ರಾಜಸ್ಥಾನದ ಅಲ್ವಾರ್‌ನಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಮೇಲೆ ಶುಕ್ರವಾರ (ಏಪ್ರಿಲ್ 02) ನಡೆದ ದಾಳಿಯನ್ನು ಬಿಟ್ಟಿ ಪ್ರಚಾರ ಪಡೆಯಲು ನಡೆಸಿದ್ದಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ಮುಖಂಡ ಕುಲದೀಪ್ ಯಾದವ್ ತಪ್ಪೊಪ್ಪಿಕೊಂಡಿದ್ದಾನೆ.
ರಾಕೇಶ್ ಟಿಕಾಯತ್ ಬೆಂಗಾವಲು ವಾಹನದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅಲ್ವಾರ್ ಪೊಲೀಸರ ಬಂಧನದಲ್ಲಿರುವ ಎಬಿವಿಪಿ ವಿದ್ಯಾರ್ಥಿ ಮುಖಂಡ ಕುಲದೀಪ್ ಯಾದವ್, ವಿಚಾರಣೆ ವೇಳೆ ಈ ತಪ್ಪೊಪ್ಪಿಗೆಯನ್ನು ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೇಸ್ ವರದಿ ಮಾಡಿದೆ.
ಕುಲದೀಪ್ ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ 2019 ರಲ್ಲಿ ಅಲ್ವಾರ್ ಮೂಲದ ಮತ್ಸ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕರಾಗಿದ್ದರು. ನಂತರ ಎಬಿವಿಪಿಗೆ ಸೇರಿದ್ದಾರೆ. ಆದರೆ, ಆತನ ಬಿಎ ಪದವಿ ನಕಲಿ ಎಂಬುದು ತಿಳಿದ ನಂತರ, ಆಯ್ಕೆಯಾದ ಕೆಲವೇ ದಿನಗಳಲ್ಲಿ ಆತ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆತ ಆಯೋಜಿಸುತ್ತಿದ್ದ ಹಲವು ಕಾರ್ಯಕ್ರಮಗಳಲ್ಲಿ ಬಿಜೆಪಿಯ ಹಿರಿಯ ಮುಖಂಡರು ಹಾಜರಾಗುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಬಿಜೆಪಿ ಬೆಂಬಲಿಗರ ಹಲ್ಲೆ- ಆರೋಪ

ಕಳೆದ ಶುಕ್ರವಾರ ರಾಕೇಶ್ ಟಿಕಾಯತ್ ಅವರ ಬೆಂಗಾವಲು ವಾಹನ ಹರ್ಸೋರಾ ಗ್ರಾಮದಿಂದ ಬನ್ಸೂರ್‌ಗೆ ತೆರಳುತ್ತಿದ್ದಾಗ, ತತಾರ್ಪುರ್ ಗ್ರಾಮದಲ್ಲಿ ಎಬಿವಿಪಿ ಮುಖಂಡ ಕುಲದೀಪ್ ಯಾದವ್ ತನ್ನ ಬೆಂಬಲಿಗರೊಂದಿಗೆ ಕಪ್ಪು ಧ್ವಜಗಳನ್ನು ತೋರಿಸಿದ್ದರು.
ರೈತ ನಾಯಕರನ್ನು ಸ್ವಾಗತಿಸುವ ನೆಪದಲ್ಲಿ ಅವರ ಕಾರುಗಳನ್ನು ತಡೆದು ಕಲ್ಲುತೂರಾಟ ನಡೆಸಿದ್ದರು. ಟಿಕಾಯತ್ ಅವರ ಕಾರಿನ ಕಿಟಕಿಗೆ ಹಾನಿಯಾಗಿತ್ತು ಜೊತೆಗೆ ಕಪ್ಪು ಮಸಿ ಬಳಿಯಲಾಗಿತ್ತು ಎಂದು 33 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ದಾಳಿ ಆರೋಪದ ಮೇಲೆ ಈವರೆಗೆ 16 ಜನರನ್ನು ಬಂಧಿಸಲಾಗಿದೆ. ರಾಕೇಶ್ ಟಿಕಾಯತ್ ಮೇಲೆ ದಾಳಿ ನಡೆಸಲು ಯುವಕರನ್ನು ಒಟ್ಟುಗೂಡಿಸಲು ಕುಲದೀಪ್ ಯಾದವ್ ಸುಮಾರು 50,000 ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ ಎಂದು ಪೊಲೀಸರ ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಈ ಸಂಘಿ ಪಿತೂರಿಗೆ ನಾವು ಹೆದರುವುದಿಲ್ಲ: ದಾಳಿ ಕುರಿತು ರಾಕೇಶ್ ಟಿಕಾಯತ್ ಪ್ರತಿಕ್ರಿಯೆ
ಬಂಧಿತ ವಿದ್ಯಾರ್ಥಿ ನಾಯಕನೊಂದಿಗಿನ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಿರಾಕರಿಸಿದ್ದರೂ, ಕುಲದೀಪ್ ಯಾದವ್ ಜೊತೆಗೆ ಇರುವ ಹಿರಿಯ ಬಿಜೆಪಿ ನಾಯಕರ ಚಿತ್ರಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಆರೋಪಿ ಕುಲದೀಪ್ ಯಾದವ್ ಅವರೊಂದಿಗೆ ಕಾಣಿಸಿಕೊಂಡವರಲ್ಲಿ ರಾಜಸ್ಥಾನ ರಾಜ್ಯ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ, ಅಲ್ವಾರ್ ಸಂಸದ ಬಾಬಾ ಬಾಲಕನಾಥ್ ಮತ್ತು ಎಬಿವಿಪಿ ರಾಜ್ಯ ಕಾರ್ಯದರ್ಶಿ ಹೋಶಿಯಾರ್ ಮೀನಾ ಸೇರಿದ್ದಾರೆ.
ರಾಕೇಶ್ ಟಿಕಾಯತ್ ಬೆಂಗಾವಲು ವಾಹನದ ಮೇಲಿನ ದಾಳಿಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಂಡಿಸಿದ್ದರು. ಎಬಿವಿಪಿ ನಾಯಕ ಕುಲದೀಪ್ ಯಾದವ್ ಆರೋಪಿ ಎಂಬುದನ್ನು ಖಚಿತಪಡಿಸಿದವರಲ್ಲಿ ಪತ್ರಕರ್ತ ಮಂದೀಪ್ ಪುನೀಯಾ ಮೊದಲಿಗರಾಗಿದ್ದರು.
ಹಲ್ಲೆ ನಡೆದ ದಿನವೇ ಕುಲ್‌ದೀಪ್ ಯಾದವ್, ಎಬಿವಿಪಿ ಸದಸ್ಯನಾಗಿದ್ದು, ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ. ಇವನ ಕಾರನ್ನು ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆಯಲ್ಲಿ ಬಳಸಲಾಗಿದೆ ಎಂಬುದನ್ನು ಪತ್ರಕರ್ತ ಮಂದೀಪ್ ಪುನಿಯಾ ಸಾಕ್ಷಿಗಳ ಸಮೇತ ವಿವರಿಸಿದ್ದರು.
ಇದನ್ನೂ ಓದಿ: ಇನ್ನು 8 ತಿಂಗಳು ಈ ರೈತ ಹೋರಾಟ ನಡೆಯಲಿದೆ- ರಾಕೇಶ್ ಟಿಕಾಯತ್


