ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದ ಕರಡು ನಿಯಮಗಳನ್ನು ಹಿಂಪಡೆಯಬೇಕೆಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾನುವಾರ ಒತ್ತಾಯಿಸಿದ್ದು, ಅವುಗಳನ್ನು ಸಂವಿಧಾನದ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ವಿಶ್ವವಿದ್ಯಾಲಯಗಳನ್ನು ನಡೆಸುವ ಅಧಿಕಾರವನ್ನು ಈ ನಿಯಮಗಳ ಮೂಲಕ ರಾಜ್ಯ ಸರ್ಕಾರಗಳಿಂದ ಕೇಂದ್ರ ಸರ್ಕಾರವು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಯುಜಿಸಿ ಕರಡು ನಿಯಮ
ಜನವರಿ 6 ರಂದು ಬಿಡುಗಡೆಯಾದ ಯುಜಿಸಿ ಕರಡು ನಿಯಮಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿವೆ. ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಕುಲಪತಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಬಗ್ಗೆ ಕೇಂದ್ರ ಸರ್ಕಾರವು ಯೋಚಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯ ಸರ್ಕಾರದ ಅಡಿಯಲ್ಲಿ ಇರುವ ವಿಶ್ವವಿದ್ಯಾಲಯಗಳ ಕುಲಪತಿಗಳು ಕೇಂದ್ರ ಸರ್ಕಾರದಿಂದ ನೇಮಕಗೊಂಡ ರಾಜ್ಯಪಾಲರಾಗಿದ್ದಾರೆ. ಇದು ವಿರೋಧ ಪಕ್ಷದ ಆಡಳಿತದ ರಾಜ್ಯಗಳಿಂದ ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಆಯ್ಕೆ ಮಾಡಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತಿದೆ ಎಂಬ ಆತಂಕಕ್ಕೆ ಕಾರಣವಾಗಿದೆ.
ಶೈಕ್ಷಣಿಕ ಹಿನ್ನೆಲೆ ಇಲ್ಲದ ಅಭ್ಯರ್ಥಿಗಳನ್ನು ಉಪಕುಲಪತಿಗಳನ್ನಾಗಿ ಮಾಡಲು ಅನುಮತಿಸುವ ಕರಡು ನಿಯಮಗಳಲ್ಲಿನ ನಿಬಂಧನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಹ ಆಕ್ಷೇಪಿಸಿದ್ದಾರೆ. ಇದು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವವಿಲ್ಲದ ವ್ಯಕ್ತಿಗಳನ್ನು ವಿಶ್ವವಿದ್ಯಾಲಯಗಳ ಮುಖ್ಯಸ್ಥರನ್ನಾಗಿ ನೇಮಿಸಲು ಕಾರಣವಾಗಲಿದೆ ಎಂದು ಅವರು ಕಳೆದ ವಾರ ವಾದಿಸಿದ್ದರು.
ಭಾನುವಾರ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ, ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ಹೊಸ ನಿಯಮಗಳನ್ನು ಪರಿಚಯಿಸುವ ಪ್ರಸ್ತಾಪದ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ. “ಕೇಂದ್ರವು ವಿಶ್ವವಿದ್ಯಾಲಯಗಳ ಆಡಳಿತವನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯು ಕೆಲವು ವ್ಯಕ್ತಿಗಳಿಂದ ಸುಳ್ಳು ಪ್ರಚಾರಕ್ಕೆ ವೇದಿಕೆಗಳಾಗಲು ಕಾರಣವಾಗಲಿದೆ” ಎಂದು ಅವರು ಆರೋಪಿಸಿದ್ದಾರೆ. ಯುಜಿಸಿ ಕರಡು ನಿಯಮ
ಈ ವಿಷಯದ ಬಗ್ಗೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ “ಸಮನ್ವಯ” ಮಾಡಿಕೊಳ್ಳುವುದಾಗಿ ರೇವಂತ್ ರೆಡ್ಡಿ ಹೇಳಿದ್ದು, ಶೀಘ್ರದಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಈ ವಿಷಯವನ್ನು ಚರ್ಚಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
UGC rule changes are a direct cultural attack unleashed by Central Govt : CM Revanth Reddy
PM Modi must withdraw this regressive decision that threatens the foundation of cooperative federalism and against Dr Ambedkar’s ideals
Centralizing control over universities undermines… pic.twitter.com/JpKIvIKTIX
— Naveena (@TheNaveena) January 26, 2025
ತಮಿಳುನಾಡು ವಿಧಾನಸಭೆಯು ಜನವರಿ 9 ರಂದು ಕರಡು ನಿಯಮಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು. ಜನವರಿ 21 ರಂದು ಕೇರಳ ವಿಧಾನಸಭೆ ಕೂಡಾ ನಿರ್ಣಯ ಅಂಗೀಕರಿಸಿದ್ದು, ಜನವರಿ 9 ರಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕರಡನ್ನು ವಿರೋಧಿಸಿದ್ದಾರೆ. ಅವರು ಇದನ್ನು, ಕನ್ನಡಿಗರಿಗೆ ಬಗೆಯುವ “ದ್ರೋಹ” ಎಂದು ಕರೆದಿದ್ದಾರೆ.
ಡಿಸೆಂಬರ್‌ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ವಿಧಾನಸಭೆಯು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ 2024 ಅನ್ನು ಅಂಗೀಕರಿಸಿತ್ತು. ಈ ಮಸೂದೆಯು, ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕಿದ್ದು, ಈ ಸ್ಥಾನಕ್ಕೆ ಮುಖ್ಯಮಂತ್ರಿಯನ್ನು ಬದಲಾಯಿಸಿತ್ತು.
ಆದಾಗ್ಯೂ, ವಿಶ್ವವಿದ್ಯಾಲಯ ಅನುದಾನ ಆಯೋಗವು ಪ್ರಸ್ತಾವಿತ ನಿಯಮಗಳನ್ನು ಸಮರ್ಥಿಸಿಕೊಂಡಿದ್ದು, ಪರಿಷ್ಕೃತ ಪ್ರಕ್ರಿಯೆಯು “ಅಸ್ಪಷ್ಟತೆಯನ್ನು ನಿವಾರಿಸುತ್ತದೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ” ಎಂದು ಹೇಳಿದೆ. ಜನವರಿ 10 ರಂದು ಮಾತನಾಡಿರುವ ಆಯೋಗದ ಅಧ್ಯಕ್ಷ ಎಂ. ಜಗದೀಶ್, ಹೊಸ ನಿಯಮಗಳು ಕುಲಪತಿ-ಶೋಧನಾ-ಕಮ್-ಆಯ್ಕೆ ಸಮಿತಿಯ ಸಂಯೋಜನೆಯನ್ನು ನಿರ್ದಿಷ್ಟಪಡಿಸುವ ಮೂಲಕ “ತುಂಬಾ ಅಗತ್ಯವಿರುವ ಸ್ಪಷ್ಟತೆ”ಯನ್ನು ತರುತ್ತವೆ ಎಂದು ಹೇಳಿದ್ದಾರೆ.
ಈ ಸಮಿತಿಯು ಮೂವರು ಸದಸ್ಯರನ್ನು ಹೊಂದಿರುತ್ತದೆ – ಒಬ್ಬರು ಕುಲಪತಿಗಳಿಂದ ಆಯ್ಕೆ ಮಾಡಲ್ಪಟ್ಟವರು, ಇನ್ನೊಬ್ಬರು ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಿಂದ ಮತ್ತು ಮೂರನೇ ಒಬ್ಬರು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಅಥವಾ ಸೆನೆಟ್‌ನಿಂದ ಆಯ್ಕೆಯಾಗುತ್ತಾರೆ ಎಂದು ಜಗದೀಶ್ ಹೇಳಿದ್ದರು.
ಇದನ್ನೂಓದಿ: ಕದನ ವಿರಾಮ ಉಲ್ಲಂಘನೆ | ಪ್ಯಾಲೆಸ್ತೀನಿಯರನ್ನು ಉತ್ತರ ಗಾಜಾಗೆ ಮರಳುವುದನ್ನು ನಿರ್ಬಂಧಿಸಿದ ಇಸ್ರೇಲ್
ಕದನ ವಿರಾಮ ಉಲ್ಲಂಘನೆ | ಪ್ಯಾಲೆಸ್ತೀನಿಯರನ್ನು ಉತ್ತರ ಗಾಜಾಗೆ ಮರಳುವುದನ್ನು ನಿರ್ಬಂಧಿಸಿದ ಇಸ್ರೇಲ್


