Homeಮುಖಪುಟಬಾಬರಿ ಮಸೀದಿ ಧ್ವಂಸದ ದಿನ 'ಸಂಭ್ರಮಾಚರಣೆ' ಮಾಡಿದ್ದ IAS ಅಧಿಕಾರಿಗಳು: ವಿವಾದ ಸೃಷ್ಟಿಸಿದ ಹಿರಿಯ...

ಬಾಬರಿ ಮಸೀದಿ ಧ್ವಂಸದ ದಿನ ‘ಸಂಭ್ರಮಾಚರಣೆ’ ಮಾಡಿದ್ದ IAS ಅಧಿಕಾರಿಗಳು: ವಿವಾದ ಸೃಷ್ಟಿಸಿದ ಹಿರಿಯ ಅಧಿಕಾರಿಯ ಪೋಸ್ಟ್‌…

- Advertisement -
- Advertisement -

ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೀಶಾ ಪಾಟಂಕರ್ ಮ್ಹೈಸ್ಕರ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಅವರು ಮತ್ತು 1992ರ ಬ್ಯಾಚ್‌ನ ಇತರ ಐಎಎಸ್ ತರಬೇತಿ ಅಧಿಕಾರಿಗಳು ಬಾಬರಿ ಮಸೀದಿ ಧ್ವಂಸಗೊಂಡ ನಂತರ ಮಸ್ಸೂರಿಯಲ್ಲಿ ರಾತ್ರಿಯನ್ನು ಹೇಗೆ ಸಂಭ್ರಮಿಸಿದ್ದರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು.

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ವೇಳೆ ಅಧಿಕಾರಿ ಈ ಪೋಸ್ಟ್‌ನ್ನು ಮಾಡಿದ್ದಾರೆ. ಪೋಸ್ಟ್‌ನ್ನು ‘ಜೈ ಶ್ರೀ ರಾಮ್’ ಘೋಷಣೆಯೊಂದಿಗೆ ಪ್ರಾರಂಭಿಸಲಾಗಿತ್ತು ಮತ್ತು ಈಗ ಅವರ ಜೀವನವು ಪರಿಪೂರ್ಣವಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 6 ರಂದು ಮಸ್ಸೂರಿಯಲ್ಲಿ ಹೆಚ್ಚು ಚಳಿಯಿತ್ತು. 1992ರ ಬ್ಯಾಚ್‌ನ ಐಎಎಸ್ ಅಧಿಕಾರಿಗಳು ಅಲ್ಲಿ ತರಬೇತಿಯಲ್ಲಿದ್ದೆವು. ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ನಡೆಯುತ್ತಿರುವ  ಬೆಳವಣಿಗೆಗಳ ಬಗ್ಗೆ ನಮಗೆ ಮಾಹಿತಿ ಸಿಗುತ್ತಿತ್ತು. ಆಗ ನಮ್ಮ ಸಂಸ್ಥೆಯಲ್ಲಿ ರಹಸ್ಯ ಸಭೆ ನಡೆದಿತ್ತು. ಅದಕ್ಕೆ ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶವಿತ್ತು. ನನಗೆ ನಾಗ್ಪುರದ ನಂಟು ಇದ್ದ ಕಾರಣ ಆಹ್ವಾನ ಸಿಕ್ಕಿತ್ತು. ಆ ಸಭೆಯಲ್ಲಿ ಕೆಲವರು ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಪೇಡಾಗಳನ್ನು ವಿತರಿಸಲಾಯಿತು. ಒಂದು ಫುಲ್ ಕೇಸರ್ ಪೇಡಾ ತಿಂದಿದ್ದು ನೆನಪಿದೆ. ಅಯೋಧ್ಯೆಯಲ್ಲಿ ನಡೆದ ಘಟನೆಗಳು ಅತ್ಯಂತ ಸಕಾರಾತ್ಮಕ, ಅತ್ಯಂತ ಶಕ್ತಿಯುತ ಮತ್ತು ಅತ್ಯಂತ ಮಂಗಳಕರವಾದ ಯಾವುದೋ ಒಂದರ ಆರಂಭ ಎಂದು ನನಗೆ ತಿಳಿದಿತ್ತು ಎಂದು ಬರೆದುಕೊಂಡಿದ್ದಾರೆ.

ಸಭೆಯ ಸುದ್ದಿ ಸೋರಿಕೆಯಾದಾಗ, ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಘಟನೆಯನ್ನು ಪ್ರಮುಖ ಪತ್ರಿಕೆಯ ಮೊದಲ ಪುಟದಲ್ಲಿ ವರದಿ ಮಾಡಲಾಗಿದೆ. “ಐಎಎಸ್‌ನಲ್ಲಿ ಕೋಮುವಾದಿಗಳು ನುಸುಳುತ್ತಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ. ದೇವಾಲಯದ ಪ್ರತಿಷ್ಠಾಪನೆಯ ಈ ಸಮಾರಂಭದ ಸಂದರ್ಭದಲ್ಲಿ ನಾನು ಮತ್ತೊಂದು ಪೇಡಾವನ್ನು ತಿಂದಿದ್ದೇನೆ. ನಾಳೆ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದಕ್ಕೆ ಮುನ್ನಾದಿನವಾದ ಇಂದು, ನಾನು ಇನ್ನೊಂದು ಕೇಸರಿ ಪೇಡಾವನ್ನು ತಿನ್ನುವಾಗ ಡಿಸೆಂಬರ್ 6ರ ಮೂಲ ಕ್ಷಣ ಮತ್ತು ಅತ್ಯಂತ ಸಕಾರಾತ್ಮಕ, ಮಂಗಳಕರವಾದ ಶಕ್ತಿಯುತ ಭಾವನೆಯನ್ನು ನೆನಪಿಸಿಕೊಂಡೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಾಜಿ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ, ಜಾತ್ಯತೀತತೆಯು ಸಂವಿಧಾನದ ಮೂಲಭೂತ ತತ್ವ ಮತ್ತು ಮೂಲ ರಚನೆಯಾಗಿದೆ. ಕೋಮುವಾದಿಯಾಗಿ ನಡೆದುಕೊಂಡು ಬಾಬರಿ ಮಸೀದಿ ಧ್ವಂಸವನ್ನು ಆಚರಿಸುವ ಮೂಲಕ ಆಕೆ ತನ್ನ ಪ್ರತಿಜ್ಞೆಯನ್ನು ಉಲ್ಲಂಘಿಸಿದ್ದಾಳೆ. ದೇವಸ್ಥಾನವನ್ನು ಪ್ರಶಂಸಿಸುವುದು ಒಂದು ವಿಷಯ, ಆದರೆ 30 ವರ್ಷಗಳ ನಂತರ ಕೆಡವಿದ್ದನ್ನು ನೆನಪಿಸಿಕೊಳ್ಳುವುದು ಮತ್ತು ಆಚರಿಸುವುದು ಅಪರಾಧ. ಉನ್ನತ ಅಧಿಕಾರಿಯ ಸ್ಥಾನದಲ್ಲಿರಲು ಆಕೆಗೆ ಯಾವುದೇ ನೈತಿಕತೆಯಿಲ್ಲ. ಅವರು ಕೆಲಸ ಮಾಡುತ್ತಿರುವ ರಾಜ್ಯದಲ್ಲಿ ಹಲವಾರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಇದ್ದಾರೆ. ರಾಜಕಾರಣಿಗಳನ್ನು ಲೆಕ್ಕಿಸದೆ, ನಾಗರಿಕ ಸೇವೆಕರು ತಟಸ್ಥವಾಗಿರಬೇಕು. ಕೋಮುವಾದಿಯಲ್ಲದವರಾಗಿರಬೇಕು ಮತ್ತು ಜಾತ್ಯತೀತವಾಗಿರಬೇಕು. ಅವರು ಐಎಎಸ್‌ ಹುದ್ದೆ ಮತ್ತು ಭಾರತದ ಸಂವಿಧಾನವನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಐಎಎಸ್‌ ಅಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ಮನಸ್ಥಿತಿಯ ಅಧಿಕಾರಿಗಳು ತನ್ನ ವೃತ್ತಿ ಜೀವನದಲ್ಲಿ ಹೇಗೆ ಕಾರ್ಯ ನಿರ್ವಹಿಸಿರಬಹುದು ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಎನ್‍ಡಿಟಿವಿಯ ಮುಂಬೈ ಕಚೇರಿಯ ಮಾಜಿ ಮುಖ್ಯಸ್ಥ ಸೋಹಿತ್ ಮಿಶ್ರಾ ಪ್ರತಿಕ್ರಿಯಿಸಿದ್ದು, ಮನೀಷಾ ಅವರ ಪೋಸ್ಟ್‌ನ್ನು ಖಂಡಿಸಿದ್ದಾರೆ. ಬಹುಸಂಖ್ಯಾತರ ಪರವಾಗಿರುವುದು ಸಾರ್ವಜನಿಕ ಸೇವೆಯಲ್ಲಿರುವವರಿಗೆ ಎಷ್ಟು ಸೂಕ್ತ ಎಂದು ಪ್ರಶ‍್ನಿಸಿದ್ದಾರೆ.

ಇದನ್ನು ಓದಿ: ಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆ ಅಸ್ಸಾಂನಲ್ಲಿ ಭದ್ರತಾ ಸಮಸ್ಯೆ: ಅಮಿತ್‌ ಶಾಗೆ ಪತ್ರ ಬರೆದ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...