ಜೀವನ ಕಲೆಗಳು: ಅಂಕಣ-26
ಸಮಯ ನಿರ್ವಹಣೆಯ ಕಲೆ:
ದೇವರು ಪ್ರತಿಯೊಬ್ಬರಿಗೂ ಶಕ್ತಿ, ರೂಪ, ಗುಣ, ಸಂಪನ್ಮೂಲ, ಕಷ್ಟ, ಸುಖ, ಹಂಚುವಾಗ ತಾರತಮ್ಯ ತೋರಿರುವುದು ಎಲ್ಲೆಲ್ಲೂ ಎದ್ದು ಕಾಣುತ್ತದೆ. ಆದರೆ ಒಂದು ವಿಷಯದಲ್ಲಿ ಮಾತ್ರ, ಎಲ್ಲರಿಗೂ ಸರಿಸಮಾನವಾಗಿ, ದಿನಕ್ಕೆ 24 ಗಂಟೆಗಳನ್ನು ನೀಡಿರುತ್ತಾನೆ. ಯಾರಿಗೂ 25 ಗಂಟೆಯಾಗಲೀ, 23 ಗಂಟೆಯಾಗಲೀ ನೀಡಿಲ್ಲ. ಆದರಿಂದ ಸಮಯದ ಅಭಾವಕ್ಕೆ ಎಲ್ಲರೂ ತಮ್ಮನ್ನು ತಾವೇ ಹೊಣೆಗಾರರು ಎಂದು ಪರಿಗಣಿಸಬೇಕು.
ಕೆಲವರು ತಮ್ಮ ಎಲ್ಲಾ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಿ, ಹಾಯಾಗಿ ಹರಟೆ ಕೊಚ್ಚಲು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಬೇರೊಬ್ಬರ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದಕ್ಕೂ ಸಮಯ ತೆಗೆದರೆ ಇನ್ನು ಕೆಲವರಿಗೆ ಯಾವ ಕೆಲಸಕ್ಕೂ ಪುರುಸೊತ್ತು ಇರುವುದಿಲ್ಲ. ಏಕೆ ಹೀಗೆ ಎಂದು ಯೋಚಿಸಿದ್ದೀರಾ?

ಸಮಯ ಯಾವಾಗಲೂ ಒಂದೇ ಗತಿಯಲ್ಲಿ ಓಡುತ್ತದೆ. ನಿಮ್ಮ ಕೆಲಸದ ಗತಿ ಅಥವಾ ನಿಮ್ಮ ಬೇಕು-ಬೇಡದ ಪ್ರಕಾರ ಹೊತ್ತು ಹೋಗುವುದಿಲ್ಲ. ಆದ್ದರಿಂದ ನಿಮ್ಮ ಕೆಲಸ ಸಮಯದೊಳಗೆ ಮಾಡಿ ಮುಗಿಸುವುದನ್ನು ನೀವೇ ಕಲಿಯಬೇಕು. ಇದನ್ನೇ ಸಮಯ ನಿರ್ವಹಣೆ (ಟೈಂ ಮ್ಯಾನೇಜ್ಮೆಂಟ್) ಎನ್ನುತ್ತಾರೆ. ಜೀವನಾವಶ್ಯಕ ಕಲೆಗಳಲ್ಲಿ ಇದೂ ಒಂದು.
ನಮ್ಮ ಇನ್ನೊಂದು ಬಹು ದೊಡ್ಡ ಸಮಸ್ಯೆ ಕೆಲಸಗಳನ್ನು ಮುಂದೂಡುವುದು (ಪ್ರೊಕ್ರಾಸ್ಟಿನೇಷನ್). ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡದೇ, ವಿನಾಕಾರಣ ಮುಂದೂಡುತ್ತ ಹೋಗುತ್ತೇವೆ. ಅದರಿಂದ ಅವು ಮುಂದೆ ಗಂಭೀರ ರೂಪ ತಳೆದು, ನಮ್ಮನ್ನು ತೊಂದರೆಗೀಡುಮಾಡುತ್ತವೆ. ನಿಮಿಷಗಳಲ್ಲಿ ಆಗುವ ಕೆಲಸ ಗಂಟೆಗಟ್ಟಲೆ ತೆಗೆದುಕೊಳ್ಳುತ್ತದೆ. ಬೇರೆಯವರಿಂದ ಮಾತೂ ಕೇಳಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಿ.
ನಿಮ್ಮ ದಿನಚರಿಯನ್ನು, ದೈನಂದಿನ ಎಲ್ಲಾ ಕೆಲಸಗಳ ಒಂದು ಉದ್ದನೆಯ ಪಟ್ಟಿ ತಯಾರಿಸಿ. ಯಾವುದನ್ನೂ, ಕೆಲಸ ಎಷ್ಟೇ ಸಣ್ಣದಾದರೂ ಸರಿ, ಬಿಡಬೇಡಿ, ಪಟ್ಟಿಯಲ್ಲಿ ಸೇರಿಸಿ. ನಿದ್ದೆ, ಊಟ, ಸ್ನಾನ, ಬಸ್ಸು-ರೈಲು-ಸಾರಿಗೆಗೆ ಕಾಯುವುದು, ಇತ್ಯಾದಿ ಎಲ್ಲಾ ಕೆಲಸಕ್ಕೂ ನೀವು ಎಷ್ಟು ಸಮಯ ಈಗ ತೆಗೆದುಕೊಳ್ಳುತ್ತೀರಿ ಎಂಬುದನ್ನೂ ಪಕ್ಕದಲ್ಲಿ ಗುರುತು ಹಾಕಿಕೊಳ್ಳಿ. ಒಟ್ಟು ಎಲ್ಲಾ ಸಮಯ ಸೇರಿ 24 ತಾಸಿಗಿಂತ ಹೆಚ್ಚಾದರೂ ಚಿಂತೆ ಇಲ್ಲ, ಯಾವುದನ್ನೂ ನಿರ್ಲಕ್ಷಿಸದೆ ಪಟ್ಟಿ ಮಾಡುತ್ತಾ ಹೋಗಿ. ಇದನ್ನು ಮಾಡಬೇಕಾದ ಕೆಲಸದ ಪಟ್ಟಿ (ಟು-ಡೂ-ಲಿಸ್ಟ್) ಎನ್ನೋಣ.
ನಮ್ಮ ಕೆಲಸಗಳಲ್ಲಿ ಕೆಲವು ಬಹಳ ಮುಖ್ಯ (ಇಂಪಾರ್ಟಂಟ್) ಕೆಲಸಗಳಾಗಿರುತ್ತವೆ, ಅದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ, ಮಾಡದಿದ್ದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ. ಕೆಲವು ಕೆಲಸಗಳು ಬಹಳ ತುರ್ತು (ಅರ್ಜೆಂಟ್) ಆಗಿರುತ್ತದೆ ಅವನ್ನು ಕೂಡಲೇ ಅಥವಾ ಸಮಯಕ್ಕೆ ಸರಿಯಾಗಿ ಮಾಡಬೇಕಾಗಿರುತ್ತದೆ. ಉದಾ: ನಿಮಗೆ ಶೌಚಾಲಯಕ್ಕೆ ಹೋಗಬೇಕಾದರೆ ಅದು ತುರ್ತು. ಕೆಲಸ ಮುಖ್ಯವೋ ಇಲ್ಲವೋ ಅದರ ಪ್ರಶ್ನೆ ಬರುವುದಿಲ್ಲ. ಕೆಲವು ಕೆಲಸಗಳು ಮುಖ್ಯ ಮತ್ತು ತುರ್ತು ಎರಡೂ ಆಗಿರುತ್ತದೆ. ಕೆಲವು ಕೇವಲ ಮುಖ್ಯ ಅಥವಾ ಕೇವಲ ತುರ್ತು ಆಗಿದ್ದರೆ ಮಿಕ್ಕ ಕೆಲಸಗಳು ಮುಖ್ಯವೂ ಅಲ್ಲ, ತುರ್ತು ಸಹ ಆಗಿರುವುದಿಲ್ಲ, ಅವನ್ನು ನಿದಾನವಾಗಿ, ಯಾವಾಗ ಬೇಕಾದರೂ ಮಾಡಬಹುದು.

ನಿಮ್ಮ ಎಲ್ಲಾ ಕೆಲಸಗಳ ಸಮಗ್ರ ಪಟ್ಟಿ ಮುಂದಿಟ್ಟುಕೊಂಡು. ಯಾವ ಕೆಲಸ “ಮುಖ್ಯ” (ಇಂಪಾರ್ಟೆಂಟ್) ಎಂದು ನಿಮಗೆ ಅನಿಸುತ್ತದೋ ಅದರ ಮುಂದೆ “ಮುಖ್ಯ” (ಇಂಪಾರ್ಟೆಂಟ್) ಎಂದು ಬರೆಯಿರಿ. ಯಾವುದು ಮುಖ್ಯವಲ್ಲವೋ ಅದಕ್ಕೆ “ಮುಖ್ಯವಲ್ಲ” (ನಾಟ್ ಇಂಪಾರ್ಟೆಂಟ್)ಎಂಬ ಹಣೆಪಟ್ಟಿ ಕೊಡಿ. ಹೀಗೆ ಒಂದೊಂದಾಗಿ ಎಲ್ಲಾ ಕೆಲಸಗಳಿಗೂ “ಮುಖ್ಯ” (ಇಂಪಾರ್ಟೆಂಟ್) ಅಥವಾ “ಮುಖ್ಯವಲ್ಲ” (ನಾಟ್ ಇಂಪಾರ್ಟೆಂಟ್)ಎಂಬ ಹಣೆಪಟ್ಟಿ ಬಿದ್ದಿರಬೇಕು. ಎರಡನೆಯದಾಗಿ ಅದೇ ಪಟ್ಟಿಯಲ್ಲಿ, (“ಮುಖ್ಯ” ಅಥವಾ “ಮುಖ್ಯವಲ್ಲ” ಎಂಬ ನಿರ್ಧಾರ ಈಗಾಗಲೇ ಆಗಿರುವ ಪಟ್ಟಿಯಲ್ಲಿ) ಯಾವ ಕೆಲಸ “ತುರ್ತು” (ಅರ್ಜೆಂಟ್) ಎಂದು ನಿಮಗೆ ಅನಿಸುತ್ತದೋ ಅದರ ಮುಂದೆ “ತುರ್ತು” (ಅರ್ಜೆಂಟ್) ಎಂದು ಬರೆಯಿರಿ. ಯಾವುದು ತುರ್ತು ಅಲ್ಲವೋ ಅದಕ್ಕೆ “ತುರ್ತು ಅಲ್ಲ” (ನಾಟ್ ಅರ್ಜೆಂಟ್)ಎಂಬ ಹಣೆಪಟ್ಟಿ ಕೊಡಿ. ಈಗ ನಿಮ್ಮ ಸಮಗ್ರ ಕೆಲಸದ ಪಟ್ಟಿಯಲ್ಲಿ ನಾಲ್ಕು ವಿಧವಾದ ಕೆಲಸಗಳಿವೆ, ಅಲ್ಲವೇ?.
1. ಮುಖ್ಯ ಮತ್ತು ತುರ್ತು.
2. ಮುಖ್ಯ ಆದರೆ ತುರ್ತು ಅಲ್ಲ.
3. ಮುಖ್ಯ ಅಲ್ಲ ಆದರೆ ತುರ್ತು.
4. ಮುಖ್ಯ ಅಲ್ಲ, ತುರ್ತು ಅಲ್ಲ.
ಈಗ, ನಿಮ್ಮ ಈ ನಾಲ್ಕು ಪಟ್ಟಿಯ ಕೆಲಸಗಳನ್ನು ಬೇರ್ಪಡಿಸಿ ಅದರಲ್ಲಿರುವ ಕೆಲಸಗಳನ್ನು ಆದ್ಯತೆಯ ಮೇಲೆ ಮರುಕ್ರಮಾಂಕ ನೀಡಿ. ಯಾವುದು ಬಹಳ ಮುಖ್ಯ ಮತ್ತು ಬಹಳ ತುರ್ತು ಅದಕ್ಕೆ ಕ್ರಮಾಂಕ 1, 2. 3. ಹೀಗೆ ಪ್ರತಿಯೊಂದು ಕೆಲಸಕ್ಕೂ ಕ್ರಮ ಸಂಖ್ಯೆ ನೀಡಿ, ನಾಲ್ಕೂ ಪಟ್ಟಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಇಂತಹ ಪಟ್ಟಿಯನ್ನು ಐಸನ್ಹೋವರ್ ಮ್ಯಾಟ್ರಿಕ್ಸ್ ಎಂದು ಕರೆಯುತ್ತಾರೆ.
ಈಗ ನಿಮ್ಮ ದಿನಚರಿಗೆ ಹೋಲಿಸಿಕೊಂಡು, ಬೆಳಿಗ್ಗೆ ಎದ್ದಾಗನಿಂದ ರಾತ್ರಿ ಮಲಗುವ ತನಕದ ಸಮಯ ಸಾರಣಿಗೆ ಜೋಡಿಸುತ್ತಾ, ಯಾವುದು ಮುಖ್ಯ ಮತ್ತು ತುರ್ತು ಅದನ್ನು ಮೊದಲು ಮಾಡಿ, ಯಾವುದು ತುರ್ತು ಆದರೆ ಮುಖ್ಯವಲ್ಲ ಅದನ್ನು ಕೂಡಲೇ ಮಾಡಿ, ಅದಕ್ಕೆ ಯೋಜನೆ ಹಾಕಿಕೊಳ್ಳಿ, ಸಮಯಾವಕಾಶ ಮಾಡಿಕೊಳ್ಳಿ. ಯಾವುದು ಮುಖ್ಯ ಆದರೆ ತುರ್ತು ಅಲ್ಲ, ಅದನ್ನು ಮರೆಯದೆ ಮಾಡಿ, ಅದನ್ನು ಇನ್ನೊಬ್ಬರಿಗೆ ವಹಿಸಬಹುದೇ ನೋಡಿ. ಯಾವುದು ಮುಖ್ಯವೂ ಅಲ್ಲ, ತುರ್ತೂ ಅಲ್ಲ. ಅದನ್ನು ಸಮಯ ಸಿಕ್ಕಾಗ ಮಾಡಿ, ಅಂತಹ ಕೆಲಸಗಳನ್ನು ದಿನಚರಿಯಿಂದ ಕಡಿಮೆ ಮಾಡಿಕೊಳ್ಳಿ.
ಉದಾ: ನಿಮಗೆ ಬೆಳಿಗ್ಗೆ ಕಚೇರಿಗೆ ತೆರಳಲು 9:05ರ ಮೆಟ್ರೋ ಹಿಡಿಯಬೇಕು, ಆದರೆ ಮನೆಯಿಂದ ಹೊರಡುವ ಮುನ್ನ ನಿಮ್ಮ ಸ್ನೇಹಿತ/ಸಹೋದ್ಯೋಗಿಯ ಮಿಸ್ಡ್ ಕಾಲ್ ಅಥವಾ ಮೆಸೇಜ್ ಬಂತು ಎಂದಿಟ್ಟುಕೊಳ್ಳಿ. ಅದನ್ನು ನೋಡಲು ಅಥವಾ ಅದಕ್ಕೆ ಉತ್ತರಿಸಲು ಹೋಗಿ, ನಿಮ್ಮ ಮೆಟ್ರೋ ತಪ್ಪಿಸಿಕೊಳ್ಳಬೇಡಿ. ಸ್ಟೇಷನ್ನಿಗೆ ಸಮಯಕ್ಕೆ ಸರಿಯಾಗಿ ತಲುಪಿ ಅಲ್ಲಿ ರೈಲಿಗೆ ಕಾಯುತ್ತಿರುವಾಗ ಸ್ನೇಹಿತ/ಸಹೋದ್ಯೋಗಿಯ ಸಂದೇಶಕ್ಕೆ ಗಮನಕೊಡಿ. ಅನಿರೀಕ್ಷಿತವಾಗಿ ಸಮಯ ಸಿಕ್ಕಾಗ “ಮುಖ್ಯ ಅಲ್ಲ, ತುರ್ತು ಅಲ್ಲ” ಎಂಬ ಕೆಲಸಗಳನ್ನು ನಿಪಟಾಯಿಸಿಕೊಳ್ಳಿ.
ಯಾವ ಕೆಲಸಗಳು ಅವಶ್ಯಕತೆಗಿಂತ ಹೆಚ್ಚಿನ ಸಮಯ/ಗಮನ ತೆಗೆದುಕೊಳ್ಳುತ್ತಿವೆ, ಅವನ್ನು ಮರು-ಪರಿಶೀಲಿಸಿ, ಅವನ್ನು ತ್ವರಿತವಾಗಿ/ಗಮನವಿಟ್ಟು ಮಾಡುವುದನ್ನು ಕಲಿಯಿರಿ. ತೀರಾ ಅವಶ್ಯಕವಾದಲ್ಲಿ ನಿಮ್ಮ ಅನುತ್ಪಾದನಾ ಕೆಲಸಗಳನ್ನು (4ನೆಯ ಪಟ್ಟಿಯ) ಅಥವಾ ನಿದ್ರೆಯ ಸಮಯವನ್ನು ಕತ್ತರಿಸಿ. ಮೊಬೈಲ್ ಬಳಕೆ ಕಡಿಮೆ ಮಾಡಿ, ಸಮಯದ ದುರುಪಯೋಗಕ್ಕೆ ಬಹು ದೊಡ್ದ ಕಾರಣ ಸ್ಮಾರ್ಟ್ ಫೋನ್. ಆರೋಗ್ಯಕ್ಕೆ ಧಕ್ಕೆ ಬರುವಂತಹ ಕೆಲಸ ಮಾಡಬೇಡಿ. ಅನಾರೋಗ್ಯದಿಂದ ಕೆಲಸದ ಗತಿ ಇನ್ನೂ ಕಡಿಮೆ ಆಗುತ್ತದೆ. ಹೀಗೆ ಎಲ್ಲಾ ಕೆಲಸಗಳು, ಮತ್ತು ಅದಕ್ಕೆ ತಗಲುವ ಸಮಯ ನಿಮ್ಮ ನಿಯಂತ್ರಣಕ್ಕೆ ಬರಲು ಪ್ರಾರಂಭವಾಗುತ್ತವೆ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತದೆ.


