ವಾರಣಾಸಿ ಜಿಲ್ಲಾ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ನಡೆಸಿದ ‘ಜ್ಞಾನವಾಪಿ ಮಸೀದಿ ಸಂಕೀರ್ಣ’ದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ಕಕ್ಷಿಗಳಿಗೆ ನೀಡಲು ಒಪ್ಪಿಗೆ ನೀಡಿದೆ. ಈ ಬಗ್ಗೆ ಸಂಬಂಧಪಟ್ಟವರು ಅಫಿಡವಿಟ್ ಸಲ್ಲಿಸಬೇಕಾಗಿದೆ.
ಡಿಸೆಂಬರ್ 18ರಂದು ಮುಚ್ಚಿದ ಲಕೋಟೆಯಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಕುರಿತದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಎಎಸ್‌ಐ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದಾದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. ನ್ಯಾಯಾಲಯಕ್ಕೆ ಎಎಸ್‌ಐ ವರದಿ ಸಲ್ಲಿಸಿದ ನಂತರ, ಜ್ಞಾನವಾಪಿ ಸಮೀಕ್ಷೆ ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಎಎಸ್‌ಐ ವರದಿಯನ್ನು ಸಾರ್ವಜನಿಕಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವುದನ್ನು ಪ್ರಶ್ನಿಸಿದ್ದರು.
ಆದರೆ ಎಎಸ್‌ಐ ಜ್ಞಾನವಾಪಿ ಸಮೀಕ್ಷೆಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದನ್ನು ಮುಂದೂಡುವಂತೆ ಕೋರಿತ್ತು. ಸಾರ್ವಜನಿಕರಿಗೆ ವರದಿಯ ಬಿಡುಗಡೆ ವದಂತಿಗಳು ಮತ್ತು ತಪ್ಪು ಮಾಹಿತಿಯನ್ನು ಉತ್ತೇಜಿಸುವ ಸಾಧ್ಯತೆ ಇದೆ. ಆದ್ದರಿಂದ ವರದಿಯನ್ನು ಬಹಿರಂಗಪಡಿಸುವಿಕೆಯನ್ನು ವಿಳಂಬಗೊಳಿಸುವಂತೆ ಸಮಿತಿಯು ವಾರಣಾಸಿ ಜಿಲ್ಲಾ ನ್ಯಾಯಾಧೀಶರನ್ನು ಒತ್ತಾಯಿಸಿತ್ತು.
ASI ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತ್ತು. 17ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯ ಕೆಡವಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸಮೀಕ್ಷೆಗೆ ಕೋರ್ಟ್ ASIಗೆ ಸೂಚಿಸಿತ್ತು.
ಅಲಹಾಬಾದ್ ಹೈಕೋರ್ಟ್, ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ನಂತರ ಮತ್ತು ಈ ಕ್ರಮವು ನ್ಯಾಯದ ಹಿತಾಸಕ್ತಿಯಲ್ಲಿ ಅಗತ್ಯ ಎಂದು ತೀರ್ಪು ನೀಡಿದ ನಂತರ ಸಮೀಕ್ಷೆಯು ಪ್ರಾರಂಭವಾಗಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ, ಜ್ಞಾನವಾಪಿ ಮಸೀದಿ ಸಮಿತಿಯು ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಎಎಸ್‌ಐ ಸಮೀಕ್ಷೆ ಕುರಿತ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ಕಳೆದ ವರ್ಷ ಆಗಸ್ಟ್‌ನಲ್ಲಿ ನಿರಾಕರಿಸಿತ್ತು.
ಮಸೀದಿಯನ್ನು ದೇವಾಲಯ ಕೆಡವಿ ನಿರ್ಮಿಸಲಾಗಿದೆಯೇ ಎಂದು ತಿಳಿಯಲು ಸಮೀಕ್ಷೆಯೊಂದು ಮಾರ್ಗವಾಗಿದೆ ಎಂದು ಅರ್ಜಿದಾರ ಮಹಿಳೆಯರು ವಾದಿಸಿದ್ದರು. ಕಳೆದ ಎಪ್ರಿಲ್‌ನಲ್ಲಿ ನ್ಯಾಯಾಲಯವು ಮಸೀದಿ ಆವರಣದ ವೀಡಿಯೋ ಸಮೀಕ್ಷೆಗೆ ಆದೇಶಿಸಿತ್ತು.
ಏನಿದು ವಿವಾದ?
ಜ್ಞಾನವಾಪಿ ಮಸೀದಿಯನ್ನು 1669ರಲ್ಲಿ ಮೊಘಲ್ ದೊರೆ ಔರಂಗಜೇಬನು ಪ್ರಾಚೀನ ವಿಶ್ವೇಶ್ವರ ದೇವಾಲಯವನ್ನು ಕೆಡವಿ ನಿರ್ಮಿಸಿದನು ಎಂಬುವುದು ಹಿಂದೂಪರರ ವಾದ. ಜ್ಞಾನವಾಪಿ ಮಸೀದಿಯ ಪ್ರಕರಣವು 1991ರಿಂದ ನ್ಯಾಯಾಲಯದಲ್ಲಿದೆ. ಕಾಶಿ ವಿಶ್ವನಾಥ ದೇವಾಲಯದ ಅರ್ಚಕರ ವಂಶಸ್ಥರಾದ ಪಂಡಿತ್ ಸೋಮನಾಥ ವ್ಯಾಸ್ ಸೇರಿದಂತೆ ಮೂವರು ವಾರಣಾಸಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಔರಂಗಜೇಬನು ದೇವಾಲಯ ಧ್ವಂಸಗೊಳಿಸಿದ್ದಾನೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದಲ್ಲದೆ ವಿಶ್ವನಾಥ ದೇವರ ಜ್ಯೋತಿರ್ಲಿಂಗವು ಜ್ಞಾನವಾಪಿ ಮಸೀದಿಯ ಆವರಣದಲ್ಲಿದೆ ಎಂದು ಹೇಳುವ ಇನ್ನೊಂದು ಅರ್ಜಿಯೂ ನ್ಯಾಯಾಲಯದಲ್ಲಿದೆ.
2021ರ ಆ.18ರಂದು ವಾರಣಾಸಿಯ ಅದೇ ನ್ಯಾಯಾಲಯದಲ್ಲಿ, ಶೃಂಗಾರ ಗೌರಿ, ಹನುಮಾನ್ ಮತ್ತು ಗಣೇಶ ಚಿತ್ರಗಳು ಇವೆಯೆಂದು ಮತ್ತು ಪೂಜೆಗೆ ಅನುಮತಿ ಕೋರಿ ಐವರು ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದರು, ಇದರ ಬೆನ್ನಲ್ಲಿ ಪ್ರಸ್ತುತ ಸ್ಥಿತಿಯನ್ನು ತಿಳಿಯಲು ಆಯೋಗವನ್ನು ರಚಿಸಲಾಗಿತ್ತು.
ಏ.2021ರಲ್ಲಿ ವಾರಣಾಸಿ ನ್ಯಾಯಾಲಯವು ಸಮೀಕ್ಷೆಯನ್ನು ನಡೆಸಿ ಅದರ ವರದಿಯನ್ನು ಸಲ್ಲಿಸಲು ASIಗೆ ನಿರ್ದೇಶನ ನೀಡಿತ್ತು. ಆದರೆ ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿಯನ್ನು ನಡೆಸುತ್ತಿರುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಅರ್ಜಿಯನ್ನು ವಿರೋಧಿಸಿತ್ತು ಮತ್ತು ಮಸೀದಿಯ ಸಮೀಕ್ಷೆಗಾಗಿ ವಾರಣಾಸಿ ನ್ಯಾಯಾಲಯದ ಆದೇಶವನ್ನು ವಿರೋಧಿಸಿತ್ತು. ಪ್ರಕರಣವು ನಂತರ ಅಲಹಾಬಾದ್ ಹೈಕೋರ್ಟ್‌ಗೆ ತಲುಪಿತ್ತು.
ಇದನ್ನು ಓದಿ: ಬಾಬರಿ ಮಸೀದಿ ಧ್ವಂಸದ ದಿನ ‘ಸಂಭ್ರಮಾಚರಣೆ’ ಮಾಡಿದ್ದ IAS ಅಧಿಕಾರಿಗಳು: ವಿವಾದ ಸೃಷ್ಟಿಸಿದ ಹಿರಿಯ ಅಧಿಕಾರಿಯ ಪೋಸ್ಟ್…


