ಮಾಸಿಕ 15,000 ರೂಪಾಯಿ ನಿಶ್ಚಿತ ಗೌರವಧನ ನಿಗದಿ ಮಾಡುವುದು ಸೇರಿದಂತೆ ಇತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರದಿಂದ (ಜ. 7) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆದಿದೆ.
ಬುಧವಾರ (ಜ.8) ಪ್ರತಿಭಟನಾ ಸ್ಥಳಕ್ಕೆ ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಾಯೋಜಿತ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರದ ಗೌರವಧನ ಸೇರಿಸಿ ಸದ್ಯಕ್ಕೆ 9,500 ರೂ. ಮುಂಗಡವಾಗಿ ನೀಡಲಾಗುವುದು. ಆದರೆ, ಆಶಾಗಳು ಮಾಡುವ ಕೆಲಸವು ಕಡಿಮೆಯಾದರೆ, ವ್ಯತ್ಯಾಸದ ಮೊತ್ತವನ್ನು ಈ 9,500ರೂ.ನಿಂದ ಕಡಿತ ಮಾಡಲಾಗುವುದು ಎಂದರು.
ಗೌರವಧನವನ್ನು ಹೆಚ್ಚುವರಿಯಾಗಿ ಹೆಚ್ಚಳ ಮಾಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತು ಮಾರ್ಚ್‌ನಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಉಳಿದ ಬೇಡಿಕೆಗಳ ಕುರಿತು ಸಂಘದ ಜೊತೆಗೆ ಚರ್ಚೆ ನಡೆಸುವುದಾಗಿ, ಈಗ ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಹಿಂತಿರುಗಬೇಕೆಂದು ಸೂಚಿಸಿದರು.

ಸಚಿವರ ಭರವಸೆ ಕುರಿತು ಪ್ರತಿಕ್ರಿಯಿಸಿದ ಅಶಾ ಕಾರ್ಯಕರ್ತೆಯರ ಸಂಘದ ಮುಖಂಡರು, ಈಗಾಗಲೇ ಈ ಎಲ್ಲಾ ಸಮಸ್ಯೆಗಳ ಕುರಿತು ವಿವಿಧ ಹಂತಗಳಲ್ಲಿ 16ಕ್ಕೂ ಹೆಚ್ಚು ಸಭೆಗಳು ನಡೆದಿವೆ. ಆದರೆ, ಸಮಸ್ಯೆಗಳು ಬಗೆಹರಿದಿಲ್ಲ. ಅಲ್ಲದೇ ನಿಶ್ಚಿತವಾಗಿ 15,000 ಗೌರವಧನವನ್ನು ನಿಗದಿ ಮಾಡಬೇಕು. ಈ ಹಣದಲ್ಲಿ ಯಾವುದೇ ರೀತಿಯ ಕಡಿತ ಮಾಡಬಾರದು ಎಂಬುವುದು ಸಂಘದ ನಿಲುವಾಗಿದ್ದು, ಅದನ್ನು ಒಪ್ಪುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು.|
ಮುಷ್ಕರ ಮುಂದುವರೆದ ಹಿನ್ನೆಲೆ ಬುಧವಾರ ರಾತ್ರಿ ಫ್ರೀಡಂ ಪಾರ್ಕ್ ಮತ್ತು ಅದರ ಪಕ್ಕದ ರಸ್ತೆಗಳಲ್ಲಿ ಮೈ ಕೊರೆಯುವ ಚಳಿಯಲ್ಲಿ ಆಶಾ ಕಾರ್ಯಕರ್ತೆಯರು ಪುಟ್ಟ ಮಕ್ಕಳೊಂದಿಗೆ ರಾತ್ರಿ ಕಳೆದರು.

ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಹುಬ್ಬಳ್ಳಿ ಧಾರವಾಡ ಬಂದ್; ಹೋಟೆಲ್, ಅಂಗಡಿ ಸ್ಥಗಿತ


