ಸಾರು ನಾಟಿಕೋಳಿ ಸಾರಿಗೆ ಸಮ ಎಂದು ಜನಜನಿತವಾಗಿದೆ. ನೆಂಚಿಗೆಗೆ ಎರಡು ತುಂಡು ತೆಂಗಿನಕಾಯಿ ಚೂರು, ಬಿಸಿ ಸಾರಿಗೆ ಒಂದು ಸೌಟು ತುಪ್ಪ-ಬಿಸಿ ಮುದ್ದೆಗೆ ಹೇಳಿಮಾಡಿಸಿದ ಹೊಂದಿಕೆ. ಖಾರ ಇಷ್ಟ ಪಡುವವರು ಹಸಿರು ಮೆಣಸಿನಕಾಯಿ ಬಳಸಬಹುದು. ಒಣ ಹುರುಳಿಯನ್ನು ಬೇಯಿಸಿ, ರಸವನ್ನು ಸಾರಿಗೆ ಬಳಸಿ, ಕಾಳನ್ನು ಬೆಲ್ಲ, ತೆಂಗಿನಕಾಯಿ ಹಾಲಿನೊಂದಿಗೆ ಉಣ್ಣುವುದು ಪರಮಾನ್ನದ ಸಂತೋಷ ನೀಡಬಲ್ಲದು, ನಮ್ಮೂರಲ್ಲಿ ಇದು ಮಾರಿ ಹಬ್ಬದ ವಿಶೇಷ ಅಡುಗೆ.

ಹುರುಳಿ ಸಾರು

ಮೊಳಕೆ ಹುರುಳಿಕಾಳಿನ ಸಾರು : ಒಣ ಹುರುಳಿ ಕಾಳಿನ ಸಾರು ಒಂದು ರುಚಿಯಾದರೆ ಅದೇ ಒಣ ಹುರುಳಿ ನೆನೆಹಾಕಿ ಮೊಳಕೆಕಟ್ಟಿದ ಕಾಳಿನ ಸಾರಿನ ರುಚಿ ಇನ್ನೊಂದು ಬಗೆಯದು. ಇದನ್ನು ನಮ್ಮೂರಿನ ಲಕ್ಷ್ಮಕ್ಕಜ್ಜಿ “ಭೂಲೋಕದ ಅಮೃತ ಕಣಪ್ಪ” ಎಂದು ಬಣ್ಣಿಸುತ್ತದೆ. ಬರೀ ಮೊಳಕೆ ಕಾಳಿನ ಹುಳಿ. ಬಸ್ಸಾರು ಚೆಂದವೇ, ಅದರ ಜೊತೆಗೆ ಸೊಪ್ಪಿನ ಬಳಕೆ ಇನ್ನೂ ಚಂದ. ಉರಿದ ಹುರುಳಿಕಾಳಿನ ಬೆಂಗಳು ಮಹಾಚಂದ.

ತಂಗಳು ಸಾರಿನ ಸಂಭ್ರಮ : ಹುರುಳಿಕಾಳಿನ ಬಸ್ಸಾರು ತಂಗಳಾದರೆ ಅದರ ರುಚಿ ಅನೂಹ್ಯ. ನಾಲ್ಕಾರು ದಿನ ಈ ಸಾರನ್ನು ಕುದಿಸಿಟ್ಟುಕೊಳ್ಳಬಹುದು. ದಿನಕ್ಕೊಂದು ರುಚಿ. ಕಾಯಿತುರಿ, ಈರುಳ್ಳಿ ಹಾಕಿ ಕುದಿಸಿದ ಸಂಪತ್ತು ರೊಟ್ಟಿ ಜೊತೆ ಬಲು ಮಜ. ತೆಕ್ಕೆ ರೊಟ್ಟಿಗಳು ಸಾಕಾಗುವುದಿಲ್ಲ.

ಅನ್ನಗೊನೆ ಸೊಪ್ಪಿನ ಬಸ್ಸಾರು

ಸೊಪ್ಪುಗಳೆಲ್ಲಾ ಹೆಚ್ಚುಗಾರಿಕೆ ಸೊಪ್ಪು ಈ ಅನ್ನಗೊನೆ ಸೊಪ್ಪು ಇದು ಲೋಕಾನುಭವದ ಮಾತು. ಇದನ್ನು ಹೊನ್ನಗೊನೆ ಸೊಪ್ಪು ಎಂದು ಕರೆಯುವರು. ಮುಂಗಾರು ಕಳೆದು ಹಿಂಗಾರಿನ ಆರಂಭಕಾಲಕ್ಕೆ ಅನ್ನಗೊನೆ ಕುಡಿಯೊಡೆದು ಹಬ್ಬತೊಡಗುತ್ತದೆ. ಕೆರೆಯ ಅಂಗಳದಲ್ಲಿ ಇದು ಕುಣಿದು ಕುಪ್ಪಳಿಸುತ್ತದೆ. ಕೆರೆಗೆ ನೀರು ತುಂಬಿದಂತೆ ಏರಿದಡದಲ್ಲಿ ನೆಲಕತ್ನಾಗಿ ತಾವು ಮಾಡಿಕೊಂಡು ಬೆಳೆಯುತ್ತದೆ. ಇಂಥ ಸೊಪ್ಪಿನ ಕುಡಿಯನ್ನು ಹುಡುಕಿಕೊಂಡು ಹೊರಡುವ ಹೆಂಗಸರಿಗೆ ಈ ಸೊಪ್ಪಿನ ರುಚಿಯ ಬಗೆಗೆ ಆಳವಾದ ಅರಿವಿದೆ.

ಅನ್ನಗೊನೆ ಸೊಪ್ಪನಲ್ಲಿ ಬಲಿತದ್ದು, ಎಳೆಯದು ಎಂಬ ಭೇದವಿಲ್ಲ. ಅತಿ ಆಸೆಯ ಜನ ಅದರ ಬೇರಗೆಡ್ಡೆಯನ್ನು ಬಿಡದೆ ಎಬ್ಬುವುದೂ ಇದೆ. ಬೆಣ್ಣೆಯಂಥ ಅದರ ರುಚಿಯೇ ಅದಕ್ಕೆ ಕಾರಣ. ಅಜ್ಜಿಯಂದಿರು ಸಂಜೆ ಅಡ್ಡಾಡಿಕೊಂಡು ತಮ್ಮ ಮಡಿಲು ತುಂಬಿ ತರುವ ಈ ಸೊಪ್ಪನ್ನು ಅಂದು ರಾತ್ರಿಯೇ ಬಸ್ಸಾರು ಮಾಡಿಕೊಂಡು ಉಣ್ಣುವ ಸೊಬಗು ಹೇಳಲಸದಳ. ಹೆಸರುಕಾಳು-ಅನ್ನಗೊನೆ ಜೋಡಿ ಅತ್ತ್ಯುತ್ತಮವಾದದ್ದು.

ಅನ್ನಗೊನೆ ಸೊಪ್ಪು

ಅನ್ನಗೊನೆ ಸೊಪ್ಪು ಕಣ್ಣಿಗೆ ಒಳ್ಳೆಯದು ಎಂಬುದನ್ನು ಹೇಳಲು ಒಂದು ಕತೆಯೇ ನಮ್ಮಲ್ಲಿ ಹುಟ್ಟಿಕೊಂಡಿದೆ. ಆ ಕತೆ ಹೀಗಿದೆ.

ಒಂದು ಅಜ್ಜಿಯನ್ನು ಆ ಮನೆಯ ಜನಸರಿಯಾಗಿ ನೋಡಿಕೊಳ್ಳದ್ದರಿಂದ ಆ ಅಜ್ಜಿ ಕಣ್ಣುಹೋದವಂತೆ. ಆಗ ಆ ಅಜ್ಜಿ ನೋಡಿಕೊಳ್ಳುವುದು ಮನೆಯ ಜನಕ್ಕೆ ಇನ್ನೂ ಕಷ್ಟವಾಯಿತಂತೆ. ಏನು ಮಾಡುವುದೆಂದು ಗೊತ್ತಾಗದೆ ಗೊನಗತೊಡಗಿದರು. ಅಜ್ಜಿಯೇ ಒಂದು ಸಲಹೆ ಕೊಟ್ಟಿತು “ಅನ್ನಗೊನೆ ಸೊಪ್ಪಿನ ಸಾರನ್ನು ಎಂಟುದಿನ ಮಾಡಿ ಇಡ್ರವ್ವಾ” ಹಾಗೇ ಅವರು ಮಾಡಿ ಅಜ್ಜಿಗೆ ಇಡಲಾಗಿ ಕಣ್ಣುಬಂದವು.

ಕಡ್ಲೆ ಕುಡಿ ಸಾರು : ಬುಡ್ಡ ಕಡ್ಲೆಯು ಹಿಂಗಾರಿನ ಕೊನೆಯ ಮಳೆಯ ಹದಕ್ಕೆ ಹೊಲಗದ್ದೆಗಳಲ್ಲಿ ಬಿತ್ತಲ್ಪಡುತ್ತದೆ. ಇಬ್ಬನಿಗೇ ಪಸಲುಕೊಡುವ ಗಿಡ. ಇಂಥ ಕಡ್ಲೆಗಿಡದ ಜಾತ್ರೆಯು ಹೊಲಗದ್ದೆಗಳಲ್ಲಿ ಕುಡಿಯಾಡುವ ಹೊತ್ತಲ್ಲಿ ಕುಡಿಯನ್ನು ಜಿಗುಟಿಕೊಂಡುಬಂದು ಮಸೊಪ್ಪು ಮಾಡಿದರೆ ಸಾರಿನ ಸಂಭ್ರಮ ಊರೆಲ್ಲಾ ಹಬ್ಬುತ್ತದೆ.

ನೆಗ್ಗಿಲು ಕುಡಿ ಸಾರು : ಕಡ್ಲೆ ಜಾತಿಗೆ ಸೇರುವ ಆದರೆ ಕಡ್ಲೆಗೆ ಬದಲು ಮುಳ್ಳನ್ನು ಬಿಡುವ ಆನೆ ನೆಗ್ಗಿಲು ಗಿಡದ ಕುಡಿಯ ಸಾರು ಇದು. ಅದರ ಹೂವು ನೋಡಿದರೆ ಹಳದಿ ನಕ್ಷತ್ರದಂತೆ ಹೊಳೆಯುತ್ತಿರುತ್ತವೆ. ಇದೇ ಹೂವು ಆನೆಯನ್ನೂ ಅಳ್ಳಾಡಿಸುವ ಆನೆ ನೆಗ್ಗಿಲು ಮುಳ್ಳಿನ ತಾಯಿಯೇ ಎಂಬ ಅನುಮಾನ ಹುಟ್ಟುತ್ತದೆ. ಮುಂಗಾರು ಮಳೆಗೆ ಮುಲುಗುಟ್ಟಿ ಹಿಂಗಾರು ಮಳೆಯ ತುಂತುರು ಜೊತೆ ಸೇರಿ ಬಳ್ಳಿಯಂತೆ ಹಬ್ಬುವ ನೆಗ್ಗಿಲು ಗಿಡ ಹೊಲದ ಬದುಗಳಲ್ಲಿ ಹಳದಿ ಹೂವಿನ ಹಬ್ಬ ಮಾಡುತ್ತಿರುತ್ತವೆ. ಇದರ ಕುಡಿಯ ರುಚಿ ಉಂಡು ಹದ ಕಂಡವರು ಎಳೆಯ ಕುಡಿಗಳನ್ನು ಜಿಗುಟಿಕೊಂಡು ಉಡಿಗೆ ಹಾಕಿಕೊಳ್ಳುತ್ತಾರೆ. ಕಡ್ಲೆಕುಡಿಯ ಸಾರಿಗಿಂತಾ ನೆಗ್ಗಿಲ ಕುಡಿಸಾರು ಬಲುಚೆಂದ ಎಂಬುದು ಅನುಭವಿಗಳ ಅಂಬೋಣ. ಹೆಸರುಕಾಳು, ತೊಗರಿಬೇಳೆ ಜೊತೆ ಈ ಸೊಪ್ಪಿನ ಬಳಕೆ ವಿಶೇಷ ರುಚಿಗೆ ದಾರಿ.

ಗಣಿಕೆ ಕುಡಿ : ಗಣಿಕೆ ಹಣ್ಣಿಗಾಗಿ ಎಂತೆಂಥ ಸಂದಿಗೊಂದಿ ಸಂಪಲುಗಳಲ್ಲಿ, ಬೇಲಿಸಾಲುಗಳಲ್ಲಿ ಪಾಳುಬಿದ್ದ ಮನೆಯ ಆಚೀಚೆಗಳಲ್ಲೆಲ್ಲಾ ಹುಡುಕಿ ಅಲೆಯುತ್ತಿದ್ದ ಬಾಲ್ಯಕಾಲದ ಪ್ರೀತಿಯು ಈಗ ಸೊಪ್ಪಿಗಾಗಿ ಉಕ್ಕುತಿದ್ತೆ. ಕಪ್ಪುಗಣಿಕೆ ಮತ್ತು ತುಪ್ಪದ ಗಣಿಕೆ ಸೊಪ್ಪು ಮಸೊಪ್ಪಿಗೆ ಚೆಂದ. ಈ ಗಿಡಗಳ ಕಾಯಿಯನ್ನು ಸೇರಿಸಿ ಸಾರು ಮಾಡಿದರೆ ಇನ್ನೂ ರುಚಿಕರವಾಗಿರುತ್ತದೆ.

ನೆಗ್ಗಿಲು ಗಿಡ

ಉಂಗುರ ಬಳ್ಳಿ ಹುಷಾರು : ಮುಂಗುರು ಬಳ್ಳಿ ಎಂದು ಕರೆಯಲ್ಪಡುವ ಉಂಗುರಬಳ್ಳಿ ಬಳಕೆ ಈಗ ಅಪರೂಪವಾಗಿದೆ. ಇದು ತಾನೇತಾನಗಿ ಹಬ್ಬಿ ಬೆಳೆಯುತ್ತಿದ್ದ ಬಳ್ಳಿ ಗಿಡ. ಮಳೆಗಾಲದಲ್ಲಿ ಚಿಮ್ಮಿ ಚಿಮ್ಮಿ ಬೆಳೆಯುವ ಈ ಬಳ್ಳಿ ಬೇಸಿಗೆ ಕಾಲದಲ್ಲಿ ಒಣಗಿದ ಮೈಯನ್ನು ಬಿಟ್ಟುಕೊಂಡು ಧ್ಯಾನಕ್ಕೆ ಕೂತುಬಿಡುತ್ತದೆ. ಈ ಬಳ್ಳಿಯನ್ನು ಆಡು, ದನಗಳು ತಿನ್ನುವುದಿಲ್ಲವಾದ್ದರಿಂದ ಮೊದಲ ಮಳೆ ಬಂದ ನಾಲ್ಕು ದಿನಗಳಿಗೇ ಇದರ ಅಬ್ಬ ಶುರುವಾಗುತ್ತದೆ. ನಾನು ಅವ್ವನ ಪಾಠದ ಪ್ರಕಾರ ಹೊಸದಾಗಿ ಚಿಗುರಿದ ಹೊಸ ಎಸಳುಗಳನ್ನು ಮಾತ್ರ ಕೊಯ್ದು ಒಯ್ಯುತ್ತಿದ್ದುದು ರೂಢಿಯಾಗಿತ್ತು. ಬಲಿತ ಕುಡಿಗಳೇನಾದೂ ಇದ್ದರೆ ಸೋಸಿ ತೆಗೆದು ಬಾಣಲೆಯಲ್ಲಿ ಚೆನ್ನಾಗಿ ಉರಿದು ತೆಂಗಿನಕಾಯಿ ತುರಿ, ಉಪ್ಪು, ಖಾರ, ಬೆಳ್ಳುಳ್ಳಿಗಳೊಂದಿಗೆ ತಿರುವಿ ವಗ್ಗರಣೆ ಹಾಕಿ ಅವ್ವ ಚಟ್ನಿ ತಯಾರಿಸುತ್ತಿತ್ತು. ರಾಗಿ ಮತ್ತು ಜೋಳದ ರೊಟ್ಟಿಗೆ ಚಂದ. ಅನ್ನಕ್ಕೆ ಕಲಸಿಕೊಂಡು ತಿನ್ನಬಹುದು. ಈ ಬಳ್ಳಿಗೆ ಅನೇಕ ಬಗೆಯ ಆಲರ್ಜಿಗಳನ್ನು ಹೋಗಲಾಡಿಸುವ, ರಕ್ತಶುದ್ಧಿಗೊಳಿಸುವ ಗುಣವಿದೆ ಎಂದು ನಂಬುವ ಜನರಿದ್ದಾರೆ. ಇದರ ರುಚಿಗೆ ಮಾರುಹೋಗಿ ಹುಡುಕಿಕೊಂಡು ಅಲೆಯುವರೂ ಇದ್ದಾರೆ.

ಈ ಬಳ್ಳಿಯಲ್ಲಿ ಚಟ್ನಿ ಅಥವಾ ಮಸೊಪ್ಪಿನ ಬಜ್ಜಿ ಮಾಡುವವರು ಬಲಿತಬಳ್ಳಿ ಬಳಸಲೇಬಾರದು, ಎಳೆಯ ಕುಡಿಗಳನ್ನೆ ಬಳಸಬೇಕು. ನಾರು ತೆಗೆಯುವಾಗಲೂ ಹುಷಾರಾಗುರಬೇಕು. ಚೆನ್ನಾಗಿ ಉರಿದರೇ ಇದನ್ನು ಬಳಸುವಂತೆಯೇ ಇಲ್ಲ. ಹಸಿಯಾಗಿ ಬಳಸಿದರೆ ಕೈಬಾಯಿಗಳು ಅಪಾರ ನವೆಗೆ ತುತ್ತಾಗುವುದು ನಿಜ.

ಕೆಸವೆ ದಂಟಿನ ಪದಾತ : ಕೆಸರು ದಂಟು, ಕಸವೆದಂಟು ನಮ್ಮ ಬಯಲುಸೀಮೆ ಪ್ರದೇಶದಲ್ಲಿ ತುಂಬಾ ಅಪರೂಪದ ವಸ್ತು. ನಮ್ಮೂರ ಸುತ್ತ ಎಲ್ಲೇ ಪರೇವು ಮಾಡಲಿ ಹುಡುಕಿಕೊಂಡು ಹೋಗಿ ಕೆಸರುದಂಟನ್ನು ತಂದು ಪದಾತಕ್ಕೆ ಹಾಕುತ್ತಾರೆ. ಮಾಮೇರಿ ರುಚಿಯ ಸಾರು ಪರೇವಿನಲ್ಲಿ ಉಂಟಾದರೆ ಅದಕ್ಕೆ ಮುಖ್ಯಕಾರಣ ಈ ಕೆಸರು ದಂಟೇ. ಇದು ಪರೇವಿನ ಬೆರಕೆ ಸಾರಿನೊಳಗೆ ಸೇರಿ ಪಡೆದ ಕೀರ್ತಿಯಾಯಿತು. ಆದರೆ ಈ ಕೆಸರುದಂಟನ್ನು ಬಳಸಿ ಕಡ್ಲೆಕಾಳಿನೊಂದಿಗೆ ಪ್ರತ್ಯೇಕವಾಗಿ ಸಾರು ಮಾಡಿದಾಗಲೂ ಇದರ ರುಚಿ ಕಡಿಮೆಯಲ್ಲ. ಎಳೆಯ ದಂಟನ್ನು ತುಂಡು ಮಾಡುತ್ತಾ ನಾರು ತೆಗೆದು ಹಾಕಿ ಬೇಯಿಸಿ ನೀರು ಈಚೆಗೆ ಚೆಲ್ಲಿದ ನಂತರವೇ ಸಾರಿಗೆ ಬಳಸಬೇಕು. ಇಲ್ಲದಿದ್ದರೆ ಮಾಮೇರಿ ನವೆ ಗಂಟಲಲ್ಲಿ ಉಂಟಾಗುವುದು ಸತ್ಯ. ತುಂಡು ಮಾಡಿ ನಾರು ತೆಗೆಯುವಾಗಲೂ ಅಷ್ಟೇ ಹುಷಾರಾಗಿರಬೇಕು. ಆದ್ದರಿಂದ ಈ ಕೆಸರುದಂಟನ್ನು ಹಸಿಯಾಗಿ ಬಳಸುವುದು ನಿಷಿದ್ಧ.

ಶಂಬೆ ಕಾಯಿ ಬಸ್ಸಾರು : ಬೈಫ್ ಸಂಸ್ಥೆಯ ಮೂಲಬೀಜಗಳ ಹುಡುಕಾಟದ ನೆಪವಾಗಿ ಒಂದು ಜಾತಾ ಮಾಡಿತು. ಆ ಜಾತಾದಲ್ಲಿ ನಾನೂ ಹಳ್ಳಿ ತಿರುಗುತ್ತಿದ್ದಾಗ ಪರಿಚಯವಾದ ಬೀಜ ಶಂಬೆ ಬೀಜ. ಶಂಬೆಯಲ್ಲಿ ಬಿಳಿಶಂಬೆ, ಕೆಂಪುಶಂಬೆ ಎಂದು ಎರಡು ಜಾತಿ. ಬಿಳಿ ಶಂಬೆಯು ಗಿಡದ ರೂಪದಲ್ಲಿ ಪುದೆಯಾಗಿ ಹಬ್ಬುತ್ತದೆ. ಕೆಂಪುಶಂಬೆ ಬಳ್ಳಿಯಾಗಿ ಹಬ್ಬಿ ಬೆಳೆಯುತ್ತದೆ. ಏಕರೂಪೀ ಕೃಷಿಗೆ ಮುನ್ನ ರಾಗಿಹೊಲಕ್ಕೆ ಹೊಂದಿಕೊಂಡ ಮೆಣಸಿನ ಗಿಡಗಳ ತಾಕಲ್ಲಿ ಗೆಣಸು, ಬದನೆ, ಟೊಮೋಟೋ, ಗೋರಿ, ಈರೆ, ತುಪ್ಪೀರೆ, ಮೂಲಂಗಿ ಮುಂತಾದವುಗಳ ಜೊತೆಯಲ್ಲೇ ಈ ಶಂಬೆಯೂ ಇರುತ್ತಿತ್ತು. ತೊಗರಿ ಗಿಡಕ್ಕೊ, ಅರಳು ಗಿಡಕ್ಕೊ ಹಬ್ಬಿ ಮೊಳದುದ್ದದ ಕಾಯಿಗಳನ್ನು ಬಿಡುತ್ತಿತ್ತು. ನಾವೀಗ ಬೋರಕ್ಕಜ್ಜಿ ಬೀಜ ಬ್ಯಾಂಕಿನ ಮೂಲಕ ಊರಿಗೆಲ್ಲಾ ಬೀಜ ಹಂಚಿ ಬೆಳೆಸಿದ್ದೇವೆ. ನಾಪತ್ತೆಯಾಗಿದ್ದ ಶಂಬೆ ಈಗ ಊರ ತುಂಬಾ ಆಗಿದೆ. ಬಳುಕುವ ಎಳೆ ಕಾಯಿಗಳನ್ನು ಸಾರಿಗೆ ಬಳಸಬೇಕು. ಸ್ವಲ್ಪ ಬಲಿತರೂ ಅವುಗಳನ್ನು ಬೀಜಕ್ಕೆ ಬಿಡುವುದು ಲೇಸು. ಬೆಣ್ಣೆಯಂತೆ ಬೇಯುವ ಶಂಬೆಯನ್ನು ಹಸಿಯಾಗಿಯೂ ತಿನ್ನಬಹುದು. ಎರಡುಮೂರು ವರ್ಷ ಸದಾ ಕಾಲವೂ ಪಸಲುಕೊಡುತ್ತಲೇ ಇರು ಶಂಬೆ ಅಪರೂಪದ ತರಕಾರಿ ಗಿಡ.

ನೆಲಗುಳ ಕಾಯಿಯ ಕತೆ : ದುಂಡ ಎಂಬ ಊರಿನ ಏರಿ ಮೇಲೆ ಇಂಥದೇ ಹುಡುಕಾಟದಲ್ಲಿ ಓಡಾಡುತ್ತಿದ್ದೆ. ಹೇಮಾವತಿ ನೀರಿನ ಕರುಣೆಯಿಂದ ಆ ಪುಟ್ಟ ಕೆರೆಯು ತುಂಬಿ ತುಳುಕುತ್ತಿತ್ತು. ಏರಿಮೇಲೆ ಕಂಡ ನೆಲಗುಳಕಾಯಿಯ ಗಿಡದಲ್ಲಿ ಕಾಯಿ ತುಂಬಿರಬಹುದೇ ಎಂದು ಗಿಡದೊಳಕ್ಕೆ ಕಣ್ಣುಬಿಟ್ಟು ಹುಡುಕತೊಡಗಿದೆ. ಕಾಣಲಿಲ್ಲ. ಯಾವುದೇ ಗಿಡ ಕಾವು ಕೂತು ಬಸುರಾಗಿ ಫಲ ತುಂಬುವ ಕಾಲವಲ್ಲವೆಂಬ ಅನುಮಾನದಿಂದ ನೆಲಕತ್ನಾಗಿ ಮಲಗಿದ್ದ ಗಿಡದ ಸೆರಗು ಎತ್ತಲು ಕೈ ಹಾಕಿದೆ, ಕೆಣಕಿದ ನಾಗರ ಹಾವಿನಂತೆ ಕಟ್ ಎಂದು ಕಚ್ಚಿತು.

ನೆಲಗುಳಕಾಯಿಯ ಗಿಡ ತನ್ನ ಮೈತುಂಬಾ ಮುಳ್ಳು ಹೊದ್ದು ಮಲಗಿರುತ್ತದೆ. ಆಡು, ಕುರಿ, ದನಗಳು ಕೊನೆಗೆ ಕತ್ತೆ ಇವ್ಯಾವುವು. ಬಾಯಿ ಹಾಕದಂತೆ ಈ ಮುಳ್ಳಿನ ತಂತ್ರ ಅಳವಡಿಸಿಕೊಂಡಿರುತ್ತದೆ. ಈ ಸಲ ಹುಷಾರಾಗಿ ನೆಲದಲ್ಲಿ ಹಬ್ಬಿದ್ದ ಇಲಕುಗಳನ್ನು ಹಿಡಿದೆತ್ತಿದೆ, ಎಲೆಯಡಿಯಲ್ಲಿ ಅವಿತ ಹತ್ತಾರು ಕಾಯಿಗಳು ನನ್ನತ್ತ ಇಣುಕಿದವು. ಇದು ಹಸಿರು ನೆಲಗುಳಕಾಯಿ ಗಿಡ, ನನಗೆ ಬೇಕಾಗಿದ್ದುದೂ ಇದೆ. ಬಿಳಿನೆಲಗುಳಕಾಯಿಯನ್ನು ಅಷ್ಟಾಗಿ ತಿನ್ನಲು ಬಳಸುವುದಿಲ್ಲ. ಔಷಧಿಗೆ ಬಳಸುತ್ತಾರೆ.

ಕಲ್ಲಿನಂತಾ ನೆಲಗುಳಕಾಯಿಯ ತುಂಬಾ ಬೀಜವೇ ಬೀಜ. ಬೀಜ ಸಾಮ್ರಾಜ್ಯ ಎನ್ನಬೇಕು. ಬೀಜ ತಿನ್ನಲಾಗದು, ತುಂಬಾ ಕಹಿ, ತೊಗಟೆಯಷ್ಟೇ ತಿನ್ನಲು ಯೋಗ್ಯ. ಹುರುಳಿಕಾಳಿನೊಂದಿಗೆ ಹಾಕಿ ಸಾರು ಮಾಡುವುದು ರೂಢಿ. ನೆಲಗುಳಕಾಯಿ ಒಳಗಿನ ಬೀಜ ತೆಗೆಯುವುದಕ್ಕೆ “ಕಿಸುರು ಹೊರಡಿಸುವುದು” ಎಂಬ ಪದ ಬಳಕೆಯಲ್ಲಿದೆ.

ಹುಣಿಸೆ ಕುಡಿ ಸಾರು : ಎಲೆಯುದರಿ ಕುಡಿಯೊಡೆದು ಚಿಗುರುವ ಕಾಲದಲ್ಲಿ, ಹುಣಿಸೆ ಕುಡಿ ಸಾರು ಮಾಡುವ ಕಲೆಯೊಂದು ರೂಢಿಯಲ್ಲಿದೆ. ಅವರೆಬೇಳೆ ಜೊತೆ ಹುಣಿಸೆಕುಡಿ ಚೆನ್ನಾಗಿ ಹೊಂದುತ್ತದೆ.

ಬ್ಯಾಟೆ ಮೊಗ್ಗಿನ ಸಾರು : ವರ್ಷಕ್ಕೊಮ್ಮೆಯಾದರೂ ಬ್ಯಾಟೆ ಮೊಗ್ಗಿನ ಸಾರು ಉಂಡರೆ ಯಾವ ಕಾಯಿಲೆ ಹತ್ತಿರ ಸುಳಿಯುವುದಿಲ್ಲವೆಂಬ ನಂಬಿಕೆಯಿಂದ, ಅವರೆಬೇಳೆ ಅಥವಾ ತೊಗರಿ ಬೇಳೆಯೊಂದಿಗೆ ಸಾರು ಮಾಡಿ ಉಣ್ಣುವ ರೂಢಿ ಇತ್ತೀಚಿನವೆಗೂ ಇತ್ತು. ನಾಲ್ಕಾರು ಬಾರಿ ಭೇದಿಯಾಗಿ ಯಥಾಪ್ರಕಾರ ಮೊದಲಿನ ಸ್ಥಿತಿಗೆ ಬರಲು ಈ ಬ್ಯಾಟೆ ಮೊಗ್ಗು ಸಹಾಯಮಾಡುತ್ತದೆ.

ಉಪ್ಪು ಸಾರು

ಬೆರಕೆ ಸೊಪ್ಪಿನ ಸಾರು : ಒಂದಲ್ಲ ಎರಡಲ್ಲ ಹತ್ತಾರು ಬಗೆ ಸೊಪ್ಪುಗಳನ್ನು ಬೆರಸಿ ಮಾಡುವ ಸಾರು ಇದು. ಜನಪದ ಲೋಕದ ವಿಸ್ಮಯಗಳಲ್ಲಿ ಇದೂ ಒಂದು. ಎಕ್ಕದ ಕುಡಿ, ಬೇವಿನ ಕುಡಿಗಳೂ ಈ ಬೆರಕೆ ಸೊಪ್ಪಿನಲ್ಲಿ ಸೇರಿವೆ ಎಂದರೆ ಸ್ವಲ್ಪ ಆಶ್ಚರ್ಯಪಡಿ.

ಉಪ್ಪು ಸಾರು : ಹಸಿ ಅವರೆಕಾಳು, ಅಲಸಂದೆ, ಹಸಿ ತರುಣಿಕಾಳು, ಕಡ್ಲೆಕಾಳು, ಹುರುಳಿಕಾಳು, ತೊಗರಿಕಾಳು ಮುಂತಾದ ಉಂಡೆಗಾಳು ಬಳಸಿ ಮಾಡುವ ಸಾರು. ಉಣ್ಣುವವರ ತಾಕತ್ತಿಗನುಗುಣವಾಗಿ ಕಾರ, ಉಪ್ಪು, ಹುಳಿ ಬೆರಸಿಕೊಳ್ಳಲು ಅವಕಾಶ ನೀಡುವ ಸಾರಿದು.

ಇನ್ನಿತರ ಸಾರುಗಳು : ಹಿಸಗವರೆ ಸಾಂಬ್ರ, ಹಸಿಅವರೆಕಾಳು ಹುಳಿ, ದೇವದಾರೆ ಕುಡಿಸಾರು, ನುಗ್ಗೆಸೊಪ್ಪಿನ ಬಸ್ಸಾರು, ನುಗ್ಗೆ ಹೂವಿನ ಸಾರು, ಎಮ್ಮೆರೊಡ್ಡಿಸೊಪ್ಪು ಹುರುಳಿಕಾಳು ಬಸ್ಸಾರು, ಅಣಬೆ ಸಾರು, ಜಿಮ್ಮಿಕಾಯಿಸಾರು, ಪರಂಗಿಕಾಯಿ ಸಾರು, ಕಾಡುತುಂಬೆ ಸೊಪ್ಪಿನ ಸಾರು, ದಾಗಡಿ ಸೊಪ್ಪಿನ ಬಸ್ಸಾರು, ಹಕ್ಕಿಮರಿ ಸೊಪ್ಪು, ಹೆಸರುಕಾಳು ಬಸ್ಸಾರು, ಅಣ್ಣೆಸೊಪ್ಪಿನ ಹುಳಿಸೊಪ್ಪು, ಕೊಮ್ಮೆಸೊಪ್ಪಿನ ಸಾರು, ಮಜ್ಜಿಗೆ ಸಾರು, ಅಡ್ಲುಕಾಯಿ ಸಾರು, ಅಣ್ಣೆಸೊಪ್ಪು ಹೆಸರುಕಾಳು ಸಾರು, ಜಿಗುಟುಮಲ್ಲಿಗೆ ಸೊಪ್ಪಿನ ಸಾರು, ಕುಂಬಳಕುಡಿ ಅವರೆಬೇಳೆ ಸಾರು, ಬಸ್ಸಾರು, ಅಗಸೆಸೊಪ್ಪಿನ ಸಾರು, ಆಲೆ, ಕಿರಕಲ, ಕಾರಮಣಿ, ಅರಿವೆ, ಕುಯ್ಕ, ಕೀರೆ, ದಂಟು, ಸುಕ್ಕಿ, ಚಕ್ಕೋತನೆ, ತಾಡಗುಣಿ ಮುಂತಾದ ಸೊಪ್ಪಿನ ಸಾರು, ದನದ ಬಾಡಿನ ಸಾರು, ಹಂದಿ ಬಾಡಿನ ಸಾರು, ಕುರಿ ಬಾಡಿನ ಸಾರು, ಕೋಳಿ ಸಾರು, ಮೀನು ಸಾರು, ಏಡಿ ಸಾರು, ಮೊಲದ ಮಾಂಸದ ಸಾರು, ಕಾಡುಕೋಳಿ ಸಾರು, ಆಮೆ ಮಾಂಸದ ಸಾರು, ಹೊಲದ ಇಲಿ ಸಾರು, ಅಳಿಲು ಸಾರು, ಕಾಡುಬೆಕ್ಕಿನ ಸಾರು.

ಮುದ್ದೆ : ರಾಗಿ ಮುದ್ದೆ, ಜೋಳದ ಮುದ್ದೆ, ಅಕ್ಕಿನುಚ್ಚು ಮುದ್ದೆ, ಗೋಧಿಮುದ್ದೆ.

ರೊಟ್ಟಿ : ರಾಗಿ ರೊಟ್ಟಿ, ಜೋಳದ ರೊಟ್ಟಿ, ಅಕ್ಕಿರೊಟ್ಟಿ, ಗೋಧಿರೊಟ್ಟಿ, ನವಣೆರೊಟ್ಟಿ, ಸಜ್ಜೆರೊಟ್ಟಿ.

ಅನ್ನ; ನೆಲ್ಲಕ್ಕಿ, ಹಾರದಕ್ಕಿ, ಸಾವಕ್ಕಿ, ನವಣೆಅಕ್ಕಿ

ಸೀಪರು (ಸಿಹಿಗಳು) : ಗಟ್ಟಕ್ಕಿ ಪಾಯಸ, ಹೆಸರುಬೇಳೆ ಪಾಯಸ, ರವೆ ಪಾಯಸ, ಗೋಧಿ ಪಾಯಸ, ರಾಗಿ ಕೀರು, ಕಡ್ಲೆಬೇಳೆ ಪಾಯಸ, ಹಾಲು ಕೀರು, ಕಿಚಡಿ, ಒಡ್ರಾಗಿ ಶಾವಿಗೆ, ಅಕ್ಕಿ ಶಾವಿಗೆ, ತೊಗರಿಬೇಳೆ ಒಬ್ಬಟ್ಟು, ಕಡ್ಲೆಬೇಳೆ ಒಬ್ಬಟ್ಟು, ಕಾಯಿ ಒಬ್ಬಟ್ಟು, ಎಳ್ಳು ಒಬ್ಬಟ್ಟು, ಹುರುಳಿಕಾಳು ಒಬ್ಬಟ್ಟು, ಗೆಣಸು ಒಬ್ಬಟ್ಟು, ಹುರುಳಿ ಕಾಯಿಬೆಲ್ಲ, ಅಕ್ಕಿಕಾಯಿ ಬೆಲ್ಲ, ಅವಲಕ್ಕಿ ಕಾಯಿಬೆಲ್ಲ, ಕಾಯಿ ಮಿಠಾಯಿ, ಕಡ್ಲೆ ಮಿಠಾಯಿ, ಕಡ್ಲೆಕಾಯಿ ಮಿಠಾಯಿ, ಪುರಿಉಂಡೆ, ರವೆ ಉಂಡೆ, ಕಡ್ಲೆತಮ್ಟ, ಅಕ್ಕಿತಮ್ಟ. ಎಳ್ಳುತಮ್ಟ, ಹಾಲುಂಡಿಗೆ, ಕುಂಬಳಕಾಯಿ ಸೀ ಪಲ್ಯ, ಹುರುಳಿತಮ್ಟ, ಹೆಸರುಕಾಳು ತಮ್ಟ, ಜೋಳದ ಅವಲು ತಮ್ಟ, ಕಜ್ಜಾಯ, ಒತ್ತುರೊಟ್ಟಿ, ಎಮ್ಮೆ ಹಾಲಿನ ಗಿಣ್ಣ, ಹಸುವಿನ ಹಾಲಿನ ಗಿಣ್ಣ, ಉರಿಟ್ಟು, ಹೂರಣ ಕಡುಬು.

ಪಾಯಸ

ಹಪ್ಪಳ : ಹುರಳಿಕಾಳು ಹಪ್ಪಳ, ಅಕ್ಕಿ ಹಪ್ಪಳ, ಉದ್ದಿನಹಪ್ಪಳ, ರಾಗಿಹಪ್ಪಳ, ಜೋಳದ ಹಪ್ಪಳ, ಗೆಣಸಿನ ಹಪ್ಪಳ, ಹಲಸಿನಹಪ್ಪಳ, ಆಲೂಗಡ್ಡೆ ಹಪ್ಫಳ, ಬಾಳೆಕಾಯಿ ಹಪ್ಪಳ, ಹಾಗಲಕಾಯಿ ಹಪ್ಪಳ, ಕುಂಬಳಕಾಯಿ ಹಪ್ಪಳ.

ಉಪ್ಪಿನ ಕಾಯಿಗಳು : ಮಾವಿನಕಾಯಿ (ಒಣ, ಹಸಿ) ಅಮಟೆ, ಯಳ್ಳಿ, ನಿಂಬೆ, ನೆಲ್ಲಿ, ಹುಣಿಸಿ, ಮೆಣಸಿನಕಾಯಿ, ಸೊಗದೆಬೇರು, ಮಾಕಳಿ ಬೇರು, ಹಾಗಲಕಾಯಿ.

ಚಟ್ನಿಗಳು : ತೆಂಗಿನಕಾಯಿ ಚಟ್ನಿ, ಕೊಬ್ಬರಿ ಚಟ್ನಿ, ಹುಚ್ಚೆಳ್ಳು ಚಟ್ನಿ, ಹೆಸರುಕಾಳು ಚಟ್ನಿ, ಹುಣಿಸೆಚಟ್ನಿ, ನೆಲ್ಲಿಕಾಯಿ ಚಟ್ನಿ, ಮಾವಿನಕಾಯಿ ಚಟ್ನಿ, ಕಡ್ಲೆ ಚಟ್ನಿ, ಹುರುಳಿಕಾಳು ಚಟ್ನಿ, ಟೊಮೇಟೋ ಕಾಯಿ ಚಟ್ನಿ, ಬೆಂಡೆಕಾಯಿ ಚಟ್ನಿ, ಬದನೆಕಾಯಿ ಚಟ್ನಿ, ಗೊಡ್ಡುಗಾರದ ಚಟ್ನಿ, ಮಜ್ಜಿಗೆ ಮೆಣಸಿನಕಾಯಿ ಚಟ್ನಿ, ಹುಳಿಲಿ ಬೇಯಿಸಿದ ಮೆಣಸಿನಕಾಯಿ ಚಟ್ನಿ.

ಬಜ್ಜಿಗಳು (ಹಸಿ ಸಾರುಗಳು) : ಬದನೆಕಾಯಿ ಬಜ್ಜಿ, ತೆಂಗಿನಕಾಯಿ ಬಜ್ಜಿ, ಜಜ್ಜ ಮೂಲಂಗಿಬಜ್ಜಿ, ಹುಣಸೆಹುಳಿ, ಮೊಸರು ಬಜ್ಜಿ,

ಗೊಜ್ಜು : (ಹುಳಿಸ್ವಾದದ ಪರಿಕರ) ಮಾವಿನಕಾಯಿ ಗೊಜ್ಜು ಹುಣಿಸೆಕಾಯಿ ಗೊಜ್ಜು, ಮೆಣಸಿನಕಾಯಿ ಗೊಜ್ಜು, ಯಳ್ಳಿಕಾಯಿ ಗೊಜ್ಜು, ನಿಂಬೆಕಾಯಿ ಗೊಜ್ಜು.

ಬೆಂಗಳು : (ಹುರಿದ ಕಾಳುಗಳನ್ನು ಬೇಯಿಸಿ ಮಾಡುವ ಸಾರು) ಕಡ್ಲೆಕಾಳು ಬೆಂಗಳು, ಅವರೆಕಾಳು ಬೆಂಗಳು, ಹೆಸರುಕಾಳು ಬೆಂಗಳು, ಬೆರಕೆಕಾಳು ಬೆಂಗಳು, ಅಲಂಸಂದೆ, ತರುಣಿಕಾಳು ಬೆಂಗಳು.

ಅಂಬಲಿಗಳು : ರಾಗಿಅಂಬಲಿ, ಅಕ್ಕಿಅಂಬಲಿ, ಜೋಳದಅಂಬಲಿ, ರವೆಅಂಬಲಿ.

ತಾಳ್ಳು : (ತರಕಾರಿ, ಕಾಳುಗಳನ್ನು ಬಳಸಿ ಮಾಡುವ ಪಲ್ಯಗಳು) ಬದನೆಕಾಯಿ ತಾಳ್ಳು, ಟೊಮೇಟೋ, ಗೋರಿ, ಶಂಬೆ, ಹಿತ್ತಲವರೆ, ಅವರೆಕಾಳು, ಬೆರಕೆ ತರಕಾರಿ ಮತ್ತು ಬೆರಕೆ ಕಾಳು ಬೆರೆತ ತಾಳ್ಳು, ಪರಂಗಿಕಾಯಿ ತಾಳ್ಳು, ಹಲಸಿನಕಾಯಿ ತಾಳ್ಳು, ಕುಂಬಳಕಾಯಿ ತಾಳ್ಳು, ಹಾಗಲಕಾಯಿ ತಾಳ್ಳು, ಹೀರೇಕಾಯಿ ತಾಳ್ಳು.

ದೋಸೆಗಳು : ಅಕ್ಕಿದೋಸೆ, ರವೆದೋಸೆ, ರಾಗಿದೋಸೆ, ಗೋಧಿದೋಸೆ, ಎಳೆತೆಂಗಿನಕಾಯಿ ನೀರುದೋಸೆ, ನುಗ್ಗೆಸೊಪ್ಪಿನ ದೋಸೆ, ಚುರುಕಿನ ಸೊಪ್ಪಿನದೋಸೆ, ದಾಸವಾಳದ ಸೊಪ್ಪಿನ ದೋಸೆ, ಚಕ್ರಮುನಿಸೊಪ್ಪಿನ ದೋಸೆ, ಮೆಂತ್ಯಾ ದೋಸೆ, ಹೆಸರುಕಾಳು ದೋಸೆ.

ಮುದ್ದೆ

ಇಡ್ಲಿಗಳು : ರಾಗಿ ಇಡ್ಲಿ, ಅಕ್ಕಿ ಇಡ್ಲಿ, ರವೆ ಇಡ್ಲಿ, ಜೋಳದ ಇಡ್ಲಿ, ಈರುಳ್ಳಿ ಕಡ್ಲೆಬೇಳೆ ಇಡ್ಲಿ, ಸಪ್ಪಸೀಗೆ ಇಡ್ಲಿ, ಮೊಸರು ಇಡ್ಲಿ (ಎಲ್ಲಾ ತಟ್ಟೆ ಇಡ್ಲಿಗಳು).

ಬೋಂಡಗಳು : (ಕಡ್ಲೆಹಿಟ್ಟು) ಈರುಳ್ಳಿ ಬೋಂಡ, ನುಗ್ಗೆಸೊಪ್ಪಿನ ಬೋಂಡ, ಬಾಳೆಕಾಯಿ ಬೋಂಡ, ಹೀರೇಕಾಯಿ ಬೋಂಡ, ಆಲೂಗೆಡ್ಡೆ ಬೋಂಡ, ಕಾರೇಕುಡಿ ಬೋಂಡ, ದಾಗಡಿಸೊಪ್ಪಿನ ಬೋಂಡ, ಮೆಣಸಿನಕಾಯಿ ಬೋಂಡ, ಉದ್ದಿನ ಬೋಂಡ.

ತಣ್ಣನೆಯ ಪಾನಕಗಳು : (ಬೆಲ್ಲ, ಜೇನುತುಪ್ಪ, ಸಕ್ಕರೆ ಬೆರಸಿದವು) ಬೆಲ್ಲದ ಪಾನಕ, ಜೇನು ಪಾನಕ, ನಿಂಬೆ ಪಾನಕ, ಯಳ್ಳಿ ಪಾನಕ, ಬೆಲವತ್ತೆ ಪಾನಕ, ಸೊಗದೆ ಬೇರಿನ ಪಾನಕ, ನೇರಳೆಹಣ್ಣಿನ ಪಾನಕ, ಮಾವಿನಹಣ್ಣಿನ ಪಾನಕ, ಮಾವಿನಕಾಯಿ ಪಾನಕ, ಹುಣಿಸೆಹಣ್ಣಿನ ಪಾನಕ, ಮಜ್ಜಿಗೆ, ಲಸ್ಸಿ.

ಬಿಸಿ ಕಷಾಯಗಳು : (ಬೆಲ್ಲ ಅಥವಾ ಜೇನುತುಪ್ಪ ಅಥವಾ ಸಕ್ಕರೆ, ನಿಂಬೆರಸ ಬೆರಸಿದವು) ಬೂದುಗುಂಬಳದ ಪಾನಕ, ನೆಲ್ಲಿಪಾನಕ, ಕಬ್ಬಿನರಸ, ಶುಂಠಿ ಕಷಾಯ, ಮೆಣಸಿನ ಕಷಾಯ, ಜೀರಿಗೆ ಕಷಾಯ, ತಂಗಡೆಹೂವಿನ ಕಷಾಯ, ದಾಸವಾಳದ ಹೂವಿನ ಕಷಾಯ, ಗೌರಿಹೂವಿನ ಕಷಾಯ, ಮಜ್ಜಿಗೆ ಹುಲ್ಲಿನ ಕಷಾಯ, ಪುದಿನಾ ಕಷಾಯ, ದಾಳಿಂಬೆ ಎಲೆ ಕಷಾಯ, ನೆಲವರಿಕೆ ಸೊಪ್ಪಿನ ಕಷಾಯ, ಅಮೃತಬಳ್ಳಿ ಕಷಾಯ, ಟೀ ಕಷಾಯ, ಕಾಫಿ ಕಷಾಯ, ದೊಡ್ಡಪತ್ರೆ ಕಷಾಯ, ಕೊತ್ತಬಂರಿ ಬೀಜದ ಕಷಾಯ.

ನೀರು : ಮಳೆ ನೀರು, ನದಿ ನೀರು, ಬಾವಿ ನೀರು, ಅರವಿ ನೀರು, ಲಾವಂಚದ ನೀರು, ತುಳಸಿ ನೀರು, ನಿಂಬೆ ನೀರು, ಜೇನು ನೀರು, ನಿಂಬೆಹುಲ್ಲಿನ ನೀರು, ಎಳನೀರು, ತಲಪರಿಗೆ ನೀರು, ಒರತೆ ನೀರು.

ಹಣ್ಣುಗಳು : ನೇರಳೆ, ಬೆಲವತ್ತೆ, ಕಾರೆ, ಬೋರೆ (ಎರದೆ), ಹುಣಸೆ, ಸೀಬೆ, ಬಿಕ್ಕೆಹಲಸು, ಮಾವು, ಪರಂಗಿ, ದೇವದಾರೆ, ಗಣಿಕೆ, ಚಕೋತ, ಕಿತ್ತಳೆ, ಕಮಟೆ, ಕೆಕ್ಕರಿಕೆ, ಕವಳೆ, ಪನ್ನೇರಳೆ, ಹತ್ತಿ, ಅಂಜೂರ, ಸೀತಾಫಲ, ರಾಮಫಲ.

ಹಲ್ಲುಜ್ಜಲು ಬಳಸುವ ಪರಿಕರಗಳು : ಹಸಿಬೇವಿನ ಕಡ್ಡಿ, ಬೇವಿನ ಚಕ್ಕೆ ಪುಡಿ, ಹಸಿ ಹೊಂಗೆ ಕಡ್ಡಿ, ಲೋಳೆಸರ, ತುರಕತ್ತಿಹಾಲು (ಜತ್ರೋಪ) ಉಪ್ಪು, ಉಪ್ಪು-ನಿಂಬೆ, ಕುರಂಬಳೆ ಕರ್ಕು, ವೀಳ್ಯದೆಲೆ, ಜೇನುತುಪ್ಪು, ಪರಂಗಿ ಹಾಲು (ನೀರಿನ ಹನಿಜೊತೆ) ಸೌತೆಕಾಯಿ ಹಾಲು, ನೆಲ್ಲಿಕಾಯಿ ಒಣಪುಡಿ, ಅಮೃತಬಳ್ಳಿ, ಅಮೃತಬಳ್ಳಿ ರಸ, ತೆಂಗಿನಎಣ್ಣೆಸ್ನಾನಕ್ಕೆ ಬಳಸುವ ಪರಿಕರ : ಸುಟ್ಟ ಬಿಲ್ವಪತ್ರೆ ಹಣ್ಣು, ನಿಂಬೆರಸ, ಲೋಳೆಸರ (ಸ್ನಾನಕ್ಕೆ ಮುನ್ನ ಮೈಗೆ ಹಚ್ಚಿ) ಸೀಗೆಪುಡಿ, ಸುಜ್ಜಲು ಪುಡಿ, ಅಂಟುವಾಳಕಾಯಿ, ಹುತ್ತದ ಮಣ್ಣು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಎಂಥಾ ಉಪಯುಕ್ತ ಬರಹ.
    ನಮ್ಮ ಪೀಳಿಗೆಯೇ ಮರೆತಿರುವ ಹಲವಾರು ಬಗೆಯ ತಿನಿಸುಗಳು,ಸೊಪ್ಪು ತರಕಾರಿಗಳನ್ನು ಪರಿಚಯಿಸಿದ್ದೀರಿ.ಮುಂದಿನ ಪೀಳಿಗೆಗೆ ಇವನ್ನೆಲ್ಲಾ ಕೊಂಡೊಯ್ಯಲು ಈ ರೀತಿಯ ಬರವಣಿಗೆಗಳಿಂದ ಮಾತ್ರವೇ ಸಾಧ್ಯ.

    ಧನ್ಯವಾದಗಳು ಸರ್

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...