Homeಮುಖಪುಟಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ

ಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ

- Advertisement -
- Advertisement -

| ಅವಿನಾಶ್ |

ರಾಸಾಯನಿಕ ಕೃಷಿ ಮತ್ತು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳ ಬಗ್ಗೆ ಚರ್ಚೆ ನಡೆಯುತ್ತಿರುವುದು ನನ್ನಂತಹ ಸಾಮಾನ್ಯ ರೈತನಿಗೆ ತುಂಬಾ ಮುಖ್ಯವಾಗಿರುವುದರಿಂದ ಈ ಚರ್ಚೆಯನ್ನು ಆರಂಭಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು. ಹಾಗೆಯೇ ಈ ತರಹದ ಆರೋಗ್ಯಕರ ಚರ್ಚೆಗಳು ಒಂದು ಹೊಸ ಆವಿಷ್ಕಾರಕ್ಕೆ ನಾಂದಿಯೆಂದು ಭಾವಿಸುತ್ತೇನೆ.

ನಾನೊಬ್ಬ ರೈತ. ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡುತ್ತಿದ್ದೇನೆ. ನಾನು ಕೃಷಿಯನ್ನು ಆರಂಭಿಸಿದ ದಿನಗಳಲ್ಲಿ ಹಲವಾರು ಪ್ರಶ್ನೆಗಳಿದ್ದವು. ನಾವು ಬೆಳೆಯುವ ಬೆಳೆಗಳಿಗೆ ಏನೆಲ್ಲದರ ಅವಶ್ಯಕತೆಯಿದೆ? ಎಲ್ಲಿಂದ ದೊರೆಯುತ್ತವೆ? ವ್ಯವಸಾಯಕ್ಕಾಗಿ ಎಷ್ಟು ಖರ್ಚಾಗುತ್ತದೆ? ಆದಾಯ ಬರುತ್ತದಾ? ಮಾರುಕಟ್ಟೆ ಹೇಗೆ? ಏಕಬೆಳೆ ಪದ್ಧತಿ ಸರಿಯೇ? ಬಹುಬೆಳೆ ಪದ್ಧತಿ ಸರಿಯೇ? ರಾಸಾಯನಿಕಗಳ ಬಳಕೆ ಸರಿಯೇ? ರಾಸಾಯನಿಕಗಳನ್ನು ಉಪಯೋಗಿಸದೆ ಬೆಳೆಗಳನ್ನು ಬೆಳೆಯಬಹುದೇ? ಇಂತಹ ಹತ್ತು ಹಲವಾರು ಪ್ರಶ್ನೆಗಳು. ನನ್ನಲ್ಲಿರುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಂಡು ಗುರುಗಳ ಹತ್ತಿರ, ರೈತರ ಹತ್ತಿರ, ತಜ್ಞರ ಹತ್ತಿರ ಉತ್ತರವನ್ನು ಹುಡುಕುತ್ತಾ, ಯಶಸ್ವಿ ತೋಟಗಳನ್ನು ನೋಡಿದಾಗ ನನಗರ್ಥವಾಗಿದ್ದು ನನ್ನ ಭೂಮಿಗೆ ಸರಿ ಹೊಂದುವಂತಹ, ವಾತಾವರಣಕ್ಕೆ ಸಹಕಾರಿಯಾಗುವಂತಹ, ಸಹಜವಾಗಿ ಭೂಮಿಯನ್ನು ಬಲಗೊಳಿಸುವಂತಹ, ಕೃಷಿ ಪದ್ಧತಿ ನನ್ನ ಮುಂದಿನ ಆಯ್ಕೆ ಎಂದು.

ಇದಕ್ಕೆ ನಾನು ಮೂಲತ: ಕೃಷಿ ವಿದ್ಯಾರ್ಥಿಯಲ್ಲದಿರುವುದು ಒಂದು ಕಾರಣವಾದರೆ, ಮತ್ತೊಂದು ಕಾರಣ ನಾನು ವ್ಯವಸಾಯಕ್ಕೆ ಬರುವ ಮೊದಲೇ ಡಾ.ಮುಸುನೋಬು ಪುಕುವೊಕ, ಪ್ರೊ .ಶ್ರೀಪಾದ್ ಎ ದಾಬೊಲ್ಕರ್, ಶ್ರೀ ಬಾಸ್ಕರ್ ಸಾವೆಂ, ಶ್ರೀ ನಾರಾಯಣರೆಡ್ಡಿ, ಶ್ರೀ ಸುಬಾμï ಪಾಲೇಕರ್‍ರವರಲ್ಲದೇ ಇನ್ನು ಹಲವಾರು ರೈತರು ಕೂಡಾ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯ ಬಗ್ಗೆ ಮಾತನಾಡುತ್ತಿದ್ದರು. ಇನ್ನೊಂದು ಕಡೆ ರಾಸಾಯನಿಕ ಕೃಷಿ ಪದ್ಧತಿಯಿಂದಾಗುತ್ತಿರುವ ಕಷ್ಟನಷ್ಟ್ಟಗಳ ಬಗ್ಗೆ ಮಾತನಾಡುತ್ತಿದ್ದರು.

ಒಂದು ಕಡೆ ರಾಸಾಯನಿಕ ಕೃಷಿ, ಇನ್ನೊಂದು ಕಡೆ ರಾಸಾಯನಿಕ ಮುಕ್ತ ಕೃಷಿ – ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಜಿಜ್ಞಾಸೆ. ಸರಿ ಈ ಎರಡು ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ರೈತರ ಜಮೀನಿಗೆ ಭೇಟಿ ಕೊಡಲಾರಂಭಿಸಿದೆ. ನಿರಂತರ 2 ವರ್ಷಗಳ ಕಾಲದಲ್ಲಿ ನೂರಾರು ರೈತರ ಪರಿಚಯ, ವಿಚಾರ ವಿನಿಮಯಗಳಿಂದ, ಅಲ್ಲಿ ನಡೆಸಿರುವ ಪ್ರಯೋಗಗಳಿಂದ ನನ್ನಲ್ಲಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರೆಯಲಾರಂಭಿಸಿತು.

ಅದೇನೆಂದರೆ, ರಾಸಾಯನಿಕ ಕೃಷಿ ಪದ್ಧತಿಯಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಭೂಮಿ ಬರಡಾಗುತ್ತಿದೆ, ಆಹಾರ ಪದಾರ್ಥಗಳು ವಿಷಭರಿತವಾಗಿವೆ, ವಾತಾವರಣ ಕಲುಷಿತಗೊಂಡಿದೆ, ಮಣ್ಣಿನಲ್ಲಿ ನೀರು ಇಂಗದೆ ಅಂತರ್ಜಲಮಟ್ಟ ಇನ್ನು ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಮಾತ್ರ ಈ ಎಲ್ಲಾ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದೇನೊ ಎನ್ನಿಸಿತು. ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ರೈತರ ಅನುಭವವನ್ನು ಕೇಳಿದಾಗ ಮೊದಲ ಒಂದೆರಡು ವರ್ಷಗಳು ಇಳುವರಿ ಬರೋದಿಲ್ಲ ಎಂದರು ಮತ್ತು ಕೆಲವರು ಖರ್ಚು ಕಮ್ಮಿ ಮಾಡಲಾಗುವುದಿಲ್ಲ, ಆದರೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆಯಿರುವುದು ಹೆಮ್ಮೆಯ ವಿಚಾರ ಎಂದರು. ಒಂದು ಕಡೆ ರಾಸಾಯನಿಕಗಳು, ಇನ್ನೊಂದು ಕಡೆ ಖರ್ಚು. ಏನು ಮಾಡುವುದು ಗೊತ್ತಾಗಲಿಲ್ಲ. ಕೃಷಿ ಪುಸ್ತಕಗಳನ್ನು ಓದಲಾರಂಭಿಸಿದೆ. ಅರ್ಥವಾಗಲಿಲ್ಲ, ಕಾರಣ ಕೃಷಿಯನ್ನು Rocket Science ಭಾಷೆಯಲ್ಲಿ ಬರೆದಿದ್ದಾರೆ. ನಾನೊಬ್ಬ ಸಾಮಾನ್ಯ ರೈತ. ನನಗರ್ಥವಾಗುವ ಭಾಷೆ ಬಹುಮುಖ್ಯ. ನಂತರದ ದಿನಗಳಲ್ಲಿ ನನಗೆ ಅರ್ಥವಾದ ಕೃಷಿ ಎಂದರೆ
1. ಒಂದು ಗಿಡ ಬೆಳೆಯಲು ಬೇಕಾದ ಪೋಷಕಾಂಶಗಳನ್ನು ನಿಸರ್ಗದತ್ತವಾಗಿ ಒದಗಿಸುವುದು ಅಥವಾ ನಿಸರ್ಗದತ್ತವಾಗಿ ಪೋಷಕಾಂಶಗಳು ಒದಗುವಂತಹ ವಾತಾವರಣವನ್ನು ನಮ್ಮ ಭೂಮಿಯಲ್ಲಿ ಸೃಷ್ಟಿಮಾಡುವುದು
2. ಬೆಳಕನ್ನು ಸರಿ ಅನುಪಾತದಲ್ಲಿ ಬೆಳೆಗಳಿಗೆ ಒದಗಿಸುವುದು
3. ಬಿದ್ದ ಮಳೆ ನೀರನ್ನು ನನ್ನದೇ ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳುವುದು
4. ಗಿಡಮರಗಳಿಂದ ಕೂಡಿದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅಂದರೆ ನಮ್ಮ ವ್ಯವಸಾಯ ಭೂಮಿಯನ್ನು ಆಹಾರೋತ್ಪಾನೆಯ ಕಾಡನ್ನಾಗಿ ಪರಿವರ್ತಿಸುವುದು ( ಫ್ಹುಡ್ ಫ್ಹಾರೆಸ್ಟ್)

ಈ ನಾಲ್ಕು ಪ್ರಮುಖವಾದ ವಿಚಾರಗಳನ್ನು (ಗೋಲ್ಡನ್ ಸ್ಟೆಪ್ಸ್) ಜಾಚೂ ತಪ್ಪದೆ ಪಾಲಿಸಿದರೆ ಪ್ರಸ್ತುತ ಅನುಭವಿಸುತ್ತಿರುವ ಕೃಷಿ ಉಸಿರಾಡಬಹುದು ಎನ್ನುವುದು ನಿಧಾನವಾಗಿ ಅರಿವಾಗತೊಡಗಿತು.

ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಎಂದ ತಕ್ಷಣ ನಮಗೆ ಹತ್ತಾರು ಪದ್ಧತಿಗಳು, ಹತ್ತಾರು ವಿಧಾನಗಳನ್ನು ತಿಳಿಸಿಕೊಡುವವರಿದ್ದಾರೆ. ಇಲ್ಲಿ ಒಂದು ಸಾಮಾನ್ಯವಾದ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಅವಶ್ಯಕತೆಯಿದೆ. ಇಲ್ಲವಾದಲ್ಲಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯು ಸಹ ನಷ್ಟದ ಹಾದಿಯಲ್ಲಿ ನಡೆಯಬಹುದು.

ಭೂಮಿಯ ಮೇಲೆ ಸಸ್ಯವೈವಿಧ್ಯತೆಯನ್ನು ಕಾಪಾಡಿದರೆ ಭೂಮಿಯ ಆಳದಲ್ಲಿ ಜೀವವ್ಯೆವಿಧ್ಯತೆ ಹೆಚ್ಚಾಗುತ್ತದೆ. ಭೂಮಿಯಲ್ಲಿ ಸೂಕ್ಷ್ಮ ವಾತಾವರಣ ಸೃಷ್ಟಿಯಾದರೆ ಜೀವಾಣುಗಳು ನಮ್ಮದೆ ಭೂಮಿಯಲ್ಲಿ ನೆಲೆಸಲು ಸಹಕಾರಿಯಾಗುತ್ತದೆ. ರಾಸಾಯನಿಕಗಳನ್ನು ಬಳಸದೆ, ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ, ಬೆಳೆಗಳ ಆವೃತ್ತಿಯನ್ನು ಕಾಪಾಡಿಕೊಂಡು, ಹೆಚ್ಚಿನ ಆಳಕ್ಕೆ ಉಳುಮೆ ಮಾಡದೆ, ತ್ಯಾಜ್ಯಗಳನ್ನು ಸುಡದೆ ಭೂಮಿಯಲ್ಲಿ ಸಹಜವಾಗಿ ಕಳೆಯುವಂತೆ ಮಾಡಿದರೆ ಹ್ಯೂಮಸ್ ಉತ್ಪತ್ತಿಯಾಗುತ್ತದೆ. ಒಂದೆರಡು ವರುಷಗಳಲ್ಲಿ ಸಾವಯವ ಇಂಗಾಲ ವೃದ್ಧಿಯಾಗುತ್ತದೆ. ಇವೆರಡನ್ನು ಭೂಮಿಯ ಫಲವತ್ತತೆಯನ್ನು ಅಳೆಯುವ ಮಾಪನವೆನ್ನಬಹುದು.
ಮಣ್ಣಿನಲ್ಲಿ ಹ್ಯೂಮಸ್ ಮತ್ತು ಸಾವಯವ ಇಂಗಾಲವನ್ನು ಹೆಚ್ಚಿಸುವುದರಿಂದಾಗುವ ಲಾಭಗಳು:

* ಮಣ್ಣಿನಲ್ಲಿ ಗಾಳಿ ಮತ್ತು ಬೆಳಕನ್ನು ಸರಾಗವಾಗಿ ಹರಿದಾಡಲು ಅನುವು ಮಾಡಿಕೊಡುತ್ತದೆ
* ಪೋಷಕಾಂಶಗಳನ್ನು ಹಿಡಿದಿಡುವ ಶಕ್ತಿಯನ್ನು ಹೊಂದುತ್ತದೆ
* ತೇವಾಂಶವನ್ನು ಹಿಡಿದಿಡುವ ಶಕ್ತಿಯನ್ನು ಹೊಂದುತ್ತದೆ
* ಎರೆಹುಳುಗಳು ಮತ್ತು ಜೀವಾಣುಗಳ ಸಂತತಿಯನ್ನು ವೃದ್ಧಿಸುತ್ತದೆ
* ನೀರಿನ ಆವಿಯಾಗುವಿಕೆಯನ್ನು ತಡೆಯುತ್ತದೆ
* ಮಣ್ಣಿನ ಆವಿಯಾಗುವಿಕೆಯನ್ನು ತಡೆಯುತ್ತದೆ
* ಪಿಎಚ್ ಪ್ರಮಾಣವನ್ನು ಸರಿ ಪ್ರಮಾಣದಲ್ಲಿಡಲು ಸಹಕರಿಸುತ್ತದೆ
* ಮಣ್ಣಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹ್ಯೂಮಸ್ ಮತ್ತು ಸಾವಯವ ಇಂಗಾಲ ನಮ್ಮ ಭೂಮಿಯಲ್ಲಿ ಉತ್ಪತ್ತಿಯಾಗಲು 3 ರಿಂದ 4 ವರ್ಷಗಳ ಕಾಲಾವಕಾಶ ಬೇಕು. ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಮೂರ್ನಾಲ್ಕು ವರ್ಷಗಳ ಕಾಲ ಒಂದೇ ತತ್ವವನ್ನು ಪಾಲಿಸಿದರೆ ಮಾತ್ರ ಫಲ ಪಡೆಯಬಹುದು. ಇದನ್ನರಿತು ನಮ್ಮ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

ಸಾವಯವ ಇಂಗಾಲ: 40ರಿಂದ 50 ವರ್ಷಗಳ ಕೆಳಗೆ ಸಾವಯವ ಇಂಗಾಲ ಶೇ.8ಕ್ಕಿಂತ ಹೆಚ್ಚಿತ್ತೆಂದು ಓದಿದ್ದೇನೆ. ಆದರೆ ಪ್ರಸ್ತುತ ಸಾವಯವ ಇಂಗಾಲ ಶೇ.0.03ರಿಂದ 0.05ರಷ್ಟಿದೆ. ಹಾಗಾಗಿ ಭೂಮಿ ತನ್ನ ಸತ್ವವನ್ನು ಕಳೆದುಕೊಂಡಿದೆ; ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿಲ್ಲ; ಭೂಮಿಯಲ್ಲಿ ಸೂಕ್ಷ್ಮವಾತಾವರಣವಿಲ್ಲದೆ ಜೀವಾಣುಗಳು ಸಾಯುತ್ತಿವೆಯಾದ್ದರಿಂದ ಕೃಷಿಯೂ ಸಾಯುತ್ತಿದೆ; ಇನ್ನೊಂದು ಕಡೆ ರೈತರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಯವ ಇಂಗಾಲವನ್ನು ವೃದ್ಧಿಸಲು ಪೂರಕವಾದ ಕೃಷಿ ಪದ್ಧತಿ ಮಾತ್ರ ಕೃಷಿಯನ್ನು ಕಾಪಾಡಬಲ್ಲದು.

ಬೆಳಕು (Sunlight Harvest): ಪ್ರೊ.ಶ್ರೀಪಾದ್ ಎ ದಾಭೋಲ್ಕರ್‍ರವರು ಬೆಳಕಿನ ಮಹತ್ವವನ್ನು ಈ ರೀತಿ ವಿವರಿಸುತ್ತಾರೆ – ಒಂದು ಚದುರಡಿ ಹಸಿರೆಲೆ, ದಿನದ 10 ಗಂಟೆಯಲ್ಲಿ ಎಷ್ಟು ಸರಿ ಅನುಪಾತದ ಬೆಳಕನ್ನು ಸ್ವೀಕರಿಸುತ್ತದೆಯೋ ಆಗ ಆ ಗಿಡ, ನಮಗೆ ಒಂದು ಹೊತ್ತಿನ ಊಟಕ್ಕೆ ಸಮನಾದ ಆಹಾರವನ್ನು ತಯಾರಿಸುತ್ತದೆ ಎಂದು. ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ ಸೂರ್ಯನ ಬೆಳಕು ಮಹತ್ವದ ಪಾತ್ರ ವಹಿಸುತ್ತದೆ. ಗಿಡಮರಗಳಿಗೆ ಎಲೆಗಳೇ ಅಡುಗೆ ಮನೆ. ಬೇರುಗಳು ಭೂಮಿಯಲ್ಲಿ ದೊರೆಯುವ ಪೋಷಕಾಂಶಗಳನ್ನು ಎಲೆಗಳಿಗೆ ಪೂರೈಸುತ್ತವೆ, ಎಲೆಗಳು ವಾತಾವರಣದಲ್ಲಿ ದೊರೆಯುವ ಪೋಷಕಾಂಶಗಳನ್ನು ಹೀರಿಕೊಂಡು ಸಂಗ್ರಹಿಸಿಕೊಳ್ಳುತ್ತವೆ. ಸೂರ್ಯನ ಬೆಳಕು ಎಲೆಗಳ ಮೇಲೆ ಸರಿ ಅನುಪಾತದಲ್ಲಿ ತಾಗಿದಾಗ ಮಾತ್ರ ಈ ಎಲ್ಲಾ ಪೋಷಕಾಂಶಗಳು ಸಕ್ಕರೆ ಅಂಶವಾಗಿ (ಗ್ಲೂಕೋಸ್) ಪರಿವರ್ತನೆಗೊಳ್ಳುತ್ತದೆ. ಈ ಸಕ್ಕರೆ (ಗ್ಲೂಕೋಸ್) ಸಸ್ಯಗಳಿಗೆ ಆಹಾರ. ನೇರವಾದ ಪೋಷಕಾಂಶಗಳಲ್ಲ. ಆದರೆ ಇಂದು ಬೇರೆ ಬೇರೆ ಕಾರಣಗಳಿಂದ ಸೂರ್ಯನ ಕಿರಣಗಳ ತೀವ್ರತೆ (Light Intensity) ಹೆಚ್ಚಾಗುತ್ತಿದೆ. ಓಜೋನ್ ಪದರ ಹಾಳಾಗಿರುವುದು, ವಾತಾವರಣದಲ್ಲಿ ಏರೊಸಾಲ್ಸ್ (ನೀರ ಗುಳ್ಳೆಗಳು) ಗಳಿಲ್ಲದೆಯಿರುವುದು, ಹೀಗೆ ಹತ್ತಾರು ಕಾರಣಗಳಿಂದ ಬೆಳಕಿನ ತೀವ್ರತೆ ಹೆಚ್ಚಾಗಿರುವುದರಿಂದ ಗಿಡಮರಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ.

ಮಳೆ ನೀರು ಕೊಯ್ಲು (Rainwater Harvest): ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಹತ್ತು ಹಲವು ಪದ್ಧತಿಗಳನ್ನು ಅನುಸರಿಸುತ್ತಿದ್ದೇವೆ. ಇಲ್ಲಿ ನಾವು ನೀರನ್ನು ಭೂಮಿಗೆ ಇಂಗಿಸುವ ಉತ್ಸಾಹದಲ್ಲಿ ಪಕ್ಕದ ಹೊಲದಿಂದ ಬಂದ, ರಸ್ತೆಯ ಪಕ್ಕದಲ್ಲಿ ಹರಿಯುವ ನೀರನ್ನು ಭೂಮಿಗೆ ಹಿಂಗಿಸುತ್ತಿದ್ದೇವೆ. ಈ ನೀರು ಸಾಮಾನ್ಯವಾಗಿ ರಾಸಾಯನಿಕಗಳಿಂದ ಕೂಡಿದ್ದು ಇದನ್ನು ನಾವು ಬೋರ್ವೆಲ್ ರಿಚಾರ್ಜ್ ಗುಂಡಿಗಾಗಲಿ, ಕೆರೆಕಟ್ಟೆಗಳಿಗಾಗಲಿ, ಕೃಷಿ ಹೊಂಡಗಳಿಗಾಗಲಿ ತುಂಬಿಸಿದಾಗ ವಿಷಭರಿತ ನೀರು ನಮ್ಮ ಭೂಮಿಗೆ ಸೇರುತ್ತದೆ. ಮುಂದಿನ ದಿನಗಳಲ್ಲಿ ವಿಷಭರಿತವಾದ ನೀರನ್ನು ನಾವು ಕುಡಿಯಬೇಕಾದ ಪರಿಸ್ಥಿತಿ ಎದುರಾಗಬಹುದು. ಈ ಕಾರಣದಿಂದ ನಮ್ಮ ಭೂಮಿಯಲ್ಲಿ ಬಿದ್ದ ಮಳೆ ನೀರನ್ನೆ ನಾವು ಅಂತರ್ಜಲಮಟ್ಟವನ್ನು ಹೆಚ್ಚಿಸಲು ಬಳಸಬೇಕು. ಇದು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗೆ ಪೂರಕವಾಗಿದೆ.
(…….ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು)

ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ? : ಭಾಗ 2

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...